ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ರಾತ್ರಿಯಲ್ಲ, ಪ್ರತಿ ಹಗಲು ರಾತ್ರಿ…

‘ನೊಂದ  ಮಹಿಳೆಯರ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಆ ಜಗತ್ತಿಗೆ ‘ಅವಧಿ’ ಏಕೆ ಸ್ಪಂದಿಸಬಾರದು? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟವರು ಜಯಲಕ್ಷ್ಮಿ ಪಾಟೀಲ್. ರಂಗ, ಕಿರುತೆರೆ ಹಾಗೂ ಸಿನೆಮಾದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಇವರು ಈ ಪ್ರಶ್ನೆ ಎತ್ತಿದಾಗ ‘ಅವಧಿ’ ಹಿಂದೆ ಮುಂದೆ ನೋಡಲಿಲ್ಲ. ‘ಅವಧಿ’ಯ ಒಲವು ನಿಲುವನ್ನು ಈಗಾಗಲೇ ಓದುಗರಾದ ನೀವು ಗುರುತಿಸಿದ್ದೀರಿ . ಹಾಗಾಗಿ ವಿಶೇಷ ಸಂಚಿಕೆಯನ್ನು ರೂಪಿಸಲು ನಿರ್ಧರಿಸಿ ಜಯಲಕ್ಷ್ಮಿ ಪಾಟೀಲ್ ಅವರನ್ನೇ ಸಂಪಾದಕತ್ವ ವಹಿಸಿಕೊಳ್ಳುವಂತೆ ಆಹ್ವಾನಿಸಿತು.

ನಂತರ ಎಲ್ಲಾ ಕೆಲಸಗಳು ಜಯಲಕ್ಷ್ಮಿ ಪಾಟೀಲ್ ಹಾಗೂ ‘ಅವಧಿ’ಯ ಸಂಯೋಜಕಿಯಾದ ಎನ್ ಸಂಧ್ಯಾರಾಣಿ ಅವರ ಹೆಗಲೇರಿತು. ಇದ್ದದ್ದು ಎರಡು ದಿನ ಮಾತ್ರ. ಆದರೆ ಬರಹಗಳನ್ನು ನೀಡುವಂತೆ ಹೊರಡಿಸಿದ ಪ್ರಕಟಣೆಗೆ ಬಂದ ಸ್ಪಂದನ ನಮ್ಮನ್ನು ಅಲುಗಾಡಿಸಿದೆ. ‘ಅಲುಗಾಡಿಸಿದೆ’ ಯಾಕೆಂದರೆ ಅದು ಸಂಭ್ರಮದ ಕಥೆ ಹೇಳುತ್ತಿಲ್ಲ, ಬದಲಿಗೆ ಈ ಲೋಕ ಬಚ್ಚಿ ಟ್ಟುಕೊಂಡಿರುವ ಕರಾಳತೆಯತ್ತ ಬೊಟ್ಟು ಮಾಡುತ್ತಿವೆ. ಪ್ರತಿಯೊಬ್ಬರೊಳಗೂ ಒಂದು ನಿಟ್ಟುಸಿರು. ಪ್ರತಿಯೊಬ್ಬರೊಳಗೂ ಒಂದು ಆಕ್ರೋಶ..

ಅಮೀರ್ ಖಾನ್ ‘ಸತ್ಯಮೇವ ಜಯತೆ’ಯಲ್ಲಿ ಹೇಳಿದ್ದು ಸತ್ಯ- ನಮ್ಮ ಮನೆಯೊಳಗೇ, ನಮ್ಮ ಬಗಲಲ್ಲಿ, ನಮ್ಮ ನೆರೆಯಲ್ಲಿ, ನಮ್ಮ ಬಂಧುವಿನಲ್ಲಿಯೇ ಒಬ್ಬ ಅತ್ಯಾಚಾರಿಯಿದ್ದಾನೆ ಎನ್ನುವುದನ್ನು ಈ ಎಲ್ಲಾ ಬರಹಗಳೂ ಬಯಲು ಮಾಡುತ್ತಾ ಹೋದವು.

ನಾವು ಕೈಗೆತ್ತಿಕೊಂಡಿದ್ದ ಕೆಲಸದ ಪ್ರಾಮುಖ್ಯತೆ ಇನ್ನಷ್ಟು ಮನದಟ್ಟಾಯಿತು. ಅನೇಕರು ಹೆಸರು ಬಹಿರಂಗಗೊಳಿಸದೆ ನಮ್ಮೊಡನೆ ಮಾತನಾಡಿದರು, ಅನಾಮಿಕರಾಗಿರಲು ಬಯಸಿ ಬರಹವನ್ನು ಕಳಿಸಿದರು. ಬರಹ ಅಲ್ಲದಿದ್ದರೂ ನಾವು ನಡೆಸುತ್ತಿರುವ ಅಭಿಯಾನಕ್ಕೆ ಬೆಂಬಲ ಸೂಚ್ಸಿಸಿ ತಮಗಾದ ಸಂಕಟಗಳನ್ನು ಹೇಳಿಕೊಂಡರು. ಅತ್ತು ಹಗುರಾದರು ಅನ್ನುತ್ತಾರಲ್ಲಾ ಹಾಗಲ್ಲ ಇವರು ಒಂದು ರೀತಿ ಅತ್ತು ಇನ್ನಷ್ಟು ಗಟ್ಟಿಯಾದರು. ಇದು ನನಗೊಬ್ಬಳಿಗೆ ಆದ ಅನುಭವವಲ್ಲ, ಇದು ನನ್ನೊಬ್ಬಳ ಕಥೆಯಲ್ಲ ಎಂದು ಅರಿವಾದದ್ದೆ ಈ ವಿಶೇಷ ಸಂಚಿಕೆಯ ಕೊಡುಗೆ.

ವಿಶೇಷ ಸಂಚಿಕೆ ಪ್ರಕಟವಾಗಿ ಮುಗಿದರೂ ಬರಹಗಳು ತಡೆ ಇಲ್ಲದಂತೆ ಬರುತ್ತಿದೆ. ಹಾಗಾಗಿ ಇಂದೂ ಸಹಾ ಮೂರು ಬರಹಗಳನ್ನು ಪ್ರಕಟಿಸಲಾಗಿದೆ. ಈ ನಿಟ್ಟುಸಿರಿಗೆ ದನಿಯಾಗಲು ಇನ್ನು ಮುಂದೆ ಪ್ರತೀ ದಿನ ಒಂದು ಬರಹವನ್ನು ಪ್ರಕಟಿಸುವ ಮೂಲಕ ಎಲ್ಲಾ ಬರಹಕ್ಕೂ ಅವಕಾಶ ಕೊಡಲು ನಿರ್ಧರಿಸಿದ್ದೇವೆ.

ದಶಕಗಳ ಕಾಲ ತಮ್ಮೊಳಗೆ ಲೈಂಗಿಕ ಆಕ್ರಮಣದ ನೋವುಗಳನ್ನು ಹೊತ್ತು ಸಾಗುತ್ತಿದ್ದವರು ಈಗ ಅದಕ್ಕೆ ಹೊಸ ರೀತಿಯ್ತಲ್ಲಿ ಪ್ರತಿಕ್ರಿಯಿಸಲು ಈ ಸಂಚಿಕೆ ಕಾರಣವಾಯಿತು. ಅವರು ಯಾವಾಗ ಇದು ನನ್ನೊಬ್ಬಳ ಕಥೆಯಲ್ಲ ಎಂದು ಗೊತ್ತಾಯಿತೊ ಈಗ ಪರಸ್ಪರ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಈ ಮಾತುಗಳು ಮುಂದೆ ಮನುಷ್ಯನ ಮೃಗತ್ವಕ್ಕೆ ಸೆಡ್ಡು ಹೊಡೆಯುವ ಗಟ್ಟಿ ದನಿಯಾಗಿ ಬದಲಾಗುತ್ತದೆ ಎನ್ನುವುದು ಗೊತ್ತು

ಒಂದು ನಿಟ್ಟುಸಿರು ಹೋರಾಟವಾಗಿ ಹೇಗೆ ಹೊಮ್ಮುತ್ತದೆ ಎಂದು ಗೊತ್ತಿಲ್ಲದವರಷ್ಟೇ ಇದರಿಂದೇನು  ಪ್ರಯೋಜನ? ಎಂದು ಸಿನಿಕರಾಗಬಲ್ಲರು. ಆದರೆ ಹೋರಾಟದ ಸಾಗರಕ್ಕೆ ಹೇಗೆಲ್ಲ, ಎಲ್ಲಿಂದೆಲ್ಲಾ, ಯಾವ ರೀತಿಯಲ್ಲೆಲ್ಲಾ ಸಾವಿರಾರು ನದಿಗಳು ಕೂಡಿಕೊಳ್ಳುತ್ತವೆ ಎಂದು ಕಂಡ ನಮಗೆ ಇದು ನಾಳಿನ ಸಾಗರಕ್ಕೆ ಸೇರಿಕೊಳ್ಳಲು ನಾವು ಹರಿಸಿದ ನದಿ ಎಂದು ನಂಬಿದ್ದೇವೆ.

ಈ ಸಂಚಿಕೆಯ ಬಗ್ಗೆ ಬಂದ ಪ್ರತಿಕ್ರಿಯೆ, ಆದ ಚರ್ಚೆ ಈ ಎಲ್ಲವೂ ನಾವು ಸಾಗಬೇಕಾದ ಹಾದಿಗೆ ಬೆರಳು ಮಾಡಿ ತೋರಿಸಿದೆ. ಕೆ ವಿ ತಿರುಮಲೇಶ್ ರಿಂದ ಆರಂಭಿಸಿ ಸಿಂಧು ಅವರವರೆಗೆ ಬಂದ ಪ್ರತಿಕ್ರಿಯೆ ನಮ್ಮನ್ನು ಮೂಕವಾಗಿಸಿದೆ.  ‘ಒಂದು ಕಪ್ಪು ಬೊಟ್ಟನ್ನು ನಿಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಪ್ರದರ್ಶಿಸಿ ಎಂದು ಸ್ಮಿತಾ ಕಾಯ್ಕಿಣಿ ಕೋರಿದ್ದರು. ಅದನ್ನು ನಾವು ‘ಅವಧಿ’ಯಲ್ಲಿ ಪ್ರಚಾರ ಮಾಡಿದೆವು. ಈಗ ಫೇಸ್ ಬುಕ್ ಪುಟಕ್ಕೆ ಹೋಗಿ ನೋಡಿ. ಎಷ್ಟು ಜನ ತಮ್ಮ ಪ್ರೊಫೈಲ್ ಗಳ ಚಿತ್ರವನ್ನು ಬದಲಾಯಿಸಿದ್ದಾರೆ. ಫೇಸ್ ಬುಕ್ ನಿನ್ನೆಯಿಂದ ಕಪ್ಪು ಬಣ್ಣ ಹೊದ್ದು ಕೂತಿದೆ.

ಮಧುಶ್ರೀ ದತ್ತಾ ಅವರ ‘Memories of fear’ ಎನ್ನುವ ಸಾಕ್ಷ್ಯ ಚಿತ್ರವನ್ನು ಮುಂಬೈನ ಸಾಕ್ಷ್ಯಚಿತ್ರ ಉತ್ಸವದಲ್ಲಿ ನೋಡಿದ್ದೆ. ಅದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಮನದಲ್ಲಿ ಮೂಡುವ ಭಯದ ಚಿತ್ರಣ. ಎಲ್ಲಿಂದ ಎಲ್ಲಿಯವರೆಗೆ ನೋಡಿದರೂ ಈ ಅತ್ಯಾಚಾರದ ಕರಾಳ ಹೆಜ್ಜೆಗಳು. ಇದಕ್ಕೆ ಕೊನೆ ಹಾಕಲು ಸಾಧ್ಯವಿಲ್ಲವೇ?.

‘ಈ ರಾತ್ರಿ ಎಚ್ಚರಾಗಿರೋಣ..’ ಎನ್ನುವ ನಾಟಕ ನೆನಪಾಗುತ್ತಿದೆ. ಕೋಮುವಾದಕ್ಕೆ ತಡೆ ಹಾಕುವ ಬಗೆಗಿನ ನಾಟಕ ಅದು. ಪ್ರತೀ ಹೆಂಗಸೂ ನ್ನಿರ್ಧಾರ ಮಾಡುತ್ತಾಳೆ – ಈ ರಾತ್ರಿ ಎಚ್ಚರಾಗಿರೋಣ, ನನ್ನ ಗಂಡನನ್ನ, ನನ್ನ ಸಹೋದರನನ್ನ, ನನ್ನ ಬಂಧುವನ್ನ ಹೊರಗೆ ಹೋಗಲು ಬಿಡದಂತೆ ಈ ರಾತ್ರಿ ಎಚ್ಚರಾಗಿರೋಣ ಎಂದು. ಮನೆಗೆ ಬೆಂಕಿ ಹಚ್ಚುವ, ಪೆಟ್ರೋಲ್ ಸೀಮೆ ಎಣ್ಣೆ ಸುರಿಯುವ, ಇರಿದು ಕೊಲ್ಲುವ, ಲೂಟಿ ಮಾಡುವ ನನ್ನ ಗಂಡ, ನನ್ನ ಸಹೋದರ, ನನ್ನ ಬಂಧು ಈ ರಾತ್ರಿ ಆಚೆ ಹೋಗದಂತೆ ಎಚ್ಚರಾಗಿರೋಣ. ಹಾಗಾದಲ್ಲಿ ಕೋಮು ಗಲಭೆಗಳು ನಡೆಯುವುದಾದರೂ ಹೇಗೆ ಎನ್ನುವುದು ಈ ಎಲ್ಲರ ಆಲೋಚನೆ.

ಹೌದಲ್ಲ, ಅತ್ಯಾಚಾರದ ಮಾತು ಬಂದಾಗಲೂ ಇದು ಸರಿ. ಈ ರಾತ್ರಿ ಮಾತ್ರವಲ್ಲ, ಈ ಹಗಲು, ಈ ರಾತ್ರಿ- ಈ ಹಗಲು ಮಾತ್ರವಲ್ಲ, ಪ್ರತಿ ಹಗಲು ರಾತ್ರಿ ನನ್ನ ಗಂಡ, ನನ್ನ ಸಹೋಧರ, ನನ್ನ ಬಂಧು ಪುರುಷ ಮೃಗವಾಗಿ ಬದಲಾಗದಿರುವಂತೆ ಎಚ್ಚರಾಗಿರೋಣ.

ಹೀಗೆಲ್ಲ ಆಗುವಾಗಲೇ ದೆಹಲಿಯಲ್ಲಿ ಆ ಪ್ರತಿಭಟನಾಕಾರರು ಹಿಡಿದಿದ್ದ ಆ ಫಲಕ ನೆನಪಿಗೆ ಬರುತ್ತಿದೆ. ‘Dont teach me what to wear, Teach ur son not to rape’  ಈ ರಾತ್ರಿ, ಈ ಹಗಲು, ಪ್ರತಿ ರಾತ್ರಿ, ಪ್ರತಿ ಹಗಲೂ Dont Rape ಎನ್ನುವುದನ್ನು ಕಲಿಸುತ್ತಲೇ ಇರೋಣ..

ಮುಂದೊಂದು ದಿನ..

ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.

 

-ಜಿ ಎನ್  ಮೋಹನ್

ಪ್ರಧಾನ ಸಂಪಾದಕ

ಅವಧಿ

‍ಲೇಖಕರು G

25 December, 2012

13 Comments

  1. bharathi

    ಒಂದು ನಿಟ್ಟುಸಿರು ಹೋರಾಟವಾಗಿ ಹೇಗೆ ಹೊಮ್ಮುತ್ತದೆ ಎಂದು ಗೊತ್ತಿಲ್ಲದವರಷ್ಟೇ ಇದರಿಂದೇನು ಪ್ರಯೋಜನ? ಎಂದು ಸಿನಿಕರಾಗಬಲ್ಲರು … ಮತ್ತು ಮುಂದೊಂದು ದಿನ..ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ….ಹೇಳಬೇಕಾದ್ದನ್ನೆಲ್ಲಾ ಈ ಎರಡು ಸಾಲುಗಳು ಹೇಳಿವೆ.. ನಿಮ್ಮ ಪ್ರಯತ್ನಕ್ಕೆ ಮೆಚ್ಚುಗೆ ತೋರಿಸೋದು ಬಿಟ್ಟು ಮತ್ತೇನೂ ಮಾಡೋದು ಸಾಧ್ಯವಿಲ್ಲ

  2. mmshaik

    mrugatanavannu katti haakona…!!! abhinandanegLu

  3. ಈಶ್ವರ ಕಿರಣ

    ಒಳ್ಳೆಯ ಸ್ಪಂದನೆಗೆ ಅವಧಿಗೆ ಧನ್ಯವಾದ.

  4. Shama Nandibetta

    “ಆದರೆ ಹೋರಾಟದ ಸಾಗರಕ್ಕೆ ಹೇಗೆಲ್ಲ, ಎಲ್ಲಿಂದೆಲ್ಲಾ, ಯಾವ ರೀತಿಯಲ್ಲೆಲ್ಲಾ ಸಾವಿರಾರು ನದಿಗಳು ಕೂಡಿಕೊಳ್ಳುತ್ತವೆ ಎಂದು ಕಂಡ ನಮಗೆ ಇದು ನಾಳಿನ ಸಾಗರಕ್ಕೆ ಸೇರಿಕೊಳ್ಳಲು ನಾವು ಹರಿಸಿದ ನದಿ ಎಂದು ನಂಬಿದ್ದೇವೆ. ಮುಂದೊಂದು ದಿನ..ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ….”

    ನಿಮ್ಮ ಸಂವೇದನೆಗೆ, ಭಾವ ತೀವ್ರತೆಗೆ, ಸ್ಪಂದನೆಗೆ ನಮ್ಮ ನೋವಿನಲ್ಲಿ ಮನುಕುಲದ ಒಂದು ದುಖಃತಪ್ತ ಅಧ್ಯಾಯದಲ್ಲಿ ಕರಾಳ ಪುಟಗಳನ್ನು ತೆರೆದಿಟ್ಟು ನಿಟ್ಟುಸಿರಿನ ಮೂಲಕ ಬರಹದ ಮೂಲಕ ಅಳುವಿನ ಮೂಲಕ ಹೊರ ಹಾಕಿಸಿ ನೊಂದ ಮನಗಳನ್ನು ಹಗುರಾಗಿಸಿದ ಅವಧಿ ಬಳಗಕ್ಕೆ ಮಣಿದು ನಮಿಸುವೆ.

  5. SrinidhiRao

    “ಮುಂದೊಂದು ದಿನ..

    ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.” – ಎರಡು ವಾಕ್ಯ ಏಳೇ ಶಬ್ದ … ಎಲ್ಲಹೇಳಿ ಮುಗಿಸಿದ್ರಿ

  6. ಬಸೂ

    ಎಲ್ಲೆಲ್ಲಿಯೊ ಇರುವ ಹನಿಗಳನು ಹೋರಾಟದ ಸಾಗರಕ್ಕೆ ಅವಧಿ ತಂದು ಸೇರಿಸತೊಡಗಿದೆ.. ಇದು ನಾವೆಲ್ಲರೂ ಮಾಡಲೇಬೇಕಾದ ಕೆಲಸ. ಜಾಗೃತಿಯ ಯಾನಕ್ಕೆ ಬಲ ತಂದವರ ಶ್ರಮವನ್ನು ಗೌರವಿಸುವೆ ಮತ್ತು ಈ ಯಾನದ ಕಾಲಾಳಾಗಿ ನಾನೂ ಇರುವೆ.

  7. Chinmay Mathapati

    ಕಡು ಕೆಟ್ಟ ಸಾಮಾಜಿಕ ಪಿಡುಗಿನಂತೆ ತಲೆ ಎತ್ತಿರುವ ಈ ಅಮಾನುಷ ದೌರ್ಜನ್ಯಕ್ಕೆ “ಅವಧಿ” ಮಂಗಳ ಹಾಡುವದಕ್ಕೆ ಅವಧಿಯನು ಘೋಷಿಸಿದೆ ಆದಷ್ಟು ತ್ವರಿತವಾಗಿ ಈ ಪಿಡುಗು ಇಲ್ಲವಾಗಲಿ….ಅವಧಿಗೆ ಅಭಿನಂದನೆಗಳು……………..

  8. jagadishkoppa

    ಪ್ರಿಯ ಮೋಹನ್ ನಾನು ಇಪ್ಪತ್ತೊಂದನೇ ವಯಸ್ಸಿಗೆ ಬರವಣಿಗೆ ಆರಂಭಿಸಿದೆ. ನನಗೀಗ ಐವತ್ತಾರು ವರ್ಷ. ಇಷ್ಟು ವರ್ಷಗಳ ನನ್ನ ಬರೆವಣೆಗೆಯಲ್ಲಿ ನಾನು ಮೂಕನಾದದ್ದು ಮತ್ತು ಮೌನಕ್ಕೆ ಶರಣಾದದ್ದು ಇದೇ ಮೊದಲು. ದೆಹಲಿಯ ಘಟನೆ ನಂತರ ನಿಮ್ಮ ಬಳಗ ರೂಪಿಸಿದ ಸಂಚಿಕೆ,ಅದಕ್ಕೆ ನಮ್ಮ ಕನ್ನಡ ಲೇಖಕಿಯರು ಸ್ಪಂದಿಸಿದ ರೀತಿ ಎಲ್ಲವನ್ನೂ ಗಮನಿಸುತಿದ್ದೇನೆ. ಭಾರವಾದ ಎದೆಯೊಳಗೆ ಅಕ್ಷರವಿರಲಿ, ಮಾತಿಗೂ ತಡಕಾಡಬೇಕಾದ ಸ್ಥಿತಿ ನನ್ನದು.
    ಜಗದೀಶ್ ಕೊಪ್ಪ, ಧಾರವಾಡ

  9. usha rai

    ಹೌದು, ಇದೊಂದು ಎಲ್ಲರ ಕಣ್ಣು ತೆರೆಸುವ ಪ್ರಯತ್ನ. ಎಲ್ಲಾ ನೋವುಗಳು ಕಣ್ಣೀರಾಗಿ ಹೊರ ಹರಿದಾಗ ಅದರೊಂದಿಗೆ ಒಂದು ಶಕ್ತಿಯೂ ಹೊರ ಹರಿಯಲಿ. ಈ ಶಕ್ತಿ ನಮ್ಮ ಹೆಣ್ಣುಮಕ್ಕಳ ಮನದಲ್ಲಿ ತುಂಬಲಿ, ಅವರು ಇಂತಹ ಸನ್ನಿವೇಶಗಳನ್ನು ಎದುರಿಸುವ ಆತ್ಮ ವಿಶ್ವಾಸ ಪಡೆಯಲಿ, ತಮ್ಮನ್ನು ತಾವೇ ರಕ್ಶಿಸಿಕೊಳ್ಳುವ ಎಲ್ಲಾ ಉಪಾಯಗಳನ್ನು, ಸರಕುಗಳನ್ನು ಅವರು ತಮ್ಮದಾಗಿಸಿಕೊಳ್ಳಲಿ ಎನ್ನುವ ಹಾರೈಕೆ ನನ್ನದು.

  10. Santhosh

    Hi Mohan,
    This is how people in every field can contribute for a cause.
    It is not really necessary to be a minister or police officer or a TV channel to be able to fight against such things.
    Today even AVADHI showed that, we too have responsibility about our society.

    Good work!!

  11. A Ballal

    Much thanks for a commendable endeavour!

  12. Prasad V Murthy

    ಅವಧಿಯ ಈ ದಿಟ್ಟ ಹೆಜ್ಜೆಗೆ ಧನ್ಯವಾದಗಳು. ಅಮಾನವೀಯತೆ ಮೆರೆಯುವ ಪೈಶಾಚಿಕ ಕಬಂದ ಬಾಹುಗಳಿಗೆ ನನ್ನದೂ ಧಿಕ್ಕಾರವಿರಲಿ.

  13. Kiran Shetty

    navu inthaha horatavannu yellaru vondagi Bharatada tumba nadesabeku.. 1857 ra swatantra sangramadante..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading