ರಂಗಶಂಕರದಲ್ಲಿ ಡಾ.ಶ್ರೀಪಾದ ಭಟ್ ನಾಟಕಗಳ ಉತ್ಸವ :

ಶಶಿಕಾಂತ ಯಡಹಳ್ಳಿ
ಆಧುನಿಕ ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್.
ಕಳೆದ ಎರಡೂವರೆ ದಶಕಗಳಿಂದ ರಾಜ್ಯದ ಹಲವಾರು ಹವ್ಯಾಸಿ ರಂಗ ತಂಡಗಳ ಹೊಸ ಕಲಾವಿದರಿಗೆ ನಾಟಕದ ವ್ಯಾಕರಣಗಳನ್ನು ಕಲಿಸಿಕೊಡುತ್ತಲೇ ಅನನ್ಯ ನಾಟಕಗಳನ್ನು ನಿರ್ದೇಶಿಸುತ್ತಲೆ ಬಂದಿದ್ದಾರೆ.
ಅವರ ಒಂದೊಂದು ನಾಟಕವೂ ಒಂದೊಂದು ದೃಶ್ಯಕಾವ್ಯಗಳಾಗಿವೆ.
ಗ್ರಾಮೀಣ ರಂಗಭೂಮಿ ಹಾಗೂ ಮಕ್ಕಳ ರಂಗಭೂಮಿಗೆ ಶ್ರೀಪಾದ ಭಟ್ಟರವರು ಕೊಟ್ಟ ಕೊಡುಗೆ ಗಮನಾರ್ಹ. ಸಾಮಾಜಿಕ, ಐತಿಹಾಸಿಕ ಇಲ್ಲವೇ ಪೌರಾಣಿಕ ವಸ್ತು ವಿಷಯಗಳ ನಾಟಕಗಳಿಗೆ ಸಮಕಾಲೀನತೆಯನ್ನು ಬ್ಲೆಂಡ್ ಮಾಡಿ ಭೂತಕಾಲದ ಕನ್ನಡಿಯೊಳಗೆ ವರ್ತಮಾನ ಸಮಸ್ಯೆಗಳನ್ನು ತೋರುವಲ್ಲಿ ಶ್ರೀಪಾದರು ಸಿದ್ಧ ಹಸ್ತರು.
ರಂಗಭೂಮಿ ವಿಷಯದಲ್ಲೇ ಡಾಕ್ಟರೇಟ್ ಮಾಡಿದ ಡಾ.ಶ್ರೀಪಾದ ಭಟ್ಟರವರು ಶಿರಸಿಯಲ್ಲಿ ಕನ್ನಡ ಶಾಲೆಯ ಶಿಕ್ಷಕರಾಗಿ ವೃತ್ತಿನಿರತರಾದರೂ ಕನ್ನಡ ರಂಗಭೂಮಿಯಲ್ಲಿ ತಮ್ಮ ವೃತ್ತಿಪರತೆಯನ್ನು ಕಾಪಾಡಿಕೊಂಡೇ ಬಂದಿದ್ದಾರೆ. ಒಂದಾದ ಮೇಲೆ ಒಂದರಂತೆ ದೃಶ್ಯವೈಭವದ ನಾಟಕಗಳನ್ನು ಕಟ್ಟುತ್ತಲೇ ಇದ್ದಾರೆ. ಅವರ ರಂಗ ಸಿದ್ದತೆ ಹಾಗೂ ಬದ್ದತೆಗಳ ಕುರಿತು ಎರಡು ಮಾತಿಲ್ಲಾ.
ಪ್ರಸಿದ್ಧ ಅಂತರ್ಜಾಲ ಪತ್ರಿಕೆ “ಅವಧಿ”ಯ ಸಹಕಾರದಲ್ಲಿ ಡಾ.ಶ್ರೀಪಾದ ಭಟ್ರವರು ನಿರ್ದೇಶಿಸಿದ ಮೂರು ನಾಟಕಗಳ ನಾಟಕೋತ್ಸವವು ಜೂನ್ 15 ರಿಂದ 17 ರ ವರೆಗೆ ಬೆಂಗಳೂರಿನ ರಂಗಶಂಕರದಲ್ಲಿ ಆಯೋಜನೆಗೊಂಡಿದೆ.
ಉಡುಪಿಯ ರಥಬೀದಿ ಗೆಳೆಯರು ತಂಡದ ಕಲಾವಿದರಿಗೆ ಮೂರು ಮಾಂಟೋನ ಕಥೆಗಳನ್ನಾಧರಿಸಿದ “ಮಿಸ್ಟೇಕ್” ನಾಟಕವನ್ನು ಶ್ರೀಪಾದರು 9 ವರ್ಷಗಳ ಹಿಂದೆ ನಿರ್ದೇಶಿಸಿದ್ದರು. ಈಗ ಈ ನಾಟಕ ಮತ್ತೆ ಪ್ರದರ್ಶನಕ್ಕೆ ಸಿದ್ದವಾಗಿದ್ದು ಜೂನ್ 15 ರಂದು ಪ್ರದರ್ಶನಗೊಳ್ಳಲಿದೆ.
ಈ ನಾಟಕಕ್ಕೆ ಆಯ್ದುಕೊಂಡ ಕಥೆಗಳನ್ನು ಹಸನ್ ನಯೀಮ್ ಸುರಕೋಡ್ರವರು ಉರ್ದುವಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದು, ಆ ಅನುವಾದಿತ ಕಥೆಗಳನ್ನು ಶ್ರೀಪಾದ ಭಟ್ಟರು ರಂಗರೂಪಗೊಳಿ ನಿರ್ದೇಶಿಸಿದ್ದಾರೆ. ದೇಶವಿಭಜನೆಯ ಹಿಂಸೆ, ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆ ಹಾಗೂ ಕೋಮು ಸಂಘರ್ಷದಿಂದಾಗುವ ದುರಂತಗಳನ್ನು ಈ “ಮಿಸ್ಟೇಕ್” ನಾಟಕ ತೋರಿಸುತ್ತದೆ.
ಹಾಗೆಯೇ ಜೂನ್ 16 ರಂದು ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿರುವ ‘ಕೆಂಪು ಕಣಗಿಲೆ’ಯೂ ಸಹ ರವೀಂದ್ರನಾಥ ಟ್ಯಾಗೋರರವರು ರಚಿಸಿದ ನಾಟಕವಾಗಿದ್ದು ಸುಧಾ ಆಡುಕಳರವರು ರಂಗ ರೂಪ ಕೊಟ್ಟಿದ್ದಾರೆ. ಮೈಸೂರಿನ “ನಟನ” ತಂಡದ ಕಲಾವಿದರುಗಳಿಗೆ “ಕೆಂಪು ಕಣಗಿಲೆ”ಯನ್ನು ಡಾ.ಶ್ರೀಪಾದರು ನಿರ್ದೇಶಿಸಿದ್ದು ಮತ್ತೊಂದು ದೃಶ್ಯಕಾವ್ಯ ಮೂಡಿಬರಲಿದೆ.
ಉತ್ಕೃಷ್ಟ ಕಾವ್ಯಭಾಷೆಯನ್ನು ಹೊಂದಿರುವ ಸೈದ್ದಾಂತಿಕ ನಿಲುವಿನ ಈ ನಾಟಕದಲ್ಲಿ ಸಾಂಪ್ರದಾಯಿಕ ಕಥೆ ಹಂಗಿಲ್ಲದೇ ಇಡೀ ನಾಟಕವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ವರ್ಗಸಂಘರ್ಷ ಹಾಗೂ ದಮನಕಾರಿ ಮಾರುಕಟ್ಟೆ ನೀತಿಗಳನ್ನು ವಿಶ್ಲೇಷಿಸುವ “ಕೆಂಪು ಕಣಗಿಲೆ” ಆ ಕಾಲದಲ್ಲಿ ಟ್ಯಾಗೋರರ ಕ್ರಾಂತಿಕಾರಿ ನಿಲುವಿನ ನಾಟಕವಾಗಿತ್ತು. ಹಾಗೂ ಆ ನಾಟಕವನ್ನು ವರ್ತಮಾನಕ್ಕೆ ಅಳವಡಿಸಲಾಗಿದ್ದು ಶ್ರೀಪಾದ ಭಟ್ಟರವರ ನಿರ್ದೇಶನದಲ್ಲಿ ಆಕರ್ಷನೀಯವಾಗಿ ಮೂಡಿಬಂದಿದೆ.
ಜೂನ್ 17 ರಂದು ರವೀಂದ್ರನಾಥ ಟ್ಯಾಗೋರರ “ಚಿತ್ರಾ” ನಾಟಕವನ್ನು ಉಡುಪಿಯ ಕೊಡವೂರಿನ “ನೃತ್ಯನಿಕೇತನ” ನೃತ್ಯ ಶಾಲೆಯ ಕಲಾವಿದರಿಗೆ ಡಾ.ಶ್ರೀಪಾದರು ನಿರ್ದೇಶಿಸಿದ್ದು ಈ ನಾಟಕ ಈಗಾಗಲೇ ದೆಹಲಿಯಲ್ಲಿ 2017 ಜನವರಿಯಲ್ಲಿ ನಡೆದ “ಭಾರತ್ ರಂಗ ಮಹೋತ್ಸವ” ದಲ್ಲಿ ಪ್ರದರ್ಶನಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ದೆಹಲಿ ಬಾಂಬೆ ಸೇರಿದಂತೆ ಹಲವಾರು ಕಡೆ ಪ್ರದರ್ಶನಗೊಂಡ ಈ ನಾಟಕ ಜೂನ್ 18 ರಂದು ಮೈಸೂರು ರಂಗಾಯಣದಲ್ಲೂ ಪ್ರಯೋಗವಾಗಲಿದೆ. ಈ ನಾಟಕದ ವಿಶೇಷತೆ ಏನೆಂದರೆ ಭರತನಾಟ್ಯ ನೃತ್ಯಪ್ರಕಾರವನ್ನು ಬಳಸಿಕೊಂಡು ಇಡೀ ನಾಟಕ ರೂಪದಲ್ಲಿ ದೃಶ್ಯಕಾವ್ಯವನ್ನು ಕಟ್ಟಲಾಗಿದೆ. ಕೆಲವಾರು ನೃತ್ಯ ಶಾಲೆಯವರು ಈ ಚಿತ್ರಾ ನಾಟಕವನ್ನು ಕರೆಸಿ ಪ್ರದರ್ಶನಗೊಳಿಸಿ ಈ ನೃತ್ಯ ನಾಟಕದ ಮಾದರಿಯಲ್ಲಿ ನಾಟಕಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಮಹಿಳೆಯ ಅಸ್ಮಿತೆಯನ್ನು ತೋರುವ ಈ ನಾಟಕ ಸಂಗೀತ- ನೃತ್ಯ ಪ್ರಧಾನವಾಗಿದ್ದು ಪ್ರೇಕ್ಷಕರಿಗೆ ಅನನ್ಯ ಅನುಭೂತಿಯನ್ನು ಕೊಡುವಂತೆ ಮೂಡಿ ಬಂದಿದೆ.
ಬೆಂಗಳೂರಿನ ರಂಗಾಸಕ್ತರಿಗೆ ಡಾ.ಶ್ರೀಪಾದ ಭಟ್ಟರವರ ಮೂರು ದೃಶ್ಯಕಾವ್ಯಗಳನ್ನು ಸರಣಿಯಾಗಿ ನೋಡುವ ಅಪರೂಪದ ಅವಕಾಶ ಸಿಕ್ಕಿದೆ.
“ಅವಧಿ” ಆಯೋಜಿಸಿದ ಈ ಅಪರೂಪದ ನಾಟಕಗಳನ್ನು ಬೆಂಗಳೂರಿಗರು ನೋಡಿ ಡಾ.ಶ್ರೀಪಾದ ಭಟ್ಟರವರ ನಾಟಕ ಕಟ್ಟುವ ವಿಶೇಷ ಪ್ರತಿಭೆಗೆ ಸಾಕ್ಷಿಯಾಗಬೇಕಿದೆ. ನಾಟಕವೆಂದರೆ ಬರೀ ನಟನೆಯಲ್ಲ.. ಕೇವಲ ಕಥೆಯ ನಿರೂಪಣೆಯಲ್ಲ.. ಅದೊಂದು ದೃಶ್ಯಕಾವ್ಯ ಎನ್ನುವುದಕ್ಕೆ ಮಾದರಿಯಾಗಿರುವ ಈ ಮೂರೂ ನಾಟಕಗಳು ನೋಡುಗರನ್ನು ಬೆರಗುಗೊಳಿಸುವುದರಲ್ಲಿ ಸಂದೇಹವೇ ಇಲ್ಲ.





0 Comments