ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಮಕ್ಕಳಿಗೆ ಏನೆಲ್ಲಾ ಹೊಳೆಯುತ್ತದಲ್ಲಾ..

ನಾಗರಾಜ್ ಹರಪನಹಳ್ಳಿ

ಬೆಳಗ್ಗೆ ರಕ್ಷಿತ್‌ ಕ್ಯಾಮರಾ ‌ಹಿಡಿದು ಮನೆ ಬಾಗಿಲಲ್ಲಿ ಕುಳಿತಿದ್ದ.‌ ನಾವೇ ಮನೆಯ‌ ಮಹಡಿಗೆ ಕಟ್ಟಿದ್ದ ರಟ್ಟಿನ ಪೆಟ್ಟಿಗೆ ಗುಬ್ಬಚ್ಚಿಯ ಗೂಡಾಗಿತ್ತು. ಅರ್ಥಾತ್‌ ಗುಬ್ಬಚ್ಚಿ ದಂಪತಿಗಳ ಆಧುನಿಕ ಮನೆಯಾಗಿತ್ತು. ಮನೆಯ ಕಾಂಪೌಂಡಿನ ಮೇಲೆ ಇಡುವ ಬಟ್ಟಲ ನೀರು, ಚೆಲ್ಲುವ ಕಾಳು ಆಹಾರವಾಗಿದ್ದರೂ, ಸಣ್ಣ ಹುಳ ಹುಪ್ಪಟೆ, ಜೇಡಗಳನ್ನು ಬೇಟೆಯಾಡಿ ಅವು ತಿನ್ನುವುದನ್ನು ರಕ್ಷಿತ್ ಗಮನಿಸಿದ್ದ.‌ ನಿಧಾನ ಅವುಗಳ ಬದುಕಿನ ಚಿತ್ರಗಳ ಪೋಟೋ ಸೆರೆಹಿಡಿಯಲು ಪ್ರಾರಂಭಿಸಿದ. ಗುಬ್ಬಚ್ಚಿಯ ಜೀವನ ಕ್ರಮ‌ ಅವನ ಎದೆಗಿಳಿಯತೊಡಗಿತ್ತು.

ಗೂಡಿನ ಪಕ್ಕ ತೂಗು ಹಾಕಿದ ಎಸ್ ಆಕಾರದ  ಕಬ್ಬಿಣದ ಕಂಬಿ ಗುಬ್ಬಚ್ಚಿಗಳ ಜೋಕಾಲಿಯಾಗಿತ್ತು. ಆಗಾಗ ಅವು ಜಗಳ ಮಾಡಿಕೊಳ್ಳುವುದು, ರಮಿಸುವುದು ಕಾಣುತ್ತಿತ್ತು.‌ ತಲೆ ಮೇಲೆ, ಕುತ್ತಿಗೆ ಭಾಗದಲ್ಲಿ ಕಪ್ಪು ಬಣ್ಣ ಹೊಂದಿದ್ದ ಕೊಂಚ ಬಲಿಷ್ಠವಾಗಿದ್ದ ಗುಬ್ಬಚ್ಚಿ ಗಂಡೆಂದು, ಸ್ವಲ್ಪ ಸಣಕಲಾಗಿದ್ದ ತೆಳು  ಹಸಿರು, ಬೂದು ಬಣ್ಣದ ಗುಬ್ಬಚ್ಚಿ ಹೆಣ್ಣೆಂದು ಅವನು ಗುರುತಿಸಿದ್ದ. ಆಗಾಗ ಹೆಣ್ಣು ಗುಬ್ಬಚ್ಚಿಯ ಮೇಲೆ ಗಂಡು ಗುಬ್ಬಚ್ಚಿ ಕುಳಿತ ಶೃಂಗಾರ ಕಾವ್ಯವನ್ನು ಗಮನಿಸಿದ್ದ.‌


ಒಮ್ಮೆ ಹಠಾತ್ತಾಗಿ ನನ್ನೆಡೆಗೆ ತಿರುಗಿದವನೇ ‘ಅಪ್ಪ ಈ ಗುಬ್ಬಚ್ಚಿಗೆ ಬೇರೆ ಕೆಲಸವಿಲ್ಲ. ಪದೇ…ʼ ಎಂದು ಕಣ್ಣು ಮಿಟುಕಿಸಿ ನಸು ನಕ್ಕ. ಮುಖದಲ್ಲಿ  ಏನೂ ಭಾವನೆ ವ್ಯಕ್ತಪಡಿಸದೇ ನಾನು ʼಸುಮ್ನೆ ಪೋಟೋ ತೆಗೆಯೋʼ ಎಂದು ಮನೆಯೊಳಗೆ ಮರೆಯಾದೆ.

ಆವತ್ತು ಗುಬ್ಬಚ್ಚಿಗಳ ʼಚಿಂವ್ʼ ಜೋರಾಗಿತ್ತು. ಕಳೆದ ವರ್ಷದಿಂದ ಅವು ಸಂಸಾರ ಮಾಡಿಕೊಂಡಿದ್ದವು. ಆ ಗುಬ್ಬಚ್ಚಿ ದಂಪತಿಗಳಿಗೆ ಈಗ ಮೂರನೇ ಸಲ, ಮರಿ ಜನಿಸಿ ಮೂರು ದಿನ ಕಳೆದಿತ್ತು. ಆಗಾಗ ಆ ಮನೆಯ ಪುಟ್ಟ ಬಾಗಿಲಲ್ಲಿ ಸಣ್ಣ ಕೊಕ್ಕೊಂದು ಬಾಯಿ ತೆರೆದು ಉಲಿಯುತ್ತಿತ್ತು.‌ ತಾಯಿ ಗುಬ್ಬಚ್ಚಿ ಸಣ್ಣ ಕೀಟವೋ, ಅನ್ನದ ಅಗುಳೋ ತಂದು ಮರಿಯ ಬಾಯಲ್ಲಿಟ್ಟು ಮರೆಯಾಗುತ್ತಿತ್ತು. ಈ ಕ್ರಿಯೆ ಬೆಳಗಿನಿಂದ ಸಂಜೆತನಕ ನಡೆಯುತ್ತಿತ್ತು.‌ ಇದನ್ನು ಬೆಳಗು ಮತ್ತು ಸಂಜೆ ಶಾಲೆಯಿಂದ ಬಂದವನೇ ನೋಡುವುದು, ಕ್ಯಾಮರಾದಲ್ಲಿ ಸೆರೆಹಿಡಿಯಲು ಯತ್ನಿಸುವುದು ದಿನಚರಿಯಾಗಿ‌ ಹೋಯಿತು. ಸರಿಸುಮಾರು ಒಂದು ತಿಂಗಳೋ, ಒಂದೂವರೆ ತಿಂಗಳು ಆದ ಮೇಲೆ  ಗುಬ್ಬಚ್ಚಿ‌ ಮರಿ ಬೆಳೆದು ರೆಕ್ಕೆ ಬಂದ ಮೇಲೆ ‌ಎಲ್ಲಿ ಹೋಗುತ್ತಿದ್ದವು? ಯಾವ ಹೊಸ ತಾಣ ಹುಡುಕುತ್ತಿತ್ತು… ಗೊತ್ತಾಗುತ್ತಿರಲಿಲ್ಲ. ಆದರೆ ಖಾಯಂ ವಾಸಿ‌ ಗುಬ್ಬಚ್ಚಿ ದಂಪತಿಗಳಿಗೆ ಹೊಸ ಮರಿಗೆ ಜನ್ಮ ನೀಡುವ ಉತ್ಸಾಹ ‌ಎಂದಿನಂತಿರುತ್ತಿತ್ತು. ಮೂರನೇ ಸಲ‌ ಮರಿಗಳನ್ನು ಕಂಡ ರಟ್ಟಿನ ಗುಬ್ಬಚ್ಚಿ ಮನೆ‌ ಮಾತ್ರ ಸದಾ ʼಚಿಂವ್ʼ ಶಬ್ದದ ಮನೆಯಂತಿತ್ತು…

ಎದುರು ಮನೆಯ ಅಂಕಲ್ ಮಗ ಆದೇಶ ಎರಡು ವರ್ಷದ ಹಿಂದೆ ಕರುಳು ಸಂಬಂಧಿ ಕಾಯಿಲೆಯಿಂದ‌ ‌ತೀರಿಕೊಂಡಿದ್ದ. ಸಾವಿಗೆ ಕೊನೆಯ ಆರು ತಿಂಗಳ ಮೊದಲು, ಸದಾ ಮಕ್ಕಳೊಂದಿಗೆ ಕಾಲ ಕಳೆದು ಅವ ತೀರಿಕೊಂಡ. ಅವನ ಪ್ರೇಯಸಿ ಆಗಾಗ ಮನೆಗೆ ಬರುತ್ತಿದ್ದುದು ಅವನ ಮನೆಯಲ್ಲಿ ಗುಂಪು ಕಟ್ಟಿ ಆಡುತ್ತಿದ್ದ ಆ ಮಕ್ಕಳಿಗೂ ಗೊತ್ತಿತ್ತು. ಅವನಿಗೆ ಖಾಯಂ ನೌಕರಿಯಿಲ್ಲವೆಂದು, ಹುಡುಗಿ ತನ್ನ ಜಾತಿಯವಳಲ್ಲವೆಂದು ಆದೇಶನಿಗೆ ಮದುವೆಯಾಗಲು ಅವನಪ್ಪ ಅನುಮತಿ‌‌ ನೀಡಿರಲಿಲ್ಲ. ಮಗ ಪುಂಡ ಪೋಕರಿ ಎಂದು ಅಪ್ಪ‌ ಪೂರ್ವನಿರ್ಧಾರಕ್ಕೆ ಬಂದ ಕಾರಣ ಅಪ್ಪನ‌ ಬಗ್ಗೆ ಮಗನಿಗೂ, ಮಗನ ಬಗ್ಗೆ ಅಪ್ಪನಿಗೂ ಒಂದು ರೀತಿಯ ತಾತ್ಸರ ಬೆಳೆದು ಬಿಟ್ಟಿತ್ತು.‌ ಇದೇ ಕೊರಗಿನಲ್ಲಿ‌‌ ಕುಡಿಯುತ್ತಿದ್ದ ಅವನು ಕೊನೆಗೊಂದು ದಿನ ಲಿವರ್‌ಫೇಲ್ ‌ಆಗಿ ಸುತ್ತು ಹೋಗಿದ್ದ.‌

ಗುಬ್ಬಚ್ಚಿ ಮರಿಗೆ ಗುಟುಕು ಕೊಡುತ್ತಿದ್ದ ಕ್ಷಣವನ್ನು ರಕ್ಷಿತ್ ಪೋಟೋ  ಕ್ಲಿಕ್ಕಿಸಿದವನೇ ಬಂದು “ಪಪ್ಪಾ ಆದೇಶ್ ಅಣ್ಣ ಬದುಕಿದ್ದರೆ, ಇಷ್ಟೊತ್ತಿಗೆ ಮದುವೆಯಾಗಿ ಮಕ್ಕಳಾಗುತ್ತಿದ್ದವು ಎಂದ…”

ಈ ಮಕ್ಕಳಿಗೆ ಏನೆಲ್ಲಾ ಹೊಳೆಯುತ್ತದಲ್ಲಾ ಎಂದು ನಾನು ದಂಗಾದೆ!

‍ಲೇಖಕರು nalike

3 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading