ಎಂ ಎಸ್ ಕೃಷ್ಣಮೂರ್ತಿ ಗೀತಾ

ಎದುರಿಗೆ ಬಂದು ಕುಂತ ಭೂತ
ಬರಿ ನನ್ನ ಚರಿತ್ರೆ ಅಂತು
ಹೋಗೋಗು ಬೆಳಕರೆದರೆ ಯುಗಾದಿ
ಬೇವು ಬೆಲ್ಲ , ಹೊಸ ಬಟ್ಟೆಯ ಸಂಭ್ರಮದ ಆದಿ
ಇಷ್ಟಕ್ಕೂ
ಭೂತಕ್ಕೆಂತಾ ಚರಿತ್ರೆ
ಬರೆಯೋದ್ಯಾತಕ್ಕೆ ಓದೋದ್ಯಾತಕ್ಕೆ ಎಂದೆ
ಜಗಳವಾದನಂತರ ಆಯಿತಾಯಿತು ಹೇಳೆಂದೆ
ಕಚ್ಚಿ , ಕೊಚ್ಚಿದ್ದ ,ತೊಟ್ಟಿಲ್ಲದ, ನೆತ್ತರು ಮೊಲೆಗಳೆರಡನ್ನು ಮೇಜ ಮೇಲಿಟ್ಟು
ಯೋನಿಯಿಂದ ಕಬ್ಬಿಣದ ಸಲಾಕೆಯನ್ನೆಳೆದು
ಲೋಳೆ ಲೋಳೆ ಗರ್ಭಕೋಶದಾಲ್ಲಾಡುತ್ತಿರುವ ಪಿಂಡಾಂಡಗಳ ಹೊರಗೆಳೆದು
ಗುದದ್ವಾರದಲ್ಲಡಿಗಿದ್ದ ಮೊಳೆ ತೆಗೆದು ಎದುರಿಗಿಟ್ಟು
ಕುತ್ತಿಗೆಗೆ ಬಿಗಿದಿದ್ದ ಹಗ್ಗ ಬಿಚ್ಚಿಟ್ಟು
ಹೇಳಲಾರಂಬಿಸಿತು ಅತ್ಯಾಚಾರದ ಚರಿತ್ರೆಯ ಗುಟ್ಟು
ತಡೆದೆ
ಇದು ಚರಿತ್ರೆಯಲ್ಲ ಭೂತಾ.. ವರ್ತಮಾನ…ದಿನನಿತ್ಯದ್ದು
ವರ್ತಮಾನ ಪತ್ರಿಕೆ ಅದರ ಮುಂದೆ ಬಿಸಾಡಿದೆ
ಪ್ರತಿನಿತ್ಯದ ಪತ್ರಿಕೆಯಲ್ಲೂ ಅತ್ಯಾಚಾರದ್ದೇ ಸುದ್ದಿ
ಮುಕ್ತಿಯೇ ಇಲ್ಲವೆ ಎನಗೆ ಭೂತ ಬಿಕ್ಕಿತು
ಹರಿದಾಡುತ್ತಿರುವ ಪಿಂಡಾಂಡಗಳ ನೋಡುತ್ತ ಅಂದುಕೊಂಡೆ
ಈ ಭೂತಕ್ಕೆ ಭವಿಷ್ಯತ್ತೇ…..?






0 Comments