’ಈ ಬಿಂಬಗಳಿಗೊಂದು ರೂಪು ಕೊಡಿ’ – ರೂಪಾ ಹಾಸನ ಕೇಳ್ತಾರೆ

ನಮ್ಮ ನಡುವಿನ ಸಂವೇದನಾಶೀಲ ಕವಿಯಿತ್ರಿ ರೂಪ ಹಾಸನ ಅವರು ತಮ್ಮನ್ನು ಕಾಡಿದ ಕೆಲವು ಬಿಂಬಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇವು ಚಿತ್ರ ಬಿಂಬಗಳಲ್ಲ, ಪದ ಬಿಂಬಗಳು.

ಇದಕ್ಕೆ ಸಾಟಿಯಾಗುವ ಚಿತ್ರಬಿಂಬಗಳನ್ನು ಅವಧಿ ಓದುಗರು ಬರೆದು ಕಳುಹಿಸಲಿ ಎನ್ನುವ ನಿರೀಕ್ಷೆಯೊಡನೆ ಈ ಕಾಡುವ ಬಿಂಬಗಳು ನಿಮ್ಮ ಮಡಿಲಿಗೆ.

ಹಾಗೆಯೇ ನಿಮ್ಮನ್ನು ಅತ್ಯಂತ ಕಾಡಿದ ಬಿಂಬ ಯಾವುದು? ಬರೆದು ಅಥವಾ ಚಿತ್ರಿಸಿ ಕಳಿಸಿ.

ಕಾಡುವ ಬಿಂಬಗಳು

ರೂಪ ಹಾಸನ

ಎಂದೋ ನೋಡಿದ ಯಾವುದೋ ಚಿತ್ರ ಅಚ್ಚಳಿಯದೆ ಮನದಂಗಳದಲ್ಲಿ ನಿಂತು ಬಿಟ್ಟಿರುತ್ತದೆ.  ಕಾರಣವೇನೂ ಇಲ್ಲದೆಯೆ!

ಅಂಥಹ ಕೆಲ ಕಾಡುವ ಬಿಂಬಗಳಿವೆ ನೋಡಿ.

 

ಮಣ್ಣಿನಲ್ಲಿ ತನ್ಮಯತೆಯಿಂದ ಆಡುತ್ತಿದ್ದ ಮಗುವಿಗೆ ರಪರಪನೆ ಬಾರಿಸಿ, ಒಳಗೆತ್ತಿಕೊಂಡು ಹೋಗುತ್ತಿರುವ ಅಮ್ಮ. ತನ್ನ ತಪ್ಪೇನೆಂದು ಅರಿಯದೇ, ಅಮ್ಮನ ಕಠೋರತೆಗೆ ದಿಗ್ಬ್ರಾಂತಿಯಿಂದ ಉಸಿರುಕಟ್ಟಿ ಅಳುತ್ತಿರುವ ಮಗು.
**
ಪುರದಮ್ಮನ ಬಲಿಪೀಠದ ಮುಂದೆ ಸರತಿಯಲ್ಲಿ ನಿಂತಿರುವ ಕೋಳಿ, ಕುರಿ, ಹಂದಿಗಳ ಹೃದಯವಿದ್ರಾವಕ ಆಕ್ರಂದನ.
**
ಗೂಡಿನಿಂದ ಕೆಳಗೆ ಬಿದ್ದ ಚುಕ್ಕಿ ಮುನಿಯ ಮರಿಗೆ ಎದ್ದು ನಿಲ್ಲಲು, ಹಾರಲು ತರಬೇತಿ ಕೊಡುತ್ತಿರುವ ಚುಕ್ಕಿಮುನಿಯ ಜೋಡಿಗಳು.
**
ವಿದ್ಯುತ್ ಬೇಲಿಗೆ ಸಿಕ್ಕಿ ಸತ್ತ ತನ್ನ ಮರಿಯನ್ನು ಮುಟ್ಟಲು ಬರುವವರನ್ನು ಘೀಳಿಟ್ಟು ಹೆದರಿಸಿ ಓಡಿಸುತ್ತಿರುವ ಅಮ್ಮ ಆನೆ.
**
ಕಂಪ್ಯೂಟರ್ ಒಳಗೆ ಮುಳುಗಿ ಹೋಗಿರುವ ಅಪ್ಪನ ಬಳಿ ಯಾವತ್ತೂ ಮಗುವಿನ ಒಂದೇ ಪ್ರಶ್ನೆ ‘ಅಪ್ಪ ನಿನ್ನ ಕೆಲಸ ಯಾವಾಗ ಮುಗಿಯುತ್ತೆ?’
**
ತನ್ನ ಹಳೆಯ ತಾವು ಹುಡುಕುತ್ತಾ ಮನೆಯೊಳಗೆ ಬಂದ ಗೀಜಗ ತಾವು ಸಿಕ್ಕದೇ, ಹೊರಗೆ ಹೋಗಲರಿಯದೇ ಅತ್ತಿಂದಿತ್ತ ಹಾರಾಡುತ್ತಾ ಗೋಡೆ ಕಪಾಟು ಮುಚ್ಚಿದ ಕಿಟಕಿಗಳಿಗೆ ಬಡಿದುಕೊಳ್ಳುತ್ತಿರುವ ದಾರುಣ ಚಿತ್ರ.
**
ಕಣ್ಮುಚ್ಚಿ ತನ್ಮಯತೆಯಲಿ ಮರಿಗಳಿಗೆ ಹಾಲೂಡುತ್ತಾ ಮಲಗಿರುವಾಗಲೂ ಹತ್ತಿರ ಯಾರಾದರೂ ಸುಳಿದ ಸದ್ದಿಗೇ ಒಳಗಿನಿಂದಲೇ ಗುರುಗುಟ್ಟುತ್ತಾ ಎಚ್ಚರಿಸುವ ಹಸಿ ಬಾಣಂತಿ ಅಮ್ಮ ನಾಯಿ.
**
ಎಳೆ ಕಂದನನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಬಂದಿರುವ ಅಮ್ಮನ, ಒದ್ದೆಯಾಗುತ್ತಲೇ ಇರುವ ರವಿಕೆ ಮತ್ತು ಕಣ್ಣು.
**
ಅಪ್ಪಿತಪ್ಪಿ ಮನೆಯೊಳಗೆ ಹಾರಿ ಬಂದಿರುವ ಅಂಗೈ ಅಗಲದ ಪತಂಗವನ್ನು ಹಿಡಿದು ಮತ್ತೆ ಬಯಲಿಗೆ ಬಿಡಲು ಮನೆಯವರೆಲ್ಲರ ಸಮರೋಪಾದಿ ಪ್ರಯತ್ನ.
**
ರಾತ್ರಿ ಕಿಟಕಿ ಮುಚ್ಚಿದಾಗ ಮನೆಯೊಳಗೇ ಉಳಿದು ಬಿಟ್ಟಿದ್ದ ಹುಳು ಹುಪ್ಪಟೆಗಳ ಹೆಣಗಳು ಬೆಳಗ್ಗೆ ಕಿಟಕಿ ಗಾಜಿನ ಗೋಟಿಯ ಮೇಲೆ ಅನಾಥವಾಗಿ ಬಿದ್ದ ಚಿತ್ರ.
**
ಯಾರಿಗೂ ಕಾಣದಂತೆ ಎಲೆಗಳ ಹಿಂಬದಿಯಲ್ಲಿ ಮೊಟ್ಟೆ ಇಟ್ಟ ಚಿಟ್ಟೆಗಳು.
**
ತಮ್ಮ ಸೊಂಟವನ್ನು ಕಾಮುಕರ ಕಣ್ಣುಗಳಿಂದ ತಪ್ಪಿಸಲು ಸೀರೆಯ ಮೇಲೆಯೇ ಷರಟು ತೊಟ್ಟು ಕೂಲಿ ಕೆಲಸದಲ್ಲಿ ನಿರತರಾದ ಹೆಣ್ಣಾಳುಗಳು.
 
 

‍ಲೇಖಕರು avadhi

June 24, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. nagraj.harapanahalli

    ಈ ಎಲ್ಲಾ ದೃಶ್ಯಗಳನ್ನು ನಾವು ನೋಡಿ, ಒಂದು ಕ್ಷಣ ಕರುಳು ಚುರುಗುಟ್ಟಿದ್ದಿದೆ. ಈ ಚಿತ್ರಗಳನ್ನು ಪೋಟೋದಲ್ಲಿ ಸೆರೆಹಿಡಿಯದೇ ಹೋದರು , ಕವಿತೆಯಲ್ಲಿ ರೂಪಕಗಳಾಗಿಸದಿದ್ದರೂ, ಕವಿತೆ ಓದಿದ ಅನುಭವ ಆಯಿತು . ಥ್ಯಾಂಕ್ಸ ರೂಪ ಅವರೇ ಒಂದು ಕ್ಷಣ ನಮ್ಮನ್ನು ಹಿಡಿದಿಟ್ಟಿದ್ದಕ್ಕೆ …….

    ಪ್ರತಿಕ್ರಿಯೆ
  2. ನಾಗರಾಜ್ ಹೆತ್ತೂರ್

    ಮೇಡಂ ಅದ್ಭುತ ಸಾಲುಗಳು ಮತ್ತೆ ಮತ್ತೆ ಕಾಡುತ್ತಾವೆ…. ನೆನಪಿಸಿಕೊಂಡರೆ ಅದೇನೋ ಸಂಕಟವಾಗುತ್ತದೆ.

    ಪ್ರತಿಕ್ರಿಯೆ
  3. gururaj katriguppe

    ROOPAJI. ‘Ellavu kaduva Bimbagale, kadadiddalli nammolage hrudayavilla endu artha’. Kaduva Kavithe Kodi madam endare, kaduva chitragalanne kottiddeeri, jothegistu kanneeru! athava ide nijavada ‘kavya’ na?

    ಪ್ರತಿಕ್ರಿಯೆ
    • ರೂಪ ಹಾಸನ

      ಗುರುರಾಜ್ ಅವರೆ,
      ಕವಿತೆ,ಕಥೆ, ಚಿತ್ರ…ಎಲ್ಲಾ ಸೃಜನಶೀಲ ಅಭಿವ್ಯಕ್ತಿಗಳೂ ಬದುಕಿನ ಪ್ರತಿಬಿಂಬಗಳಷ್ಟೇ ಅಲ್ಲವೇ? ಬದುಕು ಕಾಣಿಸುವ ‘ದಶಱನ’ ಅಥವಾ ನಿಜವಾದ ‘ಬಿಂಬ’ ಎಲ್ಲಕ್ಕಿಂಥಾ ತುಂಬಾ ದೊಡ್ಡದು ತಾನೇ?

      ಪ್ರತಿಕ್ರಿಯೆ
  4. chalam

    ಜಂಗಮಕ್ಕಳಿವಿಲ್ಲ…..ನಿಮ್ಮ ಆಸಕ್ತಿಗಳು ಇನ್ನೂ ವಿಸ್ತಾರವಾಗಲಿ…ಸಂವೇದನೆ ಕವಯತ್ರಿಯನ್ನು ಬಿಡುವುದಿಲ್ಲ

    ಪ್ರತಿಕ್ರಿಯೆ
  5. deepaG

    ಕೈಯಲ್ಲಿ ಚಿತ್ರ ರೂಪಿಸಲಾಗದಿದ್ದರು ಮನದೊಳಗೊಂದು ಬಿಂಬ ಮೂಡಿ ಕಾಡುತಿದೆ .. ಆ ಬಿಂಬದ ರೂವಾರಿಗೆ ಧನ್ಯವಾದಗಳು..

    ಪ್ರತಿಕ್ರಿಯೆ
  6. ಲಿಂಗರಾಜು ಬಿ.ಎಸ್.

    ಮೇಡಂ, ಒಂದ್ಯಾಕೆ ಒಂದು ರೂಪಕಕ್ಕೂ ಹತ್ತತ್ತೂ ಬಿಂಬ ಬರೀಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ ತರಕಾರಿ, ಅಕ್ಕಿ, ಬೇಳೆ ರೇಟು ಹೆಚ್ಚಾಯಿತೆಂದು ಯಾಕೆ ಹಲುಬುತ್ತೀರಿ, ನಾವು ನಿಮಗೆ ಕೇವಲ 40ರೂ.ಗೆ ಒಂದು ಪಿಜ್ಜಾ ಕೊಡ್ತೇವೆ ಎಂದು ಹೇಳುವ ಜಗತ್ತಿನಲ್ಲಿರುವ ಜನರು ಬರೆಯದೇ ಬರೆಯುತ್ತಾರೆ. ನಿಮ್ಮನ್ನು ಕಾಡಿದ ರೂಪಕಗಳಂತೆ ಜನರು ಬಿಡಿಸುವ ಬಿಂಬಗಳೂ ಕಾಡುತ್ತವೆ, ಆದರೆ ಅವರಿಗೆ ಕಾಡುವುದಿಲ್ಲ ಎಂದು ಹೇಳಲೇ ಬೇಕೆನಿಸುತ್ತಿದೆ. ಯಾಕೆಂದರೆ ನಾನಿರುವುದು ಅಂತದೇ ಒಂದು ಜಗತ್ತಿನಲ್ಲಿ. ಒಳಗೊಂದು ಹೊರಗೊಂದು ಎನ್ನುವ ನಾಡು ನನ್ನದು.
    ಕ್ಷಮಿಸಿ……..

    ಪ್ರತಿಕ್ರಿಯೆ
    • ರೂಪ ಹಾಸನ

      ಪ್ರಿಯ ಲಿಂಗರಾಜ್,
      ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ.ನಿಮ್ಮ ನೋವು ನನಗಥಱವಾಗುತ್ತದೆ.ಗುರುರಾಜ್ ಅವರಿಗೆ ಹೇಳಿದ ಮಾತು ನೋಡಿ. ನೀವು ಹೇಳಿದಂತಹ ಜಗತ್ತನ್ನು ಎದುರಿಸಲು ಮಾನಸಿಕ ತಯಾರಿಯನ್ನು ಹಲವು ರೀತಿಯಲ್ಲಿ ಮಾಡಿಕೊಳ್ಳಬೇಕಲ್ಲವೇ? ಏಕೆಂದರೆ ನಾವು ಕೃತಕವಾಗದೇ ನೈಜವಾಗಿ ಉಳಿಯಬೇಕಲ್ಲ! ಇಲ್ಲಿ ಎಲ್ಲವನ್ನೂ ಒಂದೇ ದಿನಕ್ಕೆ ಬದಲಿಸಲು ಸಾಧ್ಯವಿಲ್ಲ. ಹಾಗೇ ನಾವೂ ಪರಿಪೂಣಱರಲ್ಲ! ಸೃಜನಶೀಲತೆ, ಸೂಕ್ಷ್ಮ ಅವಲೋಕನ, ತೀವ್ರ ಸ್ಪಂದನೆ….ನಮ್ಮನ್ನು ಹರಿತಗೊಳಿಸಿಕೊಳ್ಳುವ ದಾರಿಗಳು, ಜೊತೆಗೇ ನಾವು ಒಡನಾಡಬೇಕಿರುವ ಮನಸುಗಳನ್ನು ಒಂದಿಷ್ಟಾದರೂ ಮೃದುಗೊಳಿಸುವ ಸಾಧನಗಳು ಎಂದು ನಾನು ಭಾವಿಸಿದ್ದೇನೆ. ಅದೂ ಇಲ್ಲದಿದ್ದರೆ ಸಿನಿಕರಾಗಿಬಿಡುತ್ತೇವೆ ಅಲ್ಲವೇ? ಮತ್ತೊಂದು ಸ್ಪಷ್ಟನೆ. ನಾನು ನನ್ನನ್ನು ಕಾಡಿದ ಬಿಂಬಗಳನ್ನಷ್ಟೇ ಕಳುಹಿಸಿದ್ದೆ. ಅದಕ್ಕೆ ಚಿತ್ರಬಿಂಬವನ್ನು, ನಿಮ್ಮನ್ನು ಕಾಡುವ ಬಿಂಬವನ್ನು ಕೇಳಿ ಅದನ್ನು ಆಕಷಱಕಗೊಳಿಸುವ ಪ್ರಯತ್ನ ಮಾಡಿದ್ದು ಅವಧಿ ಬಳಗದವರು.
      ರೂಪ

      ಪ್ರತಿಕ್ರಿಯೆ
  7. ರೂಪ ಹಾಸನ

    ಸ್ಪಂದಿಸಿದ ಸಹೃದಯರಿಗೆಲ್ಲಾ ವಂದನೆ ಎಂಬ ಪುಟ್ಟ ಪದ!
    ರೂಪ

    ಪ್ರತಿಕ್ರಿಯೆ

Trackbacks/Pingbacks

  1. ಚೌಕಟ್ಟು ಮೀರಿದ ಚಿತ್ರಗಳು « ಅವಧಿ / avadhi - [...] ಚೌಕಟ್ಟು ಮೀರಿದ ಚಿತ್ರಗಳು June 25, 2013 by G ಕವಯತ್ರಿ ರೂಪಾ ಹಾಸನ ಅವರು ತಮ್ಮನ್ನು ಕಾಡಿದ ಕೆಲವು ಬಿಂಬಗಳನ್ನು ಕಳುಹಿಸಿಕೊಟ್ಟಿದ್ದರು. ಅದನ್ನು ಅವಧಿಯಲ್ಲಿ ಪ್ರಕಟಿಸಲಾಗಿತ್ತು. [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: