ಮ್ಯಾಜಿಕ್
– ನವೀನ್ ಮಧುಗಿರಿ
ಈ ಪ್ರೀತಿ ಮತ್ತು ಪ್ರೇಮ
ಒಂಥರಾ ಮ್ಯಾಜಿಕ್ ಇದ್ದಂತೆ
ನಾನು ಹೇಳುವುದು ನಿಮಗೆ
ತಮಾಷೆ ಅನಿಸಬಹುದು
ಅಥವಾ ಸುಳ್ಳು ಅಂತನ್ನಿಸಬಹುದು
ಆದರಿದು ಸತ್ಯ
ಈ ಪ್ರೀತಿ ಮತ್ತು ಪ್ರೇಮ
ಒಂಥರಾ ಮ್ಯಾಜಿಕ್ ಇದ್ದಂತೆ
ಆ ದಿನ ಹೇಳಿದ ಸಮಯಕ್ಕೆ
ಅರ್ಧಗಂಟೆ ತಡವಾಗಿಯೇ ಬಂದಿದ್ದಳು
ನಮ್ಮ ಭೇಟಿಯ ಸ್ಥಳಕ್ಕೆ
ಆದರೂ ಕ್ಷಮೆ ಕೇಳಿದ್ದು ನಾನು
ಯಾಕಂದ್ರೆ
ಈ ಪ್ರೀತಿ ಮತ್ತು ಪ್ರೇಮ
ಒಂಥರಾ ಮ್ಯಾಜಿಕ್ ಇದ್ದಂತೆ

ಭಾರಿ ಮಳೆಗೆ ನಮ್ಮೂರಲ್ಲಿ
ಕರೆಂಟ್ ಕಂಬಗಳು ಮುರಿದುಬಿದ್ದ ದಿನ
ರಾತ್ರಿಯಿಡೀ ನನ್ನ ನಂಬರಿಗೆ
ಕರೆ ಮಾಡಿದವಳು
ಅತ್ತು ಅತ್ತು ಸೊರಗಿದ್ದಳು
ಮರುದಿನ
ಜಗಳವಾಡಿ ಕ್ಷಮೆ ಕೇಳಿದಳು
ಯಾಕಂದ್ರೆ
ಈ ಪ್ರೀತಿ ಮತ್ತು ಪ್ರೇಮ
ಒಂಥರಾ ಮ್ಯಾಜಿಕ್ ಇದ್ದಂತೆ
ನಾವು ಜೊತೆಗಿದ್ದಾಗ
ಮುಂಜಾನೆ ಚಳಿ
ಮಧ್ಯಾಹ್ನದ ಬಿಸಿಲು
ಮುಸ್ಸಂಜೆ ಮಳೆಗೂ
ಹಲವು ಬಣ್ಣಗಳಿದ್ದವು
ಯಾಕಂದ್ರೆ
ಈ ಪ್ರೀತಿ ಮತ್ತು ಪ್ರೇಮ
ಒಂಥರಾ ಮ್ಯಾಜಿಕ್ ಇದ್ದಂತೆ
ನಮ್ಮ ಮಾಮೂಲಿ ಭೇಟಿಯ ದರ್ಶಿನಿಯಲ್ಲಿ
ಒಂದೇ ಕಾಫೀ ಕಪ್ಪಿನೊಳಗೆ
ನಮ್ಮ ಜೋಡಿ ಹೃದಯಗಳ
ಪ್ರತಿಬಿಂಬವನ್ನ ಕಂಡ ನಾವು
ಅಚ್ಚರಿ ಪಟ್ಟೆವು, ಖುಷಿಗೊಂಡೆವು
ಯಾಕಂದ್ರೆ
ಈ ಪ್ರೀತಿ ಮತ್ತು ಪ್ರೇಮ
ಒಂಥರಾ ಮ್ಯಾಜಿಕ್ ಇದ್ದಂತೆ
ಎಷ್ಟೋಸಲ ನಾವು ನಗುವಾಗ
ಕಣ್ಣಲ್ಲಿ ನೀರಿತ್ತು
ನೋವಿನಲ್ಲಿ ಸಹ ನಕ್ಕ ನೆನಪುಗಳಿವೆ
ಯಾಕಂದ್ರೆ
ಈ ಪ್ರೀತಿ ಮತ್ತು ಪ್ರೇಮ
ಒಂಥರಾ ಮ್ಯಾಜಿಕ್ ಇದ್ದಂತೆ
ಅವತ್ತು ನಮ್ಮ ಭೇಟಿಯ ಕೊನೆಯ ದಿನ
ನನ್ನೆದುರು ಆಕಾಶ ನೀಲಿ ಬಣ್ಣದ ಉಡುಪಿನಲ್ಲಿ ಅವಳು
‘ಇಡೀ ಸಮಾಜವನ್ನೇ ಧಿಕ್ಕರಿಸಿ
ನಿನ್ನವನಾಗುವೆ’ ಅಂದೆ.
‘ನಮ್ಮ ಮನೆಯವರೂ ನಿನ್ನಷ್ಟೇ
ನನ್ನ ಪ್ರೀತಿಸುವರು’ ಅಂದವಳು
ನನ್ನ ಮುಖಕ್ಕೆ ಬೆನ್ನು ತೋರಿದಳು.
ಹಿಂತಿರುಗಿ ನೋಡಲಿಲ್ಲ.
ಯಾಕಂದ್ರೆ
ನಾನು ಮೊದಲೇ ಹೇಳಿದೆನಲ್ಲ
ಈ ಪ್ರೀತಿ ಮತ್ತು ಪ್ರೇಮ
ಒಂಥರಾ ಮ್ಯಾಜಿಕ್ ಇದ್ದಂತೆ






chennaagide..
Nice… ಇದೇ ಪ್ರೀತಿ
ontara magic ide 🙂