ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಪ್ರೀತಿಯೂ ಹಾಗೆ..

ಮತ್ತೊಂದು ಪ್ರೀತಿ

-ಅಪರ್ಣಾ ಹೆಗಡೆ

ಇಪ್ಪತ್ತರಲ್ಲಿ ಮಾತ್ರವಲ್ಲ ಪ್ರೀತಿ
ಎಪ್ಪತ್ತರಲ್ಲೂ ಆಗುತ್ತದಂತೆ
ಮೂವತ್ತೇನು ಮಹಾ! ಆಗದಿರಲು ಸಾಧ್ಯವೇ?

ನಕ್ಕುಬಿಡುತ್ತಿದ್ದೆ,
ಮತ್ತೆ ಮತ್ತೆ ಪ್ರೀತಿಯಾಗಲು
ಅದೇನು ಖಾಲಿಯಾದ ಇಂಕಿನ ಬಾಟಲ್ಲೆ?
ಬದಲಾಯಿಸಲು! ತುಂಬಿಸಲು!

ಅದು ಹಾಗಲ್ಲ!
ಅದೊಂದು ಆಕಸ್ಮಿಕ ಅವಘಡ
ಹೇಳದೆಯೆ ಬರುತ್ತದೆ ಹಬ್ಬಿತಬ್ಬುತ್ತದೆ
ಇರಲಿ!
ಒಮ್ಮೆ ಮಾತ್ರವಲ್ಲವೇ ಪ್ರೀತಿ?
ಊಹುಂ! ಪ್ರೀತಿ ಒಂದು ಸ್ಥಾಯಿಭಾವ
ಆಗುತ್ತದೆ ಮತ್ತೊಮ್ಮೆ
ಭಾವನೆ ಬೆಸೆಯುತ್ತದೆ ಬಂಧಿಸುತ್ತದೆ

ಇಲ್ಲಿ ಕೇಳು!
ಒಂದು ಗುಲಾಬಿಯ ತೋಟದಲ್ಲಿ
ದಿನವೂ ಅರಳುವ ಹೊಸ ಹೂವು
ಆಹ್ಲಾದ ಕೊಡುತ್ತದಲ್ಲಾ
ಈ ಪ್ರೀತಿಯೂ ಹಾಗೆ ಹುಡುಗಿ
ನಿತ್ಯ ಹೊಸತನ
ಹಾರುವ ಪತಂಗವಲ್ಲ
ಅರಳುವ ಹೂವದು

ಅದೇನೇ ಹೇಳು! ಮತ್ತೆ ಮತ್ತೆ ಚಂಚಲತೆಯೆ ಸರಿ
ಅದಲ್ಲ!
ಮಾಗಿಯ ಸುರಿಯುವ ಎಳೆಯ ಮಂಜು
ಸಾಗುತ್ತಲೆ ಇದ್ದರೂ ಸಂಪೂರ್ಣ ತೋಯಲಾಗದು
ತೇವವಷ್ಟೆ ತನುವಿಗೆ
ಅದರ ಹಿತ ಮನಸ್ಸಿಗೆ

ಕುಳಿತು ಕಟ್ಟೆಯ ಮೇಲೆ
ಬಿಟ್ಟೆ ಮುಚ್ಚಿದ ಕಣ್ಣು
ಚಿಟ್ಟೆ ಹರಿದಾಡಿ ಹೊಟ್ಟೆಯಲಿ
ಎದ್ದೆ ತಟ್ಟನೆ
ಈ ಪ್ರೀತಿ ಶುರುವಾಗಿದೆ ಮಿತವಾಗಿ
ನೋವಾಗುತ್ತಿದೆ ಹಿತವಾಗಿ

‍ಲೇಖಕರು Admin

5 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading