ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ನಾಲಿಗೆಗೇನು?

ಜಿಹ್ವೆ

ಅರುಣ ರಾವ್

ಈ ನಾಲಿಗೆಗೇನು?
ಅಂದು ಕೊಂಡದ್ದು ನೋಡಿದ್ದು
ಊಹಿಸಿಕೊಂಡದ್ದು ಕಲ್ಪಿಸಿಕೊಂಡದ್ದು ನುಡಿದುಬಿಡುತ್ತದೆ ನುಡಿದೇ ಬಿಡುತ್ತದೆ
ತುಸು ತಡೆದರೇನು ನಷ್ಟ? ಎಂದೊಮ್ಮೆ
ಕೇಳಿದರೆ ಸರಸರನೆ ತಿರುಗಿ ಗಿರಗಿರನೆ ಸುತ್ತಿ
ಮೇಲೆ ಕೆಳಗೆ ಹಾರಿ ಉರಿದುರಿದು ಬೀಳುತ್ತದೆ

ತಾಳ್ಮೆಯಿಂದಿದ್ದು ಕೊಂಚ
ಯೋಚಿಸಬಾರದೇ ಕ್ಷಣಕಾಲ?
ಮನಃಶಾಂತಿಯಾದರೂ ಇರುತಿತ್ತು ಆಗ
ಕೇಳಿದ್ದಷ್ಟೇ ಅಲ್ಲ, ನೋಡಿದ್ದೂ ಸುಳ್ಳಾಗುವ ಕಾಲ
ಇದುವೆ ಎಂದೊಂದರೆಗಳಿಗೆ ನೆನೆಯಬಾರದೆ?

ಗಳಿಗೆಗೊಂದರಂತೆ ಮಾತಂತೆ ಕತೆಯಂತೆ
ಅದರಲೊಂದಿಷ್ಟು ಹುರುಳು ಹೂರಣ
ಮತ್ತೆ ಕೆಲವೇನೋ ಕಸ ಕಡ್ಡಿ ಕೊಚ್ಚೆ ಕೂಳೆ
ಕೆಸರೆರೆಚಾಟ ಅರೆಚಾಟ ಅಬ್ಬರ
ಕಲ್ಪನೆಯ ಕೂಸಿನ ಅರೆನಗ್ನ ಕುಣಿದಾಟ

ಮುಂದೊಂದು ಹಿಂದೊಂದು ಮತ್ತೊಂದು ಮಗದೊಂದು ಆಗೊಂದು ಈಗೊಂದು
ನನಗೊಂದು ನಿನಗೊಂದು ಹೇಳುತ್ತ ಸಾಗುತ್ತ
ಆಚಾರವಿಲ್ಲದ ನಾಲಿಗೆ ನಿನ್ನ
ನೀಚ ಬುದ್ಧಿಗೆ ಹೇಸಿ ಕಳವಳಿಸಿ ಬೇಸತ್ತು
ಬಸವಳಿದು ತಲ್ಲಣಿಸಿ ಕುಸಿಯುತಿದೆ ಜಗ

ಮುಖಕ್ಕೆ ಮಾಸ್ಕ್ ಧರಿಸಿದ್ದರೇನು?
ಅದರ ಹಿಂದಿನ ನಾಲಿಗೆಗೇನು ಕಡಿವಾಣ
ಸದಾ ಹೊರಳುತ್ತ ಹಾರುತ್ತ ಚೀರುತ್ತ
ನಶ್ವರದ ಜೀವನದಿ ನುಡಿದ ನುಡಿ
ಶಾಶ್ವತವೆಂಬ ತತ್ವವ ಮರೆಯುತ್ತಲಿದೆ.

‍ಲೇಖಕರು avadhi

4 January, 2021

1 Comment

  1. ಚೈತ್ರಾ

    ಚಂದದ ಕವನ ಮ್ಯಾಮ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading