ಮಲ್ಲಿಕಾರ್ಜುನ ಹೊಸಪಾಳ್ಯ ಹೊಸ ಕೃತಿ ‘ಬೆಲ್ಲಂಪುಲ್ಲಕ್ಕ’

ಮಲ್ಲಿಕಾ ಬಸವರಾಜು ಮತ್ತು ‘ಬೆಲ್ಲಂಪುಲ್ಲಕ್ಕ’ ಮುಖಾಮುಖಿ…

ಮಲ್ಲಿಕಾ ಬಸವರಾಜು

ಮಲ್ಲಿಕಾರ್ಜುನ ಹೊಸಪಾಳ್ಯ ಅವರ ‘ಬೆಲ್ಲಂಪುಲ್ಲಕ್ಕ’ ಕೃತಿಯಲ್ಲಿ ೧೫ ಲೇಖನಗಳಿವೆ. ಇವುಗಳನ್ನು ಪ್ರಭಂಧಗಳು, ಲೇಖನಗಳು ಅಥವಾ ಅನುಭವ ಕಥನಗಳು ಅಂತ ಕರೀಬಹುದು. ಒಂಥರಾ ಚೆನ್ನಾಗಿದಾವೆ. ಹೊಸಪಾಳ್ಯ ಮತ್ತು ನಾನು ಒಂದೇ ತಾಲ್ಲೂಕಿನವರು. ನಮ್ಮೂರಿಗೂ ಅವರ ಊರಿಗೂ ೧೦-೧೫ ಕಿಮೀ. ದೂರ ಅಷ್ಟೇ. ಹಾಗಾಗಿ ಹಬ್ಬಗಳು, ಆಚರಣೆಗಳು ಒಂದೇ ರೀತಿ ಇವೆ. ಆದರೆ ಭಾಷೆ ಸ್ವಲ್ಪ ಬದಲಾಗುತ್ತೆ.

ಮೊದಲಿಗೆ ಬೆಲ್ಲಂಪುಲ್ಲಕನಂಥ ಸಮರ್ಥ ವ್ಯಕ್ತಿತ್ವವನ್ನು ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದ್ದಕ್ಕೆ ಮಲ್ಲಿಕಾರ್ಜುನ್ ಗೆ ಅಭಿನಂದನೆಗಳು. ಪ್ರಕಟಿಸಿದ ಭೂಮಿ ಬುಕ್ಸ್ ಹಾಗೂ ಅಪರೂಪದ ಒಳನೋಟಗಳನ್ನು ಬರೆದ ಪ್ರಕಾಶಕಿ ವಿಶಾಲಾಕ್ಷಿಯವರಿಗೂ ಅಭಿನಂದನೆಗಳು. ನಾನು ಈ ಪುಸ್ತಕ ಓದಿದಾಗ ಅನಿಸಿದ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತೇನೆ.

ಪುಸ್ತಕದ ಒಂದೊಂದು ಲೇಖನಗಳಿಗೂ ಕೊಟ್ಟಿರುವ ಶೀರ್ಷಿಕೆಗಳು ಅದ್ಭುತವಾಗಿವೆ. ಗದ್ದಲದ ಸಂಭ್ರಮದ ಗದ್ದೆ ಕಣಗಾಲ, ಬೆಲ್ಲಂಪುಲ್ಲಕ್ಕನ ಕಮ್ಯುನಿಕೇಶನ್ ಸ್ಕಿಲ್ಲು, ರಾಜ್ ಕುಮಾರ್ ಮತ್ತು ರಾಗಿ ರೊಟ್ಟಿ, ಬಚ್ಚಿಟ್ಟ ನೆನಪುಗಳ ಬಿಚ್ಚಿಟ್ಟ ಗೋಕಟ್ಟೆ, ಬೀಜದ ಹೋರಿ, ಗಂಧಸಾಲೆಯ ಘಮಲು, ಭಪ್ಪರೇ ಬೆಪ್ಪಾಲೆ, ಆ ನೀರು ನಾಯಿ ಈ ಕಾಡುಪಾಪ, ಪೊರಕೆಗಳ ಮೋಹಕ ಲೋಕ, ನಾಗಾಲ್ಯಾಂಡಿನ ಮಾ ಮಾ ಗ್ರಾಮಗಳು… ಹೀಗೆ ೧೫ ಲೇಖನಗಳ ಶೀರ್ಷಿಕೆಗಳು ಆಕರ್ಶಕವಾಗಿವೆ. ಜೊತೆಗೆ ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿ ಓದಿಸಿಕೊಳ್ಳುತ್ತವೆ. 

ಮಲ್ಲಿಕಾರ್ಜುನ್ ಬಳಸಿರುವ ಭಾಷೆ ತುಂಬಾ ಚೆನ್ನಾಗಿದೆ, ತುಂಬಾ ಸೊಗಸಾಗಿ ಗ್ರಾಮೀಣ ಕನ್ನಡವನ್ನ ತಂದಿದ್ದಾರೆ. ಅದೆಷ್ಟು ಸಹಜವಾಗಿ ಬಂದಿದೆ ಅಂದ್ರೆ, ನಾವು ಈ ಗದ್ದೆಗೋ ಹೊಲಕ್ಕೋ ಮಡವಾಯಿ ತಿರುಗಿಸಿದಾಗ ನೀರು ಒಂದೇ ಓಘವಾಗಿ ಸಹಜವಾಗಿ ಹರಿಯುತ್ತಲ್ಲಾ, ಆ ಓಘ ಇವರ ಭಾಷೆಯಲ್ಲಿದೆ. ಲವಲವಿಕೆ, ತಾಜಾತನ, ಜೊತೆಗೆ ನವಿರಾದ ಹಾಸ್ಯ ಇದೆ. ಅದು ಎಲ್ಲೂ ವ್ಯಂಗ್ಯ ಆಗುವುದಿಲ್ಲ. ರಾಗಿ ರೊಟ್ಟಿ ಲೇಖನದಲ್ಲಿ ’ರಾಗಿ ರೊಟ್ಟಿ ಮೇಲೆ ಎಳ್ಳಿಕಾಯಿ ಉಪ್ಪಿನಕಾಯಿ ಟಾಪಿಂಗ್’ ಅಂತ ಬಳಸುತ್ತಾರೆ. ಆ ಟಾಪಿಂಗ್ ಅನ್ನೋ ಪದ ಇಂಗ್ಲಿಷ್ ಅಂತ ಅನಿಸುವುದೇ ಇಲ್ಲ. ಅಷ್ಟು ಸಹಜವಾಗಿದೆ. ಈ ಶೈಲಿ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಭಾಳಾ ಇಷ್ಟ ಆಯ್ತು. 

ಗ್ರಾಮೀಣ ಮಹಿಳೆಯರ ಕ್ರಿಯಾಶೀಲತೆ, ಶಕ್ತಿ ಸಾಮರ್ಥ್ಯ, ಜಾಣ್ಮೆ, ಸಮಯಪ್ರಜ್ನೆ, ಅವರ ಆ ಕಷ್ಟದ ಬದುಕು ಏನಿದೆ ಅವೆಲ್ಲವನ್ನೂ ಸಹ ಇಲ್ಲಿನ ಕೆಲ ಲೇಖನಗಳು ಕಟ್ಟಿಕೊಡುತ್ತವೆ. ಎಲ್ಲೂ ಸಹ ಅದನ್ನ ವೈಭವೀಕರಿಸದೆ, ಕೀಳಾಗಿಯೂ ನೋಡದೆ, ಸಹಜವಾಗಿ ಆ ವ್ಯಕ್ತಿ ಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಇದಕ್ಕಾಗಿ ಮಲ್ಲಿಕಾರ್ಜುನ್ ಗೆ ಮತ್ತೊಮ್ಮೆ ಅಭಿನಂದನೆ ಹೇಳ್ತೀನಿ.  

ಬೆಲ್ಲಂಪುಲ್ಲಕ್ಕನಂಥಾ ಹಲವಾರು ವ್ಯಕ್ತಿತ್ವಗಳನ್ನು ನಾವು ಹಳ್ಳಿಗಳಲ್ಲಿ ನೋಡಿರ್ತೀವಿ. ಆದರೆ ಬರೆಯಲು ಆಗಿರುವುದಿಲ್ಲ. ಆಕೆಯ ಹೆಸರಿನ ಅರ್ಥ ಬಹುಶಃ ಎಲ್ಲರಿಗೂ ಇಷ್ಟವಾಗುವಂತೆ ನಡೆದುಕೊಳ್ಳುವುದರಿಂದ ಬಂದಿದ್ದು ಅನ್ಸುತ್ತೆ. ಅವಳಿದ್ದ ಕಡೆ ಒಂದು ಜೀವಜಾತ್ರೆಯೇ ನೆರೆದಿರುತ್ತಲ್ಲಾ. ನಗು, ಮಾತು, ತಮಾಷೆ, ಹರಟೆ, ಅವಳ ಜೊತೆ ಸಂತೆಗೆ ಹೋಗುವುದು, ಕೆಲಸಕ್ಕೆ ಹೋಗುವುದು, ಅವೆಲ್ಲವೂ ಹೆಣ್ಣು ಮಕ್ಕಳಿಗೆ ಇಷ್ಟವಾಗುವಂತಹುದೇ. ಅದರಲ್ಲಿಯೂ ವಯಸ್ಸಿನ ಹುಡುಗಿಯರಿಗೆ ಆಕೆಯ ಆಂಗಿಕ ಭಾಷೆಯೂ ಸೇರಿ ಬೆಲ್ಲ ತಿಂದಷ್ಟು ಸಿಹಿ ಆಗಿರುತ್ತಿತ್ತು ಅನ್ಸುತ್ತೆ ಆ ಪುಲ್ಲಕ್ಕನ ಸಾವಾಸ. ಹಳ್ಳಿಗಳಲ್ಲಿ ಈ ರೀತಿ ಹೆಸರುಗಳಿರುತ್ತವೆ. 

ಪೊರಕೆ ಲೇಖನದಲ್ಲೂ ಕೂಡ ಗ್ರಾಮೀಣ ಹೆಣ್ಣುಮಕ್ಕಳು ಅವರ ಕೃಷಿ ಕಾರ್ಯದ ಹೊರತಾಗಿಯೂ ಪೊರಕೆ ಕಟ್ಟಿ ಮಾರುವುದು, ಅವುಗಳ ಕಲಾತ್ಮಕತೆ, ವೈವಿಧ್ಯ ಇತ್ಯಾದಿ ವಿವರಗಳು ಚೆನ್ನಾಗಿ ಮೂಡಿಬಂದಿವೆ. ಇನ್ನು ಕಣಗಾಲದ ಲೇಖನ ಓದಿ ಬಹಳಾ ಖುಷಿ ಆಯ್ತು. ಆದರೆ ಅದು ಬೇಗ ಮುಕ್ತಾಯ ಆಯಿತೇನೋ ಅಂತ ಅನ್ನಿಸಿತು, ಇನ್ನೂ ವಿಸ್ತರಿಸಬಹುದಿತ್ತು. ನಾವು ಬೇಸಾಯ ಶುರು ಮಾಡಿದ ಹೊಸದರಲ್ಲಿ ಒಮ್ಮೆ ರಾಗಿ ಹಾಕಿಸಿದ್ದೆವು. ಕಟಾವಿನ ದಿನ ಕಣ ನೋಡೋದಿಕ್ಕೆ ನಾನು ಭಾಳಾ ಕನಸು ಕಟ್ಟಿಕೊಂಡು ಹೋಗಿದ್ದೆ. ಆದ್ರೆ ಒಂದು ಯಂತ್ರ ಬಂದು ಭರ್ರೋ ಅಂತ ಅರ್ಧ ಗಂಟೇಲಿ ಕಟಾವು ಮಾಡಿ ರಾಗಿ ಒಂದು ಕಡೆ ಹೊಟ್ಟು ಒಂದು ಕಡೆ ಹಾಕಿ ದುಡ್ಡು ಇಸಗೊಂಡು ಹೊರಟೇ ಹೋಯ್ತು. ಒಂದು ಸಂಭ್ರಮ ಇಲ್ಲ, ಒಂದು ಸಡಗರ ಇಲ್ಲ.

ಈ ಪುಸ್ತಕದ ಕಣಗಾಲ ಲೇಖನದ ಕೊನೆಯಲ್ಲೂ ಅಂತಹುದೇ ನಿರಾಸೆಯ ಚಿತ್ರ ಬರುತ್ತದೆ. ಕಣ ಬರೀ ಮನುಷ್ಯರನ್ನಷ್ಟೇ ಅಲ್ಲ, ಎಷ್ಟೋ ಜೀವರಾಶಿಗಳನ್ನ ಪೊರೆಯುತ್ತದೆ. ಕಣಕ್ಕೆ ಬಂದ ಯಾರಿಗೂ ಇಲ್ಲ ಎನ್ನುವುದಿಲ್ಲ. ಅವರ ಶಕ್ತ್ಯಾನುಸಾರ ಕೊಟ್ಟೇ ಕಳಿಸುತ್ತಿದ್ದರು. ನಾವು ಸಣ್ಣವರಿದ್ದಾಗ ಕಣದ ಖುಷಿ ನೋಡಲು ಸ್ಕೂಲಿಗೆ ಚಕ್ಕರ್ ಹಾಕಿ ಹೋಗುತ್ತಾ ಇದ್ದೆವು. ಅಂತಹುದೊಂದು ಖುಷಿಯನ್ನು ಮತ್ತೆ ತಂದು ಕೊಡುತ್ತದೆ ಕಣಗಾಲ ಪ್ರಬಂಧ. ಹಾಗೆಯೇ ’ಗೋಕಟ್ಟೆ’ ಲೇಖನ ಸಹ ಗತಿಸುತ್ತಿರುವ ಮಿಂಚುಹುಳುಗಳ ನೆನಪು ತರುತ್ತದೆ. ’ಆ ನೀರು ನಾಯಿ ಈ ಕಾಡುಪಾ” ಬರಹದಲ್ಲಿ ತುಮಕೂರಿನ ಕಾಡುಪಾಪಗಳು ಹಾಗೂ ಅವುಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಗುಂಡಪ್ಪನವರನ್ನೂ ನೆನಪಿಸಿಕೊಂಡು ದಾಖಲಿಸಿರುವುದು ಶ್ಲಾಘನೀಯ.

ಮಲ್ಲಿಕಾರ್ಜುನ್ ಬರಹಕ್ಕಿರುವ ವಿಶೇಷತೆ ಅಂದ್ರೆ, ಒಂದು ಚಿತ್ರ ಕಣ್ಮುಂದೆ ರೀಲು ಬಿಚ್ಚಿಕೊಂಡು ಬಂದಂಗೆ ಸರಾಗವಾಗಿ ಬರೆಯುತ್ತಾರೆ. ಮಣಿಪುರ, ನಾಗಾಲ್ಯಾಂಡ್ ಕಥನಗಳನ್ನು ಓದುವಾಗ ಅಲ್ಲಿನ ಯಾವೊಂದು ವಿವರಗಳೂ ತಪ್ಪಿ ಹೋಗದ ಹಾಗೆ ಬರಹದಲ್ಲಿ ತರುತ್ತಾರೆ. ಅಲ್ಲಿನ ಸಂಸ್ಕೃತಿ, ಐತಿಹಾಸಿಕ ವಿವರಗಳು, ಆಚರಣೆಗಳು, ಆಹಾರ ಎಲ್ಲವುಗಳ ಮಾಹಿತಿ ಇದೆ. ಹಾಗಾಗಿ ಇವು ಕೇವಲ ಪ್ರವಾಸಿ ಕಥನಗಳಷ್ಟೇ ಆಗುವುದಿಲ್ಲ. 

ನಾಗಾಲ್ಯಾಂಡ್ ಲೇಖನದಲ್ಲಿ ತಮ್ಮ ಸಹ ಪ್ರವಾಸಿಗರ ಬಗ್ಗೆ ಬರೆಯುತ್ತಾರೆ. ಚಿನ್ನಸ್ವಾಮಿ, ನಂದೀಶ್  ಪಡಿಪಾಟಲುಗಳ ಬಗ್ಗೆ ವಿವರಗಳಿವೆ. ಅಲ್ಲೆಲ್ಲಾ ನವಿರಾದ ಹಾಸ್ಯವಿದೆಯೇ ಹೊರತು ಎಲ್ಲೂ ವ್ಯಂಗ್ಯ ಆಗಲ್ಲ. ಓದಿದ ಮೇಲೂ ಆ ವ್ಯಕ್ತಿಗಳ ಬಗ್ಗೆ ಒಂದು ಗೌರವ ಹಾಗೇ ಉಳಿಯುತ್ತೆ ಹೊರತೂ ಎಲ್ಲೂ ಹಗುರವಾದ ಭಾವನೆ ಬರಲ್ಲ. ಇನ್ನು ಹಳ್ಳಿ ಬಯ್ಗುಳಗಳು, ಅವುಗಳನ್ನ ಕೇಳುವುದೂ ಅನಾಗರಿಕ ಅನ್ನೋ ಕಾಲದಲ್ಲಿ ನಾವಿದ್ದೀವಿ, ಅವುಗಳನ್ನು ಸೊಗಸಾಗಿ ಇಲ್ಲಿ ಓದಬಹುದು. ಅದು ಮಲ್ಲಿಕಾರ್ಜುನ್ ಬರಹದ ತಾಕತ್ತು. 

ಇಂತಹ ಇನ್ನಷ್ಟು ಪಾತ್ರಗಳ ಬಗ್ಗೆ ಓದಲು ಕಾಯುತ್ತಿರುತ್ತೇನೆ.

‍ಲೇಖಕರು Admin

February 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: