-ಎಸ್ ಜಯಶ್ರೀನಿವಾಸ ರಾವ್
“ಬಟ್ಟೆ ಆರಲು ಹಾಕುವುದು”
ಬಾಲ್ಕನಿಯಲ್ಲಿ ಈ ಗೋಡೆಯಿಂದ ಆ ಗೋಡೆಗೆ
ಮೂರು ಪ್ಲಾಸ್ಟಿಕ್ ವಯರುಗಳನ್ನು
ಬಿಗಿದು ಕಟ್ಟಿದ್ದೆವು,
ಬಟ್ಟೆ ಆರಲು ಹಾಕುವುದಕ್ಕೆ.
ಈಗ ವಯರುಗಳು ಸ್ವಲ್ಪ ಸಡಿಲವಾಗಿವೆ.
ಅಡ್ಡಿಯಿಲ್ಲ,
ಕಟ್ಟು ಗಟ್ಟಿಯಾಗಿಯೇ ಇದೆ.
ಬಟ್ಟೆ ಆರಲು ಹಾಕುವಾಗ
ಮೊದಲ ವಯರಿನಲ್ಲಿ ದಪ್ಪ ಬಟ್ಟೆಗಳು,
ಬಿಸಿಲು ನೇರವಾಗಿ ಬೀಳುತ್ತದಲ್ಲ, ಅದಕ್ಕೆ:
ಪ್ಯಾಂಟು, ಜೀನ್ಸು, ಲೆಗಿಂಗ್ಸ್,
ಟವೆಲು, ಪೈಜಾಮಾ, …
ಬೆಡ್ಶೀಟ್ ಇದ್ದರೆ ಬೆಡ್ಶೀಟ್.
ಮಧ್ಯದ ವಯರಿನಲ್ಲಿ ದಪ್ಪ ಕಡಿಮೆಯಿರುವ ಬಟ್ಟೆಗಳು:
ಶರ್ಟು, ಸಲ್ವಾರ್, ಟೀ-ಶರ್ಟು …
ಮೂರೂ ಮಂದಿ ಹೆಚ್ಚಾಗಿ ಟೀ-ಶರ್ಟೇ ತೊಡುವುದರಿಂದ
ಸಿಕ್ಕಾಪಟ್ಟೆ ಟೀ-ಶರ್ಟುಗಳು ಇರ್ತಾವೆ.
ಮೂರನೆಯ ವಯರಿನ ಮೇಲೆ
ಬಿಸಿಲು ನೇರವಾಗಿ ಬೀಳುವುದಿಲ್ಲ, ಅದಕ್ಕೆ
ಹಗುರವಾದ ಬಟ್ಟೆಗಳು:
ಕಮೀಜ಼್, ಬರ್ಮುಡಾ, ಟಾಪ್-ಗಳು …
ಅಷ್ಟಕ್ಕೆ ಮೂರೂ ವಯರುಗಳು ತುಂಬಿ ಬಿಡುತ್ತವೆ.
ಆಮೇಲೆ ಅಲುಮಿನಿಯಮ್ಮಿನ ಬಟ್ಟೆ ಸ್ಟ್ಯಾಂಡಿನ ಮೇಲೆ.
ಮೇಲಿನ ಹಿಂದಿನ ಸರಳಿನಲ್ಲಿ
ಬನಿಯನ್-ಗಳು, ಸ್ಲಿಪ್-ಗಳು,
ಮುಂದೆ ಬರುತ್ತಾ ಶಾರ್ಟ್ಸ್-ಗಳು,
ಮಧ್ಯದ ಸರಳುಗಳಲ್ಲಿ ಚಡ್ಡಿಗಳು,
ಸಾಕ್ಸು, ಕರ್ಚೀಫು, ಸಣ್ಣ ಟವೆಲುಗಳು,
ಕೆಳಗಿನ ಸರಳುಗಳಲ್ಲಿ
ಬ್ರೇಸಿಯರ್, ಪ್ಯಾಂಟೀ.
ಏನೋ ಮಿಸ್ಸಿಂಗ್ ಇದೆ ಅಲ್ವಾ,
ಅಂತ ಅಂದುಕೊಂಡರಾ?
ನನ್ನ ಹೆಂಡತಿ ಸೀರೆ ಕಟ್ಟುವುದು
ಅತಿ ಅಪರೂಪವಾದುದರಿಂದ
ಸೀರೆ, ರವಿಕೆ, ಲಂಗ ಇಲ್ಲಿ
ಕಾಣುವುದೂ ಅಪರೂಪ.
ಎಲ್ಲ ತರಹದ ಬಟ್ಟೆಗಳಿಗೆ ಅವುಗಳ
ನಿರ್ದಿಷ್ಟ ಸರಳು ಯಾ ವಯರು ಇದೆ.
ವಾಷಿಂಗ್ ಮಶೀನ್-ನಿಂದ ಘಮ ಘಮಿಸುವ
ಬೆಚ್ಚಗಿನ ಬಟ್ಟೆಗಳನ್ನು ಹೊರತೆಗೆದು
ಒಂದೊಂದಾಗಿ ಝಾಡಿಸಿ, ಬಿಡಿಸಿ,
ಆರಲು ಹರಡುವುದು ಒಂದು
ಮುತುವರ್ಜಿ ವಹಿಸಿ ಮಾಡುವ ಕಾರ್ಯ.
ಬಟ್ಟೆ ಆರುವುದು ಬೇರೆಯೇ ಕಾರ್ಯ,
ಅದು ನನಗೆ ಸಂಬಂಧವಿಲ್ಲ.
ಝಾಡಿಸುವುದು, ಬಿಡಿಸುವುದು
ವಯರಿನ, ಸರಳಿನ ಮೇಲೆ ಹರಡುವುದು –
ಅದೇ ಲಯದಲ್ಲಿ, ಅದೇ ಕ್ರಮದಲ್ಲಿ
ನಡೆಯುತ್ತದೆ ಈ ಕಾರ್ಯ.
ಎಲ್ಲಾ ಒಗೆದ ಬಟ್ಟೆಗಳನ್ನು ಹರಡಿ, ಹಾಸಿದ ಮೇಲೆ
ಒಮ್ಮೆ ಹಿಂದೆ ಸರಿದು ನೋಡುವೆ,
ಇದೇ ನನ್ನ ಮಾಸ್ಟರ್ಪೀಸ್ ಎಂಬಂತೆ.
ಮರವಿಲ್ಲ, ಮಲೆಯಿಲ್ಲ, ಕಾಡಿಲ್ಲ, ಕೆರೆಯಿಲ್ಲ,
ಇರುವುದರಲ್ಲಿ ದಾರಿ ಹುಡುಕಬೇಕು.
ಇದೇ ನನ್ನ ಧ್ಯಾನ,
ಇದೇ ನನ್ನ Zen.






0 Comments