ಈ ಕಾಲಘಟ್ಟಕ್ಕೆ ಚಂಪಾ ಬೇಕು..

ಸಂಪಾದಕೀಯ

—-

ಜಿ ಎನ್ ಮೋಹನ್ 

ಚಂದ್ರಶೇಖರ ಪಾಟೀಲ್ ಮತ್ತು ನಾನು ತುಂಬಾ ಆತ್ಮೀಯರು. ನಾನಾ ಕಾರಣಗಳಿಗಾಗಿ ನಮ್ಮ ಆತ್ಮೀಯತೆಯ ನಂಟು ಬೆಳೆದಿದೆ. ಅದರಲ್ಲಿ ಪ್ರಮುಖವಾಗಿ ನಾನು ಒಬ್ಬ ಕವಿಯಾಗಿ ಮೂಡುವುದಕ್ಕೆ ‘ಸಂಕ್ರಮಣ’ದ ಪಾತ್ರ ಪ್ರಮುಖವಾದದ್ದು. ‘ಸಂಕ್ರಮಣ’ ಸಾಹಿತ್ಯ ಪತ್ರಿಕೆಯಲ್ಲಿಯೂ ಮತ್ತು ನಂತರ ಚಂಪಾ ಅವರು ನಡೆಸಿದ ವಾರಪತ್ರಿಕೆ ಪ್ರಯೋಗದಲ್ಲಿಯೂ ನನಗೆ ಮಹತ್ವದ ಸ್ಥಾನ ಕೊಟ್ಟಿದ್ದರು. ಇದು ನನ್ನಲ್ಲಿ ಬರೆಯುವ ಹುಮ್ಮಸ್ಸು ಹೆಚ್ಚಿಸಿತು.

ಅದೆಲ್ಲಕ್ಕಿಂತ ಮಿಗಿಲಾಗಿ ಇರುವ ನೆನಪು – ‘ಡಂಕೆಲ್ ಸಾಂಸ್ಕೃತಿಕ ಪಿಡುಗು’ ಕೃತಿಯದ್ದು. ಈ ಕೃತಿ ನನ್ನನ್ನು ಕನ್ನಡ ಸಾಹಿತ್ಯ ಲೋಕದೊಳಗೆ, ವಿಚಾರ ಲೋಕದೊಳಗೆ ಸೇರುವಂತೆ ಮಾಡಿತು. ‘ಸಂಕ್ರಮಣ’ ಸಾಹಿತ್ಯ ಪತ್ರಿಕೆಯ ವಿಶೇಷ ಸಂಚಿಕೆಗಳು ಎಂದರೆ ಅದಕ್ಕೆ ಇನ್ನಿಲ್ಲದ ಮಹತ್ವವಿದೆ. ಆಯಾ ಕಾಲದ ತುರ್ತುಗಳಿಗೆ, ಸಾಮಾಜಿಕ ಸನ್ನಿವೇಶಗಳಿಗೆ, ಮಹತ್ವದ ವ್ಯಕ್ತಿಗಳ ಬಗ್ಗೆ ವಿಶೇಷ ಸಂಚಿಕೆಗಳನ್ನ ರೂಪಿಸುತ್ತಿತ್ತು. ಆ ಮೂಲಕ ಕನ್ನಡ ಸಾಹಿತ್ಯ ಲೋಕವನ್ನ ಹೊಸ ದಿಕ್ಕಿಗೆ ಕರೆದೊಯ್ಯುತ್ತಿತ್ತು. ಕನ್ನಡ ಸಾಹಿತ್ಯವನ್ನ ಸಾಮಾಜಿಕ ಚಳವಳಿಯ ಜೊತೆ ಮುಖಾಮುಖಿ ಮಾಡುತ್ತಿತ್ತು. ‘ಡಂಕೆಲ್ ವಿಶೇಷಾಂಕ’ ಆ ರೀತಿಯ ಒಂದು ಪ್ರಯೋಗ.

ಆಗ ನಾನು ಮಂಗಳೂರಿನಲ್ಲಿದ್ದೆ. ಪ್ರಜಾವಾಣಿಯ ವರದಿಗಾರನಾಗಿ. ಚಂಪಾ ಮತ್ತು ನಾನು ಕಡಲದಂಡೆಯಲ್ಲಿ ಅಡ್ಡಾಡುತ್ತಿದ್ದೆವು. ನಮ್ಮ ಮಾತು ನೂರೆಂಟು ಕಡೆ ತಿರುಗುತ್ತಿತ್ತು. ಆಗ ತಾನೇ ಡಂಕೆಲ್ ಅನ್ನುವ ಹೆಸರು ಕಿವಿಗೆ ಬೀಳಲು ಆರಂಭವಾಗಿತ್ತು. ಮರಳ ದಂಡೆಯಲ್ಲಿ ಓಡಾಡುತ್ತಾ ನಾನು ‘ಬಹುಶಃ ಇನ್ನು ಒಂದಷ್ಟು ಕಾಲ ಮಾತ್ರ ಹೀಗೆ ಓಡಾಡಬಹುದು. ಯಾಕೆಂದರೆ ಡಂಕೆಲ್ ಪ್ರಣೀತ ಜಾಗತೀಕರಣ ಕಡಲ ದಡವನ್ನೂ ನುಂಗಲು ಸಜ್ಜಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮದ ನೆಪದಲ್ಲಿ ಕಡಲ ದಂಡೆಗಳು ಬಹುರಾಷ್ಟ್ರೀಯ ಕಂಪನಿಗಳ ಪಾಲಾದರೂ ಆಶ್ಚರ್ಯವಿಲ್ಲ’ ಎಂದೆ.

ಆಗ ಚಂಪಾ ನಕ್ಕು ತಮ್ಮದೇ ಸೈಲ್‍ನಲ್ಲಿ ಓಹೋ ..ಹಾಗಾದರೆ ತೆಲುಗು ಸಿನಿಮಾ ‘ದೊಂಗಲುನ್ನಾರು ಜಾಗ್ರತ’ ಬದಲು ‘ಡಂಕೆಲ್ ಉನ್ನಾರು ಜಾಗ್ರತ’ ಎಂದು ಹೇಳಬೇಕಾದ ಕಾಲ ಬರುತ್ತದೆ ಎಂದರು.

ಅಷ್ಟೇ ಅಲ್ಲ ಈ ಬಗ್ಗೆ ‘ಸಂಕ್ರಮಣ’ ವಿಶೇಷ ಸಂಚಿಕೆ ರೂಪಿಸೋಣ. ಅದನ್ನು ಪುಸ್ತಕವನ್ನಾಗಿಯೂ ಮಾಡೋಣ. ಅದನ್ನು ನೀವೇ ಎಡಿಟ್ ಮಾಡಬೇಕು ಎಂದು ಪಟ್ಟು ಹಿಡಿದರು. ಆ ಸಂಕ್ರಮಣ ವಿಶೇಷ ಸಂಚಿಕೆಯನ್ನು ಎಡಿಟ್ ಮಾಡುತ್ತಾ ಮಾಡುತ್ತಾ ನನಗೆ ಜಾಗತೀಕರಣದ ಆಳ ಮತ್ತು ವಿಸ್ತಾರಕ್ಕೆ ಇಳಿಯುವುದಕ್ಕೆ ಸಾಧ್ಯವಾಯಿತು. ಅಂತಹ ದೊಡ್ಡ ಅವಕಾಶ ಚಂಪಾ ನೀಡಿದ್ದು ನನ್ನ ಮನದಲ್ಲಿ ಸದಾ ಹಸಿರು.

83 ನೆಯ ಸಾಹಿತ್ಯ ಸಮ್ಮೇಳನ ಬಹಳ ನಿರ್ಣಾಯಕ ಕಾಲಘಟ್ಟದಲ್ಲಿ ನಡೆಯುತ್ತಿದೆ. ಎಂ ಎಂ ಕಲಬುರಗಿ ಅವರ ಹತ್ಯೆಯಾಯಿತು, ಈಗ ತಾನೇ ಗೌರಿಯವರನ್ನ ಕಳೆದುಕೊಂಡಿದ್ದೇವೆ. ಇಂತಹ ದುಃಖಕರ ಸನ್ನಿವೇಶದಲ್ಲಿ, ವಿಚಾರವಾದಕ್ಕೆ ಪೆಟ್ಟು ಬೀಳುತ್ತಿರುವ ಸಮಯದಲ್ಲಿ, ವಿಚಾರವಂತಿಕೆಯನ್ನೇ ಹೊಸಕಿ ಹಾಕಬೇಕೆನ್ನುವ ಹುನ್ನಾರಗಳು ನಡೆಯುತ್ತಿರುವ ಸಮಯದಲ್ಲಿ, ಇಡೀ ದೇಶವನ್ನ ಒಂದು ಬಾವುಟ, ಒಂದು ಭಾಷೆ, ಒಂದು ಸಂಕೇತ, ಒಂದು ಆಹಾರ ಇದರ ಕೆಳಗೆ ತರಬೇಕು ಅನ್ನುವ ಸಮಯದಲ್ಲಿ ಚಂದ್ರಶೇಖರ್ ಪಾಟೀಲರು ಅಧ್ಯಕ್ಷರಾಗುವುದು ತುಂಬಾ ಮುಖ್ಯ.

ಚಂದ್ರಶೇಖರ ಪಾಟೀಲ್ ಕೇವಲ ಬರವಣಿಗೆಯಲ್ಲಿ ಮಾತ್ರ ಬಂಡಾಯ ಸಾಹಿತಿಯಲ್ಲ. ನಿಜ ಜೀವನದಲ್ಲಿಯೂ ಬಂಡಾಯ ನಡೆಸುವವರು. ಯಾವುದೇ ಆಳುವ ವರ್ಗ ಹಳಿ ತಪ್ಪಿದಾಗ ತಮ್ಮ ಮಾತಿನ, ಬರಹದ ಛಾಟಿ ಏಟು ಬೀಸಲು ಹಿಂದೆ ಮುಂದೆ ನೋಡಿಲ್ಲ. ವಿಚಾರ ಕ್ರಾಂತಿಯ ಮೇಲೆ ಹಲ್ಲೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಚಂಪಾ ತಮ್ಮ ಮಾತಿನ ಛಾಟಿ ಬೀಸುವ ಅಗತ್ಯವಿದೆ.

ನಾಡಿನಲ್ಲಿ ಸಾಕಷ್ಟು ಚರ್ಚೆಗಳಾಗುತ್ತದೆ. ಚುನಾವಣೆ ಹತ್ತಿರ ಬರುತ್ತಿದೆ, ಲಿಂಗಾಯಿತ ಪ್ರತ್ಯೇಕ ಧರ್ಮ ಚರ್ಚೆ ಶುರುವಾಗಿದೆ. ‘ಅನ್ನಭಾಗ್ಯ’ಕ್ಕೆ ಸಂಭಂದಿಸಿದಂತೆ ನಾನಾ ಚರ್ಚೆಗಳಾಗುತ್ತಿವೆ, ಕಟ್ಟಕಡೆಯ ಮನುಷ್ಯನ ಜೀವನ ಜಾಗತೀಕರಣದಲ್ಲಿ ಸಿಲುಕಿ ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಚಂಪಾ ನೋಟ ಅಗತ್ಯವಿದೆ.

ಚಂಪಾ ನಿಮಗೆ ಅಭಿನಂದನೆಗಳು.

‍ಲೇಖಕರು avadhi

September 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Shyamala Madhav

    ಚಂಪಾ ನೋಟಕ್ಕಾಗಿ ನಾವೂ ಕಾದಿರುವೆವು. ಹೃತ್ಪೂರ್ವಕ ಅಭಿನಂದನೆ.

    ಪ್ರತಿಕ್ರಿಯೆ
  2. H S Eswara

    Congratulations to Champa. It is very gratifying that he is chairing the coming Sahitya Sammelana in Mysore. I agree with your editorial that he is chosen at the most appropriate point of time. HS Eswara

    ಪ್ರತಿಕ್ರಿಯೆ
  3. vijayaraghavan Ramakumar

    We wish his presidential address will take an unique and important stand on issues bothering​ the society, showing a new direction.

    ಪ್ರತಿಕ್ರಿಯೆ
  4. T.K.Gangadhar Pattar

    ಒಳ್ಳೆಯ ಆಯ್ಕೆಯೇನೋ ಸರಿ. ಚಂಪಾ ಬಗ್ಗೆ ಯಾರೂ ಆಕ್ಷೇಪಣೆ ಮಾಡಲಾರರೆಂಬುದೂ ನಿಜ. ಆದರೆ 2010ರಲ್ಲಿ ಗದುಗಿನಲ್ಲಿ ಜರುಗಿದ 76ನೇ ಸಮ್ಮೇಳನದ ನಂತರ ಮಹಿಳಾ ಸಾಹಿತಿಗಳಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ ಲಭಿಸಿಲ್ಲ. ಮೈಸೂರಿನಲ್ಲಿ ನವೆಂಬರ್-2017ರಲ್ಲಿ ಜರುಗುತ್ತಿರುವುದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಆದರೆ ಈವರೆಗೆ 82 ಸಮ್ಮೇಳನ ಜರುಗಿದರೂ ಕೇವಲ ನಾಲ್ಕು ಮಹಿಳೆಯರಿಗೆ ಮಾತ್ರ ಅಧ್ಯಕ್ಷತೆಯ ಗೌರವ ಪ್ರಾಪ್ತವಾಗಿದೆ. 1973ರ ವರೆಗೆ 47 ಸಮ್ಮೇಳನಗಳು ಜರುಗಿದ್ದು 1974ರಲ್ಲಿ ಮಂಡ್ಯದಲ್ಲಿ ಜರುಗಿದ 48ನೇ ಸಮ್ಮೇಳನಕ್ಕೆ ಜಯದೇವಿ ತಾಯಿ ಲಿಗಾಡೆ ಅಧ್ಯಕ್ಷರಾಗಿದ್ದರು. 2000-ಬಾಗಲಕೋಟೆ-68ನೇ ಸಮ್ಮೇಳನಕ್ಕೆ ಶಾಂತಾ ದೇವಿ ಮಾಳವಾಡ, 2000-ಮೂಡುಬಿದಿರೆ-71ನೇ ಸಮ್ಮೇಳನಕ್ಕೆ ಕಮಲಾ ಹಂಪನಾ ಹೀಗೆ ನಾಲ್ವರು ಮಹಿಳಾ ಸಾಹಿತಿಗಳನ್ನು ಬಿಟ್ಟರೆ ಇತರರಿಗೆ ಈ ಅವಕಾಶ ಲಭಿಸಿಲ್ಲ. ಈ ಸಲದ ಆಯ್ಕೆ ಸಮಿತಿಯ ಮುಂದೆ ಸಾರಾ ಅಬೂಬಕ್ಕರ್, ವೀಣಾ ಶಾಂತೇಶ್ವರ, ಲತಾ ರಾಜ ಶೇಖರ ಮೂವರು ಮಹಿಳಾ ಸಾಹಿತಿಗಳ ಹೆಸರುಗಳೂ ಇದ್ದವು. ಆಯ್ತು, ಆಯ್ಕೆಯಾಗಿದೆ. ಚಂಪಾರಂಥ ಗಂಡೆದೆಯ ಗುಂಡಿಗೆಯ ನುಡಿಕಾರರನ್ನು ಆರಿಸಿದ್ದಕ್ಕೆ ಸಂತೋಷ. ಚಂಪಾರವರಿಗೆ ಹಾರ್ದಿಕ ಅಭಿನಂದನೆಗಳು. ಮುಂದಿನ ಸಮ್ಮೇಳನಕ್ಕಾದರೂ ಮಹಿಳಾ ಸಾಹಿತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆಂದು ನಂಬೋಣವೇ?

    ಪ್ರತಿಕ್ರಿಯೆ
  5. prakash konapur

    ಚಂಪಾ ಕುರಿತ ಲೇಖನ ಅತ್ಯಂತ ಹೃದಯಸ್ಪರ್ಶಿಯಾಗಿದೆ
    ಚಂಪಾ ಅವರ ಕೆಲವೊಂದು ನಡೆಗಳು ಪ್ರಶ್ನಾರ್ಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: