ಮೂಲ: Brian Bilston
ಕನ್ನಡಕ್ಕೆ : ಕೃಷ್ಣ ಕೌಲಗಿ
ನಾನು ಬರೆಯಬೇಕೆಂದುಕೊಂಡ ಕವಿತೆಯಂತಿಲ್ಲ…
ನನ್ನ ಬರೆಯುವ ಮೇಜಿನ ಎದುರು
ಕುಳಿತಾಗ,
ಎದುರಿಗೊಂದು ಖಾಲಿಪುಟ ತೆಗೆದಿರಿಸಿ ಕೊಂಡಾಗ,
ತಲೆಯಲ್ಲಿದ್ದ ವಿಚಾರಗಳೇ ಒಂದು…
ಬರೆದು ಮುಗಿಸಿದಾಗ
ಪುಟಗಳಲ್ಲಿ ಮೂಡಿ ಬಂದ ಸಾಲುಗಳೇ ಬೇರೊಂದು…
ಈ ಕವಿತೆ,
ಪ್ರಪಂಚದಿಂದ ಯುದ್ಧಗಳನ್ನೆಲ್ಲ ಆಮೂಲಾಗ್ರವಾಗಿ
ಕಿತ್ತೆಸೆಯಬಲ್ಲ,
ಜಗತ್ತನ್ನೇ ಹರಿದು ಹಂಚಿ ಛಿದ್ರ ವಿಚ್ಛಿದ್ರವಾಗಿಸಿದ ದುಷ್ಟ ಶಕ್ತಿಗಳನ್ನೆಲ್ಲ ಸದೆ ಬಡಿದು ದೇಶದೆಲ್ಲ
ನೋವುಗಳಿಗೂ ಮುಲಾಮು ಆಗಬಲ್ಲ
ಕವಿತೆಯಾಗಬಹುದೆಂದು ಕೊಂಡಿದ್ದೆ…
ಇಲ್ಲ, ಹಾಗಾಗಲೇಯಿಲ್ಲ…

ಪ್ರೇಮಿಗಳು ಆ ಕವಿತೆಯ ಸಾಲುಗಳನ್ನು
ನಿತ್ಯ ಉಲಿಯುವಂತೆ,
ಆ ಕವನವನ್ನು ಜೋಗುಳವಾಗಿಸಿ
ಅಳುವ ಮಕ್ಕಳನ್ನು
ಸಂತೈಸಿ ಅಮ್ಮಂದಿರು ನಲಿಯುವಂತೆ,
ಎಲ್ಲ ತಲೆಮಾರುಗಳಿಗೂ
ಹೊಸ ಭರವಸೆಯೊಂದು
ಉಳಿಯುವಂತೆ,
ಬರೆಯಬೇಕೆಂದಿದ್ದೆ…
ಊಹುಂ- ಅದಾಗಲೇಯಿಲ್ಲ.
ದಯವಿಟ್ಟು ನನ್ನನ್ನು ನಂಬಿ…
ಅಗಾಧ ನಿರೀಕ್ಷೆಗಳೊಂದಿಗೆ,
ಮಾನವತೆಯ
ಅಪರೂಪದ ದೃಷ್ಟಾಂತ
ಗಳನ್ನು ನೀಡುವ
ಸಂದೇಶಗಳನೊಳಗೊಂಡ
ಕವಿತೆ ಬರೆಯಬೇಕೆಂದೆ…
ಯಾವಾಗ, ಎಲ್ಲಿ, ಏಕೆ, ಹೇಗೆ ಸೂಕ್ತ ಶಬ್ದಗಳು ತಪ್ಪಿಸಿಕೊಂಡು ಬದಲೀ
ಪದಗಳು ನುಸುಳಿದವೋ
ತಿಳಿಯಲೇಯಿಲ್ಲ…






0 Comments