ಈ ಎಚ್ಚರದಲ್ಲಿ ಈ ಕೃತಿ..

ನಾಗಾರ್ಜುನ ಮತ್ತು ಅಲ್ಲಮಪ್ರಭು-ಒಂದು ತೌಲನಿಕ ಅಧ್ಯಯನ

ಒಂದು ಅವಲೋಕನ

udayakumar habbu

ಉದಯಕುಮಾರ ಹಬ್ಬು, ಕಿನ್ನಿಗೋಳಿ

ಯಾವುದೆ ಎರಡು ಜ್ಞಾನ ಶಾಖೆಗಳ ಅಥವಾ ತಾತ್ವಿಕ ಪ್ರಸ್ಥಾನಗಳ ತೌಲನಿಕ ಅಧ್ಯಯನವು ಆ ಎರಡು ಶಾಖೆಗಳ ಗಾಢವಾದ ಅನುಸಂಧಾನದಿಂದ ಮತ್ತು ಅಧ್ಯಯನದಿಂದ ಉಂಟಾಗುವ ಪ್ರಕ್ರಿಯೆಯಾಗಿದೆ. ಆ ತೌಲನಿಕ ಅಧ್ಯಯನಕ್ಕೆ ಅಂಥ ಒಂದು ಅನುಸಂಧಾನಕ್ಕೆ ಒಳನೋಟ, ಚಿಂತನೆಗಳು ಮತ್ತು ಆಳವಾದ ವಿಸ್ತೃತ ಅಧ್ಯಯನ ಇವೆಲ್ಲ ಪರಿಕರಗಳು ಆಗಿರುತ್ತವೆ. ಈ ಎಲ್ಲ ಪರಿಕರಗಳಿಂದ ಸುಸಜ್ಜಿತರಾಗಿ ಡಾ. ನಟರಾಜು ಬೂದಾಳು ಅವರು ಕನ್ನಡ ವಿಮರ್ಶಾ ಲೋಕಕ್ಕೆ ಹೊಸತು ದಾರಿಯ ಅನಾವರಣಕ್ಕೆ ಚಿಂತಕರನ್ನು ಪಕ್ಕಾಗಿಸಿದ್ದಾರೆ.

ಡಾ ನಟರಾಜ ಬೂದಾಳು ಅವರ ಕೈಗೆತ್ತಿಕೊಂಡ ದಾರ್ಶನಿಕರು ಕನ್ನಡದ ಅಪ್ರತಿಮ ಈರ್ವರು ದಾರ್ಶನಿಕರಾದ ಬೌದ್ಧಮುನಿ ನಾಗಾರ್ಜುನ ಮತ್ತು ಅಂಥದ್ದೆ ದಾರ್ಶನಿಕನಾದ ಅಲ್ಲಮಪ್ರಭು. ಎಲ್ಲ ದೃಷ್ಟಿವಾದಗಳನ್ನು ವಿಸರ್ಜಿಸಿ, ಎಲ್ಲ ಲೌಕಿಕ ವಸ್ತುಗಳು ಯಾವುದೆ ಬಗೆಯ ಸ್ವ-ಭಾವವುಳ್ಳದ್ದಾಗಿರುವುದಿಲ್ಲ, ಅವುಗಳು ನಿಃಸ್ವಭಾವುಳ್ಳದ್ದಾಗಿವೆ, ಹಾಗಾಗಿ ಅವುಗಳು ಶೂನ್ಯ; ಎಲ್ಲ ತಾತ್ವಿಕ ಗ್ರಹಿಕೆಗಳು ಪ್ರಸ್ಥಾನಗಳು ಮಿಥ್ಯಾವಾದವನ್ನು ಪ್ರಸ್ತುತಪಡಿಸುತ್ತವೆ.

IMG_0001 (1)ಶೂನ್ಯತೆಯನ್ನು ಅರಿತುಕೊಳ್ಳುವುದರ ಮೂಲಕ ಮನುಷ್ಯನು ತನ್ನ ದುಃಖವನ್ನು ನಿರೋಧಿಸಿಕೊಳ್ಳಬಹುದು. ಈ ಲೋಕದ ಎಲ್ಲ ವಸ್ತುಗಳು ಅಥವಾ ಸಂಘಟನೆಗಳು ತನ್ನಿಂದ ತಾನೆ ಉದ್ಭವಿಸುವುದಿಲ್ಲ. ಅವುಗಳು ಕಾರಣ ಮತ್ತು ಪರಿಸ್ಥಿತಿಗಳುಂಟಾದಾಗ ಉದಯಿಸುತ್ತವೆ ಆ ಕಾರಣ ಮತ್ತು ಪರಿಸ್ಥಿತಿಗಳು ಭಂಗವಾದಾಗ ಅವುಗಳು ಭಂಗ ಅಥವಾ ಲಯವಾಗುತ್ತವೆ. ಕೊನೆಗೆ ಶೂನ್ಯತೆಯೂ ಒಂದು ದೃಷ್ಟಿವಾದವಾಗದಂತೆ ನಾಗಾರ್ಜುನನು ಲೌಕಿಕರನ್ನು ಎಚ್ಚರಿಸುತ್ತಾನೆ. ಎಲ್ಲವೂ ಪರಸ್ಪರಾವಲಂಭಿಯಾದುದರಿಂದ, ಸಾಪೇಕ್ಷವಾದವುಗಳಾದ್ದರಿಂದ ಯಾವ ವಸ್ತುಗಳಿಗೂ ಸ್ವಭಾವವಿಲ್ಲ. ಇದನ್ನು ಪ್ರತೀತ್ಯ ಸಮುತ್ಪಾದ ಅಂದರೆ ಪರಸ್ಪರ ಅವಲಂಬನೆಯಲ್ಲಿನ ಲೌಕಿಕ ಸಂಗತಿಗಳು ಎಂದು ಕರೆಯಲಾಗುತ್ತದೆ.

ನಾಗಾರ್ಜುನನ ಶೂನ್ಯತಾ ಗ್ರಹಿಕೆಯನ್ನು ಮತ್ತು ಪ್ರತೀತ್ಯ ಸಮುತ್ಪಾದದ ವ್ಯಾಖಾನವನ್ನೂ ಬೂದಾಳರು ತುಂಬ ವಿಸ್ತೃತವಾಗಿ ಮತ್ತು ಆಳವಾಗಿ ಗಾಢವಾಗಿ ಆಪ್ತತೆಯಿಂದ ಕರುಣಾ-ಮೈತ್ರಿಯಿಂದ ಪ್ರಸ್ತುತಪಡಿಸಿದ್ದಾರೆ. ಶೂನ್ಯತೆ ಮತ್ತು ಪ್ರತೀತ್ಯ ಸಮತ್ಪಾದ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಭಗವಾನ್ ಬುದ್ಧರೇ ಒಂದೆಡೆ ಹೇಳುತ್ತಾರೆ:“ಧಮ್ಮವನ್ನು ಅರ್ಥಮಾಡಿಕೊಳ್ಳಬೇಕಿದ್ದರೆ ಪ್ರತೀತ್ಯ ಸಮತ್ಪಾದವನ್ನ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಯಾವನಿಂದಲೂ ದುಃಖ ನಿರೋಧ ಅಸಾಧ್ಯ.” ಈ ಗ್ರಂಥವು ಬೌದ್ಧಧರ್ಮದ ಅದರಲ್ಲಿಯೂ ವಿಶೇಷವಾಗಿ ನಾಗಾರ್ಜನ ಪ್ರಸ್ತುತಪಡಿಸಿದ ಶೂನ್ಯತೆಯ ಪ್ರಸ್ಥಾನವನ್ನು ಬೌದ್ಧಧರ್ಮದ ದರ್ಶನದ ಮರುವ್ಯಾಖ್ಯಾನವಾಗಿ ನಮ್ಮ ಮುಂದೆ ನಟರಾಜ ಬೂದಾಳು ಪ್ರಸ್ತುತ ಪಡಿಸಿದ್ದಾರೆ.

ಬೌದ್ಧ ದರ್ಶನವು `ಸಮ್ಯಕ್ ದೃಷ್ಟಿಯ ಕುರಿತು ಮುಖ್ಯವಾಗಿ ಮುಂದಿಡುತ್ತದೆ ಮತ್ತು ಆ ಕಾಲದಲ್ಲಿದ್ದ 62 ದರ್ಶನ ಪ್ರಸ್ಥಾನಗಳನ್ನು ಅವುಗಳದೆ ಕ್ಷೇತ್ರದಲ್ಲಿ ನಿಂತು ಹತಪಡಿಸುವ ಪ್ರಕ್ರಿಯೆಯನ್ನು ಅವುಗಳನ್ನು ಮಿಥ್ಯಾದೃಷ್ಟಿಕೋನವೆಂದು ನಿರಾಕರಿಸುತ್ತದೆ. ಆಗ ಪ್ರಚಲಿತವಿದ್ದ ಮಿಥ್ಯಾದೃಷ್ಟಿಕೋನಗಳು ಅಹೇತುವಾದ (ಕಾರಣವೇ ಇಲ್ಲ ಎನ್ನುವ ಮತ) ಇಸ್ಸರ ಕೃತವಾದಿ (ಎಲ್ಲದಕ್ಕೂ ದೇವರೇ ಕಾರಣ ಎನ್ನುವ ಮತ) ಪೂರ್ವಕೃತವಾದ (ಎಲ್ಲದಕ್ಕೂ ಹಿಂದಿನ ಜನ್ಮದ ಕರ್ಮಗಳೇ ಎನ್ನುವ ವಾದ), ಉಚ್ಛೇದವಾದ (ಪರಲೋಕವಿಲ್ಲ, ಎಲ್ಲವೂ ಸತ್ತ ನಂತರ ನಾಶ ಎನ್ನುವ ಮತ) ಕ್ಷತವಿಧಿವಾದ, ಶಾಶ್ವತ ಮಿಥ್ಯಾದೃಷ್ಟಿ, ಅಕ್ರಿಯ ಮಿಥ್ಯಾದೃಷ್ಟಿ, ನಾಸ್ತಿಕ ಮಿಥ್ಯಾದೃಷ್ಟಿ, ನಿಗಂಟನಾಥನ ಸಂಯಮವಾದ, ಆತ್ಮ ಅಮರ ಮತ್ತು ನಿತ್ಯ ಪರಿಶುದ್ಧ ಎನ್ನುವವರು, ತಾರ್ಕಿಕ ಮೀಮಾಂಸರು, ಲೋಕಾಯತಿಕರು ಈ ಎಲ್ಲ ಮಿಥ್ಯಾವಾದಗಳನ್ನು ನಿರಾಕರಿಸಿ ಇವೆಲ್ಲ ಅತಿರೇಕದ ದೃಷ್ಟಿಕೋನಗಳು ಎಂದು ಭಗವಾನ್ ಬುದ್ಧರು ಖಂಡಿಸುತ್ತಾರೆ.

ಇವೆಲ್ಲವೂ ಅತಿರೇಕ ಮಿಥ್ಯಾವಾದಗಳು. ಅತಿರೇಕಗಳ ಮೀರಿದ ಸತ್ಯದ ಮಧ್ಯಮ ಮಾರ್ಗವನ್ನು ಹೀಗೆ ಬೋಧಿಸುತ್ತಾರೆ: ಅಜ್ಞಾನದಿಂದ ಸಂಖಾರಗಳು (ಚಿತ್ತದ ಚಟುವಟಿಕೆಗಳು) ಉಂಟಾಗುತ್ತವೆ. ಸಂಖಾರಗಳಿಂದ ವಿಜ್ಞಾನವು (ಅರಿವು) ಉಂಟಾಗುತ್ತದೆ. ವಿಜ್ಞಾನದಿಂದ ನಾಮರೂಪಗಳು (ಮನಸ್ಸು ಮತ್ತು ದೇಹ) ಉಂಟಾಗುತ್ತದೆ. ನಾನಮರೂಪದಿಂದ ಷಡಾಯತನ (ಆರು ಇಂದ್ರಿಯ ಆಧಾರಗಳು) ಉಂಟಾಗುತ್ತವೆ. ಆರು ಇಂದ್ರಿಂ ಆಧಾರಗಳಿಂದ ಸ್ಪರ್ಶ ಉಂಟಾಗುತ್ತದೆ. ಸ್ಪರ್ಶದಿಂದ ವೇದನೆಗಳು ಉಂಟಾಗುತ್ತವೆ. ವೇದನೆಗಳಿಂದ ತನ್ಹಾ (ತೃಷ್ಣೆ) ಉಂಟಾಗುತ್ತದೆ. ತೃಷ್ಣೆಯಿಂದ ಅಂಟುವಿಕೆ ಉಂಟಾಗುತ್ತದೆ. ಅಂಟುವಿಕೆಯಿಂದ ಭವ ಉಂಟಾಗುತ್ತದೆ. ಭವದಿಂದ ಜನ್ಮ ಉಂಟಾಗುತ್ತದೆ. ಜನ್ಮದಿಂದ ದುಖರಾಶಿ ಉಂಟಾಗುತ್ತದೆ.

ಆದರೆ ಅಜ್ಞಾನದ ನಿರೋಧದಿಂದ ಸಂಖಾರಗಳ ನಿರೋಧವಾಗುತ್ತದೆ. ಸಂಖಾರಗಳ ನಿರೋಧದಿಂದ ವಿಜ್ಞಾನದ ನಿರೋಧವಾಗುತ್ತದೆ. ವಿಜ್ಞಾನದ ನಿರೋಧದಿಂದ ನಾಮರೂಪ ನಿರೋಧವಾಗುತ್ತದೆ. ನಾಮರೂಪ ನಿರೋಧದಿಂದ ಆರು ಇಂದ್ರಿಯಗಳು ನಿರೋಧವಾಗುತ್ತವೆ. ಆರು ಇಂದ್ರಿಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ. ಸ್ಪರ್ಶದ ನಿರೋಧದಿಂದ ವೇದನೆಗಳ ನಿರೋಧ ಆಗುತ್ತದೆ. ವೇದನೆಗಳ ನಿರೋಧದಿಂದ ತನ್ಹಾದ ನಿರೋಧವಾಗುತ್ತದೆ. ತನ್ಹಾದ ನಿರೋಧದಿಂದ ಅಂಟುವಿಕೆಯು ನಿರೋಧವಾಗುತ್ತದೆ. ಅಂಟುವಿಕೆಯ ನಿರೋಧದಿಂದ ಭವದ ನಿರೋಧವಾಗುತ್ತದೆ. ಭವದ ನಿರೋಧದಿಂದ ಜನ್ಮದ ನಿರೋಧವಾಗುತ್ತದೆ. ಜನ್ಮದ ನಿರೋಧದಿಂದ ದುಃಖರಾಶಿಯು ನಿರೋಧವಾಗುತ್ತದೆ.”

ಇದು ಪ್ರತೀತ್ಯ ಸಮುತ್ಪಾದದ ವಿವರಣೆ. ಯಾಕೆಂದರೆ ಈ ಜಗತ್ತು ದುಃಖಮಯ. ಈ ದುಃಖಗಳನ್ನು ನಿರೋಧಿಸುವುದೆ ಬೌದ್ಧದರ್ಶನದ ಧ್ಯೇಯವಾಗಿದೆ.
ಸಮ್ಯಕ್ ದೃಷ್ಟಿಯೆಂದರೆ ಯೋಗ್ಯವಾದ ಸರಿಯಾದ ರೀತಿಯಲ್ಲಿ ಅರಿಯುವಿಕೆ. ಅಂದರೆ ಆರ್ಯ ಸತ್ಯಗಳ ಯತಾರ್ಥ ಜ್ಞಾನ. ಯಾರು ಅಷ್ಟಾಂಗ ಮಾರ್ಗವನ್ನು ಸಾಧಿಸುವನೊ ಆತನು ನಿಬ್ಬಾಣವನ್ನು ಸಾಧಿಸುತ್ತಾನೆ. ಸಮ್ಮಾ ದೃಷ್ಟಿಯ ಲಕ್ಷಣವೇನೆಂದರೆ ಸತ್ಯ ಅದು ಇರುವಂತೆಯೆ ಕಾಣುವುದಾಗಿದೆ. ತೋರಿಕೆಯ ಸತ್ಯ ಮೀರಿ ಯಥಾರ್ಥ ಸತ್ಯ ಅರಿಯುವುದಾಗಿದೆ. ಸಮ್ಮಾ ದಿಟ್ಟಿಯ ಕ್ರಿಯೆ ಏನೆಂದರೆ ಸತ್ಯವನ್ನು ಪ್ರಕಾಶಿಸುವುದು. ಇದು ಅಜ್ಞಾನದ ಅಥವಾ ಮಿಯಾದೃಷ್ಟಿಯ ನಾಶದಿಂದ ಸ್ಥಾಪಿತವಾಗುತ್ತದೆ.

ಹೀಗೆ ಸಿದ್ಧಾಂತಗಳಿಗೆ ಅಂಟಿಕೊಂಡು ಬಂಧಿತರಾಗುತ್ತಾರೆ. ಮತ್ತು ಯಾರು ಸಿದ್ಧಾಂತಗಳಿಗೆ ಅಂಟಿಕೊಳ್ಳುವುದಲ್ಲವೋ, ಪೂವರ್ಾಗ್ರಹ ಪೀಡಿತರಾಗುವುದಿಲ್ಲವೋ, ಪಕ್ಷಪಾತರಹಿತರೋ, ಅವರು `ಇದು ನನ್ನ ಆತ್ಮ’ ಎಂದು ತೀರ್ಮಾನಿಸುವುದಿಲ್ಲ. ಅವರು `ದುಃಖವು ಉದಯಿಸಿದೆ’ ಮತ್ತು `ದುಃಖವು ಅಳಿಯುತ್ತಿದೆ’ ಎಂದು ವೀಕ್ಷಿಸುತ್ತಾರೆ. ಅಂತಹವನು ಸಂಶಕ್ಕೆ ಬೀಳಲಾರ, ದ್ವಂದ್ವಕ್ಕೆ ಸಿಲುಕಲಾರ, ಇದು ಸಮ್ಮಾದಿಟ್ಟಿ ಎನಿಸುತ್ತದೆ.
“ಪ್ರತಿಯೊಂದು ಇದೆ (ಅಸ್ತಿತ್ವದಲ್ಲಿದೆ) ಇದು ಒಂದು ಅತಿರೇಕ, ಹಾಗೆಯೇ ಯಾವುದೂ ಇಲ್ಲ (ಅಸ್ತಿತ್ವದಲ್ಲಿಲ್ಲ) ಇದು ಇನ್ನೊಂದು ಅತಿರೇಕವಾಗಿದೆ. ಆದ್ದರಿಂದ ತಥಾಗತರು ಮಧ್ಯಮ ಮಾರ್ಗವನ್ನು ಬೋಧಿಸಿದ್ದಾರೆ. ಅದುವೆ ಪ್ರತೀತ್ಯ ಸಮುತ್ಪಾದ ಅಥವಾ ಶೂನ್ಯತೆ.

ಈ ಶೂನ್ಯತೆ ಅಥವಾ ಪ್ರತೀತ್ಯ ಸಮುತ್ಪಾದವನ್ನು ಮಂಡಿಸುವಾಗ ನಾಗಾರ್ಜುನನು ಎದುರಿಸಿದ 62 ದರ್ಶನ ಪ್ರಸ್ಥಾನಗಳನ್ನು ಅವನು ನಿವಾರಿಸಿಕೊಳ್ಳಬೇಕಿತ್ತು. ಸಾಂಖ್ಯರು, ವೇದ ಪ್ರಾಮಣ್ಯವನ್ನು ವೇದಗಳ ಅಪೌರುಷತೆಯನ್ನು ಮಂಡಿಸುವವರು, ಸೌತಾಂತ್ರಿಕರು, ನಿಗಂಠನಾಥರು, ಆತ್ಮವಾದಿಗಳು ಶಾಶ್ವತವಾದಿಗಳು, ನಾಸ್ತಿಕವಾದಿಗಳು ಆಸ್ತಿಕವಾದಿಗಳು ಈಶ್ವರತ್ವವಾದಿಗಳು ಈ ಮೊದಲಾದ ದಾರ್ಶನಿಕ ಪ್ರಸ್ಥಾನಗಳನ್ನು ನಾಗಾರ್ಜುನನು ಅವರವರ ಕ್ಷೇತ್ರದ ನೆಲೆಯಲ್ಲಿಯೇ ನಿಂತು ಅವರ ವಾದಗಳ ಅಸಾಂಗತ್ಯವನ್ನು ಮಂಡಿಸಿ ಹತಗೊಳಿಸಿಬಿಡುವುದು ಅವನ ತಾರ್ಕಿಕ ತಂತ್ರವಾಗಿದೆ. ನಾಗಾರ್ಜುನನು ಈ ಎಲ್ಲ ವಾದಗಳನ್ನು ಅವರ ನೆಲೆಯಲ್ಲಿಯೇ ನಿಂತು ಅವರ ಮಿಥ್ಯಾದೃಷ್ಟಿಯನ್ನು ನಿವಾರಿಸುತ್ತಾನೆ.

allamaಇದನ್ನು ಬೂದಾಳರು `ಪ್ರಕ್ರಿಯಾ ಮೀಮಾಂಸೆ’ ಎಂದು ಕರೆಯುತ್ತಾರೆ. ಅವರೆ ಬರೆದಂತೆ ಬೂದಾಳರು ಕ್ರಿಯೇಟಿವ್ ಮಿಸರೀಡಿಂಗ್ ನ ( ಲೋಕಾನುಭವವನ್ನು ಎದುರಿಸುವ ಭಿನ್ನ ಕ್ರಮ) ಪರಿಣಾಮವಾಗಿ ಈ ನಾಗಾರ್ಜುನನ ಮಧ್ಯಮಕಾರಿಕೆ ಮತ್ತು ಅಲ್ಲಮಪ್ರಭುವ ಬಯಲು ಅಥವಾ ಶೂನ್ಯತೆಯು ನಿಕಷಕ್ಕೊಳಪಡಿಸಲಾಗಿದೆ. ತನ್ನ ಸಂಶೋಧನೆಯ ಮಾರ್ಗವು ವಿಭಿನ್ನ. ಇದು ಸತ್ಯ ಸಂಶೋಧನೆಯಲ್ಲ ಆದರೆ ಸತ್ಯವನ್ನು ಕಟ್ಟುವ ಕೆಲಸ. ಸತ್ಯವು ಕಟ್ಟಬೇಕಾದ್ದೇ ವಿನಹ ಶೋಧಿಸಬೇಕಾದ್ದಲ್ಲ. ಇದು ಬೂದಾಳರ ನಿಲುವು. ಈ ಲೋಕ ಅಥವಾ ಜಗತ್ತಿನ ವ್ಯವಹಾರವು ನಿರಂತರ ಪ್ರವಾಹರೂಪದಲ್ಲಿ ಹರಿಯುವಂಥದ್ದಾಗಿದೆ. ಅದು ಸ್ಥಿರವಲ್ಲ ಶಾಶ್ವತವಲ್ಲ. ಸದಾ ಬದಲಾಗುವಂಥದ್ದು. ಪರಿಸ್ಥಿತಿ ಮತ್ತು ಕಾರಣಗಳೊಳಪಟ್ಟು ನಡೆಯುವ ಪ್ರಕ್ರಿಯೆ ಈ ಸಂಸಾರವಾಗಿದೆ.

ಪ್ರಕ್ರಿಯಾ ಮೀಮಾಂಸೆ ಎಂದರೆ `ಲೋಕವನ್ನು ನಿರಂತರ ಪ್ರವಾಹವನ್ನಾಗಿ ವಿವರಿಸುವ ಒಂದು ಕ್ರಮ. ಎಲ್ಲವೂ ಸದಾ ಚಲನೆಯಲ್ಲಿಯೇ ಇರುವುದರಿಂದ ಸ್ಥಿತ ಸಂಗತಿಯೆಂಬುದೇ ಇಲ್ಲವೆನ್ನುವುದು, ಕಾರಣ, ಅವಸ್ಥೆಮತ್ತು ಪರಿಣಾಮಗಳ ಸಂಬಂಧದಲ್ಲಿ ಉಂಟಾಗುವ ಪ್ರಕ್ರಿಯೆ.” “ಲೋಕದಲ್ಲಿ ಆಗಿ ಇರುವುದು ಯಾವುದೂ ಇಲ್ಲ. ಎಲ್ಲವೂ ಆಗುತ್ತಲೇ ಇರುವ ಪ್ರವಾಹ ಮಾತ್ರ. ಅವೆಲ್ಲ ಕಾರಣ ಮತ್ತು ಪರಿಸ್ಥಿತಿಗಳ ಸಂಯೋಜನೆಯಲ್ಲಿ ಉಂಟಾಗುತ್ತಿರುವ ಪರಿಣಾಮಗಳು. ಲೋಕವೆಲ್ಲವೂ ಕಾರಣ-ಪ್ರತ್ಯಯಗಳ ಸಂಬಂಧದಲ್ಲಿ ಉಂಟಾದ ಫಲ. ವಸ್ತುವೆಂಬ ಸಿದ್ಧ ಸ್ಥಿತಿಯನ್ನು ಎಂದೂ ತಲುಪದೆ ಪ್ರವಾಹರೂಪೀ ವಿದ್ಯಮಾನದ ವಿವರಣೆ. ಇದೊಂದು ನಿರಂತರ ಚಲಿಸುತ್ತಲೇ ಇರುವ ಪ್ರವಾಹ. ಇಲ್ಲಿನ ಯಾವುದಕ್ಕೂ ಸ್ವತಂತ್ರ ಅಸ್ತಿತ್ವವೂ ಇಲ್ಲ, ಶಾಶ್ವತ ಅಸ್ತಿತ್ವವೂ ಇಲ್ಲ ಎಂಬ ನಿಲುವನ್ನಾಧರಿಸಿದ ಲೋಕವಿವರಣೆ.’ ಇದೆ ಪ್ರಕ್ರಿಯಾ ಮೀಮಾಂಸದ ಅಡಿಯಲ್ಲಿಯೆ ನಾಗಾಜರ್ುನನ ಶೂನ್ಯತೆಯೂ ಮತ್ತು ಅಲ್ಲಮನ ಬಯಲೂ ವಿಸಜರ್ಿತಗೊಂಡಿವೆ.

ಅಲ್ಲಮನ ಅವತಾರವಾದ ಮಂಟೇಸ್ವಾಮಿ ಕಾವ್ಯದ ಮರು ಓದನ್ನು ಹೀಗೆ ಬೂದಾಳರು ಪ್ರಸ್ತುತಪಡಿಸುತ್ತಾರೆ:“ ಈಗಾಲೇ ಹೇಳಿದಂತೆ ಜಗತ್ತು ಸೃಷ್ಟಿಯನ್ನು ತನ್ನಿಂದಲೇ ಆಗುವುದನ್ನಾಗಲೀ, ಪರದಿಂದ ಆಗುವುದನ್ನಾಗಲೀ, ಅವೆರಡರಿಂದುಂಟಾಗಲಾಗಲೀ, ಬಿಡದೆ ಆ ಕ್ಷಣದ ಜ್ಯೋತಿಗೆ ಜಗತ್ತಿನ ಉತ್ಪತ್ತಿಯ ಕಾರಣವನ್ನು ಆರೋಪಿಸಲಾಗಿದೆ. ಈ ಜ್ಯೋತಿಗೆ ಆರೋಪಿಸಲು ಸಾಧ್ಯವಿರುವ ಪಾವಿತ್ರ್ಯವನ್ನು ಇಚ್ಛಾಪೂರ್ವಕವಾಗಿ ನಿರಸನಗೊಳಿಸಲಾಗಿದೆ. ಅದನ್ನು ಹಾದಿಯೊಳಗೆ ಬೀದಿಯೊಳಗೆ, ಅಂಗೈಲಿ-ಮುಂಗೈಲಿ ಇಡುವುದರ ಮೂಲಕ ಅದನ್ನು ಕಾಲಮುಕ್ತಗೊಳಿಸಲಾಗಿದೆ. ಅದನ್ನು ನಿರಂತರ ವರ್ತಮಾನದ ಪ್ರವಾಹರೂಪಿ ಶಕ್ತಿಯನ್ನಾಗಿ ನಿರೂಪಿಸಲಾಗಿದೆ.” ಈ ಪ್ರಕ್ರಿಯಾ ಮೀಮಾಂಸವು ಮಂಟೇಸ್ವಾಮಿ ಕಾವ್ಯದ ಶೂನ್ಯತಾ ಗ್ರಹಿಕೆಗೆ ಸಮನಾಗಿದೆ ಎಂದು ಬೂದಾಳರು ತರ್ಕಿಸುತ್ತಾರೆ.

ನಾಗಾರ್ಜುನನ ಎಲ್ಲ ಗ್ರಹಿಕೆಗಳ ಬೇರು ಬೌದ್ಧ ತ್ರಿಪಿಟಿಕೆಗಳಲ್ಲಿ ಅಡಕವಾಗಿವೆ. ವಿ ಚಂದ್ರಶೇಖರ ನಂಗಲಿಯವರು ತಮ್ಮ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ:“ಇಂಥ ಅಧ್ಯಯನಕ್ಕೆ ನಟರಾಜ ಬೂದಾಳರು ಮೊದಲಿಗರಾದರೂ ಚಿಂತನಾ ಪ್ರಸ್ಥಾನವನ್ನು `ಚಾರ್ವಾಕ, ಮಕ್ಖಲಿ ಗೋಶಾಲರಿಂದ ಹಿಡಿದು ಶರೀಫನವರೆಗೆ”…ಪ್ರಕ್ರಿಯಾತ್ಮಕವಾಗಿ ಮನಗಂಡಿರುವುದರಿಂದ ಮೊದಲಗೆಟ್ಟು ಅಂತೆಯೇ ಕೊನೆಗೆಟ್ಟ ಸಂಶೋಧನೆಯನ್ನು ನಮ್ಮ ಮುಂದಿಟ್ಟಿದ್ದಾರೆ.(-ಇಲ್ಲಿ ಯಾವುದಕ್ಕೂ ಮೊದಲಿಲ್ಲ; ಯಾವುದಕ್ಕೂ ತುದಿಯಿಲ್ಲ; ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆ ಮುಟ್ಟುವುದೂ ಇಲ್ಲ.

“ತತ್ವಜ್ಞಾನ” ಕ್ಷೇತ್ರಕ್ಕೆ ಮೊದಲ ಪ್ರವೇಶ ಮಾಡುವವರು ತುಂಬ ಸೂಕ್ಷ್ಮಮತಿಯಾಗಿರಬೇಕು. ಜೊತೆಗೆ ನರಂಕುಶಮತಿಯೂ ಆಗಿರಬೇಕು….ಕೊನೆಗೆಡುತ್ತ ಹೇಳುವುದಾದರೆ, ಪ್ರಕ್ರಿಯಾ ಮೀಮಾಂಸೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಗೆಳೆಯ ನಟರಾಜ ಬೂದಾಳು ನಡೆಸಿದ ಮತ್ತು ನಡೆಸತ್ತಿರುವ ಅಧ್ಯಯನಗಳು ಕನ್ನಡಕ್ಕೆ ಬಹುದೊಡ್ಡ ಕಾಣಿಕೆಯಾಗಿದೆ.” ಇದನ್ನು ಒಪ್ಪಿಕೊಳ್ಳುತ್ತ ಇಂಥ ಕಣ್ಮರೆಯಾಗಬಹುದಾದ ನಾಗಾರ್ಜನನ ಮಧ್ಯಮಕಾರಿಕೆಯ ಶೂನ್ಯತಾವನ್ನು ಪಾಶ್ಚಾತ್ಯ ತಾತ್ವಿಕರಾದ ಡೆರಿಡಾ ಅಂಥವರಿಗೆ ಸರಿಸಾಟಿಯಾಗಿ ಅಥವಾ ಮಿಗಿಲಾಗಿ ನಿಲ್ಲಬಲ್ಲ ತಾತ್ವಿಕತೆಯಾಗಿದೆ ಎಂದ ಮೊದಲಗೆಟ್ಟ ಈ ಸಂಶೋಧನೆಗೆ ನನ್ನ ಪ್ರಕ್ರಿಯಾ ಮೀಮಾಂಸೆ ನಿಕಷಕ್ಕೆ ಒಡ್ಡುವಷ್ಟು ವಿದ್ವಾಂಸನು ನಾನಲ್ಲ ಎಂದು ವಿನಯದಿಂದ ಒಪ್ಪಿಕೊಳ್ಳುತ್ತೇನೆ.

`ಮಾಧ್ಯಮಿಕವಾದ ಅಥವಾ ಪ್ರತೀತ್ಯ ಸಮುತ್ಪಾದ ಅಥವ ಶೂನ್ಯತೆಯ ಅಧ್ಯಯನಕ್ಕೆ ಸಾಂಪ್ರದಾಯಿಕ ಅಧ್ಯಯನ ವಿಧಾನಗಳು ಒದಗಿ ಬರಲಾರವು. ಲೋಕವಿವರಣೆಗೆ ಸರಿಯಾದ ನಿಲುವನ್ನು (ಸಮ್ಯಕ್ ದೃಷ್ಟಿ) ದೊರಕಿಸಿಕೊಡುವುದೇ ಮಾಧ್ಯಮಿಕತತ್ವದ ಪ್ರಧಾನ ಗುರಿಯಾಗಿರುವುದರಿಂದ ಅಂತಹ ದೃಷ್ಟಿವಾದದ ಶೋಧನೆಯನ್ನು ಅದು ನಡೆಸುತ್ತದೆ. ಹಾಗಾಗಿ ಇದು ಶೋಧನೆಯೂ ಹೌದು, ಶೋಧನೆಯ ಮಾರ್ಗವೂ ಹೌದು. ಸಮ್ಯಕ್ ದೃಷ್ಟಿಯ ಅಸ್ತಿತ್ವವಾದ ಮತ್ತು ನಾಸ್ತಿತ್ವವಾದವ್ನಾಧರಿಸಿದ ಎಲ್ಲ ದೃಷ್ಟಿವಾದಗಳನ್ನು ನಿರಾಕರಿಸುವುದರಿಂದ ಮತ್ತು ತಾನೇ ಒಂದು ದೃಷ್ಟಿವಾಗಿ ನಿಲ್ಲದಿರುವುದರಿಂದ, ಹೊಸದೊಂದು ಅಧ್ಯಯನಾ ವಿಧಾನವನ್ನು ರೂಪಿಸಿಕೊಂಡೇ ಅಧ್ಯನದಲ್ಲಿ ತೊಡಗಬೇಕಿದೆ.” ಈ ಎಚ್ಚರದಲ್ಲಿ ಈ ಕೃತಿ ನಿರ್ಮಿತಗೊಂಡಿದೆ.

‍ಲೇಖಕರು Admin

June 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Girijashastru

    ನಟರಾಜ ಬೂದಾಳು ಅವರ ಈ ಕೃತಿಯನ್ನು ಓದುವ ಹಂಬಲ ಹೆಚ್ಚಾಗಿದೆ. ಈ ಪುಸ್ತಕ ಎಲ್ಲಿ ಸಿಗುತ್ತದೆ? ಉದಯಕುಮಾರ್ ಹಬ್ಬು ಒಳ್ಳೆಯ. ಪರಿಚಯ ಮಾಡಿಸಿದ್ದೀರಿ. D. R.N ಗುರುಗಳು ನೆನಪಾಗುತ್ತಾರೆ. ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: