ಋತು ಚಕ್ರ
ಶ್ರೀದೇವಿ ಕೆರೆಮನೆ
ಮಿಲಿ ಮಿಲಿ ನೋವು
ಕಿಬ್ಬೊಟ್ಟೆಯ ಸಂದಿಯಲ್ಲೋ
ಹೊಕ್ಕುಳ ಶಂಕು ಸುಳಿಲ್ಲೋ…..
ಸೊಂಟವಂತೂ ಸಿಕ್ಕಿಕೊಂಡೇ ಬಿಟ್ಟಿದೆ
ಆ ಕಡೆ, ಈ ಕಡೆ
ತಿರುಗಿಸಲೂ ಆಗದ ವೇದನೆ
ಬೆನ್ನಂತೂ ಕೇಳುವುದೇ ಬೇಡ
ಶಿರದಿಂದ ಬುಡದವರೆಗೂ
ಬೆನ್ನುಹುರಿಯ ಮುಲುಗಾಟ
ಅಮ್ಮಾ ಸ್ವಲ್ಪ ಬೆನ್ನು ಒತ್ತುತ್ತೀಯಾ?
ಮದುವೆ ಆದ ಮೇಲಂತೂ
ಅದು ಬೇರೆಯದ್ದೇ ಕತೆ
ಹೇಳಿ ಮುಗಿಯುವಂತಹುದ್ದಲ್ಲ,
ಕೇಳಿ ತಣಿಯುವಂತಹುದ್ದಲ್ಲ
ಈ ಸಹಿಸಲಾಗದ ಬೇನೆಗೆ
ಮತ್ತೆಂತಹುದ್ದೋ ಯಾತನೆ
ಹೊಟ್ಟೆ, ಕೈ-ಕಾಲು,
ಕಣ್ಣು ತುಟಿ, ಮೊಲೆ
ಎಲ್ಲವೂ ಕಳುಚಿ ಬಿದ್ದ ಭಾವನೆ
ಆದರೆ ಗರ್ಭದಲ್ಲಿ ಕುಡಿಯೊಡೆದು
ಮೆಲ್ಲಗೆ ಪಿಸುಗುಡುವ ಪಿಂಡ
ಒಮ್ಮೆಲೆ ಈ ನೋವನ್ನೆಲ್ಲ
ನಿಲ್ಲಿಸಿಯೇ ಬಿಟ್ಟಾಗ
ಎಂತಹುದ್ದೋ ಸಮಾಧಾನ
‘ಅಬ್ಬಾ ಎಲ್ಲಾ ಮುಗಿಯಿತಲ್ಲ
ಎಂಬ ಭ್ರಮಾ ಸಂತೈಕೆ’
ಮಗನಿಗೀಗ ಒಂಬತ್ತು ತಿಂಗಳು
ಯಾಕೋ ಹೊಟ್ಟೆ ಹಿಂಡಿದಂತಾಗುತ್ತಿದೆ
ಸೊಂಟಕ್ಕೆ ಶಕ್ತಿಯೇ ಇಲ್ಲ
ಬೆನ್ನಂತೂ ನೋವಿನ ಆಗರ
ಕಿಬ್ಬೊಟ್ಟೆಗೆ ಯಾರೋ ಚೂರಿ ಇರಿದು
ನೋವುಂಟು ಮಾಡಿದ ವೇದನೆ
ಅಯ್ಯೋ ಶುರುವಾಗೇ ಬಿಟ್ಟಿತೇ
ವರ್ಷದ ಮೇಲೆ ಮತ್ತಾರು ತಿಂಗಳು
ಮರೆತು ಹೋದ ಕೆನ್ನೀರ ಧಾರೆ
ಈಗ, ಮತ್ತದೇ ಮಾಮೂಲಿ ಕತೆ
ರೀ ಸ್ವಲ್ಪ ಬೆನ್ನು ಒತ್ತುತ್ತೀರಾ..?







ಮೌನವೇ ಪ್ರತಿಕ್ರಿಯೆ. ಭೂಮಿತಾಯಿಯ ನೋವನ್ನೇ ಬಿಡಿಸಿಟ್ಟಂತೆ. ಬದುಕಿನ ಬಣ್ಣಗಳು ಸಹ ನೋವಿನಿಂದ ಹುಟ್ಟಿರುತ್ತವೆ.
Thank u
ಬೆನ್ನು ನೋವಿನ ಮೂಲಕ ಬೇರೆಯದೇ ಭಾವ ಕಟ್ಟಿಕೊಟ್ಟಿದ್ದು ….ಚೆನ್ನಾಗಿದೆ.
ಹೆಣ್ಣು ಮಾತ್ರ ಇದನ್ನು ಸಂವೇದಿಸಬಲ್ಲಳು.
nice..
Nice….poetic description of dysmenorrhoea
Madam,
hennina nvannu katti kottiddira.
bennu novu nepadalli..enella kashta paduttale hennu jeeva.
-akuva