ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ನನ್ನ ಬದುಕು ನನ್ನದೇ..

ರಾಗಿ-ರಾಗಿಣಿ (ಕ್ರಾನಿಕಲ್ಸ್ ಫ್ರಂ ಅಜ್ಜೀಸ್ ಕಿಚನ್): ಒಂದು ರಾಗಾನುಸಂಧಾನ

girija shastri ಮುಂಬಯಿಯಿಂದ  ಗಿರಿಜಾಶಾಸ್ತ್ರಿ 

‘ರಾಗಿ-ರಾಗಿಣಿ’ ಮುಂಬಯಿ ನಿವಾಸಿಯಾದ ಅಂಜಲಿ ಪುರೋಹಿತ್ ಅವರ ಒಂದು ಪುಟ್ಟ ಕೃತಿ. ಪ್ರತಿಭಾವಂತ ಆಂಗ್ಲಭಾಷಾ ಲೇಖಕಿ ಹಾಗೂ ಚಿತ್ರಕಲಾವಿದೆಯಾದ ಅಂಜಲಿಯವರು, ಕವಿಗಳು ಮತ್ತು ಲೇಖಕರು ತಮ್ಮ ಕೃತಿಗಳನ್ನು ಓದಿ, ಚರ್ಚಿಸಲು ಅನುವಾಗುವಂತಹ ಸಾಹಿತ್ಯಕ ಕೆಫೆ ಸಂಸ್ಕೃತಿಯನ್ನು ಬೆಳೆಸುವ ಸಲುವಾಗಿ ಮುಂಬಯಿಯಲ್ಲಿ, ‘ಕಾಪುಚೀನೋ ರೀಡಿಂಗ್ಸ್’ ಎಂಬ ಕಾಫಿ ಶಾಪ್ ವೇದಿಕೆಯನ್ನು ಸ್ಥಾಪಿಸಿದ್ದಾರೆ.

‘ರಾಗಿ-ರಾಗಿಣಿ’, ಇದು ಲೇಖಕಿಯ, ‘ಅಜ್ಜಿಯ ಅಡುಗೆ ಮನೆಯ ಆಖ್ಯಾನ’, ಎನ್ನುವುದನ್ನು ‘ಕ್ರಾನಿಕಲ್ಸ್ ಫ್ರಂ ಅಜ್ಜೀಸ್ ಕಿಚನ್’ ಎಂದು ಈ ಕೃತಿಗೆ ಕೊಟ್ಟಿರುವ ಉಪಶೀರ್ಷಿಕೆಯೇ ಹೇಳುತ್ತದೆ. ಅಂಜಲಿ ತಮ್ಮ ಪುಸ್ತಕದ ಮುಖಪುಟದಲ್ಲಿ ತಾವೇ ಚಿತ್ರಿಸಿರುವ ಈಳಿಗೆ ಮಣೆ, ಕುಟ್ಟಾಣಿ ಮತ್ತು ಜರಡಿ, ಹಾಗೂ ಅದರ ಹಿನ್ನೆಲೆಗೆ ಅರ್ಧ ಬಿಡಿಸಿದ ರಂಗೋಲಿಯ ಕಪ್ಪು ಬಿಳುಪಿನ ಚಿತ್ರಗಳು, ಇವೆಲ್ಲವೂ ಅಜ್ಜಿಯ ಆಖ್ಯಾನವನ್ನು ಸಂಕೇತಿಸುತ್ತವೆ. ಮಹಾರಾಷ್ಟ್ರದ ಕೊಂಕಣ ಪ್ರಾಂತ್ಯದ ‘ಪಾರ್ವಿ’ ಎಂಬ ಹಳ್ಳಿಯ ಕ್ಯಾನ್ವಾಸಿನ ಮೇಲೆ ಅಜ್ಜಿಯ ಅಡುಗೆಮನೆಯನ್ನು ಅದಕ್ಕೆ ಅಂಟಿಕೊಂಡಿರುವ ಸಾಂಸ್ಕೃತಿಕ ನೆನಪುಗಳನ್ನೂ ರಚಿಸಲಾಗಿದೆ. ಮನೆಯಾಚೆಗಿನ ಪ್ರಪಂಚವೆನ್ನುವುದು ಅಡುಗೆಮನೆಯ ನಿಯಂತ್ರಣಕ್ಕೆ ಸಿಕ್ಕಿಯೂ ಸಿಗದಂತೆ ಕಾಣಿಸಿರುವ, ಅದನ್ನು ಅಲಕ್ಷಿಸಿರುವ ನಮ್ಮ ಪಿತೃಸಂಸ್ಕೃತಿಯ ಉಪಾಯಗಳನ್ನೂ ಇಲ್ಲಿ ಬಹಳ ಸರಳವಾಗಿ, ನೇರವಾಗಿ ಸೆರೆಹಿಡಿಯಲಾಗಿದೆ.

ragi_raginiಈ ಕತೆಯ ನಾಯಕಿಯೆಂದರೆ ರಾಗಿಯೇ. ಅಂದರೆ, ಅದರ ತದ್ವತ್ ರೂಪವಾದ ‘ರಾಗಿಣಿ’. ‘ರಾಗಿಣಿ’ ಎಂಬ ಮೊದಲ ಅಧ್ಯಾಯದಲ್ಲಿ ಬರುವ ಸಾಲುಗಳು ಇವು- ‘ನನ್ನ ಹೆಸರು ರಾಗಿಣಿ, ಇಂದು ರಾಗಿಯ ಜೊತೆಗಿನ ನನ್ನ ಪ್ರೇಮ ಸಂಬಂಧವನ್ನು ಬಯಲಾಗಿಸಲೇಬೇಕು. ಹಾಗೆ ನೋಡಿದರೆ ಪ್ರೇಮವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದು ಕಣ್ಣುಗಳ ಹೊಳಪಿನ, ಕೆನ್ನೆಗಳ ಮಿಂಚಿನ, ನಡಿಗೆಯಲ್ಲಿನ ಜಿಗಿತಗಳ ಮೂಲಕ ತನ್ನನ್ನು ತಾನು ವ್ಯಕ್ತಪಡಿಸಿಕೊಂಡು ಬಿಡುತ್ತದೆ. ರಾಗಿಯ ಮೇಲಿನ ನನ್ನ ಪ್ರೇಮ ನನಗೆ ಮಾಡಿದ್ದೂ ಇದುವೇ. ರಾಗಿಯ ಜೊತೆಗಿನ ಪ್ರೇಮ ಎನ್ನವುದು ಲೇಖಕಿಗೆ ಕೇವಲ ದೇಹಕ್ಕೆ ಸಂಬಂಧಿಸುದುದಲ್ಲ. ಅದರ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ರಾಗಿ ಎಂದರೆ ಲೇಖಕಿಗೆ ಹಿಡಿಯಿಂದ ಜಾರಿಹೋಗುವ ಕೇವಲ ಭೌತಿಕ ವಸ್ತುವಲ್ಲ. ಅದೆಂದರೆ , ತನ್ನ ಹಳ್ಳಿ ಪಾರ್ವಿ, ಮನೆಯ ತಂಪಾದ ಕತ್ತಲ ಅಂಗಳ, ಬಾವಿ, ಬೀಸುವ ಕಲ್ಲು, ಅಜ್ಜಿ, ಮಾಸಿ, ಆಯಿ, ಶಾಲೆ, ರೇಗೆ ಮಾಸ್ತರ್ ಮುಂತಾದವುಗಳೊಟ್ಟಿಗೆ ಹೊಂದಿರುವಂತಹ, ಹಳ್ಳಿಯ ಸರಳ ಸಾಮುದಾಯಕ ಬದುಕಿನ ಪ್ರೀತಿ.

ಪಾರ್ವಿ ಹಳ್ಳಿಯಲ್ಲ್ಲಿ ಪ್ರತಿ ಮುಂಜಾನೆ, ಕತ್ತಲು ಕತ್ತಲಾದ ತಣ್ಣಗಿನ ಅಂಗಳದಲ್ಲಿ, ಬಾವಿಯ ರಾಟೆಯ ಸದ್ದಿನೊಂದಿಗೆ ಪುಟ್ಟ ರಾಗಿಣಿಗೆ ಎಚ್ಚರವಾಗುತ್ತದೆ. ಅದು ಆಕೆಗೆ ಲಯಬದ್ಧ ಸಂಗೀತದಂತೆ ಕೇಳಿಸುತ್ತದೆ. ಬೆಳಗಿನ ವಿಧಿಗಳೆಲ್ಲಾ ಮುಗಿದ ಮೇಲೆ ಆಕೆಯ ಅಜ್ಜಿ ಹಾಗೂ ಮಾಸಿ (ಚಿಕ್ಕಮ್ಮ) ದುರ್ಗಾ ಬೀಸುವ ಕಲ್ಲಿನ ಎದುರು ಬದರು ಕುಳಿತು ಬೀಸತೊಡಗುತ್ತಾರೆ. ರಾಗಿಣಿಗೂ ಅದರಲ್ಲಿ ಮಹತ್ವದ ಕೆಲಸವಿದೆ. ಅದೆಂದರೆ ತನ್ನ ಪುಟ್ಟ ಕೈಗಳಲ್ಲಿ ಕಾಳುಗಳನ್ನು ತುಂಬಿ ಬೀಸುವ ಕಲ್ಲಿನ ಮಧ್ಯದ ಕುಳಿಗೆ ಹಾಕುವುದು. ಅದು ಪವಾಡ ಸದೃಶದಂತೆ ಜಲ್ಲ ಜಲ್ಲನೆ ಹಿಟ್ಟು ಉದುರಿಸುವುದನ್ನು ನೋಡುವುದು. ಕಲ್ಲಿನ ಚಲನೆಗೆ ತಕ್ಕಂತೆ ಅಜ್ಜಿ ಮತ್ತು ಮಾಸಿ ಓವಿಗಳನ್ನು ಲಯಬದ್ಧವಾಗಿ ಹಾಡುವುದನ್ನು ಕೇಳುತ್ತಾ ಬಾಲ್ಯ ಕಳೆದುಹೋದುದನ್ನು ನೆನೆಪಿಸಿಕೊಳ್ಳುತ್ತಾರೆ.

‘ಅಜ್ಜಿಗೆ ಬಹಿಣಾಬಾಯಿಯ ಓವಿಗಳೆಂದರೆ ತುಂಬಾ ಇಷ್ಟ’ ಎನ್ನುವ ಲೇಖಕಿ, ಬಾಲ್ಯದಲ್ಲಿ ಕೇವಲ ಲಯ, ಪ್ರಾಸ, ಶಬ್ದ ಚಮತ್ಕಾರಗಳಿಂದ ಒಳಗಿಳಿದ ಈ ಓವಿಯ ಸಾಲುಗಳು, ಅವಳು ದೊಡ್ಡವಳಾಗುತ್ತಾ ಹೋದ ಹಾಗೆ ಅವಳ ಸಂಕಷ್ಟದ ದಿನಗಳಲ್ಲಿ ತನ್ನ ಸುಪ್ತ ಪ್ರಜ್ಞೆಯ ಆಳದ ಕೂಪದಿಂದ ಎದ್ದುಬರುತ್ತಿದ್ದ ಆ ಅಜ್ಜಿಯ ಓವಿಗಳು ಅವಳನ್ನು ಹೇಗೆ ಕೋಮಲವಾಗಿ ಸಂತೈಸುತ್ತಿದ್ದವು, ಎನ್ನುವುದನ್ನು ಹೇಳಿಕೊಳ್ಳುತ್ತಾಳೆ. ಅಲ್ಲದೆ ಅವುಗಳನ್ನು ಆತ್ಮಸಾತ್ ಮಾಡಿಕೊಂಡದ್ದರಿಂದಲೇ ಬದುಕಿಗೆ ಒದಗಿದ ಶಕ್ತಿಯ ಬಗೆಯನ್ನೂ ವಿಶದಪಡಿಸುತ್ತಾಳೆ. ಈ ಶಕ್ತಿ ಕೂಡ ಅವಳಿಗೆ ಅಜ್ಜಿಯಿಂದಲೇ ಬಂದಿದೆ. ಒಳ್ಳೆಯ ಸರ್ಕರಿ ಕೆಲಸದಲ್ಲಿದ್ದ ಗಂಡ ಅದನ್ನು ಬಿಟ್ಟು ಸ್ವಾತಂತ್ರ್ಯ ಚಳವಳಿಗೆ ಸೇರಿ ಮನೆ ಬಿಟ್ಟು ಹೋದಾಗ, ಅಜ್ಜಿ ಬಡತನದ ಜೊತೆಗೆ ಇಬ್ಬರು ಹೆಣ್ಣುಮಕ್ಕಳನ್ನೂ ಕಟ್ಟಿಕೊಂಡು ಏಕಾಕಿಯಾಗಿ ಸಂಸಾರದ ನೊಗ ಹೊರುವ ಸಾಮರ್ಥ್ಯ ಪಡೆದುದಕ್ಕೆ ಕಾರಣ ಬಹಿಣಾಬಾಯಿಯ ಓವಿಗಳ ಪ್ರಭಾವೀ ಶಕ್ತಿಯೇ ಎನ್ನುವುದು ತಿಳಿಯುತ್ತದೆ.

ಇದೇ ಪರಿಸರದಲ್ಲಿ ಅಜ್ಜಿಯ ಅವಳೀ ಮಕ್ಕಳಾದ ಶಾಂತಾ, ದುರ್ಗಾ, ಬಾಲ್ಯದ ಗೆಳೆಯ ಪ್ರಶಾಂತ್ ರೇಗೆ ಎಲ್ಲ ಒಟ್ಟಿಗೇ ಬೆಳೆಯುತ್ತಾರೆ. ಮೂವರೂ ಒಟ್ಟಿಗೇ ಫರ್ಗೂಸನ್ ಕಾಲೇಜಿನಲ್ಲಿ ಓದಲು ಪುಣೆಗೆ ಹೋಗುತ್ತಾರೆ. ಶಾಂತಾ ಮರಾಠಿ ಸ್ನಾತಕೋತ್ತರ ತರಗತಿ ಸೇರಿದರೆ, ಪ್ರಶಾಂತ್ ವೈದ್ಯಕೀಯ ಕ್ಷೇತ್ರವನ್ನು ಆರಿಸಿಕೊಳ್ಳುತ್ತಾನೆ. ದುರ್ಗಾ ತನ್ನ ಪದವಿಯನಂತರ ‘ಸೇವಾದಳ’ ಸೇರುತ್ತಾಳೆ. ಶಾಂತಾಳಿಗೆ ಕವಿತೆ ಕತೆ ಬರೆಯುವ ಹುಚ್ಚು. ಅವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಪುಣೆಯಿಂದ ಮೂವರೂ ರಜೆಯಲ್ಲಿ ಹಳ್ಳಿಗೆ ಬಂದಾಗ ‘ಕೇಸರೀ, ಮರಾಠ, ನ್ಯೂ ಏಜ್ ಪತ್ರಿಕೆಗಳ ಸುದ್ದಿ, ರಾಷ್ಟ್ರೀಯ ಆಂದೋಳನದ ಬಿಸಿ ಬಿಸಿ ಚರ್ಚೆ, ದೇಶಭಕ್ತಿಗೀತೆಗಳು, ಪ್ರಭಾತ್ ಫೇರಿಗಳು, ಸಭೆ ಸಮಾರಂಭಗಳು, ಸಿನಿಮಾಗಳು ಇವುಗಳದೇ ಕಾವಿನಲ್ಲಿ ಚರ್ಚೆಯಲ್ಲಿ ಮುಳುಗಿ ಹೋಗುತ್ತಾರೆ.

anjali purohithಹಳ್ಳಿ, ಪುಣೆ, ಹಾಗೂ ರಾಷ್ಟ್ರೀಯ ಚಟುವಟಿಕೆಗಳು ಮೂವರನ್ನೂ ಸಮಾನವಾಗಿ ಸೆರೆಹಿಡಿದಿರುತ್ತವೆ. ಶಾಂತಾ ತನ್ನ ನಾಚಿಕೆಯ ಸ್ವಭಾವದಿಂದಾಗಿ ಪ್ರಶಾಂತನೆಡೆಗೆ ಇದ್ದ ತನ್ನ ಪ್ರೀತಿಯನ್ನು ವ್ಯಕ್ತಪಡಿಸದೇ ಹೋಗುತ್ತಾಳೆ. ತನ್ನ ತಂದೆಯ ಆಯ್ಕೆಯ ಮೇರೆಗೆ ಪಾಶ್ಚಾತ್ಯೀಕರಣಕ್ಕೆ ಒಳಗಾದ ದೆಹಲಿಯಲ್ಲಿರುವ ಒಂದು ಕುಟುಂಬದ ಮರಾಠಿ ವರನೊಂದಿಗೆ ಮದುವೆಯಾಗಿ ಹೋಗಿ ಮೇಲುವರ್ಗದ ಹುಸಿ ಶ್ರೇಷ್ಠತೆಗೆ ಹೊಂದಿಕೊಳ್ಳಲು ಹೆಣಗಾಗುಡುತ್ತಾಳೆ. ತನ್ನ ಹಳ್ಳಿಯಲ್ಲಿನ ಒಂದು ಶಾಲೆಯಲ್ಲಿ ಶಿಕ್ಷಕಿಯಾಗಿ ಸರಳವಾಗಿ ಬದುಕಬೇಕೆನ್ನುವ ಅವಳ ಕನಸು ನನಸಾಗದೇ ಹೋಗುತ್ತದೆ. ಕೊನೆಗೆ ಒಂದು ಹೆಣ್ಣುಮಗುವನ್ನು ಹೆತ್ತು ಸಾಯುತ್ತಾಳೆ. .

ದುರ್ಗಾ ಅವಳ ಹೆಸರಿಗೆ ತಕ್ಕ ಹಾಗೆ ಧೈರ್ಯದ ಹುಡುಗಿ. ತಾನು ಮೆಚ್ಚಿದ ಯೋಧನೊಬ್ಬನನ್ನು ಮದುವೆಯಾಗಿ ಸ್ವಲ್ಪ ದಿನಗಳಲ್ಲೇ ಅವನನ್ನು ಕಳೆದುಕೊಂಡು ವಿಧವೆಯಾಗುತ್ತಾಳೆ. ಹೆಣ್ಣುಮಗು ಎನ್ನುವ ಕಾರಣದಿಂದ ತಂದೆಯಿಂದ ನಿರಾಕರಿಸಲ್ಪಟ್ಟ ಶಾಂತಾಳ ಮಗಳು ರಾಗಿಣಿಯನ್ನು, ಅವಳೇ ಬೆಳಸುತ್ತಾಳೆ. ಈ ಮೂರು ತಲೆಮಾರು ಪಟ್ಟ ಪಾಡು ಇಲ್ಲಿನ ಆತ್ಮವೃತ್ತಾಂತದ ಮುಖ್ಯ ನೆಲೆಯಾಗಿದೆ. ಇಲ್ಲಿ ಅಪಮಾನ, ಹಿಂಸೆ, ದುಡಿಮೆ, ಆಯಾಸಗಳಿವೆ ನಿಜ. ಆದರೆ ಅವುಗಳನ್ನು ನಿಭಾಯಿಸಬಲ್ಲ, ಅವನ್ನು ಮೀರಬಲ್ಲ ತಾಯಂದಿರಿದ್ದಾರೆ. ಶಾಂತಾಳ ಮಗಳು ‘ರಾಗಿಣಿ’, ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡು ಅಜ್ಜಿ ಹಾಗೂ ಮಾಸಿಯ ಆಶ್ರಯದಲ್ಲಿ, ತಾಯಿಯ ಹಾಲಿಲ್ಲದೆ, ರಾಗಿಯ ಹಾಲಿನಲ್ಲಿ ಬೆಳೆಯುವ, ಅದರ ಸತ್ವವನ್ನು ಹೀರಿಕೊಳ್ಳುವ ಮಾತ್ರದಿಂದಲೇ ವಿಶೇಷ ದೈಹಿಕ ಶಕ್ತಿ ಮತ್ತು ಆತ್ಮಾಭಿಮಾನವನ್ನು ಹೊಂದುವಲ್ಲಿ ಯಶಸ್ವಿಯಾಗುವ ಮಗು. ಅವಳೇ ಈ ಕೃತಿಯ ಲೇಖಕಿ, ಪ್ರಸಿದ್ದ ಕಲಾವಿದೆ ಹಾಗೂ ಕವಿ.

ಮೊಮ್ಮಗಳಿಗೆ ತನ್ನ ಮಗಳ ಕತೆ ಹೇಳುತ್ತಾ ಅಜ್ಜಿ, ಶಾಂತಾ ಹಾಗೂ ಪ್ರಶಾಂತರ ನಡುವಿನ ಆಕರ್ಷಣೆಯನ್ನು ಗುರುತಿಸಲಾರದೇ ಹೋದ ಪಶ್ಚಾತ್ತಾಪದಲ್ಲಿ, ರಾಗಿಣೀ..ರಾಗಿಣೀ..ನಾವು ಹಿರಿಯರು ಒಮ್ಮೊಮ್ಮೆ ಎಂಥಹ ಘೋರ ಅಪರಾಧಗಳನ್ನು ಮಾಡಿಬಿಡುತ್ತೇವೆ ನೋಡು. ನನ್ನ ಮಗಳ ಮನಸ್ಸನ್ನು ತಿಳಿಯದೇ ಹೋದೆನಲ್ಲಾ ಎಂದು ಮರುಗುತ್ತಾಳೆ. ಅಂತಹ ತಪ್ಪನ್ನು ನೀನು ಮಾಡಬೇಡವೆಂದು ರಾಗಿಣಿಯ ತಾಯಿ ಕನಸಿನಲ್ಲಿ ಬಂದು ಅವಳನ್ನು ಎಚ್ಚರಿಸುತ್ತಾಳೆ. ಆ ಎಚ್ಚರವೇ ಹಳ್ಳಿಗೆ ಹಿಂದಿರುಗಬೇಕೆನ್ನುವ, ತನ್ನ ತಾಯಿ ಶಾಂತಾ ಕಂಡ ಕನಸನ್ನು ನನಸಾಗಿಸುವಲ್ಲಿ ಅವಳಿಗೆ ಉತ್ತೇಜನ ನೀಡುತ್ತದೆ. ಮುಂಬಯಿಯಲ್ಲಿ ವೈದ್ಯೆಯಾದ ಅವಳು ಪ್ರತಿ ವರುಷ ತನ್ನ ಮಕ್ಕಳೊಂದಿಗೆ ಹಳ್ಳಿಗೆ ಬರುತ್ತಾಳೆ. ಅಲ್ಲಿ ಪ್ರಶಾಂತ್ ರೇಗೆ ಆರಂಭಿಸಿದ ಆಸ್ಪತ್ರೆಯಲ್ಲಿ ಎರಡು ತಿಂಗಳು ಕಾಲ ತನ್ನ ‘ಇಂಟರ್ನ್ಷಿಪ್’ನ್ನು ವ್ರತದಂತೆ ಪಾಲಿಸಿಕೊಂಡು ಬರುತ್ತಾಳೆ. ತನ್ನ ಮಕ್ಕಳಿಗೆ ಹಳ್ಳಿಯ ಸಂಸ್ಕೃತಿಯನ್ನು ಪರಿಚಯಿಸುತ್ತಾಳೆ.

ಪ್ರಶಾಂತ್ ನಿವೃತ್ತಿಯಾದ ನಂತರ ತಾನೇ ಹಳ್ಳಿಗೆ ಮರಳಿ ಆಸ್ಪತ್ರೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮನಸ್ಸು ಮಾಡುತ್ತಾಳೆ. ಪಾರ್ವಿ ಎಂಬ ಹಳ್ಳಿ ‘ಅಜ್ಜಿಯ’ ಯೊಂದಿಗೇ ನಾಶವಾಗಿ ಹೋಗುವುದಿಲ್ಲ. ಅದು ಅವಳ ನಾಲ್ಕನೇ ತಲೆಮಾರಿನ ರಾಗಿಣಿಯ ಮಕ್ಕಳ ಮೂಲಕವೂ ಮುಂದುವರೆಯುತ್ತದೆ. ಹಳ್ಳಿಗೆ ಬಂದ ರಾಗಿಣಿ ರಜೆ ಕಳೆದು ಮುಂಬಯಿಗೆ ಮರಳುವ ಸನ್ನಿವೇಶದಿಂದ ಕಾದಂಬರಿ ಮುಕ್ತಾಯವಾಗುತ್ತದೆ. ಹಳ್ಳಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಕಾರಿನಲ್ಲಿ ಸಾಗುವ ಮಕ್ಕಳು ಅಜ್ಜಿ ಮಾಡಿಕೊಟ್ಟ ರಾಗಿಯ ಸಿಹಿತಿಂಡಿಯನ್ನು ಚಪ್ಪರಿಸುತ್ತಾ, ಹಳ್ಳಿಯಲ್ಲಿ ಉಲ್ಲಾಸದ ದಿನಗಳು ಬೇಗನೇ ಕಳೆದುಹೋದುದಕ್ಕಾಗಿ ಬೇಸರ ಪಟ್ಟುಕೊಳ್ಳುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ರಾಗಿಣಿ ಹಳ್ಳಿಯೊಳಗಿರುವುದಿಲ್ಲ, ಹಳ್ಳಿಯೇ ಅವಳೊಳಗೆ ಬೇರು ಬಿಟ್ಟಿರುತ್ತದೆ,. ತನ್ನ ಮಕ್ಕಳಿಗೂ ಕೂಡ ಆ ಹಳ್ಳಿಯಲ್ಲಿ ಬೇರುಬಿಡುವುದನ್ನು ಕಲಿಸುತ್ತಾಳೆ.

ಬಡತನ, ಅಪಮಾನ ಹಾಗೂ ಹಿಂಸೆಯನ್ನು ಮೀರುವ, ದುಡಿಮೆಯಲ್ಲಿ ಸೋರಿಹೋಗುವ ಶಕ್ತಿಯನ್ನೂ ಮತ್ತೆ ಸಂಚಯನ ಮಾಡಿಕೊಳ್ಳುವ ರೂಪಕಗಳಾಗಿ ಅಜ್ಜಿಯಿಂದ ಮೊಮ್ಮಗಳವರೆಗಿನ ಈ ಆಖ್ಯಾನ ಒಂದು ರೀತಿಯ ವಿಕಾಸ ಗತಿಯಲ್ಲಿ ಸಾಗುತ್ತವೆ. ನಮ್ಮ ಹಳೆತಲೆಮಾರಿನ ಅಂತಹ ಗಟ್ಟಿಗಿತ್ತಿ ಅಜ್ಜಿಯರನ್ನು ಅವರು ‘ಬಲಿಪಶುಗಳಲ್ಲ’ ಸಾಂಸ್ಕೃತಿಕ ವಿಕೋಪಕ್ಕೆ ಸಿಕ್ಕಿಯೂ ಪಾರಾಗಿ ಉಳಿದವರು (ಸರ್ವೈವರ್ಸ್) ಎಂದರೆ, ‘ಇಲ್ಲ ಇಲ್ಲ ಅವರು ‘ವಿನ್ನರ್ಸ್’ ಎನ್ನುತ್ತಾರೆ ಖ್ಯಾತ ಸಮಾಜ ವಿಜ್ಞಾನಿ ರಾಮೇಶ್ವರಿ ವರ್ಮ ಅವರು.

ಪ್ರಸ್ತಾವನೆಯಲ್ಲಿ ಲೇಖಕಿ, ರಾಗಿಯ ಬಗೆಗೆ ಅದರ ಪೋಷಕಾಂಶಗಳ ಬಗೆಗೆ ಒಂದು ಸಾಮಾನ್ಯ ಮಾಹಿತಿಯನ್ನು ಕೊಡುತ್ತಲೇ, ಮಹಿಳಾ ಲೋಕವನ್ನು ಇಡಿಯಾಗಿ ಒಳಗೊಳ್ಳುವ ಬೆರಗಿಗೆ ಈ ಪುಸ್ತಕವನ್ನು ಓದಬೇಕಾಗಿದೆ. ರಾಗಿ ಎಂದರೆ, ತಾಯಿ, ಬಡತನ, ಕಷ್ಟಗಳ ಪರಂಪರೆ ಮತ್ತು ಎಣೆಯಿಲ್ಲದ ಪ್ರೀತಿ. ಆ ಪ್ರೀತಿಯ ಶಕ್ತಿ ಮತ್ತು ರಾಗಿಯ ಶಕ್ತಿಯನ್ನು ಸಮತೋಲನ ಗೊಳಿಸಿರುವ ಅನನ್ಯ ರೀತಿಗೆ ಈ ಪುಸ್ತಕದ ಕಡೆ ಗಮನ ಕೊಡಬೇಕಾಗಿದೆ. ನನ್ನ ತಿಳಿವಿನ ಮಟ್ಟಿಗೆ ಕನ್ನಡದಲ್ಲಿ ಇಂತಹ ಕೃತಿ ಇನ್ನೂ ಬರಬೇಕಾಗಿದೆ, ಈ ಕಾರಣಕ್ಕೂ ಈ ಕೃತಿಯನ್ನು ತೆರೆದು ನೋಡಬೇಕಾಗಿದೆ.

ಇದು ಮೇಲು ನೋಟಕ್ಕೆ ಒಂದು ಸಾಮಾನ್ಯ ಕೃತಿ. ಸಿದ್ಧ ಮಾನದಂಡಗಳಿಂದ ಈ ಸಾಹಿತ್ಯ ಕೃತಿಯನ್ನು ಅಳೆಯಲು ಸಾಧ್ಯವಿಲ್ಲ. ಇಲ್ಲಿ, ರಾಗಿ ಬೀಸುವ, ಕುಟ್ಟುವ, ಕೇರುವ ಪದಗಳು, ಅಜ್ಜಿಯಿಂದ ಮೊಮ್ಮಗಳವರೆಗೆ ಹರಿಯುವ ಮೂರು ತಲೆಮಾರಿನ ಆತ್ಮವೃತ್ತಾಂತಗಳು, ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಬಾಳಿ ಬದುಕಿದ ಪ್ರಸಿದ್ಧ ಮರಾಠಿ ಸಂತ ಕವಿ ಬಹಿಣಾಬಾಯಿಯ ‘ಓವಿ’ಗಳು (ದ್ವಿಪದಿಗಳು), ರಾಗಿಯಿಂದ ತರತರದ ಸಾಂಪ್ರದಾಯಕ ಅಡುಗೆಗಳನ್ನು ಮಾಡುವ ವಿಧಾನಗಳು, ಜೊತೆಗೆ ಆಧುನಿಕ ಪ್ರಯೋಗಗಳು, ಇವೆಲ್ಲವೂ ಒಂದು ವಿಶಿಷ್ಟ ಪಾಕದಲ್ಲಿ ಮಿಳಿತಗೊಂಡು, ಒಂದು ರೀತಿಯ ದೇಸಿ ಪರಿಮಳವನ್ನು ಸೂಸುತ್ತವೆ. ಮೇಲು ನೋಟಕ್ಕೆ ಇವು ಬಿಡಿ ಬಿಡಿಯಾಗಿ ವಿಭಿನ್ನ ಅಭಿರುಚಿಯ ಓದುಗರಿಗೆ ಉಣಬಡಿಸುವಂತೆ ಕಂಡರೂ, ಮಹಿಳಾ ಲೋಕದ ಅಖಂಡ ಶಕ್ತಿಯ ಸ್ವರೂಪವನ್ನು ಅನನ್ಯವಾದ ರೀತಿಯಲ್ಲಿ ಅನಾವರಣಗೊಳಿಸಿವೆ.

ragi ragini insideಈ ಪುಸ್ತಕದ ತುಂಬಾ ನಮ್ಮ ಇಂದಿನ ಮಕ್ಕಳು ಮರತೇ ಹೋಗಿರುವ, ರಾಗಿ ಬೀಸುವ ಕಲ್ಲು, ಸೇರು, ಕೊಳಗ, ಬಳ್ಳ, ಈಳಿಗೆ ಮಣೆ, ರುಬ್ಬುವ ಕಲ್ಲು, ಲಟ್ಟಣಿಗೆ, ಚಿಲಕವಿರುವ ತಗಡಿನ ಹಿಟ್ಟಿನ ಡಬ್ಬ, ಮೊರ, ಚಾಪೆ, ತುರಿಯುವ ಮಣೆ, ತರತರದ ಸಟ್ಟುಗಗಳು, ಉಪ್ಪಿನಕಾಯಿ ಜಾಡಿಗಳು, ರೊಟ್ಟಿಗಳನ್ನು ಸಾಲಾಗಿ ಜೋಡಿಸಿರುವ ಬಿದುರಿನ ಬುಟ್ಟಿಗಳು, ರೊಟ್ಟಿಗಳು, ಹೋಳಿಗೆಗಳು, ತರತರದ ತರಕಾರಿಗಳ ಕಪ್ಪು ಬಿಳುಪಿನ ಚಿತ್ರಗಳು ಆಕರ್ಷಿಸುತ್ತವೆ. ಇಲ್ಲಿ ಬಳಸಲಾದ ಕಪ್ಪು ಬಿಳುಪು ಚಿತ್ರಗಳು ಕೂಡ ಅದರ ಪ್ರಾಚೀನತೆಯನ್ನೇ ಬಿಂಬಿಸುತ್ತವೆ. ಇವುಗಳ ಮಧ್ಯೆ ಬಹಿಣಾಬಾಯಿ, ಹಾಗೂ ಅಜ್ಜಿಯರ ಕತೆಗಳು ಚಲ್ಲವರಿಯುತ್ತವೆ.

ಬಹಿಣಾಬಾಯಿ:

ಬಹಿಣಾಬಾಯಿ ಚೌಧರಿ (1880-1951) ಮಹಾರಾಷ್ಟ್ರದ ಮಹಿಳಾ ಲೋಕದ ಒಂದು ಜೀವನಾಡಿ. ಬಹುಶಃ ಇವಳ ಓವಿಗಳನ್ನು ಅರಿಯದ, ಹಾಡದ ಮರಾಠಿಗರೇ ಇಲ್ಲ. ಮಹಾರಾಷ್ಟ್ರದಲ್ಲಿ ಮಹಿಳೆಯರು ತಮ್ಮ ಕುಟ್ಟುವ, ಬೀಸುವ, ಮನೆಯೊಳಗಿನ ಹಲವಾರು ದುಡಿಮೆಯ ಗಳಿಗೆಗಳಲ್ಲಿ ಇವಳ ಹಾಡನ್ನು ಹಾಡುತ್ತಿದ್ದರಂತೆ. ಹಾಗೆಯೇ ಇವಳ ಲಾಲಿ ಹಾಡುಗಳೂ ಇವೆ. ಈಕೆ ಮಹಾರಾಷ್ಟ್ರದ ಧುಳೆ ಮತ್ತು ಜಲಗಾಂವ್ ಪ್ರದೇಶದ ಕೃಷಿಕ ಕುಟುಂಬಕ್ಕೆ ಸೇರಿದವಳು. ಬಾಲ್ಯದಲ್ಲಿಯೇ ವಿಧವೆಯಾದ ಇವಳು, ಬೆಳಗಾಗೆದ್ದು ಹೊಲಗದ್ದೆಗಳಲ್ಲಿ ಕೆಲಸಮಾಡುವಾಗ ದ್ವಿಪದಿಗಳನ್ನು ರಚಿಸುತ್ತಿದ್ದಳೆಂದೂ, ಆ ದ್ವಿಪದಿಗಳನ್ನು ನೆನಪಿನ ಮೇಲೆ ಅವಳ ಮಗ ಸೋಪಾನದೇವ ಬರೆದಿಡುತ್ತಿದ್ದನೆಂದೂ ಹೇಳಲಾಗುತ್ತದೆ.

ಖಾಂದೇಶೀ ಮತ್ತು ವರ್ಹಾಡಿ (ವಿಧರ್ಭ ಪ್ರಾಂತ್ಯ) ಎಂಬ ಪ್ರಾದೇಶಿಕ ಭಾಷೆಯಲ್ಲಿ ರಚಿತವಾದ ಅವಳ ಓವಿಗಳು, ಅವಳ ಮಣ್ಣಿಗೆ, ನೆಲಕ್ಕೆ ಸಂಬಂಧಿಸಿದುದಾಗಿವೆ. ಹತ್ತಿ ಕೃಷಿಕಳಾಗಿ, ಒಬ್ಬ ತಾಯಿಯಾಗಿ, ಮಹಿಳೆಯಾಗಿ, ಸಖಿಯಾಗಿ ಅವಳ ಎಲ್ಲಾ ಅನುಭವಗಳೂ ಅವಳ ದ್ವಿಪದಿಗಳಲ್ಲಿ ಸಮರ್ಥವಾಗಿ ಅಭಿವ್ಯಕ್ತಿಗೊಂಡಿವೆ. ಮಹಾರಾಷ್ಟ್ರವು ಬಹಿಣಾಬಾಯಿಯ ಓವಿಗಳನ್ನು ಮೊತ್ತ ಮೊದಲ ಬಾರಿಗೆ ಪತ್ತೆ ಹಚ್ಚಿದಾಗ, ‘ನೆಲದಲ್ಲಿ ಆವರೆಗೆ ಹುದುಗಿದ್ದ ನಿಕ್ಷೇಪವೊಂದು ದೊರೆಯಿತೆಂದು’ ಮರಾಠಿಯ ಖ್ಯಾತ ವಿದ್ವಾಂಸ ಆಚಾರ್ಯ ಪಿ.ಕೆ. ಅತ್ರೇಯವರು ಅವುಗಳಿಗೆ ಪ್ರಸ್ತಾವನೆ ಬರೆಯುತ್ತಾ ಕೊಂಡಾಡುತ್ತಾರೆ.

ಕೃಷಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳೂ ಅವಳ ಓವಿಯಲ್ಲಿ ದೊರಕುತ್ತವೆ ಎಂದು ಮರಾಠಿಗರು ಅಭಿಪ್ರಾಯ ಪಡುತ್ತಾರೆ. ದನಕರು, ಕೊಟ್ಟಿಗೆಗಳು, ಬಾವಿ, ಬೀಸುವ ಕಲ್ಲು, ಗೊಬ್ಬಳಿ ಮರ, ಕಲ್ಲುಬಂಡೆಗಳು, ಹೂವುಹಣ್ಣುಗಳು, ಒಲೆ ಉರುವಲುಗಳು, ಬೆಂಕಿಪೆಟ್ಟಿಗೆ, ದೇವರು, ಆತ್ಮಜ್ಞಾನ, ಸಾಧುಸಂತರು, ಕಂಚುಗಾರ, ಗೀಜಗನ ಹಕ್ಕಿ , ತವರು ಮನೆಯ ಹಂಬಲ, ಎಲ್ಲವೂ ಅವಳ ಓವಿಗಳಲ್ಲಿ ಬಂದು ಹೋಗುತ್ತವೆ. ಜೊತೆಗೆ ಅವಳ ಮಗ ಸೋಪಾನದೇವನೂ.

ಇಂದು ಬಹಿಣಾಬಾಯಿಯ ಹಾಡುಗಳು ಮಹಾರಾಷ್ಟ್ರದ ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಿವೆ. ಅವಳನ್ನು ಕುರಿತ ಅನೇಕ ಪಿಎಚ್.ಡಿ. ಪ್ರಬಂಧಗಳೂ ಹೊರಬಂದಿವೆ.

ಬಹಿಣಾ ಮಹಿಳೆಯರ ದುಡಿಮೆಗೆ ಪ್ರತೀಕವಾದವಳು. ತಾಳಿಕೆಯ ಗುಣದ ಜೊತೆಗೆ ಅದು ದೊರಕಿಸಿಕೊಡುವ ಶಕ್ತಿಯ ಸ್ವರೂಪಕ್ಕೂ ಹೆಸರಾದವಳು. ಎಳೆ ಮಕ್ಕಳ ತಾಯಿಯಾದ ಬಹಿಣಾ ತನ್ನ ಗಂಡನನ್ನು ಕಳೆದುಕೊಂಡಾಗ ಅವಳು ರಚಿಸಿದ ಒಂದು ‘ಓವಿ’ ಹೀಗಿದೆ:

bahinabaiಈಗ ನನ್ನ ಬದುಕು ನನ್ನದೇ..

ಅರೇ, ಅತ್ತೂ ಅತ್ತೂ ಕಡೆಗೆ
ತುಂಬಿ ಬಂದ ಕಂಗಳು
ಬತ್ತಿ ಹೋದವು
ಈಗ ಕೇವಲ ಬಿಕ್ಕುಗಳಷ್ಟೇ ಉಳಿದಿವೆ.

ಇಳಿಯಿತು ಕಣ್ಣೀರನ ಭರತ
ಈಗ ನಾನೇ ನನ್ನ ವಿಶ್ವ
ಭರವಸೆಗಳೂ ಇಲ್ಲ ಕಣ್ಣೀರೂ.
ಅಳದಿರು ಓ ನನ್ನ ಜೀವವೇ ಅಳದಿರು.

ಹೇಳು ಭೂ ಮಾತೆಯೇ ಹೇಳು
ಇದೆಂಥ ಪವಾಡ ಹೇಳು?
ಮರಬಿದ್ದು ಹೋಯಿತು
ಆದರೂ ಅದರ ನೆರಳು ಉಳಿಸಿ ಹೋಯಿತಲ್ಲಾ…

ದೇವಲೋಕಕೆ ಸಾಗಿದ ನನ್ನ ದೇವ
ತನ್ನ ಕುರುಹುಗಳ ಇಲ್ಲಿ ಉಳಿಸಿದ
ನನ್ನ ಕಣ್ಣಮುಂದೆ ಈ ಚಿಣ್ಣರು…
ಅಳದಿರು ಓ ನನ್ನ ಜೀವವೇ ಅಳದಿರು.

ಅಡಗಿತ್ತು ಕರ್ಮರೇಖೆ…

ನನ್ನ ಹಣೆಯ ಮೇಲಿತ್ತು
ನನ್ನ ಕರ್ಮದ ರೇಖೆ
ನನ್ನ ಕುಂಕುಮದ ಒಳಗೆ ಅಡಗಿತ್ತು
ಕುಂಕುಮ ಒರೆಸಿ ಹಾಕಿದಾಕ್ಷಣ
ಅದು ಬಯಲಾಗಿತ್ತು

ದೇವರೇ ನಿನ್ನ ಸಮೃದ್ಧಿಯ ಸುರಿಮಳೆ
ಬತ್ತಿ ಬರಡಾಯಿತು
ನನ್ನ ಹಸ್ತದೊಳಗಿನ ಧನರೇಖೆ
ಈಗ ನನ್ನ ಕೈಯ ಸಿಬಿರು ಸೀಳುಗಳಲ್ಲಿ
ಮಾಯವಾಗಿ ಹೋಯಿತು…..

ಬಹಿಣಾಬಾಯಿಯ ಬದುಕು ಹಾಗೂ ಅವಳ ಓವಿಗಳು ಈ ಕೃತಿಯಲ್ಲಿ ಸೇರಿರುವುದು ಕೇವಲ ಆಕಸ್ಮಿಕವಲ್ಲ. ಲೇಖಕಿಯ ಹಿಂದಿನ ಎರಡು ತಲೆಮಾರಿನ ಮಹಿಳೆಯರ ದುಡಿತದ ಸ್ವರೂಪದ ಜೊತೆಗೆ ಅವು ತಳಕುಹಾಕಿಕೊಂಡಿವೆ. ಅವು ಮಹಿಳೆಯರ ಭೌತಿಕ, ಭಾವುಕ, ಆಧ್ಯಾತ್ಮಿಕ ಹಂಬಲಗಳನ್ನು ಒಟ್ಟಾಗಿ ಹಿಡಿಯುವಲ್ಲಿ ಸಫಲವಾಗುತ್ತವೆ.

ರಾಗಿಯನ್ನು ರಾಮಧಾನ್ಯವಾಗಿಸುವ ತುರ್ತು ಕನಕದಾಸರಿಗಿತ್ತು. ಅದರ ಜೊತೆಗೆ ಅಂಟಿಕೊಂಡ ಹಿಂಸೆ, ಕ್ರೌರ್ಯ, ದುಡಿಮೆ, ಅಪಮಾನ ಮತ್ತು ಅಜ್ಞಾನದ ಮೇಲೆ ಬೆಳಕು ಚೆಲ್ಲುವ ಅಗತ್ಯವಿತ್ತು. ಲೇಖಕಿ ಅಂಜಲಿಯವರು ಕೂಡ ಈ ಕೃತಿಯ ಮೂಲಕ ರಾಗಿಯ ಬಗೆಗಿನ ನಮ್ಮ ಎಲ್ಲಾ ಪೂರ್ವಗ್ರಹಗಳನ್ನೂ ಬಯಲಾಗಿಸುತ್ತಾರೆ. ಆದರೆ ಇಲ್ಲಿನ ಅಜ್ಜಿ, ಶಾಂತಾ, ರಾಗಿಣಿ, ಮತ್ತು ದುರ್ಗಾ ಇವರೆಲ್ಲಾ ಕಷ್ಟ ಪರಂಪರೆಯೊಳಗಿಂದಲೇ ಎದ್ದುಬಂದ ಫೀನಿಕ್ಸ್ ಗಳಾಗಿದ್ದಾರೆ.
ಕನ್ನಡದಲ್ಲಿ ‘ರಾಗಿ’ಯಾದರೆ, ಮರಾಠಿಯಲ್ಲಿ ಅದು ‘ನಾಚಣಿ’.

ಲೇಖಕಿಯೇ ಹೇಳುವಂತೆ ರಾಗಿಯಲ್ಲಿನ ‘ರಾಗ’ ಮತ್ತು ನಾಚಣಿಯಲ್ಲಿನ ‘ನಾಚ್’ (ನೃತ್ಯ) ಇವು ನಮ್ಮ ಬದುಕಿನ ಉತ್ಸವದ ಸಂಕೇತವಾಗಿದೆ. ಆನಂದದಿಂದ ಅನುಭವಿಸಿ ಉಣ್ಣುವುದು ಬದುಕುವ ಒಂದು ಕಲೆ, ಅದು ಉತ್ಸವ, ಅದು ಅಧ್ಯಾತ್ಮ. ಆಹಾರದ ಆಕೃತಿ, ಬಣ್ಣ, ಸ್ಪರ್ಶ, ವಾಸನೆ, ಅಗಿಯುವಾಗ ಗಮನಕ್ಕೆ ಬರುವ ಸದ್ದು, ಹೀಗೆ ಆಹಾರ ಸೇವನೆಯೆಂದರೆ ಪಂಚೇಂದ್ರಿಯಗಳೂ ಒಳಗೊಳ್ಳುವ ಒಂದು ಧ್ಯಾನ. ಹಾಗೆ ತಿಂದರೆ ಮಾತ್ರ ಅದು ಪೂರ್ಣವಾಗಿ ರಕ್ತಗತವಾಗಬಲ್ಲದು, ಈ ದೇಹವನ್ನು ರೋಗಮುಕ್ತವನ್ನಾಗಿಸಬಲ್ಲ್ಲದು ಎಂಬುದನ್ನು ಭಾರತೀಯ ಯೋಗಶಾಸ್ತ್ರ ಹೇಳುವುದನ್ನು ಎಲ್ಲರೂ ಬಲ್ಲರು. ಇದು ದೇಹ ಮತ್ತು ಮನಸ್ಸುಗಳ ಯೋಗ; ಲೌಕಿಕ ಮತ್ತು ಪಾರಮಾರ್ಥಿಕಗಳ ಒಂದು ಅನುಸಂಧಾನ.

ಅಡುಗೆ ಮನೆ ಕತ್ತಲ ಮನೆಯಾಗಿ ನಮ್ಮ ಸಂಸ್ಕೃತಿಯಲ್ಲಿ ಉಪೇಕ್ಷೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಈ ಕೃತಿಗೆ ತನ್ನದೇ ಆದ ಮಹತ್ವವಿದೆ. ಇಂದಿನ ಜಾಗತೀಕರಣದ ಸುಳಿಯಲ್ಲಿಯೂ ಈ ಅಡುಗೆ ಮನೆ ನಮ್ಮ ಪೂರ್ವಮೀಮಾಂಸೆಯ ರೂಪಕವೂ ಆಗಿದೆ. ಅದನ್ನು ಉಳಿಸಿ ಬೆಳೆಸುವ ಮಹತ್ವದ ಹೊಣೆಗಾರಿಕೆಯೂ ನಮ್ಮದಾಗಿದೆ. ಲೇಖಕಿ ತನ್ನ ಮಕ್ಕಳಿಗೆ ಹಳ್ಳಿಯ ದೀಕ್ಷೆ ಕೊಡುವಂತೆ ನಾವೂ ಕೂಡ ನಮ್ಮ ಮಕ್ಕಳಿಗೆ ಕೊಡದೇ ಹೋದರೆ ನಮ್ಮ ಹಳ್ಳಿಗಳಿಗಾಗಲೀ ನಮಗಾಗಲೀ ಭವಿಷ್ಯವಿಲ್ಲ.

‍ಲೇಖಕರು Admin

15 May, 2016

1 Comment

  1. lalitha sid

    ಲೇಖನ ಇಷ್ಟವಾಯ್ತು
    ರಾಗಿ ರಾಗಿಣಿ – ಓದಬೇಕು ಎಂಬ ಆಸೆ ಹುಟ್ಟಿಸಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading