ತಪಿತ ಕಾಲದ ಸಂಧಿ
ಶ್ರೀದೇವಿ ಕೆರೆಮನೆ

ನನ್ನ ಈ ಸ್ಥಿತಿ
ನನಗೇ ಭಯ ಹುಟ್ಟಿಸುತ್ತಿದೆ
ಅಬ್ಬರಿಸುವ ಕಡಲು
ತನ್ನೆಲ್ಲ ಉನ್ಮಾದವನ್ನೂ ಕಳೆದುಕೊಂಡು
ನಿರುಮ್ಮಳವಾದ ಈ ಸ್ಥಿತಿಯ ಕುರಿತು
ಆತಂಕವೂ ಆಗುತ್ತಿದೆ
ಎಂದೂ ನಿಲುಕದ ಈ ನಿರುದ್ವಿಗ್ನತೆ
ನಿದ್ದೆಯಿಲ್ಲದೇ ಕಳೆದುಕೊಂಡ
ಸಾವಿರಾರು ರಾತ್ರಿಗಳ ಕನಸಾಗಿ
ಕಣ್ಣೆದುರು ಚಿತ್ತಾರ ಮೂಡಿಸುತ್ತಿದೆ
ಆತನ ಕನವರಿಕೆಗಳಿಲ್ಲದ
ಈ ರಾತ್ರಿಯಲ್ಲಿ ಆಗಸದ ತುಂಬ
ಹರಡಿಕೊಂಡಿದೆ ನಿಹಾರಿಕೆ
ಹಾಲುಪಥದ ಉದ್ದಗಲ ಹುಡುಕಿದರೂ
ಅವನ ಹೆಸರಿನ ನಕ್ಷತ್ರವೊಂದೂ
ಕಣ್ಣಿಗೆ ಬೀಳದೆ
ಎದೆಯೊಳಗೆ ಸಹನೆಯ ಮೂಟೆ ಬಿಚ್ಚಿದೆ

ಅಲೆಗಳೇ ಏಳದ ಸ್ಥಬ್ಧ ಕಡಲಿನ
ಬಂಗಾರ ಬಣ್ಣದ ಮರಳಿನ ಮೇಲೂ
ಆತನ ಹೆಜ್ಜೆ ಗುರುತು ಮೂಡಿಲ್ಲ
ಅಚ್ಚರಿ ಎಂದರೆ
ತುಂಬು ಬೆಳದಿಂಗಳ
ಈ ಹುಣ್ಣಿಮೆಯ ರಾತ್ರಿಯಂದು
ಅಲ್ಲೆಲ್ಲೋ ಮರೆಯಾದ ಚಂದ್ರನನ್ನು
ಈಗ ಕಡಲೂ ನೆನೆಯುತ್ತಿಲ್ಲ
ಪೊರೆಕಳಚಿ ನಿಜರೂಪ ಬಯಲಾಗುವಾಗ
ಆವರಿಸಿದ ಕಾಮನಬಿಲ್ಲಿನ ಬಣ್ಣವೆಲ್ಲವೂ ಕದಡಿ
ನಿರಾಕಾರದ ರೂಪ ಧರಿಸಿದೆ
ಭ್ರಮೆಗಳೆಲ್ಲ ಕಳಚಿ ನಿರಾಳವಾಗುವ
ಈ ತಪಿತ ಕಾಲದ ಸಂಧಿಯಲ್ಲಿ
ಬೆಡಗಿನ ಬೆಳ್ಳಿಯ ಮೋಹ ಕರಗಿ
ಕೋಟೆ ಕೊತ್ತಳಗಳೆಲ್ಲವೂ ಉರುಳಿ
ತೆರೆದ ಬಾಗಿಲಲ್ಲಿ ಮಕಾಡೆ ಬಿದ್ದಿದೆ

ಯಾರು ಏನಾದರೂ ಕಥೆ ಕಟ್ಟಲಿ
ಸುರೆಯಿಲ್ಲದೇ ಏರುತ್ತದೆ ಎನ್ನುವ
ನಶೆಗೀಗ ಉಳಿಗಾಲವಿಲ್ಲ
ಚುಕ್ಕಿಗಳ ಸರ ಪೋಣಿಸಿ ಮಾರಾಟ ಮಾಡುವ
ದಂಧೆಯೀಗ ಊರ ಹೊರಗೆ
ಕಾಮನಬಿಲ್ಲಿನ ಹೂದಂಡೆ ಮಾಡಿ
ತುರುಬಿಗಿಡುವ ಮಾತೇ ನಗೆಪಾಟಲು
ಶುದ್ಧ ಕಪ್ಪು ಛಾಯೆಯೊಂದೇ ಈಗಿನ ವಾಸ್ತವ






“ಯಾರು ಏನಾದರೂ ಕಥೆ ಕಟ್ಟಲಿ
ಸುರೆಯಿಲ್ಲದೇ ಏರುತ್ತದೆ ಎನ್ನುವ
ನಶೆಗೀಗ ಉಳಿಗಾಲವಿಲ್ಲ”
ಈ ಮಾತುಗಳು ಬಹಳ ಕಾಡುತ್ತವೆ ಸಿರಿಯವರೆ… ಬೆಂಕಿಯಿಲ್ಲದೆ ಹೊಗೆ ಏಳದು ಎಂಬುದನಳಿಯುತ್ತಾ ವರ್ತಮಾನದ ಒಂದು ಘಟನೆಯನ್ನು ಉಲ್ಟಾ ಆಗಿ ನೋಡುವ ಬಗೆಯಿಂದಾಗಿ ಕವಿತೆ ಮತ್ತು ಕವಿಗೆ ಒಂದು ಹೊಸ ಒಳನೋಟಕ್ಕೆ ಹೊರಳಿನೋಡಬೇಕು ಎನ್ನುತ್ತೀರಿ…. ಚೆಂದದ ಕವಿತೆ ಸಿರಿಯವರೇ…
ಕವಿತೆ ಇಷ್ಟವಾಯಿತು