ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ಅವಳಿಲ್ಲ..

ಡಾ ನಿರ್ಮಲಾ ಬಟ್ಟಲ

ಈಗ ಅವಳಿಲ್ಲ
ಬಾಳಿನಲಿ
ಏನೊ ಕಳೆದುಕೊಂಡ
ಅನಾಥ ಭಾವ ಮನದಲಿ….!

ಹೆಪ್ಪು ಗಟ್ಟಿದ ನೋವು
ಕಣ್ಣ ಝರಿಯಾಗಿದೆ
ತುಂಬಿ ಬಂದ ದುಃಖ
ಗಂಟಲೋಳುಬ್ಬಿ ನಿಂತಿದೆ
ಈಗ ಅವಳಿಲ್ಲ …‌..!

ಅವಳು
ಪ್ರೀತಿ ತುಂಬಿದ ವರತೆ
ನಾನು ಅವಳ ಮಮತೆ
ಸವಿದು ಬೆಳೆದ ಲತೆ
ಎಲ್ಲವೂ ನನ್ನಲ್ಲಿದೆ ಎಂದು
ಬೀಗುತ್ತಿದ್ದೆ… !!
ಈಗ ಅವಳಿಲ್ಲ …!

ಅವಳುಂಡ
ಸಿಟ್ಟ ಸೆಡವುಗಳನೆಷ್ಟೊ
ಸಹಿಸಿದ ನೋವು
ನಲಿವುಗಳೆಷ್ಟೊ ಗೊತ್ತಿಲ್ಲ
ಒಂದೇಒಂದು ದಿನವೂ ಆಕೆ
ಯಾರ ಮೇಲೂ ಹರಿಹಾಯಲಿಲ್ಲ
ಈಗ ಅವಳಿಲ್ಲ… !

ಕಣ್ಣರಳಿಸಿಕೊಂಡು ತವರಿಗೆ
ಕರೆವ ಕೈಯಿಲ್ಲ
ಕಣ್ಣೊರೆಸಿಕೊಂಡು ತವರಿಂದ
ಬೀಳ್ಕೊಡುವ ಮನಸ್ಸಿಲ್ಲ
ಈಗ ಅವಳಿಲ್ಲಾ….!

ನಗುಮುಖದ ಅವಳ
ಚಿತ್ರಪಟದ ಮುಂದೆ
ನಿಂತಾಗ
ಕರುಳು ಕಿವುಚಿದಂತಾಗುವುದಲ್ಲಾ….
ಶಾಂತವಾಗಿ ಗೋಡೆ ಸೇರಿದಕ್ಕೆ
ನನಗೀಗಲೂ ಅವಳ ಮೇಲೆ
ಸಿಟ್ಟು ಬರುತ್ತಿದೆ
ರಮಿಸಲು
ಈಗ ಅವಳಿಲ್ಲ….!!

ಕ್ಷಮಿಸಿ
ಪಡೆದ ಪ್ರೀತಿಯನು
ನಾ ಒಂದಿಷ್ಟು ಮರಳಿ ನೀಡಲಾಗಲಿಲ್ಲಾ….
ನೀ ಕಾರಣ ಹೇಳದೆ
ಹೋದಿಯಲ್ಲಾ….
ನೀನಿಲ್ಲದ ಮನೆಮನಗಳೀಗ
ಖಾಲಿಯಾಗಿ ಬಣಗುಡುತ್ತಿವೆ
ಈಗ ನೀನಿಲ್ಲ….!

ಈ ರಾತ್ರಿ ನಕ್ಷತ್ರವಾಗಿ
ಮಿಂಚು ಅವ್ವ….!!
ಕಾಣಲು ಕಾತರಿಸಿ ಕಾಯುವೆನು
ಹಸುಗು ಸಂತೆ
ಹುಸಿಯ ನಂಬಿ
ನೀ ಬರುವ ಬಾನಿನಲಿ…!!

‍ಲೇಖಕರು Avadhi

19 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading