ರೊಟ್ಟಿ ಮಾರುವ ಹೆಂಗಸು …
ಪ್ರೇಮಾತ್ಮ ಗಣೇಶ್ ಅದ್ಯಪಾಡಿ
ಈ ಕರುಣೆ ಇರದ ಗಂಡಸರಂತೆ
ರವಿ ಕಾರುತ್ತಿದ್ದ ಕೆಂಡಕ್ಕೆ
ಮೈಯೊಡ್ಡಿ ಹಾಸುಗಲ್ಲಿನ ಮೇಲೆ
ರೊಟ್ಟಿ ಇಟ್ಟು, ಶೇಂಗದ ಚಟ್ನಿ ಇಟ್ಟು
ಕರೆಯುತ್ತಾಳೆ ಅವಳು ….
ಅಣ್ಣಾ ರೊಟ್ಟಿ, ಅಕ್ಕಾ ರೊಟ್ಟಿ ….!!!
ಇಲ್ಲ ಇಲ್ಲ ಯಾರೂ ಕೇಳುವವರಿಲ್ಲ
ಬೆವರು ಬಸಿದ ಉಪ್ಪು ರೊಟ್ಟಿಯ ಕೂಗು ..!!
ಮಣ್ಣ ಗೋಡೆಯೊಳಗಿನ
ಅವಳ ಆಕ್ರಂದನ ಕೇಳಿಸದು ಯಾರಿಗೂ .!!
ರೊಟ್ಟಿಯ ಕಪ್ಪು ಕುಳಿಗಳೆಲ್ಲವೂ
ಅವಳ ಮೈಯನ್ನೇ ಅಣಕಿಸುತ್ತವೆ.!!
ಬೆಂಕಿಯ ಉರಿಯಲ್ಲಿ
ಅವಳೂ ಬೆಯುತ್ತಾಳೆ …
ನಿಜ, ರೊಟ್ಟಿಗಿಂತ ತುಸು ಹೆಚ್ಚೆ.

ಅವಳ ಅಗ್ಗದ ರೇಟು
ಯಾರಿಗೂ ಹಿಡಿಸದು …!!
ಸುಟ್ಟುಕೊಂಡ ಕೈಗಳಲ್ಲಿ
ನೋಟಿಗೂ ಮೈಲಿಗೆಯಾದೀತೊ ಏನೋ…!
ಅವಳೂ ನಿಷೇಧಗೊಳಗಾದ
ನೋಟಿನಂತೆ ಮಾರುಕಟ್ಟೆಯ
ಹೊರಗೆ ರೊಟ್ಟಿ ಮಾರುತ್ತಾಳೆ
ನೋವನ್ನು ಹರಾಜಿಗಿಡುತ್ತಾಳೆ !!
ಬತ್ತಿದ ಕೊಳದಂತೆ ಕಣ್ಣು.
ಕನಸಿಲ್ಲ ಬರಿ ಹಿಡಿಗಾಸಿನಾಸೆ
ಸುಟ್ಟ ರೊಟ್ಟಿಗಳಲ್ಲಿ ಮಗನ
ಬುತ್ತಿಕಟ್ಟುವಾಸೆ ..
ಮೊಲೆಯೂಡುವ ತಾಯ್ತನಕ್ಕೆ ಮರುಗುತ್ತಾಳೆ .
ಜೀವಂತಿಕೆ ಚೀಪಿದ ಗಂಡನನ್ನು
ಶಪಿಸುತ್ತಾಳೆ !!
ಈಗೀಗ ರೊಟ್ಟಿ ಬಹಳ ಗಟ್ಟಿ…. ಅವಳಷ್ಟೆ !!
ಅವಳು ಮಾರುತ್ತಾಳೆ
ನೋವಿಗೊಂದು, ಕಾವಿಗೊಂದು
ತನಗೊಂದು, ಮಗುವಿಗೊಂದು
ಅವನ ಸಾರಾಯಿಗೂ ಪಾಲಿಡುತ್ತಾಳೆ …
ಎಷ್ಟೆಂದರೂ ಸುಟ್ಟ ರೊಟ್ಟಿಯಂತೆ ಅವಳೀಗ ..
ಅವಳು …
ರೊಟ್ಟಿ ಮಾರುವ ಹೆಂಗಸು ….






0 Comments