ಮಾತಿಗೆ ಮನಸಾಗುತ್ತಿಲ್ಲ
ವಸುಂಧರಾ ಕೆ ಎಂ. ಬೆಂಗಳೂರು
ತುಟಿಯೊಡೆದು ಎರಡು ಮಾತನಾಡು
ಎಂದವನಿಗೆ ಮಾತು ಬರಲು
ಮನಸ್ಸಿರಬೇಕೆಂದು ಹೇಳುವಾಸೆಯಾಗಿತ್ತು.
ಅಷ್ಟೂ ಅರ್ಥವಾಗದವನಿಗೆ ಏನ ಹೇಳಿದರೂ
ಪ್ರಯೋಜನವಾಗದು ಬಿಡು, ಆಗಾಗ್ಗೆ
ಅವನೊಡನಿದ್ದಾಗ ಹೀಗೆಯೇ
ಜ್ಞಾನೋದಯವಾಗಿತ್ತಲ್ಲ…!
ಮಾತಿನರಮನೆಯಲಿ ರಾಣಿಯಾಗುವ
ಇರಾದೆಯೊಂದು ನನಗಿತ್ತು, ಊಟಕ್ಕೂ
ನೀಡೆನ್ನದ ನಿನ್ನಲ್ಲಿ ಮಾತಿನ ಕುರಿತು
ಮಾಹಿತಿಯೇ ಇರಲಿಲ್ಲ..!

ಮನಸಿನ ಮಾತಿಗೆ ನಿನ್ನ ಎದೆಗಿವಿಯ
ತೆರೆದಿಟ್ಟು ಅಥವಾ ನನ್ನೆದೆ ದನಿ ನಿನಗೆ,
ಸಾವಕಾಶ ಕೇಳಿಸಿಕೊಳ್ಳುವ ಒಂದವಕಾಶ
ಯಾವಾಗಲೂ ಕೊಡಲಿಲ್ಲ..
ಮತ್ತೀಗ ಬರಿಯ ಮಾತಿಗೇನವಸರ..?
ಕಾದು ಕೂತವಳಿಗೂ ಈಗೀಗ ಮಾತು
ಹೂತು ಹೋಗುತಿದೆ.., ಹುತ್ತಕಟ್ಟಿದ ಚಿತ್ತದಲಿ
ಬುಸುಗುಡುವ ಸರ್ಪ ಮಾತ್ರ ಹೆಡೆ ಎತ್ತಿ
ಆಡುತಿದೆ….,
ನರಳಿ ಹೋದ ಮಾತು ಮರಳಿ
ಬಾರದು ಮತ್ತೆ ಅರಳಿ, ಈಗ
ತುಟಿಯೊಡೆಯುವುದೆಂದರೆ,
ಬರಿಯ ಬಿಕ್ಕಳಿಗೆ….






ಕವಿತೆ ಪ್ರಕಟಿಸಿದ್ದಕ್ಕೆ ಧನ್ಯವಾದಗಳು ‘ಅವಧಿ’
bahala sundara bhaava madam
Thank you
Chendada kavithe Vasundara
Thank you