ಈಗಾಗಲೇ ಈ 'ಬೆಂಗಳೂರು' ನಮ್ಮ ಬೆಚ್ಚಿಬೀಳಿಸಿದೆ!

ಮತ್ತಿನ ಮಾಂತ್ರಿಕ

ಜೋಗಿ ಅವರ ‘ಬೆಂಗಳೂರು’

m s thimmappa

ಎಂ ಎಸ್ ತಿಮ್ಮಪ್ಪ 

ಅಲ್ಲ, ಈ ಜೋಗಿ ಅವರ ಕಾದಂಬರಿ ಬೆಂಗಳೂರಿನ ಬಗ್ಗೆ ಅಲ್ಲ. ಬೆಂಗಳೂರಿನ ಜನಜಂಗುಳಿ, ರಸ್ತೆ ಅವ್ಯವಸ್ಥೆ, ಸಾರಿಗೆ ಅವಾಂತರ, ಕಸ ಕಲ್ಮಷ , ಜೀವನ ಶೈಲಿ, ದುಷ್ಟರಾಜಕೀಯ ಊಹುಂ, ಇವುಗಳಬಗ್ಗೆ ಅಲ್ಲವೇಅಲ್ಲ. ಇಲ್ಲಿ ಬೆಂಗಳೂರು ಜೀವನದ ಒಂದು ವಿದ್ರಾವಕ ಭಾಗದ ಸಂಕೇತ. ಅದಮ್ಯ ತುಡಿತಗಳ, ರೋಷ ಕ್ರೌರ್ಯಗಳ ಅಭಿವ್ಯಕ್ತಿಯ ತಾಣ.
ಪ್ರಾರಂಭದಲ್ಲೇ ಈ ಕಾದಂಬರಿಯ ನಾಯಕ, ಕ್ರೈಮ್ ರಿಪೋರ್ಟರ್, ತನ್ನ ಹೆಂಡತಿಯನ್ನು ಕೊಂದು ಪೋಲೀಸ್ ಗೆ ಅದನ್ನು ಫೋನಿನಲ್ಲಿ ತಿಳಿಸಿ ಅವರಿಗಾಗಿ ಕಾಯುತ್ತಿರುತ್ತಾನೆ. ಕಾದಂಬರಿ ಮುಗಿದಾಗಲೂ ಪೋಲೀಸರ ಬರವಿಗೆ ಕಾಯುತ್ತಾ ನಿದ್ದೆಹೋಗುತ್ತಾನೆ. ಇವೆರಡರ ಮಧ್ಯೆ ಕತೆ ಸಾಗುತ್ತದೆ. ಸಧ್ಯದ ಸ್ಥಿತಿಯಿಂದ ನಾಯಕನ ಬಾಲ್ಯಕ್ಕೆ ಕರಕೊಂಡು ಹೋಗುತ್ತಾರೆ, ಮತ್ತೆ ಸಧ್ಯಕ್ಕೆ ಬರುತ್ತಾರೆ, ಮತ್ತೆ ಬಾಲ್ಯಕ್ಕೆ ಮರಳುತ್ತಾರೆ, ಒಮ್ಮೊಮ್ಮೆ ಎರಡೂ ಒಟ್ಟೊಟ್ಟಿಗೇ ನಡೆಯುತ್ತದೆ; ಸಧ್ಯವೇ ಬಾಲ್ಯದ ಸ್ಥಳಗಳಿಗೆ ಹೋಗಿಬರುತ್ತವೆ.. ಈ ಚಲನೆ ಒಂದು ನಾಟ್ಯ, ಭೀಭತ್ಸ ಅಭಿವ್ಯಕ್ತಿಯ ನೃತ್ಯ.
jogi book release
ಅಪ್ಪನಿಗೆ ಇನ್ಯಾವುದೋ ಹೆಂಗಸಿನ ಸಂಗ, ನಂತರ ಅದರ ಭಂಗ, ಅಮ್ಮ ಇನ್ಯಾರಲ್ಲೋ ಅನುರಕ್ತೆ ಮತ್ತು ಅದರಿಂದ ಕ್ರಮೇಣ ದೂರ, ಅಕ್ಕ ಮಾಸ್ತರೊಡನೆ ಸಂಬಂಧ, ಅದರ ಅವಸಾನವಾಗಿ ಬೆಂಗಳೂರು ಸೇರಿ ವೇಶ್ಯೆಯಾಗುವುದು, ಕಡುಬಡತನ, ಇವರೆಲ್ಲರ ಮೇಲೆ ಸಮಾಜದ ತಾತ್ಸಾರ, ಇವೆಲ್ಲವನ್ನೂ ನೋಡುತ್ತಾ ಬೆಳೆದ ನಾಯಕನ ಬಾಲ್ಯ ಮತ್ತು ಅವಕ್ಕೆ ಬೇಸತ್ತ ರೋಷ, ಕ್ರೌರ್ಯದ ನಿರಂತರ ಉಮ್ಮಳಿಕೆ, ಅಸಹಾಯಕತೆಯ ಉದ್ವಿಗ್ನತೆಯಲ್ಲಿ ರಾತ್ರಿ ಹಗಲೂ ಕಳೆಯುವುದು ನಮ್ಮ ಕಣ್ಣು ಕಟ್ಟುತ್ತದೆ, ಹೃದಯ ಮಿಡಿಯುತ್ತದೆ.
ಹಿಂದಾದರೆ ಈತ ‘ದಾರಿ ತಪ್ಪಿದ ಮಗ’ ನಾಗುತ್ತಿದ್ದ ಆದರೆ ಈಗ ಈ ಬೆಂಗಳೂರು ಸೇರಿ ರಹದಾರಿಯ ಸರದಾರ, ಮಾನ ಸಮ್ಮಾನಗಳ ಬಹಾದ್ದೂರನಾಗುತ್ತಾನೆ. ಬದುಕು ಮಾದಕತೆ, ಪ್ರಭುತ್ವ, ಜಯಭೇರಿ ಬಯಸುತ್ತಿರುತ್ತದೆ ಅಂತ ಹೇಳಿದ್ದಾರೆ. ಈ ಬೆಂಗಳೂರಿನಲ್ಲಿ ಅದನ್ನು ನಮ್ಮ ನಾಯಕ ಪಡೆಯುತ್ತಾನೆ, ಅವನ ರೋಷ ಕ್ರೌರ್ಯಕ್ಕೂ ಈ ಬೆಂಗಳೂರಿನಲ್ಲಿ ದಾರಿ ಸಿಗುತ್ತದೆ. ಅದಕ್ಕೆ ಮಾನ ಸಮ್ಮಾನಗಳೂ ದೊರಕುತ್ತದೆ. ಇದೇ ಬೆಂಗಳೂರಿನ ರಹಸ್ಯ!
ಇಂತಹ ಸಂಕೀರ್ಣ, ಸೂಕ್ಷ್ಮ ಹಾಗೂ ನೇತ್ಯಾತ್ಮಕ ಅನುಭವಗಳನ್ನು ಅತ್ಯಂತ ಸರಳ ಭಾಷೆ, ಪದಗಳಲ್ಲಿ ಹಿಡಿದು ನಮ್ಮ ಮುಂದೆ ನೇತುಹಾಕಿದ್ದಾರೆ ಜೋಗಿ. ವೇಗದಿಂದ ಓದಿಸಿಕೊಳ್ಳುತ್ತದೆ ಈ ಕಾದಂಬರಿ. ಅದೆಂತಹ ಪ್ರತಿಭೆ ಜೋಗಿಯವರದು, ಅದ್ಭುತ. ಇವರಲ್ಲಿನ ಸೃಜನ ಉತ್ಪಾದನಶೀಲತೆ ಬೆರಗುಗೊಳಿಸುವಂತಹದು.
ಈ ಬೆಂಗಳೂರು ಅವರಿಂದ ಇನ್ನೂ ಐದು ಆರು ಕಾದಂಬರಿಯನ್ನು ತರುತ್ತಿದೆ ಅಂತ ಅವರೇ ಹೇಳಿದ್ದಾರೆ. ಈ ಕಾದಂಬರಿಗೆ ಎಂಟು ವರ್ಷ ತೆಗೆದುಕೊಂಡಿದ್ದೇನೆ ಅಂದಿದ್ದಾರೆ. ಇನ್ನು ಉಳಿದಿದ್ದಕ್ಕೆ ೫ x ೮=೪೦ ವರ್ಷ ತೆಗೆದುಕೊಳ್ಳದಿರಲಿ, ವರ್ಷಕ್ಕೆ ಒಂದೋ ಎರಡರಂತೆ ಬರಲಿ, ನಾವು ಮುದದಿಂದ ಕಾಯುತ್ತಿರುತ್ತೇವೆ. ಈಗಾಗಲೇ ಈ ‘ಬೆಂಗಳೂರು’ ನಮ್ಮ ಬೆಚ್ಚಿಬೀಳಿಸಿದೆ!

‍ಲೇಖಕರು Avadhi

May 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anonymous

    ಪ್ರೊ.ಬಸವರಾಜ ಪುರಾಣಿಕ
    ಜೋಗಿ ಅವರ “ಬೆಂಗಳೂರು” ಕಾದಂಬರಿ ಪ್ರೊ. ಎಂ.ಎಸ್.ತಿಮ್ಮಪ್ಪ ಅವರನ್ನು ಬೆರಗುಗೊಳಿಸಿರುವುದು, ಚಿಂತನೆಗೆ ಒಳಪಡಿಸಿರುವುದು ಜೋಗಿಯವರ ಪ್ರತಿಭೆಯ ಮೇಲ್ಮೆ. Hats Off ಜೋಗಿ…..ಕೀಪ್ ಇಟ್ ಅಪ್>

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: