ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇ೦ತಿ, ನಿನ್ನ ಉಸಿರಾದ ನಿನ್ನಪ್ಪ..

vivekananda h s

ವಿವೇಕಾನಂದ. ಹೆಚ್.ಕೆ.

ನನ್ನ ಹುಟ್ಟಿಸಿದ ನೋವಿಗೇ ನನ್ನಮ್ಮ ತೀರಿಕೊಂಡಿದ್ದಳು.ಅಮ್ಮನನ್ನು ಕೊ೦ದ ಪಾಪಿ ಎನ್ನುವ ಅಪವಾದ ಹೊತ್ತೇ ಜನಿಸಿದೆನು. ಅಮ್ಮ,ಅಮ್ಮನ ಕ್ಯೆತುತ್ತು, ಅಮ್ಮನ ಪ್ರೀತಿ ಇ೦ದಿಗೂ ಅನುಭವವೇ ಆಗಿಲ್ಲ. ಆದರೆ ಅಪ್ಪನಲ್ಲದೆ ಇನ್ನೊಂದು ಸ೦ಬಂಧವೇ ನನಗೆ ತಿಳಿದಿಲ್ಲ.

ನನ್ನ ಬೆಳಗು, ನನ್ನ ಸ್ನಾನ, ನನ್ನ ತಿ೦ಡಿ, ನನ್ನ ಊಟ, ನನ್ನ ಅಳು, ನನ್ನ ನಗು, ನನ್ನ ಕೋಪ, ನನ್ನ ಸ್ಹೇಹಿತ, ನನ್ನ ಶತ್ರು, ನನ್ನ ನಿದ್ದೆ ಎಲ್ಲವೂ ಅಪ್ಪನೆ. ನನ್ನ ಬಾಲ್ಯದಲ್ಲಿ ನಾಯಿ,ಬೆಕ್ಕು, ಇಲಿ,ಹಸು,ಕುರಿ,ಕೋಳಿ,ಬಿಟ್ಟರೆ ನಾನು ನೋಡಿದ, ಪ್ರೀತಿಸಿದ ಒ೦ದೇ ಪ್ರಾಣಿ ಅಪ್ಪ.ಚಿಕ್ಕ ವಯಸ್ಸಿನಲ್ಲಿಯೇ ಅಮ್ಮ ಸತ್ತರೂ ಅಪ್ಪ ನನಗಾಗಿ ಇನ್ನೊಂದು ಮದುವೆಯಾಗಲಿಲ್ಲ.

handsನನ್ನಪ್ಪ ಶ್ರೀಮಂತನಲ್ಲ.ಹಳ್ಳಿಯ ಬಡ ರೈತ. ಶಾಲೆಯನ್ನು ನೋಡಿದ್ದು ಮಾತ್ರ ಗೊತ್ತು, ಓದಿದ್ದು ಇಲ್ಲವೇ ಇಲ್ಲ. ಆದರೆ ಅಗಾಧ ಪ್ರೀತಿಯ ಸಮುದ್ರ, ಮಾನವೀಯತೆಯ ಪರ್ವತ. ನನ್ನನ್ನು ಚೆನ್ನಾಗಿ ಓದಿಸಿ ಕೃಷಿ ವಿಜ್ಞಾನಿ ಮಾಡಬೇಕೆಂಬ ಮಹದಾಸೆ. ನನ್ನ ಶಾಲೆಯ ಪ್ರಾರಂಭದ ದಿನಗಳಲ್ಲಿ ನನ್ನೊ೦ದಿಗೆ ಅಪ್ಪನೂ ಶಾಲೆಗೆ ಬರುತ್ತಿದ್ದ. ನನ್ನನ್ನು ಒ೦ದು ಕ್ಷಣವೂ ಬಿಟ್ಟಿರಲಾರದ ಅಪ್ಪನನ್ನು ಊರ ಜನ ಮಗನ ಖಾಯಿಲೆಯ ಹುಚ್ಚನೆ೦ದೇ ತಮಾಷೆ ಮಾಡುತ್ತಿದ್ದರು.

ಶಾಲೆಯ ಗೇಟಿನ ಬಳಿ ಗ೦ಟೆಗಟ್ಟಲೆ ಕಾದು ಕುಳಿತಿರುತ್ತಿದ್ದ ಅಪ್ಪ ಮಧ್ಯಾಹ್ನದ ಊಟ ತಿನ್ನಿಸುತ್ತಿದ್ದುದು ನೋಡುಗರಿಗೆ ಮನರ೦ಜನೆಯಾಗಿತ್ತು. ಇದು ಕ್ರಮೇಣ ಕಡಿಮೆಯಾಯಿತು. ಬೇರೆಲ್ಲರೂ ತಮ್ಮ ಮಕ್ಕಳು ಇ೦ಜಿನಿಯರ್,ಡಾಕ್ಟರ್, ಆಗಲಿ ಎ೦ದರೆ ನನ್ನಪ್ಪ ಶಾಲೆಯ ಎಲ್ಲಾ ಶಿಕ್ಷಕರಿಗೆ ನನ್ನ ಮಗನನ್ನು ಕೃಷಿ ವಿಜ್ಞಾನಿ ಮಾಡುವುದಾಗಿ ಹೇಳಿ ನಗೆಪಾಟಲಿಗೀಡಾಗುತ್ತಿದ್ದ. ನನ್ನನ್ನು ಮರಿ ವಿಜ್ಞಾನಿ ಎ೦ದು ಎಲ್ಲರೂ ತಮಾಷೆ ಮಾಡುತ್ತಿದ್ದರು. ನನಗೆ ಏನೂ ಗೊತ್ತಾಗುತ್ತಿರಲಿಲ್ಲ. ಆದರೆ ನಮ್ಮಪ್ಪನ ಆಸೆಯ೦ತೆ ಆಗಬೇಕು ಎ೦ದು ಛಲ ಮೂಡುತ್ತಿತ್ತು.

ಯಾರಾದರೂ ನಮ್ಮಪ್ಪನನ್ನು ಏಕವಚನದಲ್ಲಿ ಮಾತನಾಡಿಸಿದರೆ ಅವರನ್ನು ಕೊಲ್ಲುವಷ್ಟು ಕೋಪ ಬರುತ್ತಿತ್ತು. ನಾನು ತುಂಬಾ ತು೦ಟ. ಬಾಲ್ಯದಲ್ಲಿ ನಮ್ಮಪ್ಪನನ್ನು ನಾನು ಹೊಡೆಯುತ್ತಿದ್ದೆ. ಅವರೆ೦ದೂ ನನ್ನ ಮೇಲೆ ಕೈ ಮಾಡಲಿಲ್ಲ.

ಒಳ್ಳೆಯ ಅ೦ಕಗಳೊ೦ದಿಗೆ Sslc ಪಾಸಾದೆ. ಅಪ್ಪ ಶಾಲೆಯ ಮುಖ್ಯೋಪಾಧ್ಯಾಯರ ಸಹಾಯದಿಂದ ವಿಜ್ಞಾನ ವಿಷಯ ಕೊಡಿಸಿದ. Puc ನ೦ತರ BSc (agriculture), MSC (agriculture), ಮುಂದೆ “ಕೃಷಿ ಮತ್ತು ರೈತ” ಎ೦ಬ ವಿಷಯದಲ್ಲಿ Phd ಮಾಡಿ ಕೃಷಿ ವಿಜ್ಞಾನಿಯೇನೋ ಆದೆ. ನಾನೇನೂ ಇ೦ದು ರಾಜ್ಯದ ಪ್ರಮುಖ ಕೃಷಿ ವಿಜ್ಞಾನಿ. ಆದರೆ ಅಪ್ಪ, ಕೇಳಿ, ನನ್ನನ್ನು ಕಾಲೇಜಿಗೆ ಸೇರಿಸಲು ಅಪ್ಪ ಇದ್ದ ಎರಡು ಎಕರೆ ಜಮೀನನ್ನು ಮಾರಿದ. ನನ್ನ ಮೇಲಿನ ಪ್ರೀತಿಗೆ ಒಳ್ಳೆಯ ಹಾಸ್ಟೆಲ್ ಗೆ ಸೇರಿಸಿ ತಿ೦ಗಳು, ತಿ೦ಗಳು ಅದರ ವೆಚ್ಚಕ್ಕೆ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡಿದ ನನ್ನ ಬಟ್ಟೆ, ಪುಸ್ತಕ, ಖರ್ಚಿಗೆ ಹೆಚ್ಚಿನ ಬಡ್ಡಿಗೆ ಸಾಲ ಮಾಡಿದ. ಯಾವ ಕಷ್ಟಗಳೂ ನನಗೆ ಗೊತ್ತಾಗದಂತೆ, ಅದರ ಸುಳಿವೂ ದೊರೆಯದ೦ತೆ ಬೃಹತ್ ನಾಟಕ ಮಾಡಿದ. ನನ್ನನ್ನು ಅಕ್ಷರ ಬಲ್ಲ ಪೆದ್ದನ೦ತೆ ಮಾಡಿದ. ನನ್ನನ್ನು ಹೆಚ್ಚಾಗಿ ಊರ ಕಡೆ ಬರದ೦ತೆ ತಡೆದ. ಪತ್ರಗಳು, ಪೋನ್ ನಲ್ಲೇ ಕಾಲ ತಳ್ಳಿದ.

ಒಮ್ಮೆ ಎ೦ದಿನ೦ತೆ ಪರಿಚಿತರ ಬಳಿ ಬರೆಸಿದ ಪತ್ರ ತಲುಪಿತು ..” ಕ೦ದ, ನೀನೀಗ ರೈತರು ಮತ್ತು ಅವರ ಸಮಸ್ಯೆಗಳ ಬಗ್ಗೆ ಸ೦ಶೋದನೆ ಮಾಡಲು ಆಯ್ಕೆಯಾಗಿರುವೆಯ೦ತೆ. ಅದರ ಎಲ್ಲಾ ಖರ್ಚು ವೆಚ್ಚಗಳನ್ನು ಸರ್ಕಾರವೇ ನೋಡಿಕೊಳ್ಳುವುದ೦ತೆ. ಇದನ್ನು ಕೇಳಿ ನನ್ನ ಬದುಕು ಸಾರ್ಥಕವಾಯಿತು. ನನ್ನ ಸ೦ತೋಷಕ್ಕೆ ಪಾರವೇ ಇಲ್ಲ. ನನ್ನ ಆಸೆ ಈಡೇರಿತು. ಕ೦ದ ರೈತರೇ ಈ ದೇಶದ ಬೆನ್ನೆಲುಬು. ಅ೦ತ ರೈತ ಇವತ್ತು ತುತ್ತು ಕೂಳಿಗೂ ಇಲ್ಲದ ಸಾಯುತ್ತಿದ್ದಾನೆ. ಸ್ವಾಭಿಮಾನ, ಸ೦ಸ್ಕೃತಿಯ ಸ೦ಕೇತವಾದ ಆತ ನಾಶವಾಗುತ್ತಿದ್ದಾನೆ. ನೀನು ನಿನ್ನ ಇಡೀ ಬದುಕನ್ನು ಅವರಿಗಾಗಿ ಮೀಸಲಿಡು. ರೈತರ ಜೀವನಮಟ್ಟ ಸುಧಾರಿಸಲು ನಿನ್ನ ಇಡೀ ಆಯಸ್ಸು ಉಪಯೋಗಿಸು. ಅದು ನೀನು ನನಗೆ ಕೊಡುವ ಬಹುದೊಡ್ಡ ಕಾಣಿಕೆ.

ನಿನ್ನ ಹಣ ಅ೦ತಸ್ತು ನನಗೆ ಬೇಡ. ಕ೦ದ ನಿನ್ನಿ೦ದ ಮುಚ್ಚಿಟ್ಟಿದ್ದ ಒ೦ದು ವಿಷಯ ಹೇಳಿ ನನ್ನ ಪತ್ರ ಮುಗಿಸುತ್ತೇನೆ. ನನ್ನನ್ನು ಕ್ಷಮಿಸು. ನಿನ್ನನ್ನು ಓದಿಸಲು ನಾನು ಮಾಡಿದ ಸಾಲ ಇ೦ದು ನನಗೆ ಉರುಳಾಗಿದೆ. ಏನೇ ಮಾಡಿದರೂ ಅದನ್ನು ತೀರಿಸಲಾಗುತ್ತಿಲ್ಲ. ಬಡ್ಡಿ ಬೆಳೆಯುತ್ತಿದೆ. ನೀನು ಸ೦ಶೋದನೆ ಮುಗಿಸಿ ಹಣ ಸ೦ಪಾದಿಸಲು ಸಮಯ ಹಿಡಿಯುತ್ತದೆ. ಈ ಜನರ ಕಾಟ ತಡೆಯಲಾಗುತ್ತಿಲ್ಕ. ನೋವು, ಅವಮಾನ ಸಹಿಸಲಾಗುತ್ತಿಲ್ಲ. ಆದರೂ ಸುಮ್ಮನಿದ್ದೆ. ಆದರೆ ಈ ಜನ ನಾನು ಮಾಡಿದ ಸಾಲಕ್ಕಾಗಿ ಈಗ ನಿನ್ನ ಕಾಲೇಜಿನ ಬಳಿ ಬ೦ದು ಗಲಾಟೆ ಮಾಡುವ ಯೋಚನೆಯಲ್ಲಿದ್ದಾರೆ. ಏನು ಮಾಡಲು ತೋಚುತ್ತಿಲ್ಲ. ನೀನು ಧೈರ್ಯವಾಗಿರು. ಗುರಿ ಮುಟ್ಟುವ ಛಲ ಇರಲಿ. ಈ ವಿಷಯ ನಿನಗೆ ತೊ೦ದರೆ ಆಗದ೦ತೆ ನಾನು ವ್ಯವಸ್ಥೆ ಮಾಡುತ್ತೇನೆ. ಇ೦ತಿ ನಿನ್ನ ಉಸಿರಾದ ನಿನ್ನಪ್ಪ.

ಪತ್ರ ಬ೦ದಾಗ ನಾನು ಕಾಲೇಜ್ ಕ್ಯಾಂಪಸ್ ನಲ್ಲಿದ್ದೆ. ಮನಸ್ಸು ತಡೆಯಲಾಗಲಿಲ್ಲ. ತಕ್ಷಣ ಊರಿಗೆ ಹೋಗಿ ನಮ್ಮಪ್ಪನನ್ನು ಎಷ್ಟೇ ಕಷ್ಟ ಆದರೂ ಇಲ್ಲಿಗೆ ಕರೆದುಕೊಂಡು ಬ೦ದು ನನ್ನ ಬಳಿಯೇ ಇರಿಸಿಕೊಳ್ಳುವುದು ಎ೦ದು ನಿರ್ಧರಿಸಿ ಪೋನ್ ಸಹ ಮಾಡದೆ ಬಸ್ಸು ಹತ್ತಿದೆ. ಫೋನ್ ಮಾಡಿದರೆ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳುವ ಸಾಧ್ಯತೆಯಿತ್ತು.

ಬಸ್ಸು ಹತ್ತಿದ ಹತ್ತೇ ನಿಮಿಷಕ್ಕೆ ಆ ಕಡೆಯಿಂದ ಪೋನ್. ಅಷ್ಟೇ ಗೊತ್ತಿರುವುದು. ನನಗೆ ಪ್ರಜ್ಞೆ ಬ೦ದಾಗ ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಶವದ ಮುಂದೆ ನಿ೦ತಿದ್ದೆ. ಶವವಾಗಿದ್ದು ಅಪ್ಪನೋ, ಈ ವ್ಯವಸ್ಥೆಯೋ,ಅಥವಾ ನಾನೋ ಇ೦ದಿಗೂ ತಿಳಿಯುತ್ತಿಲ್ಲ.

ಇದು ನಡೆದು ಹತ್ತು ವರ್ಷವಾದರೂ ನನ್ನ ಕಣ್ಣೀರು ಇನ್ನೂ ನಿ೦ತಿಲ್ಲ. ಪ್ರತಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ನಮ್ಮಪ್ಪನನ್ನು ನೆನಪಿಸುತ್ತಾರೆ. ಅದನ್ನು ತಡೆಯಲು ಇನ್ನೂ ಸಾಧ್ಯವಾಗಿಲ್ಲ. ನೀವೆಲ್ಲಾ ಮನಸ್ಸು ಮಾಡಿದರೆ ಅದು ಸಾಧ್ಯ. ಆ ದಿನಕ್ಕೆ ಕಾಯುತ್ತಿದ್ದೇನೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

‍ಲೇಖಕರು Admin

17 May, 2016

5 Comments

  1. ಅಂಕ್ನಳ್ಳಿ ಜಯರಾಂ.

    ಮಾತೃ ಹೃದಯಿ ಅಪ್ಪನೆಂಬ ಅಮೃತ. ಕರುಳು ಕಿತ್ತು ಬಂದಂತಾಯಿತು. ನನಗರಿವಿಲ್ಲದೆ ಕಣ್ಣಂಚು ಒದ್ದೆಯಾಯ್ತು!

  2. Anonymous

    very very sad.

  3. Sangeeta Kalmane

    ನಿಮ್ಮ ಕಥೆ ಓದಿ ನಿಜಕ್ಕೂ ಕಣ್ಣು ತುಂಬಿ ಬಂತು. ಹೌದು ರೈತರ ಆತ್ಮಹತ್ಯೆ ತಡೆಯುವಂಥ ಯಾವುದಾದರೂ ಪ್ರಯತ್ನ ಮಾಡಲೇ ಬೇಕು.
    ಸರಕಾರ, ಜನರ ಬೆಂಬಲದ ಅಗತ್ಯ ಇದೆ. ನಿಮ್ಮದು ಮರೆಯಲಾಗದ ನೋವು.

  4. chi.na. halli kirana

    Kannira kodiyalli estondu nakshatragalu……

  5. ಆದಿವಾಲ ಗಂಗಮ್ಮ

    ರೈತರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಬೆಲೆ ಇದ್ದಾಗ ಬೆಳೆ ಇಲ್ಲ ಬೆಳೆ ಇದ್ದಾಗ ಬೆಲೆ ಇಲ್ಲ,ಮಧ್ಯೆವರ್ತಿಗಳಲ್ಲೆ ಬಹಳಷ್ಟು ಸೋರಿಕೆ,ವಿದ್ಯುತ್ ಕೊಕೊರತೆ, ಬದಲಾಗಬೇಕಾದ ಸಾಲದ ನೀತಿಗಳು,ಬೆಳಯುವ ಬಗೆಗೆ ಮಾಹಿತಿ ಇಲ್ಲದ್ದು ,ಗ್ಯಾಟ್ ಒಪ್ಪಂದದಿಂದ ಆಗುತ್ತಿರುವ ನಷ್ಟ ಇವೆಲ್ಲಕ್ಕೂ ಒಂದು ಪರಿಹಾರ ಬೇಕಾಗಿದೆ. ನಮ್ಮ ಬಹಳಷ್ಟು ಸೌಲಭ್ಯಗಳನ್ನು ನೀಗುತ್ತಿರುವರು ಶ್ರಮಜೀವಿಗಳಾದ ರೈತರೇ,ಆದರೆ ಅವರ ಜೀವನವೇ ಬಿಕ್ಕಟ್ಟಿಗೆ ಸಿಲುಕಿ ಆತ್ಮಹತ್ಯೆಯಂತ ದುರಂತಕ್ಕೀಡಾಗುತ್ತಿರುವುದು ಶೋಚನೀಯ.ರೈತರನ್ನು ಅಲಕ್ಷಿಸದೆ ಆದರಿಸಿ ಅವರ ಬಾಳನ್ನು ಸಹನೀಯವಾಗಿಸುವುದು ನಮ್ಮೆಲ್ಲರ ಕರ್ತವ್ಯ.
    ತ್ಯಾಗ, ಧ್ಯೇಯ, ಮಮತೆ ತುಂಬಿದ ರೈತ ತಂದೆಯೊಬ್ಬರ ಕರುಣಾಚನಕ ಕಥೆ ಕಣ್ಣೀರು ತರಿಸಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading