ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವಳು ಖಾಲಿಯೆದೆಯೊಡತಿ..

ಉತ್ತರನ ಪತ್ನಿ

ನಂದಿನಿ ವಿಶ್ವನಾಥ ಹೆದ್ದುರ್ಗ

ಇವಳು ಖಾಲಿಯೆದೆಯೊಡತಿ.
ಮನೆಯೊಳಗೆ ನಾದಿನಿ, ಉತ್ತರೆ.
ಊರ ತುಂಬೆಲ್ಲಾ ಮಿತಿಮೀರಿದ
ಅರ್ಜುನರು.
ಹೂಡುವ ಬಾಣ ತನಗೋ ನಾದಿನಿಗೋ
ತಿಳಿಯದ ತಕಲೀಫು.

ಮಹಾ ಪತಿವ್ರತೆ ಪಾಂಚಾಲಿಯಂತಹ
ಇವಳಿಗೆ
ಸುಡುಬೇಸಿಗೆಯಲ್ಲೂ ಗಡಗಡ ಚಳಿ.
ನೆರೆಮನೆಯ ಕುಡಿ ಮೀಸೆ ಅರ್ಜುನನ
ಬೆರಳ ತುದಿಯಲ್ಲಿ ಮಾಗಿ ಯಾಕೋ
ವಿಪರೀತ ಮಾತನಾಡಿಸಿದೆ.

ಖಾಲಿ ಕಣ್ಣೆಂಜಲಿಗೆ ಆನಂದಿಸುವ
ಹೆಣ್ಣಿಗೆ
ಉಪ್ಪು ಖಾರದ ಜೊತೆಗೆ ಹುಳಿಯೂ
ಹೆಚ್ಚೇ ಇಷ್ಟ.
ಉತ್ತರೆಯಿರದ ಸಮಯ ನೋಡಿ
ತುಂಡು ಸ್ಕರ್ಟು ತೊಟ್ಟು
ಹಜಾರ, ಕಿಚನ್ನು
ಮಹಡಿ ಅಂತೆಲ್ಲ ಸುಳಿದಾಡುವಳು
ಸುಮ್ಮನೆ.


ಒಲೆಯ ಮುಂದೆ ಕುಳಿತ ಅವಳ ಉತ್ತರನಿಗೆ
ಕಣ್ಣೆತ್ತಿ ನೋಡಲೂ ಸೋಮಾರಿತನ.
ಬಟ್ಟೆ ತಾನೇ ಕಳಚಿ
ತೊಟ್ಟು ಅವನ ತುಟಿಗಿಟ್ಟು
ಛೀ…ಸುಟ್ಟುಬಿಡುವಷ್ಟು ಕೋಪ!

ದವಡೆ ಮೂಲದ್ದು ಅವಳ ಕೋಪ.!
ಇರುವ ಅವನೊಬ್ಬನೂ ಉರಿದುಹೋದರೆ
ಬದುಕಲೇನಿದೆ, ಖಾಲಿ ಉಸಾಬರಿ.
ಇರುವ ನಾಲ್ಕು ಪದಗಳಲ್ಲೇ
ಬರೆಯುವೆ ಎನ್ನುವಳು ಶಾಯರಿ.

‘ಮುದಿಮಳ್ಳ ಅರ್ಜುನರಿಗೂ
ಊರ ತುಂಬೆಲ್ಲಾ ಉಲೂಚಿಯರು.
ಮತ್ತಿವನದ್ದು
ಒಲೆಯ ಮುಂದಿನ ಪುಟ್ಟ ಸಾಮ್ರಾಜ್ಯ’
ಕೊನೆಯ ಹಲ್ಲು
ಕಾಣುವವರೆಗೆ ನಗುವ ಹೆಣ್ಣಿಗೆ
ಇನ್ನಿಲ್ಲದ ಅಭಿಮಾನ
ತನ್ನ ಉತ್ತರನ‌ ಮೇಲೆ.

“ಪದ್ಯ ಬಂದಿದೆ ನನ್ನದು,
ಪುಟ ಹದಿನೈದು” ಎಂದಳು.
”ಪದ್ಯವೋ, ಪಾನಕವೋ
ಆಗಿಬಾರದು ನನಗದೆಲ್ಲ”
ಮಗ್ಗುಲ ತಿರುಗಿಸಿ
ಗೊರಕೆಯ ಲಯ ಬದಲಿಸಿದ.
ಬಟ್ಟೆ ಹಿಡಿದು ಬಚ್ಚಲ ಬಾಗಿಲು
ಮುಚ್ಚಿದ ಒಡನೆ ಲಗುಬಗೆಯಲ್ಲಿ
ಪುಟ ತಿರುಗಿಸುವವನ ಮೆಚ್ಚದೇ
ಇರಬಹುದೇ ನೀವೇ ಹೇಳಿ?

”ಹೊದ್ದು ಮಲಗಿದ ಮೇಲೆ ಬರಹೇಳು
ನಿನ್ನ ಮಂಡಿಯ ನೋವ” ಎನುವವನ
ನಸುಗುನ್ನಿತನವೂ ಮೆಚ್ಚುಗೆಯಾಗಿ…
ಮುತ್ತಿಟ್ಟು…ಮುಂದೆನದೆಲ್ಲ…
ಎಂದಿನಂತೆ…ಅವಳದ್ದೇ.!!

ಇದು ಕಾರಣ…
ಒಲೆಯ ಮುಂದಿನ ನೆಲೆಗೆ
ಅವರಲ್ಲೇ ಒಳಜಗಳವಾಗಿ
ಖಾಲಿಯೆದೆಯಾದರೂ ಸರಿಯೇ,
ಅರ್ಜುನರ ಆರಾಧಿಸಲಾರಳು
ಅವಳೆಂದಿಗೂ.

‍ಲೇಖಕರು avadhi

22 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading