ಹೇಮಾ ಸದಾನಂದ್ ಅಮೀನ್
ಇವರ ಹೆಸರು ಚಾಂದಿನಿ, ಟಿ.ನರಸೀಪುರ ತಾಲೂಕಿನ ಇವರು ಸದ್ಯ ವಾಸವಿರುವುದು ಬೆಂಗಳೂರಿನಲ್ಲಿ. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಮತ್ತು ಹಿಜ್ರಾ ಭಾಷೆ ಮಾತನಾಡಬಲ್ಲ ಈಕೆ ಹೋರಾಟಗಾರ್ತಿ. ಅನೇಕ ಸ್ಕೂಲು, ಕಾಲೇಜುಗಳಿಗೆ ಹೋಗಿ ಪಾಠ ಮಾಡುತ್ತಾರೆ. ಅಷ್ಟೇ ಅಲ್ಲ, ಇವರು ಕವಯಿತ್ರಿ ಕೂಡ. ಇವರ ಮೊದಲ ಕವನ ಸಂಕಲನದ ಹೆಸರು ‘ಮನದ ಕಣ್ಣು’. ಇವರ ಒಂದು ಪದ್ಯ ಕುವೆಂಪು ವಿವಿಯಲ್ಲಿ ಪಠ್ಯವಾಗಿದೆ. ಸುಮಾರು ವರ್ಷಗಳಿಂದ ತನ್ನವರಿಗಾಗಿ ದುಡಿಯುತ್ತಿರುವ ಈ ಜೀವಕ್ಕೆ ಒಬ್ಬಳು ಮಗಳಿದ್ದಾಳೆ. ಆ ಹುಡುಗಿ ಏಳನೇ ಕ್ಲಾಸಲ್ಲಿ ಓದುತ್ತಿದ್ದಾಳೆ. ಮಗಳ ಬಗ್ಗೆ ಮಾತನಾಡಿದರೆ ಸಾಕು ಚಾಂದಿನಿಯವರಿಗೆ ಖುಷಿಯಾಗುತ್ತದೆ.
ಚಾಂದಿನಿ ಅವರ ಆಕಾಶವಾಣಿ ಸಂದರ್ಶನ ಒಂದು ನೋಡಿದ್ದೆ. ಅವರ ಮಾತು, ಅವರು ಬದುಕಿ ಬಂದ ಹಾದಿ, ನೋವು ಕೊಟ್ಟ ಸಮಾಜವನ್ನೇ ಸುಧಾರಿಸಲು ಪಣತೊಟ್ಟಿರುವ ಅವರ ಗಂಭೀರತೆ ನೋಡಿ ಅವರ ಬಧುಕಿನ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ. ಇದನ್ನು ನನ್ನ ಕವಿ ಮಿತ್ರರೊಬ್ಬರಲ್ಲಿ ಹೇಳಿಕೊಂಡೆ. ಅವರು ಚಾಂದನಿ ಅವರಲ್ಲಿ ನನ್ನ ಬಗ್ಗೆ ತಿಳಿಸಿ ನಮ್ಮನ್ನು ಮಾತಾಡಿಸಿದರು. ಅವರು ಮುಂಬಯಿಗೆ ಬರುತ್ತಿರುವುದು ತಿಳಿದು ಇಲ್ಲಿ ಭೇಟಿಯಾಗುವ ದಿನ ನಿಗಧಿತವಾಯಿತು. ಈ ಮಧ್ಯ ನನ್ನ ಓದು ಒಂದು ಹೊಸ ಪ್ರಪಂಚಕ್ಕೆ ಕೊಂಡೊಯ್ಯಿತು. ಅದೇ ಮಂಗಳಮುಖಿಯರ ಪ್ರಪಂಚ.
ಮುಂಬಯಿ ಬಂದ ಮೂರನೇ ದಿನ ನಮ್ಮ ಭೇಟಿ ನಿಗಧಿತವಾಯಿತು. ಸಂಜೆ ೪; ೩೦ ಏರ್ ಪೋರ್ಟ್ ತಲುಪಬೇಕಿತ್ತು. ನಾನು ಮತ್ತು ನನ್ನ ಪತಿ ಘಾಟ್ಕೋಪರ್ ಸ್ಟೇಷನಿನಲ್ಲಿ ನೋ ಪಾರ್ಕಿಂಗ್ ಲೇನ್ ನಲ್ಲಿ ಕಾರ್ ಪಾರ್ಕ್ ಮಾಡಿ ಕಾಯುತ್ತಿದ್ದೆವು. ಅವರ ಮೊಬೈಲ್ ಮೌನವಾಗಿತ್ತು. ನನ್ನ ಕಾತರ ಇನ್ನೇನು ನಿರಾಶೆಯ ತಿರುವಿನತ್ತ ತಿರುಗುವಷ್ಟರಲ್ಲಿ ಮೊಬೈಲಿನ ಕಿಂಕಿಣಿ ಕೇಳಿಸಿತು.
ನನ್ನೊಳಗೆ ಒಂದು ಧೀರ್ಘ ನಿಟ್ಟುಸಿರು. ಅವರ ಸ್ವರ ಗಾಳಿಯಲ್ಲಿ ತೇಲುತ್ತಿರುವಂತೆ ಅನಿಸಿತು. ಅವರನ್ನು ನೋಡಿದಾಕ್ಷಣ ನನ್ನ ಊಹೆ ತಲೆಕೆಳಗಾಯಿತು. ಮುಖದಲ್ಲಿ ಯಾವುದೇ ರಂಗಿನ ಆಸರೆ ಇಲ್ಲ. ಉದ್ದನೆಯ ಕೂದಲನ್ನು ಬಾಚಿ ಹೆರಳು ಕಟ್ಟಿ ಹೂವು ಮುಡಿಯುವುದಾಗಲಿ, ಕೈ ತುಂಬಾ ಗಾಜಿನ ಬಳೆಗಳಾಗಲಿ ಏನೂ ಇರಲಿಲ್ಲ. ತೀರ ಸರಳ ಉಡುಪು, ಕೂದಲನ್ನು ಸವರಿ ದೊಡ್ಡದಾದ ತುರುಬು ಕಟ್ಟಿದ್ದರು. ಧರಿಸಿದ್ದ ಮೂಗುತಿಯ ಹೊಳಪಲ್ಲಿ ನಗು ಬೆರೆತು ನನ್ನೊಳಗೆ ಹೆಪ್ಪುಗಟ್ಟಿರುವ ಭಯವೆಲ್ಲ ಕರಗಿಹೋದವು.
ಆಗ ನನಗೆ ಕಂಡದ್ದು ಕನ್ನಡದ ಒಬ್ಬ ಬರಹಗಾರ್ತಿ ಅಷ್ಟೇ. ಅಂದು ಸಮಯ ಯಾಕೋ ನಮಗೆ ಸಹಕರಿಸುತ್ತಿರಲಿಲ್ಲ. ಅವರಿಗೆ ಏರ್ಪೋರ್ಟಿಗೆ ಹೋಗಲು ಲೇಟಾಗುತಿತ್ತು. ಬೇರೆ ಪರ್ಯಾಯವಿಲ್ಲದೆ ನಾವು ಕಾರಲ್ಲಿಯೇ ನಮ್ಮ ಮಾತುಕತೆ ಪ್ರಾರಂಭಿಸಿದೆವು. ನಮಗೆ ಸಿಕ್ಕಿದ್ದು ಕೇವಲ ಇಪ್ಪತ್ತು ನಿಮಿಷ. ಅದರಲ್ಲಿ ನಾನು ಕೇಳುವುದೆಷ್ಟು ಅವರು ಹೇಳುವುದೆಷ್ಟು? ಒಂದೊಂದಾಗಿ ನಾನು ಕೇಳುತ್ತಾ ಹೋದೆ. ಅವರು ಯಾವುದೇ ಅಳುಕಿಲ್ಲದೆ ಉತ್ತರಿಸುತ್ತಾ ಹೋದರು. ನನ್ನ ಕುತೂಹಲವೆಲ್ಲ ಹೀಗಿತ್ತು…..
ನಿಮ್ಮ ಬಾಲ್ಯ ಹೇಗೆ ಭಿನ್ನವಾಗಿತ್ತು
ನಾನು ಗಂಡು ಆದರೆ ನನ್ನೊಳಗಿನ ಭಾವನೆ ಹೆಣ್ಣು. ಆಗ ನನಗೆ ಸುಮಾರು ಎಂಟು ವರ್ಷ. ಆಗ ಈ ಸೂಕ್ಷ್ಮ ನನ್ನ ಗೋಚರಕ್ಕೆ ಬರುತ್ತದೆ. “ನಾನು ಯಾಕೆ ಬೇರೆಯಾಗಿದ್ದೇನೆ? “ನಾನು ಯಾಕೆ ಬೇರೆ ಮಕ್ಕಳ ತರಹ ಇಲ್ಲ? ಹುಡುಗಿಯರ ತರಹ ಬಟ್ಟೆ ಧರಿಸ್ಬೇಕೆಂಬ ಆಸೆಗಳು. ಈ ಭಾವನೆಗಳನ್ನು ಯಾರ ಜೊತೆಯೂ ಹೇಳಿಕೊಳ್ಳಲು ಆಗದ ಪರಿಸ್ಠಿತಿ. ಇಂತಹ ಅದೆಷ್ಟೋ ಪ್ರಶ್ನೆಗಳು ಮನದೊಳಗೆ ಹುಟ್ಟಿ ಉತ್ತರ ಸಿಗದೆ ವಿಲವಿಲನೆ ಒದ್ದಾಡುವಂತಹ ರೀತಿಯಿಂದಾಗಿ ನಮ್ಮಂತವರ ಬಾಲ್ಯ ವಿಭಿನ್ನವಾಗಿರುತ್ತದೆ. ಚಿಕ್ಕ ವಯಸ್ಸಿನಲ್ಲಿ. ಮನೆಯವರಿಗಾಗಲಿ, ಹೊರಗಿನವರಿಗಾಗಲಿ ಯಾವ ತೊಂದರೆಗಳು ಬರುವುದಿಲ್ಲ.
ಯೌವನ ಅಂದರೇನೇ ಭಾವನೆಗಳು ಗರಿ ಬಿಚ್ಚುವ ಪ್ರಾಯ? ಈ ಪ್ರಾಯವನ್ನು ನೀವು ಹೇಗೆ ಎದುರಿಸಿದಿರಿ?
ನನಗೆ ಈ ಪ್ರಾಯದಲ್ಲಿ ಒಬ್ಬ ಹುಡುಗನ ಬಗ್ಗೆ ಒಲವು ಮೂಡಿತ್ತು. ಅದು ತೀರ ಸ್ವಾಭಾವಿಕವಾಗಿಯೇ ಇತ್ತು. ಆ ಸಮಯದಲ್ಲಿ ಇತರರಿಗಾಗುವಂತೆ ತನ್ನ ಪ್ರೀತಿಯ ಹುಡುಗನನ್ನು ನೋಡುವುದು, ನಾಚಿಕೊಳ್ಳುವುದು, ಸಂಕೋಚ ಪಡುವುದು, ಮುಖ ತೋರಿಸದೆ ಇರೋದು, ಅವನ ಜೊತೆ ಮಾತಾಡುವ ಬಯಕೆ, ನನಗೆ ಅವನೆದುರಿಗಿದ್ದರೆ ಬೇರೇನೂ ಬೇಡ. ಮನದ ಈ ಸಂಭ್ರಮವನ್ನು ಅವನೆದುರಿಗೆ ಹೇಳಲು ಆಗದೆ ಅವುಗಳನ್ನು ಬರೆಯಲಾರಂಭಿಸಿದೆ. ಅವುಗಳನ್ನು ಓದುತ್ತಿದ್ದಂತೆ ಮನಸ್ಸಿಗೆ ಮುದವೆನಿಸುತಿತ್ತು. ಕ್ರಮೇಣ ನನ್ನ ಬರಹ ಕವನ ರೂಪ ತಾಳಿದವು. ಈಗಲೂ ಮನಸ್ಸು ಭಾರವಾದಾಗ ನಾನು ಬರಹಕ್ಕೆ ಮೊರೆಹೋಗುತ್ತೇನೆ.
ನಿಮ್ಮ ಈ ವರ್ತನೆಯಿಂದ ಜನರು ನಿಮ್ಮನ್ನು ಯಾವ ರೀತಿ ನೋಡಲಾರಂಬಿಸಿದರು?
ಆಗ ಜನರು ನನ್ನನ್ನು ಕಿನ್ನರ, ಚಕ್ಕ, ಶಿಖಂಡಿ ಎಂಬ ಹೆಸರಿನಿಂದ ಕರೆದರು. ಈ ಹೆಸರು ನನ್ನೊಳಗೆ ನಾನು ಎಲ್ಲರಂತೆ ಮನುಷ್ಯನಾಗಿದ್ದರೂ , ಇವರ್ಯಾಕೆ ನನ್ನನ್ನು ಹೀಯಾಳಿಸುತ್ತಾರೆ? ಉಳಿದವರಿಗಿದ್ದ ಸ್ವಾತಂತ್ರ , ನನಗ್ಯಾಕೆ ಇಲ್ಲ? ಈ ತರಹದ ಗೊಂದಲುಗಳ ಬೀಜ ನನ್ನೊಳಗೆ ಬಿತ್ತಿಕೊಂಡವು. ನನ್ನ ಪ್ರಾಯದ ಮಕ್ಕಳು ನನ್ನ ಜೊತೆ ಆಡಲೂ ನಿರಾಕರಿಸಿದರು.
ಮಲ್ಲಿಕಾರ್ಜುನ ತನ್ನೊಳಗಿನ ಚಾಂದನಿಯನ್ನು ನೋಡಿದ ಪರಿ ಹೇಗೆ?
ಮನುಷ್ಯರ ಭಯದಿಂದಾಗಿ ಚಿಕ್ಕಂದಿನಲ್ಲಿ ನನ್ನಲ್ಲಿ ಮೊಳಕೆಯೊಡೆದ ಈ ಭಾವನೆಗಳನ್ನೆಲ್ಲ ಪ್ರಕೃತಿ ಜೊತೆ ಹಂಚಿಕೊಂಡಿದ್ದೆ. ಊರಿನಾಚೆ ಹೊಲ ಗದ್ದೆಗಳಲ್ಲಿರುವ ಹೂವು ಹಣ್ಣಿನಿಂದ ತುಟಿಗೆ ಬಣ್ಣ ಹಚ್ಚಿಕೊಳ್ಳುವುದು, ಕೋಡುಗಳನ್ನು ಗೆಜ್ಜೆ ಮಾಡಿಕೊಳ್ಳುವುದು. ಕ್ಯಾಸೆಟ್ ರೀಲುಗಳನ್ನು ವಿಗ್ ಮಾಡಿಕೊಳ್ಳುವುದು. ಟವಲನ್ನು ಸೀರೆಯಾಗಿಸಿಕೊಳ್ಳಲು ಇಷ್ಟಪಡುತಿದ್ದೆ. ಇದು ಎಷ್ಟರ ಮಟ್ಟಿಗೆ ಅಂದರೆ, ನನ್ನ ಶಾಲೆಯಲ್ಲಿ ನಾಟಕಗಳಲ್ಲಿ ಹೆಣ್ಣಿನ ಪಾತ್ರವನ್ನೇ ಕೇಳಿ ಒಪ್ಪವಾಗಿ ನನ್ನನ್ನು ನಾನು ಅಲಂಕರಿಸುವ ಅವಕಾಶ ಬಿಡುತ್ತಿರಲಿಲ್ಲ.
ಬದಲಾವಣೆಯ ನಿರ್ಧಾರ ನೀವು ಮಾಡಿದ್ದು ಯಾವಾಗ?
ನನ್ನ ಪ್ರೀತಿಯನ್ನು ಆ ಹುಡುಗನಿಗೆ ಹೇಳಿಕೊಂಡೆ. ಅದು ಯಶಸ್ಸಾಗಲಿಲ್ಲ. ಆಗ ನನಗೆ ಒಂದರ ಹಿಂದೆ ಒಂದು ಹಿಂಸೆಗಳು ಶುರುವಾದವು. ಸಮಾಜ ನಾನು ಅವರ ಪ್ರಪಂಚದವಳಲ್ಲ ಎಂದು ಬೆರಳು ಮಾಡೋದು, ಮನೆಯಲ್ಲಿ ನಾನು ಗಂಡು ಮಕ್ಕಳಂತೆಯೇ ಇರಬೇಕೆಂದು ಒತ್ತಾಯಿಸುವುದು, ಮನಸ್ಸು ಮತ್ತು ದೇಹದ ಈ ದ್ವಂದದಲ್ಲಿ ನಾನು ವಿಲವಿಲನೆ ಒದ್ದಾಡುತಿದ್ದೆ. ಆಗ ಈ ಜಾಗ ನನ್ನದಲ್ಲ. ನನ್ನ ಹುಟ್ಟು ಈ ಲೋಕಕ್ಕಲ್ಲ. ನನ್ನದೆನ್ನುವ ಪ್ರಪಂಚವೇ ಬೇರೆ ಅದುವೆ ಕಿನ್ನರ ಲೋಕ. ಈಗ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಾದರೆ ಅದು ಸಾಮಾಜಿಕ ಜಾಲತಾಣದಲ್ಲಿ ಸುಲಭವಾಗಿ ದೊರಕುತ್ತದೆ.
ಅದೂ ಹಳ್ಳಿಯ ಜನರಾದ ನಮಗೆ ಇದರ ಬಗ್ಗೆ ಗೊತ್ತೂ ಇರಲಿಲ್ಲ. ನಾನು ಈ ಸಮುದಾಯವನ್ನು ಸೇರಲು ಕಾರಣ ನಮ್ಮ ಸಮಾಜವೇ. ಸಕರಾತ್ಮಕವಾಗಿ ಮಾನವಿಯತೆಯಿಂದ ಸ್ಪಂದಿಸದೇ ಇರುವ ಈ ಸಮಾಜವೇ. ನನ್ನ ಭಾವನೆಗಳಿಗೆ ಹೆಸರು ಕೊಟ್ಟವರು ಇವರೇ. ಆದರೆ ನಮ್ಮೂರನ್ನು ಬಿಟ್ಟು ಹೊರ ಬಂದಾಗ ನನ್ನಂತೆಯೇ ಹಲವಾರು ಜನರನ್ನು ಕಂಡೆ. ನಾನೊಬ್ಬಳೆ ಹೀಗಲ್ಲ ನನ್ನಂತೆ ಇನ್ನೂ ಸಾವಿರಾರು ಜನರಿದ್ದಾರೆ. ಇದುವೆ ನನ್ನ ಲೋಕ. ಇಲ್ಲಿಯ ಜನರ ಭಾವನೆಗಳೂ ನನಗೆ ಸರಿ ಹೊಂದುತ್ತವೆ. ಇಲ್ಲಿ ನಾವು ಮುಕ್ತವಾಗಿ ಮಾತಾಡಬಹುದು. ಇಲ್ಲಿ ನಾನು ‘ಚಾಂದನಿ’ ಆದೆ.
ಭಾವನೆಯಂತೆ ದೇಹವನ್ನು ಪರಿವರ್ತಿಸಬೇಕೆಂದು ನಿಮಗೆ ಯಾಕೆ ಅನಿಸಿತು?
ನಾವು ಈ ಸಮುದಾಯದವರಲ್ಲಿ ಬೆರೆತ ಬಳಿಕ ನಮ್ಮ ಹೆಸರಲ್ಲಿ ಹೆಣ್ತನ ಇತ್ತು. ಆಗ ನನ್ನ ಅಂತರಾತ್ಮದ ಕರೆಗೆ ಓಗೊಡುವ ಧೈರ್ಯ ಬಂತು. ಅಂತರ್ಯದ ಭಾವದಂತೆ ದೇಹಕ್ಕೂ ರೂಪುರೇಷೆ ಕೊಡುವದು ಅನಿರ್ವಾಯ ಎಂದೆನಿಸಿತು. ಅದಲ್ಲದೆ ನಾ ಹುಟ್ಟಿದ ಮನೆ, ನಾನು ಬೆಳೆದ ನೆರೆಹೊರೆಯವರ ಮಧ್ಯ ನನ್ನ ಅಸ್ಮಿತೆಯೊಂದಿಗೆ ಬದುಕುವುದು ಬಹಳ ಕಷ್ಟವೆನಿಸಿತು. ಬದುಕಿನ ಈ ಕವಲು ದಾರಿಯಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಕೊನೆಗೆ ಬುದ್ದಿಯ ಮಾತು ಕೇಳಿದೆ.
ದೇಹ ಪರಿವರ್ತನೆ ಮಾಡಿಸಿಕೊಂಡ ಬಳಿಕ ನಿಮ್ಮ ಬದುಕು ಯಾವ ತಿರುವು ಪಡೆಯಿತು?
ಚಿಕ್ಕಂದಿನಿಂದಲೂ ನೋವನ್ನೇ ಅನುಭವಿಸಿದ್ದೆ. ಆಗ ಮನಸ್ಸಿಗೆ ನೋವು ಕೊಟ್ಟರು ಈಗ ದೇಹಕ್ಕೆ ನೋವು. ಹೌದು, ಶಸ್ತ್ರ ಚಿಕಿತ್ಸೆಯಲ್ಲಿ ಪಟ್ಟ ನೋವು ಅಷ್ಟಿಷ್ಟಲ್ಲ. ವಿಷಯ ತಿಳಿದ ಅಪ್ಪ ಅಮ್ಮ ಮನೆಯಿಂದ ಹೊರಮಾಡಿದರು. ಅಪ್ಪ ಅಮ್ಮ ಇದ್ದು ಅನಾಥ ಪ್ರಜ್ಞೆ ಕಾಡುತಿತ್ತು. ಅವರ ಮನಸ್ಸಿನ ತುಮುಲವನ್ನೂ ಅರ್ಥ ಮಾಡಿಕೊಂಡಿದ್ದೆ. ಇದ್ದ ಒಬ್ಬನೇ ಮಗನ ಬಗ್ಗೆ ಅವರು ಕಟ್ಟಿಕೊಂಡ ಕನಸು ಚೆಲ್ಲಾ ಪಿಲ್ಲಿಯಾಗುತ್ತಿರುವುದನ್ನು ನೋಡಿ ಯಾವುದೇ ಪಾಲಕರ ಕರುಳು ಕುಯ್ದಂತಾಗುವುದು ಸಹಜ. ನಾನೂ ಸ್ವಾರ್ಥವನ್ನು ಬದಿಗಿಟ್ಟು ಅಮ್ಮನನ್ನು ಕದ್ದು ಮುಚ್ಚಿ ಭೇಟಿಯಾಗಲಾರಂಭಿಸಿದೆ.
ಕತ್ತಲಾದಾಗ ನಾನು ಮನೆಗೆ ಹೋಗುತ್ತಿದ್ದು ಎಲ್ಲರೂ ಎಚ್ಚರವಾಗುವ ಮೊದಲೇ ಮನೆ ಬಿಡಬೇಕಾಗುತಿತ್ತು. ಅಪ್ಪನ ಸಿಟ್ಟು ಮಾತ್ರ ಹಾಗೆಯೇ ಇತ್ತು. ನಾನು ಮನೆಗೆ ಹೋದೆನೆಂದರೆ ಅವರು ಮನೆಗೆ ಕಾಲಿಡುತ್ತಿರಲಿಲ್ಲ. ನನ್ನಮ್ಮ ಗದ್ದೆಗೆ ಹೋದರೆ ನನ್ನನ್ನು ಮನೆಯಲ್ಲಿ ಬೀಗಹಾಕಿ ಕೂಡಿ ಹೋಗುತ್ತಿದ್ದರು. ಆಜ್ಜಿ ಸತ್ತಾಗ ಸಂಬಂಧಿಕರು ಬಂದಾಗ ನನ್ನನ್ನು ಮನೆಯಿಂದ ಹೊರಗೆ ಹೋಗಲೂ ಹೇಳಿದ್ದರು. ಅದೊಂದು ಸಮಯ ನಾನು ಮನೆಯಲ್ಲೇ ಪರಕೀಯಳಾಗಿದ್ದೆ. ಈ ವಿಷಯ ನನ್ನನ್ನು ಬಹಳಷ್ಟು ಕಾಡಲಾರಂಭಿಸಿತು. ಆದರೂ ಧೃತಿಗೆಡದೆ ಎಲ್ಲಾ ರೀತಿಯ ಹಿಂಸೆ , ನೋವು, ನಿಂದನೆಗಳನ್ನು ಸಂಘರ್ಷವೆಂದು ಎದುರಿಸಿ ಮುಂದೆ ಹೋಗುವುದೇ ನನ್ನ ಗುರಿಯಾಗಿತ್ತು. ಆ ಸಮಯದಲ್ಲಿ ನಾನು ಇದೆಲ್ಲ ತಪ್ಪು ಎಂದು ಭಾವಿಸಿರುತ್ತಿದ್ದರೆ ಬಹುಶಃ ನನ್ನ ದೇಹ ಹಾಗೂ ಮನಸ್ಸಿಗೆ ನಾನೇ ವಂಚಿಸುವಂತಾಗುತಿತ್ತೇನೋ?
ನಿಮ್ಮ ವೃತ್ತಿಯ ಬಗ್ಗೆ ತಿಳಿಯಬಹುದಾ ?
೧೯೯೯ ರಲ್ಲಿ ನಾನು ನನ್ನ ದೇಹ ಹಾಗೂ ಮನಸ್ಸು ಸಮತೋಲವಾಗುವಂತೆ ಮಾಡಿಕೊಂಡೆ. ನಾನು ಕಾಲೇಜಿನ ದ್ವಿತೀಯ ವರ್ಷ ಮುಗಿಸಿದ್ದೆ ಅಷ್ಟೇ. ಅದಲ್ಲದೆ ಮನೆ ಬಿಟ್ಟಾಗ ಯಾವುದೇ ಸರ್ಟಿಫಿಕೇಟ್ ತಂದಿರಲಿಲ್ಲ. ನಮ್ಮ ಸಮುದಾಯದ ನಿಯಮದಂತೆ ಹೊಟ್ಟೆಪಾಡಿಗಾಗಿ ಭಿಕ್ಷಾಟನೆ, ದೇಹ ವ್ಯಾಪಾರ ಮಾಡಬೇಕಾಯಿತು. ಆ ಹೊತ್ತಲ್ಲೇ ನನಗೆ HIV ರೋಗದ ಬಗ್ಗೆ ಮಾಹಿತಿ ಕೊಡುವಂತಹ ಒಂದು NGOದಲ್ಲಿ ಕೆಲಸ ಸಿಕ್ಕಿತು. ಇಲ್ಲಿಂದಲೇ ನನ್ನ ಜೀವನ ಶೈಲಿ ಬದಲಾಗಲಾರಂಭಿಸಿತು.
ಮೊದಲು ಕಾಂಡಮ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸಕ್ಕೆ ಸೇರಿಕೊಂಡವಳು ಈಗ ಸೂಪರ್ವೈಸರ್, ಪ್ರೊಗ್ರಾಮ್ ಮ್ಯಾನೇಜರ್, ಡೈರೆಕ್ಟರ್, ಝೋನಲ್ ಇನ್ಚಾರ್ಜ್ ಈ ರೀತಿ ಹಂತ ಹಂತಕ್ಕೆ ಬೆಳೆಯುತ್ತಾ ಬಂದೆ. ಬೇರೆ ಬೇರೆ ದೇಶಗಳಿಗೆ ಹೋದೆ. ಅಮೆರಿಕಾದಲ್ಲಿ ನನ್ನಂತಹ ತೃತೀಯ ಲಿಂಗಿ ಮನೆಗೆ ಹೋಗಿ ಅವರ ಅಪ್ಪ ಅಮ್ಮಂದಿರ ಜೊತೆ ಮಾತಾಡಲಾರಂಭಿಸಿದೆ. ಜೊತೆಗೆ ನನ್ನ ಮನೆಯವರಿಗೂ ಕೌನ್ಸಿಲಿಂಗ್ ಮಾಡಿದೆ. ತುಂಬಾ ಸಹನೆ, ಪ್ರೀತಿಯಿಂದಲೇ ಅವರನ್ನು ನನ್ನವರನ್ನಾಗಿ ಪರಿವರ್ತಿಸಿದೆನು. ನನ್ನನ್ನು ನೋಡಲೂ ಇಷ್ಟಪಡದ ಅಪ್ಪ ಪಕ್ಕದಲ್ಲೆಯೇ ಕೂತು ಅಮ್ಮನ ಮೂಲಕ ನನ್ನ ಬೇಕು ಬೇಡಗಳ ಬಗ್ಗೆ ಕಾಳಜಿವಹಿಸುವಂತಾಯಿತು.
ನಿಮ್ಮ ಬದುಕಿನಲ್ಲಿ ಸಾಹಿತ್ಯ ಹೆಜ್ಜೆ ಹಾಕಿದ್ದು ಹೇಗೆ?
ಎಲ್ಲಾ ಕವಿಗಳು ತಮ್ಮ ಮೊದಲ ದಿನಗಳಲ್ಲಿ ಪ್ರೇಮ ಕವನ ಬರೆಯುತ್ತಾರೆ. ಹಾಗೆಯೇ ನಾನು ನನ್ನ ಹುಡುಗನನ್ನ ನೆನೆದು ಕವಿತೆಗಳನ್ನು ರಚಿಸಿದ್ದೆ. ನನಗೆ ಕವಿತೆ ಬರೆಯುವ ಒಲವು ಮೂಡಿದ್ದು ಅಲ್ಲಿಂದಲೇ. ೨೦೧೪ರವರೆಗೆ ನಾನು ಹಲವು ಕವಿತೆಗಳನ್ನು ಬರೆದಿಟ್ಟಿದ್ದೆ. ಒಂದು ಲೆಸ್ಬಿನ್ ಗುಂಪು ನನ್ನ ಆ ಕವಿತೆಗಳನ್ನು ಓದಿ ಪುಸ್ತಕ ಪ್ರಕಟಿಸುತ್ತೆವೆಂದು ಮುಂದೆ ಬಂದರು. ನನ್ನ ಚೊಚ್ಚಲ ಕವನ ಸಂಕಲನ ‘ಮನದ ಕಣ್ಣು’ ಒಬ್ಬ ವ್ಯಕ್ತಿಯನ್ನು ಕೇವಲ ಬಾಹ್ಯ ರೂಪದಲ್ಲಿ ನೋಡದೆ ಒಳಗಣ್ಣಿನಿಂದ ನೋಡಬೇಕಾಗಿದೆ ಎಂಬುದೇ ಈ ಸಂಕಲನದ ಆಶಯವಾಗಿದೆ.
ಪುಸ್ತಕ ಲೋಕಾರ್ಪಣೆಗೊಳ್ಳುವ ಮುನ್ನವೇ ಕುವೆಂಪು ವಿವಿಯಲ್ಲಿ ಒಂದು ಕವನವನ್ನು ಪಠ್ಯದಲ್ಲಿ ಸೇರಿಸಿಕೊಂಡರು. ಆ ಬಳಿಕ ನನಗೆ ನನ್ನ ಶಿಕ್ಷಣವನ್ನೂ ಮುಂದುವರಿಸುವ ಅವಕಾಶ ದೊರಕಿತು. ಆದರೆ ಸಮಯದ ಅಭಾವದಿಂದ ಅದು ಆಗಲಿಲ್ಲ. ಈಗಾಗಲೇ ಕನ್ನಡ ಸಾಹಿತ್ಯ ಲೋಕದ ಮೊದಲನೆಯ ಮಂಗಳಮುಖಿ ಕವಿ ಎಂದು ಗುರುತಿಸಿಕೊಂಡಿದ್ದೇನೆ. ಕವಿಗೋಷ್ಠಿಗಳಲ್ಲಿ ವೇದಿಕೆ ಸಿಕ್ಕಿದೆ.
‘ಪಯಣ’ದ ಸ್ಥಾಪನೆಯ ಮುಖ್ಯ ಉದ್ದೇಶವೇನು?
೨೦೦೯ ರಲ್ಲಿ ನಾವೇ ‘ಪಯಣ’ ಎಂಬ ಸಂಸ್ಥೆ ಹುಟ್ಟು ಹಾಕಿದೆವು. ತೃತೀಯ ಲಿಂಗಿಯವರೂ ಉಚ್ಚ ಆಯೋಗದಲ್ಲಿ ಕೆಲಸ ಮಾಡಬೇಕೆನ್ನುವುದೇ ಪಯಣದ ಮುಖ್ಯ ಉದ್ದೇಶವಾಗಿತ್ತು. ಹಾಗಿರುವಾಗ ಭಾರತದಲ್ಲೇ ಮೊತ್ತ ಮೊದಲ ಬಾರಿಗೆ “ತ್ರಿ ವಿಲ್ಲ್ಸ್ ಯುನೈಟೆಡ್ “ ಎಂಬ ಕಂಪನಿಯಲ್ಲಿ ೨೦೧೦ ರಿಂದ ಕೆಲಸಮಾಡುತ್ತಿದ್ದೇನೆ.
ಹೆಚ್ಚಿನ ಮಂಗಳಮುಖಿಯರು ಭಿಕ್ಷೆ ಅಥವಾ ದೇಹವ್ಯಾಪಾರವನ್ನು ಹೊರತು ಬೇರೆ ಕೆಲಸ ಯಾಕೆ ಮಾಡುತ್ತಿಲ್ಲ.?
ಅವಕಾಶ ಸಿಗುವುದಿಲ್ಲ. ನಮ್ಮ ಸಮುದಾಯದಲ್ಲಿ ಛಲದಿಂದ ಮುಂದೆ ಬಂದ ಕಾರಣ ಕೆಲವೇ ಕೆಲವು ಮಂದಿಗಳಿಗೆ ಒಳ್ಳೆಯ ಕೆಲಸ ಸಿಕ್ಕಿತು. ನಮ್ಮ ಪ್ರಯತ್ನಕ್ಕೆ NGOಗಳ ಬೆಂಬಲ ಬೇಕೇಬೇಕು. ಮಂಗಳಮುಖಿಯರಿಗೂ ಉಚ್ಚ ವಿದ್ಯಾಭ್ಯಾಸವನ್ನು ಹಾಗೂ ನೌಕರಿಯನ್ನು ಕಲ್ಪಿಸಿಕೊಡಬೇಕೆಂದು ೨೦೧೫ ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ, ಅದು ರಾಜ್ಯಮಟ್ಟದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಸರಕಾರದ ಕ್ರಿಯಾಶೀಲತೆಯ ಪಾತ್ರವೂ ಇದೆ. ನಮ್ಮ ಹೋರಾಟಕ್ಕೆ ಪ್ರತಿಫಲವಾಗಿ ಅಲ್ಲಿ ಇಲ್ಲಿ ಒಂದೊಂದು ಸುವರ್ಣಾವಕಾಶಗಳು ಸಿಕ್ಕಿರುವುದು. ನಾನು ಈಗ ಸಮಾಜವನ್ನು ದೂರುವುದಿಲ್ಲ . ಸಮಾಜ ಬದಲಾದಂತೆ ನಾವೂ ಬದಲಾಗುವುದು ಅನಿವಾರ್ಯ.
ಚಪ್ಪಾಳೆ ತಟ್ಟುವುದರ ಸಂಕೇತವೇನು? ನಿಮ್ಮ ಜನಾಂಗದ ಸಮುದಾಯದ ನಿಯಮಗಳೇನು?
ಅದು ನಮ್ಮ ಜನರ ಪರಿಚಯದ ಸಂಕೇತ. ನಾವು ದುಃಖದಲ್ಲಿ, ಕೋಪದಲ್ಲಿ, ನೋವಿನಲ್ಲಿ, ಸಂತೋಷದಲ್ಲಿ ಚಪ್ಪಾಳೆ ತಟ್ಟುತ್ತೇವೆ. ನಮ್ಮ ಲೋಕದಲ್ಲೂ ಹಲವಾರು ನೀತಿ ನಿಯಮಗಳಿವೆ. ಸಾಮಾನ್ಯವಾಗಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ರಾತ್ರಿ ಹೊತ್ತು ಒಬ್ಬಳೇ ಹೋಗಕೂಡದು ಅದೇ ರೀತಿ ನಮ್ಮಲ್ಲೂ ನಯ ನಾಜೂಕುತನ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಬೇರೆಯವರನ್ನು ಹಿಂಸಿಸಬಾರದೆಂಬ ಸಂಸ್ಕಾರ ನಮ್ಮಲ್ಲೂ ಇದೆ. ಆದರೆ, ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.
ದೇಹ ಮತ್ತು ಭಾವವನ್ನು ಒಂದಾಗಿಸಿ ಬದುಕುತ್ತಾ ಬಂದ ನಿಮಗೆ ನಿಮ್ಮ ಮಗಳಿಗೆ ಈ ವಿಷಯ ತಿಳಿಸಲು ಭಯವೇಕೆ?
ಒಂದು ಹೆಣ್ಣು ಪೂರ್ಣತೆ ಪಡೆಯುವುದು ತಾಯಿಯಾದಾಗ ಮಾತ್ರ ಎಂಬುದು ಲೋಕಾರೂಢಿ. ಹಾಗೆಯೇ ನನಗೂ ನನ್ನದೇ ಒಂದು ಮಗು ಬೇಕಾಗಿತ್ತು. ಹಾಗೆ ಹೆಣ್ಣು ಮಗುವೊಂದನ್ನು ಸಾಕುತ್ತಿದ್ದೇನೆ. ಈಗ ಅವಳಿಗೆ ಹದಿನಾಲ್ಕು ವರುಷ ಪ್ರಾಯ. ನಾನು ಓದಿದ ಶಾಲೆಯಲ್ಲೇ ನನ್ನ ಮಗಳು ಕಲಿಯುತ್ತಿದ್ದಾಳೆ. ಕಬಡ್ಡಿ ಪಟು ಸಹ ಹೌದು. ನನ್ನನ್ನು ಅವಳು ಶಾಲೆಗೇ ಬರಲು ಹಠಮಾಡುತ್ತಾಳೆ. ಆದರೆ ನನ್ನ ಅಸ್ತಿತ್ವದಿಂದಾಗಿ ನನ್ನ ಮಗಳಿಗೆ ಬೇರೆ ತರಹ ಹಿಂಸೆ ಆಗಬಾರದು. ಅದಕ್ಕಾಗಿ ಸರಿಯಾದ ಸಂಧರ್ಭ ಬಂದಾಗ ನಾನೇ ತಿಳಿಸಿಹೇಳಬೇಕೆಂದಿದ್ದೇನೆ. ನನ್ನ ಮಗಳನ್ನು ಡಾಕ್ಟರ್ ಮಾಡುವುದೇ ನನ್ನ ಕನಸು. ಅಷ್ಟರವರೆಗೂ ಬಹಳ ಕಾಳಜಿಪೂರ್ವಕವಾಗಿ ತಾಯಿ ಮಗಳ ಈ ಸಂಬಂಧವನ್ನು ಕಾಯ್ದಿಡುವ ಪ್ರಯತ್ನ ನನ್ನದಾಗಿದೆ.



ಹೆಚ್ಚಿನ ಮಂಗಳಮುಖಿಯರು ಭಿಕ್ಷೆ ಅಥವಾ ದೇಹವ್ಯಾಪಾರವನ್ನು ಹೊರತು ಬೇರೆ ಕೆಲಸ ಯಾಕೆ ಮಾಡುತ್ತಿಲ್ಲ.?


ಚಾಂದಿನಿಯವರೊಂದಿಗೆ ಒಮ್ಮೆ ವೇದಿಕೆ ಹಂಚಿಕೊಳ್ಳಲು ನನಗೆ ಅವಕಾಶ ದೊರೆತಿತ್ತು. ಅಂದು ಅವರ ವರ್ತನೆ, ಅವರು ಓದಿದ ಕವನ , ಅವರ ಓದಿನ ಶೈಲಿ ಪ್ರತಿಯೊಂದೂ ನಮ್ಮೆಲ್ಲರ ಹಾಗೆಯೇ ಇತ್ತು, ಹುಟ್ಟಿನಿಂದಲೂ ಹೆಣ್ಣೇ ಆದವರ ಹಾಗೆ. ಅವರನ್ನು ಪರಿಚಯ ಮಾಡಿಕೊಟ್ಟವರು ವಿಶೇಷವಾಗಿ ಏನೂ ಹೇಳದೆ ಇದ್ದರೆ ಚೆನ್ನಾಗಿತ್ತು ಎಂದೂ ಕೂಡ ನನಗೆ ಅಂದು ಅನ್ನಿಸಿತು. ಕವಿಯಾಗಿ ಅವರಿಗೆ ಒಳ್ಳೆಯ ಪ್ರತಿಭೆಯಿದೆ ಎಂದು ನನ್ನ ಅನಿಸಿಕೆ. ಅವರ ಪುತ್ರಿಗೆ ಅವರ ಕನಸನ್ನು ನನಸು ಮಾಡುವ ಎಲ್ಲ ಅವಕಾಶಗಳನ್ನು ನಮ್ಮ ಸಮಾಜ ಕೊಡುತ್ತದೆಂಬ ನಂಬುಗೆ ನನ್ನದು.
ಓದುತ್ತ ಕಣ್ಣು ಮಂಜಾಯಿತು. ಮಂಗಳ ಮುಖಿಯ ಅಂತರಂಗದ ಬರಹ ಮನ ತಟ್ಟಿತು.
Truth to be told , this article has changed my thinking about transgender. Another awesome article by Mrs Hema Amin truly your article makes my days please come up with more such article. And a great salute to Ms Chandni for her struggle to overcome every bad in her life . Truly inspiring.
One more time Mrs HEMA you didn’t fail to amaze me with your heart touching story . We desperately need people like Ms Chandni in our society who can take a stand of their own and spread colours of their wonders against the evil.
What an awesome article kudos to Mrs. Hema Amin. And after reading your article madam you have earned my respect and Ms Chandni you are a true inspiration . Salute. Respect to you too .