ಯಾರು ಹೊಣೆ?
ಗಿರಿಜಾ ಶಾಸ್ತ್ರಿ
World Cup cricket ಮ್ಯಾಚ್ ನಡೆಯುತ್ತಿದೆ. ಅದರ ವಾಸನೆಯೂ ಇಲ್ಲಿ ಇಲ್ಲ. ನನ್ನ ಮಗನ ಕೋಣೆಯಲ್ಲಿ ಮಾತ್ರ ಅದರದೇ ಹಡುಕು ನಾತ. ಊಟ ಬೇಡ, ತಿಂಡಿ ಬೇಡ. ಸ್ನಾನವನ್ನಂತೂ ಕೇಳುವ ಹಾಗೇ ಇಲ್ಲ. ಅಮೇರಿಕಾದಲ್ಲಿದೀಯಾ ನೀನೂ ಕ್ರಿಕೆಟ್ ನೋಡಬಾರದು ಎಂದೆ.
ಇಲ್ಲಿನ ಹೆಚ್ಚು ಜನಕ್ಕೆ ಕ್ರಿಕೆಟ್ ಗೊತ್ತೇ ಇಲ್ಲವಂತೆ. ಕ್ರಿಕೆಟ್ ಇಲ್ಲಿ ಜನಪ್ರಿಯ ಆಟವಲ್ಲ. ಬಹುಶಃ ಅದು ಬ್ರಿಟಿಷರ ಆಟವೆಂದು ಇಲ್ಲಿನವರು ನಿರಾಕರಿಸಿರಬಹುದು. ಆದರೆ ಅವರದೇ ಬೇಸ್ ಬಾಲ್ ಆಟ ಮಾತ್ರ ಆಡುತ್ತಾರೆ. ಭಾರತದಿಂದ ಬಂದ ಜನರು ಮಾತ್ರ ಕ್ರಿಕೆಟ್ ಆಡುತ್ತಾರೆ, ನೋಡುತ್ತಾರೆ. ಅಮೇರಿಕನ್ನರು ನೋಡುವುದು ಅಪರೂಪ.
ಒಂದು ದಿನ ಸೋಲೆಗೆ ಹೇಳುತ್ತಿದ್ದೆ. ನಮ್ಮ ದೇಶದಲ್ಲಿ ಹೆಚ್ಚು ವಿದ್ಯಾವಂತರಿಗೆ ಇಂಗ್ಲಿಷ್ ಅರ್ಥ ವಾಗುತ್ತದೆ. ಬಹಳ ಜನ ಇಂಗ್ಲಿಷ್ ಮಾತನಾಡುತ್ತಾರೆ. ಈಗಿನ ಮಕ್ಕಳಿಗಂತೂ ಇಂಗ್ಲಿಷ್ ಮೋಹ ತುಂಬಾ. ಯೂರೋಪ್ ದೇಶಕ್ಕೇನಾದರೂ ನಾನು ಹೋಗಿದ್ದರೆ ನನಗೆ ಕಷ್ಟವಾಗುತ್ತಿತ್ತು. ಇಷ್ಟಾದರೂ ನಾನು ಇಂಗ್ಲಿಷ್ನಲ್ಲಿ ಸಂವಹನಿಸಲು ಸಾಧ್ಯವಾಗಿದೆ. ಯಾಕೆಂದರೆ ನಾವು ಬ್ರಿಟಿಷರ ಆಳ್ವಿಕೆಗೆ ನೂರಾರು ವರ್ಷಗಳ ಕಾಲ ಒಳಗಾಗಿದ್ದೆವು. we were treated like slaves” ಎಂದೆ. ತಕ್ಷಣ ಅವಳು yeah I have seen one Indian film on cricket game with Britishers” ಎಂದಳು. ನನಗೆ ಆಶ್ಚರ್ಯ ವಾಯಿತು. “ಹೌದು ಅದು ಲಗಾನ್ ” ಎಂದೆ.
ಅಮೇರಿಕಾ ಕೂಡ ಬ್ರಿಟಿಷ್ ಸಾಮ್ರಾಜ್ಯದ ವಸಾಹತಾಗಿತ್ತು. 1776 ಜುಲೈ ೪ ರಂದು ಸ್ವತಂತ್ರವಾಯಿತು. ಅಮೇರಿಕಾದಂತಹ ದೊಡ್ಡ ದೇಶವನ್ನೂ ಬ್ರಿಟಿನ್ ನಂತಹ ಪುಟ್ಟ ದೇಶ ಹಿಂದೊಮ್ಮೆ ಕಬಳಿಸಿ ಹಾಕಿತ್ತು. ಕೋಡಗನ ಕೋಳಿ ನುಂಗಿತ್ತಾ ಎನ್ನುವ ಹಾಗೆ! ಬ್ರಿಟಿಷರು ಯಾರನ್ನು ಬಿಟ್ಟಿದ್ದಾರೆ?
ಸ್ವಾತಂತ್ರ್ಯ ಬಂದ ಸುಮಾರು ೨೪೩ ವರುಷಗಳಲ್ಲಿ ಅಮೇರಿಕಾ ಸಾಧಿಸಿರುವ ಪ್ರಗತಿ ಅದ್ಭುತ. ನಮಗೂ ಸ್ವಾತಂತ್ರ್ಯ ಬಂದು ಕಡಿಮೆ ವರುಷಗಳೇನೂ ಆಗಿಲ್ಲ. ೭೧ ವರುಷಗಳಾಗುತ್ತಾ ಬಂದವು. ಇನ್ನೂ ನಾವು ಎಲ್ಲಿ ಇದ್ದೇವೆ?
ಅಮೇರಿಕಾವನ್ನು ತಾಂತ್ರಿಕವಾಗಿ ಬಲಗೊಳಿಸುವಲ್ಲಿ ಭಾರತೀಯ ಇಂಜನಿಯರುಗಳ ದೇಣಿಗೆ ಅಪಾರ. ಇಲ್ಲಿನ ವಿ.ವಿ.ಗಳ ಘಟಿಕೋತ್ಸವ ಸಂದರ್ಭದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಹೆಸರುಗಳನ್ನು ನೋಡಿದರೇನೇ ಗೊತ್ತಾಗುತ್ತದೆ. ಜೋಶಿ, ಪವಾರ್, ಗೌಡ, ದುಬೇ, ಪಾಂಡೇ, ರಾಘವನ್, ಸುಬ್ರಮಣ್ಯನ್, ಪಿಳ್ಳೆ, ಗಾಯಕವಾಡ, ಚೌಧುರಿ, ಗಾಲ, ಹೆಗ್ಗಡೆ , ಪಟೇಲ್ ಜ್ಯೋತಿ, ದೀಪಿಕಾ,ಅನಿಕೇತ್,ಅಂಕಿತಾ … ಅಲ್ಲದೇ ಕೆಲವು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಹೆಸರುಗಳು ಇದ್ದರೂ ಅವೂ ಕೂಡ ಭಾರತದವರದ್ದೇ.
ಈ ಸಲದ ಬಫೆಲೋ ವಿ.ವಿಯಿಂದ ಜೀವನ ಸಾಧನೆಗಾಗಿ ಸನ್ಮಾನಿತರಾದ ಇಲ್ಲಿಯ ಹಳೆಯ ವಿದ್ಯಾರ್ತಿಗಳೆಂದರೆ ೮೮ ರಲ್ಲಿ ಪಿ.ಎಚ್.ಡಿ ಮಾಡಿದ ಅಶುತೋಷ್ ಶರ್ಮಾ (ಇಂದಿನ ಭಾರತ ಸರ್ಕಾರದ ಸೈನ್ಸ್ ಆಂಡ್ ಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ) ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಮೆಟೀರಿಯಲ್ ಸೈಂಟಿಸ್ಟ್ ಎಂದು ಹೆಸರಾಗಿರುವ ಅಮಿತ್ ಗೋಯೆಲ್. ಅಲ್ಲದೇ ಬಫೆಲೋ ವಿ.ವಿ.ಯ ಈಗಿನ ಅಧ್ಯಕ್ಷರು ಸತೀಶ್ ಕೆ. ತ್ರಿಪಾಠಿ. ಅಲ್ಲದೇ ನನ್ನ ಮಗನ ಮೆಚ್ಚಿನ ಪ್ರೊಫೆಸರ್ ಜಯರಾಮನ್ ಚೆನ್ನೈ ಮೂಲದವರು.
ಆದರೆ ಅವರು ಕಲಿತದ್ದು, ಬೆಳೆದದ್ದೆಲ್ಲ ಬೆಂಗಳೂರಿನಲ್ಲಿಯೇ. ಅವರಿಗೆ ಅಲ್ಲಿ ಒಂದು ಮನೆಯೂ ಇದೆ. ಅಮೇರಿಕಾದ ವಿ.ವಿ.ಗಳಲ್ಲಿ ಶೇಕಡಾ ತೊಂಬತ್ತು ತುಂಬಿರುವುದು ಹೀಗೆ ಇಂತಹ ಹೆಸರುಗಳೇ! ಕೇಳಿ ರೋಮಾಂಚನವಾಗಬೇಕು. ಇವರೆಲ್ಲ ಅಮೇರಿಕಾ ಕಟ್ಟುತ್ತಿದ್ದಾರೆ.
ಸಣ್ಣ ಶಹರಗಳಲ್ಲೂ ಮನೆ ಮಾಡಿರುವ ಭಾರತೀಯ ಅಂಗಡಿಗಳು, ಅಲ್ಲಿ ಸಿಗುವ ಎಂ.ಟಿ.ಆರ್ ಮಸಾಲೆ ಪದಾರ್ಥಗಳು, ಸೋನಾ ಮಸೂರಿ ಅಕ್ಕಿ, ಇಡ್ಲಿ, ದೋಸೆ ಹಿಟ್ಟು ಯಾವುದುಂಟು ಯಾವುದಿಲ್ಲ? ಇಂಡಿಯಾದಲ್ಲೇ ಎಲ್ಲೆಡೆ ಸಿಗದಿರುವಂತಹ ಭಾರತೀಯ ದಿನಿಸು ತಿನಿಸುಗಳು ಇಲ್ಲಿ ಸಿಗುತ್ತವೆ. ಇಲ್ಲಿರುವ ಭಾರತೀಯ ಹೊಟೇಲ್ ಗಳು, ಎಲ್ಲವೂ ಇಲ್ಲಿರುವ ಭಾರತೀಯರ ಹೆಚ್ಚಿನ ಜನಸಂಖ್ಯೆಗೆ ಪ್ರಮಾಣವಾಗಿದೆ.
ಇಲ್ಲಿ ಬಂದು ನಾವು ನಮ್ಮ ಮಠ ಮಂದಿರ, ಗುರುದ್ವಾರಗಳನ್ನು ಕಟ್ಟಿದ್ದೇವೆ. ಅಮೇರಿಕಾದವರ ಪರಧರ್ಮ ಸಹಿಷ್ಣುತೆಯನ್ನು ಕೊಂಡಾಡುತ್ತೇವೆ. ನ್ಯೂಜೆರ್ಸಿಯಂತೂ ಒಂದು ಮಿನಿ ಭಾರತವೇ ಎಂದು ಕೇಳಿದ್ದೇನೆ. ಭಾರತವನ್ನು ಅಮೇರಿಕಾಕ್ಕೆ ತಂದು ಅದರ ಸಂಸ್ಕೃತಿಯ ಭಾಗವಾಗಿರುವುದರ ಬಗ್ಗೆ ನಮಗೆ ಅತೀವ ಹೆಮ್ಮೆ ಇದೆ. ಅಮೇರಿಕಾದ ಸುಸಜ್ಜಿತ ವ್ಯವಸ್ಥೆ, ನಗರ ನಿರ್ವಹಣೆ, ಪರಿಸರ ಸಂರಕ್ಷಣೆ, ನಾಗರಿಕ ಜವಾಬ್ದಾರಿ, ಪ್ರಾಮಾಣಿಕತೆ, ಅವರ ನಿಸ್ಪೃಹತೆಯನ್ನು ಮಾತ್ರ ಭಾರತಕ್ಕೆ ತಾರದಿರುವುದರ ಬಗ್ಗೆ ನಮಗೆ ನಾಚಿಕೆ ಇಲ್ಲ. ನಮ್ಮ ಭ್ರಷ್ಟ ವ್ಯವಸ್ಥೆಯಲ್ಲೇ ನಾವು ಸುಖವಾಗಿ ಇದ್ದು ಬಿಟ್ಟಿದ್ದೇವೆ. ನಮ್ಮ ಪ್ರತಿಭಾ ನಿರ್ಗಮನಕ್ಕೂ ಇವೇ ಕಾರಣಗಳು- ನಮ್ಮ ದೇಶ ಬಡವಾಗಲೂ ಮೇಲೆ ಹೇಳಿದ ಎಲ್ಲ ಪ್ರತಿಭೆಗಳನ್ನು ನಾವೇ ಉಳಿಸಿಕೊಂಡಿದ್ದರೆ? ನಮ್ಮ ದೇಶವೂ ಅಮೇರಿಕೆಯ ತರಹ ಒಂದು ಅಭಿವೃದ್ಧಿ ಹೊಂದಿದ ದೇಶವಾಗುತ್ತಿತ್ತು ಎನಿಸುತ್ತದೆ.
ಆಗ ಚಳಿ ಮಳೆಗಾಳಿ ಹಿಮಪಾತ, ಭೂಕಂಪ, ಸುನಾಮಿಗಳಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳು ಕೆಲಸಮಾಡುವಂತಹ ಪ್ರಮೇಯವೂ ಇರುತ್ತಿರಲಿಲ್ಲ. ಭಾರತದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿರಲಿಲ್ಲ.ಇಲ್ಲ ನಮಗೆ ನಮ್ಮ ಕಿಸೆ ತುಂಬಿಸಿಕೊಳ್ಳುವುದಷ್ಟೇ ಬೇಕಾಗಿದೆ. ದೇಶ ಹಾಳಾದರೆ ನಮಗೇನು? ಕೆಟ್ಟ ರಾಜಕಾರಣಗಳು, ಸ್ವಾರ್ಥ, ಲಾಲಸೆಗಳು, ಪರರ ಕಾಲೆಳೆದು ಮೇಲೆ ಬರಬೇಕೆಂಬ ಕುತ್ಸಿತ ಮನಸ್ಸು ಎಲ್ಲವೂ ನಮ್ಮಿಂದ ನಮ್ಮ ಮಕ್ಕಳನ್ನೂ ದೂರ ಮಾಡಿದೆ.
“ಏಕ್ ಡಾಕ್ಟರ್ ಕಿ ಮೌತ್” ಎನ್ನುವ ಪಂಕಜ್ ಕಪೂರ್ ಅಬಿನಯದ ಸಾಕ್ಷ್ಯಚಿತ್ರವೊಂದು ನೆನಪಾಗುತ್ತಿದೆ. ಅದರಲ್ಲಿ ಒಬ್ಬ ಪ್ರತಿಭಾವಂತ ವೈದ್ಯನ ಅಪರೂಪದ ಸಂಶೋಧನಾ ಗ್ರಂಥವನ್ನು ಪ್ರಕಟಗೊಳಿಸದೇ ಅವನ ಮಾರ್ಗದರ್ಶಿಯೇ ಅವನಿಗೆ ಮುಳುವಾದಾಗ ಆ ವೈದ್ಯ ಅನಿವಾರ್ಯವಾಗಿ ಹೊರ ದೇಶಕ್ಕೆ ಬಂದು ಬಹಳ ಮನ್ನಣೆ ಗಳಿಸುತ್ತಾನೆ. ಹೀಗೆ ಅನೇಕ ಪ್ರತಿಭಾವಂತರನ್ನು ನಾವು ಕೊಲ್ಲುತ್ತಿದ್ದೇವೆ. ಸಾಯಲು ಸಿದ್ಧವಿಲ್ಲದ ಅವರೆಲ್ಲ ಅಮೇರಿಕಾ ಯೂರೋಪುಗಳಿಗೆ ಓಡಿ ಹೋಗುತ್ತಿದ್ದಾರೆ. ಆ ಮಕ್ಕಳಿಗೆ ಹಣ ಮಾಡುವ ಆಸೆ ಇರುವುದಾದರೂ ನಮ್ಮಲ್ಲಿ ಪ್ರತಿಭೆಗೆ ತಕ್ಕ ಪುರಸ್ಕಾರ ಇಲ್ಲ ಎನ್ನುವುದೂ ಅಷ್ಟೇ ನಿಜವಾಗಿದೆ. ಬಹಳ ಅಪರೂಪದ ಯುವಕ ಯುವತಿಯರು ಮಾತ್ರ ದೇಶದಲ್ಲೇ ಉಳಿದು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದಾರೆ. ಬಹುಶಃ ಅವರಿಗೆ ಬೇರೆ ಒತ್ತಾಸೆಗಳು ದೊರೆತಿರಬೇಕು. ಆದರೆ ಅಂತಹ ಜನ ಬೆರಳೆಣಿಕೆಯಷ್ಟು ಮಾತ್ರ.
ಇಲ್ಲಿಗೆ ಬರುವ ಮುಂಚೆ ಮುಂಬಯಿಯ ಒಂದು ಕಾರ್ಪೊರೇಟ್ ಸಂಸ್ಥೆಯಲ್ಲಿ ಜೀತದಾಳಿನಂತೆ ದುಡಿಯುತ್ತಿದ್ದ ಮಗ ಅಮೇರಿಕಾದ …… ತೊಳೆದು ಸಾಕಾಯಿತು ಎನ್ನುತ್ತಿದ್ದ. ಈಗ ಅಮೇರಿಕಾಕ್ಕೆ ಬಂದಮೇಲೆ ಅದರಿಂದ ಬಚಾವ್ ಅಗಿರುವೆ ಎನ್ನುತ್ತಾನೆ. ಜಿ.ಆರ್.ಇ ಪರೀಕ್ಷೆಗೆ ಓದಿಕೊಳ್ಳಲೂ ಸಮಯ ಸಾಲದೇ ಮಾಡುತ್ತಿದ್ದ ಕೆಲಸವನ್ನು ಬಿಟ್ಟುಬಂದ. ಕೆಲಸಕ್ಕೆ ಸೇರುವಾಗ ಬಾಂಡ್ ಬರೆದು ಕೊಟ್ಟಿದ್ದರಿಂದ ಒಂದು ಲಕ್ಷ ತೆರಬೇಕಾಯಿತು.
ನಮ್ಮ ದೇಶದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಾಲ್ಕು ಜನ ಮಾಡುವ ಹೊರಗುತ್ತಿಗೆಯ ಕೆಲಸವನ್ನು ಒಬ್ಬನ/ಳ ಮೇಲೇ ಹೇರಿ “ಕೈತುಂಬಾ” ಸಂಬಳ ಕೊಡುತ್ತಾರೆ. ಕಡಿಮೆ ಕೂಲಿಗೆ ಜನ ಸಿಕ್ಕರೆ ಯಾವ ದೇಶದ ಕಂಪನಿಗೆ ಬೇಡ?. ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ನಮ್ಮ ಮಕ್ಕಳ ಬದುಕು ನರಕವಾಗಿದೆ. ಅವರ ಆರೋಗ್ಯ ಮನಸ್ಸಿನ ನೆಮ್ಮದಿ ಎಲ್ಲವೂ ಹಾಳಾಗಿದೆ. ಅಗ್ಗದ ಬೆಲೆಗೆ ನಮ್ಮ ಇಂಜನಿಯರುಗಳನ್ನು ನಮ್ಮ ದೇಶ ಮಾರುತ್ತಿದೆ. ಅವರ ಕುಟುಂಬ ಜೀವನವಂತೂ ನಾಶವಾಗಿದೆ.
ಆದರೆ ಅಮೇರಿಕಾದಲ್ಲಿನ ಸಾಫ್ಟ್ ವೇರ್ ಕಂಪನಿಗಳಲ್ಲಿ ದುಡಿಯುವ ಮಕ್ಕಳಿಗೆ ಅಷ್ಟು ಒತ್ತಡವಿಲ್ಲ. ಬಾಂಡ್ ಬರೆದು ಕೊಡಬೇಕಾಗಿಲ್ಲ, ಹೆಚ್ಚಿನ ಕಂಪನಿಗಳಲ್ಲಿ ಪೇಪರ್ ಹಾಕಲು ನೋಟೀಸ್ ಪೀರಿಯೆಡ್ ಇಲ್ಲ ಕೆಲವು ಕಂಪನಿಗಳಲ್ಲಿ ಇದ್ದರೂ ಒಂದೆರೆಡು ವಾರಗಳು ಮಾತ್ರವಂತೆ. ಸಮಯದ ನಿರ್ಬಂಧವಿಲ್ಲ. ಕೊಟ್ಟ ಕೆಲಸವನ್ನು ಮುಗಿಸಿದರೆ ಮುಗಿಯಿತು. ಯಾರಿಗೆ ಯಾರೂ ಕ್ಯಾರೇ ಅನ್ನಬೇಕಾಗಿಲ್ಲ. ಹಾಗೆಂದು ಇಲ್ಲಿಯ ಜನ ನಮ್ಮವರ ಹಾಗೇ ಓತ್ಲಾ ಹೊಡೆದುಕೊಂಡು ತಿರುಗುವುದಿಲ್ಲ. ಹಿಂದೆ ಇಲ್ಲಿನ ಸರ್ಕಾರಿ ಕಛೇರಿಗಳಲ್ಲೂ ನಿಧಾನಗತಿ ಇದ್ದಿತಂತೆ ಈಗ ಬಹಳ ಸುಧಾರಿಸಿದೆ ಎನ್ನುತ್ತಾರೆ. ನಮ್ಮ ಸರ್ಕಾರಿ ಆಫೀಸುಗಳಿಗೆ ಹೋದರೆ “ಕಾಫಿಗೆ ಹೋಗಿದ್ದಾರೆ ಬರ್ತಾರೆ” ಎನ್ನುತ್ತಾರೆ. ಆದರೆ ಹಾಗೆ ಕಾಫಿಗೆ ಹೋದವರು ಸಂಜೆ ಐದಾದರೂ ಪತ್ತೆಯೇ ಇರುವುದಿಲ್ಲ. ಕಾಫಿಯಿಂದ ಬಂದರೂ ನಮ್ಮ ಕೆಲಸ ಮಾಡಿಕೊಳ್ಳಲು ʼಚಾಯ್ ಪಾನಿʼಗೆಂದು ಶಾಖಾಯ ಲವಣಾಯ ಮಾಡದೇ ಕಡತ ಚಲಿಸುವುದಿಲ್ಲ.
ನಮ್ಮ ದೇಶದಲ್ಲಿ ಒಂದು ಕಡೆ ಪ್ರತಿಭಾವಂತರು ಕತ್ತೆ ಚಾಕರಿ ಮಾಡುತ್ತಾ ಅಮೇರಿಕಾ ಯೂರೋಪುಗಳ …ತೊಳೆಯುತ್ತಿದ್ದರೆ, ಇನ್ನೊಂದು ಕಡೆ ಸೋಮಾರಿಗಳು ತಂಬಾಕು ಹೊಸೆಯುತ್ತಾ ಕಾಲಕಳೆಯುತ್ತಾ ದೇಶದ ಸಂಪನ್ಮೂಲಗಳ ನಾಶಕ್ಕೆ ಕಾರಣರಾಗುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ?






ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಮಾತುಗಳು
It may sound harsh but people who leave their own country for ready made comforts and money have no right to talk about the country they leave behind.
It sounds cliche but akin to a person leaving his own poor mother and hut for a rich mummy and bungalow. He had all the opportunities to build a new home but he chose not to.
Lakhs of people wait like dogs (sorry to use this word but true) to get permanent resident and citizenship of developed countries without bothering about fellowmen struggling back home. Irony is, they want the same country to rescue them when something untoward happens in that “developed country”.
I am not against people who want to venture out of the motherland because they like the culture of another country and want to be truly part of it.
But most emigration happens because they just want the comforts and money but DO NOT want to be part of nation building and hence do not appreciate the culture of the country they live in. They feel forever left out i their country of birth and also in their adopted country. As a result they wear sarees, dhotis, visit temples, celebrate festivals in that alien country looking like buffoons showing pseudo love for the motherland.
I feel no sympathy when they describe their so called hardships, everything comes in a package and It is their conscious choice and they better abide.