ಇವರು.. ರಾಮೇಶ್ವರಿ ವರ್ಮಾ

ಹಿರಿಯರಾದ ರಾಮೇಶ್ವರಿ ವರ್ಮಾ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ‘ಅವಧಿ’ಯ ಆತ್ಮೀಯರೂ, ರಂಗಭೂಮಿ ಚಳವಳಿಗೆ ಒಂದು ಘನತೆ ತಂದುಕೊಟ್ಟ ಅವರ ಬದುಕಿನ ಕಥನ ಇಲ್ಲಿದೆ. 

ಎನ್ ಸಂಧ್ಯಾರಾಣಿ ಅವರು ಮಾಡಿರುವ ಅನುವಾದದ ಈ ಆಯ್ದ ಪುಟಗಳನ್ನು ಅಹರ್ನಿಶಿ ಪ್ರಕಾಶನದ ‘ಹುದುಗಲಾರದ ದುಃಖ’  (ಸಂ : ಎಂ ಎಸ್ ಆಶಾದೇವಿ ) ದಿಂದ ಆರಿಸಿಕೊಳ್ಳಲಾಗಿದೆ  

ಇಲ್ಲಿನ ಚಿತ್ರಗಳ ಕೃಪೆ: ಭಾರತಿ ಹೆಗಡೆ 

ನನ್ನ ಜೀವನದಲ್ಲಿ ಏನೇ ಆಗಿರಲಿ, ವೈಯಕ್ತಿಕವಾಗಿರಬಹುದು ಅಥವಾ ವೃತ್ತಿಯಲ್ಲಾಗಿರಬಹುದು, ಅದೆಲ್ಲವೂ ತಾನೇ ತಾನಾಗಿ ನಡೆದುಹೋದದ್ದೇ ಹೊರತು ಯೋಚಿಸಿ, ಯೋಜಿಸಿ ನಡೆದದ್ದಲ್ಲ. ಅಂದರೆ ಅದು ’ಅಪಘಾತ’ವಲ್ಲದಿದ್ದರೂ, ’ಆಕಸ್ಮಿಕ’ವಂತೂ ಹೌದು! ಬಹುಶಃ ನನ್ನ ತಲೆಮಾರಿನ ಸುಮಾರು ಹೆಂಗಸರ ಜೀವನ ಹೀಗೇ ಇತ್ತೋ ಏನೋ.

ನನ್ನ ಹದಿಮೂರನೇ ವರ್ಷದಲ್ಲಿನ ಒಂದು ಘಟನೆ ನನ್ನ ಜೀವನವನ್ನೇ ನಾಟಕೀಯವಾಗಿ ಬದಲಾಯಿಸಿಬಿಟ್ಟಿತು. ಅಪ್ಪ ಅಮ್ಮ ನನ್ನ ಮದುವೆ ಮಾಡಲು ನಿರ್ಧರಿಸಿದರು. ನನ್ನ ಪತಿ ಶಿವಸ್ವಾಮಿಯದು ತುಂಬಾ ಸಾಂಪ್ರದಾಯಿಕ ಕುಟುಂಬ. ಅವರಿಗೆ ಆಗ 19 ವರ್ಷ ವಯಸ್ಸು. ಆರತಕ್ಷತೆ ಅದ್ದೂರಿಯಾಗಿ ನಡೆಯಿತು. ಆರತಕ್ಷತೆಯಲ್ಲೇ ನನ್ನ ಸೀರೆ ಬಿಚ್ಚಿಕೊಂಡಿದ್ದು ನನಗಿನ್ನೂ ನೆನಪಿದೆ! ಸೀರೆ ಉಟ್ಟೇ ಅಭ್ಯಾಸ ಇರಲಿಲ್ಲ ನನಗೆ.

ಮದುವೆ ಅಂದರೆ ಏನು ಅನ್ನುವುದರ ಅರ್ಥ ಅಮ್ಮನೊಡನೆ ನಾನು ಈರೋಡಿನಲ್ಲಿರುವ ಶಿವಸ್ವಾಮಿಯ ಮನೆಗೆ ಹೋದಾಗ ಆಗತೊಡಗಿತು. ನಾನು ಸಂಪ್ರದಾಯಬದ್ಧ ನವ ವಧುವಿನ ರೀತಿಯಲ್ಲಿ ನಡೆದುಕೊಳ್ಳಬೇಕಿತ್ತು. ಜೊತೆಗೆ ಎರಡೂ ಕುಟುಂಬಗಳಲ್ಲಿ, ಆಚಾರ ವಿಚಾರಗಳಲ್ಲಿ ಅನೇಕ ಸಾಂಸ್ಕೃತಿಕ ಭಿನ್ನತೆಗಳಿದ್ದವು. ಆಮೇಲೆ ಶೀಘ್ರದಲ್ಲೇ ನನ್ನ ಶಾಲಾ ಪರೀಕ್ಷೆಯ ಫಲಿತಾಂಶ ಬಂತು, ನಾನು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದೆ. ಸ್ವಾಭಾವಿಕವಾಗಿಯೇ ನನಗೆ ಮುಂದೆ ಕಾಲೇಜಿಗೆ ಸೇರಬೇಕೆಂದಿತ್ತು. ಆದರೆ ನನ್ನ ಅತ್ತೆ ಮನೆಯವರು ಇದನ್ನು ಬಲವಾಗಿ ವಿರೋಧಿಸಿದ್ದರಿಂದ ನನಗೆ ಇನ್ನಿಲ್ಲದ ನಿರಾಸೆಯಾಗಿ, ಹತಾಶೆಯಿಂದ ನಾನು ಊಟ ಬಿಟ್ಟು ಕುಳಿತೆ. ಕೊನೆಗೆ ನನ್ನ ಅಪ್ಪ ಅಮ್ಮ ಬಂದು ನಾನು ಕಾಲೇಜಿಗೆ ಸೇರಲು ನನ್ನ ಅತ್ತೆ ಮನೆಯವರನ್ನು ಒಪ್ಪಿಸಿದರು. ಆಗ ನಾನಿನ್ನೂ ಋತುಮತಿಯಾಗಿಲ್ಲದ ಕಾರಣ ಇನ್ನೂ ನನ್ನ ಶೋಭನದ ಶಾಸ್ತ್ರ ಆಗಿರಲಿಲ್ಲ.

'ಬೆಟ್ಟದ ಜೀವ' ದಲ್ಲಿ

‘ಬೆಟ್ಟದ ಜೀವ’ ದಲ್ಲಿ

ಒಮ್ಮೊಮ್ಮೆ ನನ್ನ ಪತಿ ನನ್ನೊಡನೆ ದೈಹಿಕ ಸಂಪರ್ಕ ಬೆಳೆಸಲು ಪ್ರಯತ್ನಿಸುತ್ತಿದ್ದರು. ಅದರಿಂದ ನಾನು ತೀವ್ರವಾಗಿ ಘಾಸಿಗೊಳ್ಳುತ್ತಿದ್ದೆ. ಅಂತಹ ಯಾವ ಸಂಬಂಧಕ್ಕೂ ನಾನು ಸಿದ್ಧಳಾಗೇ ಇರಲಿಲ್ಲ. ಇದರಿಂದ ನನ್ನ ಪತಿಗೆ ಸಿಟ್ಟು ಬಂದು ನನ್ನ ಮೇಲೆ ಕೂಗಾಡುತ್ತಿದ್ದರು. ಅವರು ನನ್ನನ್ನು ಹೊರಗಡೆ ಸುತ್ತಾಡಲು, ಸಿನಿಮಾ ನೋಡಲು ಕರೆಯುತ್ತಿದ್ದರು. ಆದರೆ ನಾನು ನನ್ನ ಗೆಳತಿಯರು ಯಾರಾದರೂ ನನ್ನ ಜೊತೆ ಬಂದರೆ ಮಾತ್ರ ಹೊರಗಡೆ ಹೋಗಲು ಸಿದ್ಧವಾಗುತ್ತಿದ್ದೆ. ಒಮ್ಮೆ ಅಂತೂ ಆತನೊಂದಿಗೆ ಹೊರಗಡೆ ಹೋಗುವುದನ್ನು ತಪ್ಪಿಸಿಕೊಳ್ಳಲು ನಾನು ನನ್ನನ್ನು ಗಾಯ ಮಾಡಿಕೊಂಡದ್ದೂ ಇದೆ! ಆಮೇಲೆ ನಾನು ಋತುಮತಿಯಾದೆ. ಆದರೆ ಯಾವುದೋ ಗ್ರಹಗತಿಯ ಕಾರಣದಿಂದ ನಮ್ಮ ನಿಷೇಕದ ಶಾಸ್ತ್ರ ಒಂದು ವರ್ಷದವರೆಗೂ ನಡೆಯುವುದಿಲ್ಲ ಎಂದಾಯ್ತು. ನಾನು ಖುಷಿ ಪಟ್ಟಿದ್ದೆ. ಆ ಸಮಯದಲ್ಲಿ ನಾನು ಹಿಂದಿ ಚಿತ್ರಗಳ ದೊಡ್ಡ ಅಭಿಮಾನಿಯಾಗಿದ್ದೆ. ಅದರ ನಾಯಕನಂತಹವನು ನನ್ನ ಪತಿಯಾಗಿ ಬರಬೇಕು ಎಂದು ಕನಸು ಕಾಣುತ್ತಿದ್ದೆ. ಆದರೆ ನನ್ನ ಪತಿಯನ್ನು ಅವರೊಂದಿಗೆ ಹೋಲಿಕೆ ಮಾಡಲು ಹೋದರೆ ಆತ ಅವರ ಸಮೀಪಕ್ಕೂ ಬರುತ್ತಿರಲಿಲ್ಲ. ಇದು ನನ್ನನ್ನು ಮತ್ತಷ್ಟು ನಿರಾಶಳನ್ನಾಗಿ ಮಾಡುತ್ತಿತ್ತು.

ಶಿವಸ್ವಾಮಿ ಮತ್ತು ನನಗೆ ದೈಹಿಕವಾಗಿ ಆಗಲಿ ಮಾನಸಿಕವಾಗಿ ಆಗಲಿ ಯಾವುದೇ ಸಾಮರಸ್ಯವಿರಲಿಲ್ಲ. ಈ ಗೊಂದಲ ಮತ್ತು ಹತಾಶೆಗಳು ನನ್ನನ್ನು ಘಾಸಿಗೊಳಿಸುತ್ತಿದ್ದವು. ಈ ತೊಳಲಾಟ ಮೇಲುಗೈ ಪಡೆದು ನಾನು ಕಾಯಿಲೆ ಬಿದ್ದೆ. ನನ್ನ ಎರಡನೆಯ ವರ್ಷದ ಇಂಟರ್ ಮೀಡಿಯೆಟ್ ಪರೀಕ್ಷೆಗೆ ನಾನು ಕೂರಲಾಗಲಿಲ್ಲ. ಈ ವೇಳೆಗೆ ಎಲ್ಲೋ ಏನೋ ಗಂಭೀರವಾಗಿ ತಪ್ಪಿದೆ ಎನ್ನುವುದು ನನ್ನ ಪೋಷಕರಿಗೂ ಅರ್ಥವಾಗಿತ್ತು. ನನ್ನ ನೋವಿನ ಅರಿವು ನನ್ನ ಗೆಳತಿಯರಿಗೂ ಸಿಕ್ಕಿ ಅವರೂ ಸಹ ನನ್ನ ಬೆಂಬಲಕ್ಕೆ ನಿಂತರು. ಸ್ವಲ್ಪ ಚೇತರಿಸಿಕೊಂಡ ನಾನು ನನ್ನ ಇಂಟರ್ ಮೀಡಿಯೇಟ್ ಮುಗಿಸಲು ಇನ್ನೊಂದು ಕಾಲೇಜನ್ನು ಸೇರಿದೆ.

ಈ ಮಧ್ಯೆ ನನ್ನ ಗಂಡನಿಗೆ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಸೀಟು ಕೊಡಿಸಿದರು. ಹಾಗಾಗಿ ಅವರೊಂದಿಗಿನ ನಿರಂತರ ಒಡನಾಟದಿಂದ ನನಗೆ ಒಂದು ವಿಷಯ ಅಂತೂ ಸ್ಪಷ್ಟವಾಯಿತು. ಎಂದೂ ನಮ್ಮಿಬ್ಬರಲ್ಲಿ ಸಾಮರಸ್ಯ ಬರುವುದು ಸಾಧ್ಯವೇ ಇಲ್ಲ ಎನ್ನುವುದು ನನಗೇ ಖಚಿತವಾಯಿತು. ನನ್ನ ಪತಿಯ ವಿದ್ಯಾಭ್ಯಾಸ ಮುಗಿದ ಮೇಲೆ ನಮ್ಮ ನಿಷೇಕ ಶಾಸ್ತ್ರ ಮಾಡಬೇಕು ಎಂದು ನನ್ನ ಪೋಷಕರು ಕಾಯುತ್ತಿದ್ದರು. ನನ್ನ ಪತಿ ಮತ್ತೆ ಪರೀಕ್ಷೆಯಲ್ಲಿ ನಪಾಸಾದರು! ನಾವಿಬ್ಬರೂ ಸ್ವಲ್ಪ ಕಾಲ ದೂರ ದೂರ ಇದ್ದರೆ ಇಬ್ಬರ ವಿದ್ಯಾಭ್ಯಾಸಕ್ಕೂ ಒಳ್ಳೆಯದೆಂದು ಭಾವಿಸಿದ ಅವರು ನನ್ನನ್ನು ಓದಲೆಂದು ಬಾಂಬೆಗೆ ಕಳಿಸಿದರು. ನನ್ನ ಜೀವನದ ಕೆಲವು ಅತ್ಯಂತ ಸಂತಸದ ಕ್ಷಣಗಳನ್ನು ನಾನು ಅಲ್ಲಿ ಕಳೆದಿದ್ದೇನೆ. ಬೆಂಗಳೂರಿನಿಂದ ಮತ್ತು ನನ್ನ ಪತಿಯಿಂದ ದೂರವಿದ್ದ ಕಾರಣ ಜೀವನ ನನಗೆ ಮತ್ತೆ ಹಸಿರು ಹಸಿರಾಗಿ ಕಾಣುತ್ತಿತ್ತು. ನನ್ನ ಜೀವಂತಿಕೆ ಮತ್ತು ಖುಷಿಯಾಗಿರುವ ಸ್ವಭಾವದಿಂದಾಗಿಯೇ ಇರಬೇಕು ನನ್ನನ್ನು ಎಲ್ಲರೂ ಇಷ್ಟಪಡುತ್ತಿದ್ದರು. ನನ್ನ ಗೆಳತಿಯರಲ್ಲಿ ಒಬ್ಬಳು ‘ನನ್ನ ಪತಿಗೆ ನನ್ನ ಬಗ್ಗೆ ನಿಜವಾಗಿಯೂ ಪ್ರೀತಿ ಇದೆ, ನನ್ನ ನಡವಳಿಕೆ ಅವರನ್ನು ಘಾಸಿಗೊಳಿಸುತ್ತಿರಬಹುದು’ ಎಂದು ಹೇಳಿದಳು. ನನ್ನ ಪತಿಯೆಡೆಗಿನ ನನ್ನ ಭಾವನೆಗಳನ್ನು ನಾನು ಇನ್ನೊಂದು ಆಯಾಮದಿಂದ ನೋಡುವಂತಾಯಿತು. ಇದೆಲ್ಲಾ ದೂರ ಇರುವಾಗ ಮಾತ್ರ. ಆತನೊಡನೆ ಮುಖಾಮುಖಿಯಾದ ಮರುಕ್ಷಣ ನನ್ನ ದೇಹ ಮತ್ತು ಮನಸ್ಸು ಎರಡೂ ಆತನನ್ನು ನಿರಾಕರಿಸುತ್ತಿದ್ದವು. ಇದರ ಪರಿಣಾಮ ನನ್ನ ಓದಿನ ಮೇಲಾಯಿತು, ನಾನು ಪರೀಕ್ಷೆಗೆ ಕೂರಲಾಗಲಿಲ್ಲ. ಅಷ್ಟರಲ್ಲಿ ನಾನೂ ಸಹ ಹೇಗಾದರೂ ಮಾಡಿ ನನ್ನ ಪೋಷಕರ ಮತ್ತು ನನ್ನ ಗಂಡನ ಸಲುವಾಗಿಯಾದರೂ ಪ್ರಯತ್ನ ಪಟ್ಟು ಈ ಸಂಬಂಧ ಉಳಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೆ.

ನನ್ನ ಪತಿಯೊಡನೆ ಬಾಳ್ವೆ ಮಾಡಬೇಕು ಎನ್ನುವ ನಿರ್ಧಾರದೊಂದಿಗೆ ನಾನು ಬೆಂಗಳೂರಿಗೆ ಮರಳಿಬಂದೆ. ಅಪ್ಪ-ಅಮ್ಮ, ನನ್ನ ಗಂಡ ಎಲ್ಲರಿಗೂ ಸಂತಸವಾಯಿತು. ಇನ್ನೇನು ನಾನು ಸಂಸಾರದಲ್ಲಿ ನೆಲೆಯೂರುತ್ತೇನೆ ಎಂದು ಅವರೆಲ್ಲಾ ಭಾವಿಸಿದರು. ಆದರೆ ಶೀಘ್ರದಲ್ಲೇ ನನಗೆ ನನ್ನ ಭಾವನೆಗಳಲ್ಲಿ, ಮನೋಭಾವದಲ್ಲಿ ಏನೂ ಬದಲಾಗಿಲ್ಲ ಎನ್ನುವುದರ ಅರಿವಾಯಿತು. ನನ್ನ ಮತ್ತು ಅವರ ನಡುವೆ ಯಾವುದೇ ಸಮಾನ ಮಾಧ್ಯಮ ಇರಲೇ ಇಲ್ಲ.

ನಾನು ಮೊದಲು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ನಿರ್ಧರಿಸಿದೆ. ಅಧ್ಯಾಪನ ವೃತ್ತಿಗೆ ನೆರವಾಗಲೆಂದು ಸ್ನಾತಕೋತ್ತರ ಶಿಕ್ಷಕ ತರಬೇತಿಗೆ ಸೇರಿದೆ. ಈ ಎಲ್ಲದರ ನಡುವೆ ನಾನು ಗರ್ಭಿಣಿಯಾಗಿದ್ದೇನೆ ಅನ್ನಿಸಿತು. ಆಗ ನನಗೆ ಗರ್ಭ ನಿರೋಧಕಗಳ ಬಗ್ಗೆ ಅರಿವೇ ಇರಲಿಲ್ಲ. ಆದರೆ ಒಂದು ವಿಷಯದ ಬಗ್ಗೆ ನನ್ನ ನಿರ್ಧಾರ ದೃಢವಾಗಿತ್ತು, ನನ್ನ ಗಂಡನೊಂದಿಗಿನ ನನ್ನ ಸಂಬಂಧ ನೆಲೆಗೊಳ್ಳುವವರೆಗೆ ಯಾವ ಕಾರಣಕ್ಕೂ ನಾನು ಮಗುವನ್ನು ಪಡೆಯಲು ಸಿದ್ಧಳಿರಲಿಲ್ಲ. ನಮ್ಮಿಬ್ಬರ ನಡುವೆ ಸಾಮರಸ್ಯ ಇಲ್ಲದ್ದರಿಂದ ಸದ್ಯಕ್ಕೆ ಮಕ್ಕಳಾಗುವುದು ಬೇಡ ಎಂದು ನನ್ನ ಗಂಡನಿಗೆ ಹೇಳಿದೆ. ನನ್ನ ಗಂಡನಿಗೆ ವಿಪರೀತ ಸಿಟ್ಟು ಬಂತು, ಕೂಗಾಡಲು ಪ್ರಾರಂಭಿಸಿದರು, ಆದರೆ ನನ್ನ ನಿರ್ಧಾರ ದೃಢವಾಗಿತ್ತು.

ಅಷ್ಟರಲ್ಲಿ ನಾನು ನನ್ನ ತರಬೇತಿ ಮುಗಿಸಿ ಒಂದು ಕೆಲಸ ಸಂಪಾದಿಸಿದ್ದೆ, ನನ್ನ ಗಂಡ ಇನ್ನೂ ಓದುತ್ತಲೇ ಇದ್ದರು. ನಮ್ಮ ಮನೆ ಯಾವಾಗಲೂ ನೆಂಟರಿಷ್ಟರಿಂದ ತುಂಬಿರುತ್ತಿತ್ತು. 1954ರಲ್ಲಿ ಮೊದಲ ಸಲ ನಾನು ಬಾಲಗೋಪಾಲ ವರ್ಮ (ಬಾಲನ್) ಅವರನ್ನು ಭೇಟಿ ಮಾಡಿದೆ. ಮುಂದೆ ಅವರನ್ನೇ ನಾನು ವಿವಾಹವಾಗಿದ್ದು. ನಾವಿಬ್ಬರೂ ಒಳ್ಳೆಯ ಸ್ನೇಹಿತರಾದೆವು. ಕಾಲಕಳೆದಂತೆ ನಮ್ಮಿಬ್ಬರ ನಡುವೆ ಆಳವಾದ ಭಾವನಾತ್ಮಕ ಬಂಧ ಬೆಳೆಯಿತು. ಸಾಮರಸ್ಯವಿಲ್ಲದ ಈ ಮದುವೆಯಲ್ಲಿ ಸಿಕ್ಕಿಹಾಕಿಕೊಂಡು ನಾನು ಅನುಭವಿಸುತ್ತಿದ್ದ ತೊಳಲಾಟ ಅವರಿಗೆ ಅರ್ಥವಾಗುತ್ತಿತ್ತು. ಅವರು ನನ್ನೆದುರು ಮದುವೆಯ ಪ್ರಸ್ತಾಪ ಇಟ್ಟರು. ಆದರೆ ಯಾವುದೇ ರೀತಿಯಲ್ಲೂ ಶಿವಸ್ವಾಮಿಯನ್ನು ವಿಚ್ಛೇದನಕ್ಕೆ ಒಪ್ಪಿಸಲಾಗುವುದಿಲ್ಲ ಎಂದು ಅರಿತಿದ್ದ ನಾನು ಆ ಪ್ರಸ್ತಾಪವನ್ನು ನಿರಾಕರಿಸಿದೆ.

rameshvari-varma21961ರಲ್ಲಿ ಶಿವಸ್ವಾಮಿಯ ವ್ಯಾಸಂಗ ಮುಗಿಯಿತು, ಅವರಿಗೆ ಮದ್ರಾಸಿನಲ್ಲಿ ಕೆಲಸ ಸಿಕ್ಕಿತು. ಮತ್ತೆ ಅಲ್ಲಿಂದ ಒರಿಸ್ಸಾಗೆ ವರ್ಗ. ಒರಿಸ್ಸಾದಲ್ಲಿ ಕಳೆದ ಆ ವರ್ಷಗಳಲ್ಲಿ ನಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಶಿವಸ್ವಾಮಿಯೊಡನೆ ಇಲ್ಲಿ ನೆಲೆಸಿದ ನಂತರ ಒಳ್ಳೆಯ ಸೊಸೆ, ಒಳ್ಳೆಯ ಅತ್ತಿಗೆ-ನಾದಿನಿ ಆಗಿರಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಆದರೆ ನನ್ನ ಮತ್ತು ಶಿವಸ್ವಾಮಿಯ ನಡುವಿನ ಅಂತರ ಬೆಳೆಯುತ್ತಲೇ ಹೋಯಿತು. ಪ್ರತಿ ಸಲ ನಾನು ನಾವು ದೂರವಾಗುವ ಮಾತೆತ್ತಿದಾಗ ಆತ ಕೂಗಾಡಲು ಶುರು ಮಾಡುತ್ತಿದ್ದರು. ಒಮ್ಮೊಮ್ಮ ಕಾಯಿಲೆ ಸಹ ಬಿದ್ದಿದ್ದಿದೆ. ಇದು ನನ್ನಲ್ಲಿ ಅಪರಾಧಿ ಮನೋಭಾವ ಹುಟ್ಟಿಸುತ್ತಿತ್ತು. ನಾನು ಎಷ್ಟು ಕಂಗೆಟ್ಟಿದ್ದೆ ಅಂದರೆ ಆತ್ಮಹತ್ಯೆಯ ಬಗ್ಗೆ ಸಹ ಯೋಚಿಸಿದ್ದೆ. ಶಿವಸ್ವಾಮಿ ಒರಿಸ್ಸಾದಲ್ಲಿಯ ತನ್ನ ಕೆಲಸ ಬಿಟ್ಟಾಗ ನಾನು ಬೆಂಗಳೂರಿನಲ್ಲೇ ಕೆಲಸ ಹುಡುಕುವುದೆಂದು ನಿರ್ಧರಿಸಿದೆ.

ಅಷ್ಟರಲ್ಲಾಗಲೇ ನಾನು ಅವರೊಡನೆ ಯಾವುದೇ ದೈಹಿಕ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟಿದ್ದೆ. ಅದೊಂದು ಕಡುಕಷ್ಟದ ಅನುಭವವಾಗಿ ಹೋಗಿತ್ತು. ಆ ಬಗ್ಗೆ ನನಗೆ ಅಪರಾಧಿ ಭಾವನೆ ಸಹ ಇತ್ತು. ಹೇಗಾದರೂ ಮಾಡಿ ಈ ಮದುವೆಯನ್ನು ಕೊನೆಗಾಣಿಸಲು ನಾನು ದಾರಿಗಳನ್ನು ಹುಡುಕುತ್ತಿದ್ದೆ. ಹಠಾತ್ತಾಗಿ ನನಗೆ ಅವರು ಇನ್ನೊಂದು ಮದುವೆ ಯಾಕಾಗಬಾರದು ಅನ್ನಿಸಿತು. ಅದನ್ನು ಅವರಿಗೆ ಹೇಳಬಹುದಲ್ಲ ಅನ್ನಿಸಿತು. ಹೋಗಿ ಹೇಳಿದೆ ಸಹ. ಅದಕ್ಕೆ ಅವರು ವ್ಯತಿರಿಕ್ತವಾಗಿ ಏನೂ ಹೇಳಲಿಲ್ಲ, ನನ್ನನ್ನು ಯಾರು ಮದುವೆಯಾಗುತ್ತಾರೆ ಎಂದು ಮಾತ್ರ ಹೇಳಿದರು! ಅಂತೂ ಅವರು ಇದನ್ನು ವಿರೋಧಿಸುವುದಿಲ್ಲ ಎಂದು ಗೊತ್ತಾಯಿತು, ನಾನೇ ಅವರಿಗೆ ಒಂದು ಹೆಣ್ಣು ಹುಡುಕುವೆ ಎಂದು ಹೇಳಿದೆ. ನನ್ನ ದೂರದ ಸೋದರ ಸಂಬಂಧಿ ಒಬ್ಬಳಿದ್ದಳು. ಅವಳು ಅಗಾಗ ಬೆಂಗಳೂರಿನ ನಮ್ಮ ಮನೆಗೂ ಬರುತ್ತಿದ್ದಳು. ಅವಳಿಗೆ ಸುಮಾರು 30ರ ವಯಸ್ಸು. ಅವಳಿಗೆ ವರ ಹುಡುಕುತ್ತಿದ್ದರು. ನಾನು ಅವಳ ಹತ್ತಿರ ಮಾತನಾಡಿದೆ. ಶಿವಸ್ವಾಮಿ ಮತ್ತು ನಾನು ಹೆಸರಿಗಷ್ಟೇ ದಂಪತಿಗಳು ಎನ್ನುವುದನ್ನು ವಿವರಿಸಿದೆ. ಅವಳು ಶಿವಸ್ವಾಮಿಯನ್ನು ಯಾಕೆ ಮದುವೆ ಆಗಬಾರದು ಎಂದು ಕೇಳಿದೆ. ಅಷ್ಟೇ ಅಲ್ಲ, ಮದುವೆ ಆದ ಮೇಲೆ ನಾನು ಅವರಿಬ್ಬರ ಜೀವನದಲ್ಲಿ ಪ್ರವೇಶಿಸುವುದಿಲ್ಲ ಎನ್ನುವ ಭರವಸೆಯನ್ನೂ ಕೊಟ್ಟೆ. ಎಲ್ಲಾ ಸಮಸ್ಯೆಗಳೂ ಪರಿಹಾರವಾಗಬೇಕಾದರೆ ಇದೊಂದೇ ಮಾರ್ಗ ಎಂದು ನನ್ನ ಪೋಷಕರನ್ನೂ ಸಹ ಒಪ್ಪಿಸಿದೆ. ನಮ್ಮಿಬ್ಬರಿಗೆ ಮಕ್ಕಳಾಗದ್ದರಿಂದ ಶಿವಸ್ವಾಮಿ ಇನ್ನೊಂದು ಮದುವೆಯಾಗುವುದು ಒಳ್ಳೆಯದು ಎಂದು ನನ್ನ ಅತ್ತೆ ಮನೆಯವರನ್ನು ಸಹ ಒಪ್ಪಿಸಿದೆ. ಆಗಿನ ಕಾಲದಲ್ಲಿ ಮಕ್ಕಳಾಗದಿರುವುದು ಗಂಡು ಇನ್ನೊಂದು ಮದುವೆಯಾಗಲು ಕಾನೂನುಬದ್ಧವಾದ ಕಾರಣ ಸಹ ಆಗಿತ್ತು. ಅಂತೂ ಇಂತೂ ಮದುವೆ ಆಯಿತು. ಹೆಂಡತಿ ಬಿಟ್ಟುಹೋದಳು ಎನ್ನುವ ಅವಮಾನ ಆಗದಿರಲು, ಶಿವಸ್ವಾಮಿಯ ಮರ್ಯಾದೆ ಉಳಿಸಲು, ಮದುವೆ ಆದ ನಂತರ ನಾನು ಒಂದು ತಿಂಗಳು ಅವರೊಟ್ಟಿಗೆ ಇರಲು ಒಪ್ಪಿಕೊಂಡಿದ್ದೆ.

ಈ ಎಲ್ಲದರ ನಡುವೆಯೂ ನಾನು ಮತ್ತು ಬಾಲನ್ ಈ ಎಲ್ಲಾ ವರ್ಷಗಳಲ್ಲೂ ನಮ್ಮ ಸ್ನೇಹವನ್ನು ಕಾಪಾಡಿಕೊಂಡು ಬಂದಿದ್ದೆವು. ನಾನು ಸ್ವತಂತ್ರಳಾದ ಮೇಲೆ ಬಾಲನ್ ಮದುವೆಯ ಬಗ್ಗೆ ಪ್ರಸ್ತಾಪಿಸಿದರು. ಆದರೆ ನನ್ನ ಮೊದಲ ಮದುವೆಯ ಕಹಿ ಅನುಭವಿಸಿದ್ದ ನಾನು ಎರಡನೆಯ ಮದುವೆಗೆ ಸಿದ್ಧಳಿರಲಿಲ್ಲ. ನನಗೆ ಕೇವಲ ಒಂದು ಸಾಂಗತ್ಯ ಬೇಕಿತ್ತು, ದೈಹಿಕ ಮತ್ತು ಮಾನಸಿಕ ಎರಡರ ಸಾಂಗತ್ಯ. ಬಾಲನ್‌ರ ಅಮ್ಮನಿಗೆ ನನ್ನ ಬಗ್ಗೆ ಗೊತ್ತಿತ್ತು, ಅವರು ನನ್ನನ್ನು ಸೊಸೆಯಾಗಿ ಸ್ವೀಕರಿಸಲು ಸಿದ್ಧರಿದ್ದರು. ಆದರೆ ಮದುವೆಯ ಹೊರತಾಗಿ ಒಂದು ಸಂಬಂಧವನ್ನು ನಿಭಾಯಿಸುವುದು ಕಷ್ಟ ಎನ್ನುವುದು ಶೀಘ್ರದಲ್ಲೇ ನನ್ನ ಅರಿವಿಗೆ ಬಂತು. ಗುಟ್ಟಾಗಿ ಭೇಟಿಯಾಗುವುದು ನಮ್ಮಿಬ್ಬರ ಮೇಲೂ ಅಪಾರವಾದ ಒತ್ತಡವನ್ನು ಹೇರುತ್ತಿತ್ತು. ನಾವಿಬ್ಬರೂ ಮದುವೆಯಾಗಲು ನಿರ್ಧರಿಸಿದೆವು. ಆದರೆ ಅದಕ್ಕೂ ಮೊದಲು ನಾನು ಶಿವಸ್ವಾಮಿಯಿಂದ ವಿಚ್ಛೇದನ ಪಡೆಯಬೇಕಿತ್ತು.

ಮದುವೆಯಾದ ವರ್ಷದೊಳಗೇ ಶಿವಸ್ವಾಮಿಗೆ ಒಂದು ಮಗು ಆಗಿತ್ತು. ಆ ಮಗುವನ್ನು ನೋಡಲು ಹೋದಾಗ ನಾನು ಇನ್ನೊಂದು ಮದುವೆಯಾಗಲಿರುವುದರಿಂದ ನನಗೆ ವಿಚ್ಛೇದನ ಬೇಕು ಎಂದು ಶಿವಸ್ವಾಮಿಯನ್ನು ಕೇಳಿದೆ. ಆಗಿನ ದಿನಗಳಲ್ಲಿ ದಂಪತಿಗಳ ನಡುವೆ ಸಾಮರಸ್ಯವಿಲ್ಲದ ಕಾರಣ ಒಡ್ಡಿ, ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ. ವಿಚ್ಛೇದನ ತೆಗೆದು ಕೊಳ್ಳಬೇಕೆಂದರೆ ಅದು ಆಗ Ex-parte Decree (ಏಕಪಕ್ಷೀಯ ತೀರ್ಪು) ಅಥವಾ ಮಾನಸಿಕ ಅಸ್ವಸ್ಥತೆ, ಅನೈತಿಕ ಸಂಬಂಧ ಇಂತಹ ಕಾರಣಗಳಿಗೆ ಮಾತ್ರ ಸಿಗುತ್ತಿತ್ತು. ಈ ಸಂದರ್ಭದಲ್ಲಿ ಏಕಪಕ್ಷೀಯ ತೀರ್ಪು ಒಂದೇ ಪರಿಹಾರ ಎಂದು ನನಗೆ ಅನ್ನಿಸಿತು. ಈ ಬಗ್ಗೆ ನಾನು ಶಿವಸ್ವಾಮಿ ಹತ್ತಿರ ಮಾತನಾಡಿದೆ. ಆದರೆ ಆತ ಇದಕ್ಕೆ ಒಪ್ಪಲಿಲ್ಲ. ನಾನು ಕಾನೂನು ಕಾರ್ಯಾಚರಣೆಯನ್ನು ಮುಂದುವರೆಸಿದೆ. ಕೊನೆಗೂ ವಿಚ್ಛೇದನ ಸಿಕ್ಕಿತು.

ನನ್ನ ಕುಟುಂಬವನ್ನು ನಾನು ತುಂಬಾ ಹಚ್ಚಿಕೊಂಡಿದ್ದರಿಂದ, ನನ್ನ ಬಾಲನ್ ಮದುವೆಗೆ ನನ್ನ ಅಪ್ಪ – ಅಮ್ಮನ ಒಪ್ಪಿಗೆ ಪಡೆಯುವುದು ನನಗೆ ಮುಖ್ಯವಾಗಿತ್ತು. ನನಗೇ ಕಾಣುವಂತೆ ಅವರು ಈ ಮದುವೆ ವಿರೋಧಿಸಲು ಮೂರು ಕಾರಣಗಳಿದ್ದವು, ಇದು ನನ್ನ ಎರಡನೆಯ ಮದುವೆ, ಬಾಲನ್ ಬ್ರಾಹ್ಮಣರಲ್ಲ ಮತ್ತು ಆತ ಕೇರಳದರಾಗಿದ್ದರಿಂದ ಆತ ಹೊರಗಿನವನು. ನನ್ನ ಪೋಷಕರು ಹಾಗು ನನ್ನ ಕುಟುಂಬ ವರ್ಗಕ್ಕೆ ನಾನು ಬಾಲನ್ ರನ್ನು ಮದುವೆಯಾಗುವ ನನ್ನ ನಿರ್ಧಾರದ ಬಗ್ಗೆ ಒಂದು ದೀರ್ಘ ಪತ್ರ ಬರೆದೆ. ಅವರು ಮದುವೆಗೆ ಒಪ್ಪಿಕೊಂಡರು, ಆದರೆ ಮದುವೆ ಮಾಡಿಕೊಡಲಿಲ್ಲ. ಬಾಲನ್ ಮನೆಯವರೇ ಕೇರಳದ ಚೊಟ್ಟನಿಕ್ಕಾರ ದೇವಸ್ಥಾನದಲ್ಲಿ ನಮ್ಮ ಮದುವೆ ನೆರವೇರಿಸಿದರು. ಅಮ್ಮ ತಾಳಿ ಮಾಡಿಸಿ ನನಗೆ ಕಳಿಸಿಕೊಟ್ಟರು. ನನ್ನ ಸೋದರ ಸಂಬಂಧಿಗಳು ಮತ್ತು ಸ್ನೇಹಿತರು ಮಾತ್ರ ಮದುವೆಗೆ ಬಂದರು. ಮದುವೆಗೆ ವಾರವಿರುವಾಗ ನನ್ನ ತಂದೆ ಎರಡನೆಯ ಬಾರಿಗೆ ಹೃದಯಾಘಾತಕ್ಕೊಳಗಾದರು, ಹೀಗಾಗಿ ಮದುವೆಯುದ್ದಕ್ಕೂ ನಾನು ವಿಪರೀತ ಒತ್ತಡದಲ್ಲಿದ್ದೆ.

ಮದುವೆಯ ನಂತರ ನಾನು ವರ್ಮಾ ಮತ್ತು ಅವರ ಮನೆಯವರೊಡನೆ ಇರಲು ಮೈಸೂರಿಗೆ ತೆರಳಿದೆ. ನಿಜವಾದ ಸಾಂಗತ್ಯವನ್ನು ನಾನು ವರ್ಮಾ ಜೊತೆಗಿನ ಜೀವನದಲ್ಲಿ ಪಡೆದೆ. ನಮ್ಮಿಬ್ಬರ ನಡುವೆ ಓದು, ಸಂಗೀತ, ರಂಗಭೂಮಿ ಮೊದಲಾದ ಅನೇಕ ಸಮಾನ ಆಸಕ್ತಿಗಳಿದ್ದವು. ಯು ಆರ್ ಅನಂತ ಮೂರ್ತಿ, ವಿಶ್ವನಾಥ ಮಿರ್ಲೆ, ರಾಜೀವ್ ತಾರಾನಾಥ್ ಇವರೆಲ್ಲಾ ವರ್ಮಾ ಅವರ ಸಹೋದ್ಯೋಗಿಗಳಾಗಿದ್ದರು. ಮೈಸೂರು ಆಗ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರಾದ ಸ್ಥಳ. ಆಗ ’ಸಮತೆಂತೋ’ (ಸರಸ್ವತಿಪುರಂ ಮಧ್ಯದ ತೆಂಗಿನ ತೋಟದ ಗೆಳೆಯರು) ಎನ್ನುವ ಒಂದು ಅಮೆಚೂರ್ ತಂಡ ತುಂಬಾ ಹೆಸರು ಮಾಡಿತ್ತು. ಬಾಲನ್ ಆ ತಂಡದ ಜೊತೆಗಿದ್ದರು. ಮೈಸೂರಿಗೆ ಹೋದ ಮೇಲೆ ನಾನೂ ಆ ತಂಡದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸತೊಡಗಿದೆ. ನಾನು ಮೈಸೂರಿಗೆ ಬಂದ ೮ ತಿಂಗಳ ನಂತರ ಯು ಆರ್ ಅನಂತಮೂರ್ತಿಯವರ ಒಂದು ನಾಟಕವನ್ನು ಆ ತಂಡದಿಂದ ರಂಗಕ್ಕೆ ತಂದೆವು. ನಾನೂ ಆ ನಾಟಕದಲ್ಲಿ ಪಾತ್ರ ವಹಿಸಿದ್ದೆ. ನಾನಾಗ ೫ ತಿಂಗಳ ಗರ್ಭಿಣಿ.

‍ಲೇಖಕರು Admin

November 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: