
ಪರಮೇಶ್ವರ ಗುರುಸ್ವಾಮಿ

ಮೊದಲನೆ ಫ಼ೋಟೋದಲ್ಲಿರುವವರು ಪಾಶ. ಟ್ರಿನಿಟಿ ವೃತ್ತದ ಬಳಿಯ ಅಡಿಗಾಸ್‌ನಲ್ಲಿ ಕಾಫಿ ಕುಡಿದು ಇವರ ಆಟೋ ಹತ್ತಿದೆ. ಐವತ್ತೊಂದು ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದೀನಿ ಎಂದರು. ಅವರು ಎಮ್‌ಜಿ ರಸ್ತೆಯ ಹಳೆಯ ವೈಭವದೊಂದಿಗಿನ ತಮ್ಮ ಅನುಭವಗಳನ್ನು ಹೇಳಲಾರಂಭಿಸಿದಂತೇ ನನಗೆ ಎರಡನೆಯ ಫ಼ೋಟೋದಲ್ಲಿರುವ ಸಿನೆಮಾ ಹಾಲ್ ನೆನಪಾಯಿತು.
ನಾನು ಬೆಂಗಳೂರಿಗೆ ಬಂದ ಎಂಬತ್ತೆರಡರಿಂದ ಈ ಸಿನೆಮಾ ಹಾಲ್ ಅನ್ನು ನೋಡುತ್ತಿದ್ದೇನೆ. ಮೊದಲ ಸಲ ಇದರ ಬಲಪಾರ್ಶ್ವ ನನಗೆ ಮೈಸೂರಿನ ಅಪೆರಾ ಟಾಕೀಸ್ ನೆನಪಿಸಿತ್ತು ಉದ್ದದ ಮೆಟ್ಟಿಲುಗಳಿಂದಾಗಿ. ಪಾಶರವರನ್ನು ಈ ಸಿನೆಮಾ ಹಾಲ್ ಹೆಸರೇನೆಂದು ಕೇಳಿದೆ. ಪ್ಯಾರಮೌಂಟ್ ಎಂದರು.
ಅಲ್ಲಿಗೆ ಐವತ್ತೊಂದು ವರ್ಷಗಳ ಹಿಂದೆ ಆಟೋ ಇತ್ತೆ ಎಂಬ ನನ್ನ ಅನುಮಾನ ತೀರಿಸಿಕೊಳ್ಳಲು ಅವರು ಓಡಿಸಿದ ಮೊದಲ ಆಟೋ ಯಾವ ಕಂಪನಿಯದೆಂದು ಕೇಳಿದೆ. ಫಾರ್ಗೋ ಎಂದರು. ಅದು ಹೇಗಿತ್ತೆಂದು ವರ್ಣಿಸಿದರು. ಮುಂದೆ ಸ್ಕೂಟರ್ ಥರ ಇತ್ತಂತೆ. ಮಳೆ ಬಂದರೆ ಡ್ರೈವರ್‌ಗಳು ರೈನ್‌ಕೋಟ್ ತೊಡುತ್ತಿದ್ದರಂತೆ. ಪ್ರಯಾಣಿಕರಿಗೆ ಟಾಂಗಾ ರೀತಿಯ ಟಾಪ್ ಇರುತ್ತಿತ್ತಂತೆ.
ಎಷ್ಟನೆಯ ಇಸವಿಯಲ್ಲಿ ಆ ಆಟೋ ಬೆಂಗಳೂರಿಗೆ ಬಂದದ್ದು ಎಂದು ಕೇಳಿದೆ. ೬೮ (೧೯೬೮) ಎಂದರು. “ಬಾಳಾ ಶಬ್ದ. ಬಡರ್ ಬಡರ್ ಅಂತ ಶಬ್ದ ಮಾಡ್ತಿತ್ತು” ಎಂದರು. ವಯಸ್ಸು ಕೇಳಿದ್ದಕ್ಕೆ ಎಪ್ಪತ್ತೆರಡು ಎಂದು ಹೇಳಿ, ತಮ್ಮ ಜಾತಕ ಇದೆ, ಈಗ ಮುಟ್ಟಿದರೆ ಮುರಿದು ಹೊಗುತ್ತದೆ ಎಂದರು.
ನಿಮ್ಮಲ್ಲೂ ಜಾತಕ ಬರೆಸುತ್ತೀರ ಎಂದೆ. “ಅಯ್ಯೊ! ವಾರ್ ಟೈಮಲ್ ನಾ ಹುಟ್ಟಿದ್ದು. ಕುರುಬರ ಹಳ್ಳೀಲಿ. ನಮ್ಮಪ್ಪ ರೈತ. ಆಗೆಲ್ಲ ತೋಟದಲ್ಲಿ ಔಸ್ಕೊಂಡಿದ್ರು. ವಾರ್‌ಗೆ ಹೆದ್ರಿ. ನಾ ಹುಟ್ದಾಗ ಅಯ್ನೊರ್ ಮನೆಗೋಗಿ ನಮ್ಮಪ್ಪ ಜಾತ್ಕ ಬರಸ್ದ. ನಾ ಈಗ್ಲೂ ಮೂರ್ನಾಕ್ ದೇವಸ್ಥಾನಕ್ ಹೋಗಿ ಮಸೀದಿಗೋಗಿ ಪ್ರಾರ್ಥನೆ ಮಾಡುದ್ ಮೇಲೇ ಪ್ಯಾಸೆಂಜರ್ ಹತ್ತಸ್ಕೊಳ್ಳೋದು” ಅಂದ್ರು. ಅಷ್ಟರಲ್ಲಿ ನನ್ನ ಇಳಿಯುವ ತಾಣ ಬಂತು. ಇಳಿದೆ.






0 Comments