ಇವರು ಕಡಿದಾಳು ದಯಾನಂದ್..

ನೆಂಪೆ ದೇವರಾಜ್

ಅಂತರರಾಷ್ಟ್ರೀಯ ಮಟ್ಟದ ವಿಚಾರವಾದಿ ಡಾ.ಕೊವೂರರನ್ನು ತಮ್ಮೂರಿಗೆ ಕರೆಯಿಸಿ ಬಾಬಾಗಳ ಕೈಚಳಕಗಳು ದೇವ ಮಾನವನ ಮಟ್ಟಕ್ಕೆ ಹೋಗುವ ನಡೆಗಳಿಗೆ ಸಾಕಷ್ಟು ಕಡಿವಾಣ ಹಾಕುತ್ತಾರೆ. ಎಂಭತ್ತರ ದಶಕದಾರಂಭದಲ್ಲಿ ರೈತ ಸಮನ್ವಯ ಸಮಿತಿ ಎಂಬ ಹೆಸರಲ್ಲಿ ಆರಂಭವಾದ ರೈತ ಚಳುವಳಿ ಕೈತಪ್ಪಿ ಯಾರದೋ ಕೈಗೆ ಹೋಗುವುದನ್ನು ಗ್ರಹಿಸಿ ಆರಂಭದಲ್ಲೇ ಪ್ರೊ.ನಂಜುಂಡಸ್ವಾಮಿ, ತೇಜಸ್ವಿ, ಸುಂದರೇಶ್ ಜೊತೆಗೂಡಿ ಸಮಾಜವಾದಿ ನೆಲೆಯಲ್ಲಿ ಚಳುವಳಿಯನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ.

ಕುವೆಂಪು ಟ್ರಸ್ಟ್ ಕುಪ್ಪಳ್ಳಿಯಲ್ಲಿ ರಚನೆಯಾಗುವ ಮುನ್ನವೆ ಕುಪ್ಪಳ್ಳಿ ಸಮೀಪದ ಇಂಗ್ಲಾದಿ ಮನೆಯಲ್ಲಿ ಕುವೆಂಪುರವರಿಗೆ ತೊಂಭತ್ತು ವರ್ಷ ತುಂಬಿದ ನೆನಪಿಗಾಗಿ ಕುವೆಂಪು -೯೦ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಕುಪ್ಪಳ್ಳಿ ಪ್ರತಿಷ್ಠಾನದ ಆರಂಭಕ್ಕೆ ನಾಂದಿ ಹಾಡುತ್ತಾರೆ. (ಇಂತಹ ಮಹತ್ವ ಪೂರ್ಣ ನೂರಾರು ಕಾರ್ಯಕ್ರಮಗಳ ಸಂಘಟಕರು ಬಿಡಿ) ವಿದ್ವಾಂಸರನೇಕರುಗಳು ವಿಶ್ವ ವಿದ್ಯಾಲಯಗಳ ನಾಲ್ಕು ಗೋಡೆಗಳ ಮಧ್ಯೆ ನಿಂತು ವಿಚಾರವಾದ ಬೋಧಿಸುತ್ತಿದ್ದಾಗ, ಮೌಢ್ಯದ ವಿರುದ್ದ ಮಾತಾಡುತ್ತಿದ್ದಾಗ, ಸಮ ಸಮಾಜದ ಮರಳಿನ ಗೋಪುರ ಕಟ್ಟುತ್ತಿದ್ದಾಗ ಅಲ್ಲಿ ನಿಲ್ಲದೆ ಹಳ್ಳಿಗೆ ಬರುತ್ತಾರೆ. ರೈತರೇ ಮಾಡಿಕೊಂಡ ಕೃಷಿಯೊಳಗಿನ ಹತ್ತಾರು ಯಡವಟ್ಟುಗಳನ್ನು ಬಿಡಿಸಿಕೊಂಡು ಕೃಷಿಯ ಬಗ್ಗೆ ಯುವಕರು ಮೋಹಗೊಳ್ಳಲು ಬೇಕಾಗಿರುವ ಅಗತ್ಯತೆಗಳನ್ನು ಪದೇ ಪದೇ ಹೇಳತೊಡಗುತ್ತಾರೆ.

ಪ್ರಯೋಗಾಲಯದೊಳಗೆ ಇದ್ದಂತ ಹೊಸ ಕಾಲದ ಕೃಷಿಯನ್ನು ಚಮತ್ಕಾರಕವಾಗಿ ತಮ್ಮ ನೆಲದಲ್ಲಿ ಕಾರ್ಯರೂಪಕ್ಕೆ ತರುತ್ತಾರೆ. ಕೃಷಿಯು ಮೋಹವಾಗಿ, ಪ್ರೀತಿಯಾಗಿ ಮತ್ತು ಜ್ಞಾನವಾಗುಳಿಯಬೇಕಾದರೆ ಲೆಕ್ಕಾಚಾರ ಮತ್ತು ವೈಜ್ಞಾನಿಕ ಆಲೋಚನೆ ಪ್ರತಿಯೊಬ್ಬ ರೈತನಲ್ಲೂ ಇರಬೇಕೆನ್ನುತ್ತಾರೆ.

ಶ್ರೀಮಂತಿಕೆಯೇನೋ ಇತ್ತು. ನೆಟ್ಟ ಆಲದ ಮರಕ್ಕೆ ನೀರು ಗೊಬ್ಬರ ಹೊಯ್ದು ಚಿಗುರು ನೋಡುವುದರಲ್ಲೆ ಕಾಲ ಹರಣ ಮಾಡುವ ಜಾಯಮಾನ ಇವರದಲ್ಲ.

ಚಿಗುರೊಡೆಯಬಹುದಾದ ಪ್ರತಿ ಸಸ್ಯದ ಬಗ್ಗೆ ಕರಾರುವಕ್ಕಾಗಿ ಹೇಳಬಲ್ಲ ತಜ್ಞತೆ ಹೊಂದಿರುವ ಇವರ ಪಾಂಡಿತ್ಯ ಕೃಷಿ ವಿಜ್ಙಾನಿಗಳಿಗೂ ಸವಾಲಿನ ವಿಷಯ. ಪ್ರತಿ ಮರ ಗಿಡದ ಗುಣ ಲಕ್ಷಣಗಳ ಬಗ್ಗೆ ಪಟಪಟನೆ ಉತ್ತರಿಸುವ ಇವರ ಕಾನನದ ಬಗೆಗಿನ ಜ್ಞಾನ ಅಪೂರ್ವವಾದುದು. ಪಶ್ಚಿಮ ಘಟ್ಟದ ನದಿ ತೊರೆಗಳ ಹುಟ್ಟು ಹರಿಯುವಿಕೆಯ ಗುಣ ಲಕ್ಷಣಗಳನ್ನು ಕರಾರುವಾಕ್ಕಾಗಿ ಹೇಳುವ ಇವರು ಸಸ್ಯ ಶಾಸ್ತ್ರಜ್ಞರಲ್ಲ. ಪೂರ್ಣಚಂದ್ರ ತೇಜಸ್ವಿಯವರ ಜೊತೆಗೂಡಿ ತುಂಗಾ ನದಿಯಲ್ಲಿ ಗಾಳ ಹಾಕುತ್ತಿದ್ದಾಗ ‌ತಿನ್ನಲು ಬರುವ ಮೀನು ಇಂತದ್ದೇ ಜಾತಿಯದು ಎಂದು ಖಚಿತವಾಗಿ ಹೇಳುವಷ್ಟು ಮತ್ಸ್ಯ ಜ್ಞಾನವಿದ್ದರೂ ಈ ಸಂಬಂಧದಲ್ಲಿ ವಿಶ್ವವಿದ್ಯಾಲಯದ ಪದವಿಯನ್ನೋ, ಡಿಪ್ಲಮೋವನ್ನೋ ಪಡೆದವರಲ್ಲ.

ಮಹಿಳೆ ಮತ್ತು ಹೂವಿನ ಜೊತೆಗಿನ ಸಂಬಂಧವೆಂತಾದ್ದು ಎಂಬುದನ್ನು ಬರಹ ರೂಪಕ್ಕಿಳಿಸಿ ವಿವರಿಸುತ್ತಾ ಹೋಗುವ ಅಗತ್ಯವಿಲ್ಲ. ತಮ್ಮೂರ ಸಹೋದರಿಯರು ಹೂ ಪ್ರಿಯರೆಂಬುದನ್ನರಿತು ಇವರ ಹೂ ತೋಟಗಳು ಅಪೂರ್ವವಾಗಿ ಕಣ್ಣೀರುವವರನ್ನೆಲ್ಲ ಸೆಳೆಯುವಂತೆ ಮಾಡುವ ಬಗ್ಗೆ ಯೋಚಿಸುತ್ತಾರೆ. ಈ ನಿಟ್ಟಲ್ಲಿ ಹೂಗಿಡಗಳಿಗೆ ಲೇ ಔಟ್ ಒಂದನ್ನು ಕೊಡುವಲ್ಲಿ ಇವರ ಕೈಚಳಕ ಕೆಲಸ ಮಾಡಿತಲ್ಲದೆ ನೋಡುಗರನ್ನು ಕ್ಷಣಮಾತ್ರದಲ್ಲಿ ಅಕರ್ಷಿಸುವಂತಹ ಪುಷ್ಪ ಕೃಷಿಯನ್ನು ಇವರು ಪರಿಚಯಿಸಿದರು ಎಂದರೆ ಅತಿಶಯೋಕ್ತಿಯಾಗಲಾರದು.

ಮಲೆನಾಡಿನ ಮನೆಮನೆಗಳಲ್ಲಿರುವ ಹೂಕುಂಡಗಳು ಕಣ್ಮನ ಸೆಳೆಯಲು ಕಾರಣ ಇವರು ರೂಪಿಸಿದ ಉದ್ಯಾನವನ ಕಲಾ ಸಂಘವೆಂಬುದನ್ನು ಮರೆಯಬಾರದು. ನೂರಾರು ಮಹಿಳೆಯರ ಸದಸ್ಯತ್ವವನ್ನು ಹೊಂದಿರುವ ಉದ್ಯಾನವನ ಕಲಾಸಂಘ ತೀರ್ಥಹಳ್ಳಿಯಾದ್ಯಂತ ಉದ್ಯಾನವನದ ಚಳುವಳಿಯನ್ನೆ ರೂಪಿಸಿದೆ. ಸರ್ವೆ ಸಾಮಾನ್ಯವಾಗಿ ಬಡವ ಬಲ್ಲಿದನೆಂಬ ಭೇದವಿಲ್ಲದೆ ನಮ್ಮ ಭಾಗದ ಬಹುತೇಕರ ಮನೆಗಳು ಹೂಕುಂಡಗಳಿಂದ ಅಲಂಕೃತವಾಗಿರುವುದನ್ನು ಗಮನಿಸದೆ ಇರಲು ಸಹ ಸಾಧ್ಯವಿಲ್ಲವೆನ್ನಿ!

ಆ ಕಾಲದಲ್ಲಿ ಮನೆ ಬಿಟ್ಟು ತುಂಗಾ ನದಿಯ ದಡದ ಹತ್ತಾರು ಎಕರೆ ಒಣ ಭೂಪ್ರದೇಶವನ್ನು ಇವರು ಕೊಂಡುಕೊಂಡಾಗ ಲಂಟಾನ ಮತ್ತು ಕಾಂಗ್ರೆಸ್ಸಿನ ಜಿಗ್ಗುಗಳಿಂದ ಆವೃತವಾಗಿ ಮನುಷ್ಯ ಬೇಧಿಸಬಲ್ಲನೆ ಎಂಬ ಅನುಮಾನ ಕಾಡಿದ್ದು ಸಹಜ. ಆದರೆ ಇವರೂ ಗುದ್ದಲಿ ಸಬ್ಬಲ್ಲು ಹೊತ್ತು ಕಡಿಯ ತೊಡಗಿದಂತೆ ಇವರ ಕೆಲಸಗಾರರು ಸಹ ಸಕಲ ಉತ್ಸಾಹದಿಂದ ಭೂಮಿಯ ಜೊತೆ ನಿಲ್ಲತೊಡಗುತ್ತಾರೆ. ತಾವೊಂದು ಮಟ್ಟಕ್ಕೆ ಬರುವವರೆಗೆ ಅಂದರೆ ಅಡಿಕೆ, ಕಾಫಿ, ನರ್ಸರಿ ಗಿಡಗಳು ಕೈಗೆ ಹತ್ತುವವರೆಗೆ ತಾವು ಸಂಜೆಯ ಹೊತ್ತು ಪ್ರೀತಿಸುವ ಮಾದಕ ಪಾನೀಯಕ್ಕೆ ಹತ್ತಾರು ವರುಷಗಳ ಕಾಲ ಗುಡ್ ಬೈ ಹೇಳಿ ತಮ್ಮ ಭೂಮಿಯಲ್ಲಿ ಬೆವರು ಬಸಿದ ಬಗೆ ಸಾರ್ವಕಾಲಿಕ ಆದರ್ಶವೇ ಸರಿ.

ರೈತಾಪಿ ಎಂಬುದು ಅನಾಕರ್ಷಕವಾಗಿ ನಷ್ಟದ ಕ್ಷೇತ್ರವೆಂಬ ಹಣೆ ಪಟ್ಟಿಯ ಬಿರುದಾಂಕಿತವಾಗಲು ಕಾರಣ ಹುಡುಕುತ್ತಾರೆ. ಮದುವೆ, ಮುಂಜಿ, ಹಬ್ಬಗಳಿಗಾಗಿ ರೈತ ತನ್ನ ಬಹುತೇಕ ಸಮಯವನ್ನು ಹಾಳು ಮಾಡಿಕೊಳ್ಳುವ ಬಗ್ಗೆ ತಮ್ಮ ತಕರಾರುಗಳನ್ನು ಯಾವಾಗಲೂ ದಾಖಲಿಸುತ್ತಲೆ ಇರುತ್ತಾರೆ. ತಾವು ಜಮೀನು ತೆಗೆದುಕೊಂಡು, ಆ ಜಮೀನು ಒಂದು ಹಂತಕ್ಕೆ ಬರುವವರೆಗೆ ತಪಸ್ಸಿನೋಪಾದಿಯಲ್ಲಿ ಹೂ ಗಿಡಗಳ ನರ್ಸರಿಯಲ್ಲೆ ತೊಡಗುತ್ತಾರೆ. ರಾಜ್ಯಾದ್ಯಂತ ಇವರ ನರ್ಸರಿಯ ಗಿಡಗಳಿಗೆ ಬಹುದೊಡ್ಡ ಹೆಸರು ಮೂವತ್ತು ವರ್ಷಗಳ ಹಿಂದೆಯೆ ಬಂದಿದ್ದನ್ನು ಇದೀಗ ನೆನಪಿಸುವುದು ಸೂಕ್ತವಾಗಿದೆ.

ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ಅಡಿಕೆ ಗಿಡಗಳನ್ನು ಮಾಡಿ ಯಶಸ್ಸು ಸಾಧಿಸಿದಂತವರ ಮೊದಲಿಗರ ಸಾಲಲ್ಲಿ ನಿಲ್ಲುತ್ತಾರೆ. ಅಲ್ಲಿಯವರೆಗೆ ನೆಲಪಾತೆಗಳಲ್ಲಿ ಗಿಡಗಳನ್ನು ಮಾಡಿ ನೆಡುವುದು ರೂಢಿ. ಈ ನೆಲಪಾತೆಯ ಗಿಡಗಳೋ ಗಾಳಿ ಮತ್ತು ಮಳೆಯ ಹೊಡೆತಕ್ಕೆ ಸಿಕ್ಕು ಬೇರು ಕೊಡಲು ಹರಸಾಹಸ ಪಡಬೇಕಿತ್ತು. ತೋಟಗಳಲ್ಲಿ ನೆಟ್ಟ ನೂರರಲ್ಲಿ ಇಪ್ಪತ್ತು ಗಿಡಗಳಾದರೂ ಸತ್ತು ಹೋಗುತ್ತಿದ್ದವು. ಯಾವಾಗ ಕೊಟ್ಟೆಯ ಗಿಡಗಳು ಪರಿಚಯಗೊಂಡವೋ ಮಲೆನಾಡಿನಲ್ಲಿ ಅಡಿಕೆ ತೋಟ ಮಾಡುವುದು ಸುಲಭ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಇವರು ಕೃಷಿಯಲ್ಲಿ ಸೋಲೇ ಕಾಣದವರೆಂಬ ಭ್ರಮೆ ಬೇಕಿಲ್ಲ. ಇವರೂ ಸೋತಿದ್ದಾರೆ. ಕುಂಬಳು ಬೆಳೆದು ಬೆಳಗಾವಿಗೆ ಲಾರಿಯಲ್ಲಿ ಸ್ವತಃ ತಾವೇ ಕೂತು ಮಾರಾಟ ಮಾಡಲು ಹೋಗುತ್ತಾರೆ. ಅಷ್ಟೂ ಕುಂಬಳವನ್ನು ಕೆಜಿ ಯೊಂದಕ್ಕೆ ನಾಕಾಣೆಗೆ ಕೊಟ್ಟು ಲಾರಿ ಬಾಡಿಗೆಯನ್ನು ಸಹ ಹುಟ್ಟಿಸಿಕೊಳ್ಳದೆ ಮನೆ ಸೇರಿದ್ದಾರೆ.

ತಮ್ಮಲ್ಲಿನ ನರ್ಸರಿ ಗಿಡಗಳ ಮಾರಾಟಕ್ಕಾಗಿ ಲಾಲ್ ಬಾಗ್ ಹಾಗೂ ಇನ್ನೂ ಅನೇಕ ಕಡೆಗಳ ಫೆಸ್ಟಿವಲ್ ಗಳಲ್ಲಿ ಖುರ್ಚಿ ಹಾಕಿ ಕೂತು ಮಾರಾಟ ಮಾಡಿದ್ದು ಕೂಡಾ ಆ ಕಾಲದ ಸಾಧನೆಯೇ ಸರಿ.

ತೀರ್ಥಹಳ್ಳಿಯಲ್ಲಿ ನಡೆದ ಹತ್ತಾರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಗಳಿವರು. ಅಸಂಖ್ಯಾತ ಸಾಹಿತಿ ಕಲಾವಿದರುಗಳ ಜೊತೆಗೆ ಒಡನಾಟವಿದೆ. ಅವಿರತ ಓದಿನಲ್ಲಿ ಮಗ್ನರಾದಂತವರು. ಉದ್ದಾಮ ಸಾಹಿತ್ಯಿಕ ಕೃತಿಗಳ ಬಗ್ಗೆ ಚರ್ಚೆ ನಡೆಸಬಲ್ಲ ಹಾಗೂ ವಿಮರ್ಶಿಸಬಲ್ಲ ತಾಕತ್ತಿದ್ದರೂ ಇವರು ಡಾಕ್ಟರೇಟ್ ಪದವೀಧದರರಲ್ಲ.

ತಮ್ಮ ಜೀವಿತಾವಧಿಯನ್ನೆಲ್ಲ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೆ ಹೋಗುವ ಕಡಿದಾಳು ದಯಾನಂದ್ ಅಥವಾ ಕೆ.ಆರ್. ದಯಾನಂದ್ ಎಂದೂ ತಮ್ಮ ತನವನ್ನು ಬಿಟ್ಟುಕೊಟ್ಟವರಲ್ಲ. ಎಂದೆಂದೂ ಪ್ರಶಸ್ತಿ ಪುರಸ್ಕಾರಗಳಿಗೆ ಹಾತೊರೆಯದೆ ಇರುವವರು ಎಂದು ಹೇಳುವುದಕ್ಕೆ ಹೆಮ್ಮೆ ಎನಿಸುತ್ತದೆ. ಇಂಟರ್ ಮಿಡಿಯಟ್ ವರೆಗೆ ಮಾತ್ರ ಓದಿಯೂ ತನ್ನೊಳಗಿನ ತುಡಿತ, ಪ್ರಯೋಗಶೀಲತೆ ಮತ್ತು ಚಿಕಿತ್ಸಕ ದೃಷ್ಟಿಕೋನದಿಂದ ಏನೆಲ್ಲ ಮಾಡಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿ ಕಡಿದಾಳು ದಯಾನಂದ್ ಸದಾ ನಿಲ್ಲುತ್ತಾರೆ‌.

ಯುವ ಮನಸ್ಸುಗಳಿಗೆ ಇವರೊಂದು ಮಾದರಿ. ಈ ತಮ್ಮ 74ನೇ ವಯಸ್ಸಲ್ಲೂ ಪಶ್ಚಿಮ ಘಟ್ಟದ ಅಭೇದ್ಯ ಕಾಡಿನ ಮ‍ಧ್ಯದೊಳಗಿರುವ ಮುಗಿಲೆತ್ತರದ ಬೆಟ್ಟವೇರುವ ಉತ್ಸಾಹ ತೋರುತ್ತಾರೆ. ಜನಪರ ಹೋರಾಟಗಳು ನಡೆದರೆ ಭಿತ್ತಿ ಪತ್ರ ಹಿಡಿದು ನಿಲ್ಲುತ್ತಾರೆ. ಪ್ರಗತಿಪರ ಆಲೋಚನೆಗಳ ಎಲ್ಲ ಕಾರ್ಯಕ್ರಮಗಳಿಗೂ ತಮ್ಮ ದೇಣಿಗೆಯನ್ನು ನೀಡುತ್ತಾರೆ. ಅದೆಲ್ಲಕ್ಕಿಂತ ಬಹುಮುಖ್ಯವಾಗಿ ತಮ್ಮ ಪ್ರಯೋಗಗಳನ್ನು ಯುವಕರುಗಳೊಂದಿಗೆ ಖುಷಿ ಖುಷಿಯಾಗಿ ಹಂಚಿಕೊಳ್ಳುತ್ತಾ ಹೋಗುವುದು ತುಂಬ ಚಂದ.

‍ಲೇಖಕರು Avadhi

January 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: