ಎ ಎಂ ಪ್ರಕಾಶ್
ರಾತ್ರಿಯ ಸಮಯ… ತಲೆ ಬೋಳಿಸಿದ ಯುವತಿಯೊಬ್ಬಳು ಓಡಿ ಬಂದು ಆತಂಕ, ಗಾಬರಿಯಿಂದ ಕದ ತಟ್ಟುತ್ತಿದ್ದಾಳೆ. ವೃದ್ಧ ಅ.ನ.ಸುಬ್ಬರಾಯರು ತನ್ನ ಸುಕ್ಕುಗಟ್ಟಿದ ಕೈಗಳಿಂದ ಬಾಗಿಲು ತೆರೆಯುತ್ತಿದ್ದಂತೆ ತರುಣಿ ಆತುರದಿಂದ ಮನೆಯೊಳಗೆ ನುಸುಳಿ ಒಳಹೋಗುತ್ತಾಳೆ.
ಅ.ನ.ಸು ಅವರಿಗೆ ಅಪರಿಚಿತ ಮಹಿಳೆಯ ಈ ರೀತಿಯ ನಡವಳಿಕೆ ವಿಚಿತ್ರವೆನಿಸುತ್ತದೆ. ಏನಾಯಿತೆಂದು ವಿಚಾರಿಸಿದಾಗ ಯುವತಿ ಮಾತನಾಡಲಾಗದೆ, ಹೆದರಿದ ಕಣ್ಣುಗಳಿಂದ ಏನೋ ಹೇಳಲು ಪ್ರಯತ್ನಿಸುತ್ತಾಳೆ. ಸಾಧ್ಯವಾಗದೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತಾಳೆ. ಕೊಠಡಿಯ ಮೂಲೆಯಲ್ಲಿ ಮುದುಡಿ ಕೂರುತ್ತಾಳೆ. ಅವಳ ಕಣ್ಣುಗಳು ಬಾಗಿಲ ಕಡೆಯೇ ಇರುತ್ತದೆ.
ಅ.ನ.ಸುಬ್ಬರಾಯರು ತಂಬಿಗೆಯಲ್ಲಿ ಕುಡಿಯಲು ನೀರು ನೀಡಿ ಸಮಾಧಾನದ ಮಾತುಗಳಿಂದ ಅವಳಲ್ಲಿ ಧೈರ್ಯ ತುಂಬಿ ಕಾರಣ ಕೇಳುತ್ತಾರೆ. ಸ್ವಲ್ಪ ಸಮಾಧಾನಗೊಂಡ ಯುವತಿ “ತನ್ನನ್ನು ಕಾಮುಕರ ತಂಡವೊಂದು ಅಟ್ಟಿಸಿಕೊಂಡು ಬಂತು. ಅವರಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಇರಲಿಲ್ಲ ಅದಕ್ಕೆ ಹೀಗೆ ಮಾಡಬೇಕಾಯಿತು” ಎಂದು ತನ್ನ ವೃತ್ತಾಂತವನ್ನೆಲ್ಲಾ ತಲೆತಗ್ಗಿಸಿ ದೀನ ಸ್ವರದಲ್ಲಿ ನುಡಿಯುತ್ತಾಳೆ.

ಅ.ನ.ಸುಗೆ ಈ ಯುವತಿ ವೇಶ್ಯೆ, ಪೊಲೀಸರು ಈ ಕೃತ್ಯಕ್ಕೆ ತಲೆಕೂದಲನ್ನು ಬೋಳಿಸಿ ಕಳುಹಿಸಿದ್ದಾರೆ, ಕಾಮುಕರ ತಂಡ ಇವಳ ಬೆನ್ನು ಹತ್ತಿದೆ ಎಂಬುದರಿವಾಗುತ್ತದೆ. ಯುವತಿಯು “ತನಗೆ ಈ ಜೀವನ ಸಾಕಾಗಿದೆ. ಅನಾಥೆಯಾದ ನಾನು ಹೊಟ್ಟೆಪಾಡಿಗೆ ಅನಿವಾರ್ಯವಾಗಿ ಈ ಮಾರ್ಗ ಹಿಡಿಯಬೇಕಾಯಿತು. ಈಗ ಸಾಕಾಗಿದೆ. ಜೀವನ ಬೇಡವಾಗಿದೆ ” ಎಂದು ಕಣ್ಣೀರಿಡುತ್ತಾಳೆ.
ಅ.ನ.ಸು “ಹೊರಗೆ ಹೋಗಲು ನಿನಗೆ ಭಯವಾದರೆ ಒಂದಷ್ಟು ದಿನ ಇಲ್ಲೇ ಇರು. ನಾನಿದ್ದೇನೆ. ನಿನಗೆ ನೆರವಾಗುತ್ತೇನೆ” ಎಂದು ಸಾಂತ್ವನ ಹೇಳಿ ಸುಮಾರು ದಿನಗಳ ಕಾಲ ಅವಳನ್ನು ಸಾಕಿ ಸಲಹುತ್ತಾರೆ. ನಂತರದಲ್ಲಿ ಅವಳನ್ನು ಅನಾಥಶ್ರಮದಲ್ಲಿರಲು ಸೂಕ್ತ ವ್ಯವಸ್ಥೆ ಮಾಡುತ್ತಾರೆ. ನಂತರದಲ್ಲಿ ಅವಳಿಗೊಂದು ಗಂಡು ನೋಡಿ ತಾವೇ ಮುಂದೆ ನಿಂತು ಮದುವೆ ಮಾಡುತ್ತಾರೆ.
ಅ.ನ.ಸು ಅವರ ಆರ್ಶೀವಾದ ಪಡೆದು ಹೋಗುವಾಗ ಅವಳ ಕಣ್ಣಿನಂಚಿನಲಿ ನೀರಾಡುತ್ತದೆ. ಅ.ನ.ಸು ತನ್ನ ಮಗಳನ್ನು ಕಳುಹಿಸಿಕೊಡುವ ಭಾವದಿಂದ ಅವಳನ್ನು ಬೀಳ್ಕೊಡುತ್ತಾರೆ. ತಾತ ಅ.ನ.ಸು ನಾವಿರುವ ಮನೆಯ ಪಕ್ಕದಲ್ಲಿನ ಕೊಠಡಿಯಲ್ಲಿ ವಾಸ. ಸ್ನಾನ ಹಾಗೂ ಊಟಕ್ಕೆ ಮಾತ್ರ ಮನೆಗೆ ಬರುತ್ತಿದ್ದರು. ನಾನಿನ್ನು ಚಿಕ್ಕವನು ಆದರೂ ಇವೆಲ್ಲಾ ಕಣ್ಣಿಗೆ ಕಟ್ಟಿದಂತಿದೆ.
ಮನೆಯಲ್ಲಿ ಹೆಣ್ಣುಮಕ್ಕಳು (ಮೂವರು ಅಕ್ಕಂದಿರು, ನನ್ನಮ್ಮ) ಇರುವ ಮನೆಯಲ್ಲಿ ಯಾರೋ ಗೊತ್ತಿಲ್ಲದ ಯುವತಿ ಅದರಲ್ಲೂ ವೇಶ್ಯೆಯನ್ನು ತಮ್ಮ ಕೊಠಡಿಯಲ್ಲಿರಲು ಅವಕಾಶ ನೀಡಿದ್ದು, ನಮ್ಮನೆಯವರಿಗೆಲ್ಲಾ ಮುಜುಗರದ ಸಂಗತಿಯಾಗಿತ್ತು. ವಿಷಯ ತಿಳಿದಾಗ ಅಕ್ಕಪಕ್ಕದವರ ವಕ್ರನೋಟ, ಮನೆಯ ಕಿಟಕಿಗೆ ಬೀಳುತ್ತಿದ್ದ ಪೋಲಿ ಹುಡುಗರ ಅಶ್ಲೀಲ ಪತ್ರಗಳಿಂದ ಕಂಗಾಲಾಗಿದ್ದೆವು. (ನಮ್ಮ ತಂದೆ ಎ.ಎಸ್.ಮೂರ್ತಿ ಅವರ ಕಡೆಯಿಂದ ಅ.ನ.ಸು ಅವರ ಈ ನಡೆಗೆ ಮೌನ ಸಮ್ಮತಿ) ನಮ್ಮ ತಾಯಿಯೂ ಇದಕ್ಕೆ ಅಪಸ್ವರ ಎತ್ತದೆ ಮೂಕ ಸಾಕ್ಷಿಯಾಗಿದ್ದರು. ಕೊನೆಗೆ ಆ ಯುವತಿ ತನ್ನ ಗಂಡನೊಂದಿಗೆ ಹೋಗುವಾಗ ನನ್ನಮ್ಮ ಸೀರೆ, ಕುಂಕುಮ ನೀಡಿ ಹರಸಿ ಕಳುಹಿಸಿದ ಚಿತ್ರ ಇನ್ನೂ ಹಚ್ಚ ಹಸಿರಾಗಿದೆ.






ಹೃದಯಸ್ಪರ್ಶಿ