ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವತ್ತಿನ ದುರಂತಗಳಿಂದ ಪಾರಾಗಲು ಒಂದು ಮಾರ್ಗ

ಸತ್ಯನಾರಾಯಣರಾವ್ ಅಣತಿ

ಇದೇ ದಿನಾಂಕ ಆಗಷ್ಟ್ ಏಳರ ಹಿಂದೂ ಪತ್ರಿಕೆಯ From the Archives  ಕಾಲಂನಲ್ಲಿ  ಐವತ್ತು ವರ್ಷಗಳ ಹಿಂದಿನ (7-8-1970) ಸುದ್ದಿಯೊಂದಿದೆ. ‘‘Taming the  Brahmaputra’  (ಶೀರ್ಷಿಕೆ)ಯಲ್ಲಿ: ಆ ವರ್ಷ ಬ್ರಹ್ಮಪುತ್ರ ನದಿಯಲ್ಲಿ ಎಂದೂ ಕಂಡರಿಯದಷ್ಟು ಪ್ರವಾಹ ಎದುರಾಗಿತ್ತು. ಅದರಿಂದ ಕಾಲರದಂಥ ಎಪಿಡಮಿಕ್ ಹರಡುತ್ತಾ ಸಾವು ನೋವಿಗೆ ಕಾರಣವಾಗಿತ್ತು. ಮತ್ತು ಭಾರಿ ಆಸ್ತಿಪಾಸ್ತಿಗೆ ಹಾನಿಯುಂಟಾಗಿತ್ತು. ಸಾರಿಗೆ ಸಂಪರ್ಕವು ಕಡಿತಗೊಂಡು ದಿನ ಬಳಕೆಯ ವಸ್ತುಗಳ ಸಾಗಾಣಿಕೆ ಸಾಧ್ಯವಾಗದೆ, ಅಭಾವದಿಂದ ವಸ್ತುಗಳ ಬೆಲೆಯೂ ದುಬಾರಿಯಾಗಿತ್ತು.

ಅದೇ ಸಮಯದಲ್ಲಿ ಅಸ್ಸಾಂನ ಎಲ್ಲ ಜಿಲ್ಲೆಗಳಲ್ಲಿ ಅಂಥದ್ದೇ ಪರಿಸ್ಥಿತಿಯಿಂದಾಗಿ ಆಸ್ತಿಪಾಸ್ತಿ ನಾಶವಾಗಿ ಜೀವ ಹಾನಿಯೂ ಆಗಿ ನಾಗರೀಕರ ಬದುಕು ದುರ್ಭರವಾಗಿತ್ತು. ಅಸ್ಸಾಂ ರಾಜ್ಯಕ್ಕೆ ಇನ್ನಿತರ ರಾಜ್ಯಗಳೊಂದಿಗಿನ ಸಂಪರ್ಕವೂ ಕಡಿದುಹೋಗಿ, ಜನ ಜೀವನ ನಲುಗಿಹೋಯಿತು. ಇಂಥ ಭೀಕರ ಸ್ಥಿತಿಯಿಂದ ಅಸ್ಸಾಂ ನಲುಗುತ್ತಿದ್ದಾಗಲೇ  ರೈಲ್ವೇ ನೌಕರರ ಮುಷ್ಕರವೂ ನಡೆದುಹೋಯಿತು. ದೇಶ ರಕ್ಷಿಸುವ ಸೈನಿಕರು ಎಂದಿನಂತೆ ನೆರವಿಗೆ ಧಾವಿಸಿ ಅದ್ಭುತ ಸರ್ವೀಸ್ ಮಾಡಿದ್ದು ಶ್ಲಾಘನೀಯ. 

ಪ್ರಕೃತಿಯ ವಿಕೋಪ, ಕಾಲರ ರೋಗ ಭಾದೆ, ರೈಲ್ವೇ ನೌಕರ ಮುಷ್ಕರದಿಂದ ಮುಪ್ಪರಿಗೊಂಡ ಭೀಕರ ಸ್ಥಿತಿಯಲ್ಲಿ ಆಡಳಿತ ಕೈಗೊಂಡ ಪರಿಹಾರ ಕಾರ್ಯ ಅಲ್ಪವೇ ಆಗಿತ್ತು. ಇಂತಹ ಸ್ಥಿತಿಯಲ್ಲಿ ಪ್ರವಾಹ ನಿಯಂತ್ರಣ ಕಾರ್ಯವನ್ನು ಅಧ್ಯಯನ ಮಾಡಬೇಕೆಂದು ಪತ್ರಿಕೆ ಹೇಳುತ್ತದೆ.   

ಮೊನ್ನೆಕೂಡ ಅಸ್ಸಾಂನಲ್ಲೂ ಭೀಕರ ಪ್ರವಾಹದ ಅಸಹನೀಯ ಸ್ಥಿತಿಗತಿಯನ್ನು ಈಗತಾನೆ ಕಂಡಿದ್ದೇವೆ. ಇನ್ನಿತರ ರಾಜ್ಯಗಳಲ್ಲು ಪರಿಸ್ಥಿತಿ ಭಿನ್ನವಾಗಿಲ್ಲ. ಕರ್ನಾಟಕದಲ್ಲಿ ಸತತವಾಗಿ ಮೂರನೇ ವರ್ಷವೂ ಭೀಕರ ಮಳೆ ಪ್ರವಾಹದಿಂದ ತತ್ತರಿಸುತ್ತಿದೆ. ಪರಿಹಾರ ಕ್ರಮಗಳ ಬಗ್ಗೆ  ಚಿಂತನ ಮಂಥನ, ಒಂದಿಷ್ಟು ಕಾಮಗಾರಿಗಳು,ಆರ್ಥಿಕ ನೆರವೂ ಸಾಮಾಜಿಕರಿಂದಲೂ ಹರಿದು ಬರುತ್ತಿದೆ.

ಕೆಲವು ಕೆಲಸ ಕಾರ್ಯನಡೆದು ಸಂತ್ರಸ್ಥರಿಗೆ ಪರಿಹಾರವೂ ದೊರೆತಿರಬಹುದು. ಭೀಕರ ಪ್ರವಾಹವನ್ನಾಗಲಿ, ಗುಡ್ಡಕುಸಿತ, ರಸ್ತೆ ಸಂಪರ್ಕ ಕಡಿದುಹೋಗುವಂಥದು , ಜನ ಜಾನವಾರು ಸಾವು ನೋವು ಇಂಥದ್ದನ್ನೆಲ್ಲಾ ಪ್ರಾಕೃತಿಕವಾದ ಮಾರುತ (Monsoon) ಮಳೆಯ ಭೂಖಂಡದಲ್ಲಿ ಸರ್ಕಾರದ ಯಾವ ಯೋಜನೆ ಪರಿಹಾರ ಪಾರು ಮಾಡಬಹುದು? 

ಪತ್ರಿಕೆಯ ಶೀರ್ಷಿಕೆ ಹೇಳುತ್ತದೆ ‘Taming the  Brahmaputra’ ಎಂದು!  ಪ್ರಕೃತಿಯನ್ನು ಪಳುಗಿಸುವುದು ನಗು ಬರಿಸುವಂಥ ದುಸ್ಸಾಹಸವಲ್ಲವೇ? ಯಾವ ವಿಜ್ಞಾನ ತಂತ್ರಜ್ಞಾನದಿಂದ ಸಾಧ್ಯ? ಇಂಥ ಪ್ರಯತ್ನದಿಂದ ಇನ್ನಷ್ಟು ಸಮಸ್ಯೆಗಳು ಹುಟ್ಟಿಕೊಳ್ಳಬಹುದಲ್ಲವೇ? ಇಂದಿನ ಗ್ಲೋಬಲ್ ವಾರ್ಮಿಂಗ್‍ನಿಂದ ಜಗತ್ತು ತಲ್ಲಣಗೊಳ್ಳುವಷ್ಟು ಪ್ರಾಕೃತಿಕ ಹಾನಿಯನ್ನು ಈಗಾಗಲೇ ಕಂಡದ್ದಾಗಿದೆ. ಇಂಥ ಎಷ್ಟೋ ಪ್ರಶ್ನೆಗಳಿಗೆ ಆಡಳಿತವರ್ಗ ಕೊಡುವ ಉತ್ತರಗಳಾದರೂ ಏನು? ಎಲ್ಲರಿಗೂ ಗೊತ್ತಿರುವುದೇ ಆಗಿದೆ. 

Natural disasters Plague Kerala again ಎಂಬ ಸುದ್ದಿ (ಆಗಷ್ಟ್ 8, 2020) ಏನನ್ನು ಹೇಳುತ್ತಿದೆ. ಇದೇ ಸಮಯದಲ್ಲಿ ಇಡೀ ಜಗತ್ತನ್ನು ಬಾಧಿಸುತ್ತಿರುವ ಕೊರಾನಕ್ಕಾದರು ಯಾವ ಪ್ರತಿರೋಧದ ವ್ಯಾಕ್ಸೀನ್ ಕಂಡುಹಿಡಿಯಲು ವಿಜ್ಞಾನಿಗಳಿಂದ ಸಾಧ್ಯವಾಗಿದೆ? ವ್ಯಾಕ್ಸೀನ್  ಬಂದ ಮಾತ್ರಕ್ಕೆ  ವೈರಸ್‍ಅನ್ನು ನಿರ್ನಾಮ ಮಾಡಬಲ್ಲುದೇ? ಎಲ್ಲಿಯವರೆಗೆ ಹೇಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಲ್ಲೆವು. ನಮ್ಮ ಆಧುನಿಕ ಜೀವನ ಶೈಲಿ, ಊಟೋಪಹಾರದ ಪದ್ದತೀ ಎಲ್ಲಾ ಅಯೋಮಯವಾಗಿದೆ. 

ಇಂದಿನ ನಾಗರೀಕ, ಪ್ರಾಣಿ ಪಕ್ಷಿ ಕೀಟ ಏನನ್ನಾದರೂ ನುಂಗಿ ನೀರು ಕುಡಿಯಬಲ್ಲೆವೂ ಎಂಬದು ಎಂಥ ದಾಷ್ಟ್ಯ. ಆಧುನಿಕತೆಯ ಅಭಿವೃದ್ಧಿ ಭರದಲ್ಲಿ ಪ್ರಕೃತಿಯ ಮೇಲೆ ಸ್ವಾರ್ಥಕ್ಕಾಗಿ ಎಸಗುತ್ತಿರುವ ದಬ್ಬಾಳಿಕೆಯಿಂದ ಪರ್ಯಾವರಣ ಅಸಹನೀಯವಾಗಿದೆ. ಅಭಿವೃದ್ಧಿ ಕಾರ್ಯಗಳು, ಡಿಜಿಟಲ್ ಯಂತ್ರ ತಂತ್ರದ ಜಾದು, ಆಸೆಬುರಕತನ ಸಮ್ಮೋಹನಗೊಳಿಸುತ್ತಿರುವ ಜಾಗತಿಕ ಮಾರುಕಟ್ಟೆ ಇವುಗಳಿಗೆ ದಾಸರಾಗಿ ಬೀಗುತ್ತಿರುವ ನವ ನಾಗರೀಕರನ್ನು, ಸ್ವಾಭಿಮಾನವನ್ನು ಮಾರಿಕೊಂಡು ಆತ್ಮವಿಶ್ವಾಸವನ್ನು ಕಳೆದುಕೊಂಡಿರುವವರನ್ನು ಯಾರು ಕಾಪಾಡಬಲ್ಲರು?   

ಇವತ್ತಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಳೆಯ ಮುನ್ಸೂಚನೆಯನ್ನು ಅದರ ಭೀಕರತೆಯ ಮುನ್ಸೂಚನೆಯನ್ನು ಅಷ್ಟಿಷ್ಟು ಕೊಡುತ್ತಿದ್ದಾರೆ. ಅನಾಹುತವನ್ನು ಅದರಿಂದುಂಟಾಗುತ್ತಿರುವ ಹಾನಿ ನಷ್ಟ ಸಾವುನೋವನ್ನು ತಡೆಯಲು ಯಾವ ವಿಜ್ಞಾನ ತಂತ್ರಜ್ಞಾನದಿಂದ ಸಾಧ್ಯವಾಗಬಹುದು? ಅಭಿವೃದ್ಧಿಯ ಹೆಸರಿನಲ್ಲಿ Infrastructure ಗೋಸ್ಕರ ಗುಡ್ಡಕಡಿದು ಪಥಗಳನ್ನು ನಿರ್ಮಿಸುವುದು, ಬೃಹತ್ ಕಟ್ಟಡಗಳನ್ನು ಕಟ್ಟುವುದು, ನೆತ್ತಿಯ ಮೇಲೆ ಕಾರ್ಖಾನೆಗಳನ್ನು ಕಟ್ಟುವುದು ನಡೆಯುತ್ತಲೇ ಇದೆ. ಐಶಾರಾಮಿ ಸೌಕರ್ಯಗಳ ಲಕ್ಷುರಿ ರೆಸ್ಟೋರೆಂಟ್‍ಗಳು ಈಜುಕೊಳ ದೋಣಿವಿಹಾರಕ್ಕೆ ಕೆರೆಗಳನ್ನು ನಿರ್ಮಿಸುತ್ತಾ ಹೋದರೆ ಏನಾಗಬಹುದು.

ಇವತ್ತಿನ ಕೊಡಗು ಜಿಲ್ಲೆಯ ಸ್ಥಿತಿ ಉಂಟಾಗುತ್ತದೆ ಅಷ್ಟೆ. ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಇಂಥ ಅವಘಡ ಭಿಕರವೇ ಆಗಿರುತ್ತದೆ. ಇದಕ್ಕೆಲ್ಲಾ ಪರಿಹಾರವೇನು? ಇನ್ನು ವೈರಸ್‍ನಂಥ ರೋಗರುಜಿನಗಳ ಅವಘಡವನ್ನು ಮಣಿಸಲು ಸೀಲ್‍ಡೌನ್ ಲಾಕ್‍ಡೌನ್ ಸಾಮಾಜಿಕ ಅಂತರ ಕೈತೊಳೆದುಕೊಳ್ಳುತ್ತಿರಿ ಮಾಸ್ಕ್ ಧರಿಸಿ ಎಂದು ಹೇಳುತ್ತಾ ಮುದುಕರು ಮಕ್ಕಳನ್ನು ಗೃಹ ಬಂಧನದಲ್ಲಿ ಎಷ್ಟುಕಾಲ ಹಿಡಿದಿಡಲು ಸಾಧ್ಯ? ನಮ್ಮೆಲ್ಲಾ ಆಧುನಿಕ ಕೃತಕ ಜ್ಞಾನ, ಯಂತ್ರ ತಂತ್ರಜ್ಞಾನದ ಅಭಿವೃದ್ಧಿ ಯೋಜನೆಗಳು ಇಂಥ ಅವಗಢಗಳಿಗೆ ಪರಿಹಾರವನ್ನು ತಂದುಕೊಡಲಾರವು ಎಂಬುದು  ಅನುಭವಕ್ಕೆ ಬಂದಿದೆ. ಇನ್ನು ಪ್ರಕೃತಿಯನ್ನು ಮಣಿಸುವ ಸಾಹಸವಂತು ಹಾಸ್ಯಾಸ್ಪದವಲ್ಲದೆ ಮತ್ತೇನು ಅಲ್ಲ.

ಇಂಥ ಪರಿಸ್ಥಿತಿಯಲಿರುವಾಗ ಪ್ರಕೃತಿಯನ್ನು ಪಳಗಿಸುಕೊಳ್ಳುವಂಥ ದುಸ್ಸಾಹಸಕ್ಕೆ ಕೈಹಾಕುದಂತು ಅಸಾಧ್ಯದ ಮಾತು. ಅಷ್ಟೇ ಅಲ್ಲ ನಮ್ಮ ಇವತ್ತಿನ ಗ್ಲೋಬಲೈಶೇಶನ್‍ನ ಅಭಿವೃದ್ದಿ ಮಾರ್ಗ ಮನುಷ್ಯನ ಸಂಕಷ್ಟಗಳನ್ನು ಪರಿಹರಿಸಲಾರದ್ದು ಮಾತ್ರವಲ್ಲ ಅಸಹಜವಾದುದೂ ಆಗಿರುವುದು ನಮ್ಮ ಅನುಭವಕ್ಕೆ ಬಂದಿದೆ. ಹೀಗಿರುವ ಸಂದರ್ಭದಲ್ಲಿ ಸರಳವೂ ಸಾತ್ವಿಕವೂ ಆದ ಸಂತೃಪ್ತ ಜೀವನ ಕ್ರಮ ಮಾತ್ರ ನಮ್ಮನ್ನು ಅವಘಡಗಳಿಂದ ಪಾರುಮಾಡಬಲ್ಲದು ಎನಿಸುತ್ತಿದೆ.

ಅಂಥ ವ್ಯವಸ್ಥೆಯೆಂದರೆ ಮಹಾತ್ಮಾ ಗಾಂಧೀಜೀ ಪ್ರಣೀತ ‘ಗ್ರಾಮಸ್ವರಾಜ್’ ಮತ್ತು ಸ್ವದೇಶಿ ತತ್ವ’. ಪ್ರಜಾಪ್ರಭುತ್ವ ಮಾರ್ಗದ ಹಳ್ಳಿಗಳ ಸಣ್ಣಸಣ್ಣ ಘಟಕಗಳ ಆಡಳಿತ ವ್ಯವಸ್ಥೆಯ ಆರ್ಥಿಕ ಅಭಿವೃದ್ಧಿಯ ಯೋಜನೆಗಳು. ವಿಕೇಂದ್ರಿಕರಣಗೊಂಡ ಸ್ವತಂತ್ರವಾದ ಮಾನವ ಕೇಂದ್ರಿತ ಸ್ವಯಂ ಆಡಳಿತ ವ್ಯವಸ್ಥೆ. ಸ್ವಾವಲಂಬಿಯಾದ ಸ್ಥಳೀಯ (ನೇಟೀವ) ಜ್ಞಾನಕೇಂದ್ರಿತವಾದ ಸ್ವದೇಶಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವಂಥದ್ದು. ಗೌರವಾನ್ವಿತವಾದ ಜೀವನಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ದೊರಕಿಸಬಹುದಾದ ಒಂದು ವ್ಯವಸ್ಥೆ. Infrastructure ಅದೇ ಗ್ರಾಮಾಡಳಿತ.

‘ಜಗತ್ತು ಒಂದು ಹಳ್ಳಿ’ ಯಾಗಿಸಿಬಿಡುವ ಅಹಂಕಾರದ ಗ್ಲೋಬಲೈಸೇಶನ್‍ನ್ನಿಂದ ಬೀಗುತ್ತಿರುವ ವಿಶ್ವ ಸಮುದಾಯ  ಬೃಹದಾಕಾರದ ಆಧುನಿಕ ತಂತ್ರಜ್ಞಾನದ ಜಾಗತಿಕ ಉತ್ಪಾದನಾ ಕ್ರಮದಿಂದ, ವಿಶ್ವ ಮಾರುಕಟ್ಟೆಯ ವ್ಯಸನದಲ್ಲಿದೆ. ಕ್ರೂರವಾದ ಪೈಪೋಟಿಯಿಂದ ಮಾನವ ಸಂಬಂಧಗಳು ನಾಶವಾಗಿ ಜಾಗತಿಕ ಯುದ್ಧ ಭೀತಿಯನ್ನು ಎದುರಿಸುತ್ತಿದ್ದೇವೆ. ಹೆಚ್ಚು ಹೆಚ್ಚು ಬೆಳೆಗಾಗಿ ಕೃತಕ ರಸಗೊಬ್ಬರದಿಂದ ಭೂಮಿಯ ಸಹಜ ಸಾರವನ್ನು ನಾಶ ಮಾಡುತ್ತಿರುವುದರಿಂದ.

ಮನುಷ್ಯನ ಪ್ರಾಕೃತಿಕವಾದ ರೋಗನಿರೋಧಕ ಸಾಮರ್ಥ್ಯ (ಇಮ್ಯೂನಿಟಿ) ಕುಸಿಯುತ್ತಿದೆ. ರೋಗ ರುಜಿನಗಳು ನಮ್ಮನ್ನು ಕಾಡುತ್ತಿವೆ. ಆಧುನಿಕ ಜೀವನ ಶೈಲಿಯ ಉಪಭೋಗ ಸಂಸ್ಕೃತಿಯಿಂದ ಪರಿಸರವನ್ನು ಕಲುಷಿತ ಗೊಳಿಸಿ ಸಂಕಷ್ಟದಲ್ಲಿ ಸಿಲುಕಿದ್ದೇವೆ.

 ಈಗ ಜಗತ್ತನೇ ಆವರಿಸುತ್ತಿರುವ ಕೊರಾನ- ಕೋವಿಡ್ 19 (ಪೆಂಡಮಿಕ್) ಎಂಬ ವೈರಾಣು ಲಕ್ಷಾಂತರ ಜನರನ್ನು  ಬಲಿ ತೆಗೆದುಕೊಳ್ಳುತ್ತಿದೆ. ಇನ್ನಷ್ಟು ಲಕ್ಷ ಮಂದಿ ಖಾಯಿಲೆಯಿಂದ ನರಳುತ್ತಿದ್ದಾರೆ. ಈ ವೈರಾಣುವಿನಬಾಧೆ ಸದ್ಯಕ್ಕೇನು ಮರೆಯಾಗಿ ಬಿಡುವಂಥದ್ದಲ್ಲ. ಈಗಾಗಲೆ ಬಾಧಿಸುತ್ತಿರುವ ವೈರಾಣುಗಳ ಜೊತೆಗೆ ಇದೂ ಒಂದು ಸೇರ್ಪಡೆಯೇ ಆಗಿರುತ್ತದೆಯಷ್ಟೆ.

ಕೃತಕವೂ ಅಸಹಜವೂ ಅದ ನಿಯಮ ನಿರ್ಬಂಧಗಳಿಂದ ಮನುಷ್ಯ ಜೀವಿತದ ಎಲ್ಲ ಚಟುವಟಿಕಗಳು ಸ್ಥಗಿತಗೊಂಡಿವೆ. ಆದಾಯದ ಮೂಲಗಳಿಗೆ ಲಕ್ವಹೊಡೆದು ಮನುಷ್ಯರನ್ನು ನಿಶ್ಚೇಷ್ಟಿತಗೊಳಿಸಿವೆ. ರಾಷ್ಟ್ರದ ಆದಾಯ ಮೂಲಗಳು ನಾಶವಾಗಿ ಪ್ರಜೆಗಳಿಗೆ ಯಾವ ನೆರವನ್ನು ನೀಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲು ಬಡವ ಬಲ್ಲಿದರು, ಕೂಲಿ ಕಾರ್ಮಿಕರು ಸಾವಿನ ದವಡೆಗೆ ಸಿಲುಕಿರುವ ವಲಸಿಗರು ಇವರನ್ನೆಲ್ಲಾ ಸಂಕಷ್ಟದಿಂದ ಹೇಗೆ ಪಾರುಮಾಡುತ್ತೀರಿ.     

ಅಲ್ಲದೆ ಈಗ ಮೂರು ವರ್ಷಗಳಿಂದ ಭಾರಿ ಪ್ರವಾಹದಿಂದ ಉಂಟಾಗಿರುವ ಎಲ್ಲ ಸಂಕಷ್ಟಗಳಿಗೂ ಸ್ವಯಂಕೃತ ಅಪರಾಧವೇ ಕಾರಣ ಎಂಬುದು ವೇದ್ಯವಾಗುತ್ತಿದ್ದರೂ, ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ನಿಲ್ಲಿಸದೆ ವಿಧಿಯಿಲ್ಲ. ಪರ್ಯಾಯವಾಗಿ ‘ಗ್ರಾಮ ಸ್ವಾರಾಜ್, ಸ್ವದೇಶಿ ತತ್ವದ ಖಾದಿ-ಚರಕ’ದಂಥ ಸ್ವಾವಲಂಬನೆಯ ಸ್ವಾಭಿಮಾನ ತತ್ವ ಇಂದಿನ ಅವಘಡಗಳಿಂದ ಪಾರುಮಾಡಬಹುದೆಂದು ತೋರುತ್ತಿದೆ. ಅದಕ್ಕಾಗಿ ದೇಶೀಯ ಜ್ಞಾನದ ಸಾಧನ ಸಲಕರಣೆಗಳಿಂದ ಸ್ಥಳೀಯ ಉತ್ಪಾದನೆಯನ್ನು ವೃದ್ಧಿಪಡಿಸಲೂಬಹುದು.

ದೇಶೀಯವಾದ ನೈಸರ್ಗಿಕವಾದ ಉತ್ಪನ್ನಗಳ ಬಳಕೆಯಿಂದ ಆರೋಗ್ಯಕರವಾದ ಸಂತೃಪ್ತ ಜೀವನವನ್ನೂ ನಡೆಸಬಹುದಾಗಿದೆ. ಅಂಥ ಜೀವನ ಕ್ರಮಕ್ಕಾಗಿ ಗ್ರಾಮ ಸ್ವರಾಜ್‍ ದಂಥ ಸ್ವಯಂ ಆಡಳಿತದಿಂದ ದೇಶಿಯ ಜ್ಞಾನವನ್ನು ಬಳಸಿಕೊಂಡು ಸ್ವದೇಶಿ ಉತ್ಪಾದನಾ ಕ್ರಮವನ್ನು ಅಳವಡಿಸಿಕೊಂಡರೆ ಪರದೇಶದ ವಸ್ತು ಸಾಮಗ್ರಿಗಳ ಮೇಲಿನ ಅವಲಂಬನೆ ತಪ್ಪುತ್ತದೆ. ಸ್ಥಳೀಯ ಮಾರುಕಟ್ಟೆಗಳ ಮೂಲಕ ಅವಶ್ಯಕ ಸಾಮಗ್ರಿಗಳನ್ನು ಗ್ರಾಹಕರಿಗೆ ತಲುಪಿಸಬಹುದು. ಇದಕ್ಕೆ ಬೇಕಾಗಿರುವುದು ಸ್ವಾಭಿಮಾನಿಯಾದ ಸ್ವತಂತ್ರವಾದ ಸ್ವಾವಲಂಬನೆಯ ಅಭಿವೃದ್ಧಿ ಯೋಜನೆಗಳು.

ಅದಕ್ಕಾಗಿ ಸ್ವತಂತ್ರವಾದ ಸ್ಥಳೀಯವಾದ ಪಂಚಾಯತ್ ರಾಜ್ಯ ಆಡಳಿತ ವ್ಯವಸ್ಥೆಯನ್ನು ಸದೃಢಗೊಳಿಸುವುದು ಇಂದಿನ ತುರ್ತಾಗಿರುತ್ತದೆ. ಹಾಗೆ ಮಾಡುವುದರ ಮೂಲಕ ಸ್ವಾಭಿಮಾನಿ ಸ್ವಾವಲಂಬನೆಯ ದೇಶವನ್ನೂ ಕಟ್ಟಬಹುದು.  ಗ್ರಾಮ್‍ ಸ್ವರಾಜ್ ಮತ್ತು ಸ್ವದೇಶಿ ತತ್ವ ಆಧಾರಿತ ಯೋಜನೆಗಳನ್ನು ನಿರ್ವಹಿಸಲು ಅಗತ್ಯವಾದ ಸ್ವತಂತ್ರವಾದ ಗ್ರಾಮಗಳ ಆಡಳಿತ ವ್ಯವಸ್ಥೆ ನಮ್ಮ ಇವತ್ತಿನ ಸಂಕಷ್ಟಗಳಿಗೆ ಪರಿಹಾರವನ್ನು ಒದಗಿಸಬಲ್ಲದು. ಪರ್ಯಾವರಣವನ್ನೂ ಶುದ್ಧವಾಗಿಟ್ಟುಕೊಳ್ಳಬಲ್ಲ ಪ್ರಕೃತಿಸ್ನೇಹಿ ಆಧ್ಯಾತ್ಮ, ರಾಷ್ಟ್ರ  ಜೀವನವನ್ನು ಪೊರೆಯಬಲ್ಲದು. ವಿಶ್ವಾತ್ಮಕವೂ ಆಗಿ ಮನುಕುಲವನ್ನೂ ಕಾಪಾಡಬಲ್ಲದು.

‍ಲೇಖಕರು Avadhi

13 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading