–ಮಂಜುನಾಥ್ ಲತಾ
ನರಕದ ಉದಕದ ಪರಿಮಳ
ಅಲ್ಲಿ ಕೆತ್ತಿ ನಿಲಿಸಿರುವ
ಮಣ್ಣು, ಮರದ, ಕಲ್ಲಿನ ಮೂರ್ತಿಗಳ ಕಂಗಳಲ್ಲಿ
ಬೆದರಿದ ಬೆಳಕಂತಿರುವ ಹೊಳಪೊಂದು ಇದೆ.
ಮೂರ್ತಿಗಳು ದೇವರವೋ, ದೆವ್ವದವೋ
ಬರಿ ಮೂರ್ತಿಗಳೋ ಎಂಬ ಕಣ್ಣಳತೆಯ ಅಂದಾಜಿನಲ್ಲಿ
ಕಲಾಸಕ್ತರು, ಭಕ್ತರು ನೋಡುತ್ತಿದ್ದಾರೆ.
ಕೆಲವರು ಹೆಣ್ಣು ಮೂರ್ತಿಗಳ ಹೊಕ್ಕಳು, ಬಳುಕು ಸೊಂಟಗಳತ್ತ
ಒಂದಷ್ಟು ಜನ ನುಣ್ಣಗೆ, ದುಂಡಗೆ ಕೆತ್ತಿರುವ ಮೊಲೆಗಳತ್ತ
ಕೀಳಲಾಗದ ದೃಷ್ಟಿ ಕೀಲಿಸಿದ್ದಾರೆ.
ಅಲ್ಲೇ ಗರ್ಭ ಸ್ತಂಭದ ಕೆಳಗೆ ಕೂತು
ಆಗಾಗ್ಗೆ ಹಾಡುವ ಅವನು ಹುಚ್ಚನಂತೆ, ಭಿಕಾರಿಯಂತೆ
ದೇವರ ನೋಡಲು ಬಂದವರಿಗೆ ಕಾಣಿಸುತ್ತಾನೆ.
ಬರೆದು ಬರೆದು ತೇದು ಹೋದ ಸುಣ್ಣದ ಬಳಪದಂತಿರುವ ಅವನು
ತಾನೇ ಬರೆದೆನೆಂದು ಹೇಳಿಕೊಳ್ಳುವ ಹಾಡು ಹಾಡುತ್ತಾನೆ:
‘ಭಕ್ತಿ ಎಂಬುದು ಭವದ ರೋಗ
ತಿರಿದು ತಿನ್ನುವುದೇ ಅದಕ್ಕಿಂತ ಯೋಗ…’
ದೇವರೆಂದು ಊಹಿಸುತ್ತಾ ಕೆತ್ತಿದ ಮೂರ್ತಿಗಳು
ಉಳಿಯ ವಕ್ರ ಏಟು ಬಿದ್ದು ಬೆದರು ಗೊಂಬೆಗಳಂತಾಗಿವೆ.
ಆದರೂ ಭಕ್ತರು ಮೆಚ್ಚುತ್ತಾರೆ; ಹುಚ್ಚು ಬಂದಂತೆ ಉರುಳುತ್ತಾರೆ.
ಸನ್ನಿಧಿ, ಸ್ವರ್ಗ ಎಂದು ನೀರಲಿ ಮಿಂದು ಬಂದವರಿಗೆಲ್ಲ
ಅರೆ ನಗ್ನ ಎದೆ, ತೊಡೆಗಳ ದರ್ಶನ.
ಎಲ್ಲವನು ಮುಚ್ಚಿಟ್ಟು, ಸುಮ್ಮನೆ ನಕ್ಕು, ‘ದರ್ಶನ’ವಾಯಿತು ಎಂದು
ಪ್ರಸಾದದ ಹುಳಿ ತೇಗು ಬಿಟ್ಟು ಹೊಸ ಶರಟು ತೊಟ್ಟು ಹೊರಡುತ್ತಾರೆ.
ಅವರು ಹತ್ತಿ ಹೊರಟ ವಾಹನಗಳ ಹಿಂದೆ ಅಲೆಯುತ್ತದೆ ಅವನ ಹಾಡು:
‘ಇದು ನರಕ, ಇಲ್ಲಿ ಹುಟ್ಟುವ ಕೊಳಕು ಉದಕ
ಹಿಂಬಾಲಿಸುವುದು ನಿಮ್ಮನು ಕೊನೆಯ ತನಕ…’






0 Comments