ಇಲ್ಲಿ ನಮಗಿಲ್ಲ ಯಾವ ಊರು – ಯಾವ ಸೂರು

–  ಚಂದಿನ

1
ಹಸಿವಿಗೆ ಅನ್ನವಿಲ್ಲ, ತೊಡಲು ಬಟ್ಟೆಯಿಲ್ಲ,
ಗುಡಿಸಿ-ಸಾರಿಸಲು ಸೂರಿಲ್ಲ,
ಇನ್ನು ನಮ್ಮ ಕತ್ತಲಿಗೆ ಬೆಳಕಿಲ್ಲ,
ಉಳುವ ಭೂಮಿ ಕಸಿದರು,
ಕೈಯಲ್ಲಿನ ಕೂಲಿ ಕದ್ದರು,
ಎಲ್ಲ ಕನಸುಗಳ ಕೊಂದರು.
ನಮ್ಮವರೆಂದರು, ಸೇವಕರೆಂದರು,
ಸ್ನೇಹಿತರೆಂದರು, ನಾಯಕರಾದರು
ಕಸಿದರು, ಕದ್ದರು, ಕೊಂದರು.
 
ಕೆಲವರು,
ಮುಟ್ಟಸಿಕೊಳ್ಳಲೊಲ್ಲರು, ಜೊತೆಗೆ ಉಣ್ಣಲೊಲ್ಲರು,
ಎಂಜಲೆಲೆಗಳ ಮೇಲೆ ಉರುಳಿಸಿ, ಪಾದ ತೊಳೆಸಿ,
ಆ ಕಲುಷಿತ ನೀರನ್ನು ಕುಡಿದು,
ನಿಮ್ಮ ಎಲ್ಲಾ ಪಾಪ ಕರ್ಮಗಳ,
ದಟ್ಟ ದಾರಿದ್ರ್ಯಗಳ, ರೋಗ-ರುಜಿನಗಳ ತೊಳೆದು
ಕೃತಾರ್ಥರಾಗಿ ಎಂದು ದೂರದಿಂದಲೇ ಅರಚಿದರು.
 
ಕೆಲವರ ನಯವಾದ ಸಲಹೆ;
ಸಾಲ-ಸೋಲವಾದರೂ ಮಾಡಿ
ಹಬ್ಬ- ಹರಿದಿನಗಳ ತಪ್ಪದೇ ಆಚರಿಸಿ ಎಂದರು.
ಇನ್ನು ಮದುವೆ-ಮುಂಜಿ, ಗೃಹ ಪ್ರವೇಶ,
ಪೂಜೆ-ಪುನಸ್ಕಾರ, ಪುಣ್ಯತಿಥಿಗಳ
ಆಡಂಬರ, ಅಬ್ಬರದಿಂದ ತಮ್ಮ ಸಮಕ್ಷಮದಲ್ಲೇ ಆಗಬೇಕು,
ನಾವು ಹೇಳಿದಂತೇ ನಡೆಯಬೇಕು ಎಂದು,
ಅತ್ತ ತಿರುಗಿ ಮುಗುಳ್ನಕ್ಕರು.
 
ಜಾತಕ,  ಸೂತಕಗಳು ಮಹಾ ಪಾತಕವೆಂದು,
ಮಂಗಳ, ಶನಿ ಗ್ರಹಗಳ ಪ್ರಭಾವಕ್ಕೆ ಬಲಿಯಾಗಿರುವೆ ಎಂದು,
ನಾಮ ಬಲ ಎಂದೋ ಎಕ್ಕುಟ್ಟೋಗಿದೆ ಎಂದು,
ಮದುವೆ, ಮನೆ, ಮಕ್ಕಳು ಹಗಲುಗನಸೆಂದು
ಇನ್ನಿಲ್ಲದಂತೆ ಮುಗ್ದರಲ್ಲಿ ಭಯ ಮೂಡಿಸಿ,
ಕಾಡಿಸಿ, ಪೀಡಿಸಿ, ಓಡಿಸಿ, ಮನಸ್ಸನ್ನು ಕಲಕಿ, ಕದಡಿ
ಅವರ ಬದುಕಲ್ಲಿ ಚದುರಂಗವಾಡಿ,
ಇಷ್ಟ ಬಂದಂತೆ ಕುಣಿದು ಕುಪ್ಪಳಿಸಿದರು.
 
ಇವರೆಲ್ಲಾ ಧೀಮಂತರಂತೆ, ಸಕಲ ಸಾಧಕರಂತೆ,
ಸರ್ವಗುಣ ಸಂಪನ್ನರಂತೆ, ಸಜ್ಜನ ಸರ್ವಜ್ಞರಂತೆ,
ಎಲ್ಲಾ ಟೀವಿ-ಪತ್ರಿಕೆಗಳಲ್ಲಿ, ಸಿಕ್ಕ ಸಿಕ್ಕ ಸಭೆ-ಸಮಾರಂಭಗಳಲ್ಲಿ
ಧರ್ಮ ಶ್ರೇಷ್ಠತೆಯ ಬಗ್ಗೆ, ಒಗ್ಗಟ್ಟಿನ ಶಕ್ತಿ-ಯುಕ್ತಿಗಳ ಬಗ್ಗೆ,
ಸರಳ ಜೀವನ ಮಾರ್ಗದ ಬಗ್ಗೆ,  ಸಮ-ಸಮಾಜದ ನಿರ್ಮಾಣದ ಬಗ್ಗೆ,
ನೀತಿಪಾಠಗಳ ಬಗ್ಗೆ ನಿರರ್ಗಳವಾಗಿ ಸವಿ ಮಾತಿನ ಲೇಪನದಿಂದ
ನಂಬಿದ ಸಾರ್ವಜನಿಕರಿಗೆ ತಿಳಿಯದಂತೆ ಬೋಳಿಸಿ, ನಾಮಗಳಿಟ್ಟು
ತಮ್ಮ ಹೊಟ್ಟೆ ಇನ್ನೂ ದುಂಡಗಾಗಿಸಿಕೊಂಡರು.
2
ಇವರು ನಗುನಗುತ್ತಲೇ ಬರುವರು
ಹಿತನುಡಿಗಳ ಸಾಂಗತ್ಯದ ಸತ್ವ ಸವರಿ
ಭುಜದಲ್ಲಿ ಕೈಯಿರಿಸಿ,  ಮೆತ್ತಗೆ ಬೆನ್ನಿಗೆ ಚೂರಿ ಹಾಕಿ
ಸದ್ದಿಲ್ಲದೇ ಪರಾರಿಯಾಗುವ ಮಹಾನ್ ನಿಪುಣರು!
 
ಕೊನೆಗೆ ನಮ್ಮ ಹೆಸರುಗಳನ್ನೂ ಬಿಡದೆ,
ನಮ್ಮ ದೇವರ ಆಕಾರಗಳನ್ನು ವಿಕಾರಗೊಳಿಸಿ
ತಮ್ಮ ವಿಕೃತ ಮನಸ್ಥಿತಿಯ ಮಟ್ಟವನ್ನು ಪ್ರದರ್ಶಿಸಿದರು.
 
ಇನ್ನೂ ಸಾಲದೆಂಬಂತೆ,
ರಾಹು, ಗುಳಿಕಕಾಲ ನೋಡಿಕೋ ಹುಷಾರು,
ಜೋತಿಷ್ಯ,  ವಾಸ್ತುಗಳು ಶ್ರೇಷ್ಠ ನಂಬು,
ಹೋಮ, ಹವನಗಳು ಪವಿತ್ರ ಪಾವನ ಕಣಯ್ಯಾ,
ವಾರದ ಎಲ್ಲಾ ದಿನಗಳು ಅಲ್ಲಿ – ಇಲ್ಲಿ ಎಲ್ಲೆಲ್ಲೋ ಹೋಗು
ವಿಶೇಷ ಪೂಜೆ ಅರ್ಚನೆ ಟಿಕೇಟು ಖರೀದಿಸಿ,
ಅರ್ಚಕರಿಗೆ ಕಾಣಿಕೆ ನೀಡಿ ಅಡ್ಡಬಿದ್ದರೇ
ನಿನ್ನ ಎಲ್ಲ ಕಷ್ಟ, ನೋವು,  ಪಾಪ ಪರಿಹಾರವಾಗಿ
ಮನೆ, ಮದುವೆ, ಮಕ್ಕಳ ಭಾಗ್ಯ ಬೇಗ ಸಿದ್ಧಿಸುವುದೆಂದು ಬೊಗಳೆ ಬಿಟ್ಟು,
ಇರುವುದೆಲ್ಲವ ದೋಚಿ,  ಬೆತ್ತಲಾದರೂ ಬಿಡದೆ,
ಇನ್ನೂ ಹುಡುಕಿ ಹುಡುಕಿ ಸಿಕ್ಕಿದ್ದನ್ನೆಲ್ಲಾ  ಉಂಡು,
ತಮ್ಮ ಮೂತಿ ಒರೆಸಿಕೊಂಡು,
ಅಂಡು ತೋರಿಸಿ ಹೊರಟೇ ಹೋದರು.
 
ಇಂಥಹ ಭಂಡರನ್ನು,
ಸ್ವಜನ ಪಕ್ಷಪಾತಿಗಳನ್ನು,  ಕ್ರೂರ ಹಿತ ಶತ್ರುಗಳನ್ನು,
ನಿಕೃಷ್ಟ ನಯವಂಚಕರನ್ನು,  ಹಗಲು ದರೋಡೆಕೋರರನ್ನು,
ವಿಕೃತ ಪಿಶಾಚಿಗಳನ್ನು, ನಂಬಿಕೆ ದ್ರೋಹಿಗಳನ್ನು,
ಅಮಾಯಕ, ಅಸಹಾಯಕ ಶೋಷಕರನ್ನು,
ಮನುಕುಲ, ಮಹಿಳೆ, ಮಕ್ಕಳ ಪೀಡಕರನ್ನು,
ಶತಮಾನಗಳ ಸತತ ಶ್ರಮವೂ ಸರಿಪಡಿಸಲಾಗದೆ ಸೋತು,
ನಾವು ಸಾಯುವ ಮುನ್ನವಾದರೂ,
ಯೇಸು, ಅಲ್ಲಾಹು, ಬುದ್ಧನಲ್ಲಿಗೆ ಓಡಿ
ನೆಮ್ಮದಿ, ಮುಕ್ತಿ ಪಡೆಯೋಣವೆಂದು ಬಯಸಿದರೆ,
ಅಲ್ಲಿಯೂ ನೆಮ್ಮದಿಯಾಗಿ ಬಿಡಲೊಲ್ಲದ ಪುಂಡರು,
ಘರ್ ವಾಪಸಿ ಎಂದು ಮತ್ತೆ ಬೊಬ್ಬಿಡುವರು,
ಭಯಪಡಿಸುವರು, ಸಾವಿರ ಸುಳ್ಳು ಭರವಸೆಗಳ ನೀಡುವರು,
ಅಯಯ್ಯೋ ಶಿವ, ಶಿವಾ ಶರಣು ಶರಣೆಂದರೆ,
ನೀವು ವೀರ ಶೈವರಲ್ಲವಯ್ಯಾ ಎಂಬುವರು.
 
ಏನು ಮಾಡಲಿ ಶಿವನೆ, ಎತ್ತ ಹೋಗಲಿ ಹರನೆ,
ಬೆತ್ತಲಾಗಿದ್ದೇನೆ, ಇನ್ನಾದರೂ ಬಿಟ್ಟುಬಿಡು ಮಗನೆ,
ನಮ್ಮ ಪಾಡಿಗೆ,  ನಮ್ಮ ಹಾಡಿಗೆ.
ನಿಜ ನಾವು ಅಲ್ಪರು, ನಾವು ಅಂಧರು,
ನಾವು ಮಹಾ ಮೂರ್ಖರು, ನಾವು ಶತದಡ್ಡರು,
ನಾವು ಕಡುಬಡವರು, ನಾವು ಬಹಳ ತುಚ್ಛರು,
ಇಲ್ಲಿ ನಮಗಿಲ್ಲ ಯಾರೂ ನಮ್ಮವರು,
ಯಾವ ಊರು, ಯಾವ ಸೂರು.

‍ಲೇಖಕರು avadhi-sandhyarani

September 4, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Chandina

    ಧನ್ಯವಾದಗಳು ಅವಧಿಗೆ: ಈ ಪದ್ಯ ನಿತ್ಯ ಹತಾಶೆ ಅಭದ್ರತೆಯ ನೆರಳಲ್ಲಿ ನೊಂದ ನಿರ್ಗತಿಕರ, ಬಡ ರೈತರ ಹಾಗು ಕೂಲಿ ಕಾರ್ಮಿಕರಿಗೆ ಅರ್ಪಣೆ…
    – ಚಂದಿನ.

    ಪ್ರತಿಕ್ರಿಯೆ
  2. ramesh gabbur

    ಏನು ಮಾಡಲಿ ಶಿವನೆ, ಎತ್ತ ಹೋಗಲಿ ಹರನೆ,
    ಬೆತ್ತಲಾಗಿದ್ದೇನೆ,
    ಈ ಸಾಲು ಬಹಳ ಇಷ್ಟ ಅಯತು ಸರ್,
    ನನ್ನ ಬಾಲ್ಯವನ್ನು ನೆನಪಿಸಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: