ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿ ಎಲ್ಲವೂ ತುಸುವೇ ತುಸು ದೂರ..

ಅಷ್ಟು ದೂರ 

ದಾದಾಪೀರ್ ಜೈಮನ್ 

ಎಲ್ಲವು ನಮ್ಮಿಂದ

ತುಸು ದೂರದಲ್ಲಿಯೇ ಘಟಿಸುತ್ತವೆ

ತುಸು ಎಂದರೆ?

ದಾಮೋದರನ ಬಾಯೊಳಗೆ ಬ್ರಹ್ಮಾoಡ

ಕಂಡ ಯಶೋಧೆ ನಿಂತಿದ್ದಷ್ಟು

ಸಂಜಯನ ಒಳಗಣ್ಣಿಗೆ ಮಾತ್ರ

ಕುರುಕ್ಷೇತ್ರ ಕಾಣುವಷ್ಟು ತುಸು ದೂರದ್ದು

ಇನ್ನೊಂದೇ ಬಿಂದು ಹತ್ತಿರ ಬಂದಿದ್ದರೆ

ಆತ್ಮವೃತ್ತವನ್ನು ಹಾದುಹೋಗಬಹುದಾದಷ್ಟು

ಎಲ್ಲವೂ ಹಾಗೆಯೇ

ತುಸುದೂರದಲ್ಲಿಯೇ ಘಟಿಸುತ್ತವೆ

ರಾಮಾಯಣ, ಮಹಾಭಾರತ

ವೇದಪುರಾಣಗಳು

ಇತಿಹಾಸದ ಯುದ್ಧ ಭೂಮಿಯಲ್ಲಿ ಹರಿದ ನೆತ್ತರು

ಶಹೀನ್ ಬಾಗ್, ಟೌನ್ ಹಾಲಿನ ಮೆಟ್ಟಿಲುಗಳ ಮೇಲಿಂದ

ಕೇಳಿಬರುವ ನ್ಯಾಯದ ಕೂಗು

ರಾಜಕೀಯದ ಕುಟಿಲ ತಂತ್ರ

ಯಾರೋ ಎಸೆದ ಬೆಂಕಿಯ ಕಲ್ಲು

ಮತ್ಯಾರದೋ ಕೇರಿಯಲಿ ಹಬ್ಬಿಸುವ ಹಗೆ

ಹಿತ್ತಿಲಲಿ ಕವಿತೆಯಾಗುವ ಮನೆಮನೆಯ ಕಥೆಗಳು


ಹೀಗೆ ಎಲ್ಲವೆಂದರೆ ಎಲ್ಲವೂ

ಚೂರೇ ಚೂರು ದೂರ

ನಮಗೂ ಮತ್ತು ಸಾವಿಗೂ ನಡುವಿನಷ್ಟು…

ಕಾಮದ ತುತ್ತತುದಿಯಿಂದ  ಪ್ರೇಮದ ಹೊಸ್ತಿಲಿಗಿರುವಷ್ಟು

ದೇವರ ಗುಡಿಯಲಿ  ಅವನಿಗೂ ಮತ್ತು ನಮಗಿರುವಷ್ಟು

ಕಾಣಲು ಸುಮ್ಮನೆ ಕಣ್ಣುಮುಚ್ಚಬೇಕು

ಪ್ರಾರ್ಥನೆಗೆರಡು ರೆಪ್ಪೆಗಳು ಅಪ್ಪಬೇಕು

ಆಗ ತಂತಾನೆ ತಿಳಿಯುವುದು

ನಾವು ಹುಡುಕುತ್ತಿರುವ ಪೂರ್ವಾಪರ

ಜೀವಪರವಾದದ್ದು ಜೀವಪರವಲ್ಲದ್ದು

ರೆಟಿನಾದ ಪರದೆಯ ಮೇಲೆ ಎದುರು ನಿಲ್ಲುವುದು

ದುರಿತ ಕಾಲದಲ್ಲಿ ಎದೆಯ ಹಾಡು ತಂತಾನೆ ಮಾತಾಗುವುದು

ಈ ಭುವಿಗೆ ಸುಮ್ಮನೆ ಬಂದೆದ್ದು ಬಿದ್ದು ಹೋದವರು

ಹಲವರಿದ್ದಾರೆ ಕವಿಗಳೇ

ಎದೆಯ ಕವಿತೆ ಕ್ಷೀಣವಾಗಿ ಪಿಸುಗುಟ್ಟುತ್ತದೆ

ನಡೆಯುತ್ತ ಹಾಡುತ್ತ ನಿಲ್ಲುತ್ತ ನಡೆಯುವುದು

ಇಂದಿನ ತುರ್ತು

ಹೌದು

ಇಲ್ಲಿ ಎಲ್ಲವೂ ತುಸುವೇ ತುಸು ದೂರ

 

‍ಲೇಖಕರು avadhi

21 February, 2020

5 Comments

  1. Poorvi

    WAH SOGASADA KAVITHE

  2. rangapreeye

    ❤️ you peer

  3. rangapreeye

    ❤️

  4. ಡಿ.ಎಮ್. ನದಾಫ್.

    ಪ್ರಾರ್ಥನೆಗೆರಡು ರೆಪ್ಪೆಗಳು ಅನ್ನಬೇಕು…….
    ಒಂದು ರೆಪ್ಪೆಯ ಕಣ್ಣು ಕಣ್ಣೆ?
    ಅದ್ಭುತ!!!!!
    ಡಿ ಎಮ್ ನದಾಫ್ ಅಫಜಲಪುರ .

  5. Bharathi B V

    ತುಂಬ ಇಷ್ಟವಾಯ್ತು ದಾದಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading