ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿ ಈ ಪುಸ್ತಕದಲ್ಲಿ..

ಪುಸ್ತಕದ ಹಾಡು

ಪಿಆರ್ ವೆಂಕಟೇಶ್
ಮೊದಲ ಪುಟದಲ್ಲೇ ಹಾಡಿದೆ
ನನ್ನ ನಿನ್ನ ಅವರ ಹಾಡಲ್ಲ
ನಾವು ಎನ್ನುವ ಹಾಡು

ಪುಟ ತೆರೆದಂತೆ ದುಮ್ಮಿಕ್ಕಿವ
ನೂರಾರು ನದಿಗಳಿವೆ
ತೊರೆ ಚಿಮ್ಮಿ ನೊರೆ ಗಟ್ಟಿ ಹೆಪ್ಪಾದ ಕೆನೆ ಇದೆ
ಕೆನೆಯೊಳಗಿನ ಘಮ ನನ್ನದೆ
ನನ್ನ ನಿನ್ನ ಅವರ ಬೆವರಿನ ಘಮ.

ಹಿಂದೆ ನೋಡುತ್ತಲೇ ಮುಂದೋಡುವ
ನದಿ ಹರಿದು ಕೊರೆದ ಕಥೆ
ತುಡಿವ ನೀರಿನಗುಂಟ ತೇಲಿವೆ
ಕಷ್ಟದ ಕಟಕಟೆಯ ಸುಳಿಯಲಿ ಸ್ಫೋಟದ ಬೆಟ್ಟ ಗುಡ್ಡ
ನಗುವ ಹೂ ಬಳ್ಳಿ
ಯಾತನೆಯ ಕಣಿವೆ ದು:ಖ ದುಮ್ಮಾನ ಅನುಭಾವದ ಕವಿತೆಯ ಹಾಡಿದೆ.

ಇಲ್ಲಿ ಈ ಪುಸ್ತಕದಲ್ಲಿ.
ಹಗಲು ರಾತ್ರಿಗಳ ಸೀಳಿ
ದಿನ ಕೊಂದ ಸಂಘರ್ಷ
ತೀಡಿ ಹಚ್ಚಿದ ಬೆಳಕಿದೆ.
ಎಲ್ಲ ಪಯಣದ ಹಾದಿ ಬಳಲಿ ಬಸಿದ ಎಣ್ಣೆ
ಹಣತೆಯೊಡಲ ಸೇರಿದೆ.
ಬೆಳಕದಾರಿಯಲಿ ಬಗೆಬಗೆಯ ಚಿತ್ರವಿದೆ
ಮೌನ ಕಳಚಿದ ಮಾತುಗಳಿವೆ.

ಅಲ್ಲಿ ನಿಂತಿದ್ದಾನೆ ಮನುಷ್ಯ
ಮುಗಿಲಿಗೆ ಮುಗಿಲಾಗಿ ಬಯಲಿಗೆ ಬಯಲಾಗಿ
ನೆಲ ಹಡೆದ ಮನುಷ್ಯ
ಅವನು ನಾನೆ ನೀನು ಅವರು
ನಾವಾದ ಮನುಷ್ಯ.
ದೇವರಲ್ಲಿ ಅವ
ಗಧೆ ಚಕ್ರ ತ್ರಿಶೂಲ ಬಿಲ್ಲು ಬಾಣ
ಯಾವುದೂ ಇಲ್ಲದ ನಿರಾಯುಧ
ಹಾಗೆಂದು ಯಾರ ದಾಳಿಗೂ ಬಗ್ಗುವವನಲ್ಲ
ಪೀತಾಂಬರ ಕಿರೀಟ ಕವಚ ಕುಂಡಲ
ಛದ್ಮವೇಷಧಾರಿಯೂ ಅಲ್ಲ
ಎಲ್ಲವನೂ ಕಳಚಿ ಬೆತ್ತಲಾದವ
ನಾವೆಂಬ ಜೀವಕೆ ಕೈಚಾಚಿ ಕರೆದವ.
ಅಮಾನುಷಗಳ ಸುಟ್ಟ ಅಭಿಮಾನದ ಮನುಷ್ಯ

ಪುಟ ತೆರೆದಂತೆ ಮುಳ್ಳುಗಳೂ
ಇವೆ
ಮಚ್ಚರವ ಕೊಸರಿ ಎಚ್ಚರವ ಸವರಿ
ಮನಸು ಮಾಗಿಸಿ
ಹೂ ನಗೆಯ ಮೃದುಹದ ಸೃಷ್ಟಿಸಲು.
ಇಲ್ಲಿ ಈ ಪುಸ್ತಕದಲ್ಲಿ
ಅವನ ಹಾಡಿದೆ
ನಮ್ಮೆಲ್ಲರ ನಿರಂತರ ಪಾಡಿಗೆ
ಎಲ್ಲರೂ ಹಾಡುತ್ತಾರೆ
ನನ್ನ ನಿನ್ನ ಅವರ ಹಾಡೆ
ಮನುಕುಲದ ಉಸಿರು.

 

‍ಲೇಖಕರು avadhi

3 December, 2019

2 Comments

  1. T S SHRAVANA KUMARI

    ಒಳ್ಳೆಯ ಕವಿತೆ

  2. Dakshayani

    ಚೆನ್ನಾಗಿದೆ ಸರ್ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading