ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘….ಇಲ್ಲಿ, ಅವಳು ಅಂದರೆ, ಅರುಣಾ ಶ್ಯಾನಭಾಗ್..’

ಒಂದು ಚೈನಿನ ಮೊರೆ

ಸುಮಂಗಲಾ

ನಾನು ನಿಂತಲ್ಲಿಂದ ಕೆಲವೊಮ್ಮೆ ಅವರೆಲ್ಲ ಮಾತನಾಡುವುದು ಕೇಳುತ್ತದೆ. ಹರೆಯದ ಕುಲುಕುಲು, ನಡುವಯಸ್ಸಿನ ಭಾರ, ಕೆಲಸ ಮುಗಿಸಿ ಹೋಗುವಾಗಿನ ಆ ಗಡಿಬಿಡಿ, ದಣಿವು, ಬೆಳಗ್ಗೆ ಬಂದಾಗ ರೋಗಿಗಳಲ್ಲಿಗೆ ಓಡುವ ಧಾವಂತ ಎಲ್ಲವನ್ನೂ ನಾನು ಆಲಿಸಬಲ್ಲೆ.

ಎಷ್ಟೆಲ್ಲ ಧ್ವನಿಗಳ ಮಧ್ಯೆ ಒಂದು ಧ್ವನಿಯನ್ನು ನಾನು ಗುರುತಿಸಬಲ್ಲೆ. ಎಂತಹ ಅದಮ್ಯ ಚೈತನ್ಯ ಆ ಧ್ವನಿಯಲ್ಲಿ… ಹಕ್ಕಿಯೊಂದು ಉಲಿದಂತೆ, ನದಿಯ ಜುಳುಜುಳು ಸದ್ದಿನಂತೆ, ಮತ್ತೆ ಕೆಲವೊಮ್ಮೆ ಕರ್ತವ್ಯನಿಷ್ಠೆಯ ದೃಢತೆ.

`ಎಷ್ಟ್ ಸಲ ಹೇಳೋದು ನಿಂಗೆ, ಅವಕ್ಕೆ ಸರಿಯಾದ ಸಮಯಕ್ಕೆ ಬ್ರೆಡ್ ಹಾಕು ಅಂತ… ನೀನು ದುರ್ಬಳಕೆ ಮಾಡೋದು ನಂಗೆ ಗೊತ್ತಾಗಲ್ಲ ಅಂದ್ಕೊಂಡ್ಯಾ?’ ಯಾರಿಗೋ ಗಟ್ಟಿಯಾಗಿ ಗದರುವ ಆ ಧ್ವನಿ.

`ನೋಡು, ಅಂವ ಹಿಂಗೇ ಕೆಲಸ ಸರಿಯಾಗಿ ಮಾಡ್ಲಿಲ್ಲ ಅಂದರೆ ನಾನು ಸುಮ್ನೆ ಬಿಡೋದಿಲ್ಲ, ನಾನು ಇಂಥ ವಿಷಯದಲ್ಲಿ ತುಂಬಾ ಸ್ಟ್ರಿಕ್ಟ್. ಇದ್ನೆಲ್ಲ ಯಾರಿಗೆ ಹೇಳಬೇಕೋ ಅವರಿಗೆ ರಿಪೋರ್ಟ್ ಮಾಡ್ತೀನಿ ಅಷ್ಟೆ’ ಗೆಳತಿಯಲ್ಲಿ ಹೇಳುವ ಶಿಸ್ತಿನ ಸಿಪಾಯಿಯ ಆ ಧ್ವನಿ.

ಮತ್ತೆ ಕೆಲವೊಮ್ಮೆ ಭಾವೀ ಗಂಡನ ಕುರಿತು ಹೇಳುವಾಗ… ಒಹ್ ಅದೆಂಥ ಸಂಭ್ರಮ, ಅದೆಂಥ ನವಿರು ರೋಮಾಂಚನ… ಇಂಥದೆಷ್ಟೋ ಮಾತನ್ನು ನಾನು ಆಲಿಸಿದ್ದೆ.

ಅದೊಂದು ಸಂಜೆ…

ಅರೆ… ನನ್ನ ಕೈಯಲ್ಲಿ ಹಿಡಿದು ಇಂವ ಹೊರಟಿದ್ದು ಎಲ್ಲಿಗೆ…

ಓ… ಲ್ಯಾಬ್ ಪಕ್ಕದ ಈ ಕೋಣೆಗೆ ಬರುತ್ತಿದ್ದಾನೆ… ಅರೆ… ಇಲ್ಲಿಂದಲೇ ಅಲ್ಲವೇ ನನಗೆ ಯಾರ್ಯಾರದೋ ಧ್ವನಿ ಕೇಳುತ್ತಿದ್ದುದು…

ಆದ್ರೆ ಇವನ ಕೈ ಯಾಕಿಷ್ಟು ಒರಟಾಗಿದೆ, ಮುಖದಲ್ಲಿ ಯಾಕಿಂಥ ಕ್ರೂರತೆ.. ಅರೆ ಇವನೆಂಥ ಮಾಡ್ತಿದ್ದಾನೆ, ಕೈಯಲ್ಲಿ ನನ್ನನ್ನು ಹಿಡಿದು ಅವನು ಬೀಸಿ ಹೊಡೆದಿದ್ದು ಯಾರಿಗೆ? ಅರೆ… ಯಾರದು ಚೀರಿದ್ದು, ಓ ದೇವರೇ… ಇದು ನಾನು ಪ್ರತಿದಿನ ಕೇಳುತ್ತಿದ್ದ ಆ ಮಧುರ ಧ್ವನಿಯಲ್ಲವೇ? ಮತ್ತೆ ಈಗೆಂಥ ಮಾಡ್ತಿದ್ದಾನೆ… ಅಯ್ಯೋ… ನನ್ನನ್ನು ಅವಳ ಕುತ್ತಿಗೆಗೆ ಬಿಗೀತಾ ಇದಾನೆೆ… ದೇವರೇ… ಅವಳಿಗಲ್ಲ, ನನಗೇ ಉಸಿರು ಕಟ್ಟುತ್ತಿದೆ. ಅಯ್ಯೋ… ಯಾರಲ್ಲಿ… ಬನ್ನಿ, ಬೇಗ ಬನ್ನಿ… ಅವಳು ಮಾತ್ರವಲ್ಲ… ನಾನು ಕೂಡ ಉಸಿರುಗಟ್ಟಿ ಚೀರುತ್ತಿರುವೆ…

ಅರೆ.. ಅವನು ಈಗೆಂಥ ಮಾಡುತ್ತಿದ್ದಾನೆ… ಅವಳ ಮೇಲೆರಗಿ… ಒಹ್.. ದೇವ್ರೇ, ನನ್ನನ್ನ ಈ ಮೊದಲು ಯಾರ ಕೊರಳಿಗೆ ಕಟ್ಟಿದ್ರೋ ಅದು ಕೂಡ ಇನ್ನೊಂದರ ಮೇಲೆ ಹೀಗೆಲ್ಲ ಮಾಡಿದನ್ನು ಒಂದೇ ಬಾರಿಯೂ ನಾ ನೋಡಲಿಲ್ಲ, ಅದೇನದು ಅಲ್ಲಿ ಅವಳ ತೊಡೆಯ ಬಳಿ ಅಷ್ಟು ಕೆಂಪು ರಕ್ತ… ದೇವರೇ… ನನ್ನ ಕಣ್ಣೆಂಬ ಈ ಕಣ್ಣಿಂದ ನಾ ನೋಡಲಾರೆ, ನನಗೆ ಅವಳ ಕೊರಳಿನ ತಣ್ಣನೆಯ ಸ್ಪರ್ಶ ಕೊರೆಯುತ್ತಿದೆ… ಅವಳ ಚೀರಾಟ ಇನ್ನು ನಾ ಕೇಳಲಾರೆ… ನನಗೆ ಮೂರ್ಛೆ ತಪ್ಪುತ್ತಿದೆ…

ಈಗ ಯಾರದೋ ಕೈ ಬೆರಳ ಸ್ಪರ್ಶ, ಯಾರದೋ ಜೋರುಮಾತು… ಯಾರೋ ನನ್ನನ್ನು ಅವಳ ಕುತ್ತಿಗೆಯಿಂದ ಬಿಡಿಸಿ ಪಕ್ಕಕ್ಕೆ ಬಿಸಾಡಿದರು…

”ಬೇಗ ಬೇಗ… ಫಸ್ಟ್ಏಯ್ಡ್… ಎಮರ್ಜನ್ಸಿ ವಾರ್ಡ್…?

ನಾಡಿ ನೋಡಿ… ಒಹ್ ಸದ್ಯ ಉಸಿರಿದೆ…” ಮತ್ತಾರದೋ ಗಡಿಬಿಡಿ.

ಬದಿಗೆ ಬಿದ್ದ ನಾನು ಉಸಿರೆಳೆದುಕೊಂಡೆ. ಅವಳ ಕೊರಳ ಮೇಲೆ ನನ್ನ ಸ್ಪರ್ಶದ ಗುರುತು. ಅರೆ, ನನ್ನ ಇಲ್ಲಿ ತಂದು ಈ ಮುದ್ದು ಕುತ್ತಿಗೆಗೆ ಬಿಗಿದ ಆ ಒರಟು, ಕ್ರೂರ ಕೈಗಳ ಎರಡು ಕಾಲಿನ ಪ್ರಾಣಿ ಹೋಯಿತೆಲ್ಲಿಗೆ?

ಮರುದಿನ, ಮರುವಾರ, ಮರುತಿಂಗಳು, ಮರುವರ್ಷ, ಮತ್ತೆ ಮರುವರ್ಷ, ಮತ್ತೆ ಮರುವರ್ಷ ಹೀಗೆಯೇ ನಾನು ಮತ್ತೆ ನನ್ನ ಜಾಗದಲ್ಲಿಯೇಇದ್ದೆ.

ಮತ್ತೆ ನನಗೆ ಬೇರೆ ಬೇರೆ ಧ್ವನಿಗಳು ಕೇಳುತ್ತಲೇ ಇದ್ದವು, ಅವಳ ಧ್ವನಿಯನ್ನು ಹೊರತು ಪಡಿಸಿ.

ಅಲ್ಲ, ಅಂವ ಬರೀ ಅವಳ ವಾಚು, ಪರ್ಸು ಕಳ್ಳತನ ಮಾಡೋ ಪ್ರಯತ್ನ, ಮತ್ತೆ ಕೊಲೆ ಮಾಡೋ ಪ್ರಯತ್ನ ಅಷ್ಟೆ ಮಾಡ್ದ ಅಂತ ಕೋರ್ಟ್ನಲ್ಲಿ  ತೀರ್ಮನವಾಯ್ತಂತೆ?

ಶ್ಯೀ, ಬರೀ ಏಳೇ ವರ್ಷ ಅವನಿಗೆ ಶಿಕ್ಷೆ ಕೊಟ್ಟರಲ್ಲ, ಆ ನ್ಯಾಯಾಧೀಶರ ಮಗಳಿಗೆ ಹಿಂಗಾಗಿದ್ರೆ ಆಗ ಗೊತ್ತಾಗಿರೋದು?

ಯಾಕೆ ಅಷ್ಟೇ ಶಿಕ್ಷೆ ಅಂದ್ರೆ ರೇಪ್ ವಿಚಾರ ಕಂಪ್ಲೇಂಟ್ನಲ್ಲಿ ಹಾಕಿರ್ಲೇ ಇಲ್ಲ?

ಹೌದು ಮತ್ತೆ ಹಂಗೆಲ್ಲ ರೇಪ್ ಆಯ್ತು ಅಂತ ಕಂಪ್ಲೇಂಟ್ನಲ್ಲಿ ಹಾಕಿದ್ರೆ ಅವಳ ಮಾನ ಹೋಗಲ್ವಾ, ನಮ್ಮ ಆಸ್ಪತ್ರೆ ಮಾನ ಹೋಗಲ್ವಾ, ಅಲ್ದೇ ಊರಲ್ಲಿ ಅವಳ ಮನೇವ್ರು ಶ್ಯೀ ಪಾಪದವರು, ಅವ್ರು ತಲೆ ಎತ್ತಿ ತಿರುಗಾಡೋದು ಬ್ಯಾಡ್ವಾ?

ಅದೂ ನಿಜಾ, ಅಷ್ಟೇ ಅಲ್ಲ, ಅವಳನ್ನ ಮದ್ವೆಯಾಗ್ಬೇಕು ಅಂತ ನಿಶ್ಚಿತಾರ್ಥ ಆಗಿದೆಯಲ್ಲ ಆ ಡಾಕ್ಟ್ರ ಮರ್ಯಾದೇನೂ ನೋಡ್ಬಕಲ್ವಾ, ಎಲ್ಲ ಸರಿಹೋದ್ರೆ ನಾಳೆ ಅವ್ರು ಅವಳನ್ನ ಮದ್ವೆಯಾಗ್ತಾರೆ ಅಲ್ವಾ?

ಅಬ್ಬ ನಿಜ್ವಾಗ್ಲೂ ಆ ಡಾಕ್ಟ್ರ ಕಾಳಜಿ ಮೆಚ್ಚಬೇಕಪ್ಪ. ಇಷ್ಟೆಲ್ಲ ಆದಮೇಲೂ ಅವ್ರು ಪ್ರತಿದಿನ ಸ್ವಲ್ಪ ಹೊತ್ತು ಅವಳ ಬೆಡ್ ಹತ್ರ ಕೂತ್ಕೊಂಡಿದ್ದು ಹೋಗ್ತಾರೆ ಗೊತ್ತಾ, ಒಂದಲ್ಲ ಎರಡಲ್ಲ ನಾಲ್ಕು ವರ್ಷ ಅವಳನ್ನ ಪ್ರತಿದಿನ ಹೀಗೆ ನೋಡಕ್ಕೆ ಬರ್ತಾರೆ?

ಅವಳನ್ನ ಈ ಆಸ್ಪತ್ರೆಯಿಂದ ಬೇರೆ ಕಡೆ ಶಿಫ್ಟ್ ಮಾಡೋದು ಅಂತಾದಾಗ ನಾವೆಲ್ಲ ನರ್ಸ್ಗಗಳು ಸೇರಿ ಸ್ಟ್ರೈಕ್ ಮಾಡಿರ್ಲಿಲ್ಲ ಎಂದ್ರೆ ಅಷ್ಟೆ… ಯಾವತ್ತೋ ಅವಳನ್ನು ಹೊರಗೆ ಹಾಕಿರ್ತಿದ್ರು?

ಅಲ್ವಾ ಮತ್ತೆ… ನಾಳೆ ಅವಳ ಸ್ಥಿತಿ ನಮಗೆ ಬಂದ್ರೆ… ಅಂತೂ ಈ ದೇಶದಲ್ಲಿ ನಾವು ನರ್ಸುಗಳು ನಮಗೂ ಒಂದು ಧ್ವನಿ ಇದೆ ಅಂತ ತೋರಿಸಿದ್ವಿ?

ಏನೇ ಹೇಳು, ಕೆಲಸ ಸರಿಯಾಗಿ ಮಾಡ್ತಿಲ್ಲ ಅಂತ ಅವನಿಗೆ ಬೈಯ್ದಿದ್ದಕ್ಕೇ ಅಂವ ಇಷ್ಟು ಕ್ರೂರವಾಗಿ ಅವಳ ಮೇಲೆ ಸೇಡು ತೀರಿಸಿಕೊಳ್ಳೋದಾ??

ಏ, ನಿಂಗೊತ್ತಾ… ಅವಳನ್ನ ನೋಡಕ್ಕೆ ಪ್ರತಿದಿನ ಅದೇ ಆ ಡಾಕ್ಟ್ರು ಬರ್ತಿದ್ರು ಅಂದ್ನಲ್ಲ, ಅವ್ರದ್ದು ಮದ್ವೆಯಾಯ್ತು?

ಅಲ್ವಾ ಮತ್ತೆ ಎಷ್ಟು ದಿನ ಅಂತ ಕಾಯ್ತಾರೆ… ನಾಕು ವರ್ಷದಿಂದ ಕಾದಿದಾರೆ, ಇವ್ಳಿಗೆ ಇನ್ನು ಎಷ್ಟೇ ಏನೇ ಟ್ರೀಟ್ಮೆಂಟ್ ಕೊಟ್ರೂ ಇಷ್ಟೇ ಅಂತೆ?

ಅವಳ ಬಗ್ಗೆ ಅದ್ಯಾರೋ ಒಬ್ರು ಒಂದು ಪುಸ್ತಕ ಬರದ್ರಂತೆ, ಅದ್ನ ಬರೀಬೇಕಿದ್ರೆ ಅವ್ರು ಅಲ್ಲಿ ಇಲ್ಲಿ ತಿರುಗಾಡಿ ವಿಷಯ ಸಂಗ್ರಹಣೆ ಮಾಡಿದ್ರಲ್ಲ ಅವಾಗ ಗೊತ್ತಾಯ್ತಂತೆ, ಅದೇ ಅವತ್ತು ಅವಳ ಮೇಲೆ ಹಂಗೆ ಅತ್ಯಾಚಾರ ಮಾಡಿದ್ನಲ್ಲ, ಅವನು ಏಳು ವರ್ಷದ ಜೈಲುಶಿಕ್ಷೆ ಮುಗಿಸಿ, ಹೆಸರುಗಿಸ್ರು ಬದ್ಲು ಮಾಡ್ಕೊಂಡು, ಬೇರೆಕಡೆ ಮತ್ತೆ ವಾರ್ಡ್ಬಾಯ್ ಆಗಿ ಕೆಲಸಕ್ಕೆ ಸೇರಿದಾನಂತೆ?

ಏ… ನಿಂಗೊತ್ತಾ… ಇವಳಿಗೆ ಮಿದುಳು ಹೇಗೂ ಸತ್ತೋಗಿದೆ, ಮಿದುಳಿಗೆ ಮತ್ತು ಕೆಳಗೆ ದೇಹಕ್ಕೆ ಎಂತ ಸಂಬಂಧನೇ ಇಲ್ಲದೇ ಇನ್ನು ಎಷ್ಟು ವರ್ಷ ಹಿಂಗೇ ಜೀವಚ್ಛವದ ಹಂಗೆ ಮಲಗಿರ್ತಾಳೆ, ದಯಮಾಡಿ ದಯಾಮರಣಕ್ಕೆ ಅವಕಾಶ ಕೊಡಿ ಅಂತ ಅದೇ ಆ ಪುಸ್ತಕ ಬರಿದಿದ್ದಳಲ್ಲ ಅವಳು ರಿಟ್ ಹಾಕಿದ್ಲು, ಆದ್ರೆ ಸುಪ್ರೀಂಕೋರ್ಟ್ ತಳ್ಳಿಹಾಕ್ತಂತೆ, ಆಸ್ಪತ್ರೆಯವರು ಅವಳನ್ನ ಅಷ್ಟು ಚೆನ್ನಾಗಿ ನೋಡಿಕೊಳ್ತಿದ್ದಾರೆ, ಹಂಗೆಲ್ಲ ದಯಾಮರಣ ಕೊಡುವುದು ಸರಿಯಲ್ಲ, ಅಂತ ತೀರ್ಪು ಕೊಟ್ತಲ್ಲ, ಅಬ್ಬ, ಏನೇ ಇರಲಿ, ಬದುಕುವ ಹಕ್ಕು, ಸಾವಿನ ಘನತೆ ಅದೆಲ್ಲ ನಂಗೆ ಅಷ್ಟು ಅರ್ಥಆಗಲ್ಲ ಮಾರಾಯ್ತಿ, ನಂಗೆ ಗೊತ್ತಿರೋದು, ಅವಳು ಇರೋವರೆಗೆ

ನಮ್ಮೆಲ್ಲರ ಆತ್ಮಸಾಕ್ಷಿಯ ಹಾಗೆ ನಮ್ಮ ಜೊತೆ ಇರ್ತಾಳೆ ಅಂತ. ಇವತ್ತು ಬೇಗ ಹೋಗ್ಬೇಕು ಮಾರಾಯ್ತಿ, ಇವತ್ತು ಅದ್ರಿದ್ದು ಸೆಲೆಬ್ರೇಶನ್ ಇದೆ?

ಓ… ಈಗ ಕೆಲವು ವರ್ಷಗಳಿಂದ ಇವರ ಮಾತುಕತೆಯಲ್ಲಿ ನಾನು ಅವಳ ಕುರಿತು ಕೇಳಿರಲಿಲ್ಲ. ಅಂದ್ರೆ ಅವಳಿನ್ನೂ ಬದುಕಿದ್ದಾಳೆ. ಅವಳ ಆ ಮಧುರ ಧ್ವನಿಯನ್ನು ಮತ್ತೆ ನೆನಪಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿರುವೆ… ಆದರೆ ಎಷ್ಟು ಪ್ರಯತ್ನಿಸಿದರೂ ನನಗೆ ಆ ದಿನ ಕೊನೆಯಲ್ಲಿ ಕೇಳಿದ ಅವಳ ಚೀರುವ ಧ್ವನಿಯೇ ಕಿವಿಯಲ್ಲಿದೆ, ಅವಳ ಮಧುರ ಧ್ವನಿ ಯಾವುದೋ ಜನ್ಮದ ಕನಸು ಎಂಬಂತೆ ಭಾಸವಾಗುತ್ತಿದೆ.

ಅವಳು ಚೀರಿದ ಆ ಧ್ವನಿ ನಾನು ಕೇಳಿದ್ದು ಮೂವತ್ತೆಂಟು ವರ್ಷಗಳ ಹಿಂದೆ, ನಂತರ ನಾನು ಮಾತ್ರವಲ್ಲ, ಬೇರಾರೂ ಅವಳ ಧ್ವನಿ ಕೇಳಲಿಲ್ಲ.

ಅವಳ ಕೊರಳಿನ ಆ ಸ್ನಿಗ್ಧ ಸ್ಪರ್ಶ ನನ್ನ ಅರಿವಿಗೆ ಬಂದಿದ್ದು ಮೂವತ್ತೆಂಟು ವರ್ಷಗಳ ಹಿಂದೆ. ಆ ಕ್ಷಣದೊಳು ಅವಳಿಗೆ ಯಾವುದು ಭೀಕರವೆನ್ನಿಸಿರಬಹುದು… ನನ್ನ ಉಕ್ಕಿನ ಕೊಂಡಿಗಳ ಉಸಿರುಗಟ್ಟಿಸುವ ಸ್ಪರ್ಶವೇ ಆಥವಾ ಎರಡು ಕಾಲಿನ ಭೀಕರ ಪ್ರಾಣಿಯೊಂದರ ಕ್ರೂರ ಸ್ಪರ್ಶವೇ? ಆ ದಿನದ ನಂತರ ಅವಳು ಯಾವ ಸ್ಪರ್ಶವನ್ನೂ ಅನುಭವಿಸಲಿಲ್ಲ.

ಆ ದಿನದ ನಂತರ ನಿಮ್ಮ ಅರ್ಥದಲ್ಲಿ ಅವಳು ಮಾತನಾಡಲಾರಳು, ನಾನು ಮಾತನಾಡಲಾರೆ. ಅಂದು ಅವಳ ಮೈಮನಸ್ಸಿನ ಮೇಲೆ ಆದ ಆಕ್ರಮಣ, ಅತ್ಯಾಚಾರ ಹೇಗೆ ನಡೆಯಿತೆಂದು ಅವಳು ಮತ್ತು ನಾನು ನಮ್ಮದೇ ಮಾತಿನಲ್ಲಿ ಹೇಳಿದ್ದನ್ನು ನೀವು ಆಲಿಸಲೇ ಇಲ್ಲವೇ? ನಾನು ಅಷ್ಟೆಲ್ಲ ನಿಮಗೆ ಮೊರೆಯಿಟ್ಟೆನಲ್ಲ… ಅವಳ ಕುತ್ತಿಗೆಗೆ ನನ್ನನ್ನು ಬಿಗಿದನಲ್ಲ, ಆ ಎರಡು ಕಾಲಿನ ಪ್ರಾಣಿಯ ಕುತ್ತಿಗೆಗೆ ನನ್ನನ್ನು ಅಷ್ಟೇ ಬಿಗಿಯಾಗಿ ಕಟ್ಟಿಬಿಡಿ ಎಂದು, ಅದನ್ನೂ ನೀವೇಕೆ ಆಲಿಸಲಿಲ್ಲ? ಮೂವತ್ತೆಂಟು ವರ್ಷಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿ ಇಷ್ಟೆಲ್ಲ ವರದಿ ಮಾಡಿದ, ಇಷ್ಟೆಲ್ಲ ಸಾಕ್ಷ್ಯಗಳನ್ನು ಕೇಳಿದ ನೀವು ಕೊನೆಗೂ ಆಲಿಸಿದ್ದಾದರೂ ಏನನ್ನು?

ಅಂದಹಾಗೆ ನಾನು ಎಂದರೆ ನಾಯಿಗೆ ಹಾಕುವ ಕಬ್ಬಿಣದ ಚೈನ್ ಮತ್ತು ಅವಳು ಅಂದರೆ ಅರುಣಾ ಶಾನುಭಾಗ್ ಮತ್ತು ಇದು ನಡೆದಿದ್ದು ನವೆಂಬರ್ 27, 1973. ನನ್ನ ಕೊನೆಯ ಪ್ರಾರ್ಥನೆ ನಿಮ್ಮಲ್ಲಿ… ಅದಿರಾಗಿ ಎಲ್ಲೋ ಭೂತಾಯಿಯ ಗರ್ಭದಲ್ಲಿದ್ದ ನನ್ನನ್ನು ಹೊರತೆಗೆದು, ನೀವೇ ತಯಾರಿಸಿದಿರಿ, ದಯವಿಟ್ಟು ಯಾವ ಉದ್ದೇಶಕ್ಕೆಂದು ನನ್ನನ್ನು ತಯಾರಿಸಿದಿರೋ ಆ ಒಂದು ಉದ್ದೇಶಕ್ಕೆ ಮಾತ್ರ ನನ್ನ ಬಳಸಿ.

‍ಲೇಖಕರು G

26 December, 2012

15 Comments

  1. A Ballal

    ಅಬ್ಬಾ!!

  2. Roopa

    abbaaaaaaaaaaa devare……….

  3. bharathi

    edeyalli thannane mouna ….:(

  4. shanthi k.a.

    ……

  5. chalam

    ushhhhhhhhhhhhhhhhhhhhhhh

  6. ಉಷಾಕಟ್ಟೆಮನೆ

    ಒಂದು ನಿಟ್ಟುಸಿರು….

  7. roopa

    🙁

  8. Sowmya

    …………:- (

  9. samyuktha

    ……!

  10. Prasad V Murthy

    ಆ ಸಂದರ್ಭಗಳನ್ನು ಕಣ್ಣಿಗೆ ಕಟ್ಟಿದಂತೆ ಬಿಡಿಸಿಟ್ಟ ಈ ಬರಹ ಓದಿದ ನಾನು ಪದಗಳಿಲ್ಲದೆ ಸಂಪೂರ್ಣ ಖಾಲೀ! “………………………..”

  11. Santhosh

    Very good narration!!

  12. ಜಿ.ಎನ್.ನಾಗರಾಜ್

    ಅವಳ ಕುತ್ತಿಗೆಗೆ ನನ್ನನ್ನು ಬಿಗಿದನಲ್ಲ, ಆ ಎರಡು ಕಾಲಿನ ಪ್ರಾಣಿಯ ಕುತ್ತಿಗೆಗೆ ನನ್ನನ್ನು ಅಷ್ಟೇ ಬಿಗಿಯಾಗಿ ಕಟ್ಟಿಬಿಡಿ ಎಂದು, ಅದನ್ನೂ ನೀವೇಕೆ ಆಲಿಸಲಿಲ್ಲ?- ಒಂದು ಸೃಜನಶೀಲ ಮನಸ್ಸು ವಾಸ್ತವತೆಗೆ ಮಿಡಿವ ಪರಿಗೊಂದು ಉತ್ತಮ ಮಾದರಿ.

  13. usha rai

    haLeya kathe aaga nOvu koTTiththu. Iga hosadaagi baredaaga nOvu innoo hechchaayithu. Igalaadaroo naavellaa echcheththu prathibhatisuttiruvevalla? idu nillada hOraaTavaagirali.

  14. rekhaneelavara

    ಎಂಥಹ ವಿಚಿತ್ರ ನಮ್ಮ ಜೊತೆಗಿದ್ದು ನಮ್ಮೊಂದಿಗೆ ಒಡನಾಡುವವರು ಇನ್ನೊಂದು ಘಳಿಗೆಯಲ್ಲಿ ಎಷ್ಟು ಕ್ರುರರಾಗುತ್ತಾರೆ ಎಂದು ಉಹಿಸಲು ಕೂಡ ಸಾಧ್ಯಾವಾಗುವುದಿಲ್ಲ . ಮನಮಿಡಿಯುವ ಬರಹ.

  15. Mohan V Kollegal

    ಈ ಸಮಾಜದ ಭೀಕರತೆಗೆನ್ನ ಧಿಕ್ಕಾರವಿರಲಿ… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading