ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ 'ಕವಚ' ಸಿನೆಮಾ ರಿವ್ಯೂ

ಧನಂಜಯ ಎನ್ ಆಚಾರ್ಯ
ಕವಚ ಚಿತ್ರದ ನೆಗಿಟೀವ್ ಪಾತ್ರಕ್ಕೆ ಉಳಿದದ್ದು ಎರಡೇ ದಾರಿ ಅನ್ನಿಸುತ್ತದೆ.
ಒಂದು ಆ ದೌರ್ಜನ್ಯಗಳನ್ನೆಲ್ಲಾ ಸಹಿಸಿಕೊಂಡಿರುವುದು, ಇಲ್ಲವೇ ಕೆಡುಕನಾಗಿ ಎಲ್ಲರನ್ನೂ ಕೊಂದು ಈ ಜಗತ್ತನ್ನು ಧಿಕ್ಕರಿಸಿ ಹೊರಟುಹೋಗುವುದು.
ಅದಕ್ಕಾಗಿಯೇ ಆ ಕ್ರೌರ್ಯ ಹುಟ್ಟಿದ್ದು, ಕ್ಷಣದ ತಾಳ್ಮೆಗೂ ಮೈಲು ದೂರ ಎನ್ನುವಂತೆ ಆತ ನೆಡೆದುಕೊಂಡು ತನ್ನ ಜೀವನ ಕಳೆದುಕೊಂಡಿದ್ದು.
ಹೀಗೆ ಬನ್ನಿ……
” ಡಾಗ್ ಮ್ಯಾನ್ ” ಅಂತ ಒಂದು ಇಟಾಲಿಯನ್ ಸಿನೆಮಾ 2018 ರಲ್ಲಿ ಬಿಡುಗಡೆಯಾಗಿತ್ತು.
ಆ ಸಿನೆಮಾದ ಕಥೆ ಮೊದಲಾರ್ಧದಲ್ಲಿ ಒಂದು ರೀತಿಯಾಗಿ ಕೊಂಡೊಯ್ದರೆ, ದ್ವಿತೀಯಾರ್ಧದಲ್ಲಿ ಅದರ ಚಿತ್ರಣವನ್ನೇ ತಲಕೆಳಗು ಮಾಡಿ ನಿರಾಸೆ ಮೂಡಿಸಿತ್ತು.
ನಾಯಿಗಳನ್ನು ಆರೈಕೆ ಮಾಡುತ್ತ ತನ್ನ ಬದುಕನ್ನು ಕಟ್ಟಿಕೊಂಡ ಮನುಷ್ಯನಿಗೆ ತನಗಿಂತಲೂ ಬಲಶಾಲಿಯಾದ ಒಬ್ಬ ಸ್ನೇಹಿತನಿರುತ್ತಾನೆ.
ಕಳ್ಳತನ ಮಾಡುವುದರ ಜೊತೆಗೆ ಡ್ರಗ್ ಅಡಿಕ್ಟ್ ಆದ ಆತ
ಡಾಗ್ ಮ್ಯಾನ್ ನಿಗೆ ಒಬ್ಬ ಒಳ್ಳೆಯ ಸ್ನೇಹಿತ, ಹೀಗೆ ಯಾವುದೋ ಕಳ್ಳತನದ ವಿಚಾರವಾಗಿ ಮುಖ್ಯ ಪಾತ್ರಧಾರಿ ಡಾಗ್ಮ್ಯಾನ್ ಅನ್ನು ಸಿಕ್ಕಿಸುವ ಸ್ನೇಹಿತ,  ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿದ್ದೂ ಅಲ್ಲದೇ ಕಳ್ಳತನದಲ್ಲಿ ಬಂದ ದುಡ್ಡಿನ ಪಾಲನ್ನೂ ಕೊಡದೆ ಸ್ನೇಹಕ್ಕೆ ಮೋಸ ಮಾಡಿದ ಎಂದು ಆತನನ್ನು ಉಪಾಯವಾಗಿ ಕೊಂದು ಸೇಡು ತೀರಿಸಿಕೊಳ್ಳುವುದು ಅದರ ಒನ್ ಲೈನ್ ಸ್ಟೋರಿ, ಚಿತ್ರಕಥೆಯಲ್ಲಿ ಹಲವು ಆಯಾಮಗಳನ್ನು ಬೆರೆಸಿದ್ದರೂ ಪೂರ್ತಿ ಸಿನೆಮಾ ನೋಡುಗನಿಗೆ ರಿವೇಂಜ್ ಅನ್ನುವ ಶಬ್ದವನ್ನು ಮಾತ್ರ ಹೊರಡಿಸುತ್ತದಾದ್ದರಿಂದ ಆ ಸಿನೆಮಾ ಅಷ್ಟು ಪರಿಣಾಮ ಬೀರಲು ಸೋತಿತ್ತು.
ಇಂಥಹಾ ಇಂಟೆಲಕ್ಚುವಲ್ ಚಿತ್ರಕಥೆಗಳನ್ನು ಹೊಂದಿರುವ ಸಿನೆಮಾಗಳೇ ಹೆಚ್ಚಿನ ಬಾರಿ ಸಮಾಜದ ಮೇಲೆ  ಪ್ರಭಾವ ಬೀರುತ್ತವೆ ಮತ್ತು ಬೀರಬೇಕು.

ಡಾಗ್ ಮ್ಯಾನ್ ಸಿನೆಮಾಗೂ ಕನ್ನಡದ ಕವಚ ಸಿನೆಮಾಗೂ ಎಲ್ಲಿಯ ಸಂಬಂಧ ಎಂದು ನೋಡಿದರೆ…
ಅಲ್ಲಿ ಸಿನೆಮ ಕೊನೆಯಾಗುವುದು ರಿವೇಂಜ್ ಮೂಲಕವಾದರೆ , ಇಲ್ಲಿ ಸಿನೆಮ ಶುರುವಾಗುವುದೇ ರಿವೇಂಜಿನ ಮೂಲಕ.
ಎರಡೂ ಚಿತ್ರ ಬೇರೆ ಬೇರೆ ದಿಕ್ಕಿನಲ್ಲಿ ಸಾಗುತ್ತವೆಯಾದರೂ, ಪೂರ್ವ ಮತ್ತು ಪಶ್ಚಿಮದ ದಾರಿಗಳು ಅತೀ ಬೇಗ ಕೂಡುತ್ತವೆ ಅನ್ನುವ ಹಾಗೆ, ಕಥೆ ಸಾಗುವಿಕೆಯಲ್ಲಿ ಬರುವ ಸನ್ನಿವೇಶಗಳು ಅಲ್ಲಿ ಏಳುವ ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾ, ಇಲ್ಲಿ ಮೂಡುವ ಗೊಂದಲವನ್ನು ಅಲ್ಲಿ ತಿಳಿಗೊಳಿಸುತ್ತಾ ಹೋಗುತ್ತವೆ.
ಹಾಗಂತ ಕವಚ ಸಿನೆಮಾ ನೋಡಬೇಕೆಂದರೆ ಡಾಗ್ ಮ್ಯಾನ್ ಸಿನೆಮಾ ನೋಡಬೇಕಾ ಅನ್ನೋ ಗೊಂದಲ ಬೇಡ, ಈ ಎರಡೂ ಸಿನೆಮ ನೋಡಿದ ನನಗೆ ಒಂದು ಭಿನ್ನ ಅನುಭವವಾಗಿದೆ ಅಷ್ಟೇ.
ಕಥೆಯಲ್ಲಿ ನಾಯಕ ಕುರುಡನೇ ಯಾಕಾಗಬೇಕು, ತಿರುವು ಕೊಡುವ ವಸ್ತು ಆ ಚಿಕ್ಕ ಹುಡುಗಿಯ ಮೂಲಕವೇ ಯಾಕೆ ಬರಬೇಕು ? ಅನ್ನೋದನ್ನ ಸಲ್ಪ ಯೋಚಿಸಿಬಿಟ್ಟರೆ ಸಿನೆಮಾ ಮತ್ತೊಂದು ಲೆವೆಲ್ ನಲ್ಲಿ ರುಚಿಸುತ್ತದೆ, ಸಂದೇಹವೇ ಬೇಡ.
ಹೀಗೆ ಬರುವ ಪ್ರತಿಯೊಂದು ಪಾತ್ರಗಳೂ ಸಹ ಒಂದಕ್ಕೊಂದು ಸಂಬಂಧವನ್ನು ಕಟ್ಟಿಕೊಡುತ್ತಾ ಸಾಗಿದರೆ ಹಿನ್ನೆಲೆಯಲ್ಲಿ ಧಾಳಿ ಇಡುವ ಸಂಗೀತದ ಕೆಲಸವೇ ಬೇರೆ ದಿಕ್ಕಿನಲ್ಲಿ ಎಲ್ಲವನ್ನೂ ಇಡಿಯಾಗಿ ಬೇರ್ಪಡಿಸಿ ಪುಟ ಪುಟಗಳ ಹಾಗೆ ಓದಿಸಿಕೊಂಡು ಹೋಗುತ್ತದೆ.
ಬಹಳಷ್ಟು ಸಿನೆಮಾಗಳು ಇಂತಹ ಪಾತ್ರಗಳನ್ನು ಸೃಷ್ಟಿಸುತ್ತವೆಯಾದರೂ, ಲಿಂಕ್ ಕೊಟ್ಟುಕೊಂಡು ಹೋಗುವಾಗ ಎಲ್ಲೋ ಮರೆತಂತೆ ಬಿಟ್ಟುಬಿಡುವುದು ಕಮರ್ಷಿಯಲ್ ಸಿನೆಮಾಗಳ ಮಾಮೂಲಿ ತಪ್ಪುಗಳು.
ಆ ತಪ್ಪನ್ನು ಈ ಸಿನೆಮಾ ಖಂಡಿತಾ ಮಾಡಿಲ್ಲ.
ತೀರ್ಪು ಕೊಡುವ ಜಡ್ಜ್, ತನ್ನ ಕೆಲಸವನ್ನು ತಾನು ಮಾಡಿದ್ದರೂ ಸಹ, ಕೊಟ್ಟ ತೀರ್ಪಿನ ಮೂಲಕ ಒಬ್ಬನ ಕುಟುಂಬ ಸಂಪೂರ್ಣ ಹಾಳಾಗಿದ್ದನ್ನು ಕಣ್ಣಾರೆ ಕಾಣುತ್ತಾನೆ, ಮತ್ತು ಕಾನೂನಿನ ಕುರುಡುತನದಿಂದ ಆದ ಈ ತಪ್ಪಿಗೆ, ಹೇಗಾದರೂ ಮಾಡಿ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸುತ್ತಾನೆ.
ಈ ನಿಶ್ಚಯವೇ ನೋಡುಗನಿಗೆ ಚಿಲ್ಡ್ ಬಿಯರ್ರಿನ ಹಾಗೆ ಕಿಕ್ ಕೊಡುವುದು.
ಮತ್ತು ಆ ನಿರ್ಧಾರಕ್ಕೆ ಸ್ಪಂಧಿಸುವ ಹಾಗೆ ಜಡ್ಜ್ ಹತ್ತಿರ ಮಾಡಿಕೊಳ್ಳುವ ಪಾತ್ರ, ಆ ಪಾತ್ರಕ್ಕೆ  ಹೊಂದಿಕೊಂಡ ಉಪಕಥೆಗಳು ಎಲ್ಲವೂ ಮಿರ್ಚಿ ಮಂಡಕ್ಕಿಯ ಹಾಗೆ.
ಮಧ್ಯಂತರದ ಹೊತ್ತಿಗೆ, ಪೊಲೀಸಿನ ಸದ್ದಾಗುವ ಎಲ್ಲಾ ಸೀನ್ ಗಳೂ ಸಹಿತ ಚಿತ್ರದ ವೇಗಕ್ಕೆ ಸರಿಯಾದ ಹೊಡೆತ ಕೊಟ್ಟು, ಬೋರ್ ಹೊಡೆಸಿವೆ.
ಆಗಿನ ಸಂಭಾಷಣೆ ಮತ್ತು ಪೊಲೀಸ್ ಪಾತ್ರಗಳನ್ನು ದುಡಿಸಿಕೊಳ್ಳುವಲ್ಲಿ ಅರ್ಧಕ್ಕದ್ದ ಸೋತು ಮತ್ತೊಮ್ಮೆ ಸಿನೆಮಾಗೆ ಜೀವ ತುಂಬಲು ಪಾತ್ರಗಳ ನಟನೆಯ ಕಡೆಗೆ ಗಮನ ಕೊಡಬೇಕಾಗಿ ನಿರ್ದೇಶಕ ಶ್ರಮ ಪಟ್ಟಿದ್ದಾರೆ.
ಕಣ್ಣಿನಲ್ಲೇ ತನ್ನ ಅರ್ಧ ನಟನೆಯನ್ನು ಹೊರಹಾಕುವ ತಾಕತ್ತು ಹೊಂದಿದ ಭಾರತದ ಕೆಲವೇ ಕೆಲವು ನಟರಲ್ಲಿ ಒಬ್ಬರು ಶಿವರಾಜ್ಕುಮಾರ್ .
ಅಂತಹ ನಟ ಕುರುಡನಾಗಿ ಎದುರು ಬಂದಾಗ ಹೇಗಿರಬಹುದು ???
ಇದರಲ್ಲಿ ಮ್ಯಾಜಿಕ್ ಅಂತೂ ಇಲ್ಲಾ, ಸಿನೆಮಾದ ಬಹಳಷ್ಟು ಸಮಯವನ್ನ ಆತ ತನ್ನ ನಟನೆಯಲ್ಲೇ ಹೊತ್ತು ಸಾಗಿಸುವುದಿದೆಯಲ್ಲಾ ಅದನ್ನ ಇಡೀ ನೋಡುಗ ವಲಯ ಇಗ್ನೋರ್ ಮಾಡಲು ಸಾಧ್ಯವೇ ಇಲ್ಲ.
ಮದುವೆ ಸಂಭ್ರಮದ ಒಂದು ಹಾಡಿನಲ್ಲಿ, ಅಷ್ಟೂ ಡ್ಯಾನ್ಸರ್ ಗಳ ಮಧ್ಯೆ ನಿಂತು ಅಂಧನಾಗಿ ಕುಣಿಯುವಾಗಿನ ನೈಜತೆಗೆ ನೀವು ಆ ನಟನನ್ನ ನಿಜವಾದ ಕುರುಡನೇ ಎಂದು ಒಪ್ಪಿಕೊಂಡಿರುತ್ತೀರಿ.
ಅದೊಂದು ಸಿನೆಮಾದಲ್ಲಿ ಕಾಣಿಸುವ ಹಬ್ಬ.

ಅಲ್ಲಿ ಶುರುವಾಗುವ ಗುಂಗು, ಕ್ಲೈಮ್ಯಾಕ್ಸ್ ನಲ್ಲಿಗೆ ಬಂದು ನಿಲ್ಲುವಾಗ ಇಡೀ ಚಿತ್ರ ಏನು ಹೇಳುತ್ತಿರಬಹುದು ???
ಮೂರು ಪಾತ್ರಗಳು ಉಳಿಯುವ ಆ15 ರಿಂದ 20 ನಿಮಿಷಗಳು ಹೇಗೆ ಕಾಣಬಹುದು!!!
ಸಿನೆಮಾ, ಇದು ಕಂಪ್ಲೀಟ್ ನಿರ್ದೇಶನ ವಸ್ತು, ಆತ ತನ್ನ ಎಲ್ಲಾ ಭ್ರಮೆಗಳನ್ನೂ ನೀಟಾಗಿ ಕಟ್ಟಿಕೊಟ್ಟಿದ್ದಾನೆ. ವಯಕ್ತಿಕ ಅಭಿಪ್ರಾಯ ಅಂದರೆ ನಿಜಕ್ಕೂ ಆತ ಗೆದ್ದಿದ್ದಾನೆ.
ಇಷ್ಟು ಮಾತ್ರ ಹೇಳಿ ಮುಗಿಸುವ ಸಿನೆಮಾ ಖಂಡಿತಾ ಇದಲ್ಲಾ… ಇನ್ನೂ ಬಹಳವೇ ಹೇಳಕ್ಕಿದೆ, ಅದನ್ನು ಮತ್ತಷ್ಟು ನೋಡುಗರು ಹಂಚಿಕೊಂಡರೆ ಇನ್ನೂ ಚೆಂದ.
ಈ ತಿಂಗಳ ಕನ್ನಡ ಸಿನೆಮಾ ಕವಚ, ಎಲ್ಲರೂ ನೋಡಿ….
ಕಮರ್ಷಿಯಲ್ ಎನ್ನುವ ಪದಕ್ಕೆ ರೆಕ್ಕೆಯಾ ಕುದುರೆಯೇರಿ, ಬೆಳ್ಳಿಯಾ ಮೋಡವ ದಾಟಿ ಬರುವ ಕನ್ನಡ ಸಿನೆಮಾಗಳು ಕೊಡುವ ಅರ್ಥವನ್ನು ಸ್ವಾಗತಿಸಿ.

‍ಲೇಖಕರು avadhi

8 April, 2019

1 Comment

  1. Sathyakama Sharma

    ‘ಹಾಗಂತ ಕವಚ ಸಿನೆಮಾ ನೋಡಬೇಕೆಂದರೆ ಡಾಗ್ ಮ್ಯಾನ್ ಸಿನೆಮಾ ನೋಡಬೇಕಾ ಅನ್ನೋ ಗೊಂದಲ ಬೇಡ, ಈ ಎರಡೂ ಸಿನೆಮ ನೋಡಿದ ನನಗೆ ಒಂದು ಭಿನ್ನ ಅನುಭವವಾಗಿದೆ ಅಷ್ಟೇ’ ಸರಿ. ಆದರೆ ವಿಮರ್ಶೆ ಮಾಡುವಾಗ ಇದು ಮಲಯಾಳಂ ನ ‘ಒಪ್ಪಂ’ ಅನ್ನುವ ಸಿನೆಮಾದ ರೀ ಮೇಕ್ ಎಂದು ಧಾರಾಳವಾಗಿ ಹೇಳಬಹುದಲ್ಲಾ? ಹಾಡನ್ನು ಕೂಡಾ ಹಾಗೆ ಭಟ್ಟಿ ಇಳಿಸುವಷ್ಟು ಕನ್ನಡ ಚಿತ್ರ ರಂಗ ಬಡವಾಗಿದೆಯೇ? ಮೂಲ ಮಲಯಾಳಂ ಚಿತ್ರಕ್ಕೂ ರೀ ಮೇಕ್ ಗೂ ಹೋಲಿಸಿದ್ದಾರೆ ಚೆನ್ನಾಗಿತ್ತಲ್ಲ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading