(ಅಖಿಲೇಶ್ ಈಶ ಅವರು ಸಂಗ್ರಹಿಸಿದ ಹುಸೇನ್ ಚಿತ್ರಗಳನ್ನು ನೋಡಿ ಮನದಾಳದಿ ಮೂಡಿದ ಭಾವನೆಗಳು ಇಲ್ಲಿವೆ )
ನಾ ದಿವಾಕರ
ಮೋಡಿಯೋ ಮಾಯವೋ
ಕಲಾಸಿರಿಯ ಚೆಲುವೋ !
ಅದೋ ನೋಡಿ ಸುಕ್ಕುಗಟ್ಟಿದ
ಕೈಯ್ಯೊಂದರಲ್ಲಿನ ಕುಂಚ ಏನನ್ನೋ ಹೇಳ
ಬಯಸುತ್ತಿದೆ : ಹುಡುಕಾಡುತಿದೆ
ಇಂಗಿತಗಳನು ಮನುಕುಲದ
ಅಂತರಾಳದೊಳಗಿನಿಂದ ;
ಎಷ್ಟೊಂದು ಬಣ್ಣಗಳು ಸುತ್ತ
ಕಪ್ಪು ಬಿಳುಪಿನ ರೇಖೆಗಳ ಮರೆಸಲು !
ಕುಂಚದೊಳಗಿನ ಭಾವನೆಗಳು
ಬಣ್ಣದ ಚಿತ್ತಾರಗಳಲಿ ಚಿಮ್ಮಿ
ಮಾತನಾಡತೊಡಗುವಾಗ ಕಲಾ
ತಪಸ್ವಿಯ ಮನ ಹೊಯ್ದಾಡುತ್ತದೆ ;
ಅಸ್ಮಿತೆಗಳ ನಡುವೆ ಯಾಂತ್ರಿಕತೆಯ
ಕ್ಲೀಷೆಗಳ ನಡುವೆ ; ಪ್ರವಾದಿಯೋ
ಸಂತನೋ ಅಗೋಚರ ಶಕ್ತಿಯೋ
ಕುಂಚಗಳಿಗೆ ಕಚಗುಳಿಯಿಡುವ
ಸ್ನಿಗ್ಧ ಕೈಗಳಿಗೇನುಂಟು ನಂಟು ?
ಕುಳಿತಲ್ಲೇ ಜಗವ ಕಾಣುವ
ವಾಂಛೆ ಮನದಾಳದಿ ಮೂಡಿದಾಗ
ಚಿತ್ರಗಳು ಮಾತನಾಡುತ್ತವೆ ಸುತ್ತಲಿನ
ಗೋಡೆಗಳೊಡನೆ ; ಬೇಕಲ್ಲವೇ ಸಂಗಾತಿ
ನಿರ್ಭಾವ ಜೀವಿಗಳಿಗೂ ?
ಬಣ್ಣಗಳ ಮೆರವಣಿಗೆಯಲಿ
ಎಲ್ಲಿದೆ ನಿರ್ಭಾವುಕತೆ ಎಲ್ಲವೂ
ಭಾವುಕವೇ ಭಾವನೆಗಳನರಿತವರಿಗೆ !
ಭ್ರಮೆಯೋ ಭಾವನೆಯ ಉಪಮೆಯೋ
ಪ್ರತಿಮೆಗಳು ಕಣ್ತೆರೆದಾಗ
ಕಾಣುವುದು ವಾಸ್ತವತೆಯ ಸತ್ಯ ;
ಮೆರೆಯುತಿಹನೇ ಈ ಸಂತ
ತನ್ನೊಡಲಿನೊಳಗಣ ಮಾನವತೆಯನು
ಕಲ್ಪನಾಲೋಕದ ಕಿನ್ನರಿಗಳು
ಬಣ್ಣಗಳಲಿ ಮೇಳೈಸುತಿರುವಾಗ !
ಎಲ್ಲೋ ಸಾಗಿತು ದಿವ್ಯ ಚೇತನದ
ಯಾತ್ರೆ ; ಖಯಾಲಿಗಳ ಲೋಕದಲಿ
ಮೆರೆದು ಹೋದವನ ಹೆಜ್ಜೆ ಗುರುತುಗಳು
ಖಾಲಿ ಖಾಲಿ : ಈ ವಿಶ್ವ ನಿಮ್ಮದಲ್ಲ
ಬಿಡಿ ಸಾಹೇಬರೇ
ನಡೆದಿರುವಿರಿ ಕಲಾಸನ್ನಿಧಿಯೆಡೆಗೆ
ಇರುವುದೆಲ್ಲವ ಮರೆತು ;
ಮರೆವುದೆಲ್ಲವ ತೊರೆದು !
]]>





0 Comments