ಇರುಳ – ಬೆಳಕಿನ ಸೊಲ್ಲು-ಲಡಾಯಿ ಬಸು
೧
ಹಗಲೆಂದರೆ ಬೆಳಕು
ಇರುಳೆಂದರೆ ಕತ್ತಲು
ಹೆಚ್ಚೇನಿಲ್ಲ
ಕುರುಡರ ಪಾಠಕ್ಕೆ
ಒಂದೇ ಸಾಲು ….!
೨
ಲೋಕದ ಪಟ್ಯದಲಿ
ಇನ್ನೂ
ನೋವು , ಬಡತನ
ಜಾತಿ -ಮತದ ಪದಗಳು
ಹೇರಳವಾಗಿ ಕಾಣುತ್ತಿವೆ ;
ಈ ದಿನವಾದರೂ
ಬೆಳಗಾಯಿತೆಂದು
ಹೇಗೆ ಹೇಳಲಿ ….?
೩
ಹಗಲ ಕಣ್ಣಿಂದ
ಇರುಳ ನೋಡುವುದ
ನಿಲ್ಲಿಸಿದೆ ;
ಈಗ
ಇರುಳು
ಬರೀ ಕತ್ತಲೆಂದು
ಹೇಳುವುದು ನನ್ನಿಂದಾಗದು …!
೪
ನಿನಗೂ ಮಿತಿಯಿದೆ
ನನಗೂ ಮಿತಿಯಿದೆ
ಮಿತಿಯ ಬದುಕಿನ ಬಗ್ಗೆ
ಅಸಮಾಧಾನದ ದೀಪ
ಬೆಳಗಾಗುವ ತನಕ
ಉರಿಯಲಿ ಬಿಡು
ಈ ಕ್ಷಣ ನನಗೆ
ನೆನಪಿನಲ್ಲಿ ಉಳಿದಿರುವುದಿಷ್ಟೇ
ಮಿತಿಗಳಿಲ್ಲದ್ದು
ಮಾನವೀಯವಾಗಿಯೂ ಇರಲ್ಲ …!
೫
ಬೆಳಕ ಬಲ್ಲವ
ಇರುಳಾಯಿತು ಎನ್ನಲಾರ
ಇರುಳ ಬಲ್ಲವ
ಬೆಳಕಾಯಿತು ಎನ್ನಲಾರ
ಇರುಳು ಬೆಳಕಿನ ಬೀಜ
ಬೆಳಕು ಇರುಳಿನ ಬೀಜ
ಹೊರ ಪದರಷ್ಟೇ
ಕಪ್ಪು -ಬಿಳಿ ಬಣ್ಣ
ಎಂಬುದು
ನೀನು ಇಲ್ಲದಿದ್ದಾಗಷ್ಟೇ
ಅರಿವಿಗೆ ಬರುವುದು …!
೬
ಬೆಳಗಾಯಿತು
ನಿಜ ;
ಬರೀ ಕತ್ತಲೆಯಲ್ಲ
ಕನಸೂ
ಹಾಸುಗೆಯಿಂದ
ಎದ್ದು ನಡೆಯಿತು ..೭
ಬೆಳಗು
ಕತ್ತಲು ಇಲ್ಲದಿರುವುದಕ್ಕೊಂದು
ಹೆಸರು ..;
ನೆನಪಿಡು
ಬೆಳಕಿನಲ್ಲಿ
ಕನ್ನಡಿ ಇದ್ದರಷ್ಟೇ
ನಿನಗೆ ನಿನ್ನ
ಮುಖ ಕಾಣುವುದು ..!
೮
ರಾತ್ರಿ ಬರೆದ
ಸಾವಿನ ಕವನ
ಮುಂದುವರಿಸಿದೆ
ಸುಮ್ಮನೆ
ಹಗಲು -ರಾತ್ರಿ ತದ್ವಿರುದ್ದ
ಅಂದವರಾರು …!
೯
ಇರುಳು
ಕಣ್ಣಿಲ್ಲದವನ ಕೈಯಲ್ಲಿ
ಕಂದೀಲಿದ್ದರೂ
ಕಣ್ಣಿದ್ದವನು ಪ್ರಪಾತದ
ಪಾಲಾಗುವುದು ತಪ್ಪುವುದು …!
೧೦
ಬೆಳಗಾದ ಮೇಲೂ
ಆರಿ ಹೋಗದ
ಹಣತೆಯ ಹಾಗೆ ನೀನು
ನನ್ನ ಬೆಳಕಿನ ಲೋಕದ
ಕತ್ತಲೆ ಕಳೆಯಲು
ಉರಿಯುತ್ತಲೇ ಇದ್ದಿ ..!
೧೧
ಇನ್ನೂ
ಉಳಿದೇ ಇತ್ತು
ಬೆಳಕಿನ ಹಂಬಲ
ಇರುಳಿಗೆ ಮಾತು ಕೊಟ್ಟವರು
ಉಳಿಯುವದಾದರೂ ಹೇಗೆ
ನನ್ನ ಬಳಿ ..
೧೨
ಸೂರ್ಯ ಬರುತ್ತಿರುವ ಹಾಗೆ
ಎಲ್ಲ ದೀಪಗಳು
ಆರುವವು ಎಂದಲ್ಲ ..
ಸೂರ್ಯನ ಬೆಳಕು
ಎಷ್ಟಿದ್ದರೂ
ಸಾಲದಾಯಿತೇನೋ
ಸ್ಮಶಾನದ ದೀಪ
ಆರದೇ ಉಳಿಯುವುದು …!







haniyendare haniyalla , kaviteyendare kaviteyalla, baree belakina minjugalu
baari kavitaa baryaak hattirapa!
ಮಿತಿಗಳಿಲ್ಲದ್ದು ಮಾನವೀಯವಾಗಿಯೂ ಇರಲ್ಲ …! ಇದು ಐಡಿಯಲ್ ಅನಿಸುವ ಮಾತು.ಆದರೆ ಕತ್ತಲೆ ಎನ್ನುವುದು ಬೆಳಕಿಲ್ಲದಿರುವುದು ಎನ್ನುತ್ತಾನೆ ರಜನೀಶ್.ನನಗೆ ಅನ್ನಿಸುವುದು ಕತ್ತಲಲ್ಲಿ ಸಾವಿರುವುದಿಲ್ಲ, ಅದೇನಿದ್ದರೂ ಬೆಳಕಿನಲ್ಲಿ ಮಾತ್ರ. ಕತ್ತಲ ಅಜ್ಞಾತದಲ್ಲಿ ತಳಕ್ಕಿಳಿಳಿದು ಬಂದವನಿಗೆ ಕಾವ್ಯದ ಭಾಗ್ಯ ಎಂದು ರಾಮಚಂದ್ರ ಶರ್ಮರು ಅಂದರೆ ಎಚ್ಎಸ್ವಿ ಅದು ಆಕಾಶಕ್ಕೆ ತನಗಿದ್ದ ಒಂದೆ ವಸ್ತ್ರವನ್ನೊಗೆದು ಹಿಡಿಯಲು ಯತ್ನಿಸಿದಾಗ ಸಿಕ್ಕರೆ ಭಾಗ್ಯವಾಗುವ ಹಕ್ಕಿ ಕಾವ್ಯ ಎನ್ನುತ್ತಾರೆ. ಹೀಗೇ ಒಬ್ಬೊಬ್ಬರಿಗೊಂದೊಂದು; ಎಲ್ಲಿಯವರೆಗೂ ಕಾವ್ಯ ಮಿಸ್ಟಿಸಿಸಂನ ಉಳಿಸಿಕೊಂಡಿರುತ್ತದೆಯೋ ಅಲ್ಲಿಯವರೆಗೆ.
ಆರ್ ವಿಜಯರಾಘವನ್
nimma maatu olagannu vistarisutta saagide … vandanegalu