
ಆನಂದ್ ಋಗ್ವೇದಿ
ಹಾಳು ಗಂಡು ಜನ್ಮ
ಒಂದೂ ಮೋಡವಿಲ್ಲದ ಬಂಜೆ
ಮುಗಿಲ ಹಾಗೆ!
ತನ್ನಷ್ಟಕ್ಕೇ ಅರಳಲಾಗದ ಕಲ್ಲು ಹೂ, ಚಕ್ಕೆ ಘಮಘಮಿಸುವ ಮಸಾಲಾ ಮೊಗ್ಗೂ ಕಾಯುತ್ತಿದೆ
ತುದಿ ಬೆರಳ ಸ್ಪರ್ಶಕ್ಕೆ
ಕಡಲ ಆಳದಿಂದ ಏಳುವ ಬಿಸಿ ಅಲೆಅಲೆಗಳ ತರಂಗ ತಪ್ತತೆಯ
ಹದಗೊಳಿಸುವ, ಹುರಿದ ಬೀಜಗಳ ಸುರುವಿ ನಡುವಿ-
ನಾಳದಲ್ಲಿ ಬೇಯಿಸುವ ಬಯಕೆಗೆ

ಬೆನ್ನ ನೇವರಿಸಿ ನೀಳ ವೇಣಿಯ ಚಾಮರ ಬೀಸಿ ತಂಗಾಳಿ ಆಳದಲಿ ತಣಿಸದೇ ಆರದು
ಈ ಬೇಗೆ!
ಅನಾಥ ಈ ಗಂಡು ಜನ್ಮ
ಪರಾಗ ಸ್ಪರ್ಶವಿಲ್ಲದೇ ಬಿತ್ತಲಾಗದ ಬಂಜೆ ಬೀಜ! ತನ್ನಷ್ಟಕ್ಕೇ ಚಿಗುರೊಡೆಯಲಾಗದ ಹತಾಶ
ಮನಸ್ಸು ಅಲೆದಾಡೀತೇ ಹೊರತು ಏಕಾಗ್ರದಲ್ಲಿ ನೆಲೆಸಲಾರದು
ಬಾರದು ಕನಸುಗಳಿಗೆ ಬಣ್ಣ
ಕುಡಿ ನೋಟದ ಮೀಟು ಇಲ್ಲದೇ ತಾನೇ ಕುಡಿಯಲಾಗದು ಅಧರವಿಲ್ಲದ ಅಮೃತವ!!
ಇನ್ನೆಷ್ಟು ದೂರ ಸಾಗಬೇಕಿದೆ ಈ ಕಾಯ ಕಾಣಲು ನಿನ್ನ!? ಸುಡುಸುಡುವ ಗುಡುಗುಡಿ ಮೇಲೆ ಸುರಿಯುವ ಶಂಕರಿಯ ಧಾರೆಯಲ್ಲಿ ನೆನೆದೇ ನಿಂತಿದ್ದೇನೆ ಈ ದಾರಿಯಲ್ಲಿ
ಕಾಡ ಬೇಡ ಬಂದು ಬಿಡು ಬೇಗ ಈ ಕಾಯ ಕರಗುವುದರೊಳಗೆ ಒಳಗುಳಿಯ ಈ ಬಿಳಿ ಹಾಳೆಯ ಮೇಲೆ ನವಿರಾಗಿ ಬೆರಳಾಡಿಸಿ ಹಾಕುವ
ನಿನ್ನದೊಂದು ರುಜು ಬೇಕು





0 Comments