ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನಷ್ಟು ವೈನ್ ಕವಿತೆಗಳು..

ಸೂರ್ಯಕೀರ್ತಿ 

೧. ಆ ಬೆಟ್ಟದ ಹೂವುಗಳು .

ಅಲ್ಲಿ ತುಂಬಿರುವ ಹೂವುಗಳಿಗೆ
ಬಾಯಿಲ್ಲ, ಕಣ್ಣಿಲ್ಲ , ತಲೆಯಿಲ್ಲ
ಅನಂಗರೂಪದ ಗಂಧರ್ವತಾರೆಯರು !
ಷರಾಬು ಕುಡಿದು ಹಲ್ಲುಗಳ ಕಿಸಿದು
ಗಳಗಳನೆ ನಗುವ ಆ ಬೆಟ್ಟದ ಹೂವುಗಳಿಗೆ
ಅದ್ಯಾರು
ಷರಾಬು ಕುಡಿಸಿದರು ? ಅದ್ಯಾರು ಅಷ್ಟು ಯೌವನಗಳ ಕೊಟ್ಟವರು ?
ಅಲ್ಲಲ್ಲಿ  ಅಕ್ಷತೆಗಳ ಸಾಲುಗಳು
ಒಲಗವ ಹಿಡಿದು ಸಾಗುವ ಇರುವೆಗಳು ,
ಜೂಯ್ ನೆ ಹಾಡುವ ದುಂಬಿಗಳು
ಬೀಗರ ಬಿರಸು ಮಾತುಗಳಾಡುವ ನದಿಗಳು
ಮರಮರನೇ ಸೂಯ್ಯುವ ದೈತ್ಯ ರೂಕ್ಷಗಳು!
ಅಲ್ಲಿ ,
ಷರಾಬು ಮಾಡಿದವರು ಯಾರು ?
ಹೂಜಿಗಳ ತುಂಬಾ ಕಿತ್ತ ಹೂವುಗಳನ್ನು
ಸಾಯಿಸಿ ,
ಹೂಜಿಗಳ ಬಾಯಲ್ಲಿ ಸತ್ತವರ ಹೆಣಗಳು
ಅಲ್ಲಿ
ಕುದಿಯುವ ನೀರು, ಬಿಸಿ ನೀರು
ಯಾರು ಕುದಿಸಿಟ್ಟ ಈ ನೀರು ?
ಇಷ್ಟು ಕುದಿಯುವ ನೀರಿಗೆ
ಯಾರು ಇಟ್ಟರು ಬೆಂಕಿ ?
ನೊರೆನೊರೆಯಾಗಿ ಉಕ್ಕುವ ಹೂಜಿಗಳಲಿ
ಬೆಟ್ಟದ ಹೂವುಗಳ ಕಿತ್ತು
ಷರಾಬು ಮಾಡಿದವರು ಯಾರು ?
ಹೂವಿನೊಳಗೆ ಷರಾಬು ತುಂಬಿರುವಾಗ
ಅದನ್ನು ಕೂಯ್ದು
ಕಾವ್ಯದ ಷರಾಬು ಮಾಡಿದವರು ಯಾರು ?

ಆ ಬೆಟ್ಟದ ಮೇಲೆ ಬಣ್ಣದ ಹೂವುಗಳಿವೆ,
ಬಿದ್ದ ಹೂವುಗಳೆಲ್ಲ
ಹರಿಯುವ ನದಿಗಳ ಸೇರಿ
ಒಂದಡೆ ನಿಂತಾಗ ಮೈಮರೆತು ಕೊಳೆತಾಗ
ಅಲ್ಲಿ
ಷರಾಬಾಯಿತು ! ಷರಾಬು ಹೂವಾಯಿತು !


೨. ಕಣಿವೆಯ ರಾಜ

ಆ ರಾಜನಿಗೆ ಹನ್ನೆರಡು ಗಜದ ತೋಳುಗಳು
ಹತ್ತು ಗಜದ ಎದೆಯ ಉಬ್ಬುಗಳು
ಹದಿನೈದು ಗಜದ ಅವನ ಸೊಂಟದ
ತಿರುವುಗಳು,
ಹದಿನೆಂಟು ಗಜದ ಎತ್ತರದ ರಾಜನಿಗೆ
ರಾಣಿಯೆಂಬ ಮದ್ಯ ಬೇಕಾಗಿದೆ !
ಅವನಿಗೆ ನಿದ್ದೆಯಿಲ್ಲ
ಬದ್ಧತೆಯೆಂಬ ಕಾಮನೆಯಿಲ್ಲ
ನರಳಾಡುತ್ತಿದ್ದಾನೆ ರಾಣಿ ಸಿಗಲಿಲ್ಲವೆಂದು .

ದೂರದ ಬಹುದೂರ ರಾಜ ಅವನು
ಒಂಟಿ ಕುದುರೆಯ ಏರಿ
ದಿಲ್ಲಿ, ಮದ್ರಾಸುಗಳ ದಾಟಿ
ರಾಣಿ ರಾಣಿಯರ ನೋಟಗಳ ಮೀಟಿ
ಬಂದೆ ಬರುವ ,
ಅವನು ಸಾರಾಯಿ ನಶೆಯಂತೆ
ಮತ್ತೆ ಮತ್ತೆ ಹರಿದ ಕಾವ್ಯದ
ಪುಟಗಳು ನೆನಪಾಗುವಂತೆ
ಆ ರಾಜ ಮತ್ತೆ ಬರುವ ,
ಬಂದೆ ಬರುವ !
ಸಾರಾಯಿ ಕುಡಿದು
ಅವಳ ತಬ್ಬಿ , ತಿಣಕಿ ಕೊಂಡು ಹೋಗುವ !

ಅವಳು ಬೇರೆ ಯಾರು
ಆ ಕಣಿವೆಯ ಮೇಲೆ ಮೆಲ್ಲನೆ ನಗುವ
ಮೆಲ್ಲನೆ ಕೂಗುವ , ಮೆಲ್ಲನೆ ಹಾಡುವ
ಕಣಿವೆಯ ಮಗಳು
ನಾಡಿನ ಅಗಳು
ಅವಳು ಅವಳು
ಮೋಹದ ಚಲುವೆ , ಸಿಕ್ಕಲಾರದೆ ಒಡವೆ
ರಾಜ ಕುಡಿದಾಗ ಕುಣಿಯುವ
ಕುದುರೆಯನೇರಿದಾಗ ನೆನಪಾಗುವ
ಚಿಟ್ಟೆಗಳ ಸಂಗಡ ಕಂಡಾಗ
ನಗುವ ಆ ರಾಜ ರಾಣಿ
ಕಣಿವೆಯ ಎರಡು ಚಿತ್ರಗಳು
ಅವು ಬರೆಯಲಾಗದ ಕಾವ್ಯಗಳು
ಬೇಗ ಹುಟ್ಟಿ ಸಾಯುವ ಮರೀಚಿಕೆಗಳು
ಆ ಕಣಿವೆಯ ಮೇಕೆಗಳು !

೩. ಚಿತ್ರ ಬರೆಯುವಾಗ .

ಬರೆಯುತ್ತಿದ್ದೆ ಅವಳ ಅಂಗಾಂಗಗಳ
ಕುರಿತು ,
ಏನು ಬೇಕು ಅವುಗಳ ಅನುಭವಿಸಿ !
ಬರೆದೆ ಬರೆದೆ ಅವಳ ನಗ್ನ ಚಿತ್ರಗಳ !
ಆಸೆಯೆಂಬ ಆ ತೋಟದಲ್ಲಿ
ಬಾಯಾರಿದ ನನಗೆ
ಬರೆಗೆ ಬಿಟ್ಟೆ ಅವಳ ಸಂಭೋಗದ
ರತಿಕ್ರೀಡೆಗಳ !
ಕುಡಿಯಬೇಕೆನಿಸಿತು ಕುಡಿದೆ
ಕುಪ್ಪಳಿಸಿದೆ .
ಇನ್ನು ಕುಡಿದೆ
ಅವಳು ಸೌಂದರ್ಯ ದುಪ್ಪಟಾಯಿತು
ಇನ್ನು , ಇನ್ನು ಬೆಳೆಯುತ್ತಲೇ
ಹೋದಳು !
ನಾನು ಕುಡಿಯುತ್ತಲೇ ಹೋದೆ
ಬರೆದ ಕೈಗಳಿಗೆ ಹೊಸಬಣ್ಣಗಳು
ಬಳಿದುಕೊಂಡವು !
ಇನ್ನು ಉನ್ಮಾದನಾದೆ ಅವಳ
ಬೆತ್ತಲೆಯ ಪ್ರಪಂಚವ ಸುತ್ತಿ ನಿಂತೆ
ಬರೆದ ಚಿತ್ರಗಳೆಲ್ಲ ಈ ಚಿತ್ರದ
ಮುಂದೆ ನಗ್ನವೆನಿಸಿತ್ತು !
ಬಿಡದೆ ಬರೆದೆ
ಕುಡಿದ ಮತ್ತು ತೀರುವ ತನಕ
ಅವಳ ಯೌವನ ಮುಗಿಯುವ ತನಕ !
ಕೊನೆಯಲಿ
ಕಂಡೆ
ನಿಜಕ್ಕೂ ಕಂಡೆ
ಅವಳು ತೊಟ್ಟ ರವಕೆ !

೪. ಸೇಂದಿಯ ಮಡಿಕೆ

ಯಾರೋ ಕೂಯ್ದು ಹೋಗಿದ್ದಾರೆ
ಈಚಲಮರದ ನೀರನ್ನು !
ಯಾರೋ ಕುಡಿದು ಬಿಟ್ಟು ಹೋದ
ಮಿಕ್ಕ ನೀರು ಇರಬಹುದು !
ಮಂಜಾರದ ಕಾಡೊಳಗೆ
ಯಾರು ಬಿಟ್ಟು ಹೋದರೋ !

ಮಡಿಕೆಯ ತುಂಬ ನೀರು , ನೀರು
ನೋಡುತಾ ನೋಡುತಾ
ಕುಡಿದೆ ಅದು
ಕಾವ್ಯದ ಕಾಣದ
ಬಣ್ಣವಿಲ್ಲದ ನೀರು !
ಕುಡಿದ ಮೇಲೆ ಗೊತ್ತಾಯಿತು
ಅದು
ಕಡಿಯಲಾರದ ಕವನವೆಂದು !


೫. ಅಪ್ಪನೊಬ್ಬ ಕುಡುಕ

ಸಂಜೆಯಾದರೆ ತಡ
ಬಾಯಿ ಕೇಳುತ್ತದೆ , ನಾಲಿಗೆ ಅರಳುತ್ತದೆ
ಎಲ್ಲಿ ಎಲ್ಲಿ ಎಂದು
ತಿರುಗುತ್ತದೆ ಷರಾಬು ತುಂಬಿದ
ಕಡೆಗೆ !
ಅಪ್ಪನ ಬಾಯಿ ಬೆಪ್ಪಾಗಿರದೆ
ಕುಡಿಕೆಯ ಬಾಯಂತೆ ತೆಪ್ಪಗೂ
ಇರದೆ,
ದುಡಿದ ದುಡ್ಡು ಸಾರಾಯಿ ಅಂಗಡಿಗೆ !

ಕುಡಿಯುತ್ತಿದ್ದ , ಸಿಕ್ಕದವರಿಗೆ ತರಿಯುತ್ತಿದ್ದ
ಮನೆಗೆ ಬಂದು
ಸಿಕ್ಕದವನ್ನೆಲ್ಲ ಒಡೆಯುತ್ತಿದ್ದ !
ಮಕ್ಕಳು ಯಾರೋ ?
ಹೆಂಡತಿಯೂ ಯಾರೋ ?
ಕುಡಿದ ಮೇಲೆ ಯಾರಿಗೆ ಯಾರೋ ?
ಚಪ್ಪರಿಸಿದ ನಾಲಿಗೆ
ಅದೆಷ್ಟು ರುಚಿಯೋ ?
ಬಂದವನೆ ತೂರಾಡಿ
ಅಮ್ಮನ ಮಡಿಲಿಗೆ ಬಿದ್ದ !

‍ಲೇಖಕರು avadhi

18 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading