’ಇದು ಸಾಂಸ್ಕೃತಿಕ ಶರಣಾಗತಿಯ ಸಂಕೇತ’ – ನಾ ದಿವಾಕರ್

ನಾ ದಿವಾಕರ್

ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ಸಾಮಾಜಿಕ ಸೌಹಾರ್ದತೆಯನ್ನೇ ಕಳೆದುಕೊಂಡಿರುವ ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಪಿಡುಗನ್ನು ಎದುರಿಸಲು ದೇಶದ ದಲಿತ ಸಮುದಾಯಗಳು ಶತಮಾನಗಳಿಂದ ವಿವಿಧ ಹೋರಾಟಗಳು ನಡೆಸುತ್ತಿವೆ. ವೈದಿಕ ಧರ್ಮದ ಪಾರಮ್ಯ ಮತ್ತು ಬ್ರಾಹ್ಮಣ್ಯದ ಶೋಷಣೆಯನ್ನು ಪ್ರತಿರೋಧಿಸಲು ದಲಿತ ಸಮುದಾಯಗಳು ಹಲವು ಸ್ತರಗಳಲ್ಲಿ ಹೋರಾಟಗಳನ್ನು ನಡೆಸುತ್ತಿವೆ. ಅವುಗಳಲ್ಲಿ ದೇವಾಲಯ ಪ್ರವೇಶ ಮಹತ್ತರವಾದದ್ದು. ಅಂಬೇಡ್ಕರ್ ಜಾತಿ ವಿನಾಶ ಕಾರ್ಯಕ್ರಮದಡಿಯಲ್ಲಿ ಶೋಷಿತ ಜನಸಮುದಾಯಗಳನ್ನು ಒಗ್ಗೂಡಿಸಿ ಹೋರಾಟ ನಡೆಸಿದ ಸಂದರ್ಭದಲ್ಲಿ ದೇವಾಲಯ ಪ್ರವೇಶ ಒಂದು ಕ್ರಾಂತಿಕಾರಿ ವಿದ್ಯಮಾನವಾಗಿತ್ತು. ದೇವಾಲಯದೊಳಗೆ ದಲಿತರಿಗೆ ಪ್ರವೇಶ ನೀಡಲು ಹಕ್ಕೊತ್ತಾಯ ಮಾಡುವ ಮೂಲಕ ವೈದಿಕ ಸಂಸ್ಕೃತಿಗೆ ಮತ್ತು ಮೇಲ್ಜಾತಿಯ ಪ್ರಾಬಲ್ಯಕ್ಕೆ ಅಂಬೇಡ್ಕರ್ ಸವಾಲೆಸೆದಿದ್ದರು. ಒಂದು ಶತಮಾನ ಗತಿಸಿದರೂ ದೇಶದ ವಿವಿಧ ಪ್ರದೇಶಗಳಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿಷಿದ್ಧವಾಗಿಯೇ ಇದೆ. ಗರ್ಭಗುಡಿ ಇರಲಿ, ದೇವಾಲಯದ ಆವರಣದೊಳಗೂ ದಲಿತರಿಗೆ ಪ್ರವೇಶವಿಲ್ಲದ ಸಂದರ್ಭಗಳೂ ಇವೆ.
ದೇವಾಲಯ ಪ್ರವೇಶಕ್ಕೆ ಪ್ರಯತ್ನಿಸಿದ ನೂರಾರು ದಲಿತರು ಮೇಲ್ಜಾತಿಗಳ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ದಲಿತ ಸಮುದಾಯಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿವೆ. ದೇವಾಲಯ ಪ್ರವೇಶದಿಂದ ಜಾತಿ ವಿನಾಶ ಸಾಧ್ಯವೇ ಅಥವಾ ಈ ಹೋರಾಟದಿಂದ ದಲಿತ ಸಮುದಾಯಗಳಿಗೆ ಸಾಮಾಜಿಕ-ಸಾಂಸ್ಕೃತಿಕ ಮೇಲ್ ಚಲನೆ ಲಭಿಸಿದೆಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಕೆಲವು ಸಂದರ್ಭಗಳಲ್ಲಿ ಮೇಲ್ಜಾತಿ ಸಮುದಾಯಗಳು ದಲಿತರಿಗೆ ದೇವಾಲಯದಲ್ಲಿ ಮುಕ್ತ ಪ್ರವೇಶ ನೀಡುವುದರ ಮೂಲಕ ಔದಾರ್ಯ ಮೆರೆದಿರುವುದೂ ಉಂಟು. ಆದರೆ ಇದು ಕೊಡು ಕೊಳ್ಳುವ ಒಂದು ವಿದ್ಯಮಾನವಲ್ಲ. ಮನುಕುಲದ ಸೃಷ್ಟಿ ಲಯಕ್ಕೆ ಕಾರಣವೆಂದು ನಂಬಲಾಗಿರುವ ದೇವಾಧಿದೇವತೆಗಳ ಸನ್ನಿಧಿಯನ್ನು ತಮ್ಮ ಕಬಂಧ ಬಾಹುಗಳಲ್ಲಿ ಆಕ್ರಮಿಸಿಕೊಂಡು ಸಮಾಜದಲ್ಲಿ ಯಜಮಾನಿಕೆಯನ್ನು ಸಾಧಿಸುವ ಮೇಲ್ಜಾತಿಯ, ವೈದಿಕ ಸಂಸ್ಕೃತಿಯ ಅಟ್ಟಹಾಸಕ್ಕೆ ಅಂತ್ಯ ಹಾಡಲು ದೇವಾಲಯ ಪ್ರವೇಶ ಒಂದು ಸಾಂಕೇತಿಕ ಪ್ರತಿರೋಧವಷ್ಟೇ. ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಿದಾಗ ದಲಿತರ ದೇವಾಲಯ ಪ್ರವೇಶ ದೇಶದ ಶೋಷಿತ ಸಮುದಾಯಗಳನ್ನು ಮೌಢ್ಯದ ಕೂಪಕ್ಕೆ ತಳ್ಳಿರುವುದು ಎದ್ದು ಕಾಣುತ್ತದೆ. ದೇವಾಲಯದ ಆವರಣದಿಂದ ದೂರ ಇರಿಸಿ ದಲಿತರನ್ನು ಸಾಂಸ್ಕೃತಿಕ ಚೌಕಟ್ಟಿನಿಂದ ದೂರ ಇರಿಸಿದ್ದ ಮೇಲ್ಜಾತಿಗಳು ಇಂದು ದಲಿತರನ್ನು ತಮ್ಮ ಸಾಂಸ್ಕೃತಿಕ ಕೈಂಕರ್ಯದ ಚೌಕಟ್ಟಿನಲ್ಲಿ ಒಳಗೊಳ್ಳುತ್ತಲೇ ಮೌಢ್ಯದ ಕೂಪಗಳನ್ನು ನಿಮರ್ಿಸುತ್ತಿದ್ದಾರೆ. ಇದು ದಲಿತ ಚಳುವಳಿಗೆ ಪೂರಕವೋ, ಆತಂಕಕಾರಿಯೋ, ಅಪಾಯಕಾರಿಯೋ ಎಂದು ಇತಿಹಾಸವೇ ನಿರ್ಧರಿಸಬೇಕು.

ಆದರೆ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ದಲಿತ ಸಮುದಾಯದ ಯಾವುದೇ ವ್ಯಕ್ತಿ ಜಾತಿ ವ್ಯವಸ್ಥೆಯ ರಕ್ಷಣಾ ಗೋಡೆಗಳನ್ನು ನಿರಂತರವಾಗಿ ಕೆಡವುತ್ತಲೇ ಇರಬೇಕಾದುದು ಅಗತ್ಯ. ಇಲ್ಲವಾದಲ್ಲಿ ಗೋಡೆಗಳು ನಿಮರ್ಾಣವಾಗುತ್ತಲೇ ಇರುತ್ತವೆ. ಕಂದರಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಸಾಂಕೇತಿಕ ಹೋರಾಟಗಳ ಔಚಿತ್ಯ ಮತ್ತು ಪ್ರಾಧಾನ್ಯತೆಯನ್ನು ಪ್ರಶ್ನಿಸುತ್ತಲೇ ಈ ಹೋರಾಟಗಳ ಮೂಲ ಆಶಯಗಳನ್ನು ಎತ್ತಿಹಿಡಿಯುವ ತುತರ್ು ಅನಿವಾರ್ಯತೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಇಂತಹ ಸನ್ನಿವೇಶದಲ್ಲಿ ಒಬ್ಬ ಸಂಸತ್ ಸದಸ್ಯರಾಗಿ ರಮೇಶ್ ಜಿಗಜಿಣಗಿ ದಲಿತ ಸಮುದಾಯದ ಶತಮಾನಗಳ ಹೋರಾಟಕ್ಕೆ ಪ್ರೇರಣೆ ನೀಡುವಂತೆ ವತರ್ಿಸಬೇಕೇ ಹೊರತು, ಮೇಲ್ಜಾತಿಯ, ವೈದಿಕ ಸಂಸ್ಕೃತಿಯ ಶೋಷಣೆಗೆ ಕೊರಳು ನೀಡುವುದು ತರವಲ್ಲ. ತಾವು ದಲಿತರಾದ್ದರಿಂದ ದೇವಾಲಯ ಪ್ರವೇಶ ಮಾಡುವಂತಿಲ್ಲ ಎಂದು ಸಂಸತ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ದೇವಾಲಯಕ್ಕೆ ತೆರಳಿದ ಜಿಗಜಿಣಗಿ ಸ್ವಪ್ರೇರಣೆಯಿಂದ ದೇವಾಲಯ ಪ್ರವೇಶಿಸದೆ ಇದು ತಮ್ಮ ವ್ಯಕ್ತಿಗತ ನಿಲುವು ಎಂದು ಸಮಥರ್ಿಸಿಕೊಂಡಿರುವುದು ಪಲಾಯನವಾದ ಎನ್ನಬಹುದಷ್ಟೆ.
ದೇವಾಲಯ ಪ್ರವೇಶ ವ್ಯಕ್ತಿಗತ ನಿಲುವು ಎನ್ನುವುದು ಸತ್ಯ. ನಾಸ್ತಿಕರು, ವಿಚಾರವಾದಿಗಳು, ಮಾಕ್ಸರ್್ವಾದಿಗಳೂ ಸಹ ದೇವಾಲಯ ಪ್ರವೇಶಿಸಲು ನಿರಾಕರಿಸುವುದುಂಟು. ಆದರೆ ಅದು ಸೈದ್ಧಾಂತಿಕ ನಿಲುವಿನ ಪ್ರಶ್ನೆ. ನಂಬಿಕೆಯ ಪ್ರಶ್ನೆ. ಜಿಗಜಿಣಗಿ ನಾಸ್ತಿಕರೇ ಆಗಿದ್ದಲ್ಲಿ ಅವರ ನಿಲುವು ಸ್ತುತ್ಯಾರ್ಹ. ಆದರೆ ಸಾರ್ವಜನಿಕ ಜೀವನದಲ್ಲಿ ಒಂದು ಉನ್ನತ ಸ್ಥಾನ ಪಡೆದಿರುವ ವ್ಯಕ್ತಿಗಳು, ಲೋಕಸಭೆಯಲ್ಲಿ ಜನರನ್ನು ಪ್ರತಿನಿಧಿಸುವ ಹಕ್ಕು ಹೊಂದಿರುವ ವ್ಯಕ್ತಿಗಳು ತಮ್ಮ ವ್ಯಕ್ತಿಗತ ನಿಲುವಿನ ನೆಪದಲ್ಲಿ ತಮ್ಮ ಸಾಮಾಜಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗುವುದಿಲ್ಲ. ತಮ್ಮ ದಲಿತ ಅಸ್ಮಿತೆಯನ್ನು ಜಗತ್ತಿಗೆ ಸಾರಿ ಹೇಳುವ ದಾಷ್ಟ್ರ್ಯತೆ ಇರುವ ಜಿಗಜಿಣಗಿಯವರಿಗೆ ದಲಿತ ಅಸ್ಮಿತೆಯ ಗೌರವ, ಘನತೆಯನ್ನು ಕಾಪಾಡುವ ಹೊಣೆಗಾರಿಕೆಯೂ ಇದೆ ಎಂಬುದನ್ನು ಮರೆಯುವಂತಿಲ್ಲ.
ದಿಟ್ಟವಾಗಿ ಸ್ಥಾಪಿತ ವ್ಯವಸ್ಥೆಯನ್ನು ಪ್ರತಿರೋಧಿಸಿ ಹೋರಾಡದೆ ಶರಣಾಗುವುದು ಹೇಡಿತನದ ಲಕ್ಷಣವಾಗುತ್ತದೆ. ಇದು ಮೋದಿ ಅಲೆಗೆ ಬಲಿಯಾಗಿ ಬಿಜೆಪಿಗೆ ಮತ ಚಲಾಯಿಸಿದ ಅಸಂಖ್ಯಾತ ದಲಿತ ಮತದಾರರಿಗೆ ಅವಮಾನವಾದಂತೆಯೇ ಸವಾಲೂ ಆಗಿದೆ. ಹಿಂದುತ್ವದ ಚೌಕಟ್ಟಿನಲ್ಲಿ ದಲಿತ ಅಸ್ಮಿತೆ ಬಹುಶಃ ಹೀಗೆಯೇ ಸೊರಗಿಹೋಗಿ ಮತ್ತೊಮ್ಮೆ ವೈದಿಕ ಪರಂಪರೆಗೆ ಶರಣಾಗುವ ಸಾಧ್ಯತೆಗಳನ್ನು ಜಿಗಜಿಣಗಿ ತೋರಿಸಿಕೊಟ್ಟಿದ್ದಾರೆ. ಅಯೋಧ್ಯಾ ಕಾಂಡದ ಸಂದರ್ಭದಲ್ಲಿ ಸಂಘಪರಿವಾರ ದೇಶದ ಜನತೆಯಿಂದ ಬಯಸಿದ್ದೂ ಇದನ್ನೇ. ಹಿಂದೂ ಪರಂಪರೆಯನ್ನು ವೈದಿಕ ಸಂಸ್ಕೃತಿಯ ಚೌಕಟ್ಟಿನಲ್ಲಿ ಬಂಧಿಸುವ ಮೂಲಕ ಎಲ್ಲ ಅಸ್ಮಿತೆಗಳನ್ನೂ ಸ್ವಾಹ ಮಾಡಿಕೊಂಡು ದಲಿತರನ್ನು, ಹಿಂದುಳಿದ ವರ್ಗಗಳನ್ನು ಹಿಂದುತ್ವದ ಆವರಣದಲ್ಲಿ ಬಂಧಿಸುವ ಒಂದು ವಿಕೃತ ಮನೋಭಾವವನ್ನು ರಾಮಮಂದಿರ ಆಂದೋಲನದಲ್ಲಿ ಕಾಣಬಹುದಿತ್ತು. ಬಹುಶಃ ಪ್ರಸ್ತುತ ಸಂದರ್ಭದಲ್ಲಿ ಇದೇ ವಿಕೃತ ರಾಜಕೀಯ ಧೋರಣೆ, ಸಾಂಸ್ಕೃತಿಕ ನಿಲುವು ಗಟ್ಟಿಯಾಗುವ ಲಕ್ಷಣಗಳು ಕಾಣುತ್ತಿವೆ. ಜಿಗಜಿಣಗಿ ಇದನ್ನು ಸಾಂಕೇತಿಕವಾಗಿ ಬಿಂಬಿಸಿದ್ದಾರೆ. ಇದು ರಾಜಕೀಯ ಅಪ್ರಬುದ್ಧತೆ ಮತ್ತು ಸಾಂಸ್ಕೃತಿಕ ದೀವಾಳಿತನದ ಸಂಕೇತ ಎಂದಷ್ಟೇ ಹೇಳಬಹುದು
 

‍ಲೇಖಕರು G

May 31, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: