ಗಾಳಿಯ ಗತಿ ನಿಜ ಧರ್ಮವನ್ನು ಅರಸುತ್ತ…
ಜಾತಿ ಒಂದು ಭೂತ; ಬೆಂಬಿಡದ ಭೂತ. ಮತ್ತೆ ಮತ್ತೆ ನಮ್ಮನ್ನು ಸುತ್ತುತ್ತಲೇ ಇರುತ್ತದೆ. ಚುನಾವಣೆಯ ಸಂದರ್ಭದಲ್ಲಂತೂ ಈ ಜಾತಿ ಭೂತ ಹಗಲು ರಾತ್ರಿಗಳ ಭೇದವನ್ನು ಅರಿಯದೆ ಸದಾ ಕುಣಿಯುತ್ತಲೇ ಇರುತ್ತದೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತಿಯೇ ಪ್ರಧಾನವಾಗಿರುವುದು ದೊಡ್ಡ ವ್ಯಂಗ್ಯ ಎಂಬುದೂ ನಮ್ಮ ಗಮನಕ್ಕೆ ಬರುವುದಿಲ್ಲ. ಜಾತಿಯ ಆಧಾರದ ಮೇಲೆಯೇ ಅಭ್ಯರ್ಥಿಗಳ ಆಯ್ಕೆ; ಗೆಲುವಿನ ಲೆಕ್ಕಾಚಾರ. ಪ್ರಜಾಪ್ರಭುತ್ವವನ್ನು ಪಡೆದು ಆರು ದಶಕಗಳು ಕಳೆದುಹೋದರೂ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳುವ ಹಂಬಲವೇ ಇಲ್ಲದ ರಾಷ್ಟ್ರ ನಮ್ಮದು. ಮತಧರ್ಮ ನಿರಪೇಕ್ಷ ಎನ್ನುವುದು ನಮ್ಮ ಸಂವಿಧಾನದ ಬಹುದೊಡ್ಡ ಮೌಲ್ಯ. ಇದನ್ನು ಈವರೆಗೂ ಸಾಧಿಸುವುದು ನಮ್ಮಿಂದ ಸಾಧ್ಯವಾಗೇ ಇಲ್ಲ.
ಸಮುದ್ರ ದಾಟುವುದನ್ನು ಧರ್ಮಬಾಹಿರ ಎಂದು ಪರಿಗಣಿಸುತ್ತಿದ್ದ ಕಾಲವೂ ಒಂದಿತ್ತು, ನಮ್ಮ ದೇಶದಲ್ಲಿ. ಅದನ್ನು ನಾವು ದಾಟಿ ಬಂದಿದ್ದೇವೆ. ಇವತ್ತು ಸಮುದ್ರಗಳನ್ನು ದಾಟಿ ಖಂಡಾಂತರ ಹೋಗಬಲ್ಲೆವು. ಅದು ಧರ್ಮಬಾಹಿರವಾಗುವುದಿಲ್ಲ. ಲಕ್ಷಾಂತರ ಭಾರತೀಯರು ನಿತ್ಯವೂ ದೇಶದಿಂದಾಚೆ ಹೋಗುತ್ತ ಬರುತ್ತ ಇರುತ್ತಾರೆ. ಅದೊಂದು ಸಹಜ, ಸಾಮಾನ್ಯ ಕ್ರಿಯೆಯಾಗಿ ಹೋಗಿದೆ. ನಮ್ಮ ಊಟ, ಉಡುಗೆ, ತೊಡುಗೆ, ನಡತೆ, ವ್ಯವಹಾರ ಹೀಗೆ ಎಲ್ಲದರಲ್ಲೂ ದೊಡ್ಡ ಬದಲಾವಣೆಗಳಾಗಿವೆ. ಯಾರೂ ಇವನ್ನೆಲ್ಲ ಜಾತಿ, ಧರ್ಮಗಳ ಮಾನದಂಡಗಳಿಂದ ಅಳೆಯುವುದಿಲ್ಲ. ಊರುಬಿಟ್ಟು ಆಚೆ ನಡೆದರೆ ಸಾಕು, ಯಾರು ಎಲ್ಲಿ ಬೇಕಾದರೂ ಉಂಡುತಿಂದು ವ್ಯವಹರಿಸಬಹುದು. ಅದನ್ನು ಜಾತಿ ಧರ್ಮಗಳ ಕಟ್ಟಳೆಗಳನ್ನು ಮೀರಿದ ವರ್ತನೆ ಎಂದು ಪರಿಭಾವಿಸುವುದಿಲ್ಲ. ನಮ್ಮ ನಾಲಗೆಯಂತೂ ಎಲ್ಲ ಜಾತಿ, ಧರ್ಮಗಳನ್ನು ದಿಟ್ಟವಾಗಿ ಧಿಕ್ಕರಿಸುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಜಾತಿಯ ಕಟ್ಟುಪಾಡುಗಳು ತಿನ್ನುವ ಆಹಾರಕ್ಕಂತೂ ಇಲ್ಲವೇ ಇಲ್ಲ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ಆದರೆ ನಮ್ಮ ನಾಲಗೆಗಳು ಈ ಚೌಕಟ್ಟನ್ನು ಮೀರಿಬಿಟ್ಟಿವೆ. ನಾಲಗೆಗೆ ರುಚಿಸಿದರೆ, ಮನಸ್ಸಿಗೆ ಒಪ್ಪಿತವಾದರೆ ಮುಗಿಯಿತು; ಯಾವ ಧರ್ಮ ಜಾತಿಯ ಕಟ್ಟುಪಾಡುಗಳೂ ನಮ್ಮನ್ನು ತಡೆಯಲಾರವು. ಇವತ್ತು ಮಾಂಸ ತಿನ್ನುವವರದೊಂದು ಜಾತಿ; ತಿನ್ನದವರದೊಂದು ಜಾತಿ ಎಂದು ಹೇಳಬಹುದೇ ಹೊರತು, ಇಂತಿಂಥ ಜಾತಿಯ ಆಹಾರ ಇದೇ ಎಂದು ಹೇಳುವಂತಿಲ್ಲ. ಹೇಳಿದರೂ ಕೇಳುವವರು ಇಲ್ಲ. ನಾಲಗೆ ಸರ್ವಸ್ವತಂತ್ರವಾಗಿರುವುದು ನಿಜ. ಧರ್ಮ ಜಾತಿಗಳ ಹೆಸರಿನಲ್ಲಿ ಕಟ್ಟುಪಾಡುಗಳನ್ನು ವಿಧಿಸಿದರೆ ತಿನ್ನುವುದು ಗುಟ್ಟಾಗಿ ನಡೆಯುತ್ತದೆ. ಯಾರು ಏನನ್ನು ತಿಂದರು, ತಿಂದವರಿಗೆ ಶಿಕ್ಷೆಯೇನು ಎಂಬ ಕಟ್ಟುನಿಟ್ಟು ಪ್ರಜಾಪ್ರಭುತ್ವ ರಾಷ್ಟ್ರದಲ್ಲಂತೂ ಇಲ್ಲ. ಆದರೂ ಆಹಾರವನ್ನು ಕುರಿತ ಚರ್ಚೆಗಳು, ಸಂವಾದಗಳು ಈಗಲೂ ಬಿಸಿಬಿಸಿಯಾಗಿಯೇ ನಡೆಯುತ್ತಿರುವುದು ಸೋಜಿಗ ಹುಟ್ಟಿಸುತ್ತದೆ. ಇತ್ತೀಚೆಗೆ ಹಾಸನದಲ್ಲಿ ಇಂಥ ಒಂದು ಸಾರ್ವಜನಿಕ ಚರ್ಚೆ ಬಿಸಿಬಿಸಿಯಾಗಿಯೇ ನಡೆಯಿತು. ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆದ ಜಾನಪದ ಆಹಾರ ಮೇಳದಲ್ಲಿ ಮಾಂಸಾಹಾರಕ್ಕೂ ಸ್ಥಳಾವಕಾಶ ದೊರೆತದ್ದು ಈ ಚರ್ಚೆಯನ್ನು ಹುಟ್ಟುಹಾಕಿತ್ತು. ಪರ-ವಿರೋಧಗಳ ಚರ್ಚೆ ಬಿರುಸಾಗಿ ನಡೆಯಿತು.
ಮಾಂಸಾಹಾರವನ್ನು ನಾವು ಯಾಕೆ ಅದೂ ಒಂದು ಆಹಾರ ಎಂದು ನೋಡುವುದಿಲ್ಲ. ಸಸ್ಯಾಹಾರದ ಮೇಳಗಳಾದರೆ ಅದನ್ನು ಯಾರೂ ವಿವಾದಕ್ಕೆ ತಳ್ಳುವುದಿಲ್ಲ. ಮಾಂಸಾಹಾರವಾದ ಕೂಡಲೇ ಯಾಕೆ ವಿವಾದ? ಸಸ್ಯಾಹಾರಕ್ಕೆ ಯಾಕೆ ವಿಶೇಷ ಮನ್ನಣೆ? ಆಹಾರದಲ್ಲಿ ಯಾಕೆ ಶ್ರೇಷ್ಠ, ಕನಿಷ್ಠ? ಇದನ್ನು ಸೃಷ್ಟಿಸಿದವರು ಯಾರು? ಒಂದಿಷ್ಟು ಒಳಹೊಕ್ಕು ನೋಡಿದರೆ ಸತ್ಯ ತಿಳಿಯುತ್ತದೆ: ಮನುಷ್ಯರ ನಡುವೆ ಮೇಲು ಕೀಳು ಎಂಬ ಭಾವನೆಯನ್ನು ಬಿತ್ತುವ ಜಾತಿವ್ಯವಸ್ಥೆಯನ್ನು ಸೃಷ್ಟಿಸಿದ ಶಕ್ತಿಗಳೇ ಈ ಆಹಾರದಲ್ಲಿನ ಶ್ರೇಷ್ಠ-ಕನಿಷ್ಠ ಕಲ್ಪನೆಯನ್ನೂ ಸೃಷ್ಟಿಸಿವೆ. ಮನುಷ್ಯ ಮನುಷ್ಯನನ್ನು ಸಮಾನವಾಗಿ ನೋಡುವುದನ್ನು ನಿರಾಕರಿಸುವ ಮನಸ್ಸುಗಳೇ ಜಾತಿಯನ್ನು ಸೃಷ್ಟಿಸಿದ್ದು, ಆ ಮೂಲಕ ಶೋಷಣೆಯ ಪದ್ಧತಿಯನ್ನು ಜಾರಿಗೆ ತಂದದ್ದು. ಸಾವಿರಾರು ವರ್ಷಗಳ ಈ ಜಾತಿ ವ್ಯವಸ್ಥೆ ನಮ್ಮ ಮನಸ್ಸುಗಳನ್ನು ಎಷ್ಟು ಕುಬ್ಜಗೊಳಿಸಿದೆ ಎಂದರೆ ಮಾಂಸಾಹಾರವನ್ನು ಒಂದು ಆಹಾರವನ್ನಾಗಿ ನೋಡದೆ, ಅದನ್ನು ‘ಹೊಲಸು’ ಎಂದು ಪರಿಭಾವಿಸುವಂತೆ ಮಾಡಿದೆ. ಆಹಾರವನ್ನು ‘ಹೊಲಸು’ ಎಂದು ಪರಿಭಾವಿಸುವ ಮನಸ್ಸು ಎಷ್ಟು ಕಲುಷಿತವಾಗಿರಬೇಕು. ಇಂಥ ಮನಸ್ಸನ್ನು ವಿಮರ್ಶೆಗೊಳಪಡಿಸಲೂ ಸಿದ್ಧವಿಲ್ಲದಷ್ಟು ನಮ್ಮ ಸಮಾಜ ಜಡಗಟ್ಟಿದೆ. ಯಾರಾದರೂ ವಿಮರ್ಶೆಗೊಡ್ಡಲು ಮುಂದಾದರೆ ಅಂಥವರ ಮೇಲೆ ನಾವು ದೊಡ್ಡ ದಾಳಿಯನ್ನೇ ಮಾಡಿ ಅವರ ಬಾಯಿಗಳನ್ನು ಮುಚ್ಚಿಸಿಬಿಡುತ್ತೇವೆ.
ಜಾತಿ ಧರ್ಮಗಳು ಪ್ರಶ್ನಾತೀತ ಶಕ್ತಿಗಳಂತೆ ನಮ್ಮನ್ನಾಳುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎಲ್ಲವೂ ನಮ್ಮ ಭ್ರಮೆಯೇ ಎನ್ನುವ ಪರಿಸ್ಥಿತಿಗಳೂ ಆಗಾಗ ಉದ್ಭವಿಸುವುದುಂಟು. ಧರ್ಮದ ಪ್ರಶ್ನೆ ಬಂದಕೂಡಲೇ ನಮ್ಮೊಳಗಿನ ಭೂತಗಳು ಕುಣಿಯತೊಡಗುತ್ತವೆ. ಧರ್ಮಗಳನ್ನು ನಾವು ವಿಮರ್ಶೆಗೊಳಪಡಿಸುವಂತಿಲ್ಲ. ಧರ್ಮ ಎನ್ನುವುದು ಒಂದು ಅಮಲು ಎಂಬುದು ನಿಜ ಎನ್ನಿಸಿಬಿಡುತ್ತದೆ. ಆಹಾರದಲ್ಲಿ ಅದು ಪವಿತ್ರ, ಇದು ಅಪವಿತ್ರ ಎನ್ನುವ ಭವನೆ ಸರಿಯಲ್ಲ. ಆಹಾರಕ್ಕೆ ಯಾವ ದೋಷವೂ ಇಲ್ಲ. ಸಾಹಿತ್ಯ ಪರಿಷತ್ ಭವನದಲ್ಲಿ ಮಾಂಸಾಹಾರ ಮಾರಾಟ ಮಾಡಿದ್ದರಲ್ಲಿ ನನಗೆ ಯಾವ ತಪ್ಪೂ ಕಾಣಿಸುತ್ತಿಲ್ಲ.
ಯಾವ ಮತಧರ್ಮಕ್ಕೂ ತಮ್ಮನ್ನು ಕಟ್ಟಿಹಾಕಿಕೊಳ್ಳದೆ, ನಮ್ಮ ಸಂವಿಧಾನದ ಮತಧರ್ಮ ನಿರಪೇಕ್ಷ ತತ್ವಕ್ಕೆ ಬದ್ಧರಾಗಿ ಬದುಕುತ್ತ, ಬರೆಯುತ್ತ, ಪ್ರಗತಿಪರ ಸಂಘಟನೆಗಳ, ವಿಚಾರಗಳ ಜೊತೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತ ಬಂದಿರುವವರೆಂದು ತಿಳಿಯಬಹುದಾದ ಕವಿ ರೂಪಾ ಹಾಸನ ಅವರು ವ್ಯಕ್ತಪಡಿಸಿದ ಈ ಅಭಿಪ್ರಾಯ ದೊಡ್ಡ ಗದ್ದಲವನ್ನೇ ಏಳಿಸುತ್ತದೆ ಎಂದರೆ ನಾವೆಂಥ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎನ್ನುವುದು ವೇದ್ಯವಾಗುತ್ತದೆ. ರೂಪ ಅವರ ಅಭಿಪ್ರಾಯದಲ್ಲಿ ಯಾವ ದೋಷವಿಲ್ಲದಿದ್ದರೂ ಅದನ್ನು ಒಂದು ವಿವಾದಾತ್ಮಕ ಸಂಗತಿಯನ್ನಾಗಿ ಮಾಡಿ ಒಂದು ಸಮುದಾಯವನ್ನು ರೂಪ ಅವರ ವಿರುದ್ಧ ಎತ್ತಿಕಟ್ಟುವಂತೆ ಮಾಡಿದ ಮನಸ್ಸು ಯಾವುದು? ಇದು ಹೆಣ್ಣನ್ನು ಸಮಾನವಾಗಿ ನೋಡದ ಮನಸ್ಸು; ಇದು ಮಾಂಸಾಹಾರವನ್ನು ಒಂದು ಆಹಾರ ಪದ್ಧತಿಯಾಗಿ ನೋಡದ ಮನಸ್ಸು; ಇದು ಎಲ್ಲ ಸಂಸ್ಕೃತಿಗಳನ್ನೂ ಗೌರವಿಸದ ಮನಸ್ಸು. ಮನುಷ್ಯ ಮನುಷ್ಯರನ್ನು ಒಡೆಯುವ ಜಾತಿಪದ್ಧತಿಯನ್ನು ಒಪ್ಪಿಕೊಂಡು ಅಲ್ಲಿಯೇ ಮುರುಟಿ ಹೋದ ಮನಸ್ಸು. ಮನಸ್ಸಿನ ಈ ಕುರೂಪವನ್ನು ನಾವು ಗಮನಿಸಬೇಕು; ದಿಟ್ಟತನದಿಂದ ಒರೆಗೆ ಹಚ್ಚಿ ನೋಡಿ ಕುರೂಪವನ್ನು ಕಳೆದುಕೊಳ್ಳಬೇಕು. ಇಲ್ಲವಾದರೆ ಇಂಥ ಕುರೂಪಗಳು ಸಮಾಜದ ಆರೋಗ್ಯವನ್ನು ಹಾಳುಮಾಡುತ್ತವೆ. ಅಷ್ಟೇ ಅಲ್ಲ, ಅನೇಕ ಚಿಂತನೆಗಳು ತಲೆ ಎತ್ತದ ವಾತಾವರಣವೂ ನಿರ್ಮಾಣವಾಗುತ್ತದೆ.
ನಮ್ಮ ಆಹಾರ, ಉಡುಗೆ ತೊಡುಗೆ ಇತ್ಯಾದಿ ಎಲ್ಲವೂ ನಮ್ಮ ಸಂಸ್ಕೃತಿಯ ಭಾಗಗಳೇ. ಭಾರತ ಏಕ ಸಂಸ್ಕೃತಿಯ ನಾಡಲ್ಲ. ಇಲ್ಲಿ ಹಲವು ಸಂಸ್ಕೃತಿಗಳಿವೆ. ಯಾವ ನದಿ ಹರಿದುಬಂದರೂ ಕಡಲು ಅದನ್ನು ತೋಳುಚಾಚಿ ತಬ್ಬಿಕೊಳ್ಳುತ್ತದೆ. ಈ ಕಡಲಿನಲ್ಲಿ ಇದೊಂದೇ ನದಿ ಇದೆ; ಈ ನೀರಿನ ಬಣ್ಣ ಇದೇ, ಇದರ ರುಚಿ ಇದೇ ಎಂದು ವಾದಿಸುವುದು ಅವಿವೇಕವಾಗುತ್ತದೆ. ಇಲ್ಲಿ ಎಲ್ಲವೂ ಇದೆ. ಎಲ್ಲದಕ್ಕೂ ಸ್ಥಾನವಿದೆ. ಸಂಸ್ಕೃತಿಯಲ್ಲಿ ಸಣ್ಣದು, ದೊಡ್ಡದು ಎಂಬ ಭೇದವಿಲ್ಲ; ಎಲ್ಲವೂ ಸಮಾನ; ಎಲ್ಲವಕ್ಕೂ ಅಸ್ತಿತ್ವವಿದೆ. ಇದು ತತ್ವ. ಇದನ್ನು ತಿಳಿದರೆ ಮೇಲು ಕೀಳಿನ ಕಲ್ಪನೆ ಹತ್ತಿರವೂ ಸುಳಿಯುವುದಿಲ್ಲ.
ಧರ್ಮದ ಹೆಸರಿನಲ್ಲಿ ನಾವಿಂದು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಬೇರೆಯೇ ಇವೆ: ಭ್ರಷ್ಟಾಚಾರಿಗಳನ್ನು ನಮ್ಮ ಧರ್ಮ ಯಾಕೆ ದೂರವಿಡುವುದಿಲ್ಲ? ಜಾತಿಯ ಭದ್ರಕೋಟೆಯಲ್ಲಿ ಆಶ್ರಯಪಡೆಯುವ ಭ್ರಷ್ಟರನ್ನು ನಮ್ಮ ಧರ್ಮಗಳೇಕೆ ಸಹಿಸಿಕೊಂಡಿವೆ? ಭ್ರಷ್ಟರೆಂದು ತಿಳಿದೂ ತಿಳಿದೂ ಅಂಥವರಿಂದ ನಮ್ಮ ಮಠಗಳು, ಧರ್ಮಕ್ಷೇತ್ರಗಳು ಯಾಕೆ ಕೋಟ್ಯಂತರ ರೂಪಾಯಿಗಳ ಕಾಣಿಕೆಗಳನ್ನು ಸ್ವೀಕರಿಸುತ್ತಿವೆ? ಉದಾರವಾಗಿ, ಪ್ರೀತಿಯಿಂದ ಎಲ್ಲರಿಗೂ ಹಂಚಬೇಕಾದ ಜ್ಞಾನವನ್ನು ಧಾರ್ಮಿಕ ಸಂಸ್ಥೆಗಳೂ ವ್ಯಾಪಾರದ ಸರಕಾಗಿ ಮಾಡಿಕೊಂಡಾಗ ಧರ್ಮದ ಪ್ರಶ್ನೆ ಎಲ್ಲಿ ಮರೆಯಾಗುತ್ತದೆ? ಕುಡಿಯುವ ನೀರನ್ನು ಕೇಳಿದರೆ, ಸಾರ್ವಜನಿಕ ದೇವಾಲಯಗಳಿಗೆ ಪ್ರವೇಶವನ್ನು ಬಯಸಿದರೆ ಅನಗತ್ಯವಾಗಿ ವ್ಯಗ್ರಗೊಳ್ಳುವ, ಮನುಷ್ಯರನ್ನೇ ಸುಟ್ಟುಬಿಡುವ ಕ್ರೌರ್ಯವನ್ನೂ ತೋರಿಸುವ ನಡವಳಿಕೆಗಳ ಬಗ್ಗೆ ನಮ್ಮ ಧರ್ಮಗಳೇಕೆ ಮಾತನಾಡುವುದಿಲ್ಲ? ಮಹಿಳೆಯರನ್ನು ಅತ್ಯಂತ ಕೀಳಾಗಿ ಕಾಣುವ, ಎಲ್ಲ ಬಗೆಯ ಹಿಂಸೆಗೂ ಅವಳನ್ನು ಗುರಿಪಡಿಸುವ ಪದ್ಧತಿಗಳ, ಅಮಾನುಷ ಆಚರಣೆಗಳ ಬಗ್ಗೆ ಧರ್ಮಗಳೇಕೆ ಮೌನವಾಗಿವೆ?
ಧರ್ಮ ಎನ್ನುವುದು ಮನುಷ್ಯ-ಮನುಷ್ಯರ ನಡುವಣ ಹೃದಯ ಸಂವಾದಕ್ಕೆ ನೆರವಾಗುವ ಸಾಧನ; ಅದು ಸಮಾಜ ವಿಕಾಸಕ್ಕೆ ಇರುವ ಮಾರ್ಗ. ಅಲ್ಲಿ ಪ್ರೀತಿ, ಕರುಣೆ, ಸಮಾನತೆಗಳು ಕೇಂದ್ರಕಾಳಜಿಗಳಾಗಿರಬೇಕು. ಕಟ್ಟುಪಾಡುಗಳ ಹೆಸರಿನಲ್ಲಿ ಮನುಷ್ಯರನ್ನು ರಾಕ್ಷಸರನ್ನಾಗಿ ಮಾಡುವುದು ಧರ್ಮವಲ್ಲ. ಬುದ್ಧ ಹೇಳಿದ್ದು, ಜೈನ ತೀರ್ಥಂಕರರು ಹೇಳಿದ್ದು, ಶರಣರು ಹೇಳಿದ್ದು ಇದೇ ಧರ್ಮವನ್ನು. ಇವರೆಲ್ಲ ಬಂಡಾಯ ಎದ್ದದ್ದು ಧರ್ಮದ ಹೆಸರಿನಲ್ಲಿ ಮಾನವೀಯತೆಯನ್ನು ಕಳೆದುಕೊಂಡ ಕಂದಾಚಾರಗಳ ವಿರುದ್ಧ; ಮನುಷ್ಯನನ್ನು ಮನುಷ್ಯನಾಗಿ ನೋಡದ, ಅಸಮಾನತೆಯನ್ನು ಬೋಧಿಸುವ ಧರ್ಮವಲ್ಲದ ಧರ್ಮಗಳ ವಿರುದ್ಧ. ಇದು ಅರ್ಥವಾದರೆ ನಮಗೆ ನಿಜವಾದ ಧರ್ಮದ ದರ್ಶನವಾಗುತ್ತದೆ. ಅಲ್ಲಿಯವರೆಗೆ ಇಂಥ ವಿವಾದಗಳ ಮಧ್ಯೆ, ಉನ್ಮಾದಗಳ ಮಧ್ಯೆ ಬದುಕುವುದು ಅನಿವಾರ್ಯ.
(ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ಲೇಖನ)



ತುಂಬ ಶಕ್ತಿಯುತ ಲೇಖನ ಜಿಪಿಬಿ ಸರ್.
ಜಿಪಿ ಸರ್,
ಈ ಬಗ್ಗೆ ಅವಧಿಯಲ್ಲಿಯೇ ಹಿಂದೆ ನಡೆದ ಚರ್ಚೆಯನ್ನ ಓದಿದ್ದೆ. ಅದರ ಕೆಲವೊಂದು ಭಾಗಗಳು ಬಹಳಷ್ಟು ಖೇದ ಹುಟ್ಟಿಸಿದ್ದು ಸುಳ್ಳಲ್ಲ. ನಿಮ್ಮ ಲೇಖನ ಈ ಹಿಂದೆ ನಡೆದ ಎಲ್ಲ ಮಾತುಕತೆಗೂ ಸಮರ್ಪಕವಾದ ಉತ್ತರದಂತಿದೆ. ನಿಜ ಹೇಳಬೇಕೆಂದರೆ ಇದು ಚರ್ಚೆಯಾಗಬೇಕಾದ ವಿಷಯವೇ ಅಲ್ಲ. ಭಾರತದ ಆಹಾರಸಂಸ್ಕೃತಿ ವೈವಿಧ್ಯಮಯವಾದ್ದು. ಎಲ್ಲವನ್ನೂ ಒಳಗೊಂಡಿರುವಂಥದ್ದು. ಇಲ್ಲಿ ಸಸ್ಯಾಹಾರವೂ ಇದೆ, ಮಾಂಸಾಹಾರವೂ ಇದೆ. ಸಾಹಿತ್ಯ ಓದುವಾಗ ಇವೆಲ್ಲವೂ ನಮಗೆ ಸಮ್ಮತವಾಗುತ್ತದೆ ಎನ್ನುವುದಾದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಸಮ್ಮೇಳನವೊಂದರಲ್ಲಿ ಕಾಣಬರುವ ಈ ಆಹಾರ ಏಕೆ ಸಹ್ಯವಾಗುವುದಿಲ್ಲ? ಇದನ್ನು ವಿರೋಧಿಸುವ ಮೂಲಕ ಮಾಂಸಾಹಾರ ಸೇವಿಸುವ ಸಮುದಾಯವನ್ನೇ ಅವಗಣಿಸಿದಂತೆ ಆಗುವುದಿಲ್ಲವೆ?
ಈಗಿನ ದಿನಗಳಲ್ಲಿ ಆಹಾರದ ಪ್ರಿಫರೆನ್ಸ್ ಬಹಳ ವೈಯುಕ್ತಿಕ ಮಟ್ಟದ ವಿಷಯವಾಗಿಹೋಗಿದೆ. ಒಂದೇ ಮನೆಯಲ್ಲಿ ಸಸ್ಯಾಹಾರಿಗಳೂ ಮಾಂಸಾಹಾರಿಗಳೂ ಆದ ಸದಸ್ಯರಿರುವುದು ಮಾಮೂಲು ವಿಷಯ. ಒಬ್ಬರಿನ್ನೊಬ್ಬರ ಚಾಯ್ಸುಗಳನ್ನು ಗೌರವಿಸಿಕೊಂಡಿದ್ದರಾಯಿತು, ಅಷ್ಟೆ! ಇದರ ಬಗ್ಗೆ ಉದ್ದುದ್ದ ಚರ್ಚೆ ನಡೆಸಿಕೊಂಡು ನಾವು ಸಂಕುಚಿತರಾಗುತ್ತಿದ್ದೇವೆ ಅನ್ನಿಸುತ್ತದೆ ನನಗೆ.
ಟೀನಾ,
ನೀವು ಹೇಳುವುದು ಖಂಡಿತ ಸರಿಯಾಗಿದೆ. ಆಹಾರ ಅವರವರ ಆಯ್ಕೆಗೆ ಬಿಟ್ಟ ವಿಚಾರ; ಚರ್ಚಿಸಬೇಕಾದ ಸಂಗತಿಯೇ ಅಲ್ಲ. ಆದರೂ ಇದೊಂದು ದೊಡ್ಡ ವಿವಾದವನ್ನೇ ಹಾಸನದಲ್ಲಿ ಹುಟ್ಟುಹಾಕಿತಲ್ಲಾ! ಅನೇಕ ವಿಚಾರದಲ್ಲಿ ನಾವು ಪ್ರಗತಿ ಸಾಧಿಸಿರುವಂತೆ ಕಾಣಿಸಿದರೂ, ಕೆಲವು ವಿಚಾರಗಳಲ್ಲಿ ಇನ್ನೂ ರಿಜಿಡ್ ಆಗಿಯೇ ಉಳಿದಿದ್ದೇವೆ. ಎಂಥ ದುರಂತ.
Dear Sir,
There is another angle as well. Non-Veg food preparation needs a strict discipline and hygienic measures, which is missing in many places. In public gatherings it is even more difficult. Waste Meat, Dead animals’ remaining needs to be disposed responsibly and scientifically, otherwise it would result in causing infections and epidemics. If it is taken, I think very few people would object.
There is old saying ‘One man food is other man poison’, There is enough freedom to choose our own food and respect others as well.
Another point to be considered when you opt for Non-Veg food is, your contribution to global warming is very high. (More details could be read by Googling).
Bon Apatite!
Regards,
VidyaShankar
Vidyashankar,
I completely agree with ‘One man food is other man poison’ statement.
The strict discipline and hygienic measures needed to prepare non-vegetarian food apply to vegetarian cooking as well. In my experience, preparing veggie food involves a variety of culinary steps which need a lot of practice and finesse. As for the waste disposal of non-vegetarian category, I believe that is being done according to prescribed norms. If not, complaints can be made. Social media works great these days. Infections and other health problems are caused by vegetarian food as well..a whole episode of ‘Satyameva Jayathe’ demonstrated that effectively.
No offense sir, you are a friend. My point here is that when organisers plan to arrange for food during one of their prestigious ‘meLa’s they will definitely take care of such details. As you know, for us Indians, serving good food is a matter of pride. There are people who prefer home-cooked non-vegetarian food. They can always opt for veggie section. See, there is no problem there!!
As for your ‘global warming’ point, many people nowadays are turning vegetarians. We Indians do not go prefer meat as our staple food. It is reserved for certain days of the week and occasions. If someone’s to blame for that, it’s those countries who do!!:)