ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ‘ಗೌರಿ ದುಃಖ’

ಸಂಧ್ಯಾರಾಣಿ 

 

೧.
ಚಹದ ಪ್ರತಿ ಬಟ್ಟಲನ್ನೂ
ಆಸೆಯಿಂದ ಬಳಸುವವನೆ
ಚಹದ ಕವಿತೆಯ ನಾನೀಗ ಬರೆಯುವುದಿಲ್ಲ
ನನ್ನ ಮನೆಯಲ್ಲೀಗ ಚಹ
ಮರಳುವುದಿಲ್ಲ
ನಿನ್ನ ಹೆಜ್ಜೆಗುರುತುಗಳ ಬದಿಯಲ್ಲಿ
ಹಾಡಿನ ಪಲುಕುಗಳು ಚೆಲ್ಲಾಡಿವೆ
ಮಾತಿಗೆ ಅರ್ಥವನ್ನು ಪೋಣಿಸಿದ್ದ ಎಳೆ
ಕತ್ತರಿಸಿ ಈಗವು ಕೇವಲ ಶಬ್ಧಗಳು
ತೂಗುಬಿಟ್ಟ ಗಂಟೆಗಳ ಗಂಟಲಿನಲಿ
ಹಾಡು ಹುಟ್ಟುತ್ತಿಲ್ಲ
ನಿಟ್ಟುಸಿರಿಡುತ್ತವೆ
ಹೋದಾಗ
ಬಂದಾಗ
ಬಿಂದಿ ತೆಗೆದಿಟ್ಟಿದ್ದ ಮಂಚದ ಹಣೆ ಬರಿದು
ಕೈ ಬೆರಳು ತಾಕಿದಾಗೆಲ್ಲಾ ಹಿಡಿಯುತ್ತದೆ ಏನೋ
ಅರೆ ನಿದ್ದೆಯಿಂದೆದ್ದ ಕಣ್ಣುಗಳ ಕನಸು ನೀನು
ಕನಸು ಖಾಲಿಯಾದ ಕಣ್ಣುಗಳ ನಿದ್ದೆ ನನ್ನದು
ಇಬ್ಬರೂ ಕುಳಿತು ಓದಿದ ಹಳೆಯ
ಪತ್ರಿಕೆಗಳ ರಾಶಿ ನೋಡಿ ನಿಟ್ಟುಸಿರಿಡುತ್ತೇನೆ
ಹಳೆಯ ಸುದ್ದಿಗಳ ನಡುವೆ
ಹಳೆಯ ನಗು ಸಹ ಸಿಗಬಹುದೆ?

೨.

ಮನಸೇನೋ ಒಳ್ಳೆಯದೇ
ಗಂಟಲ ಹಾದು ಬರುವಾಗ
ಅಲ್ಲಿ ಉಳಿದ ನೀಲಿ ತಾಕಿ
ವಿಷವಾಗುತ್ತವೆ ಮಾತುಗಳು
ತಪ್ಪು ಶಿವನದಲ್ಲ
ಹಣೆಯ ಚಂದ್ರ ಮುದ್ದಿಸಿದ
ಮರುಕ್ಷಣ ಅವನು
ಹಣೆಗಣ್ಣ ತೆರೆಯುತ್ತಾನೆ
ಕೇಳಿ ಬಿಡುವೆನೆಂದು ಗೌರಿ ತಲೆಯೆತ್ತುತ್ತಾಳೆ
ಭಕ್ತವಲ್ಲಭ ಮುಡಿ ನೇವರಿಸಿಕೊಳ್ಳುತ್ತಾನೆ
ಗಂಗೆ ಕೂತಲ್ಲೇ ಮುಗುಳ್ನಗುತ್ತಾಳೆ
ಆಡಲಾಗದ ಮಾತುಗಳು
ಪ್ರತಿನಿತ್ಯ ಸಾಯುತ್ತವೆ
ಗೌರಿಯ ಗಂಟಲಲ್ಲಿ
ಮೌನಗೌರಿಯನ್ನು ಜನ ಪೂಜಿಸುತ್ತಾರೆ
ಶಿವನ ಸಿಟ್ಟು ನುಂಗುತ್ತಾಳೆ
ಕಣ್ಣ ನೀರು ನುಂಗುತ್ತಾಳೆ
ಎದೆಯ ಮಾತು ನುಂಗುತ್ತಾಳೆ
ಗಂಗೆಯ ನಗುವನ್ನೂ ನುಂಗುತ್ತಾಳೆ
ಬೆಂಕಿಗೆ ಬಿದ್ದರೂ
ನಿಲುವಾಗಿ ಸುಟ್ಟರೂ
ಈ ಸಲ ಕಥೆ ಬದಲಾಗಬಹುದೆಂಬ
ನಿರೀಕ್ಷೆಯಲಿ
ಮತ್ತೆ ಮತ್ತೆ ಹುಟ್ಟಿ ಬರುತ್ತಾಳೆ
ಪಾರ್ವತಿ, ಗಿರಿಜೆ, ಗೌರಿ, ಭವಾನಿ
ಕಾಲದಿಂದ ಕಾಲಕ್ಕೂ.
ಇದು ‘ಗೌರಿ ದುಃಖ’
ಪಾಪ ಗಂಗೆಯದೇನು
ಬೇರೆ ದುಃಖವೆ?

‍ಲೇಖಕರು avadhi

17 June, 2017

12 Comments

  1. K.Nalla Tambi

    Both are very nice…….

  2. Uday Itagi

    Superb poem with a difference. It reminds me of Vaidehi’s Shivana Meesuva Haadu.

  3. Anonymous

    Nice one ☝️

  4. Kusumapatel

    ಕವಿತೆ ಗಳು ತುಂಬಾ ನೆ ಇಷ್ಟ ವಾದವು.

  5. prathibha nandakumar

    ಇದು ಗೌರಿ ಸುಖ

    ಪ್ರತಿಭಾ ನಂದಕುಮಾರ್

    ಕ್ಲೀಷೆಯಾಗಿದೆ ದುಃಖ
    ಪ್ರಾಸಕ್ಕೂ ಎಟಕುವುದಿಲ್ಲ.
    ಇಕಾರಕ್ಕೂ ಆಕಾರಕ್ಕೂ ಹೊಂದುವುದಿಲ್ಲ.
    ನಡುವಿನ ಹಕಾರವಂತೂ ಉಚ್ಚಾರಕ್ಕೂ ಇಲ್ಲ.
    ಬಿಟ್ಟುಬಿಡುವುದು ಒಳ್ಳೆಯದು.
    ಬದಲಿಗೆ ಸುಖ ಪದ ಬಳಕೆಗೆ ಎಷ್ಟೊಂದು ಅನುಕೂಲ
    ಅಲ್ಲೂ ಇದೆ ಹಳೆಯ ಸುಖಾಂತ್ಯ.
    ಆದರೂ ಪರವಾ ಇಲ್ಲ.

    ಮಾತಂತೆ ಮೌನವಂತೆ
    ಮಹಾದೇವನ ಎದೆಗೆ ಬಿದ್ದ ಆಡಬಾರದ
    ನೀಲಿ ತಾಕಿದ ವಿಷವಂತೆ
    ಸಂಜೆಗಣ್ಣಿನ ಹುಡುಗಿ ಸಂಧ್ಯಾರಾಗದ
    ಇನ್ನೊಂದು ಕ್ಲೀಷೆ
    ಸುದ್ದಿ ಹಳತಿರಬಹುದು
    ನಗು ಸದಾ ನವನವೀನ.
    ಅಹಾ ಮತ್ತೊಂದು ಕ್ಲೀಷೆ.

    ಮುಡಿ ಹಣೆಗಣ್ಣು ಬಿಂದಿ ಮಂಚ
    ಪಲುಕು ಗಂಟೆ ಖಾಲಿ
    ಅರೆ ನಿದ್ದೆ
    ಕನಸು ಖಾಲಿ.
    ಇಲ್ಲಿ ಹಳತು
    ಪತ್ರಿಕೆ ಮಾತ್ರ.

    ಲಂಕೇಶ್ ಇದ್ದಿದ್ದರೆ
    ಅದಕ್ಕೊಂದು ಪ್ರಾಸ
    ಹೇಳಿಬಿಡುತ್ತಿದ್ದರು.
    ಸಧ್ಯ.

    ***

    • Ajit

      That’s quite pretty Prathibha

    • ಸಂಧ್ಯಾರಾಣಿ

      ಶರಣು ಪ್ರತಿಭಾ!! ನನ್ನ ಕವಿತೆ ಧನ್ಯವಾಯಿತು!!

  6. Mallappa

    ಮಹಾದೇವನ ಮಾತು
    ಮನದಲ್ಲೇ ಉಳಿಯಿತು
    ಗಂಟಲಿನ ನೀಲಿ
    ತಗಲುವ ಭಯದಿಂದ

    ಉಕ್ಕಿದರೆ ಉಕ್ಕಲಿ
    ಗಂಟಲಿನಿಂದಲ್ಲ ತಲೆಯ
    ಗಂಟಿನಿಂದೆಂದ ಗಂಗೆಯ
    ನೋಡಿ ಮೌನವಾದಳು ಗೌರಿ
    ಹರನ ತೊಡೆಯನ್ನೆರಿ
    ಮಾತೋ?
    ಮೌನವೋ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading