ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು 'ಕಾಡಿನ ಬೆಂಕಿ'

ಪ್ರಜ್ವಲಿಸುವ ಮುತ್ತುಗದ ಹತ್ತಾರು ಮುಖಗಳು
ಮಲ್ಲಿಕಾರ್ಜುನ ಹೊಸಪಾಳ್ಯ
ಇದು ಮುತ್ತುಗದ ಹೂವಿನ ಕಾಲ. ರಸ್ತೆ ಮಗ್ಗುಲು, ಕಾಡಿನ ನಡುವೆ ಅಡ್ಡಾಡುತ್ತಿದರೆ ಫಕ್ಕನೆ ಬೆಂಕಿನ ನಾಲಗೆಗಳಂತೆ ಕಾಣುವ ಹೂ ಹೊತ್ತ ಮರಗಳು ಕಣ್ಣಿಗೆ ಬೀಳುತ್ತವೆ. “ಫ್ಲೇಮ್ ಆಫ್ ದಿ ಫಾರೆಸ್ಟ್” ಎಂಬುದು ಅದರ ಹೂವಿನ ರಂಗಿನಿಂದಾಗಿಯೇ ಬಂದಿರುವ ಹೆಸರು. ಮುತ್ತುಗದ ಎಲೆಗಳಿಂದ ತಯಾರಿಸಿದ ಊಟದ ತಟ್ಟೆಗಳು, ದೊನ್ನೆಗಳು ಒಂದು ಕಾಲಕ್ಕೆ ಪ್ರಸಿದ್ಧ. ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಾರದ ಈ ಮರ ದಿನೇ-ದಿನೇ ಕ್ಷೀಣಿಸುತ್ತಿದೆ.
ಉತ್ತರ ಭಾರತದ ಕೆಲವು ಭಾಗಳಲ್ಲಿ ಪ್ರಚಲಿತವಾಗಿರುವ ಒಂದು ಜನಪದ ಕಥೆ ಹೀಗಿದೆ;
ಒಬ್ಬ ಆದಿವಾಸಿ ನಾಯಕನಿರುತ್ತಾನೆ. ಅವನಿಗೊಬ್ಬ ಮಗಳು. ಅವಳಿಗೆ ಅದೇ ಸಮುದಾಯದ ಹುಡುಗನೊಂದಿಗೆ ಮದುವೆಯಾಗುತ್ತದೆ. ಆದರೆ ಆ ಮದುವೆ ಅವಳಿಗೆ ಇಷ್ಟವಿರುವುದಿಲ್ಲ. ಕಾರಣ, ಅವಳು ಈಗಾಗಲೇ ಪಕ್ಕದಲ್ಲಿದ್ದ ಮತ್ತೊಂದು ಆದಿವಾಸಿ ಸಮುದಾಯದ ಕಪ್ಪು ಹುಡುಗನಲ್ಲಿ ಅನುರಕ್ತೆ. ಅವನೆಂದರೆ ಪ್ರಾಣ. ಹಾಗಾಗಿ ಗಂಡನೊಂದಿಗೆ ಉದಾಸೀನೆ.
ಈ ಸುದ್ದಿ ಅವಳ ಸಮುದಾಯದ ಜನರಿಗೆ ಗೊತ್ತಾಗುತ್ತದೆ. ಆಕೆಯ ಗಂಡನಿಗೆ ಇದನ್ನು ನಂಬಲು ಆಗುವುದಿಲ್ಲ. ಆದರೂ ಜನರ ಹೀಯಾಳಿಕೆಯಿಂದ ಪಾರಾಗಲು ಮತ್ತು ನಿಜವನ್ನು ತಿಳಿಯಲು ಮುಂದಾಗುತ್ತಾನೆ. ಒಂದು ದಿನ ಪಕ್ಕದ ಕಾಡಿನಲ್ಲಿರುವ ತನ್ನ ತಂಗಿಯ ಮನೆಗೆ ಹೋಗಿ ಬರುವುದಾಗಿ ಹೆಂಡತಿಗೆ ಹೇಳಿ ಹೋಗುತ್ತಾನೆ. ಇದನ್ನು ನಂಬಿದ ಆಕೆ ತನ್ನ ಪ್ರೇಮಿಯನ್ನು ಹಟ್ಟಿಗೆ ಬರಹೇಳುತ್ತಾಳೆ.
ಇತ್ತ ತಂಗಿಯ ಮನೆಗೆಂದು ಹೊರಟ ಗಂಡನು ಹಗಲೆಲ್ಲಾ ಕಾಡಿನಲ್ಲಿ ಅಡ್ಡಾಡಿ ಕತ್ತಲಾದಂತೆ ಹಟ್ಟಿಗೆ ಬರುತ್ತಾನೆ. ಬಂದು ನೋಡಿದರೆ ಜನರ ಅನುಮಾನ ನಿಜವಾಗಿರುತ್ತದೆ. ಹೆಂಡತಿ ಆಕೆಯ ಪ್ರೇಮಿಯೊಂದಿಗೆ ಮಗ್ನಳಾಗಿರುತ್ತಾಳೆ. ಇದನ್ನು ಸಹಿಸದ ಆತ ಅವರನ್ನು ಚೆನ್ನಾಗಿ ಹೊಡೆಯುತ್ತಾನೆ. ಇಬ್ಬರ ಮೈಯಿಂದಲೂ ರಕ್ತ ಚಿಮ್ಮುತ್ತದೆ. ಆದರೂ ಆತನ ಸಿಟ್ಟು ತಗ್ಗುವುದಿಲ್ಲ. ಹೊಡೆಯುತ್ತಲೇ ಹೋಗುತ್ತಾನೆ. ತುಸು ಹೊತ್ತಿಗೆ ಇಬ್ಬರೂ ಸಾಯುತ್ತಾರೆ. ರಕ್ತವು ಕಾಲುವೆಯಂತೆ ಹರಿಯುತ್ತದೆ. ಹರಿಯುತ್ತಾ ಹೋಗಿ ಒಂದೆಡೆ ನಿಂತು ನೆಲದಲ್ಲಿ ಇಂಗುತ್ತದೆ.

ಸ್ವಲ್ಪ ದಿನಗಳಲ್ಲಿ ಆ ರಕ್ತ ಇಂಗಿದ ಮಣ್ಣೊಳಗಿಂದ ಬೀಜವೊಂದು ಮೊಳೆಯುತ್ತದೆ, ಚಿಗುರಿ ಎರಡೆಲೆಯಿಕ್ಕುತ್ತದೆ. ಎದೆಯೆತ್ತರ ಬೆಳೆದು ನಿಲ್ಲುತ್ತದೆ. ಬೆಳೆದು ಗೊಂಚಲು-ಗೊಂಚಲು ಹೂ ಬಿರಿಸುತ್ತದೆ. ಆ ಹೂವುಗಳಾದರೋ ರಕ್ತಗೆಂಪು, ಬೆಂಕಿಯ ಜ್ವಾಲೆಯಂತೆ ನಿಗಿ-ನಿಗಿ. ಆ ಮರವೇ ಮುತ್ತುಗ, ಆ ಹೂವೇ ಮುತ್ತಗದೂವು. ಹೀಗೆ ಹುಟ್ಟಿದ ಆ ಮರ ಅಲ್ಲಿ ಪೂಜನೀಯ ಮತ್ತು ಜನಪ್ರಿಯ.
ಉತ್ತರ ಭಾರತದ ಆ ಆದಿವಾಸಿ ಜನಗಳಿಗಷ್ಟೇ ಅಲ್ಲ, ದಕ್ಷಿಣ ಭಾರತದ, ಕನ್ನಡ ನಾಡಿನ ಸಣ್ಣ ಹಳ್ಳಿಯಲ್ಲೂ ಮುತ್ತುಗ ಚಿರಪರಿಚಿತ. ಹಾಗೆಂದು ಈ ಮರ ಬೆಲೆ ಬಾಳುವ ಮರಮುಟ್ಟು ನೀಡುವುದಿಲ್ಲ, ಚೆಂದದ ಗೊಂಬೆಗಳನ್ನು ಮಾಡುವಷ್ಟು ಮೃದುವಲ್ಲ, ರುಚಿಕರ ಹಣ್ಣನ್ನೂ ಬಿಡುವುದಿಲ್ಲ, ವಿಶೇಷ ಔಷಧಿ ಗುಣಗಳನ್ನೂ ಹೊಂದಿಲ್ಲ. ಪೂಜನೀಯವೂ ಅಲ್ಲ. ಹೂವಿಗೆ ಹೇಳಿಕೊಳ್ಳುವಂತಹ ಮಧುರ ಸುವಾಸನೆಯೂ ಇಲ್ಲ.
ಆದರೂ ಗ್ರಾಮೀಣ ಜನರ ಬದುಕಿನಲ್ಲಿ ಇದಕ್ಕೊಂದು ವಿಶಿಷ್ಟ ಸ್ಥಾನವಿದೆ. ನಮ್ಮೂರಿನಲ್ಲಂತೂ ಕೃಷಿ ಭವಿಷ್ಯ ಹೇಳುವ ಕಣಿಕಾರನಾಗಿ, ಹೆಣ್ಣು ಮಕ್ಕಳ ಸಂತೆ ಖರ್ಚಿನ ಗೃಹೋದ್ದಿಮೆಗೆ ಕಚ್ಚಾ ಪದಾರ್ಥವಾಗಿ, ಹರೇದ ಹುಡುಗಿಯರ ಕದಿರೆ ಹುಣ್ಣಿಮೆ ರಂಗೋಲಿಗೆ ಬಣ್ಣವಾಗಿ, ಉಣ್ಣಲು ಇಸ್ತ್ರಿದೆಲೆಯಾಗಿ ನಿತ್ಯೋಪಯೋಗಿಯಾಗಿದೆ.
ಕೆಲವು ಹಳ್ಳಿಗಳಲ್ಲಿ ಮುತ್ತುಗವನ್ನು ಗಿಡ-ಮರಗಳಲ್ಲಿಯೇ ಅತ್ಯಂತ ಹಿರಿಯದು ಎಂದು ನಂಬುತ್ತಾರೆ. ಅದಕ್ಕಾಗಿಯೇ ‘ಮುದುಕದ ಮರ’ ಎಂದು ಕರೆಯುವುದು ವಾಡಿಕೆ. ಅದರ ಕಾಂಡದ ಗಡುಸುತನ, ನಾರಿನಂಶ ಹಾಗೂ ತಿರುಪಿಗೊಂಡಿರುವ ಗುಣವೂ ಈ ರೀತಿ ಕರೆಯಲು ಕಾರಣವಿರಬಹುದು, ಅಥವಾ ಮುತ್ತುಗ ಎಂಬುದೇ ಆಡುಮಾತಿನಲ್ಲಿ ಮುದುಕ ಆಗಿರಬಹುದು.
ಇದು ಕೃಷಿಕರಿಗೆ ಹವಾಮಾನ ಮುನ್ಸೂಚನೆ ನೀಡುವ ಕಣಿಕಾರನ ಪಾತ್ರ ನಿರ್ವಹಿಸುತ್ತದೆ ಎಂಬುದು ಕುತೂಹಲಕರ. ಮಾರ್ಚ್ ತಿಂಗಳಲ್ಲಿ-ಅಂದರೆ ಮುಂಗಾರಿನ ಮುನ್ನ- ಮುತ್ತುಗವು ಕಾಯಿ ಬಿಡುತ್ತದೆ. ಚೆನ್ನಾಗಿ ಹೂ ಕಾಯ್ದು ಕಾಯಿಗಳು ಗುತಿಗುತಿಯಾಗಿ ಜೋತಿಡಿದರೆ ಆ ವರ್ಷ ಹಿಂಗಾರು ಮತ್ತು ಮುಂಗಾರು ಎರಡೂ ಸಹ ಸಮೃದ್ಧವಾಗಿರುತ್ತದೆ ಎಂಬುದು ರೈತರ ನಂಬಿಕೆ. ಇದನ್ನು ಹಿರಿಯರು ಮರದ ಬಳಿ ಹೋಗಿ, ಅದರ ಸುತ್ತಲೂ ಅಡ್ಡಾಡಿ ಗಮನಿಸುತ್ತಾರೆ. ಇಡೀ ಮರದಲ್ಲಿ ಅಲ್ಲೊಂದು-ಇಲ್ಲೊಂದು ಕಾಯಿಗಳಿದ್ದರೆ “ಈ ವರಸ ಜೀವಣಾಂಶ ಯೆಕ್ಕಾಸ ಕಣ್ರಪ್ಪೋ, ಇರೋದ್ರಗೆ ಚುನಾಯಿಸ್ಕಬೇಕು, ಕಾಳು ಕಡಿ ಜ್ವಾಪಾನ” ಎಂದು ಮನೆಯಲ್ಲಿ ಮಾತಾಡಿಕೊಳ್ಳುವುದನ್ನು ಕೇಳಿದ್ದೇನೆ.
ಇನ್ನು, ಮುತ್ತುಗದ ಕಾಯಿಯೊಳಗಿನ ಬೀಜವೂ ಮುಂಬರುವ ಕೃಷಿ ಏರು-ಪೇರಿನ ಮುನ್ಸೂಚಕವಾಗಿದ್ದವು. ಅದೂ ಒಂದು ಸೋಜಿಗ.
ಮುತ್ತುಗದ ಕಾಯಿ ಚಪ್ಪಟೆಯಾಕಾರದಲ್ಲಿ ಇರುತ್ತದೆ, ಅದರೊಳಗೆ ರುಪಾಯಿ ನಾಣ್ಯದಷ್ಟು ಅಗಲದ, ವೃತ್ತಾಕಾರದ, ಹೊಂಗೆ ಬೀಜವನ್ನು ಹೋಲುವ ಚಪ್ಪಟೆ ಬೀಜ. ಒಂದು ಕಾಯಿಗೆ ಒಂದೇ ಬೀಜ ಇರುತ್ತದೆ. ಆ ಬೀಜವು ಕಾಯಿಯ ಒಳಗೆ ಯಾವ ಭಾಗದಲ್ಲಿದೆ ಎಂಬುದನ್ನೂ ಹಿರಿಯರು ಗಮನಿಸುತ್ತಿದ್ದರು. ಒಂದಷ್ಟು ಬಲಿತ ಕಾಯಿಗಳನ್ನು ಕಿತ್ತು ಕೈಬೆರಳಿನಿಂದ ಅಳತೆ ಹಾಕಿ ನಿರ್ಧಾರ ಮಾಡುವುದು ವಾಡಿಕೆ. ಅದರ ಲೆಕ್ಕಾಚಾರ ಹೀಗಿರುತ್ತದೆ;
ಒಂದು ವೇಳೆ ಬೀಜವು ಕಾಯಿಯ ತೊಟ್ಟಿನ ಭಾಗದಲ್ಲಿದ್ದರೆ ಆ ವರ್ಷದಲ್ಲಿ ಹಿಂಗಾರು ಬೆಳೆ ಚೆನ್ನಾಗಿರುತ್ತದೆಯೆಂದೂ, ತುದಿಯ ಭಾಗದಲ್ಲಿದ್ದರೆ ಮುಂಗಾರು ಬೆಳೆ ಉತ್ತಮವೆಂದೂ, ಸರಿಯಾಗಿ ಕಾಯಿಯ ನಡೂಮದ್ಯ ಇದ್ದರೆ ಹಿಂಗಾರು-ಮುಂಗಾರುಗಳೆರಡೂ ಸಮೃದ್ಧವೆಂದೂ ರೈತರ ನಂಬಿಕೆ. ಇದೆಲ್ಲಾ ನೂರಾರು ವರ್ಷ ಮುತ್ತುಗದೊಂದಿಗೆ ಒಡನಾಡಿ ನಮ್ಮ ಜನಪದರು ಕಂಡುಕೊಂಡ ಅನುಭವ.

ಪ್ರತಿದಿನವೂ ದನಮೇಯಿಸಲು ಗಿಡಕ್ಕೆ ಹೋಗುತ್ತಿದ್ದ ನಮ್ಮೂರ ನಾಗರಪ್ಪ ಈ ಮುತ್ತುಗ ಸಂದೇಶವನ್ನು ಹೊತ್ತು ತರುತ್ತಿದ್ದ. ಸಂಜೆ ಹಿಟ್ಟುಂಡು ಎಲ್ಲರೂ ರಾಮದೇವರ ಗುಡೀತಾವ ಸೇರುತ್ತಿದ್ದರು. ಆಗ ನಾಗರಪ್ಪ ತಾನು ಕಂಡದ್ದನ್ನು ಈತರಕೀತರ ಎಂದು ವಿವರಿಸುತ್ತಿದ್ದ. ಕೆಲವರು ತಂತಮ್ಮ ಹೊಲಗಳ ಬಳಿ ಕಂಡ ಮುತ್ತುಗದ ಕಾಯಿ ವಿಚಾರವನ್ನೂ ಹಂಚಿಕೊಳ್ಳುತ್ತಿದ್ದರು. ಒಮ್ಮೆ ಹೀಗೆ ಚರ್ಚೆ ಆಗುತ್ತಿರಬೇಕಾದರೆ ಅಲ್ಲೇ ಅಡ್ಡಾಡಿಕೊಂಡಿದ್ದ ರಾಮಂಜಿಎಂಬ ಯುವಕ “ಗಿಡ-ಪಡ ನೋಡಿ ಯವಸಾಯ ಮಾಡೋವತ್ಗೇ ನಮ್ ದೇಶ ಇಂಗಿರದು” ಎಂದುಬಿಟ್ಟ. ಜತೆಗಿದ್ದ ಗೆಳೆಯರು ಪಕಾರನೆ ನಗಾಡಿದರು. ಹಿರೇರಿಗೆ ರೇಗಿ ಹೋಯಿತು. ಯಜಮಾನ್ ಅಕ್ಕಪ್ಪ “ಇಂತಾ ತಲಿಗೆ ಮಾಸಿದ ಮಾತಾಡು ಅಂದ್ರೆ ನಿನ್ನನ್ನ ಬಿಟ್ರೆ ಸಿಕ್ಕಲ್ವಲೇ” ಎಂದು ಉಗಿದರು. ಅಷ್ಟಕ್ಕೇ ಸುಮ್ಮನಾಗದೆ “ತಗಾ ಅಂದ್ರೆ ಪ್ಯಾಟೆ ಕಡೆ ತಿರುಗ್ತಿಯಲ್ಲ ನೀನು ಮಾಡು ಮತಿಗ ಉದ್ಧಾರ” ಎಂದು ಚಾಲೆಂಜ್ ಹಾಕಿದರು. ಗುಡಿಯ ಮುಂದೆಯೇ ಮನೆಯಿದ್ದ ದೊಡ್ಡಕ್ಕಮ್ಮ “ಮುತ್ತುಗದ ಮರ ನೋಡಿ ಯವಸಾಯ ಮಾಡೋವಾಗ್ಲೇ ಸೆಂದಕಿತ್ತು ಕಣಮಾಮ ನಮ್ ಬಾಳ್ವೆ, ಈಗ ಅಸಗೆಟ್ಟೈತೆ” ಎಂದು ದನಿ ಸೇರಿಸಿತು. ಯುವ ಪಡೆ ಅಂಗೇ ಸರಿದು ಮರೆಯಾಯಿತು ಎಂದು ಬೇರೆ ಹೇಳಬೇಕಿಲ್ಲ.
ಮುತ್ತುಗದ ಎಲೆಗಳನ್ನು ಪೋಣಿಸಿ ಊಟದ ಎಲೆಗಳನ್ನಾಗಿ ಮಾರಿ ಬದುಕು ಸಾಗಿಸುವ ನೂರಾರು ಕುಟುಂಬಗಳೇ ನಮ್ಮೂರಿನಲ್ಲಿ ಇದ್ದವು. ಇದು ಕೃಷಿಕ ಹೆಣ್ಣುಮಕ್ಕಳ ಉಪಕಸುಬೇ ಆಗಿತ್ತು. ಕೆಲವೇ ವರ್ಷಗಳ ಹಿಂದೆ ಬಹುತೇಕ ಮದುವೆ, ಹರಿಸೇವೆ ಮತ್ತಿತರ ಸಾಮೂಹಿಕ ಕಾರ್ಯಗಳಲ್ಲಿ ಊಟ ಬಡಿಸಲು ಮುತ್ತುಗದ ಎಲೆಗಳೇ ಬಳಕೆಯಲ್ಲಿದ್ದವು.
ಮುತ್ತುಗದ ಎಲೆಗಳು ಮೂರು ಹಾಳೆಗಳ ಸಂಯುಕ್ತ ಮಾದರಿ. ಒಂದೊಂದು ಎಲೆಗಳೂ ಸರಿಸುಮಾರು ಅಂಗೈಯಗಲ ಇರುತ್ತವೆ. ಸೊಂಪಾಗಿ ಬೆಳೆದ ಮರದಲ್ಲಿ ಇನ್ನೂ ಅಗಲ. ಒಂದೇ ಎಲೆಯಲ್ಲಿ ಊಟ ಮಾಡಬಹುದು. ಒರಟು ಮೇಲ್ಮೈ ಇದ್ದು ಸುಲಭವಾಗಿ ಹರಿಯುವುದಿಲ್ಲ. ಹಾಗಾಗಿ ಊಟದೆಲೆ ಮಾಡಲು ಹೇಳಿ ಮಾಡಿಸಿದ್ದು.
ಹೆಣ್ಣು ಮಕ್ಕಳಿಗಂತೂ ಮುತ್ತುಗದೆಲೆ ಹಚ್ಚಿ ಮಾರುವುದು ಸಂತೆ ಖರ್ಚಿಗೆ ನಾಲ್ಕು ಕಾಸಿನ ಮಾರ್ಗ. ಬಿರುಬೇಸಿಗೆಯಾದ ಮಾರ್ಚ್-ಏಪ್ರಿಲ್‌ನಲ್ಲಿ ಯಾವುದೇ ಆರಂಬದ ಕೆಲಸಗಳಿರುವುದಿಲ್ಲ, ಕೂಲಿಯೂ ಇರುವುದಿಲ್ಲ. ಆಗ ಇಡೀ ದಿವಸ ಚಟುವಟಿಕೆಯಿಂದಿರುವುದಕ್ಕೆ, ಸಣ್ಣ-ಪುಟ್ಟ ಖರ್ಚು ನಿಭಾಯಿಸಲು ಮುತ್ತುಗದ ಎಲೆಗಳೇ ಆಧಾರ.
ಹೊತ್ತು ಹುಟ್ಟುವ ಮೊದಲೇ ಹೆಣ್ಣುಮಕ್ಕಳು ಗುಂಪು-ಗುಂಪಾಗಿ ಮುತ್ತುಗದೆಲೆ ಕಿತ್ತು ತರಲು ಹೊರಟುಬಿಡುತ್ತಿದ್ದರು. ಹೆಗಲಲ್ಲೊಂದು ಗೋಣಿ ಚೀಲ, ಸೊಂಟದಲ್ಲೊಂದು ಎಲೆಯಡಿಕೆ ಚೀಲ. ಮುತ್ತುಗದ ಗಿಡಗಳು ಹೆಚ್ಚಾಗಿ ಇರುವ ನಮ್ಮೂರಿನ ಕಾಸಿ ಬೀಳು, ಹೆರಳ್ಳ, ಸಣ್ಣಗಣಿಮೆ, ಉಸ್ಕೋಲು ಗುಟ್ಟೆ, ಗೊಲ್ಲರಹಟ್ಟಿಯ ಪೌಳಿ ಬಯಲು, ದೊಡ್ಡಕೆರೆ ಹಳ್ಳದ ಸಾಲುಗಳೇ ಮುಂತಾದ ಕಡೆ ಅವರ ಸುತ್ತಾಟ.
ಚೆನ್ನಾಗಿ ಬಲಿತ ಎಲೆಗಳನ್ನು ಕಿತ್ತುಕೊಂಡು ಹೆಣ್ಣು ಮಕ್ಕಳು ಉಂಬೋ ಹೊತ್ತಿಗೆ-ಹನ್ನೊಂದು ಗಂಟೆ ಸುಮಾರು-ವಾಪಸು ಬರುತ್ತಿದ್ದರು. ಬಂದವರೇ ಹಿಟ್ಟುಂಡು ತಂದ ಎಲೆಗಳನ್ನೆಲ್ಲಾ ಟೈನ್ ದಾರಕ್ಕೆ ಪೋಣಿಸಿ ಸರ ಮಾಡಿ ಮಾಳಿಗೆ ಮೇಲೆ ಒಣಗಲು ಹಾಕುವುದು ರೂಢಿ. ಸಂಜೆಯ ನಂತರ ಹಿಂದಿನ ದಿನ ತಂದ ಅಥವಾ ಚೆನ್ನಾಗಿ ಒಣಗಿದ ಸರಗಳನ್ನು ಮಾಳಿಗೆಯಿಂದ ಇಳಿಸಿ, ನೀರಲ್ಲಿ ನೆನೆಸಿ ಊಟದೆಲೆ ಹಚ್ಚಲು ಪ್ರಾರಂಭ.
ಒಂದು ಅಗಲವಾದ ಎಲೆಯನ್ನು ಮಧ್ಯದಲ್ಲಿ ಇಟ್ಟು ಅದರ ಸುತ್ತಲೂ ಚಿಕ್ಕ-ಪುಟ್ಟ ಎಲೆಗಳನ್ನು ಸೇರಿಸಿ ಸುಮಾರು ಒಂದಿAಚು ಉದ್ದದ ಕಡ್ಡಿಗಳಿಂದ ಹೊಲಿಯುತ್ತಾ ಹೋದರೆ ವೃತ್ತಾಕಾರದ ಊಟದೆಲೆ ತಯಾರು. ಒಂದು ಊಟದೆಲೆ ತಯಾರಿಸಲು ಸುಮಾರು ಐದು ಎಲೆಗಳು ಬೇಕು.
ಹೊಲಿಯಲು ಬೇಕಾದ ಕಡ್ಡಿಗಳನ್ನು ಜೋಳದ ದಂಟಿನಿAದ ಸೀಳಿ ತೆಗೆಯುತ್ತಾರೆ. ದಂಟಿನ ಮೇಲಿರುವ ಸಿಪ್ಪೆಯಂತಹ ಭಾಗವನ್ನು ಎಬ್ಬಿಕೊಂಡು ಕುಡುಗೋಲು ಅಥವಾ ತುರೆಮಣೆಯಲ್ಲಿ ಸಣ್ಣದಾಗಿ ಸೀಳಿದರೆ ಎಲೆ ಹೊಲಿಯುವ ಕಡ್ಡಿ ತಯಾರು. ಜೋಳದ ದಂಟು ಸಿಗದಿದ್ದರೆ ಹಂಚಿಕಡ್ಡಿಯನ್ನೇ ಬಳಸುವುದು ರೂಢಿ. ಹಚ್ಚಿದ ಎಲೆಗಳನ್ನು ಒಂದರ ಮೇಲೊಂದರಂತೆ ಐವತ್ತು ಅಥವಾ ನೂರರ ಪೆಂಡಿ ಜೋಡಿಸಿ, ಒಂದು ದಾರ ಕಟ್ಟಿ ಆ ಪೆಂಡಿಗಳ ಮೇಲೆ ರಾಗಿ ಕಲ್ಲನ್ನೋ ಅಥವಾ ಇನ್ನಾವುದೇ ಭಾರವನ್ನು ಇಡುತ್ತಾರೆ. ಒಂದು ಹಗಲು, ಒಂದು ರಾತ್ರಿ ಭಾರ ಹೇರಿದರೆ ಎಲೆಗಳೆಲ್ಲಾ ಒತ್ತೊತ್ತಾಗಿ ಇಸ್ತ್ರಿ ಮಾಡಿದಂತೆ ಆಗುತ್ತವೆ. ಬಹುಶಃ ಇದಕ್ಕೇ ಇರಬೇಕು ಇಸ್ತ್ರಿ ಎಲೆ ಎಂಬ ಹೆಸರು. ಹೀಗೆ ಭಾರ ಹೇರದಿದ್ದರೆ ಎಲೆಗಳ ಅಂಚು ಮುದುರಿ ಬಳಕೆಗೆ ಯೋಗ್ಯವಾಗುವುದಿಲ್ಲ.

ಬೆಳಿಗ್ಗೆ ಹೊತ್ತು ಹೊಸದಾಗಿ ತಂದ ಹಸಿ ಎಲೆಗಳನ್ನು ಸರ ಮಾಡಿ ಮಾಳಿಗೆಯ ಮೇಲೆ ಅಥವಾ ಮನೆಯ ಮುಂದೆ ಒಣಗಿ ಹಾಕುವುದು, ಹೊತ್ತು ಮುಣಿಕಿದ ನಂತರ ಒಣಗಿದ ಎಲೆಗಳನ್ನು ನೆನೆಸಿಕೊಂಡು ಹಚ್ಚುವುದು ಬೇಸಿಗೆಯ ಮೂರ್ನಾಲ್ಕು ತಿಂಗಳು ನಮ್ಮೂರ ಎಲ್ಲರ ಮನೆಯ ಬಳಿಯೂ ಸಾಮಾನ್ಯ ದೃಶ್ಯ. ವಾರಕ್ಕೊಮ್ಮೆ ಸಂತೆ ದಿನ ಅಥವಾ ಅನುಕೂಲವಾದಾಗ ಹತ್ತಿರದ ಹೊಸಕೆರೆಗೋ, ಮಧುಗಿರಿಗೋ ಹೋಗಿ ಮಾರಾಟ. ಕೆಲವು ಸಲ ಅಂಗಡಿಯವರೇ ಬಂದು ಕೊಳ್ಳುತ್ತಿದ್ದರು. ಎಲೆ ತರುವ, ಹಚ್ಚುವ, ಮಾರುವ ಕ್ರಿಯೆಗಳೆಲ್ಲಾ ಬಹುತೇಕ ಸಾಮೂಹಿಕವಾಗಿ ನಡೆಯುತ್ತಿದ್ದು, ಕಷ್ಟ-ಸುಖ ಮಾತಾಡಿಕೊಳ್ಳುವ ವೇದಿಕೆಯಾಗಿತ್ತು.
ಒಮ್ಮೊಮ್ಮೆ ಎಲೆ ಮಾರಲು ಹತ್ತಿಪ್ಪತ್ತು ಹೆಣ್ಣುಮಕ್ಕಳು ಒಟ್ಟಿಗೇ ಹೊರಟುಬಿಡುತ್ತಿದ್ದರು. ಇದ್ದುದರಲ್ಲೇ ಚೆನ್ನಾದ ಸೀರೆ ಉಟ್ಟುಕೊಂಡು, ಕೆನ್ನೆಗೆ ಅರಿಶಿನ ಹಚ್ಚಿಕೊಂಡು, ತಲೆಯ ಮೇಲೆ ಇಸ್ತ್ರುದೆಲೆ ಪೆಂಡಿಗಳನ್ನು ಹೊತ್ತು ಇರುವೆ ಸಾಲಿನಂತೆ ಹೊರಟರೆ ಆ ಸಂಭ್ರಮ ನೋಡಲು ಎರಡು ಕಣ್ಣೂ ಸಾಲುತ್ತಿರಲಿಲ್ಲ. ಏನ್ ಗಲಾಟೆ, ಏನ್ ಕತೆ. ಗಂಡಸರು ಸುಮ್ಮನೆ ಪೆಕರು-ಪೆಕರಾಗಿ ಅವರ ಆರ್ಭಟವನ್ನು ನೋಡುತ್ತಾ ಕುಳಿತಿರುತ್ತಿದ್ದರು. “ರಪ್ಪನೋಗಿ ಕಣ್ಣಗ್ ಬೆಳಕಿದ್ದಂಗೆ ರ‍್ರಮಣಿ” ಅಂತೇನಾದರೂ ಗಂಡಸರು ಗದರಿಸಿ ಸಲಹೆ ಕೊಡಲಾರಂಭಿಸಿದರೋ ಅವರು ವಾಕ್ಯ ಪೂರ್ಣಗೊಳಿಸಲು ಬಿಡುತ್ತಲೇ ಇರಲಿಲ್ಲ. “ಗೊತ್ತೈತೇಳು, ಕೆಲಸ ಆದ್ಮೇಲೆ ಅಲ್ಲೇನು ಗೆಣಸು ಕೆತ್ತನ” ಅಂತ ಕಡ್ಡಿಮುರಿದಂತೆ ಹೇಳಿಬಿಡುತ್ತಿದ್ದರು. ಎಲೆ ಮಾರಿದ ಕಾಸು ಬರುತ್ತಿದ್ದುದರಿಂದ ಕೆಲವು ಗಂಡಸರು ಖುಷಿಯಾಗೇ ಕಳಿಸುತ್ತಿದ್ದರು. ಆಗ ಹೆಣ್ಣುಮಕ್ಕಳೂ ಖುಷಿಯಾಗಿ “ಅಂಗ್‌ಕಣ್ ಮಾಮ, ಇಂಗ್‌ಕಣ್ ಮಾಮ” ಅಂತಾ ಮಾತಿನಲ್ಲೇ ಮುದ್ದು ಮಾಡಿ ಹೊರಡುತ್ತಿದ್ದರು. ಅಂತೂ ಅದೊಂದು ಸಡಗರದ ದೃಶ್ಯ. ಮುತ್ತುಗದೆಲೆಯ ಮಾರಾಟದಿಂದ ಬರುವ ಪುಟ್ಟ ಹಣ ಅವರಲ್ಲಿ ಆತ್ಮವಿಶ್ವಾಸ ತರುತ್ತಿತ್ತು.
ನಮ್ಮ ಹೊಲದ ಪಕ್ಕದಲ್ಲಿ ಒಂದು ಹಳ್ಳ ಹರಿಯುತ್ತಿತ್ತು. ಒಂದು ಕಡೆ ಬೃಹತ್ ಬಂಡೆಯೊAದು ವಾಲಿಕೊಂಡಿದ್ದು ಅದರ ಕೆಳಗಾಸಿ ಹಳ್ಳದ ನೀರು ಹರಿದು ಸಣ್ಣ ಚಿಲುಮೆ ಆಗಿತ್ತು. ಅಲ್ಲಿ ವರ್ಷಪೂರ್ತಿ ನೀರಿನ ಸೆಲೆ ಬತ್ತಿದ್ದೇ ಇಲ್ಲ. ಎಂಥಾ ಬಿಸಿಲಿದ್ದರೂ ಅಲ್ಲಿನ ನೀರು ಥಣ್ಣಗೆ ಕೊರೆಯುತ್ತಿತ್ತು. ಸುತ್ತ-ಮುತ್ತ ಕೆಲಸ ಮಾಡುವವರು, ಜೀವದನ ಮೇಯಿಸುವರು ನೀರು ಕುಡಿಯಲು ಅಲ್ಲಿಗೆ ಬರುತ್ತಿದ್ದರು. ಪಕ್ಕದಲ್ಲಿಯೇ ಒಂದು ಸುಮಾರಾದ ಮುತ್ತುಗದ ಮರ ಇತ್ತು. ಬಂದವರೆಲ್ಲಾ ಅದರ ಒಂದೆಲೆ ಕಿತ್ತುಕೊಂಡು ಪೊಟ್ಟಣದಂತೆ ಸುತ್ತಿ ಲೋಟದಂತೆ ಮಾಡಿಕೊಂಡು ನೀರು ಕುಡಿಯುತ್ತಿದ್ದರು. ಬೊಗಸೆಯಲ್ಲಿ ಅಥವಾ ಚಿಲುಮೆಗೇ ಬಾಯಿಟ್ಟು ಕುಡಿದರೆ ಎಂಜಲಾಗುತ್ತದಲ್ಲ, ಅದನ್ನು ಈ ಮುತ್ತುಗದ ಮರ ತಪ್ಪಿಸಿತ್ತು. ಆ ಚಿಲುಮೆಯೂ, ಆ ಮರವೂ ಬಹುಕಾಲ ಅಣ್ಣ-ತಮ್ಮಂದಿರಂತೆ ಇದ್ದವು.
ಇನ್ನು ನಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಮದ್ಯಾಹ್ನ ತಂಗಳು ಉಣ್ಣಲು ಮುತ್ತುಗದ ಎಲೆಗಳೇ ಆಧಾರ. ಹಂಗೆ ಹೋಗಿ ಹಿಂಗೆ ಕಿತ್ತು ತಂದು, ಅದರಲ್ಲೇ ಉಂಡು, ಹಾಗೇ ಎಸೆದರೆ ಅಲ್ಲೇ ಕೊಳೆತು ಗೊಬ್ಬರವಾಗುತ್ತಿತ್ತು.
ಸುಗ್ಗಿ ಕಾಲದಲ್ಲಿ ನಾವು ರಾಗಿ, ಭತ್ತದ ಒಕ್ಕಣೆ ಮಾಡುವಾಗ ಈ ಮರವೂ ಹೂ ಬಿಡುತ್ತಿತ್ತು. ಹಾಗಾಗಿ ರಾಶಿ ಪೂಜೆಗೆ, ಕಣದ ಪೂಜೆಗೆ ಇದರ ಹೂವನ್ನೇ ಬಳಸುತ್ತಿದ್ದೆವು. ಆದರೆ ದೇವರಿಗೆ ಇಡುತ್ತಿರಲಿಲ್ಲ. ಕದಿರೆ ಹುಣ್ಣೇವು (ಹೋಳಿ ಹುಣ್ಣಿಮೆ) ಬಂತೆಂದರೆ ನಮ್ಮೂರ ಯುವತಿಯರಿಗೆ ಕೈತುಂಬಾ ಕೆಲಸ, ಮೈತುಂಬಾ ಪುಳಕ. ಚಂದ್ರಾಮನನ್ನು ಬರೆಯುವುದು, ಹಾಡು ಹೇಳುವುದು, ಹೊಸಾ ಬಟ್ಟೆ ಉಟ್ಟು ಸರ-ಭರ ನಡೆದಾಡುವುದು, ನಗಸಾರ ಮಾಡುವುದು ಇತ್ಯಾದಿ ಹತ್ತಾರು ಚಟುವಟಿಕೆಗಳಿಂದ ಹಳ್ಳಿ ತುಂಬಿ ತುಳುಕುತ್ತಿತ್ತು. ಕೆಲವೊಮ್ಮೆ ಬಣ್ಣದ ನೀರು ಮಾಡಿ ಪರಸ್ಪರ ಉಗ್ಗುತ್ತಿದ್ದರು. ಮುತ್ತುಗದ ಹೂವುಗಳನ್ನು ಮೊದಲೇ ಒಣಗಿಸಿ ಇಟ್ಟುಕೊಂಡು ಬಣ್ಣ ತಯಾರಿಕೆಗೆ ಬಳಸುತ್ತಿದ್ದುದು ವಾಡಿಕೆ. ಉತ್ತರ ಕರ್ನಾಟಕದ ಹಲವೆಡೆ ಹೋಳಿ ಹಬ್ಬಕ್ಕೆ ಮುತ್ತುಗದ ಹೂವು ಮತ್ತು ಕಾಂಡವನ್ನು ನೆನೆಹಾಕಿ ರಂಗು ತಯಾರಿಸಿಕೊಳ್ಳುತ್ತಾರೆಂದು ಕೇಳಿದ್ದೇನೆ.
ಹೀಗೆ ನಮ್ಮೂರ ಬದುಕು ಒಂದಲ್ಲಾ ಒಂದು ತರದಲ್ಲಿ ಮುತ್ತುಗದೊಂದಿಗೆ ಬೆಸೆದುಕೊಂಡಿತ್ತು.
ಮುತ್ತುಗವು ಭಾರತ ಸಂಜಾತ ಎನ್ನುತ್ತಾರೆ ಸಸ್ಯಶಾಸ್ತ್ರಜ್ಞರು. ಈ ಮರಕ್ಕೆ ಸಂಸ್ಕೃತದಲ್ಲಿ ಪಲಾಶ, ತೆಲುಗಿನಲ್ಲಿ ಮೋದುಗ, ತಮಿಳಿನಲ್ಲಿ ಕಾಟ್ಟು ಮುರುಗ, ಮಲಯಾಳಂನಲ್ಲಿ ಮುರಿಕು ಎಂದು ಕರೆಯುತ್ತಾರೆ. ವೈಜ್ಞಾನಿಕ ಹೆಸರು ಬ್ಯುಟಿಯಾ ಮಾನೊಸ್ಪರ್ಮ. ¥s಼ೆಬೇಸಿಯೆ ಕುಟುಂಬ. ಹೂಬಿಟ್ಟಾಗ ಮುತ್ತುಗದ ಮರವನ್ನು ಪಕ್ಕನೆ ನೋಡಿದರೆ ಬೆಂಕಿಯ ಜ್ವಾಲೆಗಳು ಪ್ರಜ್ವಲಿಸಿದಂತೆ ಕಾಣುತ್ತದೆ. ಹಾಗಾಗಿಯೇ ‘ಕಾಡಿನ ಬೆಂಕಿ’ ಎಂಬ ಹೆಸರೂ ಇದೆ. ಇದರ ಸಾಮಾನ್ಯ ಹೆಸರೇ Flame of the forest.
ಹೂವುಗಳ ರಚನೆ ಆಕರ್ಷಕ. ಗಿಣಿ ಮೂತಿಯಂತೆಯೂ, ದೋಣಿಯಂತೆಯೂ ಕಾಣುವುದುಂಟು. ಐದು ಪುಷ್ಪ ಪತ್ರಗಳೂ, ಐದು ದಳಗಳೂ ಇರುತ್ತವೆ. ತನ್ನ ಕೆಂಪಾನೆ ಕೆಂಪು ಬಣ್ಣದಿಂದಾಗಿ ಪದೇ-ಪದೇ ನೋಡಿಸಿಕೊಳ್ಳುವ ಆಕರ್ಷಣೆ ಮುತ್ತುಗದ ಹೂವುಗಳಿದೆ. ಛಾಯಾಗ್ರಾಹಕರಿಗೆ ಅಚ್ಚು-ಮೆಚ್ಚು. ಹಾಗೆಯೇ ಹಕ್ಕಿ-ಪಕ್ಷಿಗಳಿಗೂ ಬಲು ಪ್ರೀತಿ. ನೀವು ಪೂರ್ತಿ ಹೂಕಚ್ಚಿದ ಮರದ ಬಳಿ ಹೋಗಿ ಕ್ಷಣಕಾಲ ನಿಂತುಕೊಳ್ಳಿ. ಕಿಯೋ ಪಿಯೋ ಎಂಬ ಹಕ್ಕಿಗಳ ಕೂಗೂ, ಜೊಂಯೋ ಎಂಬ ಜೇನು-ಕಡಜಗಳ ಸದ್ದೂ ಕಿವಿಗೆ ಬೀಳುತ್ತದೆ. ಮರದ ಕಾಂಡವನ್ನು ದಿಟ್ಟಿಸಿ ನೋಡಿ. ಇರುವೆ, ಕೆಂಜಗವೇ ಮುಂತಾದ ಕ್ರಿಮಿ-ಕೀಟಗಳ ಸಾಲು ಮೇಲಕ್ಕತ್ತುತ್ತಾ, ಕೆಳಕ್ಕಿಳಿಯುತ್ತಾ ಕವಾಯತು ಮಾಡುತ್ತಿರುತ್ತವೆ. ಅಪರೂಪಕ್ಕೆ ಅಳಿಲುಗಳೂ ಸೈತ ಗೆಸ್ಟ್ ಅಪಿಯರೆನ್ಸ್ ಕೊಡುವುದುಂಟು.
ಹೀಗೆ ರೈತಾಪಿಗಳಿಗೂ, ಹೆಣ್ಣು ಮಕ್ಕಳಿಗೂ, ಪ್ರಕೃತಿಯಲ್ಲಿನ ಸಕಲೆಂಟು ಜೀವಿಗಳಿಗೂ ಬೇಕಾದ ಮುತ್ತುಗದತ್ತ ನಮ್ಮ ಕನ್ನಡದ ಕವಿಗಳು ಅಷ್ಟಾಗಿ ಗಮನಹರಿಸಿಲ್ಲ ಎಂಬುದು ನನ್ನ ಓದಿನ ಮಿತಿಯ ತಿಳವಳಿಕೆ. ಅವರು ಮಲ್ಲಿಗೆ, ಗುಲಾಬಿ, ತಾವರೆ, ಸಂಪಿಗೆ, ಪಾರಿಜಾತ ಹೂವುಗಳನ್ನು ಮನುಷ್ಯರ ಅವಯವಗಳ ಹೋಲಿಕೆಗೆ ಬಳಸಿದಷ್ಟು ಇದನ್ನು ಬಳಸಿಲ್ಲ. ಕೆಲವರು ತಮ್ಮ ಪುಸ್ತಕಕ್ಕೋ, ಕವನ ಸಂಕಲನಕ್ಕೋ ಮುತ್ತುಗದ ಹೆಸರಿಟ್ಟಿದ್ದಾರಷ್ಟೆ. ಆದರೆ ಬಂಗಾಳಿ ಕವಿ ರವೀಂದ್ರನಾಥ ಠಾಗೋರರಿಗೆ ಈ ಹೂವು ಅಚ್ಚು-ಮೆಚ್ಚಂತೆ. ಅವರ ಶಾಂತಿನಿಕೇತನದಲ್ಲಿ ನಡೆಯುವ ಚಳಿಗಾಲದ ಉತ್ಸವದಲ್ಲಿ ಮುತ್ತುಗದ ಹೂವಿಗೆ ವಿಶೇಷ ಆದ್ಯತೆ. ಅದನ್ನು ನೋಡಲಿಕ್ಕಾದರೂ ಒಮ್ಮೆ ಅಲ್ಲಿಗೆ ಹೋಗಬೇಕು.

ಮುತ್ತುಗವು ಆದಿವಾಸಿ ಪ್ರೇಮಿಗಳ ರಕ್ತದಿಂದ ಹುಟ್ಟಿದ್ದು ಎಂದು ಆರಂಭದಲ್ಲಿ ಹೇಳಿದೆನಲ್ಲ. ಆ ಕಥೆಯು ಆದಿವಾಸಿಗಳೇ ಹೆಚ್ಚಿರುವ ಜಾರ್ಖಂಡ್‌ನಲ್ಲಿ ನಡೆದಿರಬಹುದು ಎಂಬ ಅನುಮಾನ ನನಗೆ. ಯಾಕೆಂದರೆ ಮುತ್ತುಗದ ಹೂವು ಅಲ್ಲಿ ‘ರಾಜ್ಯ ಹೂವಿ’ನ ಗೌರವಕ್ಕೆ ಪಾತ್ರವಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಇದರ ಹೂವನ್ನು ಅಗ್ನಿದೇವನೆಂದು ಕರೆಯಲಾಗುತ್ತದೆ. ಶಿವರಾತ್ರಿಯಂದು ಇಲ್ಲಿ ಮುತ್ತುಗದ ಹೂವು ವ್ಯಾಪಕವಾಗಿ ಬಳಕೆಯಲ್ಲಿರುವುದು ವಿಶೇಷ. ದೇಶದ ಹಲವೆಡೆ ಇದರ ಸಣ್ಣ ಕೊಂಬೆಗಳನ್ನು ದರ್ಬೆ, ಅರಳಿ ಇತ್ಯಾದಿಗಳ ಜೊತೆಗೆ ಹೋಮ ಆಚರಣೆಯಲ್ಲಿ ಬಳಸಲಾಗುತ್ತದೆ.
ಮುತ್ತುಗದ ಮೂಲ ಭಾರತ ಎಂದೆನಲ್ಲವೇ. ಆದರೆ ನಮ್ಮ ಯಾವ ನಗರಗಳಲ್ಲೂ ರಸ್ತೆ ಬದಿ ಮರವನ್ನಾಗಿ ಇದನ್ನು ಬೆಳೆಸಿರುವುದು ಕಾಣೆ. ಅಚ್ಚರಿಯೆಂಬಂತೆ ಥಾಯ್ಲೆಂಡ್ ದೇಶದಲ್ಲಿ ಬೆಳೆಸಿದ್ದಾರೆ. ಅಲ್ಲಿನ ಚಿಯಾಂಗ್‌ಮೈ ನಗರದ ಹಲವು ರಸ್ತೆಗಳ ಆಸು-ಪಾಸು ಮುತ್ತುಗ ಹೂಬಿಟ್ಟು ನಿಂತುದನ್ನು ಇತ್ತೀಚಿನ ಪ್ರವಾಸದಲ್ಲಿ ಕಂಡೆ. ಮುತ್ತುಗವಷ್ಟೇ ಅಲ್ಲ, ಹುಣಸೆಗಿಡವೂ ಅಲ್ಲಿನ ಬ್ಯಾಂಕಾಕ್ ನಗರದ ರಾಜಮಾರ್ಗದಲ್ಲಿ ರಸ್ತೆ ಬದಿ ಗಿಡವಾಗಿದೆ.
ನಮ್ಮಲ್ಲಿ ಮುತ್ತುಗದ ಸಂರಕ್ಷಣೆಗೆ ವಿಶೇಷ ಮುತುವರ್ಜಿಯಾಗಲೀ, ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಇದರ ವೈಶಿಷ್ಟ್ಯವನ್ನು ತಿಳಿಸುವುದಾಗಲೀ ನಡೆಯುತ್ತಿಲ್ಲ. ಯಾವುದೇ ವಾಣಿಜ್ಯ ಮಹತ್ವವಿಲ್ಲದ ಈ ಮರದ ಸಂಖ್ಯೆ ದಿನೇ-ದಿನೇ ಕ್ಷೀಣಿಸುತ್ತಿದೆ.
ಅಲ್ಲಿ-ಇಲ್ಲಿನ ಮಾತು ಬಿಡಿ. ನಮ್ಮೂರಲ್ಲೇ ಇಂದು ಕಂಡ ಮುತ್ತುಗದ ಮರಗಳು ನಾಳೆ ಧರೆಗುರುಳಿರುತ್ತವೆ. ಜಮೀನು ಇಂಗಡಿಸುವವರು, ದೊಡ್ಡ ಬದುಗಳನ್ನು ಚಿಕ್ಕದು ಮಾಡುವವರು ಮೊದಲು ಕಡಿಯುವುದೇ ಇವುಗಳನ್ನು. ಗೋಮಾಳ, ಕುರುಚಲು ಕಾಡುಗಳು ವ್ಯವಸಾಯ ಭೂಮಿಗಳಾಗಿ ಅಲ್ಲಿದ್ದ ಮರಗಳೆಲ್ಲಾ ಮಾಯವಾಗಿವೆ.
ಮುತ್ತುಗದ ಕಾಯಿ ನೋಡಿ ವ್ಯವಸಾಯ ಮಾಡುವ ಹಿರಿಯರ ಸಂಖ್ಯೆಯೂ ಕ್ಷೀಣಿಸಿದೆ, ಪ್ಲಾಸ್ಟಿಕ್ ತಟ್ಟೆಗಳು ಬಂದ ಮೇಲೆ ಇಸ್ತ್ರಿ ಎಲೆ ಮೇಲೆ ಉಣ್ಣುವವರೇ ಇಲ್ಲ. ರಾಸಾಯನಿಕಯುಕ್ತ ಬಣ್ಣಗಳು ಯತೇಚ್ಚ ಲಭ್ಯವಿರುವಾಗ ಮುತ್ತುಗದ ಹೂ ಒಣಗಿಸಿಟ್ಟುಕೊಳ್ಳುವ ವ್ಯವಧಾನ ಯುವತಿಯರಲ್ಲಿ ಸಹಜವಾಗಿಯೇ ಕಾಣೆ. ಇನ್ನು ಹಕ್ಕಿ-ಪಕ್ಷಿಗಳು, ಕ್ರಿಮಿ-ಕೀಟಗಳು ಯಾರಿಗೇ ಅಂತ ಹೇಳುತ್ತವೆ.

‍ಲೇಖಕರು avadhi

14 March, 2020

2 Comments

  1. Poorvi

    ಮುತ್ತುಗದ ಮುತ್ತಿನಂತ ಲೇಖನ ಬಹಳವೇ ಇಷ್ಟವಾಯ್ತು . ಬಿ ಜಿ ಎಲ್ ಸ್ವಾಮಿಯವರ ಲೇಖನಗಳಂತೆ ನಿಮ್ಮ ಲೇಖನಗಳು ತಿಳಿಹಾಸ್ಯದ ಮೂಲಕ ಎಲ್ಲ ವಿಷಯಗಳನ್ನು ತಿಳಿಸಿಕೊಡುತ್ತೆ . ನಿಮ್ಮ “ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ” ಪುಸ್ತಕ ಓದಿದ್ದೀನಿ ಅದರ ಬಗ್ಗೆ ನೀವು ಬರೆದಿದ್ದ “ನನಗೆ ಸಿಕ್ಕ ಅಪ್ಪನೇ ಬೇರೆ ತೇಜಸ್ವಿಗೆ ಸಿಕ್ಕ ಅಪ್ಪನೇ ಬೇರೆ ಲೇಖನವನ್ನಂತೂ ಬೇಜಾರಾದಾಗಲೆಲ್ಲ ಓದಿ ಹಗುರಾಗುತ್ತೇನೆ . ಹೀಗೆ ಇನ್ನಷ್ಟು ಮತ್ತಷ್ಟುಮಾಹಿತಿಪೂರ್ಣ ಲೇಖನಗಳನ್ನು ನಿಮ್ಮಿಂದ ನಿರೀಕ್ಷಿಸುವೆ .

  2. Mallikarjuna Hosapalya

    ಧನ್ಯವಾದಗಳು. ನಿಮ್ಮ ಮಾತುಗಳಿಂದ ಸಂತೊಷವೂ, ಸಂಕೊಚವೂ ಆಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading