ಇದು ಎಲ್ಲರ ’ದಶಾವತಾರ’ದ ಕಥೆ

ದಶಾವತಾರದ ಕಥೆ

– ಶ್ರೀನಾಥ್ ಭಲ್ಲೆ

 

೧) ತಾಯೊಬ್ಬಳ ಉದರದಿ ಮೊಳಕೆಯೊಡದ ಸಣ್ಣ ಪ್ರಮಾಣದ ಜೀವಕಣವೊಂದು ದಿನ ದಿನವೂ ಬೆಳೆಯುತ್ತದೆ. ಜೀವನ ಕಣದ ದೇಹ ಹಿರಿದಾದಂತೆಲ್ಲ ಆಕ್ರಮಿಸುವ ಪ್ರದೇಶ ಕೂಡ ಹೆಚ್ಚು ಬೇಕಾಗುತ್ತದೆ, ಅಲ್ಲವೇ? ಹಾಗಾಗಿ ತಾಯಿಯ ಹೊಟ್ಟೆ ಅವಶ್ಯಕತೆಗೆ ತಕ್ಕಂತೆ ಹಿಗ್ಗುತ್ತಾ ಹೋಗಿ ಮಡುವು ದೊಡ್ಡದಾಗುತ್ತದೆ. ವಿಕಸಿತವಾದದ್ದು ಒಂದೆಡೆ ನಿಲ್ಲದೆ ಸಾಗುತ್ತಿರಬೇಕು, ಇಲ್ಲವೇ ಕೂಪ ಮಂಡೂಕವಾಗುತ್ತದೆ. ಹಾಗಾಗಿ, ವಿಕಸಿತಗೊಂಡು ಮಗುವಾದ ಆ ಜೀವಕಣ ಒಂದು ಶುಭವೇಳೆಯಲ್ಲಿ ಉದರವೆಂಬ ಪುಟ್ಟ ಮಡುವಿನಿಂದ ಹೊರಬಂದು ಸಂಸಾರವೆಂಬ ಮಹಾಸಾಗರಕ್ಕೆ ಅಡಿಯಿಟ್ಟು ನಿತ್ಯ ಹೋರಾಟದ ಕೂಪದಲ್ಲಿ ಒಂದಾಗುತ್ತದೆ.
೨) ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಸರಿ, ಉದರದಿ ಜೀವತಳೆದ ಜೀವಕಣ ಮಗುವಾಗಿ ಹೊರಬರುವವರೆಗಿನ ಕ್ರಿಯೆ ಯಾವುದೇ ತಾರತಮ್ಯ’ವಿಲ್ಲದೆ ಒಂದೇ ರೀತಿಯಾಗಿರುತ್ತದೆ. ಆದರೇನು ಸಂಸಾರವೆಂಬುದು ಒಂದು ವಿಸ್ಮಯ. ಎಲ್ಲರೂ ಒಂದು ಗುರಿಗೇ ಕೆಲಸ ಮಾಡಿದರೂ ಫಲಾಫಲಗಳು ಬೇರೆ ಬೇರೆ. ಸುಖ ಮತ್ತು ದು:ಖಗಳ ನಡುವಿನ ತಿಕ್ಕಾಟದ ನಡುವೆ ಜೀವನದಲ್ಲಿ ಸಿಹಿ-ಕಹಿಗಳು ಅನೇಕ. ಇಂತಹ ಪರಿಸ್ಥಿತಿಯಲ್ಲಿ, ದಿನ ದಿನವೂ ಬೆಳೆವ ಕಂದ ಅಂಬೆಗಾಲಿಡುತ್ತ ತನಗೆ ಅರಿವಿಲ್ಲದೆಯೇ ಮುಳುಗುವ ಭರವಸೆಗಳನ್ನು ತನ್ನ ಬೆನ್ನ ಮೇಲೆ ಹೊತ್ತು ನಿಧಾನವಾಗಿ ಸಾಗುವನು ಆ ಬೊಚ್ಚುಬಾಯಿ ಸುಂದರ.
೩) ಹುಟ್ಟಿದ ಕಂದ ಇನ್ನೆಷ್ಟು ದಿನ ಕಂದನಾಗೇ ಇದ್ದಾನು. ಬೆಳೆವ ಮಗುವಿನ ಬೊಚ್ಚು ಇನ್ನೆಷ್ಟು ದಿನ ಹಾಗೆಯೇ ಇದ್ದೀತು, ಅಲ್ಲವೇ? ಸುಂದರ ದಂತ ಪಂಕ್ತಿಗಳೂ ಮೂಡಲು ತೊಡಗಿದಂತೆ ನಾಲ್ಕುಗಾಲಿನ ಅಂಬೆಗಾಲು ತೊರೆದು ಎರಡೂ ಕಾಲುಗಳಲ್ಲಿ ಅಡ್ಡಾದಿಡ್ಡಿ ನೆಡೆದು, ಸಿಕ್ಕಿದ್ದನ್ನೆಲ್ಲ ಬಾಯಿಗಿಟ್ಟುಕೊಂಡು ಅಗಿದುಗಿಯುತ್ತ ನೆಡೆದಾಡುತ್ತಾನೆ ಆ ಕೋರೆಹಲ್ಲ ದಾಸ.
೪) ಆಡಿ ಬಳಲಿ ಉಂಡು ಮಲಗೋ ಕಂದನ ನಿದ್ರೆಯ ಅವಧಿ ಬಲ್ಲವರಾರು? ಕೆಲವೊಮ್ಮೆ ಅರ್ಧ ತಾಸಿಗೇ ಏಳಬಹುದು. ಮತ್ತೂ ಕೆಲವೊಮ್ಮೆ ನೆತ್ತಿ ಮೇಲಣ ಸೂರ್ಯ ಮುಳುಗಿ ನಗುವ ಚಂದಿರ ಬಂದರೂ ಏಳದಿರಬಹುದು. ಮುಸ್ಸಂಜೆಯ ವೇಳೆಗೆ ನಿಶ್ಚಲವಾದ ಕಂಬದಂತೆ ಶಾಂತನಾಗಿ ಮಲಗಿರೋ ಕಂದಮ್ಮನನ್ನು ಗಲಭೆಯೆಂಬೋ ರಕ್ಕಸನೇನಾದರೂ ಎಬ್ಬಿಸಿದಲ್ಲಿ ಕಾಣುವ ಸನ್ನಿವೇಶವೇ ಬೇರೆ. ಸದಾ ನಕ್ಕು ನಲಿಸುವ ಕಂದಮ್ಮನು ರಚ್ಚೆ ಹಿಡಿದು ಅಳುತ್ತ, ಕೂಗಾಡಿ, ಕಿರುಚಾಡಿ, ಕೈಗೆ ಸಿಕ್ಕಿದ್ದನ್ನು ಹರಿದು ಕಿತ್ತಾಡಿ ದೊಂಬಿ ಮಾಡಬಹುದು. ಸಮಾಧಾನಪಡಿಸುವ ಪಾಡು ಬಲು ತ್ರಾಸ.
೫) ಮಗುವನ್ನು ಬೆಳೆಸುವುದೂ ಒಂದು ತಪಸ್ಸೇ ಸರಿ. ಹೀಗೇ ಬೆಳೆಸಬೇಕು, ಹಾಗೆ ಬೆಳೆಸಬಾರದು ಎಂಬೆಲ್ಲ ನಿಯಮಾವಳಿಯನ್ನು ಯಾವ ಸಿದ್ದಹಸ್ತ ಕೈಪಿಡಿಗಳು ಹೇಳಲಾರದು. ಪುಟ್ಟ ಬಾಲಕ ಮುದ್ದಾಗಿದ್ದಾನೆ ಎಂದು ಒಲಿಸಿಕೊಳ್ಳಲು ಹಿರಿಯರು ಏನು ಬೇಕಾದರೂ ಕೊಡಲು ಸಿದ್ದವಿರುತ್ತಾರೆ, ನಿಜ. ಹಾಗೆಂದು ವಾದ ನೀಡಿದ್ದೇ ಆದರೆ ಮಕ್ಕಳು ತಲೆಯ ಮೇಲೇ ಕೂಡಬಹುದು. ಮಾತು ಕೊಡುವಾಗ ನಿಯಮ ಪಾಲಿಸಿದಲ್ಲಿ ಪಾತಾಳಕ್ಕೆ ಕುಸಿಯೋ ಸಂಭವನೀಯತೆ ಕಡಿಮೆ. ಹಾಗಾಗದೇ ಇರುವುದರಿಂದಲೇ ಮಾತಾ-ಪಿತೃಗಳ ಕಲಿಕೆಗೆ ಸಾವೇ ಇಲ್ಲ.

೬) ಬಾಲಕ ಬೆಳೆದು ಬಿಸಿ ರಕ್ತದ ಯುವಕನಾಗಿದ್ದಾನೆ. ಮೀಸೆ ಬಂದಾಗ ದೇಶ ಕಾಣೋಲ್ಲ ಅನ್ನೋ ಹಾಗೆ ತನಗೆ ಸರಿ ಕಾಣದೇ ಹೋಗದ್ದನ್ನು ತರಿದು ಕೊಚ್ಚುವ ರೋಷ. ಪೌರುಷದ ಮುಂದೆ ಮಿಕ್ಕೆಲ್ಲ ತೃಣ ಎಂಬ ಮನೋಭಾವ. ಯಾರ ಮಾತೂ ಕೇಳದೆ, ಎಲ್ಲವನ್ನೂ ಒಬ್ಬನೇ ನಿಭಾಯಿಸೋ ಶಕ್ತಿವಂತನಾಗಿರುತ್ತಾನೆ. ಈ ಹಂತದಲ್ಲಿ ಅರಿವಿಲ್ಲದೇ ಎಸಗಿದ ತಪ್ಪನ್ನು ಮುಂದೆಂದೋ ಯೋಚಿಸಿದಾಗ ಹೀಗೆ ಮಾಡಬಾರದಿತ್ತು ಎನಿಸ ತೊಡಗುವುದು ನಿತ್ಯನೋಟವಾದ್ದರಿಂದ ಈ ಹಂತಕ್ಕೂ ಸಾವಿಲ್ಲ.
೭) ಇಲ್ಲಿಯವರೆಗಿನ ಹಂತ ಒಂದಾದರೆ ಮುಂದಿನ ಹಂತ ಸ್ವಲ್ಪ ಬೇರೆಯದೇ ರೀತಿ ಎನ್ನಬಹುದು. ಓದು, ಕೆಲಸ, ಮದುವೆ ಅಂತೆಲ್ಲ ಆದ ಮೇಲೆ ಹೆಗಲ ಮೇಲೆ ಜವಾಬ್ದಾರಿಯೂ ಹೆಚ್ಚಿದಂತೆ ಕಾಡಿನಲ್ಲೂ ಬದುಕ ಬಲ್ಲ ತಾಳ್ಮೆ ಮೂಡಲು ತೊಡಗುತ್ತದೆ. ಈ ಹಿಂದೆ ತನಗಾದ ಅನ್ಯಾಯ ತಡೆಯಲಾಗದ ಅದೇ ವ್ಯಕ್ತಿ ಈಗ ಅನ್ಯಾಯವನ್ನು ನಸುನಗುತ್ತ ಸ್ವೀಕರಿಸಿ ಅನುಭವಿಸುವಷ್ಟು ತಾಳ್ಮೆ ಮೂಡಿಸಿಕೊಳ್ಳುತ್ತಾನೆ. ತಾನೇ ಎಲ್ಲ ಸಾಧಿಸಲಾರೆ ಎಂದರಿತು ಒಡ ಹುಟ್ಟಿದವರನ್ನೂ, ಸ್ನೇಹಿತರನ್ನೂ, ಬಂಟರನ್ನೂ ಅವಲಂಬಿಸುತ್ತಾನೆ. ’ನಾನು’ ಎಂಬಲ್ಲಿಂದ “ನಾವು” ಎಂಬುದಕ್ಕೆ ಜಯ ಎಂಬ ಅರಿವು ಮೂಡುತ್ತದೆ.
೮) ಯಾರಿಗೇ ಆಗಲಿ ಜೀವನದಲ್ಲಾಗುವ ಅನುಭವ ಪಾಠ ಕಲಿಸುತ್ತೆ. ಆದರೆ ಕಲಿತ ಪಾಠವನ್ನು ಯಾರು ಹೇಗೆ ಬಳಸುತ್ತಾರೆ ಎಂಬುದು ವ್ಯಕ್ತಿಗತ. ಎಲ್ಲರಿಗೂ ಒಂದೇ ತೂಕವಲ್ಲ. ತಾನು ಕಲಿತಿದ್ದನ್ನು ಯೋಗ್ಯ ರೀತಿಯಲ್ಲಿ ಬಳಸುವುದು, ಮತ್ತೊಬ್ಬರಿಗೆ ಭೋಧಿಸುವುದು, ಮತ್ತೊಬ್ಬರ ನೊಗ ಹೊತ್ತು ಜೀವನವನ್ನು ಹಾದಿಗೆ ತರುವ ಯತ್ನ ಎಂಬುದೆಲ್ಲ ಕಲಿತ ಬುದ್ದಿಯ ಪ್ರಯೋಜನಕಾರಿ ಫಲಗಳು. ಸಾಮಾನ್ಯವಾಗಿ ಆಗುವುದೇ ಹೀಗೆ. ಅನುಭವಸ್ತರು ಹೇಳುವ ಪಾಠ ಮತ್ತೊಬ್ಬರಿಗೆ ಉಪಯುಕ್ತವಾಗಿ ಕಂಡರೂ ಸ್ವಂತ ಮನೆ ಜನರಿಗೇ ಗೊಡ್ಡು ವೇದಾಂತವಾಗಿ ಕಾಣುವ ಸಂಭವ ಹೆಚ್ಚು.
೯) ಮುಂದಿನ ಹೆಜ್ಜೆ ಶಾಂತಿ ಮಂತ್ರ. ಜೀವನದುದ್ದಕ್ಕೂ ಕಂಡದ್ದನ್ನು ಅನುಭವಿಸಿದ್ದನ್ನು ಬೇರೊಂದು ರೀತಿಯಲ್ಲಿ ಕಂಡು ಅದರಲ್ಲಿ ಬದುಕಿಗೆ ಅರ್ಥ ಹುಡುಕುವ ಪರಿ. ತಾನಾಯ್ತು ತನ್ನ ಪಾಡಾಯ್ತು ಎಂಬ ವೈರಾಗ್ಯ ಒಂದೆಡೆ, ಹಾಳಾಗುತ್ತಿರುವ ಸಮಾಜವನ್ನು ದಾರಿಗೆ ತರುವುದೇ ತನ್ನ ಜವಾಬ್ದಾರಿ ಎಂದು ಮುಂದಾಗುವುದೂ ಇನ್ನೊಂದು ಪರಿ. “ನಿಮ್ ಕಾಲ ಆಯ್ತು, ತಾವು ಸುಮ್ಮನಿರಿ” ಎಂಬ ತೆಗಳಿಕೆ ಮಾತಿಗೆ ಒಗ್ಗಿ ಹೋಗಿರುತ್ತೆ ಜೀವ.
೧೦) ಬದುಕು, ಬಣ್ಣ ಎಂಬೆಲ್ಲ ವ್ಯಾಮೋಹ ತೊರೆದು ಬಿಳೀ ವಸ್ತ್ರಕ್ಕೆ ಮಾರು ಹೋಗುವ ಸಮಯವಿದು. ಅಂದರೆ ಒಂದು ಕಾಲದಲ್ಲಿ ಮಾರುಹೋಗಿದ್ದ ಬದುಕಿನ ಬಣ್ಣಗಳೇ ಇಂದು ಬಣ್ಣ ಕಳೆದುಕೊಂಡು ನಿರ್ಜೀವವಾಗಿ ಕಾಣುತ್ತದೆ. ಶ್ವೇತ ವಸ್ತ್ರ ಎಂಬುದು ಶಾಂತಿ ಸಂಕೇತ. ಇನ್ನೂ ಹೋರಾಡಲಾರೆ ಬಂದದ್ದು ಬರಲಿ, ಗೋವಿಂದನ ದಯೆ ಒಂದಿರಲಿ ಎಂದು ಶ್ವೇತಾಶ್ವ ಏರಿ ಬದುಕಿನ ವ್ಯಾಪಾರ ಮುಗಿಸುವ ತವಕ. ಕಾಲನ ಕರೆ ಬಂದಾಗ ಎಲ್ಲರೂ ಕಾಲ್ ತೆಗೆಯಲೇಬೇಕು.
ಮಾನವನ ಜೀವನದ ಈ ಪರಿಯನ್ನು ಹತ್ತು ಹಂತಗಳಲ್ಲಿ ಕಾಣಬಹುದು ಎನ್ನುವುದಾದರೆ ಮನುಜನ ಜೀವನವೇ ಒಂದು ದಶಾವತಾರ ಅಲ್ಲವೇ?
ಮಡುವಿನಿಂದ ಮಡುವಿಗೆ ಜಿಗಿದು ಬೆಳೆವ ಮೀನು ತಾ ಬೆಳೆದಂತೆ ಹೊಟ್ಟೆಯನ್ನು ಹಿಗ್ಗಲಿಸುವ ಮಗುವಿಗೆ ಸಾಮ್ಯತೆ ಇದೆ ಅನ್ನಿಸುತ್ತದೆ. ಅಂಬೆಗಾಲಿಡುವ ಕಂದ ಕೂರ್ಮನಾದರೆ, ಅಡ್ಡಾದಿಡ್ಡಿ ಓಡಾಡುವ ಕೋರೆಹಲ್ಲ ದಾಸ ವರಾಹನಾಗುತ್ತಾನೆ. ತಂಪಾಗಿದ್ದ ಕಂದನನ್ನು ಬಡಿದೆಬ್ಬಿಸಿದಾಗ ರಚ್ಚೆ ಹಿಡಿದ ನಾರಸಿಂಹನಾಗುತ್ತಾನೆ. ತಲೆ ಮೇಲೆ ಕೂರುವ ಬಾಲಕ ವಾಮನನಾದರೆ, ಬಿಸಿರಕ್ತದ ತರುಣ ಪರಶುರಾಮನೇ ಸರಿ. ಕುಟುಂಬ ಹೊಣೆಗಾರಿಕೆಯ ಶ್ರೀರಾಮ, ಅನುಭವದ ವೇದಾಂತ ನುಡಿವ ಶ್ರೀಕೃಷ್ಣ, ವೈರಾಗ್ಯದ ಬುದ್ದ, ಯುಗಾಂತರ ಕಲ್ಕಿ ಎಲ್ಲರೂ ನಮ್ಮಲ್ಲೇ ಅಡಕವಾಗಿದ್ದಾರೆ.
ಮಾತಾಪಿತೃಗಳ ಕಲಿಕೆ ಮತ್ತು ಬಿಸಿರಕ್ತದಲ್ಲಿ ಮಾಡಿದ ತಪ್ಪು ಹಿರಿಯನಾದ ಮೇಲೆ ಆಗುವ ಅರಿವುಗಳ ಕಲಿಕೆಗೆ ಸಾವಿಲ್ಲ ಎಂಬುದು ಚಿರಂಜೀವತ್ವವನ್ನು ಸಾರುತ್ತದೆ.
ಇದು ನಾ ಕಂಡ ಸಾಮ್ಯತೆ. ನೀವೇನಂತೀರ?

‍ಲೇಖಕರು G

October 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Kiran

    I would like to hear about some writing, anywhere at all, about Buddha being part of dashavatara. I think everyone is repeating the same error about adding Buddha to the list of Vishnu’s 10 incarnations.
    I want someone with knowledge to throw some light on this.

    ಪ್ರತಿಕ್ರಿಯೆ
    • Srinath

      Well said … This is the same argument that I have been hearing for quite sometime. People call the avatara as Budda, Baudda, Bhodhisatva etc etc.

      ಪ್ರತಿಕ್ರಿಯೆ
  2. Palahalli Vishwanath

    Buddhism was obviously gaining ground and one way to counter that was to adapt Buddha himself into Hinduism. I think making Buddha as one of the ten avatars was a clever move by the Hindu Pandits of that time.

    ಪ್ರತಿಕ್ರಿಯೆ
  3. renuka prakash

    dashavatara mana muttitu.nimma aalochaneya dhati . baravanigeya shaili hidisitu.nice

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: