'ಬಣ್ಣ ಬದುಕನ್ನೇ ಬದಲಾಯಿಸುತ್ತದೆಯೇ?' – ಶ್ರೀದೇವಿ ಕೆರೆಮನೆ ಕೇಳ್ತಾರೆ

ಶ್ರೀದೇವಿ ಕೆರೆಮನೆ

(ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಅಧ್ಯಯನಕ್ಕೆಂದು ನೆಲೆಸಿದ ಕೆಲವು ಆಫ್ರಿಕನ್ ವಿದಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಗಮನಿಸಿದರೆ ಹಾಗೂ ಕೆಲವು ನಿಗ್ರೋ ಮೂಲನಿವಾಸಿಗಳನ್ನು ಅವರ ಬಣ್ಣ ಹಾಗೂ ಗುಂಗುರು ಕೂದಲಿನ ಹಿನ್ನಲೆಯನ್ನಿಟ್ಟುಕೊಂಡು ಹೀಯಾಳಿಸಿ, ಅದನ್ನು ವಿರೋಧಿಸಿದಾಗ ಮಾರಣಾಂತಕ ದಾಳಿ ನಡೆಸಿರುವುದನ್ನು ಕೂಲಂಕುಷವಾಗಿ ನೋಡಿದಾಗ ನಮ್ಮ ಯುವ ಜನತೆಯಲ್ಲಿ ವರ್ಣಬೇಧ ಪ್ರಾರಂಭವಾಗಿದೆಯೇ ಎಂಬ ಆತಂಕ ಕಾಡುತ್ತಿದೆ. ಅಂದರೆ ನಾವು ಆಸ್ಟ್ರೇಲಿಯಾ, ಅಮೇರಿಕಾ ಮುಂತಾದ ಕಡೆ ನಡೆಯುವ ಭಾರತೀಯರ ಮೇಲಿನ ಹಲ್ಲೆಗಳನ್ನು ವಿರೋಧಿಸುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. )
ಕೆಲವು ವರ್ಷಗಳ ಹಿಂದೆ ನಾನು ಮಂಗಳೂರಿನ ಬೆಳ್ತಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಒಮ್ಮೆ ಬಸ್ನಲ್ಲಿ ಮಂಗಳೂರಿಗೆ ಹೋಗುವಾಗ ಒಂದು ಹುಡುಗಿ ಗಡಿಬಿಡಿಯಿಂದ ಬಂದು ಬಸ್ ಹತ್ತಿದವಳು ನನ್ನ ಬಳಿಯೇ ಬಂದು ಕುಳಿತಳು. ಮಡಿಲಲ್ಲಿದ್ದ ಮಗನನ್ನು ಮಾತನಾಡಿಸುತ್ತ ನನ್ನೊಂದಿಗೂ ಮಾತಿಗೆ ತೊಡಗಿದಳು. ಮಂಗಳೂರಿನ ಯಾವುದೋ ಕಾಲೇಜಿನಲ್ಲಿ ಓದುತ್ತಿದ್ದವಳು ಆಕೆ. ಏಳರಿಂದ ಎಂಟು ತಾಸಿನ ಪ್ರಯಾಣ ನನಗೆ. ಮಗನಿಗೆ ಬಾಳೆ ಹಣ್ಣು ಕೊಡುವಾಗ ಆಕೆಗೂ ಕೊಟ್ಟೆ. ಏನೋ ಆದವಳಂತೆ ಹೌಹಾರಿದಳು. ‘ಬಾಳೆಹಣ್ಣಾ? ಬೇಡಪ್ಪಾ, ಅದರಲ್ಲೂ ಏಲಕ್ಕಿ ಬಾಳೆ ಹಣ್ಣು, ದಪ್ಪ ಆಗಿ ಬಿಡ್ತೇನೆ.’ ನನಗೇಕೋ ತಮಾಷೆ ಎನ್ನಿಸಿತು. ಈಗಾಗಲೇ ಬೇಲಿ ಗೂಟದ ತರಹ ಇರುವ ಈಕೆ ಒಂದಿಷ್ಟು ದಪ್ಪವಾದರೆ ಏನು ಕಷ್ಟ ಅರ್ಥವಾಗಲಿಲ್ಲ. ನಂತರದ ಆಕೆಯ ಎಲ್ಲಾ ಮಾತುಗಳೂ ಆಕೆಯ ಮೈಮಾಟದ ಬಗ್ಗೆ ಮತ್ತು ಕಾಂಪ್ಲೆಕ್ಷನ್ ಬಗ್ಗೆ.ಬಣ್ಣ ಹಾಗೂ ದೇಹ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಹೊಂದಿದವಳಂತೆ ಮಾತನಾಡುವುದನ್ನು ಕೇಳಿದಾಗ ನಿಜಕ್ಕೂ ಆಕೆ ಕಲಿಯುತ್ತಿರುವುದೇನೆಂದು ಅರ್ಥವಾಗಲಿಲ್ಲ. ಯಾವುದೋ ಫ್ಯಾಷನ್ ಕೋರ್ಸ ಇರಬಹುದೆಂದು ಮತ್ತೊಮ್ಮೆ ಕೇಳಿ ಖಂಡಿತವಾಗಿಯೂ ಅಲ್ಲ ಎಂದು ಖಚಿತ ಪಡಿಸಿಕೊಂಡೆ.
ಆಗಲೇ ಆಕೆಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದ್ದು. ಆಕೆಯ ಮುಖ ಸಹಜವಾಗಿರಲಿಲ್ಲ. ಕೇಳಲೋ ಬೇಡವೋ ಎಂಬ ದ್ವಂದ್ವದಲ್ಲಿ ಕೊನೆಗೂ ತಡೆಯಲಾಗದೆ ಕೇಳಿಯೇ ಬಿಟ್ಟೆ. ಉತ್ತರ ದಂಗು ಬಡಿಸಿತು. ಫೇಸ್ ಪೇಂಟ್. ನಿಜಕ್ಕೂ ನನಗೆ ಅರ್ಥವಾಗಲಿಲ್ಲ. ಹಾಗೆಂದರೆ? ನಾನು ಪುನಃ ಕೇಳಿದೆ. ಫೇಸ್ಗೆ ಹಚ್ಚುವ ಪೇಂಟ್ ಅಷ್ಟೆ ಆಕೆ ನಿರಾಳವಾಗಿ ಉತ್ತರಿಸಿದಳು.. ಮುಖಕ್ಕೇನು ಪೇಂಟ್ ಎನ್ನುವುದು ಅರ್ಥವಾಗದೇ ನಾನು ಕಕ್ಕಾಬಿಕ್ಕಿ. ಒಮ್ಮೆ ಹಚ್ಚಿದರೆ ಆರು ತಿಂಗಳು ಇರುತ್ತದೆ. ಕಾಂಪ್ಲೆಕ್ಷನ್ ಹಾಳಾಯ್ತು ಎನ್ನುವ ಭಯ ಇಲ್ಲ.ಮುಖ ಗ್ಲೋ ಆಗಿ ಕಾಣುತ್ತದೆ ಆಕೆ ಕಣ್ಣಲ್ಲಿ ಮಿಂಚು ತುಳುಕಿಸುತ್ತ ಹೇಳುತ್ತಿದ್ದರೆ ನನಗಂತೂ ಅಯೋಮಯ. ‘ಒಂದು ಪೇಂಟ್ ಆರು ತಿಂಗಳು ಇರುತ್ತದೆ ಅಂತಾದರೆ ಮುಖ ತೊಳೆಯೋದೇ ಇಲ್ಲವೇ? ಅಥವಾ ತೊಳೆದರೂ ಆ ಪೇಂಟ್ ಹೋಗೋದೆ ಇಲ್ವೇ ಗೋಡೆ ಹಚ್ಚುವ ಆಯಿಲ್ ಪೇಂಟ್ ತರಹ…..? ನನ್ನ ತಲೆಯಲ್ಲಿ ಪ್ರಶ್ನೆಗಳ ಸರಮಾಲೆ. ಹೊಂಡಕ್ಕೆ ಇಳಿದಾಗಿದೆ, ಆಕೆ ಏನಾದರೂ ಅಂದು ಕೊಳ್ಳಲಿ, ನಾನು ನನ್ನ ಸಮಸ್ಯೆ ಬಗೆಹರಿಸಿ ಕೊಳ್ಳೋಣ ಎಂದು ನನ್ನೆಲ್ಲ ಪ್ರಶ್ನೆಗಳನ್ನು ಕೇಳಿಯೇ ಬಿಟ್ಟೆ.
ಆಕೆ ಒಂದು ಕ್ಷಣ ‘ಏನೋ ಗೊತ್ತಿಲ್ಲ, ಪಾಪ ಎನ್ನುವಂತೆ ನನ್ನ ದಿಟ್ಟಿಸಿದಳು.ನಂತರ ಆಕೆ ಹೇಳಿದ ವಿವರಣೆಗಳು ಇಷ್ಟು. ನುರಿತ ಬ್ಯೂಟಿಷಿಯನ್ಗಳ ಬಳಿ ಪೇಂಟ್ ಮಾಡಿಸಿಕೊಂಡರೆ ಆರು ತಿಂಗಳು ಏನೂ ತೊಂದರೆ ಆಗದಂತೆ ಇರುತ್ತದಂತೆ. ಆ ಪೇಂಟ್ ಮುಖ ತೊಳೆದರೂ ಹೋಗುವುದಿಲ್ಲವಂತೆ, ನಂತರ ಪುನಃ ನುರಿತ ಬ್ಯೂಟಿಷಿಯನ್ ಹತ್ತಿರವೇ ಅದನ್ನು ತೆಗೆಸಿ, ಬೇಕಿದ್ದರೆ ಪುನಃ ಹಚ್ಚಿಸಿ ಕೊಳ್ಳ ಬಹುದಂತೆ. ಆಕೆ ಅದನ್ನು ಮಾಮೂಲಿ ವಿಷಯ ಎಂಬಂತೆ ಹೇಳುತ್ತಿದ್ದರೆ ನಾನು ಇಷ್ಟೆಲ್ಲ ದ್ರಾವಿಡ ಪ್ರಾಣಾಯಾಮದ ಅವಶ್ಯಕತೆಯಾದರೂ ಏಕೆ ಎಂದು ಯೋಚಿಸುತ್ತಿದ್ದೆ. ಕೊನೆಗೂ ಅದನ್ನು ಹೊಟ್ಟೆಯಲ್ಲಿ ಅದುಮಿಟ್ಟು ಕೊಳ್ಳಲಾರದೇ ಅಳೆದೂ ಸುರಿದು ಕೇಳಿಯೇ ಬಿಟ್ಟೆ. ಆಕೆಯದ್ದು ಎಣ್ಣೆಗಪ್ಪು ಬಣ್ಣವಂತೆ. ನನ್ನ ಕೈ ನೋಡಿ. ಮುಖ ಕೂಡ ಇದೇ ಬಣ್ಣ. ಹೀಗಾಗಿ ನಾನು ಫೇಸ್ ಪೇಂಟ್ ಮಾಡಿಸಿಕೊಳ್ಳ ಬೇಕಾಯ್ತು. ನಾನು ಚಿಕ್ಕವಳಿದ್ದಾಗಿಂದಲೂ ಎಲ್ಲರೂ ನನ್ನ ಕಪ್ಪು ಅಂತಾ ಹೀಯಾಳಿಸುತ್ತಿದ್ದರು ಆಕೆ ಏನೋ ಆಕಾಶ ತಲೆ ಮೇಲೆ ಬಿದ್ದವರಂತೆ ಹೇಳುತ್ತಿದ್ದರೆ ನಾನು ಆಕೆಗಿಂತಲೂ ತುಸು ಹೆಚ್ಚೇ ಕಪ್ಪಿರುವ ನನ್ನ ಕೈಯನ್ನು ನೋಡಿಕೊಂಡಿದ್ದೆ.

ಚಿಕ್ಕವಳಿದ್ದಾಗಂತೂ ಬಿಡಿ, ಈಗಲೂ ‘ಬ್ಲಾಕಿ’ ಎಂದು ಸ್ನೇಹಿತರಿಂದ ಹೆಮ್ಮೆಯಿಂದಲೇ ಕರೆಸಿಕೊಳ್ಳುತ್ತಿರುವುದರ ಬಗ್ಗೆ ಯೋಚಿಸುತ್ತಿದ್ದೆ. ನನಗ್ಯಾಕೆ ಬಿಳಿ ಆಗಬೇಕು ಅನ್ನಿಸುತ್ತಿಲ್ಲ.. ಈ ಹುಡುಗಿಗ್ಯಾಕೆ ಅಷ್ಟು ತೀವ್ರವಾಗಿ ಅನ್ನಿಸುತ್ತಿದೆ ಎಂದು ಯೋಚಿಸುವಾಗಲೇ ಉತ್ತರ ಸಿಕ್ಕಿತ್ತು. ಈಗಿನ ಕಾಲದಲ್ಲಿ ‘ಫೇರ್’ ಇಲ್ಲದಿದ್ದರೆ ಏನೂ ಮಾಡೋದಕ್ಕೆ ಆಗೋದಿಲ್ಲ. ನಮ್ಮಲ್ಲಿ ಎಷ್ಟೇ ಪ್ರತಿಭೆ ಇದ್ದರೂ ನಮ್ಮ ‘ಗ್ಲಾಮರ್’ ನೋಡಿಯೇ ಜನ ಗುರುತಿಸೋದು. ಇಲ್ಲಾ ಅಂದ್ರೆ ಯಾರು ನೋಡ್ತಾರೆ ನಮ್ಮನ್ನು? ಆಕೆ ನನಗೇ ಹೇಳುತ್ತಿದ್ದರೂ ಸ್ವಗತವೆಂಬಂತೆ ಹೇಳಿಕೊಳ್ಳುತ್ತಿದ್ದಳು. ಅಸಲಿ ಹಕಿಕತ್ತು ಇರೋದು ಇಲ್ಲಿ. ಸೌಂದರ್ಯ ಇರೋದೇ ನೋಡುಗರನ್ನು ಸೆಳೆಯೋದಕ್ಕೆ ಎಂದುಕೊಳ್ಳುವ ಹುಡುಗಿಯರು ಇರುವಾಗ ಮತ್ತು ಅದಕ್ಕೆ ಸಾಕಷ್ಟು ತುಪ್ಪ ಸುರಿದು ಆ ಭಾವನೆ ಕಿಚ್ಚಿನಂತೆ ಪ್ರಜ್ವಲಿಸುವಂತೆ ಮಾಡಲು ಜಾಹಿರಾತುಗಳು ತುದಿ ಕಾಲಲ್ಲಿ ನಿಂತು ಕಾಯುತ್ತಿರುವಾಗ ಬಣ್ಣದ ಕುರಿತಾದ ಮೇಲರಿಮೆ ಮತ್ತು ಕೀಳರಿಮೆ ಹೋಗುವುದೇ ಇಲ್ಲ. ಕಪ್ಪು ಬಣ್ಣದ ರಾಮ, ಕೃಷ್ಣ, ದ್ರೌಪದಿಯರು ಆಗಿನ ಕಾಲದ ಸೌಂದರ್ಯದ ಐಕಾನಗಳಾಗಿದ್ದು ನಮಗೆ ಗೊತ್ತೆ ಇದೆ. ಅಂದರೆ ಬಿಳಿ ಬಣ್ಣವೇ ಶ್ರೇಷ್ಟ ಎಂದು ಪ್ರತಿಪಾದಿಸಿದ ದೇಶವಲ್ಲ ನಮ್ಮದು. ಆದರೂ ಬ್ರಿಟಿಷ ದಾಸ್ಯದಲ್ಲಿ ಕಲಿತ ಮತ್ತೊಂದು ಬೌದ್ಧಿಕ ದಾಸ್ಯ ಇದು. ಅದೆಲ್ಲಕ್ಕಿಂತ ಹೆಚ್ಚಾಗಿ ಈಗಿನ ಜಾಹಿರಾತು ಯುಗದ ಬೌದ್ಧಿಕ ಬ್ಲಾಕ್ ಮೇಲ್ ಇದು ಎನ್ನಲು ಯಾವ ಅಡ್ಡಿಯೂ ಇಲ್ಲ.
ಒಮ್ಮೆ ಈಗ ಪ್ರಸಾರವಾಗುತ್ತಿರುವ ಜಾಹಿರಾತುಗಳನ್ನೆ ಗಮನಿಸಿ ನೋಡಿ. ಪ್ರತೀ ಫೇಸ್ ಕ್ರೀಮ್ಗೂ ಭಾರತಿಯ ಮಹಿಳೆಯರನ್ನು ಬಿಳಿಯಾಗಿಸುವ ಆಸೆ. ಈ ಕ್ರೀಮ್ ಹಚ್ಚಿರಿ ಗೌರವರ್ಣ ಪಡೆಯಿರಿ. ಎನ್ನುವ ಉದ್ದುದ್ದ ಜಾಹಿರಾತುಗಳು ‘ಈ ಭೂಮಿಯ ಮೇಲೆ ಪೇಲವ ವರ್ಣದವರಾಗಿ ಜನಿಸುವುದೇ ಅಪರಾಧವೇನೋ’ ಎಂಬ ಭಾವನೆಯನ್ನು ಸಶಕ್ತವಾಗಿ ಬಿತ್ತಲು ಸಮರ್ಥವಾಗಿದೆ ಎಂದೇ ಹೇಳಬಹುದು. ಆಕೆ ತುಂಬಾ ಟ್ಯಾಲೆಂಟೆಡ್. ಆದರೂ ಆಕೆಗೆ ಯಾವುದೇ ಅವಕಾಶ ಸಿಗುತ್ತಿಲ್ಲ. ನಂತರ ಆಕೆಯ ಸ್ನೇಹಿತೆಯೊಬ್ಬಳು ಆಕೆಗೆ ಒಂದು ಫೇಸ್ ಕ್ರೀಮ್ ಕೊಡುತ್ತಾಳೆ. ಅದನ್ನು ಹಚ್ಚಿದ ನಂತರ ಆಕೆಗೆ ಅವಕಾಶಗಳ ಮಹಾಪೂರ.
ಆಕೆ ತುಂಬಾ ಪ್ರತಿಭಾವಂತ ಡಾನ್ಸರ್. ಆದರೆ ಬಣ್ಣ ಮಾತ್ರ ಕಪ್ಪು. ನೃತ್ಯ ನಿರ್ದೇಶಕ ಆಕೆಯನ್ನು ಪಕ್ಕಕ್ಕೆ ಸರಿಸಿ ಸಹ ನರ್ತಕಿಯೊಬ್ಬಳನ್ನು ಪ್ರಮುಖ ನರ್ತಕಿಯನ್ನಾಗಿಸುತ್ತಾನೆ. ಆದರೆ ಆಕೆ ಯಾವುದೋ ಕಂಪನಿಯ ಕ್ರೀಮ್ ಬಳಸಿ ಕಾರ್ಯಕ್ರಮದ ದಿನದಂದು ಚಂದ್ರನ ಕಾಂತಿಯನ್ನೆ ಪಡೆದು ಬರುತ್ತಾಳೆ. ಆಕೆಯನ್ನು ಬದಿಗೆ ಸರಿಸಿದ್ದ ನೃತ್ಯ ನಿರ್ದೇಶಕ ಆಕೆಯಿಂದ ಕಣ್ಣು ಕೀಳಲಾಗದೇ ಚಡಪಡಿಸುತ್ತಾನೆ.
ಆಕೆ ಟೆನ್ನಿಸ್ ಆಟಗಾರ್ತಿ. ಆದರೆ ಕೋಚ್ ಆಕೆಗೆ ತಂಡದಲ್ಲಿ ಸ್ಥಾನ ಕೊಡಲು ನಿರಾಕರಿಸುತ್ತಾನೆ. ಕಾರಣ ಕೇಳಿದರೆ ನೀವು ಎಚ್ಚರ ತಪ್ಪಿ ಬೀಳುತ್ತೀರಿ. ಆಕೆಗೆ ತಂಡದಲ್ಲಿ ಸ್ಥಾನ ಪಡೆಯಲು ಸಾಮರ್ಥ್ಯವಿಲ್ಲ ಎಂದಲ್ಲ… ಆಕೆಯ ಮುಖದ ಬಣ್ಣಕ್ಕೆ ದೇಹದ ಬಣ್ಣ ‘ಮ್ಯಾಚ್’ ಆಗೋಲ್ಲ ಎಂಬ ಮಹಾನ್ ಕಾರಣ ಅಂದರೆ ಯೋಚಿಸಿ ನೋಡಿ. ನಮ್ಮ ದೇಹದ ಬಣ್ಣ ನಮ್ಮ ಪ್ರತಿಭೆ, ಸಾಮರ್ಥ್ಯ ಎಲ್ಲವನ್ನೂ ಕಡೆಗಣಿಸುತ್ತದೆ ಎಂತಾದರೆ ಒಂದು ಹೆಣ್ಣಿಗೆ ಆಕೆಯ ಪ್ರತಿಭೆಗಿಂತ ದೇಹವೇ ಮುಖ್ಯ ಎಂದು ಸಾರಾ ಸಗಟಾಗಿ ಒಪ್ಪಿಕೊಂಡಂತಾಗಲಿಲ್ಲವೇ?
ತುಂಬಾ ಸಂಪ್ರದಾಯ ಮನೆತನದ ಹೆಣ್ಣು ಮಗಳು ಆಕೆ, ಆದರೆ ಬಣ್ಣ ಮಾತ್ರ ತೀರಾ ಎಣ್ಣೆಗಪ್ಪು. ತುಂಬಾ ಪ್ರತಿಭಾವಂತ ಹಾಡುಗಾರ್ತಿಯಾದರೂ ಆಕೆಯ ಬಣ್ಣದಿಂದಾಗಿ ಆಕೆಗೆ ಅವಕಾಶಗಳೇ ಇಲ್ಲ, ಆಕೆಯ ತಂದೆ ಆಯುರ್ವೇದದ ಸಾರದಿಂದ ಆಕೆಗೊಂದು ಕ್ರೀಮ್ ತಯಾರಿಸಿ ಕೊಡುತ್ತಾರೆ. ಹದಿನೈದೇ ದಿನಗಳಲ್ಲಿ ಕಾಂತಿಯುಕ್ತ ಮೈ ಬಣ್ಣ ಪಡೆದ ಆಕೆ ಗ್ಲಾಮರಸ್ ಆಗಿ ಮಿಂಚುತ್ತಾಳೆ. ಅಯ್ಯೋ ಶಿವನೇ… ಈ ಗ್ಲಾಮರಸ್ ಜಗತ್ತು ಈ ಜಾಹಿರಾತುಗಳ ಮುಖಾಂತರ ಏನು ಹೇಳ ಹೊರಟಿದೆ? ನಾವು ಏನನ್ನು ಒಪ್ಪಿಕೊಳ್ಳ ಹೊರಟಿದ್ದೇವೆ? ಹೆಣ್ಣು ಎಂದರೆ ದೇಹ ಮಾತ್ರ.. ಅದೂ ಕೇವಲ ಬಿಳಿ ತೊಗಲ ದೇಹ ಮಾತ್ರ ಎಂದು ಯಾವುದೇ ಎಗ್ಗಿಲ್ಲದೇ ಒಪ್ಪಿಕೊಳ್ಳುತ್ತಿದ್ದೇವೆಯೇ?
ಆಕೆ ಅದೇ ತಾನೆ ಹರೆಯಕ್ಕೆ ಕಾಲಿಡುತ್ತಿರುವ ಹುಡುಗಿ, ಮುಖದ ತುಂಬಾ ಎಣ್ಣೆ ಪಸೆ. ಆ ಕಾರಣದಿಂದಾಗಿಯೇ ಆಕೆ ತಿರಸ್ಕೃತಳಾಗುತ್ತಿದ್ದಾಳೆ. ಆದರೆ ಕೆಲವು ದಿನ ಆಕೆ ಹಚ್ಚಿದ ಕ್ರೀಮ್ನಿಂದಾಗಿ ಆಕೆಯ ಸ್ನೇಹಿತೆಯರ ‘ಬಾಯ್ಫ್ರೆಂಡ್’ಗಳೂ ಈಕೆಯ ಬೆನ್ನು ಬಿದ್ದಿದ್ದಾರೆ. ಏನಾದರಾಗಲಿ.. ಎಣ್ಣೆ ಅಂಶ ಇಲ್ಲದ ಗೌರವ ವರ್ಣ ಪಡೆಯಿರಿ ಮತ್ತು ಹೇಗಾದರೂ ಸರಿ ಸುತ್ತಲಿನ ಹುಡುಗರನ್ನು ನಿಮ್ಮತ್ತ ಸೆಳೆಯಿರಿ ಎಂದು ಈ ಜಾಹಿರಾತುಗಳು ಹುಡುಗಿಯರನ್ನು ಅಡ್ಡ ದಾರಿ ಹಿಡಿಸುತ್ತಿವೆಯೇ? ಈಗೀಗಂತೂ ಇನ್ಸ್ಟಂಟ್ ಶ್ವೇತ ವರ್ಣದ ಹರಿಕಾರರಾಗಿ ಎನ್ನುವ ಜಾಹಿರಾತುಗಳು ನಿಜಕ್ಕೂ ಭಯ ಹುಟ್ಟಿಸುತ್ತಿವೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಅಧ್ಯಯನಕ್ಕೆಂದು ನೆಲೆಸಿದ ಕೆಲವು ಆಫ್ರಿಕನ್ ವಿದಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಗಮನಿಸಿದರೆ ಹಾಗೂ ಕೆಲವು ನಿಗ್ರೋ ಮೂಲನಿವಾಸಿಗಳನ್ನು ಅವರ ಬಣ್ಣ ಹಾಗೂ ಗುಂಗುರು ಕೂದಲಿನ ಹಿನ್ನಲೆಯನ್ನಿಟ್ಟುಕೊಂಡು ಹೀಯಾಳಿಸಿ, ಅದನ್ನು ವಿರೋಧಿಸಿದಾಗ ಮಾರಣಾಂತಕ ದಾಳಿ ನಡೆಸಿರುವುದನ್ನು ಕೂಲಂಕುಷವಾಗಿ ನೋಡಿದಾಗ ನಮ್ಮ ಯುವ ಜನತೆಯಲ್ಲಿ ಇಂತಹ ಜಾಹಿರಾತುಗಳೇ ವರ್ಣಬೇಧವನ್ನು ಬಿತ್ತುತ್ತಿವೆಯೇ ಎಂಬ ಆತಂಕ ಕಾಡುತ್ತಿದೆ. ಅಂದರೆ ನಾವು ಆಸ್ಟ್ರೇಲಿಯಾ, ಅಮೇರಿಕಾ ಮುಂತಾದ ಕಡೆ ನಡೆಯುವ ಭಾರತೀಯರ ಮೇಲಿನ ಹಲ್ಲೆಗಳನ್ನು ವಿರೋಧಿಸುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ.
ಮೈ ಬಣ್ಣದ ಕ್ರೇಜ್ ಹೆಚ್ಚುತ್ತಲೇ ಹೋಗುತ್ತಿದೆ. ಅದು ಕೇವಲ ಸ್ತ್ರೀಯರ ಹಣೆ ಬರೆಹ ಎಂದು ನೀವು ಯೋಚಿಸುತ್ತಿದ್ದರೆ ಪುರುಷರೇ… ನೀವಿನ್ನೂ ಆಧುನಿಕ ಜಮಾನಾಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿಲ್ಲ ಎಂದೇ ಅರ್ಥ. ಪುರುಷರನ್ನೂ ಕೂಡ ಬಿಳಿಯ ತೊಗಲಿನ ಗೊಂಬೆಗಳನ್ನಾಗಿ ಮಾಡಲು ಜಾಹಿರಾತುಗಳು ಈಗಾಗಲೇ ಸನ್ನದ್ಧವಾಗಿವೆ. ‘ಗಂಡಸಾಗಿ ಹುಡುಗಿಯರ ಕ್ರೀಮ್ ಹಚ್ಚುತ್ತೀಯಾ?’ ಎಂದು ಹೀಯಾಳಿಸುತ್ತ ಪುರುಷ ಚರ್ಮಕ್ಕೆ ತಕ್ಕುದಾದ, ಅವರನ್ನು ವಾರಗಳಲ್ಲೇ ಬಿಳಿಯಾಗಿಸಲು ಪಣ ತೊಟ್ಟ ಫೇಸ್ ಕ್ರೀಮ್ಗಳು ಈಗ ಮಾರುಕಟ್ಟೆಯನ್ನು ಆಕ್ರಮಿಸಿದೆ. ಅಂದರೆ ಕಪ್ಪು ಬಣ್ನ ಎಂದರೆ ಅಸಹ್ಯಿಸುವ ಪಾಶ್ಚಾತ್ಯರ ಮನೋಭಾವವನ್ನು ಇಂತಹ ಜಾಹಿರಾತುಗಳು ನಮ್ಮ ಯುವ ಜನತೆಯಲ್ಲಿ ಬೆಳೆಸುವಲ್ಲಿ ಯಶಸ್ವಿಯಾಗುತ್ತ ತನ್ನ ಕಂಪನಿಯ ಉತ್ಪನ್ನಗಳನ್ನು ಬಿಕರಿಯಾಗಿಸಿಕೊಳ್ಳುವ ಹುನ್ನಾರದಲ್ಲಿದೆ. ನನ್ನ ನಾಲ್ಕನೇ ತರಗತಿಯ ಮಗ, ತನ್ನ ಹಾಗೂ ತನ್ನ ತಮ್ಮನ ಬಣ್ಣವನ್ನು ಹೋಲಿಸಿಕೊಂಡು ಸ್ವಲ್ಪ ಕಪ್ಪಗಿರುವ ತನ್ನನ್ನು ‘ಅಮ್ಮನ ಬಣ್ಣ ಬಂದು ಬಿಟ್ಟಿದೆ’ ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಿರುವುದನ್ನು ಕಂಡಾಗ ‘ಬಣ್ನ ನಮ್ಮ ಜೀವನವನ್ನೇ ಬದಲಾಯಿಸುತ್ತದೆಯೇ..?’ ಎನ್ನುವ ಪ್ರಶ್ನೆ ನನ್ನೆದುರು ಬೃಹದಾಕಾರವಾಗಿ ಬೆಳೆದು ನಿಂತಂತೆ ಭಾಸವಾಗುತ್ತಿದೆ. ಬಣ್ಣ ಮತ್ತು ಸೌಂದರ್ಯ ನಮ್ಮ ಜೀವನದಲ್ಲಿ ಮುಖ್ಯ ಅಲ್ಲವೇ ಅಲ್ಲ. ಬುದ್ಧಿವಂತಿಕೆ, ಸಾಮಥ್ರ್ಯ ಮತ್ತು ಪ್ರತಿಭೆಗಳೇ ಸದಾ ನಮ್ಮೊಂದಿಗೆ ಇರುವುದು ಎಂದು ಚಿಕ್ಕಂದಿನಿಂದಲೂ ಹೇಳಿ ಹೇಳಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿ ಏನನ್ನಾದರೂ ಸಾಧಿಸುವ ಛಲದೊಂದಿಗೆ ಬೆಳೆಸಿದ ನನ್ನ ಅಪ್ಪನ ಮಾತು ಇದಕ್ಕೆ ಉತ್ತರವಾಗಿ ಕಿವಿಯಲ್ಲಿ ಮೊಳಗುತ್ತಿದೆ.

‍ಲೇಖಕರು G

October 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ಉತ್ತಮ ಲೇಖನ…
    ಬಣ್ಣ ಬದಲಿಸುವುದು ಇತ್ತೀಚಿನ ಬೆಳವಣಿಗೆ…ಮೊದಲಿನ ದಿನಗಳಲ್ಲಿ ಬಣ್ಣಕ್ಕೆ ‘ಇಷ್ಟು’ ಪ್ರಾಮುಖ್ಯತೆ ಇರಲಿಲ್ಲ ಎನಿಸುತ್ತದೆ…ಎಂ.ಏನ್.ಸಿ.ಗಳ ಹುನ್ನಾರವೂ ಇದೆ.

    ಪ್ರತಿಕ್ರಿಯೆ
  2. Kantha

    Hi,
    Yes, the same kind of thoughts were existed among several people,specially with rural folks am from.I belong to a region where these kind of talks were common at casual meetings of family, friends and so on even-though it is nonsense. I think this color issue is fading out slowly. This article remind me my inferiority and superiority feelings during my journey of life, Thanks.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: