ಇದು ಅವಳ ಕವಿತೆ

ಅದು ಇದೆ ಎದೆಯಲ್ಲಿ ಬೆಳಕಿನ ಬದಿಯಲ್ಲಿ…

m s ashadevi

ಎಂ ಎಸ್ ಆಶಾದೇವಿ

ಇಷ್ಟಕ್ಕೂ ಕಾವ್ಯವೆನ್ನುವುದು ಏನು? ಸ್ವಗತವೆ? ಶೋಧವೆ? ದರ್ಶನವೆ? ಜೀವವೊಂದು ತನ್ನ ನಿಜ ಸುಳ್ಳುಗಳನ್ನು ತಾನೇ ಎದುರಾಗುವ ಅಗ್ನಿದಿವ್ಯವೆ? ತನ್ನೆಲ್ಲ ತುಡಿತಗಳನ್ನು ಸಂಭ್ರಮ ತಲ್ಲಣಗಳನ್ನು ತನ್ನದೆನ್ನುವ ಉತ್ಕಟತೆಯಲ್ಲೂ, ನಿನ್ನದೂ ಇರಬಹುದೆ ಎನ್ನುವ ಸಾಧಾರಣೀಕರಣದಲ್ಲೂ ಕಂಡುಕೊಳ್ಳುವ ಸಾಂಘಿಕ ಮಾರ್ಗವೆ?

ಎಂ.ಎಸ್. ರುದ್ರೇಶ್ವರಸ್ವಾಮಿಯವರ ಕವಿತೆಗಳು ಈ ಎಲ್ಲ ಮೂಲ ಪ್ರಶ್ನೆಗಳನ್ನು ತಮ್ಮೊಡಲಲ್ಲಿ ಇಟ್ಟುಕೊಂಡಿವೆ. ಕಾವ್ಯವೆನ್ನುವುದು ಬೀದಿಯ ಪಸರವೂ ತಗರ ಹೋರಟೆಯೂ ಆಗಿಬಿಡುತ್ತಿದೆಯೇ ಎನ್ನುವ ಅನುಮಾನ ದಟ್ಟವಾಗಿರುವ, ಕಾವ್ಯದ ಸಾಮಾಜಿಕತೆಯೇ ಪ್ರಧಾನವಾಗಿ ಬಿಟ್ಟಿರುವ ಈ ನಮ್ಮ ಕಾಲದಲ್ಲಿ ನಮ್ಮಷ್ಟಕ್ಕೆ ನಾವೇ ಏಕಾಂತದ ಧ್ಯಾನವೆನ್ನುವ ಹಾಗೆ ಒಳಗೊಳ್ಳಬಹುದಾದ ಕಾವ್ಯವೇ ಅಪರೂಪದ್ದಾಗುತ್ತಿದೆ.

inviteಇಂಥ ಹೊತ್ತಿನಲ್ಲಿ ಆಪದ್ಧರ್ಮದ ಕಾವ್ಯವೊ ಎನಿಸುವಂತೆ ರುದ್ರೇಶ್ವರಸ್ವಾಮಿಯವರ ಅವಳ ಪದ್ಯಗಳು ಬಂದಿವೆ. ಶುದ್ಧ ಒಳಲೋಕದ ಮರ್ಮರಗಳಂತಿರುವ ಈ ಕವಿತೆಗಳು ಒಳಗಿನಿಂದಲೇ ವ್ಯಕ್ತಿತ್ವದ ಹೊರಗು ತನ್ನ ಆಕಾರವನ್ನು ಪಡೆಯುವ ಪರಿಯನ್ನು, ಪಾಡನ್ನು ಅನಾವರಣಗೊಳಿಸುತ್ತ ಹೋಗುತ್ತವೆ.
ಈ ಕವಿತೆಗಳ ಹಂಬಲ, ಆಶಯ, ಗುರಿ, ಶೋಧ ಹೀಗೆ ಯಾವ ಕಾವ್ಯದ ಕೇಂದ್ರವೆಂದು ಗುರುತಿಸುವ ಯಾವುದೇ ಪದ-ಪರಿಕರ; ಪರಿಕಲ್ಪನೆಯ ಊರುಗೋಲನ್ನಿಟ್ಟುಕೊಂಡು ನೋಡಿದಾಗಲೂ ಅದು ಗಂಡು ಹೆಣ್ಣಿನ ಸಂಬಂಧಕ್ಕೆ ಬಂದು ನಿಲ್ಲುತ್ತದೆ. ಅವಳ ಎಂದು ಹೇಳುತ್ತಿರುವಾಗಲೂ ಈ ಕವಿತೆಗಳು ಅವಳು ಮತ್ತು ಅವನ ನೆಲೆಗಳು ಅದ್ವೈತವೊಂದನ್ನು ಸಾಧಿಸುವ ದಾರಿಯಲ್ಲಿ ನಡೆಯುತ್ತಿರುವ ಪ್ರಯಾಣದ ಹೆಜ್ಜೆಗಳಾಗಿವೆ. ಒಬ್ಬರು ಇನ್ನೊಬ್ಬರನ್ನು ಆವರಿಸಿಕೊಳ್ಳುವ, ಗಾಢವಾಗಿ ಕಟ್ಟಿಕೊಳ್ಳುವ ಕಂಡುಕೊಳ್ಳುವ ಕ್ರಿಯೆಯೇ ಇಬ್ಬರನ್ನು ಸಂಪೂರ್ಣಗೊಳಿಸುವ ಅಪೂರ್ವವೆನ್ನಬಹುದಾದ ಅಮೃತ ಮುಹೂರ್ತಕ್ಕಾಗಿ ನಡೆಸುವ ಧ್ಯಾನದಂತಿವೆ ಈ ಕವಿತೆಗಳು. ಹೀಗಾಗಿ ಈ ಕವಿತೆಗಳ ಗುಚ್ಛವು ಅಥವಾ ಅಖಂಡ ಕಾವ್ಯವೆಂದೂ ಭಾಸವಾಗುವ ಈ ಕಾವ್ಯವು ವ್ಯಕ್ತಿತ್ವದ ಸಂಪೂರ್ಣತೆಯ ಅಥವಾ `ನಿಜಾಕಾರದ’ ರಚನೆಯ ಪ್ರಯತ್ನಗಳೂ ಆಗಿವೆ. ಪ್ರೀತಿಯೆನ್ನುವುದು ಅಹಂಕಾರವನ್ನು ಕಳೆದುಕೊಳ್ಳುವ `ಮಹಾವಿಸರ್ಜನೆಯ’ ಕಡೆಗಿನ ಚಲನೆಯೆನ್ನುವುದನ್ನು ಈ ಕವಿತೆಗಳು ನಂಬಿವೆ. ಈ ಕವಿತೆಗಳು ನಮ್ಮನ್ನು ಕಾಡುವುದು, ಪ್ರೀತಿಯೆನ್ನುವ ಮಹೌಷಧದಲ್ಲಿ ಇಟ್ಟಿರುವ ಶಂಕೆಯಿಲ್ಲದ ನಂಬಿಕೆಯ ಕಾರಣಕ್ಕಾಗಿ. ಮಾತಿನ ಹಂಗಿಲ್ಲದ, ವ್ಯಕ್ತ ಪ್ರೀತಿಯ ಹಂಗಿಲ್ಲದ, ಭಾವಭಂಗಿಗಳ ಹಂಗಿಲ್ಲದ, ಇಲ್ಲದೆಯೇ ಇರುವುದರಲ್ಲಿಯೇ ತನ್ನ ಸಾರ್ಥಕತೆಯನ್ನು ಕಾಣುವ ಅತೀತ ಅವಸ್ಥೆಯನ್ನು ಸಿದ್ಧಿಸಿಕೊಳ್ಳಲು ಇಲ್ಲಿನ ಕವಿತೆಗಳು ಹವಣಿಸುತ್ತಿವೆ. ಎಂತಲೇ ಇವುಗಳಿಗೆ ಅನುಭಾವದ ಸ್ಪರ್ಶವೂ ದಕ್ಕಿದೆ. ಇರವು ಅರಿವುಗಳನ್ನು ಮುಟ್ಟಿ ಅದನ್ನಲ್ಲೇ ಬಿಟ್ಟು ಲಂಘಿಸಲು ಬೇಕಾದ ಮನಸ್ಥಿತಿಯನ್ನು ರೂಪಿಸಿಕೊಳ್ಳುವುದೇ ಸಖ್ಯವಿರಬೇಕಲ್ಲವೆ ಎನ್ನುವ ಪ್ರಶ್ನೆಯನ್ನು ಈ ಕವಿತೆಗಳು ತಮಗೆ ತಾವೇ ಹಾಕಿಕೊಂಡಿವೆ.

ಆದರೆ ಈ ಯಾವುದೂ ಬಯಕೆ ಬರುವುದರ ಕಣ್ಸನ್ನೆ ಎನ್ನುವ ಮೊದಲ ಘಟ್ಟದಲ್ಲಿಲ್ಲ. ಅದನ್ನು ಸಾಧ್ಯವಾಗಿಸಿಕೊಳ್ಳುವ ಅಣು ಕ್ಷಣ ಚರಿತೆ ಈ ಕವಿತೆಗಳು. ಅದು ಕೇವಲ ಕೊಟ್ಟುಬಿಡುವುದಲ್ಲ, ಕೊಟ್ಟುಕೊಳ್ಳುವುದೂ ಅಲ್ಲ, ಕೊಡುವ ಪಡೆಯುವುದರ ನಡುವಿನ ಕಂದರವನ್ನೇ ನಾಶಪಡಿಸುವ ಅದ್ಯಮ್ಯತೆಯವು. ಇದಕ್ಕಿರುವ ಒಂದೇ ದಾರಿ ಅವನು ಅವಳನ್ನು ಅವಳು ಅವನನ್ನು ನಿವರ್ಾಣಗೊಳಿಸಿಕೊಳ್ಳುವುದು.

ಹೆಣ್ಣಿಗೆ ಶರಣಾಗತಿಯೋ ಕರಾರಿಲ್ಲದ ಸಮರ್ಪಣೆಯೋ ಸಹಜ ಅಥವಾ ಸದಾ ಸನ್ನದ್ಧ ಸ್ಥಿತಿ ಎನ್ನುವುದು ಘೋಷಿತ, ಅಘೋಷಿತ ನಂಬಿಕೆ, ಮೌಲ್ಯ, ದಬ್ಬಾಳಿಕೆ ಎಲ್ಲವೂ ಹೌದಷ್ಟೇ. ಈ ಕವಿತೆಗಳು ತಮ್ಮ ಶೀಷರ್ಿಕೆಯೂ ಸೇರಿದಂತೆ ತಮ್ಮ ಸಂವೇದನೆಯಲ್ಲಿಯೇ ಈ ಎಲ್ಲವನ್ನೂ, ಈ ಎಲ್ಲವುಗಳ ಮಿಥ್ಯೆ, ಅಸಹಜತೆಯನ್ನು ಬಿಟ್ಟುಕೊಟ್ಟು ಅವಳನ್ನು ಸಖ್ಯದ ಆಖ್ಯಾನಕಾತರ್ಿಯಗಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿವೆ. ಗಂಡಿನ ಅಕಾರಣ ಅಹಂಕಾರವನ್ನು ಪ್ರಶ್ನಿಸುವ ನೆಲೆಯನ್ನು ದಾಟಿ, ಮನುಷ್ಯ ಸಹಜ ನೆಲೆಯಲ್ಲಿ ಹೆಣ್ಣು ಗಂಡನ್ನು `ಕಾಣುವ’ ನೋಟವೊಂದು ಇಲ್ಲಿನ ಕವಿತೆಗಳಲ್ಲಿ ನಿಧಾನವಾಗಿ ಬೆಳೆಯುತ್ತಾ ಹೋಗಿದೆ. ಹಕ್ಕು, ಅಧಿಕಾರ, ಸ್ಥಾಪಿತ ಮೌಲ್ಯ ವ್ಯವಸ್ಥೆ, ಇವುಗಳನ್ನು ಸೋದ್ದಿಶ್ಯವಾಗಿ ನಿರಾಕರಿಸಿ ಅವಳನ್ನು ಅವಳಾಗಿ ನೋಡುವಲ್ಲಿ ಈ ಕವಿತೆಗಳು ಪಡೆದಿರುವ ಯಶಸ್ಸು ಕಾವ್ಯದ್ದು, ಕಲೆಯದು ಎನ್ನುವುದು ನಿಜ. ಆದರೆ ಆರಂಭದಲ್ಲಿ ಕಾವ್ಯ ಸಾಮಾಜಿಕತೆಯ ಬಗ್ಗೆ ಮಾಡಿದ ಪ್ರಸ್ತಾಪಕ್ಕೆ ವಾಪಸ್ಸಾಗುವುದಾದರೆ, ಈ ಕವಿತೆಗಳು, ಇಂದು ವ್ಯಕ್ತಿ ಮತ್ತು ಸಮುದಾಯ ಎರಡಕ್ಕೂ ಅಗತ್ಯವಾಗಿ ಬೇಕಾಗಿರುವ ಸ್ತ್ರೀ ಸಂವೇದನೆಯ ಘನ ಪ್ರಯತ್ನವಾಗಿ ಕಾಣಿಸುತ್ತವೆ.

ಹೆಣ್ಣನ್ನು ಅವಳ ಒಡಲಾಳದಿಂದ ಅರಿಯಲು ಯತ್ನಿಸುವುದೆಂದರೆ, ಅನೂಹ್ಯವಾದ ಬದುಕನ್ನು ಪ್ರೀತಿಸಲು ಕಲಿಯುವುದೆಂದೇ ಅರ್ಥ. ಅವಳ ಜೀವಧಾತುಗಳನ್ನು ಸುಮ್ಮನೆ ಧ್ಯಾನಿಸಿದರೂ ಸಾಕು ಮನಸ್ಸು ಕೃತಜ್ಞತೆ, ಪ್ರೀತಿಯಿಂದ ತುಂಬುತ್ತಾ ಹೋಗುತ್ತದೆ.

ಸಾಕು, ಈ ಸಂಸಾರ
ಏನಿದೆ
ಈ ಲೌಕಿಕದಲ್ಲಿ? ನಾನಿನ್ನು ಇದ್ದೂ-
ಇಲ್ಲದಂತಿರುತ್ತೇನೆ

ಎಂದ ಹೆಣ್ಣು ನಾಲ್ಕೇ ದಿನಗಳಲ್ಲಿ ಒಂದು ಚಿತ್ರ ಬರೆಯುತ್ತಾಳೆ, ಮತ್ತೊಂದು ದಿನ ಧ್ಯಾನಿಸಿಸದೇ ಧ್ಯಾನ ಕುರಿತು ಕವಿತೆ ಬರೆದಳು ಎನ್ನುವ ಕವಿತೆ ಮುಂದುವರೆದು ಹೇಳುತ್ತದೆ,

ಸಾಲು ಸಾಲಲ್ಲೂ ಬರೀ ಮೌನ

ಚಿರ ವಿರಹಿ ಈ
ವಸುಂಧರೆ
ಸದಾ ಸೃಷ್ಟಿಶೀಲೆ. ಏನನ್ನೂ
ತ್ಯಜಿಸುವುದಿಲ್ಲ
ಎಲ್ಲ ಇಲ್ಲೆ ಈ ಲೌಕಿಕದಲ್ಲೆ
ಹೆಣ್ಣಿನ ಈ ಅದಮ್ಯ ಜೀವನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುತ್ತಲೇ ಈ ಕವಿತೆ ಇಂಥ ಹೆಣ್ಣಿನ ಬಗ್ಗೆ ಯಾವ ಪ್ರಯತ್ನವೂ ಇಲ್ಲದೆ, ನಮ್ಮೆಲ್ಲ ಪೂರ್ವಗ್ರಹಗಳನ್ನೂ ಮೀರಿ ಹುಟ್ಟುವ ಪ್ರೀತಿ ಮತ್ತು ಕೃತಜ್ಞತೆಯನ್ನು ಧ್ವನಿಸುತ್ತದೆ. ಏನನ್ನೂ ತ್ಯಜಿಸದ ಹೆಣ್ಣಿನ ಗುಣವು ಅವಳ ಅಸಾಧಾರಣ ಜೀವಧಾತು ಎನ್ನುವುದನ್ನು ಬೆರಗಿನಲ್ಲಿ ಕವಿತೆ ಮಂಡಿಸುತ್ತದೆ.

ಈ ಸಂಕಲನದುದ್ದಕ್ಕೂ ನಮ್ಮನ್ನು ಆವರಿಸುವ ಇನ್ನೊಂದು ಸಂಗತಿಯೆಂದರೆ, ಹೆಣ್ಣನ್ನು ಅವಳ `ಚಂಚಲತೆ’ಯಲ್ಲಿ ಹಿಡಿಯಲು ನಡೆಸುವ ಪ್ರಯತ್ನಗಳು. ಆದರೆ, ಯಾವ ಚಂಚಲತೆಯನ್ನು ಹೆಣ್ಣಿನ ದೌರ್ಬಲ್ಯವೆಂದು ಸ್ಥಾಪಿಸಲಾಗಿದೆಯೋ ಅದನ್ನು ಕವಿ ಚಲನಶೀಲತೆಯೆಂದು ನೋಡುತ್ತಾರೆ. ಅವಳ `ಮೌನವೂ, ಒಂದನ್ನು ಹೇಳುತ್ತಲೇ ಮತ್ತೊಂದನ್ನು ಧ್ವನಿಸುವ ಅವಳ `ಭಾಷೆಯೂ’ ಈ ಕವಿಗೆ ಆಕರ್ಷಣೆಯನ್ನೂ, ಧಾವಂತವನ್ನೂ ಹುಟ್ಟಿಸುತ್ತವೆ. ಹೆಣ್ಣೊಂದು `ರಮ್ಯ, ನಿಗೂಢ’ವೆನ್ನುವ ಭಾವ ಸಂಕಲನದುದ್ದಕ್ಕೂ ಹಬ್ಬಿ ಹರಡಿದೆ. ಆದರೆ ಈ ಸಂಕಲನ ಮುಖ್ಯವಾಗುವುದು, ಹೆಣ್ಣನ್ನು ಕೇವಲ ಆರಾಧನೆಯ ನೆಲೆಯಲ್ಲಿ ಅಥವಾ ರೊಮ್ಯಾಂಟಿಕ್ ಎನ್ನಬಹುದಾದ ನೆಲೆಯಲ್ಲಿ ಮಾತ್ರ ನೋಡುವುದರಿಂದಲ್ಲ, ಅವಳ ಸಾಂಗತ್ಯದಲ್ಲಿನ ಬಗೆಹರಿಯದ ಸವಾಲುಗಳ ಕಡೆಗೂ ಇಲ್ಲಿನ ಕವಿತೆಗಳು ಮುಖ ಮಾಡಿವೆ. ಬೆರಳ ತುದಿಯಲ್ಲಿ ಸ್ವರ್ಷವೇ ಸತ್ತು ಹೋಗಿ ಬಿಡುವ ವಾಸ್ತವವನ್ನೂ ಸಂಬಂಧವೊಂದರಲ್ಲಿ ಬೇಕಾಗಿ ಬೇಡವಾಗಿ ನಾವು ಒಪ್ಪಿಕೊಳ್ಳಲೇ ಬೇಕು. ತಪ್ಪು ಸರಿಗಳ ಪ್ರಶ್ನೆಯೇ ಇಲ್ಲದೆ ಧುತ್ ಎಂದು ಮುಗಿದೇ ಹೋಗಿಬಿಡಬಹುದು ಎನ್ನುವ ಅರಿವಿನ ಬೆಳಕಿನಲ್ಲಿ ದೀಪ ಆರಿ ಹೋಗಿ ಬಿಡುವ ಮುನ್ನ ಪರಸ್ಪರ ಆತ್ಮದ ಬೆಳಕಿನಲ್ಲಿ ಒಬ್ಬರನ್ನೊಬ್ಬರು ನೋಡಿಬಿಡಬೇಕೆಂಬ ತಹತಹ ಇಲ್ಲಿನ ಕವಿತೆಗಳಿಗೊಂದು ಉತ್ಕಟತೆಯನ್ನು ತಂದುಕೊಟ್ಟಿದೆ.

avala kaviteತನ್ನನ್ನು ತಾನೇ ಹೆಣ್ಣು ನೋಡಿಕೊಳ್ಳುತ್ತಾ ಹೋಗುವ ಮಗ್ಗುಲು ಈ ಸಂಕಲನದ ಯಶಸ್ಸುಗಳಲ್ಲೊಂದು. ಈ ಪ್ರಕ್ರಿಯೆಗೆ ತನ್ನನ್ನು ಒಡ್ದಿಕೊಳ್ಳುವ ಹೆಣ್ಣಿನಲ್ಲಿ, ತಾನು ಬಯಸಿದ ಬದುಕು, ಬಯಸಿದ ನಲ್ಲ ಸಿಗದ ವಿಷಾದವಿದೆ. ಆದರೆ ಈ ವಿಷಾದದಲ್ಲೂ ಅವಳು ಗುರಿತಿಸಿಕೊಳ್ಳುವುದು ನಕ್ಷತ್ರಗಳೊಂದಿಗೆ. ಆ ನಕ್ಷತ್ರಗಳ ಒಂಟಿತನವೂ ತನ್ನ ಒಂಟಿತನವೂ ಒಂದೇ ಅಲ್ಲವೇ ಅನಿಸುತ್ತದೆ ಅವಳಿಗೆ.

ಒಬ್ಬಳೇ ಮನೆಯಲ್ಲಿರುವ ಒಂದು ದಿನ ಮುಂಬಾಗಿಲು ಮುಚ್ಚಿ ಹಿಂಬಾಗಿಲು ತೆರೆಯುವ ಚಿತ್ರದ ಕವಿತೆಯೊಂದಿದೆ. ಅವಳು ತೆರೆಯುವ ಹಿಂಬಾಗಿಲು ಅವಳ ಒಳಲೋಕ. ಯಾರೊಂದಿಗೂ ಹಂಚಿಕೊಳ್ಳಬೇಕಿಲ್ಲದ ಲೋಕ ಅದು. ಆದರೆ ತನ್ನನ್ನು ತಾನೇ ನೋಡಿಕೊಳ್ಳುವ ಕನ್ನಡಿ ಅದು. ಸುಳ್ಳುಗಳಿಲ್ಲದ, ವೇಷಗಳಿಲ್ಲದ ತನ್ನನ್ನು ತನ್ನ ನಿಜದಲ್ಲಿ ನೋಡಿಕೊಳ್ಳಬಹುದಾದ ಆ ಘಳಿಗೆ ಅವಳಿಗೆ ಅಮೂಲ್ಯವಾದುದೂ ಹೌದು. ಆ ಘಳಿಗೆಯಲ್ಲಿ ಹೆಣ್ಣಿನ ಗುಣ ಲಕ್ಷಣಗಳನ್ನು ಕವಿ ಮರೆಯುವುದಿಲ್ಲ. ಚೆಲುವಿಗೂ ಹೆಣ್ಣಿಗೂ ಇರುವುದು ಜೀವಕೊರಳ ಸಂಬಂಧ. ಒಳ್ಳೆಯ ಟೀ, ಚೆಲುವಾದ ಟ್ರೇ, ಮರದ ಕೆಳಗಿನ ಏಕಾಂತ…ಯಾವುದರಲ್ಲೂ ಅವಳು ತನ್ನ ಆಯ್ಕೆಯನ್ನು ಬಿಟ್ಟುಕೊಡುವುದಿಲ್ಲ. ಹೊಸ್ತಿಲು ದಾಟಿ, ಮರದ ಕೆಳಗೆ ಕುಳಿತು ಅವಳು ತನ್ನೊಂದಿಗಿನ ಮಾತುಕತೆಯನ್ನು ಆರಂಭಿಸುತ್ತಾಳೆ. ಮದುವೆಯಾಗಿ ಹೊಸದರಲ್ಲಿ ಮನೆಯಲ್ಲಿದ್ದ ಪಂಜರದ ಪಕ್ಷಿಯನ್ನು ಪಂಜರದಿಂದ ಬಿಟ್ಟರೂ ಕೆಲವು ಕಾಲ ಅಲ್ಲಿಯೇ ಕುಳಿತುಬಿಟ್ಟ ಚಿತ್ರ ಅಯಾಚಿತವಾಗಿ ನೆನಪಿಗೆ ಬರುತ್ತದೆ. ಅದೆಷ್ಟೋ ಹೆಣ್ಣುಮಕ್ಕಳಿಗೆ ಸಕಾರಣವಾಗಿ ಅನಿಸುವಂತೆ, ಮನೆಗೆಂದು ತೇಯ್ದ ತನ್ನ ಬದುಕು ಅಪಾತ್ರದಾನವಾಗಿಬಿಟ್ಟಿತೇ ಎನ್ನುವ ಉತ್ತರವಿಲ್ಲದ ಪ್ರಶ್ನೆ ಎದುರಾಗುತ್ತದೆ. ಮನೆಗೆ ಬಂದ ಮಗ ಟೀ ಕೆಟಲ್ಲಿನ ವಿಚಾರಣೆ ಮಾಡುವಾಗ ಅಪ್ಪನದಾಯಿತು ಈಗ ಮಗನ ಸರದಿ ಎಂದುಕೊಳ್ಳುವಾಗ ತನ್ನ ಬದುಕು ಸೋತಿದೆಯೋ ಸತ್ತಿದೆಯೋ ಎನ್ನುವ ವಿಷಣ್ಣತೆಯೂ ಅವಳಲ್ಲಿದೆ.

ಬದಲಾಗುತ್ತಿರುವ ಹೆಣ್ಣಿನ ಮನೋವಿನ್ಯಾಸವನ್ನು ಹೇಳುವ ಕವಿತೆಯೊಂದನ್ನು ಇದರ ಪಕ್ಕ ಇಟ್ಟರೆ, ಹೆಣ್ಣಿನ ವ್ಯಕ್ತಿತ್ವದ ಎಷ್ಟೆಲ್ಲ ಚಹರೆಗಳನ್ನು ಈ ಸಂಕಲನ ಒಳಗೊಂಡಿದೆ ಎನ್ನುವುದರ ಅರಿವಾಗುತ್ತದೆ.

ತನ್ನ ತಾಯಿಯೊಂದಿಗೆ ಮಗಳು ಸಹಜಾತಿ ಸಹಜವೆನ್ನುವಂತೆ `ತಿಂಗಳು ತುಂಬಿ ವಾರ ಕಳೆದರೂ ಇನ್ನೂ ಆಗಿಲ್ಲ’ ಎನ್ನುತ್ತಲೇ, ಇವತ್ತು ಸಂಜೆ ಮನೆಗೆ ಬರಲಿರುವ ಗೂಸ್ಲು ಜೊತೆ ಮದುವೆಗಿದುವೆ ಏನಿಲ್ಲ ಎಂದೂ ಹೇಳುತ್ತಾಳೆ. ಗಾಬರಿಯಾದರೂ ತಾಯಿಗೆ ಅನಿಸುತ್ತದೆ, ನಾವು ಇರಬೇಕಾದ್ದೇ ಹೀಗಲ್ಲವೇ ಎಂದು. ಮರುಕ್ಷಣದಲ್ಲೇ ಸಂಜೆಯ ಅತಿಥಿಗೆ ಮನೆ ಸಜ್ಜು ಮಾಡುವುದರ ಕಡೆಗೆ ಅವಳ ಗಮನ ಹರಿಯುತ್ತದೆ.

ಇನ್ನು ಒಂದು ಮುಖ್ಯ ಸಂಗತಿಯಿದೆ. ಮಾರ್ದವತೆ, ಕೊನೆಯಿಲ್ಲದೆ ಪ್ರೀತಿಸಬಲ್ಲ ಶಕ್ತಿ, ದೌರ್ಬಲ್ಯಗಳ ಜೊತೆಯಲ್ಲಿಯೆ ಸಂಗಾತಿಯನ್ನು ಒಪ್ಪಿಕೊಳ್ಳಬಲ್ಲ ಜೀವಗುಣ, ಪ್ರೀತಿಯನ್ನೇ ಸೌಂದರ್ಯ ಮೀಮಾಂಸೆಯಾಗಿ ಬೆಳೆಸಬಲ್ಲ ಅಪೂರ್ವ ಸೃಷ್ಟಿಶೀಲತೆಗಳು ಹೆಣ್ಣಿನ ಗುಣ ವಿಶೇಷಗಳು ಎನ್ನುವುದಾದರೆ, ಈ ಗುಣಗಳ ಮೂಲಕವೇ `ಅವಳ’ನ್ನು ಪ್ರಸ್ತುತ ಪಡಿಸುವ ಈ ಕವಿತೆಗಳು ತಮ್ಮ ಮಾರ್ದವತೆಯ ಕಾರಣಕ್ಕಾಗಿ ಕನ್ನಡದಲ್ಲಿ ಬಹುಕಾಲ ಉಳಿಯುತ್ತವೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.

ಹೆಣ್ಣಿನ ವ್ಯಕ್ತಿತ್ವದ ನೂರು ರೇಖಾಚಿತ್ರಗಳನ್ನು ಪ್ರೀತಿ, ಅಭಿಮಾನ, ತನ್ಮಯತೆ, ಕೋಪ, ಅಸೂಯೆಯ ಎಲ್ಲ ಬಣ್ಣಗಳಲ್ಲಿ ಚಿತ್ರಿಸುವ ಈ ಸಂಕಲನ ಕನ್ನಡ ಕಾವ್ಯದ ಶಕ್ತಿ ಮತ್ತು ಸೌಂದರ್ಯ ಎರಡನ್ನೂ ಹೆಚ್ಚಿಸಿದೆ.

ಪ್ರೀತಿಯೆನ್ನುವುದು ಒಬ್ಬರೊಬ್ಬರನ್ನು ನೋಡಿಕೊಳ್ಳುವ ಕನ್ನಡಿ ಮಾತ್ರವಲ್ಲ, ಅದು ಗಂಡು ಹೆಣ್ಣು ಇಬ್ಬರನ್ನು ಪೂರ್ಣಗೊಳಿಸುವ ಮಾಂತ್ರಿಕ ಶಕ್ತಿ ಎನ್ನುವುದನ್ನು `ಯಾರಿಗೂ ಹೇಳೋಣು ಬ್ಯಾಡ’ ಎನ್ನುವ ಪಿಸುಮಾತಿನಲ್ಲಿ ಹೇಳುತ್ತವೆ. ಇದು ಎಲ್ಲರಿಗೂ ತಿಳಿಯಲಿ ಎನ್ನುವ ಆರ್ತತೆಯಲ್ಲಿಯೂ ಒಡಮೂಡಿಸಿದ ರುದ್ರೇಶ್ವರಸ್ವಾಮಿಯವರಿಗೆ ಅಭಿನಂದನೆಗಳು.

‍ಲೇಖಕರು admin

March 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಬಿದಲೋಟಿ ರಂಗನಾಥ್

    ಅದ್ಬುತ ವಿಮರ್ಶೆ ಬರೆದಿದ್ದಾರೆ ಮೇಡಮ್ ಗೆ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: