ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದಕ್ಕೆ ನೀವೇನಂತೀರಿ…??

ಹ್ಯಾಂಡಿ‌ಕ್ಯಾಪ್ಡ್ – ವಿಕಲ ಚೇತನ ಮತ್ತು ಅಂಗ ಊನತೆ

ಅವಿನಾಶ್

ಇದೊಂದು ತೀರಾ ಕಾಡಿದ ಸಂಗತಿ. ದೇಹದ ಯಾವುದಾದರೂ ಒಂದು ಅಂಗ ಊನವಾಗಿರುವವರನ್ನು ಅಂಗವಿಕಲರು ಅಂತ ಕರೆಯುವ ಬದಲಾಗಿ, ವಿಕಲ ಚೇತನರು ಅಂತ ಕರೆಯಬೇಕೆಂಬ ಬಹುತೇಕ ಸಾರ್ವತ್ರಿಕವಾಗಿ ಒಪ್ಪಿಕೊಂಡ ನಿಯಮವೊಂದು ಚಾಲ್ತಿಯಲ್ಲಿದೆ.

ಇದರ ಹಿಂದಿರುವ ಉದ್ದೇಶ ಒಳ್ಳೆಯದೇ. ತಮ್ಮ ದೇಹದ ವೈಕಲ್ಯವನ್ನು ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿ, ಸಕಲಾಂಗಗಳೂ ಸರಿಯಾಗಿ ಇರುವವರಿಗಿಂತ ಒಂದು ಕೈ ಮೇಲೆ ಎಂಬಷ್ಟು ಸಾರ್ಥಕ ಸಾಧನೆಗಳನ್ನು ಮಾಡಿದವರಿದ್ದಾರೆ. ಈ ಕಾರಣಕ್ಕೆ, ವೈಕಲ್ಯವೊಂದು ಶಾಪ ಅಂತ ಕುಗ್ಗಿ ಹೋಗುವ ಜೀವಗಳಿಗೆ ಆತ್ಮವಿಶ್ವಾಸ, ಉತ್ತೇಜನ, ಪ್ರೋತ್ಸಾಹ ನೀಡುವ ಸದುದ್ದೇಶ ಅಲ್ಲಿತ್ತು. ದೈಹಿಕ ಊನತೆ ಇರುವವರು ಕುಗ್ಗಿಹೋಗಬಾರದು ಎಂಬ ಸದಾಶಯವಿಲ್ಲಿತ್ತು.

ಆದರೆ, ಈ ಹ್ಯಾಂಡಿಕ್ಯಾಪ್ಡ್ ಆಗಿರುವ ವ್ಯಕ್ತಿಗಳನ್ನು ಸಾರ್ವತ್ರಿಕವಾಗಿ ವಿಕಲ ಚೇತನರು ಅಂತ ಕರೆಯಬೇಕೇ ಎಂಬುದು ನನ್ನ ಮನಸ್ಸಿನಲ್ಲಿ ಈಗ ಮೂಡಿದ ಪ್ರಶ್ನೆ. ಇದಕ್ಕೆ ಕಾರಣವೆಂದರೆ, ಸುದ್ದಿಗಳ ಮೇಲೆ ಕಣ್ಣಾಡಿಸುತ್ತಿರುವಾಗ, ಹೊಸದಿಲ್ಲಿಯಲ್ಲಿ ನಡೆದ ದುರಂತವೊಂದು ಕಂಡಿತು.

ಅದೆಂದರೆ, 6 ವರ್ಷದ ಹುಡುಗಿಯ ಮೇಲೆ, 50 ವರ್ಷದ ವ್ಯಕ್ತಿಯೊಬ್ಬ ತಿಂಡಿಯ ಆಮಿಷ ತೋರಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಅವನ ಅಪರಾಧ ಸಾಬೀತಾಗಿ, ಸುಶೀಲ್ ಅಲಿಯಾಸ್ ಲಂಗ್ರಾ ಎಂಬಾತನಿಗೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶೆ ಸವಿತಾ ರಾವ್ ಅವರು 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆತ ಅಂಗವಿಕಲ ಕೆಟಗರಿಯಲ್ಲಿ ಬರುವಾತ ಎಂಬುದೇ ನನ್ನನ್ನು ಕಾಡಲು ಕಾರಣ.

ಮತ್ತೂ ಕಾಡಿದ್ದೆಂದರೆ, ನ್ಯಾಯಾಧೀಶೆ ತಮ್ಮ ತೀರ್ಪಿನಲ್ಲಿ, “ಅಪರಾಧಿಯ ದೈಹಿಕ ನ್ಯೂನತೆ ಕೂಡ ಆತನ ದುಷ್ಟ ಯೋಚನೆಗಳ ಮೇಲೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ” ಅಂತನೂ ಹೇಳಿದ್ದಾರೆ. ಒಂದರ್ಥದಲ್ಲಿ ಈ ದುಷ್ಟ ಯೋಚನೆಯೂ ಮನುಷ್ಯನ ಚೈತನ್ಯದ ಒಂದು ಭಾಗವಾಗಿರುವಾಗ, ಇಲ್ಲಿ ವಿಕಲ ಚೇತನ ಅಂತ ಕರೆಯಬಹುದೇ? ನೀವೇನಂತೀರಿ?

 

 

‍ಲೇಖಕರು avadhi

15 March, 2013

2 Comments

  1. ಪಂಡಿತಾರಾಧ್ಯ ಮೈಸೂರು

    ಅಂಗ ವಿಕಲತೆಗೆ ಮಾತ್ರ ಬಲಿಯಾಗಿರುವವರನ್ನು ಅಂಗವಿಕಲರು ಎನ್ನುವಂತೆ ಚೇತನ ವಿಕಲವಾಗಿರುವವರನ್ನು ಮಾತ್ರ ವಿಕಲ ಚೇತನರು ಎನ್ನಬಹುದು. ಅಂಗ ವಿಕಲರನ್ನು ವಿಕಲಚೇತನರೆಂದು ಕರೆಯುವರನ್ನು ವಿಕೃತ ಚೇತನರೆಂದು ಕರೆಯಬೇಕೇನೊ.
    ತಾವು ಮಾಡಿರುವ ಪದ ಪ್ರಯೋಗವೇ ಸರಿ ಎಂದು ಸಮರ್ಥಿಸಿಕೊಳ್ಳುವವರಿಗೆ ಏನು ಹೇಳಲು ಸಾಧ್ಯ? ಅಂಗ ವಿಕಲರಾಗಿ ನೊಂದವರಿಗೆ ಇತರರ ಬಗ್ಗೆ ಮಾನವೀಯ ಸಹಾನುಭೂತಿ ಹೆಚ್ಚಿರುತ್ತದೆ ಎಂಬ ಸಾಮಾನ್ಯ ನಿರೀಕ್ಷೆಯನ್ನು ಅಂಗವಿಕಲನೊಬ್ಬ ಆತ್ಯಾಚಾರ ಮಾಡಿ ಹುಸಿಮಾಡಿದ್ದಾನೆ. ಅವನಿಗೆ ಅಂಗ ಮಾತ್ರವಲ್ಲ ಚೇತನವೂ ವಿಕಲವಾಗಿದೆಯಲ್ಲ! ಎಂದು ನ್ಯಾಯಾಧೀಶರು ವಿಷಾದಪಟ್ಟಿದ್ದಾರೆ. ಅಂಥ ಚೇತನ ವಿಕಲರು ಮಾತ್ರ ವಿಕಲ ಚೇತನರು. ಪ್ರಕೃತಿಯ ಅನ್ಯಾಯಕ್ಕೆ ಬಲಿಯಾಗಿದ್ದರೂ ಆದನ್ನು ಲೆಕ್ಕಿಸದೆ ದಿಟ್ಟವಾಗಿ ಸಾಮಾನ್ಯರಿಗಿಂತ ಹೆಚ್ಚು ಸಾಧನೆಯನ್ನು ಮಾಡುವವರನ್ನು ದಿಟ್ಟ ಚೇತನರು ಎಂದು ಕರೆಯುವುದು ಆರ್ಥಪೂರ್ಣ. ಅಂಥವರನ್ನು ವಿಕಲ ಚೇತನರೆಂದು ಕರೆಯುವವರು ಮಾತ್ರವೇ ಆ ಪದ-ವಿಗೆ ಅರ್ಹರು.

    • Sumangala

      ಯಾವುದೋ ಒಂದು ಅಂಗ ವಿಕಲರಾಗಿರುವವರನ್ನು ವಿಕಲಚೇತನ ಎಂದು ಕರೆಯುವುದು ಸರಿಯಲ್ಲ, ಪಂಡಿತಾರಾಧ್ಯರ ಮಾತನ್ನು ನಾನು ಒಪ್ಪುತ್ತೇನೆ. ಅಂಗವೊಂದು ವಿಕಲವಾಗಿದ್ದ ಮಾತ್ರಕ್ಕೆ ಅವರ ಚೇತನ ಹೇಗೆ ವಿಕಲವಾಗುತ್ತದೆ… ಕನ್ನಡದ ದಿನಪತ್ರಿಕೆಯೊಂದು ಚಾಲ್ತಿಗೆ ತಂದ ಈ ಪದಪ್ರಯೋಗ ಈಗ ಎಲ್ಲೆಡೆ ರಾರಾಜಿಸುತ್ತಿದೆ. ಹಾಗೆ ಕರೆಯುವವರು ನಿಜಕ್ಕೂ ವಿಕೃತಚೇತನರೇ ಸರಿ. ಹುಟ್ಟಿನಿಂದ ಅಥವಾ ನಂತರ ಯಾವುದೋ ಆಕಸ್ಮಿಕದಲ್ಲಿ ಅಂಗ ಊನಗೊಂಡವರು ಅದನ್ನು ಮೆಟ್ಟಿನಿಲ್ಲಲು ಏನೆಲ್ಲ ಪ್ರಯತ್ನ ಮಾಡುತ್ತಾರೆ, ಎಷ್ಟು ಜನ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿ ಎಷ್ಟೆಲ್ಲ ಅದ್ಭುತ ಸಾಧನೆ ಮಾಡಿದ್ದಾರೆ… ಅವರ್ಯಾರೂ ವಿಕಲ ಚೇತನರು ಖಂಡಿತಕ್ಕೂ ಅಲ್ಲ. ದೆಹಲಿಯಲ್ಲಿ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆ ಅಂಗವಿಕಲ ವ್ಯಕ್ತಿಯಂಥವರನ್ನು ವಿಕೃತಚೇತನರು ಎನ್ನಬಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading