ಜಗತ್ತಿನಲ್ಲಿ ಮೂರು ವರ್ಗದ ಜನರಿರುತ್ತಾರೆ
ಈ ಪೈಕಿ ನೀವ್ಯಾರು ಎಂಬುದನ್ನು ಅರಿತುಕೊಳ್ಳಿ
ಆರ್ ಟಿ ವಿಠ್ಠಲಮೂರ್ತಿ
ಮೇಡಂ,ನಿಮ್ಮ ಜೀವಕ್ಕೆ ಗಂಡಾಂತರವಿದೆ. ಎಚ್ಚರದಿಂದಿರಿ ಅಂತ ನಾನು ಒಂದಲ್ಲ, ಹಲವಾರು ಬಾರಿ ಹೇಳಿದ್ದೆ ಇತ್ತೆಲ್ ಮೂಲ್ತಿ (ವಿಠ್ಠಲಮೂರ್ತಿ) ಆದರೆ ಅದಕ್ಕವರು ಸದಾ ಮಂದಹಾಸದ ಉತ್ತರವನ್ನೇ ನೀಡುತ್ತಿದ್ದರು.
ಒಂದು ಬಾರಿ ಸ್ವಲ್ಪ ಗಟ್ಟಿಯಾಗಿಯೇ ಹೇಳಿದ್ದೆ. ಮೇಡಂ. ನಿಮ್ಮ ಸುತ್ತ ಯೋಚಿಸಬಲ್ಲ ಜನರಿದ್ದಾಗ ನಿಮಗೆ ಅಂದುಕೊಂಡಷ್ಟು ಬೇಗ ಗಂಡಾಂತರ ಬರುವುದಿಲ್ಲ. ಆದರೆ ಆಲೋಚನಾರಹಿತ ಮನ:ಸ್ಥಿತಿಯಲ್ಲಿರುವವರು ನಿಮ್ಮನ್ನು ನಿರ್ದಾಕ್ಷಿಣ್ಯವಾಗಿ ಅಪಾಯಕ್ಕೆ ನೂಕಬಲ್ಲರು ಎಂದಿದ್ದೆ.
ಆಗಲೂ ಅವರದು ಒಂದೇ ಮಾತು. ಹೇಗೆ ಹೇಳುತ್ತೀರಿ ಖುಷ್ವಂತ್ ಜೀ. ನನಗೆ ಸ್ವಲ್ಪ ಬಿಡಿಸಿ ಹೇಳಿ ಎಂದಿದ್ದರು. ಆದರೆ ನನಗೇಕೋ ಗಾಢವಾಗಿ ಅನ್ನಿಸತೊಡಗಿತ್ತು. ಅಮೃತಸರದ ಸ್ವರ್ಣಮಂದಿರದ ಮೇಲೆ ಆಪರೇಷನ್ ಬ್ಲೂಸ್ಟಾರ್ ನಡೆಸಲು, ಆ ಮೂಲಕ ಬಿಂದ್ರನ್ ವಾಲೆಯ ಪಡೆಯನ್ನು ನಿರ್ನಾಮ ಮಾಡಲು ಇಂದಿರಾಗಾಂಧಿ ಕೈಗೊಂಡ ತೀರ್ಮಾನ ದೊಡ್ಡದೊಂದು ಗಂಡಾಂತರದ ಮುನ್ನುಡಿ ಎಂಬ ಆತಂಕ ಕಾಡುತ್ತಿತ್ತು.
ಯೆಸ್, ಮಿಲಿಟರಿಯವರು, ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಮಾಡಿ ಬಿಂದ್ರನ್ ವಾಲೆ ಮತ್ತವರ ಶಿಷ್ಯರನ್ನು ಹೊಡೆದು ಹಾಕಿದ್ದಕ್ಕೆ ನನ್ನ ವಿರೋಧವಿರಲಿಲ್ಲ. ಅದರೆ ಮಿಲಿಟರಿಯವರು ಬೂಟುಗಾಲುಗಳಲ್ಲಿ ಸ್ವರ್ಣ ಮಂದಿರಕ್ಕೆ ನುಗ್ಗಿ ಅದನ್ನು ಅಪವಿತ್ರಗೊಳಿಸಿದರು ಅನ್ನುವ ವಿಷಯದಲ್ಲಿ ನನಗೆ ಸಿಟ್ಟಿತ್ತು.
ನಾವು ಸಿಖ್ಖರು. ಸಹಜವಾಗಿ ಧರ್ಮದ ವಿಷಯದಲ್ಲಿ ಬೇಗ ರೋಷಾವಿಷ್ಟರಾಗುತ್ತೇವೆ. ನನಗೂ ಆ ರೋಷವಿತ್ತು. ಆದರೂ ಇಂದಿರಾಗಾಂಧಿ ಅವರ ಭದ್ರತೆಯ ವಿಷಯದಲ್ಲಿ ನನಗಿದ್ದ ಆತಂಕವನ್ನು ನಾನು ಹೇಳಿದೆ. ಆದರೆ ಅದನ್ನವರು ತಳ್ಳಿ ಹಾಕಿದರು ಎಂದು ಮಾತಿನಲ್ಲಿ ವಿಷಾದ ತುಳುಕಿಸಿದರು ಖುಷ್ವಂತ್ ಸಿಂಗ್!
ಅಷ್ಟೊತ್ತಿಗಾಗಲೇ ಅಶೋಕಾ ಹೋಟೆಲಿನಿಂದ ನಾವು ಕುಳಿತಿದ್ದ ಬೆಂಜ್ ಕಾರು ಚಾಲುಕ್ಯ ಹೋಟೆಲ್ ಬಳಿ ರೈಟ್ ಟರ್ನ್ ತೆಗೆದುಕೊಂಡಿತು. ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋಗಿ ಎಡಕ್ಕೆ ತಿರುಗಿಕೊಂಡರೆ ಸಿಗುವುದು ಕೆ.ಆರ್.ಸರ್ಕಲ್.
ಅಲ್ಲಿಂದ ಕಾರ್ಪೋರೇಷನ್, ಅದಕ್ಕಿಂತ ಸ್ವಲ್ಪ ಮುಂದೆಯೇ ಟೌನ್ ಹಾಲ್. ಆ ಕ್ಷಣದಲ್ಲಿ ತಲುಪುವ ದೂರವನ್ನು ನೆನಪಿಸಿಕೊಂಡು ನಾನು ಆತುರಕ್ಕೆ ಬಿದ್ದವನಂತೆ, ಸಾರ್, ಆಲೋಚನಾ ರಹಿತ ವ್ಯಕ್ತಿಗಳಿಂದ ಇಂದಿರಾಗಾಂಧಿಯವರಿಗೆ ಗಂಡಾಂತರವಿದೆ ಎಂದು ನಿಮಗೇಕೆ ಅನ್ನಿಸಿತ್ತು? ಅಂದೆ.
ನೋಡಿ ಇತ್ತೆಲ್ ಮೂಲ್ತಿ. ನಿಮಗೆ ಮಹಾಭಾರತ ಗೊತ್ತು. ಅದು ಹೇಳುವ ತತ್ವವನ್ನು ಅರ್ಥ ಮಾಡಿಕೊಳ್ಳಿ. ನಾನು ಅಂತಲ್ಲ. ದೊಡ್ಡ ದೊಡ್ಡ ಜ್ಞಾನಿಗಳು ಅದರ ಬಗ್ಗೆ ಹೇಳಿದ್ದಾರೆ. ವಸ್ತು ಸ್ಥಿತಿ ಎಂದರೆ, ಈ ಜಗತ್ತಿನಲ್ಲಿ ನಾನು ಪಡೆದಿದ್ದೆಲ್ಲ ಹೊರಗಿನಿಂದಲೇ ಪಡೆದಿದ್ದು. ಸ್ವಂತದ್ದು ಏನಿಲ್ಲ. ಪಡೆದದ್ದಕ್ಕೆ ಹೊಳಪು ನೀಡುವ ಶಕ್ತಿ ಇದ್ದುದರಿಂದ ಪತ್ರಕರ್ತನಾದೆ. ಇರಲಿ. ಅಂದ ಹಾಗೆ ಈ ಮಹಾಭಾರತದಲ್ಲಿ ನಿಜವಾಗಿಯೂ ಅಪ್ರತಿಮ ವೀರರೆಂದರೆ ಯಾರು? ಎಂದರು.
ಇನ್ಯಾರು? ಅರ್ಜುನ. ಕರ್ಣ.. ಎಂದು ಬಾಯಿ ತೆಗೆದೆ. ನೋ, ನೋ ಇತ್ತೆಲ್ ಮೂಲ್ತಿ. ಅರ್ಜುನ ಮತ್ತು ಕರ್ಣ ಯುದ್ದದಲ್ಲಿ ಚಾಣಾಕ್ಷರು. ಆದರೆ ಯುದ್ಧದ ವಿಷಯದಲ್ಲಿ ಅರ್ಜುನನಿಗೆ ಹಿಂಜರಿಕೆ ಇತ್ತು. ಕರ್ಣನಿಗೆ ಬಾಲ್ಯದಿಂದಲೂ ತಾನು ಸೂತಪುತ್ರ ಅನ್ನಿಸಿಕೊಂಡ ಅಪಮಾನವನ್ನು ತೀರಿಸಿಕೊಳ್ಳಲು ಅವಕಾಶ ಬೇಕಿತ್ತು ಅಷ್ಟೇ.
ನಿಜ ಹೇಳಬೇಕೆಂದರೆ ಯುದ್ಧ ರಂಗಕ್ಕೆ ಹೋಗುವ ಮುನ್ನಿನ ಅರ್ಜುನನ ಸ್ಥಿತಿ ಆಲೋಚನೆ ಮಾಡುವ ಬಹುತೇಕ ಎಲ್ಲರಲ್ಲೂ ಇರುತ್ತದೆ. ಅರ್ಥಾತ್, ಒಂದು ಘಟನೆಯ ಮುಂದಿನ ಪರಿಣಾಮಗಳ ಬಗ್ಗೆ ಆತಂಕವಿರುತ್ತದೆ. ಬಹುತೇಕರು ಈ ಕೆಟಗರಿಗೆ ಸೇರಿರುವುದಿಂದಲೇ ವ್ಯವಸ್ಥೆಯಲ್ಲಿ ಸದಾ ಗೊಂದಲ ಇರುತ್ತದೆ. ಮತ್ತು ಈ ಗೊಂದಲವನ್ನು ಅವರು ತಮ್ಮ ಸುತ್ತಲಿನವರಿಗೆ ದಾಟಿಸುತ್ತಾರೆ. ಇದೇ ರೀತಿಯ ಗೊಂದಲದ ಕಾರಣಕ್ಕಾಗಿ ಆತ ಯುದ್ಧ ನಿರರ್ಥಕ ಎಂದು ಹೇಳಿ, ಯುದ್ದರಂಗದಿಂದ ಹಿಂದೆ ಸರಿಯಲು ಯತ್ನಿಸಿದ. ಅದರೆ ಆತನ ಗೊಂದಲವನ್ನು ಶ್ರೀ ಕೃಷ್ಣ ಪರಿಹರಿಸಿದ. ಯುದ್ಧಕ್ಕೆ ಅಣಿಯಾಗುವಂತೆ ಮಾಡಿದ.
ಆದರೆ ನನ್ನ ಪ್ರಕಾರ, ಕುರುಕ್ಷೇತ್ರ ಯುದ್ದದಲ್ಲಿ ಮುಖಾಮುಖಿಯಾದ ನಿಜವಾದ ಅಪ್ರತಿಮ ವೀರರೆಂದರೆ ಭೀಮ ಹಾಗೂ ಧುರ್ಯೋಧನ ಎಂದರು ಖುಷ್ವಂತ್ ಸಿಂಗ್. ನನಗೆ ಅಚ್ಚರಿಯಾಯಿತು. ನಿಜವಾದ ಯೋಧರು ಅಪ್ರತಿಮ ಬುದ್ದಿವಂತರಾಗಿರುವುದಿಲ್ಲ. ಹಾಗೆಯೇ ಬುದ್ದಿವಂತರು ಅಪ್ರತಿಮ ಯೋಧರಾಗಿರುವುದಿಲ್ಲ. ಚಾಣಾಕ್ಷರಾಗಿರುತ್ತಾರೆ. ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ. ಹೀಗಾಗಿ ನಾನು ಅರ್ಜುನನನ್ನು ಚಾಣಾಕ್ಷ ಯೋಧ ಎನ್ನುತ್ತೇನೆ. ಒಂದು ವೇಳೆ ಶ್ರೀಕೃಷ್ಣ ಏನಾದರೂ ಅವನನ್ನು ಮಾನಸಿಕವಾಗಿ ಹೆಡಮುರಿ ಕಟ್ಟದೇ ಇದ್ದಿದ್ದರೆ ಅನುಮಾನವೇ ಬೇಡ. ಯುದ್ದದಲ್ಲಿ ಪಾಂಡವರಲ್ಲ, ಕೌರವರೇ ಗೆಲ್ಲುತ್ತಿದ್ದರು. ಯಾಕೆಂದರೆ ಯುದ್ಧರಂಗದಿಂದ ಅರ್ಜುನ ಓಡಿ ಹೋಗಿದ್ದರೆ ಪಾಂಡವರ ಸೈನ್ಯದಲ್ಲಿ ಸಹಜವಾಗಿಯೇ ಸ್ಥೈರ್ಯ ಕುಗ್ಗುತ್ತಿತ್ತು. ಹೀಗಾಗಿ ಸ್ಪಷ್ಟವಾಗಿ ಹೇಳುತ್ತೇನೆ. ಈ ಯುದ್ಧದಲ್ಲಿ ಪಾಂಡವರನ್ನು ಗೆಲ್ಲಿಸಿದವನು ಯೋಚನಾ ಶೂನ್ಯತೆಗೆ ತಲುಪಿದ್ದ ಶ್ರೀಕೃಷ್ಣ.
ಇರಲಿ, ಅಪ್ರತಿಮ ಯೋಧರು ಎಂದು ಇವರಿಬ್ಬರನ್ನೇ ನಾನು ಯಾಕೆ ಬೆರಳು ಮಾಡಿ ತೋರಿಸುತ್ತಿದ್ದೇನೆಂದರೆ, ಇಬ್ಬರಿಗೂ ಯುದ್ಧದ ಪರಿಣಾಮಗಳ ಕುರಿತು ಚಿಂತೆಯೇ ಇರಲಿಲ್ಲ. ಬದಲಿಗೆ ಎದುರಿಗೆ ಸಿಕ್ಕವರನ್ನು ಕೊಚ್ಚಿ ಬಿಸಾಡಬೇಕು ಎಂಬುದೇ ಸ್ಥಾಯಿಬಾವವಾಗಿತ್ತು.
ವಸ್ತುಸ್ಥಿತಿ ಎಂದರೆ, ಜಗತ್ತಿನಲ್ಲಿ ಮೂರು ತರದ ಜನರಿರುತ್ತಾರೆ. ಒಂದು, ಆಲೋಚನಾರಹಿತ ಸ್ಥಿತಿಯಲ್ಲಿರುವ ಜನ. ಭೀಮ, ಧುರ್ಯೋಧನನಂತವರು. ಎರಡು, ಯೋಚನಾ ಸ್ಥಿತಿಯಲ್ಲಿರುವವರು. ಅಂದರೆ ಅರ್ಜುನನಂತವರು. ಮೂರನೆಯವರು, ಯೋಚನೆ ಮಾಡುವ ಸ್ಥಿತಿಯನ್ನು ಮೀರಿದವರು. ಅಂದರೆ ಶ್ರಿಕೃಷ್ಣನಂತವರು.
ಈ ಮೂರು ರೀತಿಯ ಜನರ ಪೈಕಿ ನೀವು ಯಾವ ತರದವರು ಎಂಬುದನ್ನು ಕಂಡುಕೊಳ್ಳಿ. ನಿಮ್ಮ ಬದುಕಿನ ದಾರಿ ಸ್ಪಷ್ಟವಾಗುತ್ತದೆ ಎಂದರು ಖುಷ್ವಂತ್ ಸಿಂಗ್. ನಾನು ಬೆಕ್ಕಸಬೆರಗಿನಿಂದ ಕೇಳುತ್ತಲೇ ಇದ್ದೆ.
ಜಗತ್ತಿನ ಇತಿಹಾಸವನ್ನು ತೆಗೆದುನೋಡಿ. ಯಾವ್ಯಾವ ಜನಾಂಗಗಳು, ಆಲೋಚನಾ ರಹಿತ ಸ್ಥಿತಿಯಲ್ಲಿರುತ್ತವೋ? ಅಂತವರನ್ನು ದೇವರು, ಧರ್ಮ, ನೆಲ, ಹೆಣ್ಣು, ಭಾಷೆ.. ಹೀಗೆ ಯಾವುದಾದರೂ ಒಂದು ವಿಷಯದಲ್ಲಿ ಭಾವನಾತ್ಮಕವಾಗಿ ಕೆರಳಿಸಿ, ಬರ್ಬರ ಸ್ಥಿತಿಗೆ ತಲುಪಿಸಿ, ಅಲ್ಲಿಂದ ಯುದ್ಧದ ಸ್ಥಿತಿಗೆ ಎಳೆದುಕೊಂಡು ಹೋಗಿಬಿಡಬಹುದು. ಈ ತರದ ಜನರನ್ನು ಮಾರ್ಕೆಟಿಂಗ್ ಪೀಪಲ್ಸ್ ಸುಲಭವಾಗಿ ಬಳಸಿಕೊಂಡು ಬಿಡುತ್ತಾರೆ. ಈ ಅಪಾಯವನ್ನು ಬಿಟ್ಟರೆ ಆಲೋಚನಾರಹಿತ ಜನ ಬದುಕನ್ನು ಧೈರ್ಯವಾಗಿ ಎದುರಿಸುತ್ತಾರೆ.
ಆದರೆ ಎರಡನೆ ವರ್ಗದ ಜನ ಇರುತ್ತಾರಲ್ಲ? ಇವರು ಹೆಚ್ಚು ಯೋಚನೆ ಮಾಡುವುದರಿಂದ, ಅವರ ಯೋಚನೆಯನ್ನು ತಪ್ಪು ಎಂದು ಮನವರಿಕೆ ಮಾಡಿಕೊಡುವವರ ಅಗತ್ಯವಿರುತ್ತದೆ. ಇಲ್ಲದಿದ್ದರೆ ಇಂತವರು ಯುದ್ದರಂಗದಿಂದ ಪಲಾಯನ ಮಾಡಿಬಿಡುತ್ತಾರೆ. ಅದು ನೇರ ಯುದ್ಧವೇ ಆಗಬೇಕೆಂದಿಲ್ಲ. ಬದುಕಿನಿಂದಲೇ ಪಲಾಯನ ಮಾಡುತ್ತಿರುತ್ತಾರೆ.
ಮೂರನೆ ವರ್ಗದ ಜನರು, ತಮ್ಮನ್ನು ಬದುಕಿನ ನಿಕಷಕ್ಕೆ ಒಡ್ಡಿಕೊಳ್ಳದೇ ಬೇರೆ ದಾರಿಯೇ ಇಲ್ಲ ಎಂಬ ಸತ್ಯವನ್ನು ಅರಿತಿರುತ್ತಾರೆ. ಹೀಗಾಗಿ ಅವರು ಪಲಾಯನ ಮಾಡದೆ ಸನ್ನಿವೇಶಕ್ಕೆ ತಮ್ಮನ್ನು ಒಡ್ಡಿಕೊಳ್ಳಬಲ್ಲರು. ಅಂದರೆ ಯುದ್ಧ ಮಾಡಬಲ್ಲರು. ಯುದ್ಧ ಎಂದರೆ ಲಿಟರಲಿ ವಾರ್ ಎಂಬ ಅರ್ಥದಲ್ಲೇ ನೋಡಬೇಕಿಲ್ಲ. ಬದುಕು ಕೂಡಾ ಯುದ್ಧವೇ .ಹೀಗಾಗಿ ಇದನ್ನು ಶ್ರೀಕೃಷ್ಣನಂತೆ ಎದುರಿಸುವ ಯೋಚನಾ ಶೂನ್ಯ ಮನ:ಸ್ಥಿತಿ ನಮಗೆ ದಕ್ಕಬೇಕು.
ಇದನ್ನೇಕೆ ಹೇಳಿದೆನೆಂದರೆ, ನಾವು ಸಿಖ್ಖರು. ಆಗಿರುವ ನೋವನ್ನು, ಅವಮಾನವನ್ನು ಯಾವ ಕಾರಣಕ್ಕೂ ಮರೆಯುವುದಿಲ್ಲ. ಪರ್ಸನಲಿ. ಧರ್ಮದ ವಿಷಯ ಬಂದಾಗ ಅತ್ಯಂತ ವಿನಯದಿಂದ ಮತ್ತು ಅತ್ಯಂತ ಕಟುಕತನದಿಂದ ವರ್ತಿಸಲು ನಮಗೆ ಸಾಧ್ಯವಿದೆ.
ಅದಕ್ಕೇ ನನಗೆ ಒಂದು ಆತಂಕವಿತ್ತು. ಇದೇ ಕಾರಣಕ್ಕಾಗಿ ನಾನು ಇಂದಿರಾಗಾಂಧಿಯವರಿಗೆ ಹೇಳಿದ್ದೆ. ಮೇಡಂ. ನೀವು ಆಪರೇಷನ್ ಬ್ಲೂಸ್ಟಾರ್ ಮಾಡಿಸಿದ ವಿಷಯದಲ್ಲಿ ನನಗೆ ಅಸಮಾಧಾನವಿದೆ. ಆದರೆ ನಿಮ್ಮ ಪ್ರಾಣ ಸಾಮಾನ್ಯದ್ದಲ್ಲ. ಯಾಕೆಂದರೆ, ನೀವು ದೇಶದ ಪ್ರಧಾನಿ. ಹೀಗಾಗಿ ಮೊದಲು ನಿಮ್ಮ ಸುತ್ತ ಇರುವ ಭದ್ರತಾ ಪಡೆಯನ್ನು ಪುನರ್ರಚಿಸಿ ಎಂದಿದ್ದೆ. ನನಗೆ ಅನುಮಾನವಿತ್ತು. ಜೀವ ಕೊಡಬಲ್ಲವರು, ಜೀವ ತೆಗೆದುಕೊಳ್ಳಲೂ ಸಮರ್ಥರಿರುತ್ತಾರೆ. ಯಾಕೆಂದರೆ ಭಾವನಾತ್ಮಕವಾಗಿ ಅವರನ್ನು ಒಂದು ವಿಷಯಕ್ಕೆ ಕಟ್ಟಿ ಹಾಕಿ, ಏನು ಬೇಕಾದರೂ ಮಾಡಿಸಬಹುದು.
ಆದರೆ ಇಂದಿರಾಗಾಂಧಿಯವರ ವಾದ ಸರಣಿ ಬೇರೆಯದೇ ಇತ್ತು. ಅದಕ್ಕೆಂತಲೇ ನೋ, ನೋ, ಖುಷ್ನಂತ್ ಜೀ. ನನ್ನ ಭದ್ರತಾ ಪಡೆಯವರು ಯಾವ ಆಮಿಷಕ್ಕೂ ಒಳಗಾಗದವರು. ಆಮಿಷಕ್ಕೆ ಒಳಗಾಗದ ಜನ ಯಾವುದೇ ತ್ಯಾಗಕ್ಕೆ ಸಿದ್ಧರಾಗಬಲ್ಲರು ಎಂದು ಹೇಳಿದ್ದರು. ನಾನು ವಿಷಾದ ವ್ಯಕ್ತಪಡಿಸಿ ಸುಮ್ಮನಾದೆ. ಮುಂದಿನದು ಇತಿಹಾಸ.
ಈ ಬಗ್ಗೆ ಮುಂದೊಂದು ದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರಿಗೆ ವಿಷಯ ಹೇಳಿದೆ. ಅದಕ್ಕವರು, ನೀವು ಹೇಳಿದ್ದು ನಿಜ. ಈ ವಿಷಯದಲ್ಲಿ ನಮ್ಮ ತಾಯಿ ಎಚ್ಚರ ವಹಿಸಬಹುದಿತ್ತು. ಆದರೆ ಅವರಿಗೆ ಶ್ರೀಕೃಷ್ಣನ ಗುಣವಿತ್ತು. ಅಂದರೆ ತಾವು ತೆಗೆದುಕೊಳ್ಳುವ ನಿರ್ದಾರಕ್ಕೆ ಪ್ರತಿಯಾಗಿ ಪ್ರಾಣವನ್ನೇ ಕೊಡಬೇಕಾಗಿ ಬಂದರೂ ಪರವಾಗಿಲ್ಲ ಎಂಬ ಯೋಚನಾ ಶೂನ್ಯ ಸ್ಥಿತಿಗೆ ಅವರು ಬಂದಿದ್ದರು ಅನ್ನಿಸುತ್ತದೆ ಎಂದಿದ್ದರು.
ತನಗೆ,ಇಂತಹ ಮನ:ಸ್ಥಿತಿ ಇದ್ದುದರಿಂದಲೇ ಮೂರು ದಶಕಗಳ ಅವಧಿಯಲ್ಲಿ ನನಗನ್ನಿಸಿದ ಕೆಲಸ ಮಾಡಲು ಸಾಧ್ಯವಾಯಿತು. ಎಂತೆಂತಹ ಶತ್ರುಗಳನ್ನೂ ಬಡಿದು ಹಾಕಲು ಸಾಧ್ಯವಾಯಿತು. ಅಷ್ಟೇ ಏಕೆ? ದೇಶದ ಮೇಲೆ ತುರ್ತು ಸ್ಥಿತಿ ಹೇರಲು ಸಾಧ್ಯವಾಯಿತು. ಮತ್ತು ಹಾಗೆ ಹೇರಿಯೂ ಕೆಲವೇ ವರ್ಷಗಳಲ್ಲಿ ರಾಜಕೀಯವಾಗಿ ಮೇಲೆದ್ದು ನಿಲ್ಲಲು ಸಾಧ್ಯವಾಯಿತು. ಹೀಗಾಗಿ ಆಪರೇಷನ್ ಬ್ಲೂ ಸ್ಟಾರ್ ನಂತರವೂ ತಮಗೇನೂ ಆಗುವುದಿಲ್ಲ. ಆದರೂ ಪರವಾಗಿಲ್ಲ ಎಂಬ ಸ್ಥಿತಿಗೆ ತಲುಪಿದ್ದರು ಎಂದರು ರಾಜೀವ್ ಗಾಂಧಿ.
ಹಾಗಂತ ಅದನ್ನು ಶ್ರೀಕೃಷ್ಣನ ಮನ:ಸ್ಥಿತಿ ಎನ್ನಲು ಸಾಧ್ಯವಿಲ್ಲ. ಬದಲಿಗೆ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲೆ ಎಂಬ ಹಟ ಅವರಲ್ಲಿ ಒಂದು ಬಗೆಯ ಮೈ ಮರೆವನ್ನು ತಂದಿತ್ತು. ಈ ಮೈ ಮರೆವು ಕೂಡಾ ಅತಿ ಬುದ್ಧಿವಂತಿಕೆಯ ಲಕ್ಷಣ.
ಆದರೆ ಇವತ್ತು ನನಗನ್ನಿಸುತ್ತಿದೆ ಇತ್ತೆಲ್ ಮೂಲ್ತಿ. ಜಾಗತೀಕರಣ ಸೃಷ್ಟಿಸುವ ಕಂದರ ಮುಂದೆ ಯಾವ ಮಟ್ಟಕ್ಕೆ ತಲುಪುತ್ತದೆ ಎಂದರೆ ದೇಶದಲ್ಲಿ ಸೃಷ್ಟಿಯಾಗುವ ಈ ಕಂದರವನ್ನು ತುಂಬಲು ಯಾರ ಕೈಲೂ ಸಾಧ್ಯವೇ ಇಲ್ಲ. ಅಂತಹ ಸಂದರ್ಭವನ್ನು ಎದುರಿಸಲು ಇಂದಿರಾಗಾಂಧಿ ಅವರಿಗಿಂತಲೂ ಸ್ಥಿತಪ್ರಜ್ಞರಾದ, ಮಾನವೀಯತೆಯನ್ನೇ ಸಾಕಾರಗೊಳಿಸಿಕೊಂಡ ನಾಯಕರು ಈ ದೇಶಕ್ಕೆ ಬೇಕಾಗುತ್ತಾರೆ ಅನ್ನಿಸುತ್ತದೆ ಎಂದರು ಖುಷ್ವಂತ್ ಸಿಂಗ್.
ಅಷ್ಟೊತ್ತಿಗಾಗಲೇ ಕಾರು ಕಾರ್ಪೋರೇಷನ್ ಸರ್ಕಲ್ ದಾಟಿ, ತಲುಪಬೇಕಿದ್ದ ಕಾರ್ಯಕ್ರಮದ ಜಾಗಕ್ಕೆ ಬಂದಿತ್ತು. ನಾನು ಸುಮ್ಮನೆ ಅವರ ಮುಖ ನೋಡಿ ನಕ್ಕೆ. ಅವರೂ ನನ್ನ ಭುಜದ ಮೇಲೆ ಕೈ ಹಾಕಿ ಕಾರಿನಿಂದ ಕೆಳಗಿಳಿದರು.
ಅಂದ ಹಾಗೆ ಇತ್ತೀಚಿನ ಹಲವಾರು ಘಟನೆಗಳು, ಸುತ್ತಲ ವಾತಾವರಣವನ್ನೇ ಹದೆಗೆಡಿಸುತ್ತಿರುವ ಸಂಕಟವೋ ಏನೋ? ಖುಷ್ವಂತ್ ಸಿಂಗ್ ಅವರ ಜತೆಗಿನ ಈ ಎಲ್ಲ ನೆನಪುಗಳನ್ನು ಮನಸ್ಸೆಂಬ ಗರ್ಭಕೋಶದಿಂದ ಹೊರನೂಕಿದವು. ಅದಕ್ಕೆಂದೇ ಹೀಗೆ ಹೊರಬಿದ್ದ ಮಗುವಿಗೆ ಬೆಚ್ಚನೆಯ ಟವೆಲ್ಲು ಸುತ್ತಿ ನಿಮ್ಮೆದುರಿಗಿಟ್ಟೆ.






0 Comments