ಇತಿಹಾಸದ ಉತ್ಖನನವೂ ಉನ್ಮತ್ತ ರಾಜಕಾರಣವೂ..

ನಾ ದಿವಾಕರ


ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೂರು ವಿಭಿನ್ನ ಘಟ್ಟಗಳನ್ನು ಗುರುತಿಸಬಹುದು. ಮೊದಲನೆಯದು ನೆಹರೂ ಯುಗ, ಎರಡನೆಯದು ಜಾಗತೀಕರಣ ಯುಗ ಮತ್ತು ಪ್ರಸ್ತುತ ಕಾಣಲಾಗುತ್ತಿರುವ ನವ ಉದಾರವಾದಿ ಫ್ಯಾಸಿಸ್ಟ್ ಯುಗ.

ಈ ಮೂರೂ ಯುಗಗಳಲ್ಲಿ ಕಾಣಬಹುದಾದ ಒಂದು ಸಮಾನ ರೇಖೆ ಎಂದರೆ ಭಾರತದ ಸಾರ್ವಭೌಮ ಪ್ರಜೆಗಳ ಅಸಹಾಯಕತೆ, ಹತಾಶೆ ಮತ್ತು ಭ್ರಮನಿರಸನ.

ಭಾರತದ ಜನತೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ನಿರ್ವಹಿಸುವ ರಾಜಕೀಯ ಪಕ್ಷಗಳ ಒಳಹೊರಗುಗಳನ್ನು ಗ್ರಹಿಸಿರುವಷ್ಟು ಆಳುವ ವರ್ಗಗಳ ಮತ್ತು ಪ್ರಭುತ್ವದ ಸೂಕ್ಷ್ಮಗಳನ್ನು ಗ್ರಹಿಸಿಲ್ಲ ಎನ್ನುವುದು ದುರಂತವಾದರೂ ಸತ್ಯ. ಬಹುಶಃ ಜಾತಿ ರಾಜಕಾರಣ, ಮತೀಯ ರಾಜಕಾರಣ ಮತ್ತು ಆರಾಧನಾ ಸಂಸ್ಕೃತಿ ಈ ಬೆಳವಣಿಗೆಗೆ ಕಾರಣವಿರಬಹುದು.

ಈ ಮೂರೂ ಯುಗಗಳ ಪುನರಾವಲೋಕನ ಮಾಡಿದಾಗ ಸ್ಪಷ್ಟವಾಗುವ ಒಂದು ಅಂಶವೆಂದರೆ ಭಾರತದ ಪ್ರಜಾತಂತ್ರ ಈ ದೇಶದ ಶೋಷಿತ, ದಮನಿತ ಜನಸಮುದಾಯಗಳಿಗೆ, ಆದಿವಾಸಿಗಳಿಗೆ, ಶ್ರಮಜೀವಿಗಳಿಗೆ, ಮಹಿಳೆಯರಿಗೆ ಮತ್ತು ಅವಕಾಶವಂಚಿತಗರಿಗೆ ಮಾಯಾಲೋಕವನ್ನು ಸೃಷ್ಟಿಸುತ್ತಿದೆಯೇ ಹೊರತು ಸುಸ್ಥಿರ ಬದುಕಿಗೆ ಅಗತ್ಯವಾದ ಪರಿಸರವನ್ನು ಸೃಷ್ಟಿಸುತ್ತಿಲ್ಲ.

ಈ ಮಾಯಾಲೋಕ ಚುನಾವಣೆಗಳ ಮೂಲಕ ಸಾಂವಿಧಾನಿಕ ಮಾನ್ಯತೆ ಪಡೆಯುತ್ತಿರುವುದೂ ಸತ್ಯ. ಇಂದು ಮೋದಿ ಮತ್ತು ಹಿಂಬಾಲಕರಿಂದ ದಿನನಿತ್ಯ ಟೀಕೆಗೊಳಗಾಗುತ್ತಿರುವ ನೆಹರೂ ಯುಗ (1947-1990) ಭಾರತವನ್ನು ವಿಶ್ವದ ಮಹಾನ್ ರಾಷ್ಟ್ರವಾಗಿ ರೂಪಿಸಿದಂತಹ ಯುಗ ಹೌದು.

ಆದರೆ ಇದು ಅರ್ಧಸತ್ಯ.

ಸಾಧನೆಗಳು ಅಪಾರ. ಶಿಕ್ಷಣ, ವಿಜ್ಞಾನ, ಆರೋಗ್ಯ, ಸಾಮಾಜಿಕ ಘನತೆ, ಉನ್ನತ ಶಿಕ್ಷಣ, ಸಂಶೋಧನೆ, ಬಾಹ್ಯಾಕಾಶ ವಿಜ್ಞಾನ, ವಿಶ್ವದ ಅತಿ ಶ್ರೇಷ್ಠ ಶಿಕ್ಷಣ ಮತ್ತು ವಿಜ್ಞಾನ ಸಂಸ್ಥೆಗಳು ಹೀಗೆ ನೆಹರೂ ಯುಗ ಎಂದು ಹೇಳಲಾಗುವ ಈ 43 ವರ್ಷಗಳ ಅವಧಿಯಲ್ಲಿ ದೇಶ ಸಾಧಿಸಿದ ಪ್ರಗತಿ ಅದ್ಭುತ. ಈ ಅಭಿವೃದ್ಧಿಯ ಫಲಾನುಭವಿಗಳು ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿರುವುದನ್ನೂ ಕಂಡಿದ್ದೇವೆ.

ನಿಜ ಈ ಎಲ್ಲ ಬೆಳವಣಿಗೆಗಳ ನಡುವೆಯೂ ಭಾರತದಲ್ಲಿ ಬಡತನ, ಅನಕ್ಷರತೆ, ಅನಾರೋಗ್ಯ, ಅರಾಜಕತೆ ತಾಂಡವಾಡುತ್ತಿದೆ. ಕೆಳಸ್ತರದ ಜನಸಮುದಾಯಗಳು ಇಷ್ಟೆಲ್ಲಾ ಅಭಿವೃದ್ಧಿಯ ನಡುವೆಯೂ ಏಕೆ ಅವಕಾಶವಂಚಿತರಾಗಿಯೇ ಇವೆ ? ಈ ಪ್ರಶ್ನೆಗೆ ಉತ್ತರವನ್ನು ಮೋದಿ ಭಜನಾಮಂಡಲಿಯವರಿಂದ ನಿರೀಕ್ಷಿಸಿದರೆ ನೆಹರೂ ಯುಗದಲ್ಲಿ ಏನನ್ನೂ ಸಾಧಿಸಲಾಗಿಲ್ಲ ಎಂಬ ಸಿದ್ಧ ಉತ್ತರ ಬರುತ್ತದೆ.

ಆದರೆ ಈ ತಳಮಟ್ಟದ ಜನಸಮುದಾಯಗಳ ದೃಷ್ಟಿಕೋನದಿಂದ ನೋಡಿದಾಗ ಭಾರತದ ಪ್ರಗತಿಯ ಪಥದಲ್ಲೇ ಮೂಲಭೂತ ಸಮಾಜೋ ಆರ್ಥಿಕ ದೋಷಗಳಿರುವುದನ್ನು ಗಮನಿಸಬಹುದು. ಬಹುಶಃ ಮೋದಿ ಆಳ್ವಿಕೆಯಲ್ಲಿ ಈ ದೋಷಗಳನ್ನು ಎತ್ತಿ ತೋರಿದವರು ನಗರ ನಕ್ಸಲರಾಗುವ ಸಾಧ್ಯತೆಗಳೂ ಇವೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾಯಿತವಾಗುವ ಸರ್ಕಾರದ ಮೊದಲ ಆದ್ಯತೆ ಇಂತಹ ದೋಷಗಳನ್ನು ಸರಿಪಡಿಸಿ ಜನಸಾಮಾನ್ಯರ ಒಳಿತಿಗಾಗಿ ಹೊಸ ಮಾರ್ಗಗಳನ್ನು ಸೃಷ್ಟಿಸುವುದಾಗಿರಬೇಕು. ಆದರೆ 1991ರಲ್ಲಿ ಪಿ ವಿ ನರಸಿಂಹರಾವ್ ಸರ್ಕಾರ ಹೊಸ ಮಾರ್ಗಗಳನ್ನೇನೋ ಸೃಷ್ಟಿಸಿತ್ತು ಆದರೆ ಈ ಮಾರ್ಗದ ಜಟಿಲ ಪಯಣದಲ್ಲಿ ಆ ವೇಳೆಗಾಗಲೇ ಜರ್ಝರಿತರಾಗಿದ್ದ ಕೆಳಸ್ತರದ ಜನಸಮುದಾಯಗಳು ಅಂಚಿಗೆ ತಳ್ಳಲ್ಪಟ್ಟವು.

ಸಮಾಜವಾದ ಸಮತಾವಾದದ ಹೆಸರಿನಲ್ಲೇ ಸ್ವತಂತ್ರ ಭಾರತದ ಪ್ರಭುತ್ವ ಬಂಡವಾಳ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿದ್ದರೂ ಸಂಪನ್ಮೂಲಗಳ ವಿತರಣೆಯಲ್ಲಿ ಕೊಂಚ ಮಟ್ಟಿಗಾದರೂ ನ್ಯಾಯ ಒದಗಿಸಲಾಗಿತ್ತು. ಸಮಾಜವಾದಿ ಸಂವಿಧಾನದ ಭಾರತದಲ್ಲಿ ಸಂಪತ್ತು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಮಾನ ಹಂಚಿಕೆಯ ಬಗ್ಗೆ ಚರ್ಚೆಯೂ ಆಗಿಲ್ಲ ಎನ್ನುವುದು ವಿಡಂಬನೆಯಾದರೂ ಸತ್ಯ. ಹಾಗೊಮ್ಮೆ ಚರ್ಚೆಯಾಗಿದ್ದರೆ ಅದು ಆದಿವಾಸಿಗಳ ನಡುವೆ, ದಲಿತ ಕೇರಿಗಳ ನಡುವೆ, ಶ್ರಮಜೀವಿಗಳ ನಡುವೆ ನಡೆದಿದೆ. ಇಂದಿನ ಮೋದಿ ಸರ್ಕಾರ ಇದನ್ನೇ ನಗರ ನಕ್ಸಲಿಸಂ ಎನ್ನುತ್ತದೆ.

ನೆಹರೂ ಯುಗದ ಎರಡನೆಯ ಪಾಳಿಯಲ್ಲಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಹೊಸ ದಿಕ್ಕು ನೀಡಿದವರು ಶ್ರೀಮತಿ ಇಂದಿರಾಗಾಂಧಿ. ಆದರೆ ಇಂದಿರಾಗಾಂಧಿಯವರ ಮುಂದೆ ಇದ್ದ ಸವಾಲುಗಳು ಬಹುಶಃ ಭಾರತದ ಯಾವುದೇ ಪ್ರಧಾನಿಗೂ ಎದುರಾಗಲಿಲ್ಲ ಎನ್ನಬಹುದು. ಅನ್ನಾಹಾರದ ಕೊರತೆ, ಪಾಕಿಸ್ತಾನದೊಡನೆ ಯುದ್ಧ, ನೆರೆ ರಾಷ್ಟ್ರಗಳ ಕಿರುಕುಳ, ನಿರುದ್ಯೋಗ, ಬಡತನ, ಅನಕ್ಷರತೆ, ಹಣಕಾಸು ವ್ಯವಸ್ಥೆಯಲ್ಲಿ ಖಾಸಗಿ ಉದ್ದಿಮೆದಾರರ ದಬ್ಬಾಳಿಕೆ ಇತ್ಯಾದಿ. ಈ ಎಲ್ಲ ಸಮಸ್ಯೆಗಳಿಗೂ ತಮ್ಮ ಹಿಂದಿನ ಸರ್ಕಾರವನ್ನು ಟೀಕಿಸುತ್ತಾ ಕುಳಿತವರಲ್ಲ ಇಂದಿರಾ.

ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತವಾಗಿ ಕ್ಷಾಮದ ಪರಿಸ್ಥಿತಿ ಎದುರಾದಾಗ ಹಸಿರು ಕ್ರಾಂತಿಯ ಮೂಲಕ ಶೀಘ್ರ ಪರಿಹಾರ ಒದಗಿಸಿದ್ದರು. ಹಸಿರು ಕ್ರಾಂತಿಯ ಅಡ್ಡ ಪರಿಣಾಮಗಳು ಏನೇ ಇರಲಿ ಅಂದಿನ ಪರಿಸ್ಥಿತಿಯಲ್ಲಿ ಭಾರತದ ಸ್ವಾವಲಂಬನೆಯನ್ನು ರಕ್ಷಿಸಲು ಇದು ಅಗತ್ಯವಾಗಿತ್ತು. ಇದು ಒಂದು ಆಯಾಮ. ಮತ್ತೊಂದೆಡೆ ಹಸಿವು, ಬರಗಾಲ, ನಿರುದ್ಯೋಗ, ಕ್ಷಾಮ ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ದೇಶಾದ್ಯಂದ ಭುಗಿಲೆದ್ದ ಜನಸಾಮಾನ್ಯರ ಆಕ್ರೋಶ, ಗ್ರಾಮೀಣ ಬಡಜನತೆಯ ಆಕ್ರಂದನ ನಕ್ಸಲ್‍ಬಾರಿಯ ಮೂಲಕ ಸ್ಫೋಟಿಸಿತ್ತು. ಬಂಡಾಯ ಮತ್ತು ಪ್ರತಿರೋಧ ಸರ್ಕಾರವನ್ನು ಅಲುಗಾಡಿದ್ದೂ ಹೌದು.

ಈ ಸಂದರ್ಭದಲ್ಲಿ ಇಂದಿರಾಗಾಂಧಿ ಸರ್ಕಾರ ಕೈಗೊಂಡ ಕೆಲವು ನಿರ್ಣಯಗಳು ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾದವು. ಬ್ಯಾಂಕ್ ರಾಷ್ಟ್ರೀಕರಣ ಇಂತಹ ಮಹತ್ತರ ನಿರ್ಣಯಗಳಲ್ಲಿ ಒಂದು. ಹಾಲಿ ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್ ರಾಷ್ಟ್ರೀಕರಣವನ್ನು ಮಹಾ ವಂಚನೆ ಎಂದು ಬಣ್ಣಿಸಿದ್ದಾರೆ. ಅವರು ಯಾವ ನೆಲೆಯಲ್ಲಿ ನಿಂತು ಆರೋಪಿಸುತ್ತಿದ್ದಾರೆ. ರಾಷ್ಟ್ರೀಕರಣದ ನಂತರವೂ ಬ್ಯಾಂಕಿಂಗ್ ಕ್ಷೇತ್ರ ಸಮಾಜದ ಕಟ್ಟಕಡೆಯ ಮನುಷ್ಯನನ್ನು ತಲುಪಲಿಲ್ಲ ಎಂಬ ಕಾಳಜಿ ಮೋದಿ ಸರ್ಕಾರಕ್ಕೆ ಇದ್ದಲ್ಲಿ ಇಂದು ರಾಷ್ಟ್ರೀಕೃತ ಬ್ಯಾಂಕುಗಳನ್ನು ಸರ್ಕಾರದ ಸ್ವಾಮ್ಯದಲ್ಲೇ ಉಳಿಸಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತಿತ್ತು.

ಮೋದಿ ಸರ್ಕಾರದ ಜನಧನ್ ಕಾರ್ಯಕ್ರಮ ಯಶಸ್ವಿಯಾಗಿದೆ ಎನ್ನುವುದೇ ಆದರೆ ಅದರ ಶ್ರೇಯ ಬ್ಯಾಂಕ್ ರಾಷ್ಟ್ರೀಕರಣಕ್ಕೂ ಸಲ್ಲಬೇಕಲ್ಲವೇ ? ಇಂದಿರಾಗಾಂಧಿಯವರ ಆಡಳಿತ ವೈಖರಿಯಲ್ಲಿ ಏನೇ ಗೊಂದಲಗಳು ಕಂಡುಬಂದರೂ, ಜನಸಾಮಾನ್ಯರ ಸುಸ್ಥಿರ ಬದುಕಿಗೆ ಕೆಲವು ಮಾರ್ಗಗಳನ್ನು ಸೃಷ್ಟಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ನಿಜ, ಈ ಯೋಜನೆಗಳ ಹಿಂದೆ ಪರಿಪೂರ್ಣ ಸಮಾಜವಾದದ ಕನಸು ಇರಲಿಲ್ಲ, ಪ್ರಭುತ್ವ ಬಂಡವಾಳ ವ್ಯವಸ್ಥೆಯೇ ಪ್ರಧಾನವಾಗಿತ್ತು. ಆದರೂ 1970-90ರ ಅವಧಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಯೋಜನೆಗಳು ಸಮಾಜದ ಕಟ್ಟಕಡೆಯ ಪ್ರಜೆಗೂ ತಲುಪಿದ್ದನ್ನು ಕಾಣಬಹುದು.

ಆದರೆ 1991ರ ನಂತರದ ಜಾಗತೀಕರಣ ಮತ್ತು ನವ ಉದಾರವಾದಿ ಆರ್ಥಿಕ ನೀತಿಗಳು ದೇಶದ ದಿಕ್ಕನ್ನೇ ಬದಲಿಸಿತ್ತು. ಈ ಅಭಿವೃದ್ಧಿ ಪಥವನ್ನು ಅನುಸರಿಸುತ್ತಲೇ ಭಾರತವನ್ನು ವಿಶ್ವದ ಅಗ್ರಮಾನ್ಯ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಕಳೆದ ಮೂರು ದಶಕಗಳ ಆರ್ಥಿಕ ನೀತಿಗಳು ಭಾರತವನ್ನು ವಿಶ್ವ ಮಾರುಕಟ್ಟೆಯಲ್ಲಿ ವಿರಾಜಿಸುವಂತೆ ಮಾಡಿವೆ ಆದರೆ ಆಂತರಿಕವಾಗಿ ಭಾರತ ಸೊರಗುತ್ತಿದೆ.

ಸ್ವದೇಶಿ ಆಂದೋಲನದ ನೆಲೆಯಲ್ಲಿ ಜಾಗತೀಕರಣವನ್ನು ವಿರೋಧಿಸುತ್ತಲೇ 1998ರಲ್ಲಿ ಅಧಿಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿಯವರ ಎನ್‍ಡಿಎ ಸರ್ಕಾರ ನವ ಉದಾರವಾದವನ್ನು ಮತ್ತಷ್ಟು ಭದ್ರವಾಗಿ ನೆಲೆಸುವಂತೆ ಮಾಡಿದ್ದು, ಎನ್‍ಡಿಎ ಮಿತ್ರ ಪಕ್ಷಗಳಿಗೆ ಕಾಣಲೇ ಇಲ್ಲ ಅಥವಾ ಜಾಣ ಕುರುಡು ಆವರಿಸಿತ್ತು. ಏಕೆಂದರೆ ಅಧಿಪತ್ಯ ರಾಜಕಾರಣ ದೇಶದ ಜನಸಾಮಾನ್ಯರ ಹಿತಾಸಕ್ತಿಗಳಿಂದ ಬಹುದೂರ ಕ್ರಮಿಸಿತ್ತು. ಒಂದೆಡೆ ನವ ಉದಾರವಾದ ಮತ್ತೊಂದೆಡೆ ಫ್ಯಾಸಿಸ್ಟ್ ಆಡಳಿತ ವ್ಯವಸ್ಥೆಗೆ ಭಾರತದ ಸಂವಿಧಾನದ ಚೌಕಟ್ಟಿನಲ್ಲೇ ಭದ್ರ ನೆಲೆ ಒದಗಿಸಿದ್ದ ವಾಜಪೇಯಿ ಸರ್ಕಾರ ನಂತರ ಅಧಿಕಾರಕ್ಕೆ ಬಂದ ಮನಮೋಹನ್ ಸಿಂಗ್ ಸರ್ಕಾರಕ್ಕೆ ಸುಗಮ ಮಾರ್ಗವನ್ನು ರೂಪಿಸಿ ನಿರ್ಗಮಿಸಿತ್ತು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಆಹಾರ ಭದ್ರತೆಯಂತಹ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದರೂ ದೇಶದ ಅರ್ಥ ವ್ಯವಸ್ಥೆಯನ್ನು ಹಣಕಾಸು ಬಂಡವಾಳದ ಒಡೆಯರಿಗೆ ಒಪ್ಪಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. ಒಂದು ದೇಶ ಆರ್ಥಿಕವಾಗಿ ಸುಸ್ಥಿರವಾಗಿರುವುದು, ಸಾಮಾಜಿಕ ಸದೃಢತೆಯನ್ನು ಸಾಧಿಸುವುದು ಸರ್ಕಾರದ ಬಜೆಟ್ ಪ್ರೇರಿತ ಯೋಜನೆಗಳಿಂದಾಗಲೀ, ಸರ್ಕಾರ ಜನಸಾಮಾನ್ಯರಿಗೆ ನೀಡುವ ಉಚಿತ ಸೌಲಭ್ಯಗಳಿಂದಾಗಲೀ ಅಲ್ಲ.

ಇಂತಹ ಯೋಜನೆಗಳು ಅವಕಾಶವಂಚಿತರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸಹಾಯಕವಾಗಬಹುದಷ್ಟೆ. ದುರಂತ ಎಂದರೆ ಭಾರತದ ಪ್ರಸ್ತುತ ಆಳುವ ವರ್ಗಗಳಿಗೆ ಈ ಸೂಕ್ಷ್ಮ ಅರಿವಾಗುತ್ತಿಲ್ಲ. ನರೇಂದ್ರ ಮೋದಿ ಸರ್ಕಾರಕ್ಕೆ ಈ ಸೂಕ್ಷ್ಮವನ್ನು ಅರಿಯುವ ಮನೋಭಾವವೂ ಇಲ್ಲ. ಏಕೆಂದರೆ 2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಭಾರತದ ಅರ್ಥ ವ್ಯವಸ್ಥೆ ಹಣಕಾಸು ಬಂಡವಾಳದ ವಾರಸುದಾರರಿಗೆ ಶರಣಾಗಿತ್ತು.

ಬ್ಯಾಂಕಿಂಗ್, ವಿಮೆ, ಸಾರಿಗೆ, ಸಂಪರ್ಕ, ಶಿಕ್ಷಣ ಮತ್ತು ಆರೋಗ್ಯ ಈ ಆರು ಕ್ಷೇತ್ರಗಳು ಒಂದು ದೇಶದ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗುವ ಕ್ಷೇತ್ರಗಳು. ನವ ಉದಾರವಾದ ಈ ಆರೂ ಕ್ಷೇತ್ರಗಳಲ್ಲಿ ತನ್ನ ಅಧಿಪತ್ಯ ಸಾಧಿಸಲು ಹವಣಿಸುತ್ತಿದೆ. ನರೇಂದ್ರ ಮೋದಿ ಸರ್ಕಾರ ಈ ಗುರಿ ಸಾಧನೆಗೆ ಬದ್ಧವಾಗಿದೆ. ಹಾಗಾಗಿಯೇ ಮೋದಿ ಸರ್ಕಾರಕ್ಕೆ ನೆಹರೂ ಯುಗ ಅಪಥ್ಯವಾಗುತ್ತದೆ. ಇಂದಿನ ಭಾರತದ ಎಲ್ಲ ಸಮಸ್ಯೆಗಳಿಗೆ ನೆಹರೂ ಕಾರಣರಾಗುತ್ತಾರೆ.

ಸರ್ದಾರ್ ಪಟೇಲ್ ಭಾರತದ ಮೊದಲ ಪ್ರಧಾನಿಯಾಗಿದ್ದಿದ್ದರೆ ಕೃಷಿ ಬಿಕ್ಕಟ್ಟು ಸೃಷ್ಟಿಯಾಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ತಮಗೆ ದೇಶದ ಕೃಷಿ ಬಿಕ್ಕಟ್ಟಿನ ಗ್ರಹಿಕೆಯೇ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕ್ ರಾಷ್ಟ್ರೀಕರಣವನ್ನು ಮಹಾ ವಂಚನೆ ಎಂದು ಘೋಷಿಸುವ ನರೇಂದ್ರ ಮೋದಿ ಇಂದು ಇಡೀ ಬ್ಯಾಂಕಿಂಗ್ ಕ್ಷೇತ್ರವನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ಒಪ್ಪಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದ್ದಾರೆ. ಈ ದೇಶದ ಶೋಷಿತ ಸಮುದಾಯಗಳನ್ನು, ಅವಕಾಶವಂಚಿತರನ್ನು, ದಮನಿತ ಪ್ರಜೆಗಳನ್ನು, ಅಳಿವಿನ ಅಂಚಿನಲ್ಲಿರುವ ಆದಿವಾಸಿಗಳನ್ನು ಅಭಿವೃದ್ಧಿಯ ಮಾರ್ಗಗಳಿಂದ ಹೊರತುಪಡಿಸಿ, ಜಾಗತಿಕ ಹಣಕಾಸು ಬಂಡವಾಳಿಗರಿಗೆ ಸುಸ್ಥಿರ ನೆಲಹಾಸುಗಳನ್ನು ಸಿದ್ಧಪಡಿಸುತ್ತಿರುವ ಹಾಲಿ ಕೇಂದ್ರ ಸರ್ಕಾರ ಯಾವ ನೆಲೆಯಲ್ಲಿ ನಿಂತು ನೆಹರೂ ಯುಗವನ್ನು ಪರಾಮರ್ಶಿಸುತ್ತಿದೆ ಎನ್ನುವ ಸೂಕ್ಷ್ಮವನ್ನು ನಾವಿಂದು ಗ್ರಹಿಸಬೇಕಿದೆ.

ನವ ಉದಾರವಾದ ಮತ್ತು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಅಧಿಪತ್ಯಕ್ಕೆ ಭಾರತದ ಶ್ರಮಜೀವಿಗಳು, ದುಡಿಯುವ ವರ್ಗಗಳು, ಕೃಷಿಕರು ಮತ್ತು ಬಡ ಜನತೆ ಬಲಿಯಾಗುತ್ತಿರುವ ಸಂದರ್ಭದಲ್ಲಿ ತಮ್ಮ ಧ್ಯೇಯ ಸಾಧನೆಗೆ ನರೇಂದ್ರ ಮೋದಿ ಸರ್ಕಾರ ನಿರಾಕರಣೆಯ ಮಾರ್ಗವನ್ನು ಅನುಸರಿಸುತ್ತಿದೆ. ಕಣ್ಣೆದುರಿನ ಸತ್ಯವನ್ನು ನಿರಾಕರಿಸುತ್ತಲೇ ಅಗೋಚರ ಅಸತ್ಯಗಳನ್ನು ಹೊರಗೆಳೆದು ಜನರನ್ನು ಭ್ರಮಾಲೋಕದಲ್ಲಿ ಸಿಲುಕಿಸಲಾಗುತ್ತಿದೆ.

ಒಂದೆಡೆ ಸರ್ದಾರ್ ಪಟೇಲ್ ಪರಂಪರೆಯನ್ನು ತಮ್ಮ ನಿರಾಕರಣೆಯ ರಾಜಕೀಯ ನೆಲೆಯಲ್ಲಿ ಬಳಸುತ್ತಲೇ ಮತ್ತೊಂದೆಡೆ ಮತಾಂಧತೆಯ ಬೀಜಗಳನ್ನು ಬಿತ್ತುವ ಮೂಲಕ ದ್ವೇಷ ರಾಜಕಾರಣವನ್ನು ಬಳಸಲಾಗುತ್ತಿದೆ. ಈ ಎರಡು ಅಲಗಿನ ಕತ್ತಿಯ ಮೇಲೆ ನಡೆಯುತ್ತಿರುವ ಭಾರತದ ಜನಸಾಮಾನ್ಯರು ಅಂತಿಮವಾಗಿ ನವ ಉದಾರವಾದದ ಬಲೆಗೆ ಸಿಲುಕಿ ನಲುಗಿಹೋಗಲಿದ್ದಾರೆ. ಆಳುವ ವರ್ಗಗಳ ಈ ಹುನ್ನಾರವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುವಂತಹ ಕ್ರಾಂತಿಕಾರಿ ಚಿಂತನೆಗಳನ್ನು ಸಂವಿಧಾನದ ಚೌಕಟ್ಟಿನಲ್ಲೇ ದಮನಿಸುವ ಮೂಲಕ ನವ ಉದಾರವಾದ ತನ್ನ ದಿಟ್ಟ ಹೆಜ್ಜೆಗಳನ್ನಿಡುತ್ತಿದೆ.

ಇತಿಹಾಸದ ಅವಶೇಷಗಳ ಮೇಲೆ ನಿರ್ಮಿತವಾಗುತ್ತಿರುವ ರಾಮಮಂದಿರ, ಇತಿಹಾಸವನ್ನು ಬಗೆದು ನಿರ್ಮಿಸಲಾಗಿರುವ ಸರ್ದಾರ್ ಪಟೇಲ್ ಪ್ರತಿಮೆ ಈ ಎರಡೂ ಧೃವಗಳ ನಡುವೆ ದೆಹಲಿಯಲ್ಲಿ ತಮ್ಮ ಬದುಕಿನ ಶೋಧದಲ್ಲಿ ತೊಡಗಿ ಸೇರಿದ್ದ ಲಕ್ಷಾಂತರ ಕೃಷಿಕರು ಈ ದೇಶದ ಭವಿಷ್ಯದ ಸೂಚ್ಯಂಕಗಳಂತೆ ಕಾಣುತ್ತವೆ. ಮತಧರ್ಮದ ಅಮಲು, ಯುದ್ಧೋನ್ಮಾದದ ಅಲೆ ಮತ್ತು ನವ ಉದಾರವಾದದ ಬಲೆ ಭಾರತದ ಶೋಷಿತ ಸಮುದಾಯಗಳ ಬಲಿಪೀಠವನ್ನು ಸಿದ್ಧಪಡಿಸುವ ಆಕರಗಳಾಗಿ ಕಾಣುತ್ತಿವೆ. ಇಂದು ಪ್ರಗತಿಪರ ಎಂದು ಗುರುತಿಸಿಕೊಳ್ಳಬಯಸುವ ಎಲ್ಲ ಪ್ರಜ್ಞಾವಂತ ಮನಸುಗಳ ಮುಂದಿರುವ ಪ್ರಶ್ನೆಯೂ ಇದೆ ಸವಾಲು ಸಹ ಇದೇ.

‍ಲೇಖಕರು Avadhi

December 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: