ಸಾಂಪ್ರದಾಯಿಕತೆ v/s ಆಧುನಿಕತೆಯ ‘ಇಜ್ಜೋಡು’

ಶ್ರೀ ಮುರಳಿ ಕೃಷ್ಣ


ಇತ್ತೀಚೆಗೆ ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡ್ರನ್ ಆರ್ಟ್ಸ್ ನಲ್ಲಿ ಹೆಸರುವಾಸಿ ನಿರ್ದೇಶಕ ಎಂ ಎಸ್ ಸತ್ಯು ಅವರ ಚಲನಚಿತ್ರಗಳ ಉತ್ಸವವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಇದುವರೆಗೆ ಅವರು ನಿರ್ದೇಶಿಸಿರುವ ಚಲನಚಿತ್ರಗಳಲ್ಲಿ ಕೊನೆಯದಾಗಿರುವ ‘ಇಜ್ಜೋಡು’ ಎಂಬ ಕನ್ನಡ ಚಲನಚಿತ್ರವನ್ನು ವೀಕ್ಷಸುವ ಅವಕಾಶ ದೊರೆಯಿತು. 88ರ ವಯೋಮಾನದ ಸತ್ಯು ಅವರು ತಮ್ಮ ಪ್ರತಿ ಚಲನಚಿತ್ರದ ಮುನ್ನ ಮತ್ತು ತರುವಾಯ ಮಾತನಾಡಿ, ಸಂವಾದಗಳಲ್ಲಿ ಮೂಡಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದರು.

ಆನಂದ (ನಟ ಅನಿರುದ್ಧ) ಒಬ್ಬ ಛಾಯಾಚಿತ್ರಗ್ರಾಹಕ. ಆತನಿಗೆ ಪುರಾತನ ದೇವಾಲಯಗಳನ್ನು ಮತ್ತು ಇತರ ಸ್ಮಾರಕಗಳನ್ನು ಮೂರನೇ ಕಣ್ಣಿನಿಂದ ವೀಕ್ಷಿಸಿ ಸರೆಹಿಡಿಯುವ ಹವ್ಯಾಸ. ಒಮ್ಮೆ ಹೊಯ್ಸಳ ದೇಗುಲಗಳನ್ನು ಛಾಯಾಗ್ರಹಿಸುವ ಕಾರ್ಯದಲ್ಲಿರುವಾಗ ಆತನ ಜೀಪ್ ಯಾಂತ್ರಿಕ ತೊಂದರೆಗೆ ಒಳಗಾಗಿ, ಚಾಲು ಆಗುವುದಿಲ್ಲ. ಒಬ್ಬ ಹಳ್ಳಿಯವ ತನ್ನ ಎತ್ತಿನಗಾಡಿಯ ಸಹಾಯದಿಂದ ಜೀಪನ್ನು ಮತ್ತು ಆನಂದನನ್ನು ತನ್ನ ಗ್ರಾಮಕ್ಕೆ ಕರೆದೊಯ್ಯುತ್ತಾನೆ. ರಾತ್ರಿಯಾಗಿರುವುದರಿಂದ ಆನಂದ ಆ ಹಳ್ಳಿಯ ಪಟೇಲ ಭೈರಪ್ಪ (ನಟ ರಾಮಕೃಷ್ಣ)ನ ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಮಾರನೆಯ ದಿನ ಬೆಳಿಗ್ಗೆ ಅಲ್ಲಿಯ ಅಂಗಡಿಗೆ ಆನಂದ ಹೋದಾಗ, ಸೈನಿಕ ದಿರಸಿನಲ್ಲಿರುವ ಮತಿಭ್ರಾಂತ ಬಲರಾಮ (ನಟ ಸತ್ಯ) ಪಟೇಲನ ಮನೆಯಲ್ಲಿ ಆತ ತಂಗಬಾರದೆಂದು ಜೋರಾದ ದನಿಯಲ್ಲಿ ಎಚ್ಚರಿಸುತ್ತಾನೆ. ಅಚ್ಚರಿಯಿಂದ ಆವಕ್ಕಾಗುವ ಆನಂದ ಪಟೇಲನ ಮನೆಯತ್ತ ಹೆಜ್ಜೆಯಿಡುತ್ತಾನೆ.

ನಂತರ ಅತನ ಕೆಟ್ಟಿರುವ ಜೀಪನ್ನು ಬಲರಾಮ ಆನಂದನಿಗೆ ತಿಳಿಯದಂತೆ ಸರಿಪಡಿಸಿರುತ್ತಾನೆ. ಹೀಗಾಗಿ ಆನಂದ ತನ್ನ ಊರಿಗೆ ಮರಳಲು ಇಚ್ಛಿಸುತ್ತಾನೆ. ಆದರೆ ಪಟೇಲ ಆನಂದನ ಛಾಯಾಗ್ರಹಣದ ಆಸಕ್ತಿಯ ನೆಪದಲ್ಲಿ ಹತ್ತಿರದಲ್ಲಿರುವ ಒಂದು ಪುರಾತನ ದೇಗುಲದ ಬಗೆಗೆ ತಿಳಿಸುತ್ತಾನೆ. ಇದರ ಮಧ್ಯೆ ಆನಂದನಿಗೆ ತಾನು ಉಳಿದುಕೊಂಡಿರುವ ಮನೆಯಲ್ಲಿ ಓರ್ವ ಸುಂದರಿ ಯುವತಿಯಿರುವುದು ಅರಿವಾಗುತ್ತದೆ ಆದರೆ ಆಕೆಯ ಚಲನವಲನಗಳಲ್ಲಿ ಒಂದು ತೆರೆನಾದ ನಿಗೂಢತೆ ಇರುತ್ತದೆ. ಆಕೆ ಆನಂದನ ಮೇಲೆ ಸಮ್ಮೋಹನವನ್ನು ಬೀರುತ್ತಾಳೆ. ಆಕೆ ಭೈರಪ್ಪನ ಮಗಳು ಚೆನ್ನಿ(ನಟಿ ಮೀರಾ ಜಾಸ್ಮಿನ್)ಯಾಗಿರುತ್ತಾಳೆ. ಪಟೇಲ ಕೆಲವು ದಿನಗಳ ಕಾಲ ಉಳಿಯುವಂತೆ ವಿನಂತಿಸಿದಾಗ, ಆನಂದ ಹೂಂಗುಟ್ಟುವುದರ ಹಿಂದೆ ಆತ ಚೆನ್ನಿಯ ಬಗೆಗೆ ಆಸಕ್ತಿವಹಿಸಿರುವುದು ಒಂದು ಕಾರಣವಾಗಿರುತ್ತದೆ. ದೇವಾಲಯದ ವಾಸ್ತುಶಿಲ್ಪದ ಸೊಬಗಿಗೆ ಮಾರುಹೋಗುವ ಆನಂದನಿಗೆ ಕ್ಯಾಮರಾ ಕ್ಲಿಕ್ಕಿಸಿದಾಗಲೆಲ್ಲ ಚೆನ್ನಿಯನ್ನು ತಾನು ಸೆರೆಹಿಡಿಯುತ್ತಿರುವನೇನೋ ಎಂದು ಭಾಸವಾಗುತ್ತದೆ!

ಬಲರಾಮ ಒಮ್ಮೆ ಸೈನ್ಯದ ಕಾರ್ಯಾಚರಣೆಗಾಗಿ ಹಳ್ಳಿಯಿಂದ ಹೊರಡುತ್ತಾನೆ. ಸಾಕಷ್ಟು ಸಮಯ ಕಳೆದರೂ ವಾಪಸ್ಸು ಬಾರದಿದ್ದಾಗ ಆತನ ಮಡದಿ ಕೆಂಪಿ(ನಟಿ ಅರುಂಧತಿ ಜಾಟ್ಕರ್) ತನ್ನ ಗಂಡ ಅಸುನೀಗಿರುವ ಸುದ್ದಿ ಸೈನ್ಯದಿಂದ ಬಂದ ಪತ್ರವೊಂದರಿಂದ ತಿಳಿಯುತ್ತದೆ. ನಂತರ ತನ್ನನ್ನು ಇಷ್ಟಪಡುವ, ತನಗಿಂತಲೂ ಕಿರಿಯನಾದ ವೆಂಕಟೇಶನನ್ನು ಕೆಂಪಿ ಮದುವೆಯಾಗುತ್ತಾಳೆ. ಆದರೆ ಕೆಲವು ಸಮಯ ಕಳೆದ ತರುವಾಯ ಬಲರಾಮ ವಾಪಸ್ಸಾಗುತ್ತಾನೆ! ತನ್ನ ಮಡದಿ ಬೇರೊಬ್ಬನ್ನನ್ನು ವಿವಾಹವಾಗಿರುವ ವಿಷಯ ತಿಳಿದು ಮತಿಭ್ರಮಣೆಗೆ ಒಳಗಾಗುತ್ತಾನೆ. ಹೀಗಾಗಿ ಆತ ಗ್ರಾಮದಲ್ಲಿ ಅಲೆಯುತ್ತಿರುತ್ತಾನೆ.

ತರುವಾಯ ಒಂದು ರಾತ್ರಿ ಚೆನ್ನಿ ಆನಂದನ ಕೋಣೆಗೆ ಧಾವಿಸಿ ತನ್ನನ್ನು ಆತನಿಗೆ ಅರ್ಪಿಸಿಕೊಳ್ಳಲು ಸಿದ್ಧಳಾಗುತ್ತಾಳೆ. ಆಕೆ ಬಸವಿಯಾಗಿರುತ್ತಾಳೆ. ಮನೆಗೆ ಬರುವ ಅತಿಥಿಗಳನ್ನು ದೇವರೆಂದು ಭಾವಿಸಿ ಅವರನ್ನು ಖುಷಿಪಡಿಸುವುದು ತನ್ನ ಕರ್ತವ್ಯವೆಂದು ಆಕೆ ಆನಂದನಿಗೆ ತಿಳಿಸುತ್ತಾಳೆ! ಗ್ರಾಮಕ್ಕೆ ಒಂದು ಭೀಕರ ರೋಗದ ಬಾಧೆ ಕಾಡಿದಾಗ, ಅನೇಕರು ಮರಣವನ್ನಪ್ಪುತ್ತಾರೆ. ನಂತರ ಪಟೇಲ ತನ್ನ ಸ್ಥಾನಮಾನವನ್ನು ಉಳಿಸಿಕೊಳ್ಳಲು ಮಗಳನ್ನೇ ಬಸವಿ ಮಾಡುತ್ತಾನೆ! ನಗರ ಮೂಲದ ಆನಂದನಿಗೆ ಈ ಸಂಗತಿ ಅರಗಿಸಿಕೊಳ್ಳಲು ಆಗುವುದಿಲ್ಲ. ಇದು ಮೂಢನಂಬಿಕೆ ಎಂದು ಆಕೆಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾನೆ. ಈ ವಿಷವೃತ್ತದಿಂದ ಹೊರಬಂದು ಆಕೆ ಸಾಮಾನ್ಯರಂತೆ ಬದುಕಬೇಕೆಂದು ಒತ್ತಾಯಿಸುತ್ತಾನೆ. ಚೆನ್ನಿಯ ಮನಸ್ಸಿನಲ್ಲಿದ್ದ ಕತ್ತಲು ಕರಗುತ್ತದೆ; ಆಕೆಯಲ್ಲಿ ಹೊಸಜೀವನದ ಕನಸುಗಳು ಕುಡಿಯೊಡೆಯುತ್ತವೆ. ಆಕೆ ಆನಂದನನ್ನು ತನಗೆ ಹೊಸಬಾಳನ್ನು ಕೊಡುವೆಯಾ ಎಂದು ಕೇಳುತ್ತಾಳೆ. ನಂತರ ಈ ವೃತ್ತಾಂತ ಅಂತ್ಯವಾಗುವ ರೀತಿಯನ್ನು ಚಲನಚಿತ್ರದ ಕ್ಲೈಮಾಕ್ಸ್ ತಿಳಿಸುತ್ತದೆ.

ಈ ಚಲನಚಿತ್ರದ ಪ್ರಾರಂಭದಲ್ಲೇ ‘ಸಮರ’ ಎಂಬ ಹಾಡು ಅನಾವರಣಗೊಳ್ಳುತ್ತದೆ. ಹೊಯ್ಸಳ ಕಾಲದ ದೇಗುಲವೊಂದರಲ್ಲಿ ನೃತ್ಯಪಟುಗಳ ಕಣ್ಸೆಳೆಯುವ ಆಧುನಿಕ ನೃತ್ಯದ ಜೊತೆ ಮೈದಂಡಿಸುವ, ನಂಬಿಕೆಯನ್ನಾಧರಿಸಿದ ಸಾಂಪ್ರದಾಯಿಕ ಕುಣಿತವನ್ನು ಸಮನ್ವಯಗೊಳಿಸಲಾಗಿದೆ. ಚಿತ್ರಕಥನದಲ್ಲಿ ಮೂಡಿಬರುವ ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ವೈರುಧ್ಯವನ್ನು ಈ ಹಂತದಲ್ಲೇ ಸತ್ಯು ಬಹಳ ಕೌಶಲದಿಂದ, ಪ್ರಜ್ಞಾಪೂರ್ವಕವಾಗಿ ಸೂಚಿಸುತ್ತಾರೆ. ಕೆಲವು ದೃಶ್ಯರೂಪಕಗಳ ಮೂಲಕ ಅವರು ಸಿನಿಮಾಕಲೆಯ ಸೂಕ್ಷ್ಮಗಳನ್ನು ದಾಟಿಸುತ್ತಾರೆ. ಪತಿ ಬಲರಾಮನಿಂದ ಸುದ್ದಿಯೇನಾದರೂ ಬರುವುದೇ ಎಂದು ತುಂಬ ಸಮಯದಿಂದ ಕಾದಿರುವ ಕೆಂಪಿಗೆ ಒಮ್ಮೆ ಅಂಚೆಪೇದೆ ಸೈನ್ಯದಿಂದ ಆಕೆಗೆ ಬಂದಿರುವ ಪತ್ರವೊಂದನ್ನು ರವಾನಿಸುತ್ತಾನೆ. ಅನಕ್ಷರಸ್ಥೆ ಕೆಂಪಿ ಅಂಚೆಪೇದೆಯವನನ್ನೇ ಪತ್ರವನ್ನು ಓದಲು ವಿನಂತಿಸುತ್ತಾಳೆ. ಆತನಿಗೆ ನೀರು ಕೊಡಲು ಒಳಗೆ ಹೋಗಿ ಬರುವಾಗ ಚೆಂಬೊಂದನ್ನು ಹಿಡಿದಿರುತ್ತಾಳೆ. ಆಕೆ ಅದನ್ನು ಸವರುತ್ತಿರುತ್ತಾಳೆ! ಅಂಚೆಪೇದೆ ಆ ಪತ್ರದಲ್ಲಿರುವ ಕೆಲವು ಸಾಲುಗಳನ್ನು ಓದಿದ ತರುವಾಯ ಮ್ಲಾನವದನದವನಾಗುತ್ತಾನೆ! ಆತನ ಗಂಟಲು ಕಟ್ಟುತ್ತದೆ. ಆತ ತಿಳಿಸುವ ಸುದ್ದಿ ಕೇಳಿದ ಕೆಂಪಿಯ ಕೈಯಿಂದ ಚೆಂಬು ಜಾರಿ, ನೀರು ಚೆಲ್ಲುತ್ತದೆ. ಇದು ಬಲರಾಮನ ಸಾವು, ಗರ್ಭಿಣಿಯಾಗಿರುವ ಕೆಂಪಿಯ ಗರ್ಭಪಾತ ಮತ್ತು ಆಕೆಯ ಕನಸಿನ ಗೋಪುರಗಳು ಕುಸಿಯುವುದನ್ನು ಸಂಕೇತಿಸುವಂತಿದೆ! ಅಂತಿಮ ದೃಶ್ಯದಲ್ಲಿ ಕಲ್ಯಾಣಿಯಿಂದ ಏರುಹಾದಿಯ ಇಕ್ಕೆಲಗಳಲ್ಲಿ ಪುರಾತನ ಕಲ್ಲಿಟ್ಟೆಗೆಗಳ ಗೋಡೆಗಳು ಕಂಡುಬರುತ್ತವೆ. ಇವುಗಳ ಮಧ್ಯೆ ಸಾಗುವ ಹಾದಿಯಲ್ಲಿ ಪಾದಗಳು ಮೆಟ್ಟಿಲು ಏರುವುದನ್ನು ತೋರಿಸಲಾಗಿದೆ. ಇದರ ಮೂಲಕ ನಿರ್ದೇಶಕರು ‘ಏನೇ ಆದರೂ ಜೀವನ ಸಾಗುತ್ತದೆ’ ಅಥವಾ ‘ಮುನ್ನಡೆಯಿದ್ದರೂ ಸಾಂಪ್ರದಾಯಿಕತೆಯ ಕರಿನೆರಳು ಇರುತ್ತದೆ’ ಎಂಬುದನ್ನು ವೀಕ್ಷಕರಿಗೆ ತಲುಪಿಸುತ್ತಿದ್ದಾರೆಯೇ ಎಂದು ಭಾಸವಾಗುತ್ತದೆ.

ಸೀತಾರಾಮ್ ಅಜ್ಜಂಪುರ ಅವರ ಪ್ರಸಿದ್ಧ ಕಥೆಯ ಜೊತೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ಕಥೆಯೊಂದನ್ನು ಈ ಚಲನಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಲಾಗಿದೆ. ಹೊರಾಂಗಣದ ಚಿತ್ರೀಕರಣದಲ್ಲಿ ಸಿಂಕ್ ಸೌಂಡನ್ನು ಉಪಯೋಗಿಸಲಾಗಿದೆ. ಹೆಸರಾಂತ ಸಿನಿಮಟಾಗ್ರಾಫರ್ ಜಿ ಎಸ್ ಭಾಸ್ಕರ್ ತಮ್ಮ ಎಂದಿನ ಪ್ರತಿಭೆಯನ್ನು ಮೆರೆದಿದ್ದಾರೆ. ದೊಡ್ಡಗದ್ದವಳ್ಳಿಯ ಹೊಯ್ಸಳ ಕಾಲದ ದೇಗುಲ ಕಣ್ಮನಗಳನ್ನು ಸೆಳೆಯುತ್ತದೆ. “ಮಾತಿಗೆ ಮಾತಿಲ್ಲ…” ಮತ್ತು “ಎಲೆ ಮೇಲೆ…” ಹಾಡುಗಳು ಇಂಪಾಗಿವೆ. 83 ನಿಮಿಷಗಳ ಈ ಚಲನಚಿತ್ರದಲ್ಲಿ ಚೆನ್ನಿ ತನ್ನಲ್ಲಿ ಆಳವಾಗಿ ಬೇರೂರಿದ್ದ ಕಂದಾಚಾರದಿಂದ ಬೇಗನೆ ಹೊರಬರುವುದು ನೈಜವಾಗಿ ಅಷ್ಟೊಂದು ತಟ್ಟುವುದಿಲ್ಲ. ನಟ, ನಟಿಯರು ತಮಗೆ ಒದಗಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಬಲರಾಮನಾಗಿ ಸತ್ಯ ಮಿಂಚಿದ್ದಾರೆ.

‍ಲೇಖಕರು Avadhi

December 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಮ ಶ್ರೀ ಮುರಳಿ ಕೃಷ್ಣ

    ಧನ್ಯವಾದ ಅವಧಿ ಮತ್ತು ಶ್ರೀ ಮೋಹನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: